Saturday, 14th December 2024

ರಾಜಕೀಯ ನಿವೃತ್ತಿ ಪರ್ವಕ್ಕೆ ನಾಂದಿ ಹಾಡಿದ ಬಿಜೆಪಿ

ಅಭಿಮತ

ರಮಾನಂದ ಶರ್ಮಾ

ದೇಶದಲ್ಲಿ ನಿವೃತ್ತಿ ಇಲ್ಲದ ವೃತ್ತಿ ಯಾವುದೆಂದರೆ, ಪ್ರಜ್ಞಾವಂತರೇಕೆ ಶಾಲಾ ಮಕ್ಕಳೂ ರಾಜಕೀಯ ಎಂದು ತಟ್ಟನೆ ಹೇಳುತ್ತಾರೆ. ಪಂಚಾಯತ್ ಪ್ಯೂನ್‌ನಿಂದ ಹಿಡಿದು ರಾಷ್ಟ್ರಪತಿವರೆಗೆ ಸೇವೆಯಲ್ಲಿರುವ ಪ್ರತಿಯೊಬ್ಬರಿಗೆ ಸೇವೆ ಸಲ್ಲಿಸುವ ಅವಧಿಗೆ ಗರಿಷ್ಠಮಿತಿ ಇರುತ್ತದೆ. ಇದು ಸಾಮಾನ್ಯವಾಗಿ ೫೮-೬೦-೬೫ ಹೀಗೆ. ಅದು ಸೇವೆ ಸಲ್ಲಿಸುವ ಇಲಾಖೆ, ನಿರ್ವಹಿಸುವ ಹುದ್ದೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಈ ಗರಿಷ್ಠ ವಯಸ್ಸು ತಲುಪುತ್ತಿದ್ದಂತೆ ಅವರು ಮುಲಾಜಿಲ್ಲದೇ ಗಂಟು-ಮೂಟೆ ಕಟ್ಟಿ ಮನೆಯತ್ತ ಹೊರಡ ಬೇಕಾಗುತ್ತದೆ. ಆದರೆ, ರಾಜಕಾರಣಿಗಳಿಗೆ, ಇದು ಒಂದು ವೃತ್ತಿಯಾ ದರೂ ಅವರಿಗೆ ನಿವೃತಿ ಎನ್ನುವುದು ಹತ್ತಿರ ಸುಳಿಯುವುದಿಲ್ಲ. ಅನಿವಾರ್ಯವಾದ ಕಾಲನ ಕರೆ ಬಂದಾಗ ಅಥವಾ ಹಾಸಿಗೆ ಯಿಂದ ಬಿಟ್ಟೇಳಲಾರದಂಥ ಅನಾರೋಗ್ಯದ ಸಮಸ್ಯೆ ಎದುರಾದಾಗ ಮಾತ್ರ ಅವರು ರಾಜಕೀಯದಿಂದ ದೂರವಾಗುತ್ತಾರೆ. ರಾಷ್ಟ್ರಪತಿ ಶಂಕರ ದಯಾಳ ಶರ್ಮಾರ ಅಧಿಕಾರ ಅವಧಿ ಮುಗಿದಾಗ, ಅವರ ಆರೋಗ್ಯ ಅಷ್ಟು ದೃಢವಾಗಿಲ್ಲದ ಕಾರಣ ಅವರನ್ನು ಎರಡನೇ ಅವಧಿಗೆ ಪರಿಗಣಿಸಿರಲಿಲ್ಲ.

ಅದರೂ, ಅವರು ಅವಕಾಶ ನೀಡಿದರೆ ಇನ್ನೊಂದು ಅವಧಿಗೆ ದೇಶಸೇವೆ ಮಾಡಲು ಸಿದ್ಧ ಎಂದು ಹೇಳಿದಾಗ ರಾಜಕಾರಣಿಗಳ ಅಧಿಕಾರ ದಾಹದ ಬಗೆಗೆ ಜನಸಾಮಾನ್ಯರಿಂದ ಹಿಡಿದು ಪ್ರಜ್ಞಾವಂತರ ವರೆಗೆ ಅನೇಕರು ಲೇವಡಿ ಮಾಡಿದ್ದರು. ರಾಜಕಾರಣ ಬಹುತೇಕ ಪಾಶ್ಚಿಮಾತ್ರ ರಾಷ್ಟ್ರಗಳಲ್ಲಿ ವೃತ್ತಿಯಾಗಿರದೇ, ಒಂದು ಹವ್ಯಾಸ ವಾಗಿರುತ್ತದೆ. ಅಪವಾದಗಳು ಇರಬಹುದಾದರೂ ತಮ್ಮ ಅವಧಿ ಮುಗಿದ ನಂತರ ತಮ್ಮ ಹಳೆಯ ವೃತ್ತಿಗೆ ಮರಳುತ್ತಾರೆ. ಹೆನ್ರಿ ಕಿಸಿಂಜರ್ ಜಗತ್ತೇ ಎದ್ದು ನಿಂತು ಮೆಚ್ಚುಗೆ ಸೂಸುವಂತ ರಾಜತಾಂತ್ರಿಕ ಮತ್ತು ಯಾವುದೇ ಜಟಿಲ ಸಮಸ್ಯೆಗಳನ್ನು ಸಂಧಾನ ಮೂಲಕ ಬಗೆಹರಿಸುವ ಚಾಣಕ್ಯ ಸಂಧಾನಕಾರ. ಅವರು ಬಯಸಿದ್ದರೆ ತಮ್ಮ ಅಧಿಕಾರ ಅವಧಿ ಮುಗಿದ ಮೇಲೂ ಮುಂದುವರಿಯಬಹುದಿತ್ತು. ಅದರೆ, ತಮ್ಮ ಅವಧಿ ಮುಗಿದ ತಕ್ಷಣ ಅವರು ವಿಶ್ವವಿದ್ಯಾಲಯದಲ್ಲಿನ ಉಪನ್ಯಾಸಕ ಹುದ್ದೆಗೆ ಮರಳಿದ್ದರು.

ಎರಡು ಬಾರಿ ಅಮೆರಿಕಾದ ಅಧ್ಯಕ್ಷರಾದ ಬರಾಕ್ ಒಬಾಮ ತಮ್ಮ ಅವಧಿ ಮುಗಿದ ನಂತರ ತಮ್ಮ ಹಳೆಯ ಹುದ್ದೆಗೆ ಮರಳಿದ್ದಾರೆ. ಬಿಲ್ ಕ್ಲಿಂಟನ್ ದೇಶಾದ್ಯಂತ ಸಂಚರಿಸಿ ಉಪನ್ಯಾಸ ನೀಡುತ್ತಿದ್ದಾರೆ ಮತ್ತು ಕೈತುಂಬಾ ಹಣವನ್ನು ಗಳಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಬುಷ್ ಕುಟುಂಬ ಬಿಟ್ಟರೆ ಇನ್ನು ಯಾವ ಕುಟುಂಬವೂ ರಾಜಕಾರಣವನ್ನು ಪ್ರವೇಶಿಸುವ ಪ್ರಯತ್ನವನ್ನು ಮಾಡಿದ ದಾಖಲೆ ಇಲ್ಲ. ಅಮೆರಿಕಾದ ಕಾನೂನಿನ ಪ್ರಕಾರ ಅಲ್ಲಿ ಒಬ್ಬರು ಎರಡಕ್ಕಿಂತ ಹೆಚ್ಚು ಬಾರಿ ಅಧ್ಯಕ್ಷರಾಗುವಂತಿಲ್ಲ. ಭಾರತದಲ್ಲಿ ರಾಜಕಾರಣ ಕೇವಲ ವೃತಿಯಲ್ಲ. ಇದು ಬಿಜಿನೆಸ್ ಕೂಡ ಆಗಿರುತ್ತದೆ. ಹಲವು ತರದ ನಮೂನೆಗಳನ್ನು ಭರ್ತಿ ಮಾಡುವಾಗ ತಂದೆಯ ಉದ್ಯೋಗ ಏನು ಎನ್ನುವ ಕಾಲಂನಲ್ಲಿ ವಿದ್ಯಾರ್ಥಿಯೊಬ್ಬ ‘ರಾಜಕಾರಣ’ ಎಂದು ಭರ್ತಿ
ಮಾಡಿದ್ದು, ರಾಜಕಾರಣ ಉದ್ಯೋಗವೇ ಎಂದು ಹಲವರು ತಕರಾರು ತೆಗೆದಿದ್ದರು.

ಆ ಉದ್ಯೋಗದ ಬಗೆಗೆ ಸ್ವಲ್ಪ ವಿವರವಾಗಿ ಹೇಳು ಎಂದು ಕೇಳಿದಾಗ, ಆ ವಿದ್ಯಾರ್ಥಿಯು ರಾಜಕಾರಣವೆಂದರೆ ಭಾಷಣ ಮಾಡುವುದು, ಚುನಾವಣೆಗೆ ನಿಲ್ಲುವುದು, ಜನರಿಗೆ ಸಲಹೆ-ಸೂಚನೆ ನೀಡುವುದು, ರಿಬ್ಬನ್ ಕಟ್ ಮಾಡುವುದು, ಅಡಿಗಲ್ಲು ಹಾಕುವುದು, ಜನರಿಗೆ ಆಶ್ವಾಸನೆ ನೀಡುವುದು, ನಿರ್ಧಾರಿತ ಪ್ರದೇಶಗಲ್ಲಿ ನಾಗರಿಕ ಸಮಸ್ಯೆಗಳನ್ನು ನಿವಾರಿಸುವುದು ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಎಂದು ಹೇಳಿ ಪ್ರಶ್ನಿಸಿದವರ ಬಾಯಿ ಮುಚ್ಚಿಸಿದ್ದನಂತೆ. ಈ ರಂಗದ ವಿಶೇಷವೆಂದರೆ ಒಮ್ಮೆ ರಾಜಕಾರಣಕ್ಕೆ ಬಂದವರು ಎಂದೂ ರಾಜಕಾರಣವನ್ನು ಬಿಡುವುದಿಲ್ಲ. ಇಲ್ಲಿ ರಾಜಕಾರಣಕ್ಕೆ ಪ್ರವೇಶ ಇದೆ. ಆದರೆ ನಿರ್ಗಮನ ಇರುವುದಿಲ್ಲ. ಕಾಲನ ಕರೆ ಬಂದಾಗ ಅಥವಾ ಚುನಾವಣೆಯಲ್ಲಿ ಮತದಾರರು ‘ಇವರು ಸಾಕಪ್ಪಾ’ ಎಂದು ಮತ
ಪೆಟ್ಟಿಗೆಯ ಮೂಲಕ ನೇಪಥ್ಯಕ್ಕೆ ಸರಿಸಿದಾಗಲೇ ಅವರ ರಾಜಕೀಯ ಇನ್ನಿಂಗ್ಸ್ ಅಂತ್ಯ ಕಾಣುವುದು. ಈ ಅಂತ್ಯ ಕೂಡ ತಿಳಿದಷ್ಟು ಸರಳವಾಗಿರದೇ, ಬೇರೆ ಯಾವುದೇ ಚುನಾವಣೆಗೆ ನಿಲ್ಲಲು ಅವಕಾಶ ಸಿಗದಿರುವಾಗ ಒಲ್ಲದ ಮನಸ್ಸಿನಿಂದ ಹಿಂದೆ ಸರಿಯುತ್ತಾರೆ. ಈ ಅನಿವಾರ್ಯ ನಿರ್ಗಮನದ ನಂತರವೂ ತಮ್ಮ ಕುಟುಂಬದವರು, ಸಂಬಂಧಿಗಳು, ಊರಿನವರು ಮತ್ತು ಜಾತಿಯವರು ಬೇರು ಬಿಡುವಂತೆ ಮತ್ತು ಕರುಳಬಳ್ಳಿ ಮುಂದುವರಿಯುವಂತೆ ನಾಜೂಕಾಗಿ ಆಪರೇಷನ್ ಮಾಡಿಯೇ ಬೈ ಎನ್ನುತ್ತಾರೆ.

ರಾಜಕಾರಣಿಗಳ ನಿವೃತ್ತಿ ಬಗ್ಗೆ ಕಾನೂನು ಮೌನವಾಗಿರುವುದನ್ನು ದುರುಪಯೋಗ ಮಾಡಿಕೊಂಡ ರಾಜಕಾರಣಿಗಳು ಇನ್ನೊಬ್ಬರ ಬಗೆಗೆ ಚಿಂತಿಸುವು ದಿಲ್ಲ. ತಮ್ಮಂತೆ ಇನ್ನೊಬ್ಬರೂ ರಾಜಕಾರಣದ ಫಲವನ್ನು ಉಣ್ಣಲಿ ಎಂದು ಯೋಚಿಸುವುದಿಲ್ಲ, ಇನ್ನೊಬ್ಬರ ಚಿಂತನೆಗಳು, ಯೋಚನಾ ಲಹರಿಗಳೂ ಆಡಳಿತ ವ್ಯವಸ್ಥೆಯಲ್ಲಿ ಹರಿಯಲಿ ಎಂದು ಕ್ಷಣ ಮಾತ್ರವೂ ಚಿಂತಿಸುವುದಿಲ್ಲ. ನಾನು, ನಾವು, ನಮ್ಮವರು ಎನ್ನುವ ಪಂಜರದಿಂದ ಹೊರಬರುವುದಿಲ್ಲ. ದಶಕ, ಎರಡು ದಶಕಗಳ ಕಾಲ ನಿರಂತರವಾಗಿ ಮುಖ್ಯಮಂತ್ರಿಯಾದವರೂ ಇದ್ದಾರೆ. ಗಾಲಿ ಖುರ್ಚಿಯಲ್ಲಿ ಕುಳಿತು ಅಧಿಕಾರ ಚಲಾಯಿಸಿದವರು, ಶಾಸಕರ ಮತ್ತು ಸಂಸದರ ವಸತಿ ಗೃಹಗಳಿಗೆ ಖಾಯಂ ನಿವಾಸಿಗಳು ಆದವರೂ ಇದ್ದಾರೆ. ಆದರೂ, ಇನ್ನೊಬ್ಬರು ಕೂಡ ಅನುಭವಿಸಲಿ, ಹೊಸಬರು ಬರಲಿ, ಯುವಕರು ಮುಂದಿನ ಸಾಲಿಗೆ ಬರಲಿ, ನಾನು ಸಾಕಷ್ಟು ಅನುಭವಿಸಿದ್ದೇನೆ ಎನ್ನುವ ತ್ಯಾಗ ಮಯಿ ಧೋರಣೆಯನ್ನು ತೋರಿಸುವ ದೊಡ್ಡತನ ಮತ್ತು ಹೃದಯ ವೈಶಾಲ್ಯ ಅವರಲ್ಲಿ ಕಾಣುವುದಿಲ್ಲ.

ರಾಜಕಾರಣಿಗಳ ಈ ಪ್ರವೃತ್ತಿಯನ್ನು ನೋಡಿದವರು ರಾಜಕಾರಣದಲ್ಲಿ ವೃತ್ತಿಪರತೆಯನ್ನು ನಿಲ್ಲಿಸಲು, ರಾಜಕಾರಣ ಕೆಲವೇ ವ್ಯಕ್ತಿಗಳ ಒಡ್ಡೋಲಗ ವಾಗುವುದಕ್ಕೆ ತಡೆ ನೀಡಲು, ರಾಜಕಾರಣದಲ್ಲಿ ಯುವಕರಿಗೆ, ಹೊಸ ಮುಖಗಳಿಗೆ ಮತ್ತು ಚಿಂತನೆಗಳಿಗೆ ಅವಕಾಶ ನೀಡಲು ತೀರಾ ವಯಸ್ಸಾದವರನ್ನು, ಸತತವಾಗಿ ಆಯ್ಕೆಯಾಗುತ್ತಿರುವವರನ್ನು, ಸದೃಢ ಅರೋಗ್ಯ ಇಲ್ಲದವರನ್ನು, ತಮ್ಮ ಮತ ಕ್ಷೇತ್ರಗಳಿಗೆ ನ್ಯಾಯ ಒದಗಿಸದವರನ್ನು, ಕ್ರಮೇಣ ಚುನಾವಣಾ ಕಣದಿಂದ ಹಿಂದೆ ಸರಿಸಬೇಕು ಎನ್ನುವ ಒತ್ತಾಸೆ, ಕೋರಿಕೆ ದಶಕಗಳಿಂದ ಕೇಳಿ ಬರುತ್ತಿತ್ತು.

೨೦೧೪ ರಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮೋದಿ ಪ್ರವೇಶವಾದೊಡನೆ ಸಮೀಕರಣದ ಬದಲಾವಣೆ ಆರಂಭವಾಯಿತು. ಮೊದಲ ಹೆಜ್ಜೆಯಾಗಿ ವಯಸ್ಸಿನ ಹೆಸರಿನಲ್ಲಿ ಲಾಲ ಕೃಷ್ಣ ಅದ್ವಾನಿ, ಮುರಲಿ ಮನೋಹರ ಜೋಷಿ, ಜಸ್ವಂತ ಸಿಂಗ್ ಮತ್ತು ಅರುಣ ಶೌರಿಯವರನ್ನು ಹಿಂದಕ್ಕೆ ಸರಿಸಲಾಯಿತು.
ಅವರಿಗೆ ಮಾರ್ಗದರ್ಶಕರು ಎನ್ನುವ ಹೆಸರನ್ನು ನೀಡಲಾಗಿತ್ತು. ಈ ಪ್ರಕ್ರಿಯೆ ಕಾಲಘಟ್ಟದಲ್ಲಿ ಹೆಚ್ಚುತ್ತಾ ಹೋಗಿ ಗುಜರಾತ್, ಉತ್ತರ ಪ್ರದೇಶ ಚುನಾ ವಣಾ ಸಮಯದಲ್ಲಿ ಇದಕ್ಕೆ ದೃಢವಾದ ಮುಹೂರ್ತ ಇಡಲಾಯಿತು. ಈ ರಾಜ್ಯಗಳಲ್ಲಿ ಬದಲಾವಣೆ ತಂದಾಗ ಮಾಧ್ಯಮ ಗಳು ಬಹುತೇಕ ನಕಾರಾತ್ಮಕ ವಿಶ್ಲೇಷಣೆಯನ್ನು ಬರೆದಿದ್ದವು ಮತ್ತು ಸ್ನೇಹಿ ಮಾಧ್ಯಮಗಳು ಭಾಜಪವನ್ನು ಎಚ್ಚರಿಸುವ ಮಟ್ಟಕ್ಕೂ ಹೋಗಿದ್ದವು. ಇದು ಈಗ ಇತಿಹಾಸ.

ಈ ರಾಜ್ಯಗಳ ಯಶಸ್ಸಿನಿಂದ ಉತ್ತೇಜಿತ ಬಿಜೆಪಿ ಪಕ್ಷವು ಇದೀಗ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತಂದಿದೆ. ಸುಮಾರು ೭೨ ಹೊಸ ಮುಖಗಳಿಗೆ ಅವಕಾಶ ಕೊಟ್ಟಿದೆ. ಪಕ್ಷದಲ್ಲಿ ಸತತವಾಗಿ ಅಧಿಕಾರವನ್ನು ಅನುಭವಿಸುತಿದ್ದ ಕೆಲವು ಘಟಾನುಘಟಿ ನಾಯಕರನ್ನು ಪಕ್ಕಕ್ಕೆ ಸರಿಸಿದೆ. ಇದು ಪಕ್ಷದಲ್ಲಿನ ಹಲವರ ಜಂಘಾಬಲವನ್ನೇ ಅಲುಗಾಡಿಸಿದೆ. ಈ ನಿಟ್ಟಿನಲ್ಲಿ ಭಿನ್ನಮತ ಮತ್ತು ಬಂಡಾಯ ಕಂಡು ಬಂದರೂ, ಇಂಥವುಗಳು ಪಕ್ಷದಲ್ಲಿ ಸಾಮಾನ್ಯ. ಕೆಲವು ಮಹತ್ವದ ಹೆಜ್ಜೆಗಳನ್ನು ಇಟ್ಟಾಗ ಮುಂದಿನ ಭವಿಷ್ಯದ ದೃಷ್ಟಿಯಲ್ಲಿ ಇವುಗಳನ್ನು ಎದುರಿಸಲೇಬೇಕು ಎನ್ನುವ ನಿಲುವನ್ನು ತಳೆದಿದೆ. ಕಾಂಗ್ರೆಸ್ ಪಕ್ಷ ಕೂಡ ಈ ನಿಟ್ಟಿನಲ್ಲಿ ಒಂದು ಕಾಲು ಮುಂದೆ ಇರಿಸಿದೆ. ಅದು ಕೂಡ ಭಾಜಪದಂತೆ ಭಿನ್ನಮತ ಮತ್ತು ಬಂಡಾಯವನ್ನು ಎದುರಿಸುತ್ತಿದೆ.

ಸದ್ಯ ಈ ರಾಷ್ಟ್ರೀಯ ಪಕ್ಷಗಳು ತೆಗೆದುಕೊಂಡ ಕ್ರಮಗಳ ಮತ್ತು ಇಟ್ಟ ಹೆಜ್ಜೆಯ ಅಂತ್ಯ ಹೇಗೆ ಆಗುತ್ತೋ ತಿಳಿಯದು. ಆದರೆ, ಭಾರತದ ರಾಜಕಾರಣದಲ್ಲಿ ನಿವೃತ್ತಿ ಪರ್ವ ಆರಂಭವಾದಂತೆ ಕಾಣುತ್ತಿದೆ. ಇದು ಹಲವಾರು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿರುವುದಂತೂ ಸತ್ಯ.