ವಿಶ್ಲೇಷಣೆ
ರಮಾನಂದ ಶರ್ಮ
ರಾಜಕೀಯ ಪಕ್ಷಗಳಲ್ಲಿ ಭಿನ್ನಮತವೆಂಬುದು ಹೊಸ ಬೆಳವಣಿಗೆಯೇನಲ್ಲ. ಪಕ್ಷಗಳ ಹುಟ್ಟಿನ ಜತೆಜತೆಗೇ ಸುಪ್ತವಾಗಿ ಬೆಳೆಯುವ ಭಿನ್ನಮತವು ಕೆಲವೊಮ್ಮೆ ಆರಂಭದಲ್ಲೇ ಗೋಚರಿಸಿದರೆ, ಮತ್ತೆ ಕೆಲವು ಪಕ್ಷಗಳಲ್ಲಿ ವಿಭಿನ್ನ ಕಾಲಘಟ್ಟಗಳಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಭಿನ್ನಮತವೆಂಬುದು ಪಕ್ಷವು ಅಧಿಕಾರದ ಗದ್ದುಗೆ ಹಿಡಿಯುವುದಕ್ಕೂ, ಇದ್ದ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೂ ಅಡಚಣೆಯಾಗಿ ಪರಿಣಮಿಸುವುದರೊಂದಿಗೆ, ಅಂತಿಮವಾಗಿ ಪಕ್ಷವನ್ನೇ ಬಲಿ ತೆಗೆದು
ಕೊಂಡ ಉದಾಹರಣೆಗಳೂ ಇವೆ.
೮೦ರ ದಶಕದವರೆಗೂ ಈ ಭಿನ್ನಮತಗಳು ಸೈದ್ಧಾಂತಿಕ ತಳಹದಿಯ ಮೇಲೆ ಹೊಮ್ಮುತ್ತಿದ್ದವು. ತರುವಾಯದ ಕಾಲಘಟ್ಟದಲ್ಲಿ ಅಧಿಕಾರ ದಾಹ/ಕುರ್ಚಿ ವ್ಯಾಮೋಹವೇ ಭಿನ್ನಮತದ ಮೂಲಸೆಲೆಯಾಗಿರುವಂತೆ ತೋರುತ್ತಿದೆ. ತತ್ತ್ವ ಮತ್ತು ಆದರ್ಶಗಳು ಈ ಕುರ್ಚಿದಾಹಕ್ಕೆ ‘ಕವರ್‌ನೋಟ್’ಗಳು, ಅಷ್ಟೇ! ಮೋದಿ ಅಲೆಯಲ್ಲಿ ಬಿಜೆಪಿ ಅಂದುಕೊಂಡಿದ್ದಂತೆ ಕರ್ನಾಟಕವು ಕಾಂಗ್ರೆಸ್-ಮುಕ್ತ ರಾಜ್ಯವಾಗಬಹುದು ಎಂಬ ಗ್ರಹಿಕೆಯಿತ್ತು; ಆದರೆ ಇಂಥ ಎಲ್ಲ ಗ್ರಹಿಕೆ ಅಥವಾ ನಿರೀಕ್ಷೆಗಳನ್ನು ಸುಳ್ಳುಮಾಡಿ, ಆಡಳಿತ-ವಿರೋಧಿ ಅಲೆಯಿಂದಲೋ, ಪಂಚ ‘ಗ್ಯಾರಂಟಿ’ ಬಲದಿಂದಲೋ ಸಿದ್ದು ಮತ್ತು ಡಿಕೆಶಿ ಎಂಬ ಜೋಡೆತ್ತುಗಳು ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆಯ ಮೇಲೆ ಕೂರಿಸಿದ್ದು ಈಗ ಇತಿಹಾಸ. ಈ ಸರಕಾರ ಇತ್ತೀಚೆಗಷ್ಟೇ ನೂರು ದಿನಗಳನ್ನು ಪೂರೈಸಿದೆ.
ಒಂದೊಮ್ಮೆ ಬಿಜೆಪಿ ಸರಕಾರವಿದ್ದು ಹೀಗೆಯೇ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಿದ್ದರೆ, ‘ಜನ’ ಶಬ್ದವನ್ನು ಪ್ರಿಫಿಕ್ಸ್ ಮಾಡಿ ಹೊಸ ಘೋಷಣೆಯೊಂದಿಗೆ ರಾಜ್ಯಾದ್ಯಂತ ತಮ್ಮ ಸಾಧನೆಯನ್ನು ವಿವರಿಸಲು ಬಿಜೆಪಿಗರು ಸಭೆ-ಸಂಭ್ರಮ, ರೋಡ್‌ಶೋಗಳನ್ನು ಆಯೋಜಿಸುತ್ತಿದ್ದರೇನೋ? ಆದರೆ ಕಾಂಗ್ರೆಸ್ ಸರಕಾರ ಇದನ್ನು ‘ನಾಮ್-ಕೆ-ವಾಸ್ತೆ’ ರೀತಿಯಲ್ಲಿ ಮಾಡಿದ್ದು ಒಂದು ವಿಶೇಷ. ಪತ್ರಿಕೆಗಳಲ್ಲಿ ಈ ನಿಟ್ಟಿನಲ್ಲಿ ಸರಕಾರದ ಜಾಹೀರಾತನ್ನು ನೋಡಿದಾಗಲಷ್ಟೇ ಕಾಂಗ್ರೆಸ್ ಅಧಿಕಾರದಲ್ಲಿ ೧೦೦ ದಿನ ಕಳೆದದ್ದು ಬಹುಜನರಿಗೆ ಗೊತ್ತಾಗಿದ್ದು!
ಅದು ಬೇರೆ ವಿಷಯ. ಯಾವುದಾದರೂ ವ್ಯವಸ್ಥೆ ಸುಗಮವಾಗಿ ನಡೆಯುತ್ತದೆ ಮತ್ತು ಜನರು ಅದನ್ನು ಶ್ಲಾಘಿಸುತ್ತಿದ್ದಾರೆ ಎನ್ನುವ ಭಾವನೆ ಹುಟ್ಟಿದರೆ ಹಾಗೂ ಈ ವ್ಯವಸ್ಥೆ ಬಹುದಿನ ಮುಂದುವರಿಯಬಹುದು ಎಂದು ಅನಿಸಿದರೆ, ಅದನ್ನು ತಡೆಯಲು ಹಲವಾರು ಶಕ್ತಿಗಳು ಯತ್ನಿಸುತ್ತವೆ. ಕೆಲವರು ಇದನ್ನು ನೇರವಾಗಿ ಮಾಡಿದರೆ, ಮತ್ತೆ ಕೆಲವರು ಅದನ್ನು ಪರೋಕ್ಷವಾಗಿ ಬೆಂಬಲಿಸುತ್ತಾರೆ. ಸರಕಾರದ ಕಾರ್ಯ ವೈಖರಿಯಲ್ಲಿ ಎದ್ದು ಕಾಣುವ ನ್ಯೂನತೆಯಿದ್ದರೆ ಆ ಮಾತು ಬೇರೆ. ಆದರೆ ಅಧಿಕಾರದ ಕೇಕ್‌ನಲ್ಲಿ ತಮಗೆ ಪಾಲು ಸಿಗಲಿಲ್ಲವೆಂದು, ತಾವು ಕಷ್ಟಪಟ್ಟು ರೂಪಿಸಿದ ಸರಕಾರದ ವಿರುದ್ಧವೇ ಬಹಿರಂಗವಾಗಿ ಮಾತನಾಡಿದರೆ ಬೇಸರ ಬರುತ್ತದೆ. ಈಗ ನಡೆಯುತ್ತಿರುವುದು ಅದೇ!
ಬಿ.ಕೆ. ಹರಿಪ್ರಸಾದರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ಸುಮಾರು ೨ ದಶಕಗಳ ಕಾಲ ರಾಜ್ಯಸಭಾ ಸದಸ್ಯರಾಗಿದ್ದವರು. ಕಾಂಗ್ರೆಸ್ ಪಕ್ಷದ ಉನ್ನತ
ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿ ಪಕ್ಷದ ದೆಹಲಿ ದೊರೆಗಳಿಗೆ ತುಂಬಾ ಹತ್ತಿರವಾದವರು. ಈಗವರು ರಾಜ್ಯ ವಿಧಾನ ಪರಿಷತ್ ಸದಸ್ಯರು. ನ್ಯಾಯಬದ್ಧವಾಗಿ ಅವರಿಗೆ ಸಿದ್ದು ಸಂಪುಟದಲ್ಲಿ ಸ್ಥಾನ ಸಿಗಬೇಕಾಗಿತ್ತು. ಅಂತೆಯೇ ಅವರು ಅದನ್ನು ಕೇಳಿರುವುದರಲ್ಲಿ ತಪ್ಪೇನಿಲ್ಲ. ಯಾವುದೋ ಕಾರಣಕ್ಕೆ ಅವರಿಗದು ದೊರಕಲಿಲ್ಲ. ಅಂತೆಯೇ ಅವರಿಗೆ ನಿರಾಶೆಯಾಗಿದೆ. ತಮ್ಮ ಹಿರಿತನವನ್ನು, ಪಕ್ಷಕ್ಕೆ ತಾವು ಮಾಡಿದ ಸೇವೆಯನ್ನು ಪರಿಗಣಿಸಲಿಲ್ಲ ಎಂಬ ನೋವಾಗಿದೆ.
ಇದು ಸಹಜ. ಆದರೆ ಅದನ್ನವರು ವ್ಯಕ್ತಪಡಿಸಿದ ರೀತಿ ಮತ್ತು ಅದಕ್ಕೆ ಆರಿಸಿಕೊಂಡ ವೇದಿಕೆ ಪಕ್ಷಕ್ಕೆ ಇರಿಸುಮುರಿಸು ಉಂಟುಮಾಡಿದೆ. ಇದನ್ನವರು ಪಕ್ಷದ ವರಿಷ್ಠರ ಬಳಿ ಪ್ರಸ್ತಾಪಿಸದೆ ಬಹಿರಂಗವಾಗಿ ಹೇಳಿಕೊಂಡಿದ್ದು, ಆಗ ಅವರು ಬಳಸಿದ ಶಬ್ದಗಳು, ಸಿದ್ದರಾಮಯ್ಯನವರನ್ನು ತೀರಾ ವೈಯಕ್ತಿಕವಾಗಿ ಟೀಕಿಸಿದ್ದು ಇತ್ಯಾದಿಯನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗುತ್ತಿದೆ. ಪಕ್ಷದ ಹಿರಿಯ ಸದಸ್ಯರಾಗಿ ಈ ನಿಟ್ಟಿನಲ್ಲಿ ಇನ್ನೊಮ್ಮೆ ಯೋಚಿಸಬೇಕಿತ್ತು ಎಂಬುದು ಪ್ರಾಯಶಃ ಹೈಕಮಾಂಡ್‌ನ ಇಚ್ಛೆಯಾಗಿತ್ತೇನೋ? ಸಿದ್ದರಾಮಯ್ಯರ ಹೆಸರು ಹೇಳದೆಯೇ, ‘ಪಂಚೆ, ಖಾಕಿಚಡ್ಡಿ, ಹ್ಯೂಬ್ಲಾಟ್
ವಾಚ್ ಧರಿಸಿ, ದೇವರಾಜ ಅರಸರ ಕಾರಿನಲ್ಲಿ ಕುಳಿತು ಬಿಟ್ಟರೆ ದೇವರಾಜ ಅರಸು ಆಗುವುದಿಲ್ಲ, ಸಮಾಜವಾದಿ ಎನಿಸಿಕೊಳ್ಳುವುದಿಲ್ಲ’ ಮುಂತಾಗಿ ಹರಿಪ್ರಸಾದ್ ಟೀಕಿಸಿದ್ದು ಹಲವು ಕಾಂಗ್ರೆಸಿಗರಿಗೆ ಇಷ್ಟವಾಗಲಿಲ್ಲ.
ಅಷ್ಟೇಕೆ, ಕೆಲ ತಿಂಗಳ ಹಿಂದೆ, ‘ನಮಗೆ ಮುಖ್ಯಮಂತ್ರಿಯನ್ನು ಮಾಡೋದೂ ಗೊತ್ತು, ಇಳಿಸೋದೂ ಗೊತ್ತು’ ಎಂದು ಸಿದ್ದುವನ್ನು ಪರೋಕ್ಷವಾಗಿ ಎಚ್ಚರಿಸಿದ್ದರು, ತಮ್ಮ ರಾಜಕೀಯ ಶಕ್ತಿಯ ಬಗ್ಗೆ ಹೇಳಿಕೊಂಡಿದ್ದರು. ಈ ಹೇಳಿಕೆ ಗಳು ನಿರೀಕ್ಷಿಸಿದಷ್ಟು ಸಂಚಲನೆ ಮೂಡಿಸದ ಕಾರಣ ಇನ್ನೊಮ್ಮೆ ಹೀಗೆ ಬಾಂಬ್ ಸಿಡಿಸಿದ್ದಾರೆ ಎನ್ನುತ್ತವೆ ರಾಜಕೀಯ ಪಡಸಾಲೆಗಳು. ಕಾಂಗ್ರೆಸ್‌ನಲ್ಲಿ ದೀರ್ಘಕಾಲದಿಂದ ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿರುವ ಹರಿಪ್ರಸಾದರಿಗೆ
ಸೋನಿಯಾ-ರಾಹುಲ್ ಕುಟುಂಬದವರೊಂದಿಗೆ ಆತ್ಮೀಯತೆಯಿದೆ. ಅಂತೆಯೇ ಅವರು ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳಿಗೆ ಸುಲಭವಾಗಿ ಆಯ್ಕೆಯಾಗುತ್ತಾರೆ ಎಂದು ಕೆಲವರು ಒಳಗೊಳಗೇ ಆಡಿಕೊಳ್ಳುತ್ತಾರೆ. ದಶಕ ಗಳಿಂದ ರಾಜಕೀಯದಲ್ಲಿದ್ದರೂ ಹರಿಪ್ರಸಾದರು ಇನ್ನೂ ನೇರ ಚುನಾವಣೆಯಲ್ಲಿ ಸಂಸತ್ ಅಥವಾ ವಿಧಾನಸಭೆ ಪ್ರವೇಶಿಸಿಲ್ಲ ಎಂದು ಬೆರಳುಮಾಡಿ ಹೇಳುವವರೂ ಇದ್ದಾರೆ.
ಅವರಿಗೆ ರಾಜಕೀಯ ಸಂಚಲನ ಸೃಷ್ಟಿಸಿ ವಿಪ್ಲವ ಮಾಡುವಷ್ಟು ದೊಡ್ಡ ಪ್ರಮಾಣದ ಅನುಯಾಯಿಗಳು ಪಕ್ಷದಲ್ಲಿದ್ದಾರೆ ಎನ್ನಲಾಗದು; ಆದರೆ ಅವರ ‘ಚಾಲ್
’ಗಳಿಂದ ಪಕ್ಷಕ್ಕೆ ತಕ್ಕಮಟ್ಟಿಗೆ ಘಾಸಿಯಾಗುವುದಂತೂ ದಿಟ. ಪಕ್ಷ ಅವರಿಗೀಗ ಕಾರಣ ಕೇಳಿ ನೋಟಿಸ್ ನೀಡಿದ್ದು, ಮುಂದಿನ ದಿನಗಳಲ್ಲಿ ಇದಕ್ಕವರು ಬೆಲೆ ತೆರುತ್ತಾರೋ ಅಥವಾ ಬೆಲೆ ಹೆಚ್ಚಿಸಿಕೊಳ್ಳುತ್ತಾರೋ ಎಂಬುದನ್ನು ಕಾತುರ ದಿಂದ ಎದುರುನೋಡುವಂತಾಗಿದೆ. ಆದರೆ ತಮ್ಮೀ ಹೇಳಿಕೆ ಯಿಂದಾಗಿ ಮುಂದಿನ
ದಿನಗಳಲ್ಲಿ ಅವರು ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎನ್ನ ಬಹುದು. ಅವರಿಗೆ ನೀಡಲಾಗಿರುವ ನೋಟಿಸ್, ರಾಹುಲ್
-ಸೋನಿಯಾರ ಗಮನಕ್ಕೆ ಬಂದಿರಲೇಬೇಕು; ಅದಕ್ಕವರು ಹಸಿರು ನಿಶಾನೆ ತೋರಿದ ನಂತರವೇ ಇಂಥ ಕ್ರಮ ತೆಗೆದುಕೊಂಡಿರಬಹುದು.
ಹೀಗಿರುವಾಗ ಅವರಿ ಬ್ಬರೂ ಹರಿಪ್ರಸಾದರನ್ನು ಹಿಂದಿನಂತೆ ನಡೆಸಿಕೊಳ್ಳ ಬಹುದೇ? ತಮ್ಮ ಹೇಳಿಕೆಯನ್ನು ಅವರು ಎಷ್ಟೇ ಬಲವಾಗಿ ಸಮರ್ಥಿಸಿಕೊಂಡರೂ,
ಬದಲಾದ ರಾಜಕೀಯ ಪರಿಸ್ಥಿತಿ ಯಲ್ಲಿ ಹೈಕಮಾಂಡ್ ಅವರನ್ನು ಮನ್ನಿಸಬಹುದೇ? ಒಂದೊಮ್ಮೆ ಮನ್ನಿಸಿ, ಸಿದ್ದು ಮತ್ತು ಹರಿಪ್ರಸಾದ್ ಪರಸ್ಪರ ಕೈಕುಲುಕುವಂತಾದರೂ ಹಿಂದಿನ ಸಂಬಂಧ ಉಳಿಯು ವುದೇ? ಅವರನ್ನು ಸಿದ್ದು ಕ್ಯಾಬಿನೆಟ್‌ನಲ್ಲಿ ಕಾಣಬಹುದೇ? ಇಂಥ ಹಲವು ಪ್ರಶ್ನೆಗಳೀಗ ಹುಟ್ಟಿಕೊಂಡಿವೆ. ‘ಕಾದು ನೋಡು’ ಎಂಬುದಕ್ಕೆ ರಾಜಕೀಯದಲ್ಲಿ ವಿಶೇಷ ಮಹತ್ವವಿದೆ.
ಅನುಭವಿ ಹರಿಪ್ರಸಾದರು ಹೀಗೆ ದುಡುಕಿ ಮಾತಾಡುವುದಕ್ಕೂ ಮೊದಲು, ಹೀಗೆ ಎಡವೋದಕ್ಕೂ ಮೊದಲು, ಈ ತಂತ್ರವನ್ನು ಬಳಸಿ ಹೈಕಮಾಂಡ್ ಬಳಿ ನೇರವಾಗಿ ನ್ಯಾಯ ಕೇಳಬಹುದಿತ್ತು ಎಂಬ ಅಭಿಪ್ರಾಯವೂ ಇದೆ. ಆದರೆ ಹರಿಪ್ರಸಾದರು ಅವಸರದ ಹೆಜ್ಜೆಯಿಟ್ಟು ಪಕ್ಷದಲ್ಲಿನ ತಮ್ಮ ಭವಿಷ್ಯವನ್ನು ಸ್ವತಃ ಅಲುಗಾಡಿಸಿಕೊಂಡರಾ ಎನಿಸುತ್ತದೆ. ಇನ್ನು ಏನೇ ‘ತೇಪೆಗಾರಿಕೆ’ ಮಾಡಿದರೂ ಹಿಂದಿನ ದೃಢತೆ ಉಳಿಯುವುದಿಲ್ಲ, ಅವರ ಪ್ರತಿ ನಡೆಯನ್ನೂ ಸಂಶಯದಿಂದಲೇ ನೋಡಲಾಗುತ್ತದೆ ಮತ್ತು ‘ವಾಚ್ ಲಿಸ್ಟ್’ನಲ್ಲಿ ಇಡಲಾಗುತ್ತದೆ.
ಬಹುತೇಕರಿಗೆ ತಿಳಿದಿರುವಂತೆ ಮಂತ್ರಿಗಳ ಆಯ್ಕೆ, ಖಾತೆಗಳ ಹಂಚಿಕೆಯು ಮುಖ್ಯಮಂತ್ರಿಗಳ ಪರಮಾಧಿಕಾರ ಮತ್ತು ಅವರ ವಿವೇಚನೆಗೆ ಬಿಟ್ಟ ವಿಷಯ. ಆದರೆ
ರಾಷ್ಟ್ರೀಯ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಇದು ಅಲಿಖಿತವಾಗಿ, ಆದರೆ ಕಡ್ಡಾಯವಾಗಿ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯ. ಪಕ್ಷದಲ್ಲಿ, ‘ಹೈಕಮಾಂಡ್ ಸೂಚಿಸಿದ ವ್ಯಕ್ತಿಯನ್ನು ಮಂತ್ರಿಯಾಗಿ ನೇಮಿಸಿಕೊಳ್ಳಲಾ ಗುವುದು’ ಎಂಬ ನಿರ್ಣಯ ತೆಗೆದುಕೊಳ್ಳುವುದನ್ನು ನಾನಿ ಪಾಲ್ಕಿವಾಲಾ ಅವರು ‘ರೋಸಸ್ ಇನ್ ಡಿಸೆಂಬರ್’ ಎಂಬ ತಮ್ಮ ಪುಸ್ತಕದಲ್ಲಿ, ಇಂದಿರಾ ಗಾಂಧಿಯವರ ಕಾಲದಲ್ಲಿ ಪ್ರಚಲಿತದಲ್ಲಿದ್ದ ಪಕ್ಷದ ಈ ಚಾಳಿಯನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದರು. ಈ ಸತ್ಯವು, ಪಕ್ಷದ ಉನ್ನತ ಮಟ್ಟ ದಲ್ಲಿ ಉನ್ನತ ನಾಯಕರೊಂದಿಗೆ ಕೆಲಸ ಮಾಡಿರುವ ಹರಿಪ್ರಸಾದರಿಗೆ ಸಿದ್ದರಾಮಯ್ಯರಿಗಿಂತ ಹೆಚ್ಚಾಗಿ ತಿಳಿದಿರ
ಬೇಕು. ಈ ವಾಸ್ತವವನ್ನು ತಿಳಿದೂ ಅವರು ತಮಗೆ ಮಂತ್ರಿ ಗಿರಿ ಸಿಗದಿರುವುದಕ್ಕೆ ಸಿದ್ದರಾಮಯ್ಯನವರನ್ನು ದ್ವೇಷಿಸು ವುದು ಅರ್ಥವಾಗದ ಸಂಗತಿ.
‘ಮುಖ್ಯಮಂತ್ರಿಗಳು ಹೈಕಮಾಂಡ್‌ನ ಸ್ರೂದ ಗೊಂಬೆಗಳು, ಹೈಕಮಾಂಡ್ ತಾಳಕ್ಕೆ ಹೆಚ್ಚೆಹಾಕುವುದಷ್ಟೇ ಅವರ ಕೆಲಸ’ ಎನ್ನುವ ಜೋಕ್‌ನಲ್ಲಿ ಅರ್ಥವಿಲ್ಲದಿಲ್ಲ.
ಹರಿಪ್ರಸಾದರು ಭಿನ್ನಮತದ ಬಾವುಟ ಹಾರಿಸಿ ತಿಂಗಳಾಗಿದ್ದರೂ, ಸಚಿವರಾದ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಹೊರತುಪಡಿಸಿ ಸದ್ಯದ ಮಟ್ಟಿಗೆ ಯಾವ ಪ್ರಮುಖ ನಾಯಕರೂ ಅವರನ್ನು ಭೇಟಿಮಾಡಿ ಸಂಧಾನ ಅಥವಾ ಸಮಾಧಾನಕ್ಕೆ ಯತ್ನಿಸಿ ದಂತೆ ಕಂಡಿಲ್ಲ. ಹಾಗಾದರೆ ಹರಿಪ್ರಸಾದರು ಏಕಾಂಗಿ
ಯಾಗಿ ಹೋರಾಟ ನಡೆಸುತ್ತಿರಬಹುದೇ? ಆ ಸಾಮರ್ಥ್ಯ ಅವರಲ್ಲಿದೆಯೇ? ರಾಜಕೀಯದಲ್ಲಿ ತೆಗೆದುಕೊಳ್ಳುವ ನಿಲುವು, ಕೆಸರುಗದ್ದೆ ಯಲ್ಲಿನ ಗೂಟದಂತಿದ್ದು ಸದಾ ಅಲ್ಲಾಡುತ್ತಿರುತ್ತದೆ.
ಅದು ಯಾವ ಕಡೆಗೂ ವಾಲಬಹುದು. ರಾಜಕೀಯದ ಇನ್ನೊಂದು ಹೆಸರೇ ಅನಿಶ್ಚಿತತೆ ಅಥವಾ ದಿಢೀರ್ ಅಚ್ಚರಿ. ಅಸಾಧ್ಯವೆಂದಿದ್ದು ದಿನಬೆಳಗಾಗುವುದರೊಳಗೆ ಸಾಧ್ಯ ವಾಗುವ ಕ್ಷೇತ್ರವಿದು. ಮಹಾರಾಷ್ಟ್ರದಲ್ಲಿ ಗಟ್ಟಿಯಾಗಿ ತಳವೂರಿದ್ದ ಉದ್ಧವ್ ಠಾಕ್ರೆಯನ್ನು ಉರುಳಿಸಿ, ಎಲ್ಲೋ ಇದ್ದ ಏಕನಾಥ್ ಶಿಂದೆ ಗದ್ದುಗೆಯೇರಿದ್ದು ಇದಕ್ಕೆ ಸಾಕ್ಷಿ. ಸದ್ಯದ ಈ ಭಿನ್ನಮತರ ಸರಕಾರಕ್ಕೆ ಅಪಾಯಕಾರಿ ಯಾಗದು; ಆದರೆ ಸರಕಾರ ೧೦೦ ದಿನ ಪೂರೈಸುವಷ್ಟರಲ್ಲಿ ಅದು ತಲೆದೋರಿದ್ದು ಒಳ್ಳೆಯ ಬೆಳವಣಿಗೆಯಲ್ಲ!
(ಲೇಖಕರು ಬ್ಯಾಂಕಿಂಗ್ ಕ್ಷೇತ್ರದ ಪರಿಣತರು)