ಸ್ಮರಣೆ
ಧನಂಜಯ ಜೀವಾಳ ಬಿ.ಕೆ
ಮೂಡಿಗೆರೆ ಬ್ಯಾಂಕ್ ಉದ್ಯೋಗಿಯಾಗಿರುವ ಬಿ.ಕೆ ಧನಂಜಯ ಜೀವಾಳ ಬಲು ಚಿಕ್ಕ ವಯಸ್ಸಿಗೇ ಪೂರ್ಣಚಂರ ತೇಜಸ್ವಿಯವರ ಸಂಪರ್ಕಕ್ಕೆ ಬಂಧವರು.
ಅವರ ಗರಡಿಯಲ್ಲಿ ಪಳಗಿದ, ತೇಜಸ್ವೀ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಮಾಡುತ್ತಿರುವ ಕೆಲವೇ ಮಂದಿಗಳಲ್ಲಿ ಒಬ್ಬರು.
ಸ್ವತಃ ತೇಜಸ್ವಿ ಹಾಗೂ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರನ್ನು ತುಂಬ ಹತ್ತಿರದಿಂದ ಬಲ್ಲ, ಧನಂಜಯರ ‘ನಿಮಗೆ ಇದನ್ನೆಲ್ಲ ಹೇಳಲು, ತೇಜಸ್ವಿ
ನನಗೆ ನಿಮಿತ್ತ’ ಹೊತ್ತಗೆಯ ಆಯ್ದ ಭಾಗ ಇಲ್ಲಿದೆ. ಶ್ರೀಮತಿ ತೇಜಸ್ವಿಯವರ ವ್ಯಕ್ತಿತ್ವದ ಜಲಕು ತೋರುವ ಸಾಲಿಗಳಿವು…
* * *
ನನ್ನ ಪುಸ್ತಕಕ್ಕಾಗಿ ತೇಜಸ್ವಿಯವರ ಸಾಹಿತ್ಯದ ಒನ್ ಲೈನರ್‌ಗಳನ್ನು ಶ್ರೀಮತಿ ರಾಜೇಶ್ವರಿಯವರಿಗೆ ತೋರಿಸಿ ಅಭಿಪ್ರಾಯ ಪಡೆಯಲು ಒಮ್ಮೆ ಹೋಗಿದ್ದೆ. ಕುಶಲೋಪರಿ ಮಾತನಾಡಿದ ನಂತರ ರಾಜೇಶ್ವರಿ ಆಂಟಿ ಒಳ ಹೋದರು. ನಿಶ್ಯಬ್ದವಾಗಿದ್ದ ಕೊಠಡಿಯಲ್ಲಿ ಪ್ರತಿ ವಸ್ತುವನ್ನೂ ತೇಜಸ್ವಿಯವರು ಅಪೇಕ್ಷಿಸುತ್ತಿದ್ದ ರೀತಿಯಲ್ಲಿ ಅದರದ್ದೇ ಜಾಗದಲ್ಲಿ ಒಪ್ಪ ಓರಣವಾಗಿ ಜೋಡಿಸಿಟ್ಟಿದ್ದರು. ಗೋಡೆಯಲ್ಲಿದ್ದ ಗಡಿಯಾರ ಸರಿಯಾಗಿ ಒಂದು ಗಂಟೆ ನಲವತ್ತು ನಿಮಿಷ ವನ್ನು ತೋರಿಸುತ್ತ, ತೇಜಸ್ವಿ ನಮ್ಮನ್ನು ಅಗಲಿದ್ದ ದಿನಗಳಿಂದ ಕಾಲವೇ ಘನೀಕರಿಸಿ ದಂತೆ ನಿಂತಿತ್ತು.
ನಮ್ಮ ಪಾಲಿಗೆ ಸಮಸ್ತವೂ ಸ್ಥಗಿತವಾದಂತೆ ಘಟಿಸಿದ್ದ ಆ ಸಮಯವನ್ನು ತೋರಿಸುತ್ತಿದ್ದ ಗಡಿಯಾರನ್ನೇ ನಿರುಕಿಸುತ್ತಿದ್ದ ನಾನು ಮೇಲಂತಸ್ತಿನ ಕಿಟಕಿಯನ್ನು ಠಕ್! ಠಕ್! ಎಂದು ಯಾರೋ ಬಡಿದಿದ್ದನ್ನು ಕೇಳಿ ಬೆಚ್ಚಿ ಗಡಬಡಿಸಿದೆ. ನನಗೆ ತಿಳಿದಂತೆ ಮನೆಯಲ್ಲಿ ಆಂಟಿ, ಮನೆಗೆಲಸದ ಹೆಂಗಸು ದೇವಕಿ ಮತ್ತು ನಾನು ಮಾತ್ರ ಇದ್ದದ್ದು. ತೇಜಸ್ವಿಯವರ ನಿರ್ಗಮನದ ನಂತರ ಅವರ ಕಾರ್ಯಚಟುವಟಿಕೆಯ ಕೊಠಡಿಯಲ್ಲಿ ಯಾರೂ ವಿಶೇಷವಾಗಿ ಇರುತ್ತಿರಲಿಲ್ಲ. ನನ್ನ ಕಿವಿ ಚುರುಕಾಗಿ ಎದೆ ಬಡಿದ ಹೆಚ್ಚಾಯಿತು.
ತೇಜಸ್ವಿ ಮತ್ತೆ ಬಂದರೇ!? ಅಲ್ಯಾಕೆ ಶಬ್ದ ಮಾಡುತ್ತಿದ್ದಾರೆ, ಎದುರು ಬಾಗಿಲಿನಿಂದ ಬಾರದೆ. ಓ ಎಲ್ಲೋ ಬೆಳಗ್ಗೆಯೇ ಬಂದು ಅಂದು ನಿಲ್ಲಿಸಿದ್ದ ಕೆಲಸ ಮುಂದುವರಿಸುತ್ತಿರಬಹುದು. ಮೇಲೆ ಹೋಗಿ ನೋಡಿ ಮಾತನಾಡಿಸುವಾ ಎಂದು ತವಕಗೊಂಡೆ. ನನ್ನನ್ನು ಕಂಡು ‘ಯಾವಾಗ ಬಂದೆಯೋ ಅಯೋಗ್ಯ! ಕೆಳಗೇನು ಮಾಡುತಿದ್ದೆ? ನೋಡು ಎಷ್ಟು ಕೆಲಸ ಬಾಕಿ ಇದೆ! ಯಾವಾಗ ಮುಗಿಸೋದು ಮಾರಾಯ!
ನೀನಿನ್ನೂ ಹುಡುಗರನ್ನು ಕಟ್ಟಿಕೊಂಡು ಕಾಡು ಸುತ್ತುತ್ತ ಇದ್ದಿಯಾ ಹೇಗೆ?’ ಎಂದು ಖಂಡಿತ ಉಗೀತಾರೆ ಅಂದು ಕೊಳ್ಳುತ್ತ ಬೈಸಿಕೊಳ್ಳಲು ಸಿದ್ಧನಾದೆ. ಮೇಲೇ ಹೋಗಲೋ, ಅವರೇ ಬರ‍್ತಾರೋ ಎಂಬ ಗೊಂದಲದಲ್ಲಿ ಬಿದ್ದೆ. ಎದೆ ಬಡಿತ ಹೆಚ್ಚಾಯಿತು. ಎಷ್ಟು ದಿನಗಳಾಯಿತಲ್ಲ ಮಾತನಾಡಿಸಿ ಬೈದರೆ ಬೈಲಿ ಎಂದು ಕುರ್ಚಿಯನ್ನು ಕೆಳಗೆ ಒತ್ತಿ ಎದ್ದು ನಿಂತೆ. ಮಂಡಿಯಲ್ಲಿ ಬಲವೇ ಇಲ್ಲದಂತೆ ಆಯಿತು.
ಅರೇ! ತೇಜಸ್ವಿಯವರನ್ನು ನಾವೆಲ್ಲರೂ ಕುಪ್ಪಳಿಗೆ ಕರೆದೋಯ್ದಿದ್ದೆವಲ್ಲ ಅದು ಹೇಗೆ ಇಲ್ಲಿಗೆ ಬಂದರು? ಎಲ್ಲಾದರೂ ಅವರ ಆತ್ಮ! ಎಂದು ಏನೇನೋ ಯೋಚಿಸಿ ಸ್ಥಂಭೀಭೂತನಾದೆ. ಅಷ್ಟರಲ್ಲಿ ಮತ್ತೆ ಠಕ್! ಠಕ್! ಎಂದು ಮುಂಚಿನ ಕ್ಕಿಂತಲೂ ಬಲವಾಗಿ ಕಿಟಕಿಯನ್ನೋ ಬಾಗಿಲನ್ನೋ ಕುಟ್ಟಿದರು. ಈಗಂತೂ ನನಗೆ ನಿಧಾನವಾಗಿ ವಿದ್ಯುತ್ ಸಂಚಾರ ಶುರು ಆಯಿತು. ಮತ್ತೆ ತೇಜಸ್ವಿಯ ವರನ್ನು ಭೇಟಿಯಾಗುವ ಅವಕಾಶ! ಮೈಮನದಲ್ಲೆಲ್ಲ ಕಂಪನ ಶುರುವಾಯಿತು. ಅಷ್ಟರಲ್ಲಿ ಮತ್ತೊಮ್ಮೆ ಠಕ್! ಠಕ್! ಕಾತರ, ಆತಂಕ, ಉದ್ವೇಗಗಳಿಂದ ಎದೆಯೊಳಗಿನ ಗೂಡ್ಸ್ ರೈಲು ವೇಗ ಹೆಚ್ಚಿಸಿಕೊಳ್ಳುತ್ತಿತ್ತು.
ಅಷ್ಟರಲ್ಲಿ ಒಳಮನೆಯಿಂದ ಕಾಫಿ, ಸ್ವೀಟ್‌ನೊಂದಿಗೆ ಆಂಟಿ ಬಂದರು. ‘ಈಗ ಕಿಟಕಿ ಬಡಿದ ಶಬ್ದ ಕೇಳಿದಿರಾ?’ ಎಂದು ಸರಾಗವಾಗಿ ಕೇಳಿದರು. ನಾನಿನ್ನೂ ಗಾಬರಿ ಯಿಂದ ಹೊರಬಂದಿರಲಿಲ್ಲ. ಆತಂಕದಿಂದ ‘ಈಗ ಮಾತ್ರ ಅಲ್ಲ ಮುಂಚಿನಿಂದಲೂ ಬರ‍್ತಾ ಇದೆ. ಯಾರಿದ್ದಾರೆ ಮೇಲೆ?’ ಎಂದೆ. ‘ಶಬ್ಧ ಮಾಡಬೇಡಿ ಈ ರೇಲಿಂಗ್ ಪಕ್ಕದಲ್ಲೇ ನಿಧಾನವಾಗಿ ಗಮನಿಸಿ ಯಾರೆಂದು’ ಎಂದರು. ಅರೇ! ನಾನಿಷ್ಟು ಉದ್ವೇಗಗೊಂಡಿದ್ದೇನೆ ಇವರು ನೋಡಿದರೆ
ಸಲೀಸಾಗಿ ಏನೂ ನಡದೇ ಇಲ್ಲವೆಂಬಂತೆ ಕಾಡಿನಲ್ಲಿ ಪೊದೆಯ ಹಿಂದೆ ಆಟವಾಡುವ ಮೊಲವನ್ನು ಗಮನಿಸಲು ಹೇಳುವಂತೆ ಹೇಳುತ್ತಿದ್ದಾರಲ್ಲ ಎಂದೆನಿಸಿತು.
ಧೈರ್ಯಕ್ಕೆ ಹೇಗೂ ಇದ್ದಾರಲ್ಲಾ ಎಂದುಕೊಂಡು ಮಹಡಿ ಏರುವ ರೈಲಿಂಗ್ ಸಂದಿಯಿಂದ ಅಡಗಿ ಕುಳಿತು ಮೇಲೆ ದೃಷ್ಟಿ ಹಾಯಿಸಿದೆ. ಠಕ್‌ಠಕ್ ಎಂದು ಕಿಟಕಿ ಗಾಜು ಒಡೆದೇ ಹೋಗುವಂತೆ ಕುಟ್ಟಿದ್ದ ಶಬ್ದ ಕೇಳಿ ಒಮ್ಮೆಲೆ ಮಿಡುಕಿ ಬಿದ್ದೆ. ‘ಅದಕ್ಯಾಕೆ ಗಾಬರಿ ಬೀಳ್ತೀರಿ. ದಿನಾ ಬರುತ್ತೆ. ಹೆಚ್ಚೂ ಕಡಿಮೆ ಇದೇ ಸಮಯಕೆ!’ ಎಂದರು. ಅಷ್ಟರಲ್ಲಿ ‘ಬುರ್ರ್!!’ ಎಂದು ಶಬ್ಧವಾಯಿತು. ‘ಹೆದ ರಿದ್ರಾ? ಅದೊಂದು ಮರಕುಟುಕ. ಅವರಿದ್ದಾಗ ಆಗಾಗ ಭೇಟಿ ನೀಡುತ್ತ ಇತ್ತು. ಈಗಲೂ ದಿನಕ್ಕೊಮ್ಮೆ ಯಾದರೂ ಬಂದು ಕಿಟಕಿ ಗಾಜನ್ನು ಕುಟ್ಟಿ ಒಳಬರಲು ಪ್ರಯತ್ನಿಸಿ ಸಾಧ್ಯವಾಗದೇ ಹಾರಿಹೋಗುತ್ತೆ. ಹೊಸಬರಿಗೆ ಮೊದಲ ಬಾರಿಗೆ ಗಾಬರಿಯಾಗುವುದು ಖಂಡಿತ!’ ಎಂದರು.
ಪ್ರಕೃತಿಯಲ್ಲಿ ಲೀನರಾಗಿದ್ದ ತೇಜಸ್ವಿಯವರೇ ಮರ ಕುಟುಕದ ರೂಪದಲ್ಲಿ ಭೇಟಿ ನೀಡುತ್ತಿದ್ದಾರೋ ಎಂದು ಭಾಸವಾಯಿತು. ನಿಜವಾಗಿಯೂ ತೇಜಸ್ವಿ ಯವರೇ ಬಂದು ನಮ್ಮೆಲ್ಲರನ್ನೂ ತರಾಟೆಗೆ ತೆಗೆದುಕೊಂಡರೆ ಎಂಬ ರಮ್ಯ ಲೋಕವನ್ನು ಕಲ್ಪಿಸಿಕೊಂಡು ರೋಮಾಂಚಿತನಾದೆ. ಪಕ್ಷಿ, ಮರ, ಕೀಟ, ಕೆರೆ, ತೊರೆ ಹಾಗೂ ನಮ್ಮೆಲ್ಲರೊಳಗೆ ಪ್ರವಹಿಸುತ್ತಿರುವ ತೇಜಸ್ವಿ ಎಂಬ ಚೇತನ ಯಾವ ಕ್ಷಣದಲ್ಲೂ ಎದುರಾಗಿ ಮಾತನಾಡಿಸುವ ಸಂದರ್ಭದ ಪ್ರತೀಕ್ಷೆಯಲ್ಲಿ
ದ್ದೇನೆ. ಬಹುಶಃ ರಾಜೇಶ್ವರಿ ಆಂಟಿಯೂ…
***
ಆಗ ತಾನೇ ಇಂಟರ್‌ನೆಟ್ ಸಂಪರ್ಕ ಪಡೆದಿದ್ದರು ತೇಜಸ್ವಿ. ನನಗಂತೂ ಆ ಅದ್ಭುತ ಲೋಕದ ಬಗ್ಗೆ ವಿಚಿತ್ರವಾದ ಕಲ್ಪನೆಗಳಿದ್ದವು. ಬ್ರಹ್ಮಾಂಡದ ಮೂಲೆ
ಮೂಲೆಯಲ್ಲಿನ ಮಾಹಿತಿ ಕೇವಲ ಒಂದು ಕ್ಲಿಕ್‌ನಲ್ಲಿ ನಮ್ಮ ಕಣ್ಣೆದುರಿನ ಪರದೆಯಲ್ಲಿ ಮೂಡಿ ಬರುತ್ತಿದ್ದ ಮೋಡಿಗೆ ಭಳಾರೆ ವಿಚಿತ್ರಂ!! ಎಂಬ ವಿಸ್ಮಯವಿತ್ತು. ‘ನೋಡಯ್ಯಾ ಸುದ್ದಿ ಸಮಾಚಾರಗಳು ಘಟನೆ ನಡೆದ ಮರುಕ್ಷಣದಲ್ಲಿಯೇ ನಮಗೆ ತಲುಪುತ್ತಿವೆ; ಅದೂ ಆಡಿಯೋ ವಿಝ್ಯುವಲ್ ರೂಪದಲ್ಲಿ.
ನಮಗೆ ದೇಶ ವಿದೇಶಗಳ ಸುದ್ದಿ ಸಮಾಚಾರ ಗಳು ಇಷ್ಟು ವೇಗವಾಗಿ ಸಿಕ್ಕಿದ ನಿದರ್ಶನಗಳೇ ಇಲ್ಲ. ಇಂಟರ್‌ನೆಟ್ ಪ್ರತಿಯೊಬ್ಬರನ್ನೂ ತಲುಪಿದ ಸನ್ನಿ ವೇಶದಲ್ಲಿ ಪತ್ರಿಕೋದ್ಯಮ ಹೇಗಿರಬಹುದೆಂದು ಕಲ್ಪಿಸಿಕೊಳ್ಳುತ್ತಿದ್ದೆ. ‘ಆದ್ರೂ ಏನೇ ಹೇಳು ನಮ್ಮ ರಾಜ್ಯ, ಜಿಲ್ಲೆಗಳ ಮತ್ತು ನಮ್ಮ ಸುತ್ತಲಿನ ಲೋಕಲ್ ನ್ಯೂಸ್‌ಗೆ ಸುದ್ದಿ ಪತ್ರಿಕೆಗಳೇ ಸರಿ ಕಣಯ್ಯಾ.’ ದಿನ ಪತ್ರಿಕೆಗಳ ಜಾಗವನ್ನು ಈ ಇಂಟರ್ ನೆಟ್ ತುಂಬಲಾರದು ಎಂದು ಅಭಿಪ್ರಾಯಪಟ್ಟಿದ್ದರು. ಕೊಂಚ ಮಟ್ಟಿನ ಸಲಿಗೆ ನೀಡಿದ ತೇಜಸ್ವಿಯವರಿಗೆ ಒಮ್ಮೆ ಅಧಿಕ ಪ್ರಸಂಗದ ಪ್ರಶ್ನೆ ಕೇಳಿ ಅವರ ಕೋಪಕ್ಕೆ ತುತ್ತಾಗಿದ್ದೆ. ಅವತ್ತು ತಮಾಷೆಯಾಗಿ ಮಾತನಾಡುತ್ತ ಒಳ್ಳೆಯ ಲಹರಿಯಲ್ಲಿದ್ದರು.
ತಲೆಹರಟೆಯ ನಾನು ‘ರಾಜೇಶ್ವರಿ ಆಂಟಿ ನಿಮ್ಮ -ಸ್ಟ್ ಚಾಯಿಸ್ಸಾ?’ ಎಂದೇಬಿಟ್ಟೆ. ‘ಛೂಸ್ ಮಾಡಿದ್ದೂ ಆಯ್ತು, ಮದುವೆ ಆಗಿದ್ದೂ ಆಯಿತು. ನಿನ್ನಷ್ಟೇ
ದೊಡ್ಡ ಮಕ್ಕಳೂ ಇದ್ದಾರೆ’ ಎಂದು ಮಾತನ್ನು ಅಲ್ಲಿಗೆ ಮುಗಿಸಿದರು. ತೀರಾ ಇತ್ತೀಚೆಗೆ ನಾನೂ ಮತ್ತು ನನ್ನ ಹೆಂಡತಿ ನಾಗಮಣಿ ಇಬ್ಬರೂ ರಾಜೇಶ್ವರಿ ಆಂಟಿಯನ್ನು ಮಾತನಾಡಿಸಿಕೊಂಡು ಬರಲುಹೋಗಿದ್ದೆವು. ನಮ್ಮ ಸಂಸಾರ, ಉದ್ಯೋಗ, ಸಾಹಿತ್ಯ, ರಾಜಕೀಯಗಳೆಲ್ಲವನ್ನು ಮಾತನಾಡಿದೆವು.
ನಂತರ ತೀರಿ ಹೋಗುವ ಕೆಲ ದಿನಗಳ ಹಿಂದೆ ತೇಜಸ್ವಿಯವರು ರಾತ್ರಿ ಊಟದ ನಂತರ ನಿದ್ದೆಗೆ ಹೋಗುವ ಸಮಯದಲ್ಲಿ ‘ನನಗೆ ಇಷ್ಟು ವರ್ಷ ಕಂಪನಿ
ಕೊಟ್ಯಲ್ಲೇ ಮಹರಾಯಿತಿ’ ಎಂದಿದ್ದರು ಎಂದು ರಾಜೇಶ್ವರಿ ಆಂಟಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ತೀರಾ ಬಾವುಕರಾಗಿದ್ದಂತೆ ಕಂಡ ಅವರನ್ನು ಹೆಚ್ಚು ಬಳಲಿಕೆಗೆ ಒಳಗಾಗದಂತೆ ಸಾಂತ್ವನ ಹೇಳಿ ಬೀಳ್ಕೊಂಡೆವು.
***
ತೇಜಸ್ವಿಯವರು ತೀರಿ ಹೋದ ಕೆಲ ದಿನಗಳ ನಂತರ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ರಾಜೇಶ್ವರಿ ಆಂಟಿಯನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದೆವು. ತಾರಿಣಿಯವರು ಸಹ ಇದ್ದರು. ಕೆಲ ಸ್ಥಳೀಯರು ಆಗಲೇ ‘ಇನ್ನು ಇಲ್ಲಿ ಇದ್ದು ನೀವು ಏನು ಮಾಡ್ತೀರಿ? ಮೈಸೂರೋ ಬೆಂಗಳೂರೋ ಸೇರಿಕೊಂಡು ಇದ್ದು ಬಿಡಿ. ನಿಮ್ಮ ತೋಟ ಮಾರುವಿರಾ? ಹಾಗಿದ್ದರೆ ನಮಗೇ ಕೊಡಿ’ ಎಂದು ಆಂಟಿ ಬಳಿ ಪೀಠಿಕೆ ಹಾಕಿದ್ದು ನನ್ನ ಗಮನಕ್ಕೆ ಬಂದಿತ್ತು. ಈ ಜನರ ಬಗ್ಗೆ ತೀವ್ರ ವಿಷಾದ ಹುಟ್ಟಿಸಿತ್ತು ನನಗೆ.
ಮೂಡಿಗೆರೆಯಂತ ಊರನ್ನು ಜಗತ್ತಿಗೇ ಪರಿಚಯಿಸಿದ್ದ ಚೇತನ ಅಗಲಿದ ಕೆಲವ ದಿನಗಳಲ್ಲಿ ತಮ್ಮ ಹಿತಾಸಕ್ತಿಗಳ ಬಗ್ಗೆ ಯೋಚಿಸಿದ್ದು ಅಕ್ಷಮ್ಯ ಎಂದು ನನಗನಿಸಿತು. ತೇಜಸ್ವಿಯವರ ಕುಟುಂಬದವರಿಗೂ ಇದರಿಂದ ನೋವಾದದ್ದು ಸತ್ಯ. ‘ಈ ಮೂಡಿಗೆರೆ, ಈ ಹ್ಯಾಂಡ್ ಪೋಸ್ಟ್, ಈ ಸ್ಥಳವನ್ನು ನಾವು ತೇಜಸ್ವಿಯವರ ಹೊರತಾಗಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ದಯವಿಟ್ಟು ಈ ಸ್ಥಳವನ್ನು ಬಿಟ್ಟು ಹೋಗಬೇಡಿ. ಮೊದಲೇ ತೇಜಸ್ವಿಯವರ ಅಗಲಿಕೆ
ಯಿಂದ ಕಂಗೆಟ್ಟಿರುವ ನಾವು ಮತ್ತೆ ದಿಕ್ಕು ಕಾಣದಂತೆ ಆಗುತ್ತೇವೆ.’ ಎಂದು ಆಂಟಿಯವರಲ್ಲಿ ಹೇಳಿದೆ. ಅವರೂ ಸಹ ಈ ಮುಂಚೆಯೇ ಈ ಕುರಿತು ದೃಢ ನಿರ್ಧಾರ ತೆಗೆದುಕೊಂಡಿದ್ದರು. ತಾವು ಅದೇ ಸ್ಥಳದಲ್ಲಿ ನೆಲೆಸುವ ತಮ್ಮ ಪೂರ್ವ ಯೋಜನೆ ತಿಳಿಸಿ ತೇಜಸ್ವಿಯವರ ಆಶಯಗಳ ಸಾಕಾರದ ಭರವಸೆ ನೀಡಿದ್ದರು.
(ಕಾಡಿನ ಸಂತ ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿಯಿಂದ)