Thursday, 12th December 2024

ನಾವು ಟಾಪ್ ಟೆನ್ ಸ್ಥಾನಕ್ಕೆ ಬರುವುದು ಯಾವಾಗ ?

ನಾಡಿಮಿಡಿತ

ವಸಂತ ನಾಡಿಗೇರ

vasanth.nadiger@gmail.com

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಎಸೆತ ತಂದ ಸ್ವರ್ಣ ಪದಕದಿಂದ ಭಾರತದಾದ್ಯಂತ ಸಂಭ್ರಮ ಮನೆ ಮಾಡಿತು. ಯಾಕಿಲ್ಲ ಹೇಳಿ. ಬೀಚಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಅವರು ಶೂಟಿಂಗ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದಿದ್ದರು. ಅಲ್ಲದೆ ಆ ಒಲಿಂಪಿಕ್ಸ್ ಕೂಟವೇ ನಮ್ಮ ಇದುವರೆಗಿನ ಅದ್ಭುತ ಸಾಧನೆಯಾಗಿತ್ತು. ಆದರೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚು-ಹೀಗೆ ಒಟ್ಟು 7 ಪದಕಗಳ ಮೂಲಕ ಭಾರತವು ಲಂಡನ್‌ಗಿಂತ ಒಂದು ಪದಕ ಹೆಚ್ಚು ಪಡೆದು ಬೀಗಿದೆ.

ಈ ನಿಟ್ಟಿನಲ್ಲಿ ನಮ್ಮ ಸಾಧನೆಯಲ್ಲಿ ಖಂಡಿತ ಸುಧಾರಣೆಯಾಗಿದೆ. ಆದರೆ ಇದಕ್ಕೆ ಮೊದಲು ಈ ಒಲಿಂಪಿಕ್ಸ್‌ನಲ್ಲಿ ನಮ್ಮ ಪ್ರದರ್ಶನ ಅಷ್ಟೇನೂ ಆಶಾದಾಯಕ ವಾಗಿರಲಿಲ್ಲ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 41 ವರ್ಷಗಳ ಬಳಿಕ ಹಾಕಿಯಲ್ಲಿ ಪದಕ ಬಂದಾಗ ದೇಶಾದ್ಯಂತ ಉತ್ಸಾಹ ಮನೆಮಾಡಿತ್ತು. ನಿಜ. ನಾಲ್ಕು ದಶಕಗಳ ಪದಕ ಬರ ನೀಗಿದಾಗ ಎಲ್ಲರಿಗೂ ಸಂತಸವಾಗುವುದು ಸಹಜ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಆಟಗಾರರಿಗೆ ಕರೆ ಮಾಡಿ ಅಭಿನಂದಿಸಿ ದರು.

‘ನೀವು ನಮ್ಮ ಹೆಮ್ಮೆ’ ಎಂದರು. ಇತ್ತ ವನಿತೆಯರು ಕೂಡ ಹಾಕಿ ಸೆಮಿಫೈನಲ್ ಪ್ರವೇಶಿಸಿದ್ದರು. ಅವರೂ ಪರಾಭವಗೊಂಡಾಗ, ಮಹಿಳೆಯರು ಕೂಡ ಪುರುಷರ ಸಾಧನೆಯನ್ನು ಪುನರಾವರ್ತಿಸಬಹುದು ಎಂಬ ನಿರೀಕ್ಷೆ ಇತ್ತಾದರೂ ಅದು ಹುಸಿಯಾಯಿತು. ಇದರಿಂದ ಭಾರತದ ಹಾಕಿ ಆಟಗಾರ್ತಿಯರು ಕಣ್ಣೀರಾದರು. ಆದರೆ ಮತ್ತೆ ಪ್ರಧಾನಿಯೇ ಆವರಿಗೆ ಕರೆ ಮಾಡಿ, ‘ನೀವು ಸೋತಿದ್ದರೂ ನಮ್ಮ ಹೃದಯ ಗೆದ್ದಿದ್ದೀರಿ’ ಎಂದು ಸಾಂತ್ವನ ಹೇಳಿದರು. ಧೈರ್ಯ ತುಂಬಿದರು. ದೇಶದ ಮುಖ್ಯಸ್ಥರು ಮಾಡಬೇಕಾದ ಕೆಲಸವೇ ಬಿಡಿ. ಹಾಗೆ ನೋಡಿದರೆ ಭಾರತವು ಹಾಕಿಯಲ್ಲಿ ಇದುವರೆಗೆ 8 ಚಿನ್ನ ಸಹಿತ 12 ಪದಕಗಳನ್ನು ಗೆದ್ದಿದೆ.

ಆದರೆ ಕಳೆದ 41 ವರ್ಷಗಳಿಂದ ಪದಕ ಬಂದಿರಲಿಲ್ಲವಾಗಿ ಈ ಬಾರಿಯ ಕಂಚಿನ ಸಾಧನೆ ಗಮನಾರ್ಹವೇ. ಇದು ಇದ್ದುದರಲ್ಲೇ ಉತ್ತಮ. ಆದರೆ ಹಿಂದಿನ ಒಲಿಂಪಿಕ್ಸ್ ಕ್ರೀಡಾಕೂಟಗಳನ್ನೂ ಭಾರತದ ಸಾಧನೆ ಅಷ್ಟಕ್ಕಷ್ಟೇ. ಆಧುನಿಕ ಒಲಿಂಪಿಕ್ಸ್ ಕ್ರೀಡೆಗಳು 1900 ರಲ್ಲಿ ಆರಂಭವಾದವು. ಅಷ್ಟು ಹಿಂದಕ್ಕೆ ನಾವು ಹೋಗುವುದೇನೂ ಬೇಡ. 2000ದಿಂದ ಮಾತ್ರ ನೊಡೋಣ. ಎರಡು ದಶಕಗಳ ಸಾಧನೆಯನ್ನು ಗಮನ ಹರಿಸಿದರೆ ನಾವು ಎಲ್ಲಿದ್ದೇವೆ ಎಂಬುದು ಗೊತ್ತಾಗು ತ್ತದೆ.

ಸಿಡ್ನಿ ಒಲಿಂಪಿಕ್ಸ್, 2000-1 ಕಂಚು; 2004ರ ಅಥೆನ್ಸ್ ಕೂಟದಲ್ಲಿ 1 ಬೆಳ್ಳಿ; 2008, ಬೀಜಿಂಗ್-1 ಚಿನ್ನ, 2 ಕಂಚು; 2012, ಲಂಡನ್-2 ಬೆಳ್ಳಿ, 4 ಕಂಚು; 2016 ರಿಯೊ ಒಲಿಂಪಿಕ್ಸ್-1 ಬೆಳ್ಳಿ, 1 ಕಂಚು; 2020, ಟೋಕಿಯೊ ಒಲಿಂಪಿಕ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು. ಲಂಡನ್‌ನಲ್ಲಿ ಬಂದ 6 ಪದಕಗಳೇ ಇದುವರೆ ಗಿನ ನಮ್ಮ ಸಾರ್ವಕಾಲಿಕ ಶ್ರೇಷ್ಠ ಸಾಧನೆಯಾಗಿತ್ತು. ಹಾಕಿಯಲ್ಲಿ 8 ಚಿನ್ನ ಸಹಿತ 12 ಪದಕಗಳು ಬಂದಿವೆ. ಟಾಪ್ಸ್ ಮತ್ತಿತರ ಕಾರ್ಯಕ್ರಮಗಳ ಮೂಲಕ, ಸಾಕಷ್ಟು ಪ್ರೋತ್ಸಾಹ, ನೆರವಿನ ಮೂಲಕ ನಮ್ಮ ಪ್ರದರ್ಶನ ಕೊಂಚ ಸುಧಾರಿಸಿದೆ.

ಆದರೆ ಒಲಿಂಪಿಕ್ಸ್ ನಂಥ ಮಹಾನ್ ಕ್ರೀಡಾಕೂಟದಲ್ಲಿ ನಾವು ಟಾಪ್ ಟೆನ್ ಸ್ಥಾನಕ್ಕೆ ಬರುವುದು ಯಾವಾಗ ಎಂಬುದರತ್ತ ಗಮನಹರಿಸಲೇ ಬೇಕು. ಎಲ್ಲ ಕ್ಷೇತ್ರ ಗಳಲ್ಲೂ ನಾವು ಮುನ್ನಡೆ ಸಾಧಿಸುತ್ತಿರುವಾಗ ಕ್ರೀಡಾಕೂಟದಲ್ಲಿ ಮಾತ್ರ ಏಕೆ ಹಿಂದೆ ಉಳಿಯಬೇಕು ? ಟೋಕಿಯೊ ಒಲಿಂಪಿಕ್ಸ್‌ನ ಒಂದಷ್ಟು ಅಂಕಿ ಅಂಶ
ಗಳತ್ತ ಹಾಗೆಯೇ ಕಣ್ಣಾಡಿ ಸೋಣ. 205 ದೇಶಗಳ 11000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಇಲ್ಲಿ 36 ಆಟಗಳಿಗೆ ಸಂಬಂಽಸಿದಂತೆ 339 ಸ್ಪರ್ಧೆಗಳು ನಡೆದವು. ಕ್ರೀಡಾಕೂಟಕ್ಕೆ ತೆರೆಬೀಳುವ ಈ ಹೊತ್ತಲ್ಲಿ ಚೀನಾ ದೇಶವು 38 ಚಿನ್ನಗಳೊಂದಿಗೆ 87
ಪದಕಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ಅಮೆರಿಕವು 36 ಚಿನ್ನ ಸಹಿತ 108 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆತಿಥೇಯ ಜಪಾನ್ 27 ಚಿನ್ನದ ಪದಕ ಗಳೊಂದಿಗೆ ಒಟ್ಟು 56 ಪದಕ ಪಡೆದು 3ನೇ ಸ್ಥಾನದಲ್ಲಿದೆ. ಇದಲ್ಲದೆ ಬ್ರಿಟನ್, ರಷ್ಯಾ, ಆಸ್ಟ್ರೇಲಿಯಾ, ಜರ್ಮನಿ, ನೆದರ್ ಲ್ಯಾಂಡ್, ಇಟಲಿ, ಫ್ರಾನ್ಸ್ ದೇಶಗಳು ಮೊದಲ 10 ಸ್ಥಾನದಲ್ಲಿವೆ. ನಮ್ಮ ಭಾರತದ್ದು 47ನೇ ಸ್ಥಾನ. ಪದಕ ಗಳಿಸಿದ್ದೇ 83 ರಾಷ್ಟ್ರ ಗಳು. ಆ ಲೆಕ್ಕದಲ್ಲಿ ನಮ್ಮದು ಸಾಕಷ್ಟು ಹಿಂದಿನ ನಂಬರ್.

ಚಿನ್ನವಾದರೇನು, ಬೆಳ್ಳಿಯಾದರೇನು, ಕಂಚಾದರೇನು. ಪದಕ ಪದಕವೇ ಎನ್ನಬಹುದು. ಅದೂ ಸರಿಯೇ. ಆದರೆ ಒಂದು ಚಿನ್ನ, ಅಲ್ಲೊಂದು ಇಲ್ಲೊಂದು ಬೆಳ್ಳಿ, ಒಂದಷ್ಟು ಕಂಚಿನ ಪದಕ ಪಡೆದ ಮಾತ್ರಕ್ಕೆ ದೊಡ್ಡದನ್ನೇನೊ ಸಾಧಿಸಿದೆವೆಂದು ನಾವು ಬೀಗಬೇಕೆ? ನಾನು ಹೀಗೆ ಹೇಳಿದರೆ ಸಿನಿಕ ಎಂದ ಜರಿಯಬಹುದು. ಆದರೆ ಇಷ್ಟೊಂದು ಅಲ್ಪ ತೃಪ್ತರು ನಾವಾಗಬೇಕೆ? ಇಷ್ಟೇನಾ ನಮ್ಮ ಶಕ್ತಿ ಸಾಮರ್ಥ್ಯ ಎಂದು ನಮ್ಮನ್ನೇ ನಾವು ಕೇಳಿಕೊಂಡಾಗ, ಹೌದು ಎಂದೇ ಹೇಳ ಬೇಕಾಗು ತ್ತದೆ. ಏಕೆಂದರೆ ಅಂಕಿ ಅಂಶಗಳು ಸುಳ್ಳು ಹೇಳುವುದಿಲ್ಲ. ಆದರೆ ಇಂಥದ್ದೊಂದು ಸ್ಥಿತಿ ನಮಗೇಕೆ ಬಂದೊದಗಿದೆ? ಅಥವಾ ಇದರ ಬಗ್ಗೆ ನಮಗೇ ಏನೂ ಅನ್ನಿಸುವುದಿಲ್ಲವಾ ಎಂಬುದನ್ನು ಯೋಚಿಸಿದಾಗ ವಿಷಾದ, ವ್ಯಥೆ ಮತ್ತು ಬೇಸರವಾಗುತ್ತದೆ.

ಗೆಲ್ಲಬೇಕೆಂದು ಹೋದವನು ಸೋಲಲೂ ಸಿದ್ಧನಾಗಿರಬೇಕು ಎಂದು ಕವಿಯೊಬ್ಬರು ಹೇಳಿದ್ದಾರೆ. ಆದರೆ ಸೋಲಬೇಕೆಂದೇ ಯಾರೂ ಹೋಗುವುದಿಲ್ಲ, ಅಥವಾ ಹೋಗಬಾರದು ಎಂಬುದೂ ಅಷ್ಟೇ ನಿಜ. ಏಕೆಂದರೆ ನಾವು ಅಲ್ಲಿ ಫ್ಯಾಷನ್ ಪರೇಡಿಗೋ ಅಥವಾ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ದೇಶದ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗುವುದಕ್ಕೆ ಮಾತ್ರ ಹೋಗುವುದಲ್ಲ. ಮಧ್ಯೆ ನಡೆಯುವ ನಾನಾ ಬಗೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಗೆದ್ದು ಪದಕ ಬಾಚಿ
ತರಬೇಕೆಂಬ ಅಪೇಕ್ಷೆ, ನಿರೀಕ್ಷೆ ಆಟಗಾರರದೂ, ದೇಶದ ಜನರದ್ದೂ ಆಗಿರುತ್ತದೆ.

ಸೋಲು ಗೆಲುವುಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂಬುದು ಕ್ರೀಡಾಸ್ಫೂರ್ತಿ ಮೆರೆಯುವ ದ್ಯೋತಕದ ಮಾತು. ಅದನ್ನೇ ನಂಬಿ ನಾವು ಹೋದ ಪುಟ್ಟ, ಬಂದ ಪುಟ್ಟ ಎನಿಸಿಕೊಂಡರೆ ಹೇಗೆ? ಈ ಮಾತನ್ನು ಇಲ್ಲಿ ಯಾಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ಟೋಕಿಯೊ ಒಲಿಂಪಿಕ್ಸ್ ಮುಗಿಯಿತು ಎಂದರೆ ಮನೆಗೆ ಬಂದು ಮಲಗುವುದಲ್ಲ. ಏಕೆಂದರೆ ೨೦೨೪ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಇದೆ. 2020ರಲ್ಲೇ ಟೋಕಿಯೊ ಒಲಿಂಪಿಕ್ಸ್ ನಡೆಯಬೇಕಿತ್ತು. ಕೋವಿಡ್‌ನಿಂದಾಗಿ
ಮುಂದೆ ಹೋಗಿ ಈಗ ನಡೆಯುತ್ತಿದೆ. ಅಂದರೆ ಮುಂದಿನ ಒಲಿಂಪಿಕ್ಸ್‌ಗೆ ಇನ್ನು ಮೂರೇ ವರ್ಷ. ಅದಕ್ಕೆ ತಯಾರಿ ಈಗಿನಿಂದಲೇ ಆರಂಭವಾಗಬೇಕಾಗುತ್ತದೆ.
ಆದರೆ ಸಿದ್ಧತೆ ಹೇಗಿರಬೇಕು, ಎಲ್ಲಿಂದ, ಹೇಗೆ ಆರಂಭ ಎಂಬುದರ ಬಗ್ಗೆ ಯೋಚಿಸುವ ಮುನ್ನ ಈ ಒಲಿಂಪಿಕ್ಸ್ನಲ್ಲಿ ನಮ್ಮ ಸಾಧನೆ ಏನು ಎಂಬುದನ್ನು ವಿಶ್ಲೇಷಿಸ
ಬೇಕಾಗುತ್ತದೆ. ಇತರ ದೇಶಗಳ ಸಾಧನೆಯೊಂದಿಗೆ ತುಲನೆ ಮಾಡಬೇಕಾಗುತ್ತದೆ.

ನಮ್ಮ ಸ್ಥಾನ ಆಶಾದಾಯಕವಾಗಿಲ್ಲ ಎಂಬುದಕ್ಕೆ ಕನ್ನಡಿ ಏನೂ ಬೇಡ. ಆದರಂತೆ ಯಾವ ಯಾವ ರಾಷ್ಟ್ರಗಳ ಸಾಧನೆ ಯಾವ ರೀತಿ ಇದೆ ಎಂಬುದನ್ನು ನೊಡಿ ದರೆ ಒಂದು ಅಂದಾಜು ಸಿಗುತ್ತದೆ. ನಾವು ಸಾಗಬಹುದಾದ ಹಾದಿ ಗೋಚರಿಸುತ್ತದೆ. ಇದಕ್ಕೆ ಬಗೆ ಬಗೆಯ ರೀತಿಯಲ್ಲಿ ಹೋಲಿಕೆಗಳು ಸಿಗುತ್ತವೆ. ಅಮೆರಿಕ, ಚೀನಾ ದೇಶಗಳ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಎರಡೂ ಮುಂದುವರಿದ, ದೊಡ್ಡ ರಾಷ್ಟ್ರಗಳು. ಅವೆರಡೂ ಮೊದಲೆರಡು ಸ್ಥಾನದಲ್ಲಿವೆ. ಈ ಬಾರಿ ಚೀನಾ ದೇಶವು ಅಮೆರಿಕವನ್ನು ಹಿಂದಿಕ್ಕಿ ಅಗ್ರಸ್ಥಾನಿಯಾಗಿದೆ. ಕಳೆದ ಒಲಿಂಪಿಕ್ಸ್‌ನಲ್ಲಿ ಆರನೇ ಸ್ಥಾನದಲ್ಲಿದ್ದ ಜಪಾನ್ ಈಗ ಮೂರನೇ ಸ್ಥಾನಕ್ಕೆ ಜಿಗಿದಿದೆ.
ಹಾಗಾದರೆ ಚೀನಕ್ಕೆ ಇಂಥದೊಂದು ಅದ್ಭುತ ಸಾಧನೆ ಹೇಗೆ ಸಾಧ್ಯವಾಗುತ್ತದೆ? ವಿಸ್ತೀರ್ಣ, ಜನಸಂಖ್ಯೆಯಲ್ಲಿ ನಾವು ಆ ದೇಶದೊಂದಿಗೆ ಹೋಲಿಕೆ ಮಾಡಬಹುದು.

ಆದರೆ ಅದರ ಸಾಧನೆ ಎಲ್ಲಿ. ನಾವೆಲ್ಲಿ. ಅದು ಅಪರಂಜಿಯಾದರೆ ನಾವು ಗುಲಗಂಜಿ ಅನ್ನಬಹುದಷ್ಟೇ. ಅಮೆರಿಕವೂ ದೊಡ್ಡ ದೇಶ. ಶ್ರೀಮಂತ ರಾಷ್ಟ್ರ. ಹೀಗಾಗಿ
ಚೀನಾದ ಸನಿಹದಲ್ಲೇ ಇದೆ. ಆದರೆ ಜನ ಸಂಖ್ಯೆಯಲ್ಲಿ ಚೀನಾದ ಹತ್ತಿರ ಇರುವ, 500 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ಕಾಣುತ್ತಿರುವ ನಾವು ಒಲಿಂಪಿಕ್ಸ್ ಪದಕಗಳ ವಿಷಯದಲ್ಲಿ ಮಾತ್ರ ಇಷ್ಟೊಂದು ಕೆಳಕ್ಕೆ ಇರುವುದು ಹೇಗೆ ಮತ್ತು ಏಕೆ ಎಂಬುದರ ಪರಾಮರ್ಶೆ ಆಗಲೇಬೇಕು.

ಮತ್ತೊಂದು ಕೋನದಿಂದಲೂ ನೋಡೋಣ. ಡೊಮಿನಿಕನ್ ರಿಪಬ್ಲಿಕ್ ಎಂಬ ಪುಟ್ಟ ಕೆರಿಬಿಯನ್ ದ್ವೀಪರಾಷ್ಟ್ರ ಕೂಡ ನಮಗಿಂತ ಪದಕ ಪಟ್ಟಿಯಲ್ಲಿ ಮುಂದಿವೆ. ಉಗಾಂಡ, ಕೀನ್ಯಾದಂಥ ಬಡ ರಾಷ್ಟ್ರಗಳು ಎರಡು ಚಿನ್ನದ ಪದಕ ಪಡೆಯುತ್ತವೆ. ಬಹಾಮಾಸ್, ಕೊಸೊವೊ, ಹಾಂಗ್‌ಕಾಂಗ್- ಇವೆಲ್ಲ ಹಾಗೆ ನೋಡಿದರೆ
ಯಾವ ಸೀಮೆಯ ದೇಶ ಎನಿಸಬಹುದು. ಆದರೆ ಅವು ಕೂಡ ನಮಗಿಂತ ಮೇಲಿವೆ. ಜಮೈಕಾ ದೇಶದವರೇ ಓಟದಲ್ಲಿ ಸದಾ ಮುಂದೆ. ಕ್ಯೂಬಾ ದೇಶದ ಬಾಕ್ಸರ್‌ ಗಳು ಪದಕಪ್ರವೀಣರು. ಹೋಗಲಿ. ನ್ಯೂಜಿಲೆಂಡ್? ನಮ್ಮ ದೇಶದ ಸಣ್ಣ ರಾಜ್ಯದಷ್ಟಿರಬಹುದು. ಅದೂ ಕೂಡ ಪದಕ ಗಳಿಸಿದೆ. ಹಾಗಾದರೆ ನಮ್ಮದು ಬಡ ರಾಷ್ಟ್ರವೇ? ಅಲ್ಲ. ಚಿಕ್ಕ ದೇಶವೇ ಅದೂ ಅಲ್ಲ. ದೊಡ್ಡ ರಾಷ್ಟ್ರವಾಗಿರುವುದರಿಂದ ನಿಭಾಯಿಸುವುದು ಕಷ್ಟ ಎನ್ನಲಾಗದು.

ಏಕೆಂದರೆ ನಮಗಿಂತ ದೊಡ್ಡ ರಾಷ್ಟ್ರವಾದ ಚೀನಾ ದೊಡ್ಡ ಸಾಧನೆಯನ್ನೆ ಮೆರೆದಿದೆ. ಹೋಗಲಿ ನಮಗೂ, ಕ್ರೀಡೆಗೂ ಅಷ್ಟಕ್ಕಷ್ಟೇ ಎಂದರೆ ಅದೂ ಇಲ್ಲ. ಕ್ರಿಕೆಟ್ ನಮ್ಮ ಜೀವನದ ಹಾಸುಹೊಕ್ಕಾಗಿದೆ. ಅದು ಒಂದು ಧರ್ಮವಾಗಿದೆ. ಆ ಕ್ರೀಡೆಯಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದೇವೆ. ಅಪಾರವಾದ ಹಣವಿದೆ. ಆದರೆ
ಒಲಿಂಪಿಕ್ಸ್ ಬಗ್ಗೆ ಮಾತ್ರ ಏಕೆ ಹೀಗೆ ಎಂದು ಕೇಳಿದರೆ ನಮ್ಮ ಮನಸ್ಥಿತಿ, ಮನೋಭಾವ, ನಿರ್ಲಕ್ಷ್ಯ, ಅನಾದರ, ಅಸಡ್ಡೆ- ಹೀಗೆ ಎಷ್ಟೆಲ್ಲ ವಿಶೇಷಣಗಳಿವೆಯೋ ಅವೆಲ್ಲ ವನ್ನು ಬಳಸಿ ಹೇಳಬೇಕಾಗುತ್ತದೆ. ಅಲ್ಲದೆ ಇವು ಯಾವವೂ ಸರಿಯಾದ ಕಾರಣಗಳು ಎನಿಸುವುದೇ ಇಲ್ಲ. ಹೀಗಾಗಿ ಯಾವ ಕಾರಣ, ನೆಪ ಸಬೂಬನ್ನೂ ನಾವು ಹೇಳುವಂತಿಲ್ಲ.

ಮೊತ್ತ ಮೊದಲನೆಯದಾಗಿ ನಾವು ನಮ್ಮ ದೇಶದಲ್ಲಿನ ಕ್ರೀಡಾ ಮನೋಭಾವವನ್ನು ಬದಲಾಯಿಸಬೇಕಾಗಿದೆ. ಏಕೆಂದರೆ ಮಾಡಲು ಬೇರೇನೂ ಕೆಲಸ ಇಲ್ಲದಿರು ವವರು ಆಟವಾಡಲು ಹೋಗುತ್ತಾರೆ ಎಂಬ ಅಭಿಪ್ರಾಯ ಈಗಲೂ ಇದೆ. ಇದು ಬದಲಾಗಬೇಕು. ಕ್ರೀಡೆಗಳು ನಮ್ಮ ಜೀವನದ ಒಂದು ಭಾಗವಾಗಬೇಕು. ಅದಕ್ಕೆ
ಮಹತ್ವ, ಆದ್ಯತೆ ಸಿಗಬೇಕು. ಆಟವೆಂಬುದು ಕಾಲಕಳೆಯುವ, ಮನರಂಜನೆಯ ಉಪಾಯ ಎಂಬ ಮನಸ್ಥಿತಿ ಹೋಗಬೇಕು. ಅದನ್ನು ಒಂದು ವೃತ್ತಿಯನ್ನಾಗಿ,
ಬದುಕನ್ನಾಗಿ ಮಾಡಿಕೊಳ್ಳಬಹುದು ಎಂಬುದನ್ನು ಮಕ್ಕಳು, ಪಾಲಕರು ಇಬ್ಬರೂ ಅರಿಯಬೇಕು.

ಕ್ರೀಡೆಯ ಐದು ಪ್ರಮುಖ ಅಂಶಗಳನ್ನು ನಾವು ಗುರುತಿಸಿ, ಮಾನ್ಯ ಮಾಡಬೇಕು. ಅವು; ಕ್ರೀಡಾವಿಜ್ಞಾನ, ಕ್ರೀಡೌಷಧ, ಮಾನಸಿಕ ಸಿದ್ಧತೆ, ತರಬೇತಿ ಸ್ವರೂಪ ದಲ್ಲಿ ಬದಲಾವಣೆ-ಸುಧಾರಣೆ ಮತ್ತು ದತ್ತಾಂಶ ವಿಶ್ಲೇಷಣೆ. ಮೊದಲೆಲ್ಲ ಕ್ರೀಡೆಯನ್ನು ಒಂದು ಕಲೆ, ಪ್ರತಿಭೆ ಮತ್ತು ದೈಹಿಕ ಕ್ಷಮತೆ ಎಂದಷ್ಟೆ ಪರಿಗಣಿಸ ಲಾಗುತ್ತಿತ್ತು. ಆದರೆ ಇದೀಗ ಅದೊಂದು ವಿಜ್ಞಾನ. ಏಕೆಂದರೆ ಒಲಿಂಪಿಕ್ಸ್‌ನಂಥ ಕ್ರೀಡಾಕೂಟಗಳಲ್ಲಿ ಅಪರಿಮಿತ ಸ್ಪರ್ಧೆ ಇರುತ್ತದೆ.

ಮೆಡಲ್‌ಗಳು ಇರುವುದು ಮೂರೇ. ನಾಲ್ಕನೆಯವರಾಗಿ ಬಂದರೂ ನಾಲ್ಕು ವರ್ಷಗಳ ಪರಿಶ್ರಮಕ್ಕೆ ಫಲ ಸಿಗುವುದಿಲ್ಲ. ಹೀಗಾಗಿ ಕ್ರೀಡೆಯನ್ನು ಹೆಚ್ಚು ವೈಜ್ಞಾನಿಕ ರೀತಿಯಲ್ಲಿ ಆಡುವುದು, ನೋಡುವುದು ಮುಖ್ಯ. ಹೊಸ ಹೊಸ ಪರಿಕರಗಳು, ವೈಜ್ಞಾನಿಕ ಸಂಶೋಧನೆ, ವಿಶ್ಲೇಷಣೆ ಅತ್ಯಗತ್ಯ. ಉದಾಹರಣೆಗೆ ವಿದೇಶಗಳಲ್ಲಿ ಈಜುಪಟುಗಳು ಅಭ್ಯಾಸ ಮಾಡುತ್ತಿರುವಾಗ ಕೆಲವು ಯಂತ್ರಗಳ ಸಹಾಯದಿಂದ ನೀರಿನೊಳಗೆ ವೇಗ ಹೆಚ್ಚಿಸಿಕೊಳ್ಳುತ್ತಾರೆ. ಕ್ರೀಡಾ ಔಷಧವೂ ಮತ್ತೊಂದು ಪ್ರಮುಖ ಅಂಶ. ಔಷಧ ಎಂದ ತಕ್ಷಣ ಉದ್ದೀಪನ ಮದ್ದು ಕೊಡುವುದು ಎಂಬ ಭಾವನೆ ಮೊದಲು ಇತ್ತು. ಆದರೆ ನಮ್ಮ ಕ್ರೀಡಾಪಟುಗಳ ದೈಹಿಕ ಕ್ಷಮತೆ, ದೇಹಸ್ವರೂಪಕ್ಕೆ ಅನುಗುಣವಾಗಿ ಆಹಾರ, ಅಭ್ಯಾಸ ಪದ್ಧತಿಗಳನ್ನು ರೂಢಿಸಿಕೊಳ್ಳಬೇಕು.

ಅಂದರೆ ವಿದೇಶಿ ಪದ್ಧತಿಗಳಿಗೆ ಜೋತು ಬೀಳದೆ ನಮ್ಮದೇ ಆದ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಮಾನಸಿಕ ದೃಢತೆ, ಕ್ಷಮತೆ ಮತ್ತೊಂದು ಮುಖ್ಯ ವಾದ ವಿಷಯ. ಒಲಿಂಪಿಕ್ಸ್‌ನಂಥ ಕ್ರೀಡಾಕೂಟದಲ್ಲಿ ಸ್ಪರ್ಧೆಯು ಬೇರೆಯದೇ ಆದ ಸ್ಥಿತಿಗತಿ. ಅಲ್ಲಿ ಘಟಾನುಘಟಿಗಳ ಎದುರು ಸ್ಪರ್ಧಿಸಬೇಕಾಗುವುದರಿಂದ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ವಾಗಿಯೂ ಗಟ್ಟಿಯಾಗಿರಬೇಕಾಗುತ್ತದೆ ಇದರಿಂದ ಅನೇಕ ಸಲ ಎದುರಾಳಿಗಳನ್ನು ಮಣಿಸಬಹುದಾಗಿದೆ.

ತರಬೇತುದಾರರ ಪಾತ್ರವೂ ಬಹಳ ಮಹತ್ವದ್ದು. ಅವರೂ ಕೂಡ ಇಂದಿನ ಅಗತ್ಯಕ್ಕೆ ಅನುಗುಣವಾಗಿ ಅಪ್ ಡೇಟ್ ಆಗಿದ್ದು ಕ್ರೀಡಾಪಟುಗಳಿಗೆ ಅತ್ಯುತ್ತಮವಾದ
ಕೋಚಿಂಗ್ ಕೊಡಬೇಕು. ಅಲ್ಲದೆ ಗ್ರಾಮಾಂತರ ಮಟ್ಟದ ವರೆಗೂ ತರಬೇತುದಾರರ ಲಭ್ಯತೆ ಇರಬೇಕು. ಆಗ ನಮ್ಮ ಸಾಧನೆ ಮತ್ತು ಯಶಸ್ಸಿನ ಮಟ್ಟ ಬೇರೆ ಯದೇ ಆಗಿರುತ್ತದೆ.

ಇನ್ನು ಕೊನೆಯದಾಗಿ, ಆದರೆ ಅತಿಮುಖ್ಯವಾಗಿ ಕ್ರೀಡಾಪಟುಗಳಿಗೆ ಸಹಾಯ ಸೌಲಭ್ಯ, ನೆರವು ಮತ್ತು ಮೂಲಸೌಕರ್ಯ ಒದಗಿಸುವುದರ ಪಾತ್ರ ಅಸಾಧಾರಣ
ವಾದುದು. ಸೌಲಭ್ಯ ಎಂದರೆ ಕ್ರೀಡಾಂಗಣ, ಕ್ರೀಡಾ ಹಾಸ್ಟೆಲ್, ಶಾಲೆ, ತರಬೇತಿ ಕೇಂದ್ರಗಳ ಸ್ಥಾಪನೆ ಅಷ್ಟೇ ಅಲ್ಲ. ಅವುಗಳ ಉತ್ತಮ ನಿರ್ವಹಣೆ ಆಗಬೇಕು.
ಕ್ರೀಡಾಪಟುಗಳಿಗೆ ಸಿದ್ಧತೆ ಮತ್ತು ತರಬೇತಿಗೆ ಅಗತ್ಯವಾದ ಪರಿಕರಗಳನ್ನು ಒದಗಿಸ ಬೇಕಾಗುತ್ತದೆ. ಅವರಿಗೆ ಧನಸಹಾಯ ಮತ್ತಿತರ ನೆರವೂ ಬೇಕಾಗುತ್ತದೆ.
ಹಾಗಾದರೆ ಸರಕಾರ ಈ ನಿಟ್ಟಿನಲ್ಲಿ ಏನೂ ಮಾಡುತ್ತಿಲ್ಲವೆ? ಮಾಡುತ್ತಿದೆ. ಆದರೆ ಸಾಲದು. ಕೇಂದ್ರ ಕ್ರೀಡಾ ಸಚಿವಾಲಯದ ಅಡಿಯಲ್ಲಿ ಟಾರ್ಗೆಟ್ ಒಲಿಂಪಿಕ್
ಪೋಡಿಯಂ ಸ್ಕೀಮ್ (ಟಾಪ್ಸ್) ಎಂಬ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಡಿ ದೇಶದ ಪ್ರಮುಖ ಕ್ರೀಡಾಪಟುಗಳಿಗೆ ಹಣಕಾಸು ಮತ್ತಿತರ
ನೆರವು ನೀಡುವ ಯೋಜನೆ ಇದು.

2016-2020ರ ವರೆಗಿನ ಯೋಜನೆ ಇದಾಗಿತ್ತು. ತನಗೆ ಅಮೆರಿಕದಲ್ಲಿ ತರಬೇತಿ ಪಡೆಯಲು ಅಗತ್ಯ ನೆರವು ಒದಗಿಸಲಾಯಿತು ಎಂದು ಬೆಳ್ಳಿ ಗೆದ್ದ ವೇಟ್ ಲಿಫ್ಟರ‍್ ಮೀರಾಬಾಯಿ ಚಾನು ಹೇಳಿದ್ದಾರೆ. ಸಂತೋಷ. ಆದರೆ ಇತರರ ಪರಿಸ್ಥಿತಿ ಏನು? ಸಹಾಯ, ಸಹಕಾರ ಪಡೆದ ಮೇಲೂ ಅವರ ಸಾಧನೆ ಏಷ್ಟು ಎಂಬುದರ ವಿಶ್ಲೇಷಣೆ ಅಗತ್ಯ. ಕೇಂದ್ರ ಸರಕಾರ ಬಜೆಟ್‌ನಲ್ಲಿ ಕ್ರೀಡೆಗೆ ನೀಡುತ್ತಿರುವ ಅನುದಾನದಲ್ಲಿ ಸಾಕಷ್ಟು ಹೆಚ್ಚಳ ಮಾಡುತ್ತ ಬಂದಿದೆ. 2016ರಲ್ಲಿ ಕೇವಲ
97 ಕೋಟಿ ರು ಇದ್ದ ಹಂಚಿಕೆ 2021 ರ ಹೊತ್ತಿಗೆ 2826 ಕೋಟಿಗೆ ಏರಿದೆ. ಆದರೆ ಹಿಂದೆ ಕ್ರೀಡೆಗೆ ಏನೇನೂ ಅನುದಾನ ಇರಲಿಲ್ಲ.

ನಾವು ಇಷ್ಟೊಂದು ಕೊಟ್ಟಿದ್ದೇವೆ ನೋಡಿ ಎಂದು ಹೇಳುವುದಲ್ಲ. ಇದರ ಉಪಯೋಗ ಹೇಗೆ ಮತ್ತು ಎಷ್ಟರ ಮಟ್ಟಿಗೆ ಆಗಿದೆ; ಅದರ ಫಲಿತಾಂಶವೇನು ಎಂಬಿತ್ಯಾದಿ ವಿಶ್ಲೇಷಣೆಗಳು ಆಗಬೇಕಾಗುತ್ತದೆ. ಏಕೆಂದರೆ ಸಿರಿವಂತರು, ಉತ್ತಮ ಸೌಲಭ್ಯ ಇದೆ ಎಂಬ ಮಾತ್ರಕ್ಕೇ ಯಾರೂ ಗೆಲ್ಲಲಾಗದು. ಅವರ ಪರಿಶ್ರಮ ಮತ್ತು ಪ್ರತಿಭೆಯೂ ಮುಖ್ಯ. ಹಾಗೆಯೇ ಏನೇನೂ ಸೌಲಭ್ಯ, ಪ್ರೋತ್ಸಾಹ ಇಲ್ಲದೆಯೂ ಅದ್ಭುತ ಸಾಧನೆ ಮಾಡಿದವರು ಸಾಕಷ್ಟು ಮಂದಿ ಸಿಗುತ್ತಾರೆ. ಮೀರಾಬಾಯಿ ಚಾನು ತರಬೇತಿಗೆ ಟ್ರಕ್‌ನಲ್ಲಿ ಹೋಗುತ್ತಿದ್ದರು; ಮತ್ತೊಬ್ಬ ಹಾಕಿ ಆಟಗಾರ್ತಿಯ ಬಳಿ ಹಾಕಿ ಸ್ಟಿಕ್ ಕೂಡ ಇರಲಿಲ್ಲ; ಹಿಮಾ ದಾಸ್ ಬಳಿ ಓಡಲು ಸ್ಪೋರ್ಟ್ಸ್
ಶೂಗಳೂ ಇರಲಿಲ್ಲ; ಮನೆಯಲ್ಲಿ ಕಡುಬಡತನ- ಎಂಬಿತ್ಯಾದಿ ಕತೆಗಳು ಹೇರಳವಾಗಿವೆ. ಆದರೂ ಅವರು ಅವನ್ನೆಲ್ಲ ಮೆಟ್ಟಿ ನಿಂತು ಸಾಧನೆ ಮೆರೆದಿದ್ದಾರೆ.

ಚೀನದಲ್ಲಿ ಒಲಿಂಪಿಕ್ಸ್ ತರಬೇತಿ ಕಠಿಣಾತಿಕಠಿಣವಾಗಿರುತ್ತದೆ ಎಂಬ ಬಗ್ಗೆ ಸಾಕಷ್ಟು ವರದಿಗಳನ್ನು ನೋಡಿದ್ದೇವೆ. ಇದು ಅಮಾನವೀಯ ರೀತಿಯಲ್ಲಿರುತ್ತದೆ ಎಂಬ ಮಾತುಗಳೂ ಇವೆ. ನಾವು ಹಾಗೆಲ್ಲ ಮಾಡಬೇಕೆಂದಿಲ್ಲ. ಆದರೆ ಅರ್ಹ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಏನೆಲ್ಲ ಬೇಕೊ ಅವೆಲ್ಲ ಸೌಲಭ್ಯಗಳನ್ನು ಯಾವುದೇ ಲೋಪವಿಲ್ಲದೆ ಒದಗಿಸಬೇಕು. ಅದಕ್ಕಾಗಿ ಈಗಿನಿಂದಲೇ ಕೆಲಸ ಆರಂಭವಾಗಬೇಕು. ಇದು ನಿರಂತರ ಕೆಲಸವಾಗಿರಬೇಕು. ಕ್ರೀಡೆಯಲ್ಲಿ ರಾಜಕೀಯ ಮತ್ತಿತರ ವಿಷಯಗಳ ಪ್ರವೇಶಕ್ಕೆ ಅವಕಾಶ ಇರಬಾರದು.

ಚೀನಾಗೆ, ಜಪಾನ್‌ಗೆ ಸಾಧ್ಯವಾಗಬಹುದಾದರೆ; ಬಡರಾಷ್ಟ್ರಗಳಿಗೂ ಸಾಧ್ಯವಾಗಬಹುದಾದರೆ, ನಮಗೇಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ಉತ್ತರವನ್ನೂ ಕಂಡು ಕೊಳ್ಳಬೇಕು. ೨೦೪೦ರ ವೇಳೆಗೆ ಟಾಪ್ ಟೆನ್ ಪಟ್ಟಿಯಲ್ಲಿ ಬರುಬೇಕೆಂಬ ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಗಂಭೀರವಾಗಿ ಕಾರ್ಯ ಪ್ರವೃತ್ತವಾಗಬೇಕು. ಮನಸ್ಸಿದ್ದರೆ ಮಾರ್ಗ. ಸತತ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು.

ನಾಡಿಶಾಸ್ತ್ರ
ದೊಡ್ಡವರದೂ ದೊಡ್ಡ ಸಾಧನೆ
ಬಡರಾಷ್ಟ್ರಗಳದೂ ಬಡಾ ಸಾಧನೆ
ಹಾಗಾದರೆ ನಮಗೇನು ವೇದನೆ
ಮಾಡೋಣ ಉತ್ತಮ ಸಾಧನೆ ಪ್ರತಿಜ್ಞೆ