Sunday, 13th October 2024

ಕ್ರಮಬದ್ಧ ಪೂಜೆ

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ

ಒಂದು ಸಣ್ಣ ಗ್ರಾಮದಲ್ಲಿದ್ದ ಹತ್ತಾರು ಕುಟುಂಬಗಳು ಪ್ರತಿದಿನ ಅಗ್ನಿಕಾರ್ಯ, ಪೂಜೆ ಮಾಡುತ್ತಿದ್ದರು. ಒಂದು ಮುಂಜಾನೆ ಅಗ್ನಿಕುಂಡವನ್ನು ಶುಚಿಗೊಳಿಸುವಾಗ, ಶರ್ಮ ಎಂಬವರಿಗೆ ಒಂದು ಚಿನ್ನದ ಚೂರು ಸಿಕ್ಕಿತು. ಅವರು ಮನೆಯ ಒಳಭಾಗ ಮತ್ತು ಯಜ್ಞಕುಂಡದ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದರು.

ಪ್ರತಿದಿನ ಅವರ ಮಡದಿಯು ಅಂಗಳವನ್ನು ಮತ್ತು ಅಗ್ನಿಕುಂಡವನ್ನು ಶುಚಿಮಾಡುತ್ತಿದ್ದಳು. ಸಗಣಿಯಿಂದ ಅಂಗಳವನ್ನು ಶುಚಿಮಾಡುವ ಭರದಲ್ಲಿ, ಆಕಸ್ಮಿಕವಾಗಿ ಒಂದು ಮುದ್ದೆ ಹಸಿ ಸಗಣಿಯನ್ನು ಆಕೆ ಅಗ್ನಿಕುಂಡದಲ್ಲಿ ಬೀಳಿಸಿದ್ದಳು. ಇದನ್ನು ಊಹಿಸಿದ ಶರ್ಮರು ತನ್ನ ಹೆಂಡತಿಯನ್ನು ಕೇಳಿದರು : ‘ಯಜ್ಞಕುಂಡಕ್ಕೆ ಹಸಿ ಸಗಣಿ ಮುದ್ದೆಯನ್ನು ಹಾಕಿದ್ದೆಯಾ?’ ಹೆಂಡತಿಯು ಗಾಬರಿಯಿಂದ, ‘ಆಕಸ್ಮಿಕವಾಗಿ ನಿನ್ನೆ ಒಂದು ಮುದ್ದೆ ಹಸಿ ಸಗಣಿ ಯಜ್ಞಕುಂಡಕ್ಕೆ ಬಿತ್ತು’ ಎಂದಳು. ಗಂಡನ ಕೈಯಲ್ಲಿದ್ದ ಚಿನ್ನದ ಚೂರನ್ನು ಗಮನಿಸಿ, ಆ ಹಸಿ ಸಗಣಿಮುದ್ದೆಯೇ ಅಗ್ನಿಕಾರ್ಯದ ಸಮಯದಲ್ಲಿ ಚಿನ್ನದ ಚೂರಾಗಿ ಪರಿವರ್ತನೆ ಗೊಂಡಿದೆ ಎಂದು ಆಕೆಗೆ ಹೊಳೆಯಿತು. ಆದರೆ ಶರ್ಮರು ‘ಅದು ಸರಿ ಅಲ್ಲ, ಯಜ್ಞಕುಂಡಕ್ಕೆ ಹಸಿ ಸಗಣಿ ಹಾಕಬಾರದು, ಅದು ಶಾಸ್ತ್ರಕ್ಕೆ ವಿರೋಧ. ಆದ್ದರಿಂದ ಆ ಚಿನ್ನವನ್ನು ನಾವು ಬಳಸುವಂತಿಲ್ಲ’ ಎಂದರು.

ಮರುದಿನ ಯಜ್ಞಕುಂಡದಲ್ಲಿ ಮತ್ತೊಂದು ಚಿನ್ನದ ಚೂರು ಸಿಕ್ಕಿತು. ‘ನೀನು ಹಸಿ ಸಗಣಿಯನ್ನು ಯಜ್ಞಕುಂಡಕ್ಕೆ ಹಾಕಬೇಡ, ಅದು ಸರಿ ತಪ್ಪು’ ಎಂದರು ಆಕೆಯ ಪತಿ. ಆದರೆ, ಅವರ ಹೆಂಡತಿ ಕಿವಿಗೆ ಹಾಕಿಕೊಳ್ಳದೇ, ಪ್ರತಿ ದಿನ ಒಂದು ಮುದ್ದೆ ಸಗಣಿಯನ್ನು ಯಜ್ಞಕುಂಡಕ್ಕೆ ಹಾಕತೊಡಗಿದಳು. ಪ್ರತಿದಿನ ಚಿನ್ನದ ಚೂರು ಗಳನ್ನು ಸಂಗ್ರಹಿಸಿ, ಅದನ್ನು ಮಾರಿ ಮನೆಯ ಛಾವಣಿಯನ್ನು ರಿಪೇರಿ ಮಾಡಿಸಿದಳು, ಮನೆಗೆ ಸುಣ್ಣ ಬಣ್ಣ ಬಳಿದು ಜಗಮಗಿಸುವಂತೆ ಮಾಡಿಸಿದಳು. ಒಂದೆರಡು ಒಡವೆಗಳನ್ನೂ ಮಾಡಿಸಿಕೊಂಡಳು.

ಪಕ್ಕದ ಮನೆಯಲ್ಲಿದ್ದಾಕೆ ಈಕೆಯನ್ನು ಕೇಳಿದಳು ‘ಏನಮ್ಮಾ, ನಿನ್ನ ಅದೃಷ್ಟ ತಿರುಗಿಬಿಟ್ಟಿದೆ, ನಿಮ್ಮ ಯಜಮಾನರು ಸಂಪಾದನೆ ಮಾಡಿ, ನಿನಗೆ ಎಷ್ಟೊಂದು ಒಡವೆ ಮಾಡಿಸಿಕೊಟ್ಟಿದ್ದಾರೆ!’ ‘ಅಯ್ಯೋ, ಅವರೇನು ಮಾಡಿಲ್ಲರೀ, ಈ ಸಂಪತ್ತು ಬರಲು ನನ್ನ ಉಪಾಯವೇ ಕಾರಣ! ಒಂದು ಮುದ್ದೆ ಹಸಿ ಸಗಣಿಯನ್ನು
ಯಜ್ಞ ಕುಂಡಕ್ಕೆ ಹಾಕಿದರೆ ಸರಿ, ಮರುದಿನ ಒಂದು ಚೂರು ಚಿನ್ನ ಸಿಗುತ್ತದೆ’ ಎಂದಳು ಶರ್ಮರ ಹೆಂಡತಿ.

ಈ ಸುದ್ದಿ ಎಲ್ಲೆಡೆ ಹರಡಿತು. ಎಲ್ಲಾ ಹೆಂಗಸರೂ ಹಸಿ ಸಗಣಿಯನ್ನು ಯಜ್ಞಕುಂಡಕ್ಕೆ ಹಾಕಿ ಚಿನ್ನದ ಚೂರನ್ನು ಪಡೆಯತೊಡಗಿದರು. ಗಂಡಂದಿರಿಗೆ ಈ ವಿಚಾರ ಗೊತ್ತಾದರೂ, ತಡೆಯಲು ಸಾಧ್ಯ ವಾಗಲಿಲ್ಲ. ಹೆಂಗಸರಿಗೆ ಸುಲಭ ಸಂಪತ್ತಿನ ಗೀಳು ಹತ್ತಿತ್ತು. ಒಂದೆರಡು ತಿಂಗಳುಗಳಲ್ಲಿ ಆ ಊರಿನ ಎಲ್ಲರೂ ಚಿನ್ನದ ಒಡವೆ
ಗಳನ್ನು ಧರಿಸಿ, ಅತ್ತಿತ್ತ ಓಡಾಡುತ್ತಾ ಪ್ರದರ್ಶನ ಮಾಡತೊಡಗಿದರು. ಆ ಊರಿನಲ್ಲಿದ್ದ ವ್ಯಾಸಶರ್ಮ ಎಂಬವರು ಮಾತ್ರ ಬಡವರಾಗಿಯೇ ಉಳಿದಿದ್ದರು. ಅವರ ಹೆಂಡತಿಯು ಚಿನ್ನದ ಚೂರನ್ನು ಪಡೆಯುವ ಉಪಾಯವನ್ನು ಹೇಳಿದರೂ, ಅವರು ಒಪ್ಪಲಿಲ್ಲ.

‘ಆ ರೀತಿ ಹಸಿ ಸಗಣಿಯನ್ನು ಯಜ್ಞಕುಂಡಕ್ಕೆ ಹಾಕುವುದು ತಪ್ಪು’ ಎಂದು ಕಟ್ಟು ನಿಟ್ಟಾಗಿ ಹೇಳಿದರು. ಆದರೆ ಅವರ ಹೆಂಡತಿಯು ಬಡತನಕ್ಕೆ ರೋಸಿಹೋಗಿ, ‘ನಾವು ಈ ಊರನ್ನೇ ಬಿಟ್ಟು ಹೋಗಬೇಕು. ಎಲ್ಲರೂ ಶ್ರೀಮಂತರಾಗಿದ್ದಾರೆ, ಅವರೆಲ್ಲಾ ಪ್ರತಿದಿನ ಚಿನ್ನದ ಒಡವೆ ಧರಿಸಿ ಓಡಾಡುತ್ತಿರುತ್ತಾರೆ. ನನಗೆ ಅವಮಾನ ಆಗುತ್ತಿದೆ’ ಎಂದಳು. ವ್ಯಾಸಶರ್ಮರು ದೀರ್ಘವಾಗಿ ಯೋಚಿಸಿ, ‘ಈ ರೀತಿ ಸಂಪತ್ತು ಶೇಖರಣೆಯು ಅಪಾಯದ ಮುನ್ಸೂಚನೆ. ನಾವು ಬಡವರಾಗಿದ್ದರೂ
ಸರಿ, ತಪ್ಪು ಹಾದಿಯನ್ನುತುಳಿಯುವುದು ಬೇಡ’ ಎಂದು ನಿರ್ಧರಿಸಿ, ಅವರಿಬ್ಬರೂ ಆ ಊರನ್ನು ಬಿಟ್ಟು ವಾರಣಾಸಿಯ ಕಡೆ ಹೊರಟರು.

ಮನೆ ಬಿಟ್ಟು ಕೇವಲ ಅರ್ಧ ಗಾವುದ ಹೋಗಿದ್ದರಷ್ಟೇ, ಹಳ್ಳಿಯ ಎಲ್ಲಾ ಮನೆಗಳಲ್ಲಿ ಬೆಂಕಿ ಕಾಣಿಸಿತು. ಊರಿನ ಹೆಂಗಸರು ತಮ್ಮಲ್ಲೇ ಜಗಳಾಡಿ, ಪರಸ್ಪರ ತಮ್ಮ ಮನೆಗಳಿಗೆ ಬೆಂಕಿ ಹಚ್ಚಿಕೊಂಡು, ಹೊಡೆದಾಡುತ್ತಿದ್ದರು. ‘ಕಷ್ಟಪಡದೇ ಸಿರಿತನ ಬಂದರೆ ಇದೇ ಆಗುವುದು. ಪಾಪದ ಸಂಪತ್ತು ಮನುಷ್ಯನನ್ನೇ ನಾಶಮಾಡುತ್ತದೆ ಎಂದಿದ್ದಾರೆ ಹಿರಿಯರು. ನಾವು ಕ್ರಮಬದ್ಧವಾದ ಪೂಜೆಯನ್ನು ಅನುಸರಿಸಿದ್ದರಿಂದ, ಆ ಊರು ಇಷ್ಟು ದಿನ ಉಳಿದುಕೊಂಡಿತ್ತು. ನಾವು ಊರನ್ನು ಬಿಟ್ಟ ಕೂಡಲೆ ನೆಮ್ಮದಿ ನಾಶಗೊಂಡು, ಊರಿಗೆ ಊರೇ ನಾಶಗೊಂಡಿತು.’ ಎಂದರು ವ್ಯಾಸ ಶರ್ಮ. ನಾಶಗೊಂಡ ಊರನ್ನು ಕಂಡು, ಬೇಸರದಿಂದ ಆ ದಂಪತಿ ವಾರಣಾಸಿಯ ಹಾದಿ ಹಿಡಿದರು.