Thursday, 5th December 2024

ವಿದ್ವತ್ ಪ್ರಪಂಚದ ಅಪರೂಪದ ಕಾದಂಬರಿಕಾರ ಪೂಚಂತೇ

ತನ್ನಿಮಿತ್ತ

ಮಾರುತೀಶ್ ಅಗ್ರಾ

ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾರಸ್ವತ ಲೋಕ ಕಂಡ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಲೇಖಕ ಹಾಗೂ ಚಿಂತಕ.

ಹುಟ್ಟಿದ್ದು 08ಸೆಪ್ಟೆೆಂಬರ್ 1938ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಾದರೂ ನಂತರ ಪೂಚಂತೇ ತಮ್ಮ ಬದುಕಿನ
ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದು ಮೂಡಿಗೆರೆಯನ್ನು. ಇಂದು ಪೂಚಂತೇ ಇದ್ದಿದ್ದರೆ ಅವರಿಗೆ 82ವರ್ಷ ತುಂಬುತ್ತಿತ್ತು.  ಬರವಣಿಗೆ ಎಂಬುದು ರಕ್ತಗತವಾಗಿಯೇ ತೇಜಸ್ವಿಯವರಿಗೆ ಸಿದ್ದಿಸಿದ್ದರ ಪರಿಣಾಮವೋ ಏನೋ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆೆಗುರುತು ಮೂಡಿಸಿ ಅಸಂಖ್ಯಾತ ಓದುಗರನ್ನು ಸಂಪಾದಿಸಿಕೊಂಡದ್ದು ಪೂರ್ಣಚಂದ್ರ ತೇಜಸ್ವಿಯವರ ವೈಶಿಷ್ಟ್ಯ. ಪೂರ್ಣಚಂದ್ರ ತೇಜಸ್ವಿಯವರು ರಾಷ್ಟ್ರಕವಿ ಕುವೆಂಪು ಅವರ ಮಗನಾಗಿದ್ದರೂ ಕೂಡ ಅವರ ಹೆಸರನ್ನು ಬೆನ್ನಿಗೆ ಕಟ್ಟಿಕೊಳ್ಳದೇ ತಮ್ಮದೇ ಆದ ಮಾರ್ಗದಲ್ಲಿ ಮುಂದುವರಿದು ಹೆಸರು-ಕೀರ್ತಿ ಸಂಪಾದಿ ಸಿದ್ದು ಅವರನ್ನು ಮತ್ತಷ್ಟು ಗೌರವಾದರಗಳಿಗೆ ಪಾತ್ರವಾಗಿಸಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಂದೆಯ ಒಡನಾಟದಲ್ಲಿ ಇದ್ದರೂ ಕೂಡ ಪೂಚಂತೇ ಅವರು ಎಂದಿಗೂ ಅದರ ಗುಂಗಿನಲ್ಲಿ ಇರಲಿಲ್ಲ. ಅಂದಹಾಗೆ ಕನ್ನಡಕ್ಕೆೆ ಎರಡೆರಡು ಸಾಹಿತ್ಯ ರತ್ನಗಳನ್ನು ಕೊಟ್ಟ ಮನೆ ಕುಪ್ಪಳ್ಳಿ. ಒಂದೇ  ಮನೆಯಲ್ಲಿ ಇಬ್ಬರು ಸರಸ್ವತಿ ಪುತ್ರರು. ಆದರೆ ಕುವೆಂಪು ಅವರ ಬರವಣಿಗೆ ಶೈಲಿಗೂ ಪೂಚಂತೇ ಅವರ ಬರವಣಿಗೆ ಶೈಲಿಗೂ ಅಜಗಜಾಂತರ!

ಅಪ್ಪನ ಸಾಹಿತ್ಯದ ಆಕಾರವೇ ಬೇರೆ ಮಗನ ಬರವಣಿಗೆಯ ಆಕಾರವೇ ಬೇರೆ. ಇಂದಿಗೂ ಪೂಚಂತೇ ಅವರ ಒಂದೊಂದು ಕೃತಿಯೂ ಓದುಗರ ಮಸ್ತಿಷ್ಕದಲ್ಲಿ ನೆನಪಾಗಿ ಉಳಿದಿವೆ. ಪೂಚಂತೇ ಅವರ ಸಾಹಿತ್ಯದ ವಿಶೇಷತೆಯೆಂದರೆ ಕೃತಿಯಲ್ಲಿನ ನಿಗೂಢತೆ ಹಾಗೂ ಕೌತುಕವಾದ ನಿರೂಪಣೆ ಶೈಲಿ. ತೇಜಸ್ವಿಯವರ ಬರಣಿಗೆಯ ಶೈಲಿಯೇ ಅವರ ಪುಸ್ತಕಗಳು ಓದುಗರನ್ನು
ಸೆಳೆಯುವಂತೆ ಮಾಡಿವೆ. ಹಾಗಾಗಿಯೇ ಇಂದಿಗೂ ಪೂಚಂತೇ ಅವರ ಪುಸ್ತಕಗಳಿಗೆ ಓದುಗರು ಫಿದಾ ಆಗುತ್ತಾರೆ.

ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಕಥೆ-ಕಾದಂಬರಿ ಹೀಗೆ ಎಲ್ಲಾ ರೀತಿಯ ಬರಹಗಳು ತೇಜಸ್ವಿಯವರ ಲೇಖನಿಯಿಂದ
ಹೊರಹೊಮ್ಮಿದ್ದು ಅವರ ಸಾಹಿತ್ಯ ಶೈಲಿಯ ವಿಶೇಷ. ಇದಲ್ಲದೇ ಫೋಟೋಗ್ರಫಿ, ನಾಟಕ, ಕೃಷಿ, ಪರಿಸರದ ಅಧ್ಯಯನ, ಅಲೆದಾಟ, ಸಾಮಾಜಿಕ ಕಳಕಳಿ, ಕನ್ನಡಪರ ಚಿಂತನೆ ಹೀಗೆ ಎಲ್ಲಾ ತರಹದ ಮಿಶ್ರಣವೇ ಮೇಳೈಸಿದಂತಿದ್ದರು ಪೂಚಂತೇ ಎಂದರೆ ಅತಿಶಯೋಕ್ತಿಯಲ್ಲ. ಅಂದಹಾಗೆ  ತೇಜಸ್ವಿಯವರ ಜೀವನವೇ ಒಂಥರಾ ಅಲೆಮಾರಿ ಜೀವನ!

ಕಾಡು ಸುತ್ತುವುದು, ಶಿಕಾರಿ ಮಾಡುವುದು ಹಾಗೂ ಪರಿಸರದಲ್ಲಿನ ಜೀವಸಂಕುಲವನ್ನು ಸೂಕ್ಷ್ಮವಾಗಿ ಅವಲೋಕಿಸುವುದು ತೇಜಸ್ವಿಯವರ ನೆಚ್ಚಿನ ಹವ್ಯಾಸ. ಅದರ ಪರಿಣಾಮವೋ ಅಥವಾ ಪ್ರಭಾವವೋ ಗೊತ್ತಿಲ್ಲ ಮುಂದೆ ತಮ್ಮ ಜೀವನದ ಉದ್ದಕ್ಕೂ ತೇಜಸ್ವಿಯವರು ತಮ್ಮ ಸುತ್ತಲಿನ ಜೀವಸಂಕುಲವನ್ನು ಗಾಢವಾಗಿ ಅಧ್ಯಯನ ಮಾಡಿದರು. ಕಾಡು ಸುತ್ತುವುದನ್ನೇ ಜೀವನವನ್ನಾಗಿಸಿಕೊಂಡರು. ಕಣ್ಣಿಟ್ಟಲ್ಲಿ ಕಾಣುವ ಹೂಗಳನ್ನು, ಪ್ರಾಣಿ-ಪಕ್ಷಿಗಳನ್ನು, ಕ್ರಿಮಿ-ಕೀಟಗಳ ಚಲನವಲನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರು.

ಅವುಗಳ ಚಹರೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಅವುಗಳ ಕುರಿತು ತನಗೆ ತಿಳಿಯದಿದ್ದನ್ನು ವಿಜ್ಞಾನಿಗಳ, ಸಂಶೋಧಕರ ಜತೆ ಚರ್ಚಿಸಿ ತಿಳಿದುಕೊಂಡರು. ಅವುಗಳ ಬಗೆಗಿದ್ದ ಮಾಹಿತಿಯನ್ನು ತರಿಸಿ ಓದಿದರು. ಅವುಗಳ ಫೋಟೋಗ್ರಫಿ ಮಾಡಿದರು. ಒಂದೇ ಮಾತಿನಲ್ಲಿ ಹೇಳುವುದಾದರೆ ತೇಜಸ್ವಿಯವರ ಸಾಹಿತ್ಯದ ಕೇಂದ್ರ ಬಿಂದುವೇ ಪರಿಸರವಾಗಿತ್ತು ಎನ್ನಬಹುದು.

ಪೂಚಂತೇ ಅವರು ಎಂದಿಗೂ ತಾವಿದ್ದ ಜಾಗವನ್ನು (ಮೂಡಿಗೆರೆ ಹ್ಯಾಾಂಡ್ ಪ್ಟ್‌ ಅಥವಾ ಅಲ್ಲಿನ ವಾತಾವರಣ)ಬಿಟ್ಟು ನಗರದ ಕಡೆ ಬರುವ ಆಸಕ್ತಿ ತೋರಲಿಲ್ಲ. ಕಾರಣ ಅವರಿಗೆ ನಗರಗಳಲ್ಲಿನ ಹೈ-ಫೈ ಜೀವನ ಸುತರಾಂ ಇಷ್ಟವಿರಲಿಲ್ಲ ಎನ್ನುವುದು ಅವರ ಆಪ್ತರ ಮಾತುಗಳು. ಮೂಡಿಗೆರೆ, ತೋಟ ಹಾಗೂ ಪಶ್ಚಿಮ ಘಟ್ಟದ ಕಾಡುಗಳನ್ನು ಬಿಟ್ಟು ಹೊರ ಬರಲು ಪೂಚಂತೇ ಅವರಿಗೆ ಕೊನೆ ಕ್ಷಣದವರೆಗೂ ಸಾಧ್ಯವಾಗಲಿಲ್ಲ. ಪರಿಸರದ ಮೇಲೆ ಅವರಿಟ್ಟಿದ ಅಗಾಧ ಬಂಧ ಅವರನ್ನು ನಗರದ ಕಡೆ ಬರದಂತೆ ಅಲ್ಲಿಯೇ ಬಂಧಿಸಿತ್ತು!

ಒಂದು ವೇಳೆ ತೇಜಸ್ವಿಯವರು ನಗರಕ್ಕೇನಾದರೂ ಬಂದು ನೆಲೆಸಿದ್ದರೆ ಅವರ ನೈಜ ಬರವಣಿಗೆಯ ಸವಿ ಸವಿಯಲು ನಮ್ಮಿಿಂದ ಸಾಧ್ಯವಾಗುತ್ತಿರಲಿಲ್ಲವೇನೋ?! ಅವರೇನಾದರೂ ನಗರದ ಕಡೆ ಮುಖ ಮಾಡಿದ್ದರೆ ಪಶ್ಚಿಮ ಘಟ್ಟದ ದಟ್ಟ ಕಾಡಿನಿಂದ ಹೆಕ್ಕಿಕೊಂಡ ಎಲೆ-ಹಕ್ಕಿ, ಕಡ್ಡಿ ಕೀಟ,  ಹಾರುವ ಓತಿ, ಮಂಡರಗಪ್ಪೆೆ, ಹೆಲಿಕಾಪ್ಟರ್ ದುಂಬಿ ಹಾಗೂ ತಮ್ಮ ಸುತ್ತಮುತ್ತಲಿನ ಜನಜೀವನದಿಂದ ಆರಿಸಿಕೊಂಡ ಸುರೇಶ, ಗೌರಿ, ಪ್ಯಾರ, ಮಂದಣ್ಣ, ಮಾರ, ಎಂಕರೆಲ್ಲ ಪೂಚಂತೇ ಅವರ ಕತೆ-ಕಾದಂಬರಿಗಳ ಮೂಲಕ ನಮಗೆ ಪರಿಚಯವಾಗುತ್ತಿರಲಿಲ್ಲ. ಇದೆಲ್ಲವೂ ಸಾಧ್ಯವಾಗಿದ್ದು ಅವರು ನಗರ ಜೀವನದಿಂದ ದೂರ ಇದ್ದುದರಿಂದಾಗಿ.
ಪೂಚಂತೇ ಅವರು ಕನ್ನಡಕ್ಕೆೆ ಕೊಟ್ಟ ದೊಡ್ಡ ಕೊಡುಗೆಯೆಂದರೆ ನಮ್ಮ ಬದುಕು ಪರಿಸರ ಹಾಗೂ ಜೀವವಿಕಾಸದೊಂದಿಗೆ
ಅನೂಹ್ಯ ರೀತಿಯಲ್ಲಿ ತಳುಕು ಹಾಕಿಕೊಂಡಿದೆ ಎಂಬ ವೈಜ್ಞಾನಿಕ ಅರಿವು. ಅದನ್ನು ಅವರು ಕತೆ-ಕಾದಂಬರಿಗಳ ಮೂಲಕವೇ ಮಾಡಿದ್ದು ವಿಶೇಷವಾಗಿತ್ತು.

ಹಾಗಾಗಿಯೇ, ಪೂಚಂತೇ ಅವರು ಮುಂದೆ ಪ್ರಾಣಿ-ಪಕ್ಷಿ ಹಾಗೂ ಪರಿಸರದಲ್ಲಿನ ಜೀವವೈವಿಧ್ಯಗಳ ಕುರಿತ ವಿಭಿನ್ನ ದೃಷ್ಟಿಕೋನದ ಪುಸ್ತಕಗಳನ್ನು ಬರೆದು ಸೈ ಎನಿಸಿಕೊಂಡಿದ್ದು. ಇದರ ಜತೆಗೆ ವಿಜ್ಞಾನವನ್ನು ಸಾಹಿತ್ಯದ ವಸ್ತುವಿನ ಹಾಗೆ ಪರಿಣಾಮಕಾರಿಯಾಗಿ ಹಾಗೂ ಆಕರ್ಷಕವಾಗಿ ಬಳಸಿಕೊಳ್ಳುವ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯದ ಗಡಿ ಗೆರೆಗಳನ್ನು
ವಿಸ್ತರಿಸಿದರು. ಸಾಹಿತ್ಯದ ದೃಷ್ಟಿಯಲ್ಲೂ ವಿಜ್ಞಾನವನ್ನು ಹೇಗೆ  ನೋಡಬಹುದು ಎಂಬುದನ್ನು ತೋರಿಸಿಕೊಟ್ಟರು.

ವಿಜ್ಞಾನವನ್ನು ಅನ್ವೇಷಣೆಯ ಹಾದಿಯಲ್ಲಿ ಕೊಂಡೊಯ್ದು ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಹಾಗೂ ವಿಜ್ಞಾನದ ಜನಪ್ರಿಯತೆಗೆ ಕಾರಣರಾದರು. ಪೂಚಂತೇ ಅವರು ಮಿಸ್ಸಿಿಂಗ್ ಲಿಂಕ್,  ಅಲೆಮಾರಿಯ ಅಂಡಮಾನ್, ಕರ್ವಾಲೋ, ಚಿದಂಬರ
ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ, ವಿಸ್ಮಯ, ಫ್ಲೈಯಿಂಗ್ ಸಾಸರ್ ನಂತಹ ಕೃತಿಗಳನ್ನು ಓದುಗರ ಮುಂದಿಟ್ಟು ಓದುಗರನ್ನು ಮಂತ್ರಮುಗ್ಧರನ್ನಾಗಿ  ಮಾಡಿದ್ದಾರೆ. ಅಂತಹ ನಿರೂಪಣೆಯ ಶೈಲಿ ಪೂಚಂತೇ ಅವರ ಬರವಣಿಗೆಯಲ್ಲಿತ್ತು. ನಿಜಕ್ಕೂ ಪೂಚಂತೇ ಅವರ ಅಲೆಮಾರಿ ಜೀವನವೇ ಒಂದು ‘ಚಿದಂಬರ ರಹಸ್ಯ’!

ಪೂಚಂತೇ ಅವರ ಕರ್ವಾಲೊ,ಜುಗಾರಿಕ್ರಾಸ್, ಚಿದಂಬರ ರಹಸ್ಯ ಕೃತಿಗಳು ಇಂದಿಗೂ ಓದುಗರ ಹಾಟ್ ಫೇವರಿಟ್! ಅದರಲ್ಲಿಯೂ ಕರ್ವಾಲೊ ಕೃತಿ ಇವತ್ತಿಗೂ ಸಹ ಆಧುನಿಕ ಕನ್ನಡ ಸಾಹಿತ್ಯದ ಅಭಿಜಾತ ಕೃತಿಯಾಗಿಯೇ ಉಳಿದಿದೆ ಎನ್ನುತ್ತಾರೆ ಓದುಗ ಬಂಧುಗಳು.ಇನ್ನು ಅಪಾರ ಕುತೂಹಲದ ಹಾಗೂ ಅದಮ್ಯ ಜೀವನೋತ್ಸಾಹದ ಪೂಚಂತೇ ಅವರಿಗೆ ಪರಿಸರದ ಜೀವಸಂಕುಲಗಳ ಬಗ್ಗೆೆ ತಿಳಿಯುವ ಉತ್ಸಾಹ ಜಾಸ್ತಿ ಇದ್ದುದ್ದರ ಪರಿಣಾಮ ಕನ್ನಡಕ್ಕೆೆ ಹಾಗೂ ಓದುಗರಿಗೆ ಹಲವಾರು ವಿಶಿಷ್ಟ ರೀತಿಯ ಕೃತಿಗಳು ಪೂಚಂತೇ ಅವರ ಸಾಹಿತ್ಯದಿಂದ ಸಿಕ್ಕಿವೆ. ಯಾವುದನ್ನು ಕಂಡರೂ ಅದನ್ನು ತಮ್ಮ ವಿಶಿಷ್ಟ ನೋಟಕ್ಕೆೆ ಅಳವಡಿಸಿ, ಕಥನದಂತೆ ಹೇಳುವ ತೇಜಸ್ವಿಯವರ ಸಾಹಿತ್ಯವಂತಿಕೆ ಎಂಥವರಿಗೂ ಬೆರಗು ಹುಟ್ಟಿಸುತ್ತದೆ.

ಪೂಚಂತೇ ಅವರು ಪರಿಸರದ ಕತೆಗಳನ್ನು ಹಾಗೂ ಪರಿಸರದ ನೂರಾರು ರೋಚಕ ಸಂಗತಿಗಳನ್ನು ಆಳ ಅಧ್ಯಯನ ಮಾಡಿ ಅದನ್ನು ಕಥನ ರೂಪದಲ್ಲಿ ಸಮಾಜದ ಮುಂದಿಟ್ಟರು. ಇದು ಕನ್ನಡ ಸಾಹಿತ್ಯಕ್ಕೆ ಹೊಸತನದ ಆರಂಭ ಒದಗಿಸಿತು. ಮೊದಲೇ ಹೇಳಿದಂತೆ ತೇಜಸ್ವಿಯವರು ತಮ್ಮ  ಬದುಕನ್ನು ಕೊನೆಕ್ಷಣದವರೆಗೂ ಅಲೆಮಾರಿಯಾಗಿಯೇ ಕಳೆದರು. ಹೆಗಲ ಮೇಲೆ ಕೋವಿ ಹೊತ್ತುಕೊಂಡು ಗೊತ್ತು ಗುರಿ ಇಲ್ಲದಂತೆ ಮತ್ತು ಕಾಲದ ಪರಿವೆಯನ್ನು ಲೆಕ್ಕಿಸದೆ, ಕಾಡುಮೇಡುಗಳನ್ನು ಸುತ್ತಿದರು.

ಕಾಡಲ್ಲಿನ ಪ್ರಾಣಿ-ಪಕ್ಷಿಗಳ  ಚಲನವಲನಗಳ ಕುರಿತು ತೇಜಸ್ವಿಯಲ್ಲಿದ್ದ ತುಡಿತ ಅವರನ್ನು ಕಾಡು ಸುತ್ತುವಂತೆ ಮಾಡುತ್ತಿತ್ತು ಎನ್ನಬಹುದು. ಅಂದ ಹಾಗೆ ಪೂಚಂತೇ ಅವರು ಮನಸ್ಸು ಮಾಡಿದ್ದರೆ ಸಾಹಿತ್ಯ ಕ್ಷೇತ್ರವನ್ನು ಹೊರತುಪಡಿಸಿ, ರಾಜಕೀಯವಾಗಿ ಬೆಳೆಯಬಹುದಿತ್ತು. ಆ ಎಲ್ಲಾ ವರ್ಚಸ್ಸು ಅವರಿಗಿತ್ತು. ಆದರೆ ಅವರೆಂದು ಕೂಡ ರಾಜಕೀಯ ವಿಚಾರಗಳತ್ತ ಗಮನಹರಿಸಿ ದವರಲ್ಲ. ರಾಜಕೀಯ ಅವರ ಇಷ್ಟದ ಕ್ಷೇತ್ರವೂ ಆಗಿರಲಿಲ್ಲ ಎನ್ನುವುದು ಅವರ ಒಡನಾಡಿಗಳ ಮಾತು. ಅದೊಮ್ಮೆ ತೇಜಸ್ವಿಯವರ ಸ್ನೇಹಿತರೊಬ್ಬರು ಅವರನ್ನು ಚುನಾವಣೆಗೆ ನಿಲ್ಲಿಸಬೇಕೆಂದು ತೀರ್ಮಾನಿಸಿ ಅವರಿದ್ದ ಮೂಡಿಗೆರೆಯ ಎಸ್ಟೇಟ್‌ಗೆ
ಹೋಗಿದ್ದರಂತೆ. ನಾಮಪತ್ರವೂ ಸಹ ಸಿದ್ದವಾಗಿತ್ತಂತೆ!

ನಾಮಪತ್ರದಲ್ಲಿ ಎಲ್ಲೆಲ್ಲಿ ಸಹಿ ಮಾಡಬೇಕೆಂಬುದನ್ನು ಅವರ ಸ್ನೇಹಿತ ತೇಜಸ್ವಿಯವರಿಗೆ ಹೇಳುತ್ತಿದ್ದರಂತೆ. ತಕ್ಷಣವೇ ಪೂಚಂತೇ ಅವರು ತನ್ನ ಸ್ನೇಹಿತನನ್ನು ಮೇಲಿಂದ ಕೆಳಗೆ ಒಮ್ಮೆ ದಿಟ್ಟಿಸಿ ಅವರು ತಂದಿದ್ದ ನಾಮಪತ್ರವನ್ನು ತನ್ನ ಸ್ನೇಹಿತರ ಕಣ್ಣ ಮುಂದೆಯೇ ಹರಿದು ಹಾಕಿ, ‘ನಿಮ್ಗೆ ಮಾಡೋಕೇ ಬೇರೆ ಕೆಲ್ಸ ಇಲ್ವಾ, ನಾನೇನಾದರೂ ಚುನಾವಣೆಗೆ ನಿಂತ್ರೆ ಗೆಲ್ಲೊಲ್ಲ!

ಬೇಕಾದರೆ ನೀನೆ ಚುನಾವಣೆಗೆ ನಿಲ್ಲು ಎಂದು ಹೇಳಿ ನಾಮಪತ್ರ ತಂದಿದ್ದ ಸ್ನೇಹಿತನನ್ನು ಸಾಗಹಾಕಿದ್ದರಂತೆ ಪೂಚಂತೇ.
ತೇಜಸ್ವಿಯವರ ವ್ಯಕ್ತಿತ್ವವೇ ಹಾಗೇ. ಅವರಿಗೆ ಇಷ್ಟವಿಲ್ಲದ ಕ್ಷೇತ್ರಗಳತ್ತ ಒಂದು ನಿಮಿಷವೂ ಗಮನ ಕೊಡುತ್ತಿರಲಿಲ್ಲ ಎನ್ನುವುದು ಅವರ ಪತ್ನಿ ರಾಜೇಶ್ವರಿಯವರು ಹೇಳುವ ಮಾತು. ನಿಜ ಹೇಳಬೇಕೆಂದರೆ ತೇಜಸ್ವಿಯವರು ತಮ್ಮ ಶುದ್ಧ ಸಾಹಿತ್ಯದಿಂದ, ಚಿಂತನೆಯಿಂದ, ಫೋಟೋಗ್ರಫಿಯಿಂದ, ವಿಜ್ಞಾನದ ಮೇಲಿದ್ದ ಕಾಳಜಿಯಿಂದ, ಪ್ರಾಣಿ-ಪಕ್ಷಿ-ಕೀಟಗಳ ವಿಶೇಷ
ಅಧ್ಯಯನದಿಂದ ಅನೇಕ ಪ್ರಜ್ಞಾವಂತ ಓದುಗರನ್ನು ತಲುಪಿದ್ದಾರೆ.

ಜತೆಗೆ ಅಸಂಖ್ಯಾತ ಓದುಗರನ್ನು ತಮ್ಮ ಸಾಹಿತ್ಯ ಕೃಷಿಯ ಮೂಲಕ ಹಿಡಿದಿಟ್ಟುಕೊಂಡಿರುವುದು ಪೂರ್ಣಚಂದ್ರ ತೇಜಸ್ವಿಯವರ ಹೆಗ್ಗಳಿಕೆ. ಇದರ ಜತೆಗೆ ಪೂಚಂತೇ ಅವರ ಕೃತಿಗಳಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. 1980ರಲ್ಲಿ ಕರ್ವಾಲೋ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1985ರಲ್ಲಿ ಚಿದಂಬರ ರಹಸ್ಯ ಕೃತಿಗೆ ಮತ್ತೆೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1990ರಲ್ಲಿ ಇದೇ ಚಿದಂಬರ ರಹಸ್ಯ ಕೃತಿಗಾಗಿ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ದೊರೆಯಿತು.
1991ರಲ್ಲಿ ಶಿವರಾಮಕಾರಂತ ಪ್ರಶಸ್ತಿ, 1993ರಲ್ಲಿ ಜೀವವಿಜ್ಞಾನದ ಪರಿಸರ ಪ್ರಶಸ್ತಿ ಹಾಗೂ ಈ ಎಲ್ಲವುಗಳಿಗೆ ತಿಲಕವಿಟ್ಟಂತೆ 2000ದಲ್ಲಿ ಸಮಗ್ರ ಸಾಹಿತ್ಯಕ್ಕಾಗಿ ‘ಪಂಪ ಪ್ರಶಸ್ತಿ’ ಗೌರವ ಕೂಡ ದೊರೆಯಿತು.

ಹೀಗೆ ಇನ್ನು ಅನೇಕ ಪ್ರಶಸ್ತಿಗಳು ಪೂಚಂತೇ ಅವರಿಗೆ ಲಭಿಸಿವೆ.ಪೂಚಂತೇ ಅವರ ಪತ್ನಿ ರಾಜೇಶ್ವರಿ ಅವರು ಹೇಳುವ ಪ್ರಕಾರ ತೇಜಸ್ವಿಯವರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು, ಆ ದಿನವನ್ನು ಸಂಭ್ರಮಿಸುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲವಂತೆ. ಯಾರಾದರೂ ಕರೆ ಮಾಡಿ ವಿಶ್ ಮಾಡಿದರೆ ಹೌದಾ ಎಂದು ಹೇಳಿ ದೈನಂದಿನ ಚಟುವಟಿಕೆಗಳಲ್ಲಿ ಮಗ್ನರಾಗುತ್ತಿದ್ದರಂತೆ.

ಪೂಚಂತೇ ಅವರ ಪ್ರಕಾರ ಹುಟ್ಟುಹಬ್ಬ ಎಂಬ ಒಂದು ದಿನದ ಸಂಭ್ರಮಕ್ಕಿಿಂತ ‘ಬದುಕು ಮುಖ್ಯ’ ಎನ್ನುತ್ತಿದ್ದರು ಅವರು ಎನ್ನುವ ಮಾತನ್ನು ರಾಜೇಶ್ವರಿ ಅವರು ಈಗಲೂ ನೆನೆಯುತ್ತಾರೆ. ನಿಜಕ್ಕೂ ಪೂರ್ಣಚಂದ್ರ ತೇಜಸ್ವಿಯಂತಹ ಖ್ಯಾತನಾಮ ವ್ಯಕ್ತಿ ಮಲೆನಾಡಿನ ಹಸಿರು ಪರಿಸರದ ಮಧ್ಯೆೆ ಯಾವುದೇ ಆಡಂಬರವಿಲ್ಲದೇ ಸರಳ ರೀತಿಯಲ್ಲಿ ಬದುಕಿದ್ದು ಕೂಡ ಒಂದು
ಆದರ್ಶವೇ.

ನಿಜವಾಗಿಯೂ ಪೂಚಂತೇ ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ವ್ಯಕ್ತಿ, ಲೇಖಕ, ಕಾದಂಬರಿಕಾರ. ಜತೆಗೆ ಸಾಹಿತ್ಯದ ಎಲ್ಲಾ ಮಜಲುಗಳನ್ನು ದಾಟಿ ವಿಶಿಷ್ಟ ರೀತಿಯ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟ ಚಿಂತಕ ಪೂಚಂತೇ. ಹಾಗಾಗಿಯೇ ಪೂಚಂತೇ ಇಂದಿಗೂ ನಾಡಿನ ಅಸಂಖ್ಯಾತ  ಓದುಗರ ಹೃದಯ ಸಿಂಹಾಸನದಲ್ಲಿ ಅಜರಾಮರವಾಗಿದ್ದಾರೆ.