Thursday, 12th December 2024

ರಾಜಕೀಯ ಹವ್ಯಾಸ, ಹುಚ್ಚುಗಳ ಹಿತಮಿತ

ಶಿಶಿರ ಕಾಲ

shishirh@gmail.com

ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಹುಚ್ಚು ಇರುತ್ತದೆ. ಹುಚ್ಚು ಎಂದರೆ ಆ ಹುಚ್ಚಲ್ಲ, ಮಾನಸಿಕ ಸಮಸ್ಯೆಯಲ್ಲ. ಆದರೆ ಕೆಲವೊಮ್ಮೆ ಇರಲೂಬಹುದು ಎಂದು ಅನುಮಾನ ಬರುವಷ್ಟು. ಕೆಲವರಿಗೆ ಕಾರ್ ಎಂದರೆ ಎಲ್ಲಿಲ್ಲದ ಹುಚ್ಚು. ಸಾವಿರ ದೆಂಟು ಕಾರ್ ಮಾಡೆಲ್‌ಗಳು ಅವರಿಗೆ ಗೊತ್ತು. ಇಂಥ ಕಾರಿ ನೊಳಗೆ ಇಂತಿಷ್ಟು ಲೀಟರ್ ಎಂಜಿನ್ ಇದೆ, ಅದು ಇಷ್ಟು ಅಶ್ವ ಶಕ್ತಿಯದು, ಇಷ್ಟು ಸಿಲಿಂಡರ್ ಹೀಗೆ ಎಲ್ಲವೂ ಗೊತ್ತು. ಅಷ್ಟೇ ಅಲ್ಲ, ‘ಯಾವುದೋ ಒಂದು ದೇಶದಲ್ಲಿ ಆ ಕಾರಿಗೆ ಇಂತಿಷ್ಟು ಹಣ, ಇಲ್ಲಿ ಈ ಕಾರ್ ತಯಾರಾಗುತ್ತದೆ’ ಇತ್ಯಾದಿ. ಅದರಲ್ಲಿ ಅದೆಷ್ಟೋ ಕಾರುಗಳನ್ನು ಅವರು ಎಂದೂ ಕಣ್ಣಾರೆ ಕಂಡಿರುವುದಿಲ್ಲ.

ಇನ್ನು ಕೆಲವರಿಗೆ ಸ್ವಚ್ಛತೆಯ ಹುಚ್ಚು. ಅವರ ಮನೆಯ ಕೈ ನೀಕದ ಅಂತಸ್ತಿನ ಷೋಕೇಸ್ ಒಳಗೆ ಕೂಡ ಧೂಳಿನ ಒಂದೇ ಕಣ ಇರದಷ್ಟು. ಅಂಥವರ ಮನೆಗೆ ಹೋದರೆ ಒಂದು ನಿರಂತರ ಎಚ್ಚರಿಕೆ ಬಾಧಿಸುತ್ತಿರುತ್ತದೆ, ‘ನಾವೆಲ್ಲಿ ಏನಾದರು ಚೆಲ್ಲಿ ಅಥವಾ ಒಡೆದು ಬಿಡುತ್ತೇವೆಯೇನೋ…’ ಎಂದು. ಎಲ್ಲ ಕಿಟಕಿ ಬಾಗಿಲುಗಳು ಮುಚ್ಚಿ ಉಸಿರುಗಟ್ಟುತ್ತಿರುತ್ತದೆ. ಆದರೆ ಸ್ವಚ್ಛತೆಯ ಹುಚ್ಚು ಅದೆಲ್ಲವನ್ನೂ ಸಹಿಸುವಂತೆ ಮಾಡಿರುತ್ತದೆ. ಅಂತಲ್ಲಿ ಹೋದಾಗ ನಮ್ಮ ಪಾದದಲ್ಲಿ ಎಷ್ಟು ಮಣ್ಣಿದೆ ಎಂದು ಮೆಲ್ಲಗೆ ನೋಡಿಕೊಳ್ಳುತ್ತೇವೆ. ಅವರು ಇನ್ನೊಬ್ಬರು ಈಗ ಕೂತು ಹೋದ ಹೋಟೆಲ್ಲಿನ ಕುರ್ಚಿ ಯನ್ನೂ ಒಮ್ಮೆ ಒರೆಸಿಯೇ ಕೂರುವುದು. ನಮ್ಮ ಪಕ್ಕದ ಊರಿನಲ್ಲೊಬ್ಬರು ಇದ್ದರು.

ಅವರು ನಮ್ಮಲ್ಲಿಗೆ ಬಂದರೆ ಅಂಗಳದಂಚಿನ ನೀರಿನ ನಳದಲ್ಲಿ ಕನಿಷ್ಠ ಇಪ್ಪತ್ತು ನಿಮಿಷ ಕಾಲು ತೊಳೆಯುತ್ತಿದ್ದರು. ಕೆಲವೊಮ್ಮೆ ಅಷ್ಟೆಲ್ಲಾ ಸ್ವಚ್ಛ ಮಾಡಿಕೊಂಡು ಅಂಗಳಕ್ಕೆ ಕಾಲಿಟ್ಟಾಗ ಮತ್ತೆ ಮಣ್ಣು ಮೆತ್ತಿಕೊಂಡುಬಿಡುತ್ತಿತ್ತು. ಪುನಃ ಇನ್ನೊಂದು ಇಪ್ಪತ್ತು ನಿಮಿಷ ಮಿನಿ ಜಳಕ. ಅವರು ಬಂದರೆ ಸ್ವಾಗತಿಸಲು ಮನೆಯವರೆಲ್ಲ ಕಾದು, ಸುಸ್ತಾಗಿ ನಂತರ ಅವರವರ ಕೆಲಸದಲ್ಲಿ ಮಗ್ನವಾಗಿ ಬಿಡುತ್ತಿದ್ದರು. ನಂತರ ಆ ನೆಂಟರೇ ಒಳ ಬಂದು ‘ಹೊಯ್’ ಎಂದು ಕರೆಯಬೇಕು.

ಇನ್ನು ಈ ‘NRI’ಗಳು ಭಾರತಕ್ಕೆ ಬಂದಾಗ ಮಾಡುವ ಸ್ವಚ್ಛತಾ ಸರ್ಕಸ್ ಗಳನ್ನಂತೂ ನೀವು ಕಂಡೇ ಇರುತ್ತೀರಿ ಬಿಡಿ. ಕಂಡು ಕೆಲವೊಮ್ಮೆ
ಮುಜುಗರ ವೆನಿಸಿಬಿಡುತ್ತದೆ. ಇನ್ನೊಬ್ಬರದು ಒಂದು ವಿಚಿತ್ರ ಮಳ್ಳು. ಅವರು ಕೀಲಿ ಸರಿಯಾಗಿ ಹಾಕಲಾಗಿದೆಯೇ ಎಂದು ಹತ್ತೆಂಟು ಸಲ ನೋಡು ವುದು. ಅಷ್ಟೇ ಅಲ್ಲ ಸ್ವಿಚ್‌ಗಳು ಬಂದ್ ಆಗಿವೆಯೇ, ಹಾಕಿದ ಪ್ಲಗ್ ವೈರ್ ತೆಗೆಯಲಾಗಿದೆಯೇ ಇಂಥವನ್ನೆಲ್ಲ ಮತ್ತೆಮತ್ತೆ ಪರಿಶೀಲಿಸುವುದು ವಾಡಿಕೆ. ಅವರು ಎಲ್ಲಾದರೂ ಹೊರಟರೆಂದುಕೊಳ್ಳಿ, ಮನೆಯವರೆಲ್ಲ ಕಾರು ಹತ್ತಿ ಕೂತ ಮೇಲೆ ಏನೋ ಒಂದು ನೆನಪಾಗಿ ಮನೆಯೊಳಕ್ಕೆ ಹೋದರೆ
ಮುಗಿಯಿತು. ಸುಮಾರು ಹದಿನೈದು ನಿಮಿಷ ಬೇಕು,

ಅವರಿಗೆ ಮನೆಯನ್ನೆಲ್ಲ ಇನ್ನೊಮ್ಮೆ ಪರಿಶೀಲಿಸಿ ಮಾಡಿ ಹೊರಗೆ ಬರಲಿಕ್ಕೆ. ಇದು ಅವರ ನಿತ್ಯ ನಿರಂತರ ಕರ್ಮ. ಕೆಲವರಿಗೆ ಅವರ ಸುತ್ತಲಿರುವುದು symmetry ಯಲ್ಲಿ ರಬೇಕು. ಅವರು ತಮ್ಮೆದುರಿಗಿರುವ ವಸ್ತುಗಳನ್ನು ಪದೇಪದೆ ಆಚೀಚೆ ಇಡುತ್ತಿರುತ್ತಾರೆ. ನಂತರ ಕೆಲವೇ ಕ್ಷಣದಲ್ಲಿ ಅವರು
ಇಟ್ಟದ್ದು ಅವರಿಗೇ ಸರಿಬರದೆ ಮತ್ತದೇ ಕೈಕೆಲಸಕ್ಕಿಳಿಯುತ್ತಾರೆ. ಅವರೊಳಗೊಬ್ಬ ಮಿನಿ ತುಘಲಕ್ ಕೂಡ ವಾಸವಾಗಿರುತ್ತಾನೆ. ಅವರಲ್ಲಿ ಕೆಲವರ ಸಮಸ್ಯೆಯೇನೆಂದರೆ ಅವರಿಗೆ ಬಾಹ್ಯ ಜಗತ್ತಿನ ಬಹುತೇಕ ವಿನ್ಯಾಸಗಳು ಅಂದರೆ, ಕಟ್ಟಡಗಳು, ಕಾರು, ಬೈಕ್, ಪಾರ್ಕು ಇತ್ಯಾದಿ ಯಾವ ವಿನ್ಯಾಸವೂ ಸರಿ ಹೊಂದಿಬರುವುದಿಲ್ಲ. ಎದುರಿನವರು ಶಿಸ್ತಾಗಿ ತಲೆ ಬಾಚಿಕೊಂಡಿರದಿದ್ದರೆ ಸಿಡಿಮಿಡಿಗೊಳ್ಳುತ್ತಾರೆ. ಅವರಿಗೆ ಎಲ್ಲ ವಸ್ತುಗಳೂ ಶಿಸ್ತಿನಲ್ಲಿಟ್ಟಿರಬೇಕು. ಶಿಸ್ತೇ ಅತಿಯೆನಿಸುವಷ್ಟು ಹುಚ್ಚು. ಅವರ ಈ ಅಚ್ಚುಕಟ್ಟಿನ ಹುಚ್ಚಿನ ಜತೆಯಾಗಿ ಇನ್ನೊಂದೆರಡು ಹುಚ್ಚು ಸೇರಿಕೊಂಡಿರುವುದು ಸಾಮಾನ್ಯ.

ಇನ್ನು ವಸ್ತುಗಳನ್ನು ಖರೀದಿಸಿ ದಾಸ್ತಾನು ಮಾಡುವುದು ಕೆಲವರ ಮಳ್ಳು. ಕೆಲವರಿಗೆ ಚಿನ್ನ, ಇನ್ನು ಕೆಲವರಿಗೆ ಬಟ್ಟೆ, ಜಯಲಲಿತಾಳಂಥವರಿಗೆ ಚಪ್ಪಲಿ. ಇನ್ನೊಂದಿಷ್ಟು ಮಂದಿಗೆ ಆರೋಗ್ಯದ ಮಳ್ಳು. ಇಡೀ ದಿನ ‘ಹೆಲ್ದಿ’, ‘ಹೆಲ್ತ್’ ಅನ್ನುತ್ತಿರು ತ್ತಾರೆ. ಮತ್ತೆ ಕೆಲವರಿಗೆ ಅವರ ದೇಹದ ಬಗ್ಗೆ ಒಂದಿಷ್ಟು obsession. ಸೌಂದರ್ಯ ಮತ್ತು ತಾನು ಹೇಗೆ ಕಾಣಿಸು ತ್ತೇನೆ ಎನ್ನುವುದನ್ನೇ ಸಂಪೂರ್ಣ ಸಮಯ ಯೋಚಿಸುತ್ತಿರುತ್ತಾರೆ. ಹೋದಲ್ಲಿ, ಸ್ನೇಹಿತರಲ್ಲಿ ನಿಮಿಷಕ್ಕೊಮ್ಮೆ ಮೇಕಪ್, ತಲೆಗೂದಲಿನ ಬಗ್ಗೆ ಕೇಳುತ್ತಿರುತ್ತಾರೆ. ಯಾರಾದರೂ ಮೊಬೈಲ್‌ನಲ್ಲಿ ಇವರ ಫೋಟೋ ತೆಗೆದರೆ ತಮ್ಮ ಫೋಟೋವನ್ನು ತಕ್ಷಣ ನಾಲ್ಕು ಬಾರಿಯಾದರೂ ಜೂಮ್ ಮಾಡಿ ನೋಡಿ ಕೊಳ್ಳುತ್ತಾರೆ ಇತ್ಯಾದಿ.

ಉಡುಪಿಯಲ್ಲಿ ನನ್ನ ಸ್ನೇಹಿತನೊಬ್ಬನಿದ್ದಾನೆ. ಅವನಿಗೊಂದು ವಿಚಿತ್ರ ಹುಚ್ಚು. ಅವನಿಗೆ ಏನಾದರೂ ಒಂದು ಕಂಡರೆ ಲೆಕ್ಕ ಹಾಕದೇ ಇರಲಿಕ್ಕಾಗುವು ದಿಲ್ಲ. ಎದುರಿಗೆ ರೈಲ್ವೆ ದಾಟುವಿನಲ್ಲಿ ಗೂಡ್ಸ್ ರೈಲ್ ಹೊರಟಿದ್ದರೆ ಅದರಲ್ಲಿ ಎಷ್ಟು ಬೋಗಿ ಇವೆ ಎಂದು ಲೆಕ್ಕ ಹಾಕಲೇಬೇಕು. ಒಮ್ಮೆಯಂತೂ, ಕಾರಿನಲ್ಲಿ ಹೋಗುವಾಗ ಎದುರಿಗೆ ಒಂದು ಟ್ರಕ್‌ನಲ್ಲಿ ಚಿಕ್ಕ ಚಿಕ್ಕ ನೀರಿನ ಕ್ಯಾನ್‌ಗಳನ್ನು ಬಳ್ಳಿಯಿಂದ ಹೇಗೋ ಕಟ್ಟಿದ್ದರು. ಅದು ಇಡೀ ಟ್ರಕ್ ಅನ್ನು ಆವರಿಸಿತ್ತು.

ಪುಣ್ಯಾತ್ಮ ಅದನ್ನು ಲೆಕ್ಕ ಹಾಕಲಿಕ್ಕೆ ಶುರುಮಾಡಿದ. ಅದಕ್ಕೋಸ್ಕರ ಸುಮಾರು ಅರ್ಧ ಗಂಟೆ ಟ್ರಕ್ ಅನ್ನು ಹಿಂಬಾಲಿಸಿದ್ದ. ಒಂದೆರಡು ಬಾರಿ ಟ್ರಕ್‌ನ ಡ್ರೈವರ್ ಕೈಮಾಡಿ ಮುಂದಕ್ಕೆ ಹೋಗಲು ದಾರಿ ಕೊಟ್ಟರೂ ನನ್ನ ಸ್ನೇಹಿತನ ಹುಚ್ಚು ಆ ಡ್ರೈವರ್‌ಗೆ ಎಲ್ಲಿ ಅರ್ಥವಾಗಬೇಕು! ಕೆಲವರಿಗೆ ದೇಶಭಕ್ತಿಯ ಹುಚ್ಚು. ಅವರು ತಮ್ಮ ಇಡೀ ಜೀವಮಾನದಲ್ಲಿ ಒಂದೇ ಒಂದು ಒಳ್ಳೆಯ, ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸ ಮಾಡಿದವರಲ್ಲ.

ರಸ್ತೆಯಲ್ಲಿದ್ದ ಒಂದೇ ಒಂದು ಕಸದ ಚೂರನ್ನು ಎತ್ತಿದವರಲ್ಲ. ಅವರಿಗೆ ಸರಕಾರದ ಮೇಲೆ ಎಲ್ಲಿಲ್ಲದ ಕೋಪ. ಭಾರತದ ಸಮಸ್ತ ಜನರೇ ಸರಿ ಇಲ್ಲ ಎನ್ನುವ ದೃಢನಂಬಿಕೆ. ಇವರಿಗೆ ಸೈನ್ಯದ ಮೇಲೆಯೂ ಆಗೀಗ ಏನೇನೋ ಅನುಮಾನಗಳು ಹುಟ್ಟುತ್ತವೆ. ಆದರೆ ಜನವರಿ ೨೬, ಆಗಸ್ಟ್ ೧೫, ಕರ್ನಾಟಕ ರಾಜ್ಯೋತ್ಸವ ಇವೆಲ್ಲ ಬಂದಾಗ ಇವರು ಒಮ್ಮಿಂದೊಮ್ಮೆಲೇ ಆಕ್ಟಿವೇಟ್ ಆಗಿಬಿಡುತ್ತಾರೆ. ಆ ದಿನಗಳಲ್ಲಿ ಎಲ್ಲಿಲ್ಲದ ಚುರುಕು. ಹಾಗಂತ ಇವರದು ಢೋಂಗಿ ದೇಶಪ್ರೇಮವಲ್ಲ. ದೇಶದ ಮೇಲೆ ಬಹಳ ಪ್ರೀತಿ ಇದೆ, ಹುಚ್ಚು ಎನ್ನಿಸುವಷ್ಟು. ಇನ್ನು ಕೆಲವರಿಗೆ ದೇವರ ಹುಚ್ಚು. ಭಕ್ತಿ, ಸದ್ವಿಚಾರ, ಆಚಾರ ಇವೆಲ್ಲ ನಗಣ್ಯ; ಆದರೆ ದೇವರೆಂದರೆ ಹುಚ್ಚು. ಇನ್ನೊಂದಿಷ್ಟು ಮಂದಿಗೆ ತಮ್ಮ ಸುತ್ತಲಿನದೆಲ್ಲವನ್ನೂ ನಿಗ್ರಹಿಸುವ ಹುಚ್ಚು.

ಇವರು ಪ್ರಾಥಮಿಕ ಶಾಲಾ ಶಿಕ್ಷಕರು ತರಗತಿಯಲ್ಲಿ ಇರುವಾಗಿನಂತೆ ಹೊರಗೆ ಬದುಕುತ್ತಿರುತ್ತಾರೆ. ಹೀಗೆ ಒಬ್ಬೊಬ್ಬೊರದು ಒಂದೊಂದು. ಒಮ್ಮೆ ನಮ್ಮೊಳಕ್ಕೇ ಇಣುಕಿ ನೋಡಿದರೆ ಅಲ್ಲೊಂದು ಇಂಥದ್ದು ದೊಡ್ಡದೋ, ಚಿಕ್ಕದೋ, ಮಳ್ಳೊಂದಂತೂ ಸಿಗುತ್ತದೆ.

ಸರಿಯಾಗಿ ನೋಡಬೇಕಷ್ಟೇ!
ಇನ್ನು ಹವ್ಯಾಸಗಳೇ ಹುಚ್ಚಾಗಿ ಮಾರ್ಪಡುವುದಿದೆ. ಹತ್ತಿರದ ಊರಲ್ಲಿ ಒಬ್ಬರಿದ್ದರು. ಅವರಿಗೆ ಯಕ್ಷಗಾನವೆಂದರೆ ಎಲ್ಲಿಲ್ಲದ ಹುಚ್ಚು. ಹುಚ್ಚೆಂದರೆ ಅಂತಿಂಥದ್ದಲ್ಲ. ಅವರದು ನಿಜವಾದ ಮಾನಸಿಕ ಹುಚ್ಚೋ ಅಥವಾ ಬರೀ ಹುಸಿ- ಹುಚ್ಚೋ? ಎಂಬುದೇ ಊರಿನವರೆಲ್ಲರ ಒಳಗೆ ಆಗೀಗ
ಹುಟ್ಟುವ ಪ್ರಶ್ನೆಯಾಗಿತ್ತು. ಅವರು ಸುತ್ತಲಿನ ಹತ್ತು ತಾಲೂಕು ಗಳಲ್ಲಿ ಎಲ್ಲಿಯೇ ಯಕ್ಷಗಾನವಾದರೂ ಹೋಗಿ ನೋಡಿ ಬರುತ್ತಿದ್ದರು. ಬೇಸಿಗೆ ಬಂತೆಂದರೆ ಇವರು ಯಕ್ಷಗಾನ ಮೇಳದವರಿಗಿಂತ ಹೆಚ್ಚು ಕಾರ್ಯೋದ್ಯುಕ್ತರಾಗಿರುತ್ತಿದ್ದರು.

ಒಂದೇ ದಿನ ಎರಡು ಮೂರು ಚಿಕ್ಕ ಯಕ್ಷಗಾನಗಳನ್ನು ನೋಡಿದ ದಾಖಲೆಗಳೂ ಇವೆ. ಇವರ ಹುಚ್ಚು ಕೊನೆ ಕೊನೆಗೆ ಎಷ್ಟು ಹೆಚ್ಚಾಯಿತೆಂದರೆ, ಕೃಷಿಭೂಮಿಯನ್ನು ಸಂಪೂರ್ಣ ನಿರ್ಲಕ್ಷಿಸಿಬಿಟ್ಟರು. ಬಂದ ದುಡ್ಡೆಲ್ಲ ಯಕ್ಷಗಾನ ನೋಡಲಿಕ್ಕೆ, ಅಲ್ಲಿ ಶೇಂಗಾಬೀಜ ತಿನ್ನಲಿಕ್ಕೆ. ನಂತರ ಏನೂ ಬೆಳೆ ಸರಿಯಾಗಿ ಬಾರದೇ ಸಂಪೂರ್ಣ ದಿವಾಳಿಯಾಗಬೇಕಾಯಿತು. ಅವರು ಇಂದಿಗೂ ‘ಲುಕ್ಸಾನ್ ಭಾಗವತರು’ ಎಂದೇ ಜನರ ಮಾತು ಗಳಲ್ಲಿ ಬದುಕುಳಿದಿದ್ದಾರೆ. ಒಂದು ಅಭ್ಯಾಸ, ಹವ್ಯಾಸ, ಟೈಮ್‌ಪಾಸ್, ಮನೋರಂಜನೆ ಬದುಕನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಉದಾಹರಣೆಗಳು ಹಲವು.

ಪರಿಚಯದವರೊಬ್ಬರಿಗೆ ರಾಜಕಾರಣ ಅಂದರೆ ಅಷ್ಟೂ ಆಸಕ್ತಿ. ಅವರು ಯುಟ್ಯೂಬಿನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ಟಿವಿಯಲ್ಲಿ ಬರೀ ರಾಜಕೀಯ ಸುದ್ದಿಯನ್ನಷ್ಟೇ ನೋಡುವುದು. ಅವರಿಗೆ ಒಂದೇ ಒಂದು ದಿನ ರಾಜಕೀಯ ಸುದ್ದಿ ತಿಳಿಯದಿದ್ದರೆ ಆದೇನೋ ಸಂಕಟ. ಹಾಗಂತ ಅವರು
ಈ ಭೂತ-ಪಿಶಾಚಿ ಎಂಬ ಪೊಂಕು ಸುದ್ದಿಯನ್ನೆಲ್ಲ ನೋಡು ವವರಲ್ಲ. ‘ಹೊರಡುವಾಗ ಕಾಗೆ ಕಂಡರೆ ಏನು ಶಕುನ?’ ಎನ್ನುವ ಸುದ್ದಿಯನ್ನು ನೋಡುವುದಿಲ್ಲ. ಆದರೆ ‘ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕೂತ ನಂತರ ಆ ಕಾರಿನ ಸ್ಥಿತಿ ಏನಾಯ್ತು ಗೊತ್ತಾ?’ ಎಂಬ ಸುದ್ದಿ ಬಂದರೆ ಅದನ್ನು ನೋಡದೇ ಬಿಡುವುದಿಲ್ಲ.

ಅವರ ಮಾತು ಕೂಡ ರಾಜಕೀಯಕ್ಕಷ್ಟೇ ಸೀಮಿತ. ಜನರು ಸೇರಿದಲ್ಲಿ ಎಲ್ಲೆಲ್ಲಿ ರಾಜಕೀಯ ವಾದ, ಮಾತುಕತೆಗಳಾಗುತ್ತಿರುತ್ತವೆಯೋ ಅಲ್ಲಿಯೇ ಇವರು ಇರುವುದು. ಕೆಲವೊಮ್ಮೆ ಇವರಷ್ಟೇ ಮಾತನಾಡುತ್ತಿರುತ್ತಾರೆ. ಮಾತು ರಾಜಕೀಯ ದಾಟಿ ಇನ್ನೊಂದಕ್ಕೆ ಹೊರಳಿದಾಗ ಮೌನವಾಗಿ ಬಿಡುತ್ತಾರೆ. ಅವರ ಪ್ರಕಾರ ರಾಜಕೀಯ ಬಿಟ್ಟು ಉಳಿದವೆಲ್ಲ ತಿಪ್ಪೆಗುಂಡಿ. ಸಿನಿಮಾ ನಟನ ಆಸ್ತಿಯ ಸುದ್ದಿ ಇವರಿಗೆ ಗೊತ್ತಿಲ್ಲ. ಅದನ್ನು ತಿಳಿದು ಕೊಂಡು ಆಗಬೇಕಾದದ್ದೇನಿದೆ? ಅದೇ ರಾಜಕಾರಣಿಯ ಆಸ್ತಿಯ ಬಗ್ಗೆ ಕೇಳಿದರೆ ಕೊನೆಯ ಹತ್ತು ರುಪಾಯಿಯನ್ನೂ ಬಿಡದೆ ಲೆಕ್ಕ ಹೇಳುತ್ತಾರೆ.
ಅವರಿಗೆ ವಿಧಾನಸೌಧದ ಒಳಗಡೆಯ ಗುಸುಗುಸು ಟಿವಿಯ ವರಿಗಿಂತ ಮೊದಲೇ ಗೊತ್ತಾಗಿಬಿಡುತ್ತದೆ. ಅಥವಾ ಅಂದಾಜಿಸಿ ಹೇಳುವ ಜಾಣ್ಮೆ ಇರಬೇಕು. ಕೆಲವೊಮ್ಮೆ ಅವರು ರಾಜಕೀಯ ವಿಶ್ಲೇಷಣೆಯ ಜತೆ ಭವಿಷ್ಯ ಹೇಳುವ ಜ್ಯೋತಿಷಿಯಾಗಿಬಿಡುತ್ತಾರೆ.

‘ನೋಡು, ಈ ಲೆಕ್ಕಾಚಾರದ ಪ್ರಕಾರ ಇವರೇ ಅಲ್ಲಿ ಗೆಲ್ಲೋದು, ಬರೆದಿಟ್ಟುಕೋ’ ಎಂದು ಫೋನ್ ಮಾಡಿ ಹೇಳುವುದಿದೆ. ಆಮೇಲೆ ಅವರ ಲೆಕ್ಕ ಬುಡ
ಮೇಲಾದರೆ ಅದು ಅವರಿಗೆ ಅವಮಾನದ ವಿಷಯವಲ್ಲ. ಬದಲಿಗೆ ‘ಈ ಲೆಕ್ಕಾಚಾರ ಇಲ್ಲಿ ತಪ್ಪಿತು’ ಎಂದು ವಿವರಿಸುತ್ತಾರೆ. ಇವರದು ರಾಜಕೀಯ ವಂತೂ ಅಲ್ಲ. ರಾಜಕೀಯ ವೆಂದರೆ ಅಧಿಕಾರ ಗ್ರಹಣ ಮತ್ತು ಚಲಾವಣೆ. ಹಾಗಾದರೆ ಇದೇನು? ಹುಚ್ಚೋ ಅಥವಾ ಹವ್ಯಾಸವೋ? ಭಾರತ ಅತ್ಯಂತ ಹೆಚ್ಚು ರಾಜಕೀಯವಾಗಿ ಜಾಗೃತವಾಗಿ ರುವ ದೇಶ. Vibrant Democracy ಎಂದೇ ನಮ್ಮ ಪ್ರಜಾಪ್ರಭುತ್ವವನ್ನು ಉಳಿದವರು ಕರೆಯುವುದು. ಇಷ್ಟು ಪ್ರಮಾಣ ದಲ್ಲಿ ರಾಜಕಾರಣದ ಬೆಳವಣಿಗೆಗಳನ್ನು ಹಿಂಬಾಲಿಸುವವರು ಬೇರಿನ್ನೊಂದು ದೇಶದಲ್ಲಿ ಪ್ರಾಯಶಃ ಇಲ್ಲ.

ಬಹಳಷ್ಟು ದೇಶಗಳಲ್ಲಿ ಮನೆಯ ಹಾಲಿನಲ್ಲಿ ತೆಪ್ಪಗೆ ಟಿವಿ ನೋಡಿ, ಹೋಗಿ ಮತ ಚಲಾಯಿಸಿ ಬರುವುದಕ್ಕಷ್ಟೇ ಸೀಮಿತವಾಗಿರುವವರ ಸಂಖ್ಯೆಯೇ ಜಾಸ್ತಿ. ಅಲ್ಲೆಲ್ಲ ಜನಸಾಮಾನ್ಯರು ರಾಜ ಕೀಯವನ್ನು ಚರ್ಚಿಸುವ ಪ್ರಮಾಣ ನಮಗೆ ಹೋಲಿಸಿದರೆ ತೀರಾ ಕಡಿಮೆ. ನಮ್ಮಲ್ಲಿ ಚುನಾವಣೆ ಹತ್ತಿರ ಬಂದರೆ ಉತ್ಸುಕ ರಾಗುವ ಅತಿದೊಡ್ಡ ವರ್ಗವಿದೆ. ಇವರದು ಮೇಲ್ನೋಟಕ್ಕೆ ರಾಜಕೀಯ ದೃಷ್ಟಿಕೋನ ಎಂದೆನಿಸಿದರೂ ಇದು ತೀರಾ ವೈಯಕ್ತಿಕ ವಾದ ಒಂದು ಹವ್ಯಾಸ, ರಂಜನೆ. ಆದರೆ ಟೈಮ್ ಪಾಸ್ ಅಲ್ಲ. ಸೂಕ್ಷ್ಮವಾಗಿ ಗ್ರಹಿಸಿದರೆ ಇದು ಕೂಡ ಉಳಿದ ಹವ್ಯಾಸ, ಹುಚ್ಚುಗಳಂತೆಯೇ. ಈಗಂತೂ ೨೪ ಗಂಟೆಯ ಸುದ್ದಿವಾಹಿನಿಗಳು, ಸೋಷಿಯಲ್ ಮೀಡಿಯಾ, ಇಂಟರ್ನೆಟ್ ಇತ್ಯಾದಿಯಿಂದಾಗಿ ನಮ್ಮನ್ನು ಹಲವು ದಿಕ್ಕುಗಳಿಂದ
ರಾಜಕೀಯ ಸುದ್ದಿಗಳು ಬಂದು ಮುಟ್ಟುತ್ತವೆ. ಇಲ್ಲಿ ಬೇಕು ಬೇಡಗಳ ಪ್ರಶ್ನೆಯಿಲ್ಲ, ತಪ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ.

ಹಾಗಾಗಿ ಈ ಹವ್ಯಾಸ ಸುಲಭಕ್ಕೆ ಕೈಗೆಟುಕುತ್ತದೆ. ರಾಜಕೀಯವನ್ನು ಹವ್ಯಾಸವಾಗಿಸಿಕೊಂಡವರಿಂದಲೇ ಇಂದು ನಮ್ಮ ದೇಶದಲ್ಲಿ ಸೋಷಿಯಲ್ ಮೀಡಿಯಾ ಮತ್ತು ಸುದ್ದಿ ವಾಹಿನಿಗಳು ಈ ಪ್ರಮಾಣದಲ್ಲಿ ಜೀವಂತವಿರುವುದು. ಇದು ಕ್ರೀಡೆಗಳನ್ನು ನೋಡುವ, ಹಿಂಬಾಲಿಸುವ ಹವ್ಯಾಸಕ್ಕಿಂತ
ಬಹಳ ವಿಭಿನ್ನವಾಗಿಲ್ಲ. ಇನ್ನೊಂದು ಟೀಮಿನವರನ್ನು ಹಳಿಯುವುದು, ನಮ್ಮ ಟೀಮಿನವರು ಏನೇ ತಪ್ಪು ಮಾಡಿದರೂ ಸಮಜಾಯಿಷಿ ಕೊಡುವುದು ಇತ್ಯಾದಿ. ಇದುವೇ ರಾಜಕೀಯ ಹವ್ಯಾಸಿಗರಲ್ಲಿ ಇನ್ನೊಂದು ತೆರನಾಗಿದೆ. ಅಲ್ಲಿ ಒಬ್ಬ ಆಟಗಾರ ಇನ್ನೊಬ್ಬನನ್ನು ದ್ವೇಷಿಸುವುದಿಲ್ಲ. ರಾಜಕಾರಣಿಗಳೂ ಹಾಗೆಯೇ.

ಆದರೆ ಎರಡೂ ಕಡೆ ಹಿಂಬಾಲಕರು ಪರಸ್ಪರ ಬೈದಾಡಿಕೊಳ್ಳುವುದೇ ಜಾಸ್ತಿ. ಅಲ್ಲಿ ಒಬ್ಬ ಶ್ರೇಷ್ಠ ಆಟಗಾರನನ್ನು ದೇವರಂತೆ ಕಂಡರೆ ಇಲ್ಲಿ ಒಬ್ಬ ರಾಜಕಾರಣಿಯನ್ನು. ಕ್ರಿಕೆಟ್ ಆಟವನ್ನು ನೋಡಿ ಬಿಡುವವರು ಸುಮ್ಮನೆ ಹೋಗಿ ವೋಟಿಂಗ್ ಮಾಡಿ ಬರುವವರಂತೆ. ಆಟದ ಸ್ಟ್ಯಾಟಿಸ್ಟಿಕ್ಸ್ ಎಲ್ಲ ಬಾಯಿಪಾಠ ಮಾಡಿಕೊಂಡವರು, ಆಟಗಾರನ ಪ್ರೇಯಸಿಯ ಸಂಪೂರ್ಣ ವರ ತಿಳಿದವರು, ಇವರೆಲ್ಲ ಈ ರಾಜಕೀಯ ಹವ್ಯಾಸದ ವರಂತೆ. ಇಲ್ಲಿ ಕೂಡ ಅದೇ ಹಂತದ ವಿವರಗಳು ತಿಳಿದಿರುತ್ತವೆ.

ಇಲ್ಲೊಂದು ಅಂಶ ಗ್ರಹಿಸಬೇಕು: ಕ್ರಿಕೆಟ್ ನೋಡುವವನು ತಾನು ಕೂಡ ಆಟದ ಭಾಗವೆಂದೇ ಅಂದುಕೊಂಡಿರುತ್ತಾನೆ. ಆದರೆ ನಿಜವಾಗಿ ಕ್ರಿಕೆಟ್ ಆಡುವವರು ಆಟಗಾರರು ಮಾತ್ರ ವಲ್ಲವೇ? ಕ್ರಿಕೆಟ್ ನೋಡುವ ಹವ್ಯಾಸಕ್ಕೂ, ಆಡುವುದಕ್ಕೂ ವ್ಯತ್ಯಾಸವಿದೆಯಲ್ಲ. ನೋಡುಗ ಆ ವ್ಯತ್ಯಾಸವನ್ನು ಮೀರಿ ಆಟವನ್ನು ಖುಷಿಪಡುತ್ತಾನೆ. ತಾನೇ ಕ್ರಿಕೆಟ್‌ನ ಒಂದು ಭಾಗವೆಂದು ಅಂದುಕೊಳ್ಳುತ್ತಾನೆ. ಆದರೆ ಆತ ಅಲ್ಲಿ ವ್ಯವಸ್ಥೆಯ ಭಾಗ ಮಾತ್ರ. ರಾಜಕೀಯ ಹವ್ಯಾಸದ್ದೂ ಇದೇ ಕಥೆ. ಹೇಗೆ ಅಲ್ಲಿ ಟಿಕೆಟ್ ತೆಗೆದುಕೊಳ್ಳುವಲ್ಲಿಯವರೆಗೋ, ಹಾಗೆ ಇಲ್ಲಿ ವೋಟ್ ಮಾಡುವಲ್ಲಿಯವರೆಗೆ. ನಂತರದಲ್ಲಿ ಅವರಾಡಿದ್ದು ನೋಡಬೇಕು, ಹವ್ಯಾಸಿಯಾಗಿ.

ನಿಜವಾಗಿ ರಾಜಕೀಯದಲ್ಲಿ ಚರ್ಚಿಸಿ ಭಾಗವಹಿಸುವ ವ್ಯವಸ್ಥೆಯುಳ್ಳ ದೇಶಗಳಿಲ್ಲವೆಂದಲ್ಲ. ಉದಾಹರಣೆಗೆ ಸ್ವಿಜರ್ಲೆಂಡ್. ಅಲ್ಲಿ ಕ್ಯಾಂಟೋನ್ ಹಂತದಲ್ಲಿ ವಾರಕ್ಕೊಮ್ಮೆ ಚುನಾವಣೆಗಳಾಗುತ್ತವೆ. ಆ ಚುನಾವಣೆಯಲ್ಲಿ ಜನರೇ ವೋಟ್ ಮಾಡಿ ಪ್ರಮುಖ ನಿರ್ಧಾರಗಳಿಗೆ ‘ಹೌದು’, ‘ಇಲ್ಲ’ ಎನ್ನಬಹುದು. ರಾಜಕಾರಣಿಗಳು ಮಾಡಿದ ಕಾನೂನನ್ನು ಸುಮ್ಮನೆ ಕೂತು ನೋಡಿ, ‘ಮುಂದಿನ ಚುನಾವಣೆ ಬರಲಿ, ಬುದ್ಧಿ ಕಲಿಸುತ್ತೇವೆ’ ಎಂಬ ವ್ಯವಸ್ಥೆಯಲ್ಲ. ಅಲ್ಲಿನ ಒಂದು ಕ್ಯಾಂಟೋನ್ (ಚಿಕ್ಕ ದೇಶದ ಪುಟ್ಟ ರಾಜ್ಯ) ಫ್ರೀಬುರ್ಗ್‌ನ ಸುದ್ದಿ ಓದುತ್ತಿದ್ದೆ. ಆ ಊರಿನ ಚರ್ಚ್ ಇಡೀ ಊರಿಗೆ ಎತ್ತರದ
ಕಟ್ಟಡ. ಅದಕ್ಕಿಂತ ಎತ್ತರದ ಕಟ್ಟಡಕ್ಕೆ ಅನುಮತಿ ಕೊಡಬೇಕೋ, ಬೇಡವೋ ಎಂಬುದರ ಬಗ್ಗೆ ಆ ವಾರದ ವೋಟಿಂಗ್.

ಅಲ್ಲಿನವರೆಲ್ಲ ಅದಕ್ಕೆ ಸಮ್ಮತಿಸಲಿಲ್ಲ. ಇದು ಅತ್ಯಂತ ನೇರ, ಅದಬ್ ರಾಜಕೀಯ. ಆದರೆ ನಮ್ಮಲ್ಲಿ ಹಾಗಿಲ್ಲವಲ್ಲ. ನಮ್ಮದೇನಿದ್ದರೂ ಐದು ವರ್ಷಕ್ಕೊಮ್ಮೆ ವೋಟ್ ಹಾಕುವುದು ಬಿಟ್ಟರೆ ಬೇರೆ ಏನು ಕೆಲಸ. ಬಹುಶಃ ಆ ಅಸಹಾಯಕತೆ ಮತ್ತು ಇತ್ತೀಚಿನ ಸ್ವಾತಂತ್ರ್ಯ ನಮ್ಮ ನಿರಂತರ ರಾಜಕೀಯ ಜಾಗೃತಿಗೆ ಕಾರಣವಿರಬಹುದು. ಇಂದು ಬಹುತೇಕರಿಗೆ ರಾಜಕೀಯವೆಂದರೆ ಭಾವನಾತ್ಮಕ ವಿಚಾರ. ಅದು ಅವರ ತಿಳಿವಳಿಕೆಯ, ಜ್ಞಾನದ ಮಾಪಕ. ಹವ್ಯಾಸದಂತೆ. ಆ ಕಾರಣಕ್ಕೆ ಯಾರ ಜತೆಯೂ ರಾಜಕೀಯ ವಾದಕ್ಕೆ ಇಳಿಯಲೇಬಾರದು. ಏಕೆಂದರೆ, ಕಾಲ ಕಳೆದಂತೆ
ರಾಜಕೀಯ ಅವರಲ್ಲಿ ಕೇವಲ ಹವ್ಯಾಸವಾಗಿಯಷ್ಟೇ ಉಳಿದಿರುವುದಿಲ್ಲ. ಅವರ ವಿಚಾರಗಳು, ಗ್ರಹಿಕೆ ಅವರ ವ್ಯಕ್ತಿತ್ವದ ಭಾಗವಾಗಿರುತ್ತವೆ. ಒಬ್ಬ super fan ನಂತೆ.

ಹಾಗಾಗಿಯೇ ಎಲ್ಲ ರಾಜಕೀಯ ವಾದಗಳು ಕೊನೆಯಲ್ಲಿ ವೈಯಕ್ತಿಕಕ್ಕೆ ಹೊರಳಿಬಿಡುವುದು. ಇದನ್ನು ಹವ್ಯಾಸವೆಂದು ನಾವು ಒಪ್ಪಿಕೊಂಡರೆ, ಹವ್ಯಾಸದಂತೆಯೇ ಸ್ವೀಕರಿಸಿ, ಅಂತರದಲ್ಲಿ ಇಟ್ಟರೆ ಅದರಿಂದ ಸಮಾಧಾನ ಖಂಡಿತ. ಮಿತಿಮೀರಿದ ರಾಜಕೀಯ ಹವ್ಯಾಸವೂ ಒಂದು ರೀತಿಯ ಹುಚ್ಚು.