Sunday, 21st April 2024

ಇರಲಿ ಬದುಕಿನ ಕುರಿತು ಸಕಾರಾತ್ಮಕ ಮನೋಭಾವ

ಶ್ವೇತ ಪತ್ರ

shwethabc@gmail.com

ಇನ್ನೊಬ್ಬರು ಬದಲಾಗಲೆಂದು ಒಬ್ಬರು ಮನವೊಲಿಸುವುದಕ್ಕಿಂತ, ವ್ಯಕ್ತಿ ಒಳಗಿನಿಂದ ತಾನೇ ಬದಲಾಗುತ್ತಾ ಹೋಗಬೇಕು; ಇನ್ನೊಬ್ಬರ ಮನಸ್ಸಿನ ಕಿಟಕಿಯನ್ನು ನಾವು ವಾದದಿಂದಲೋ ಭಾವನಾತ್ಮಕವಾಗಿಯೋ ಬದಲಾಯಿಸಲು ಸಾಧ್ಯವಿಲ್ಲ. ಸಾಧ್ಯವಾದರೂ ಅದು ಬರೀ ಬಲವಂತವಾಗಿಬಿಡುತ್ತದೆ.

ಬದುಕಿನ ಪ್ರತಿ ಸಂದರ್ಭವನ್ನು, ಅಲ್ಲಿ ಎದುರಾಗುವ ವ್ಯಕ್ತಿಗಳನ್ನು ನಾವು ನೋಡುವ, ಅರ್ಥೈಸುವ, ವಿಶ್ಲೇಷಿ ಸುವ, ಅವರ ಕುರಿತು ಆಲೋಚಿಸುವ, ಅವರೊಂದಿಗೆ ವರ್ತಿಸುವ ವಿಧಾನವೇ ಮನೋಭಾವ. ಮನೆಯ ಟಿಫನ್ ಬಾಕ್ಸ್ ತರಹ ಇದು ಮನಸ್ಸಿನ ಮೆಂಟಲ್ ಬಾಕ್ಸ್. ನಿಮ್ಮನೆಗೆ ಯಾರೋ ಸ್ನೇಹಿತರು ಬಂದಿದ್ದಾರೆಂದು ಕೊಳ್ಳೋಣ. ಅವರಿಗೆ ಬಾಯಾರಿದೆ, ಕುಡಿಯಲು ನೀರು ಕೇಳುತ್ತಾರೆ. ನೀವು ಅವರಿಗೆ ಅರ್ಧ ಗ್ಲಾಸ್ ನೀರು ಕೊಡುತ್ತೀರಿ.

ಆ ವ್ಯಕ್ತಿ ಸಕಾರಾತ್ಮಕ ಮನೋಭಾವದವರಾಗಿದ್ದರೆ, ‘ಗ್ಲಾಸ್ ಅರ್ಧ ತುಂಬಿದೆ’ ಎಂದು ಭಾವಿಸುತ್ತಾರೆ; ನಕಾರಾತ್ಮಕ ಮನೋಭಾವದವರಾಗಿದ್ದರೆ, ‘ಗ್ಲಾಸ್ ಅರ್ಧ ಖಾಲಿಯಿದೆ’ ಎಂದು ಪರಿಭಾವಿಸುತ್ತಾರೆ. ಯೋಚನಾ ಧಾಟಿಯಲ್ಲಿನ ವ್ಯತ್ಯಾಸವದು! ‘ಕೆಲವು ವ್ಯಕ್ತಿಗಳು ಮಾತ್ರವೇ ಬದುಕಲ್ಲಿ ಯಶಸ್ಸು ಕಾಣುತ್ತಾರೆ, ಯಾಕೆ?’ ಈ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವುದು ಸಹಜ. ಈ ಪ್ರಶ್ನೆಗೆ ಸರಳ ಉತ್ತರ: ಯಶಸ್ವಿ ವ್ಯಕ್ತಿಯ ಸಕಾರಾತ್ಮಕ ಮನೋಭಾವ, ಸ್ವಯಂನಂಬಿಕೆ ಮತ್ತು ದೃಢನಿರ್ಣಯ. ನಿಮ್ಮ ಸೋಲು ಮತ್ತು ಗೆಲುವಿನ ನಡುವಿನ ಮುಖ್ಯ ಅಂಶವೇ ‘ಮನೋಭಾವ’.

ಹಾಕಿ ಪಂದ್ಯವೊಂದರಲ್ಲಿ ಸ್ಟ್ರೈಕರ್‌ನೊಬ್ಬ ಗೋಲು ಹೊಡೆಯಬೇಕು. ಆಟದಲ್ಲಿನ ಎಲ್ಲಾ ಡಿಫೆಂಡರ್‌ಗಳನ್ನು ಆತ ನಿಭಾಯಿಸಿ, ಗೋಲ್ ಕೀಪರ್‌ನೊಂದಿಗೂ ಸೆಣಸಿ ಗೋಲು ಹೊಡೆಯಲು ಹೊರಟಿರುತ್ತಾನೆ. ಆತ ಗೋಲು ಹೊಡೆಯುತ್ತಾನೋ? ಮಿಸ್ ಮಾಡುತ್ತಾನೋ? ಇದನ್ನು ನಿರ್ಧರಿಸುವ ಅಂಶ ಅದಾವುದು? ಆತನ ಮನೋಭಾವ ಸಕಾರಾತ್ಮಕವಾಗಿದ್ದು, ಅವನೊಳಗೆ ದೃಢವಿಶ್ವಾಸವಿದ್ದರೆ ಆತ ತನ್ನ ಪ್ರಯತ್ನದಲ್ಲಿ ಗೋಲು ಹೊಡೆಯುವುದು ಗ್ಯಾರಂಟಿ. ನಮ್ಮ ವರ್ತನೆ ನಮ್ಮದೇ ಆಲೋಚನೆಯ ಪ್ರತಿಬಿಂಬ. ನಿಮಗೆ ಇಷ್ಟವಾದರೆ ಬದಲಾಯಿಸಿ, ಅದು ಸಾಧ್ಯ ವಾಗದೆ ಹೋದರೆ ನೀವೇ ಬದಲಾಗಿ. ಆದರೆ ದೂರುವುದನ್ನು ಮಾತ್ರ ನಿಲ್ಲಿಸಿಬಿಡಿ. ಸಕಾರಾತ್ಮಕ ಮನೋಭಾವವುಳ್ಳ ವ್ಯಕ್ತಿ, ಸವಾಲು-ಸಮಸ್ಯೆಗಳನ್ನು ಅಡೆತಡೆಗಳಾಗಿ ನೋಡುವುದಿಲ್ಲ, ಬದಲಾಗಿ ಮೇಲೇರಲು ಸಿಕ್ಕ ಏಣಿ ಎಂದೇ ಪರಿಗಣಿಸುತ್ತಾನೆ.

ಏಳು-ಬೀಳುಗಳನ್ನು ನಿಭಾಯಿಸುವುದೂ ಒಂದು ಕಲೆ; ಬಿದ್ದಾಗ ‘ನೋವಾಯಿತಲ್ಲ’ ಎಂದು ಕೊರಗುತ್ತ ಕೂರುವುದಕ್ಕಿಂತ ಬಿದ್ದಿದ್ದಕ್ಕೆ ಕಾರಣಗಳನ್ನು ಹುಡುಕಿ ತೆಗೆದು ಮುಂದಿನ ಬಾರಿಯ ಯತ್ನದಲ್ಲಿ ಹಾಗಾಗದಂತೆ ಎಚ್ಚರ ವಹಿಸುವುದೇ ಆ ಕಲೆಯಾಗಿರುತ್ತದೆ. ‘ಜನರು ಸಕಾರಾತ್ಮಕ ಮನೋಭಾವದೊಂದಿಗೆ ಹುಟ್ಟಿ
ರುತ್ತಾರೆಯೇ ಅಥವಾ ಅದು ಬೆಳವಣಿಗೆಯ ಹಂತದಲ್ಲಿ ರೂಢಿಸಿಕೊಳ್ಳುವಂಥದ್ದೇ?’ ಎಂಬುದು ನನಗೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ. ಮನೋಭಾವ ವೆಂಬುದು ಚಿಕ್ಕ ವಯಸ್ಸಿನಲ್ಲಿಯೇ ತನ್ನ ಆಕರವನ್ನು, ರೂಪವನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

ನಾವು ಬದುಕುತ್ತಿರುವ ಪರಿಸರ, ನಮ್ಮ ಕುಟುಂಬ, ಶಾಲೆ, ಸಮಾಜ, ಮಾಧ್ಯಮಗಳು, ರಾಜಕೀಯ, ಧರ್ಮ, ಸಂಸ್ಕೃತಿ ಹೀಗೆ ನಮ್ಮ ಸುತ್ತಲಿನ ಎಲ್ಲವೂ ನಮ್ಮ ಮನೋಭಾವವನ್ನು ರೂಪಿಸುತ್ತವೆ. ಎರಡನೆಯ ಮಹಾಯುದ್ಧದ ಪರಿಣಾಮವಾಗಿ ಉಂಟಾದ ಅಸ್ಥಿರತೆಗಳು ಜಪಾನಿಯರ ಮನೋಭಾವ ದಲ್ಲಿ ತಂದ ಬಹು ದೊಡ್ಡ ಬದಲಾವಣೆ ಇದಕ್ಕೆ ಪೂರಕ ಉದಾಹರಣೆ. ಇಂದಿಗೂ ಜಪಾನಿಯರು ತಮ್ಮ ಪರಿಶ್ರಮದ ಮತ್ತು ಪ್ರಾಮಾಣಿಕತೆಯ ಕೆಲಸಕ್ಕೆ, ಮನೋಭಾವಕ್ಕೆ ಹೆಸರುವಾಸಿಯಾಗಿಲ್ಲವೇ? ನಕಾರಾತ್ಮಕ ಜನರು ಹಾಗೂ ಪರಿಸರದ ನಡುವೆ ಸಕಾರಾತ್ಮಕವಾಗಿ ಯೋಚಿಸುವುದು ಸ್ವಲ್ಪ ಕಷ್ಟವೇ. ಅಮಾನವೀಯ ತಾಲಿ ಬಾನಿನ ಕೋಟೆಯೊಳಗೆ ದೇಶದ ಪ್ರಗತಿ ಹಾಗೂ ಸಮೃದ್ಧಿಯ ಬಗ್ಗೆ, ಮಾನವೀಯತೆಯ ಬಗ್ಗೆ ಯೋಚಿಸುವುದು ಸಾಧ್ಯವೇ? ಅಂಥ ಸಂದರ್ಭದಲ್ಲಿ, ಸಕಾರಾತ್ಮಕ ಆಲೋಚನೆಗಳನ್ನು ಉಳಿಸಿಕೊಳ್ಳಲು ಆ ಜಾಗವನ್ನು ಬಿಟ್ಟು ನಡೆದುಬಿಡಬೇಕು.

ಒಂದು ಮಷೀನು ೫೦ ಸಾಧಾರಣ ಮಂದಿಯ ಕೆಲಸವನ್ನು ಮಾಡಿಬಿಡುತ್ತದೆ, ಆದರೆ ಅದೇ ಮಷೀನಿಗೆ ವಿಶೇಷ ಪ್ರೇರಣೆ ಹೊಂದಿದ ಸ್ಫೂರ್ತಿಭರಿತ ವ್ಯಕ್ತಿ ಯೊಬ್ಬನ ಕೆಲಸವನ್ನು ಮಾಡಲಾಗದು. ಸಕಾರಾತ್ಮಕ ಮನೋಭಾವಕ್ಕಿರುವ ಪವರ್ ಅದು. ನಕಾರಾತ್ಮಕ ಆಲೋಚನೆ ಎಂದಿಗೂ ವೈರಸ್ ಇದ್ದ ಹಾಗೆ, ಅದು ತನ್ನದೇ ಅಸಮಾಧಾನಗಳನ್ನು ಸೃಷ್ಟಿಸುತ್ತಾ ಎಲ್ಲಾ ಸಂಬಂಧಗಳ ಮೇಲೂ ಅಡ್ಡ ಪರಿಣಾಮವನ್ನೇ ಬೀರುತ್ತಾ ಹೋಗುತ್ತದೆ. ನಕಾರಾತ್ಮಕ ಮನೋಭಾವ ನಮ್ಮ ಪಾಲಿಗೆ ಕೆಟ್ಟದ್ದು ಎಂದು ಗೊತ್ತಿದ್ದರೂ ನಾವೇಕೆ ಅದನ್ನು ಬದಲಿ ಸುವ ಗೋಜಿಗೆ ಹೋಗುವುದಿಲ್ಲ? ಇದಕ್ಕೆ ಉತ್ತರವೂ ಬಹಳ ಸರಳ: ಸ್ವಭಾವತಃ ನಾವು ಯಾವುದೇ ಬದಲಾವಣೆ ಯನ್ನು ವಿರೋಧಿಸುತ್ತೇವೆ.

ಯಾವುದೇ ಬದಲಾವಣೆ ಅದು ಒಳ್ಳೆಯದಿರಲಿ, ಕೆಟ್ಟದಿರಲಿ ಅದನ್ನು ಅಪ್ಪುವುದು ನಮಗೆ ಕಷ್ಟ, ನಮಗೆ ಅಭ್ಯಾಸವಾಗಿ ಹೋಗಿರುವ ಮನೋಭಾವಕ್ಕೆ ಮನಸ್ಸು ಮತ್ತೆ ಮರಳುತ್ತಿರುತ್ತದೆ. ಇನ್ನೊಬ್ಬರು ಬದಲಾಗಲೆಂದು ಒಬ್ಬರು ಮನವೊಲಿಸುವುದಕ್ಕಿಂತ, ವ್ಯಕ್ತಿ ಒಳಗಿನಿಂದ ತಾನೇ ಬದಲಾಗುತ್ತಾ ಹೋಗಬೇಕು; ಇನ್ನೊಬ್ಬರ ಮನಸ್ಸಿನ ಕಿಟಕಿಯನ್ನು ನಾವು ವಾದದಿಂದಲೋ ಭಾವನಾತ್ಮಕವಾಗಿಯೋ ಬದಲಾಯಿಸಲು ಸಾಧ್ಯವಿಲ್ಲ. ಸಾಧ್ಯವಾದರೂ ಅದು ಬರೀ ಬಲವಂತವಾಗಿ ಬಿಡುತ್ತದೆ.

ಆಪ್ತ ಸಮಾಲೋಚನೆಯ ಸಂದರ್ಭವೊಂದರಲ್ಲಿ ನನಗಾದ ಅನುಭವವನ್ನು ಇಲ್ಲಿ ಹಂಚಿಕೊಳ್ಳಲೇಬೇಕು: ಶ್ರೀನಿಧಿ ೨೮ರ ಹರೆಯದ ಹುಡುಗ. ಅವನ ತಂದೆ ಶಾಲಾ ಶಿಕ್ಷಕರಾಗಿದ್ದವರು, ಮಧ್ಯಮ ವರ್ಗದ ಬದುಕು. ಆದರೂ ಶ್ರೀನಿಧಿ ದೆಹಲಿಯ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಎಂಬಿಎ ಮುಗಿಸಿದ. ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತು. ಬಹಳ ಸರಳವಾಗಿ ಬೆಳೆದಿದ್ದ ಶ್ರೀನಿಧಿ ತನ್ನ ಉಡುಗೆ-ತೊಡುಗೆ, ಮಾತುಕತೆ, ಸ್ವಭಾವ ಎಲ್ಲದರಲ್ಲೂ ಅಷ್ಟೇ ಸರಳತೆಯನ್ನೂ, ಕೊಂಚ ನಾಚಿಕೆ ಸ್ವಭಾವವನ್ನೂ ರೂಢಿಸಿಕೊಂಡಿದ್ದ. ಎಲ್ಲರೊಂದಿಗೂ ಅಷ್ಟು ಸುಲಭಕ್ಕೆ ಬೆರೆಯದ ಅವನಿಗೆ ಹೈ– ಲೈಫ್ ಕೊಂಚ ಕಷ್ಟವಾಗಿತ್ತು, ಜತೆಗೆ ಇಂಗ್ಲಿಷ್ ಸವಾಲಾಗಿತ್ತು. ಶ್ರೀನಿಽ ತನ್ನ ಪ್ರಾಜೆಕ್ಟ್ ಮ್ಯಾನೇಜರ್ ರಾಜೀವನ ಕೆಳಗೆ ಕೆಲಸ ಮಾಡಬೇಕಿತ್ತು. ರಾಜೀವನ ವಿದ್ಯಾರ್ಹತೆ ಶ್ರೀನಿಽಯಷ್ಟು ಇಲ್ಲದಿದ್ದರೂ, ಆತನ ಭಾಷಾ ಸಂವಹನ ಸಾಮರ್ಥ್ಯ ಬಹಳ ವಿಶೇಷ ವಾಗಿತ್ತು, ಹೈ-ಫೈ ಇಂಗ್ಲಿಷ್‌ನಲ್ಲಿ ಮಾತಾಡುವುದು
ಅವನಿಗೆ ಕರತಲಾಮಲಕವಾಗಿತ್ತು.

ಮಾರ್ಕೆಟಿಂಗ್ ವಲಯದಲ್ಲಿ ಮಾತಾಡುವ ಕಲೆ ಬಹಳ ಮುಖ್ಯ, ಆದರೆ ಐಐಟಿ ಪದವೀಧರನಾಗಿದ್ದರೂ ಶ್ರೀನಿಧಿಗೆ ತನ್ನ ಮೂಲ ಸ್ವಭಾವವನ್ನು ಬದಲಾಯಿಸಿ ಕೊಳ್ಳುವ ಮನೋಭಾವ  ಅದ್ಯಾಕೋ ಮೈಗೂಡಲಿಲ್ಲ. ಹೀಗಾಗಿ ರಾಜೀವ ಮತ್ತು ಶ್ರೀನಿಧಿಯ ಮಧ್ಯೆ ಘರ್ಷಣೆ ನಡೆಯುತ್ತಿತ್ತು. ಶ್ರೀನಿಧಿ ತನ್ನ ತಂಡದಲ್ಲಿರುವುದು ರಾಜೀವನಿಗೆ ಬೇಕಾಗಿರಲಿಲ್ಲ, ಆದರೆ ಶ್ರೀನಿಧಿಗೆ ಸಂಸಾರದ ನಿರ್ವಹಣೆಗೆ ಕೆಲಸ ಅಗತ್ಯವಾಗಿತ್ತು, ಅನಿವಾರ್ಯವಾಗಿತ್ತು. ಈ ವಿಷಯ ಶ್ರೀನಿಧಿಯ ಮನಸ್ಥಿತಿಯಲ್ಲಿ ವ್ಯತ್ಯಾಸ ಮೂಡಿಸತೊಡಗಿ, ಕ್ರಮೇಣ ಆತ ಸಹೋದ್ಯೋಗಿಗಳೊಂದಿಗೆ ವ್ಯವಹರಿಸು ವಾಗಲೂ ತನ್ನೆಲ್ಲ ಹತಾಶೆಗಳನ್ನು ಕೋಪದ ಮೂಲಕ ಹೊರ ಹಾಕ ತೊಡಗಿದ. ತನ್ನ ದೃಢ ಅನಿಸಿಕೆಗಳಿಗೂ ಕೋಪದ ಲೇಪ ನೀಡತೊಡಗಿದ.

ಸಹೋದ್ಯೋಗಿಗಳು ನಿಧಾನವಾಗಿ ಅವನಿಂದ ದೂರವಿರಲು ಯತ್ನಿಸತೊಡ ಗಿದರು. ಪರಿಣಾಮ, ಎಲ್ಲರಿಂದ ತಿರಸ್ಕೃತನಾಗಿ ಅತಿ ಒತ್ತಡಕ್ಕೆ ಒಳಗಾದ ಶ್ರೀನಿಧಿ ತನ್ನ ಕೆಲಸವನ್ನು ಉಳಿಸಿಕೊಳ್ಳಲು ಹೆಣಗಾಡತೊಡಗಿದ. ಇಲ್ಲಿ ಶ್ರೀನಿಧಿ ಮುಖ್ಯವಾಗಿ ಅನೇಕ ಪ್ರಶ್ನೆಗಳನ್ನು ನಮ್ಮೆದುರು ಇಡುತ್ತಾ ಹೋಗುತ್ತಾನೆ: ಐಐಟಿಯಲ್ಲಿ ಪದವಿ ಪಡೆದಿದ್ದರೂ ಕಾರ್ಯಕ್ಷೇತ್ರದಲ್ಲಿ ಶ್ರೀನಿಽ ಸೋತಿದ್ದೇಕೆ? ಸಹೋದ್ಯೋಗಿಗಳೊಂದಿಗೆ ಆತ ಸಹಮತದ ಸಂಬಂಧವನ್ನು ಹೊಂದಿದ್ದನೇ? ಕೆಲಸವನ್ನು ಸರಿದೂಗಿಸಿಕೊಂಡು ಹೋಗಲು ಶ್ರೀನಿಧಿಗೆ ಸಾಧ್ಯವಾಗಲಿಲ್ಲವೇಕೆ? ಪ್ರಾಜೆಕ್ಟ್ ಮ್ಯಾನೇಜರ್ ರಾಜೀವನ ವರ್ತನೆಯು ಶ್ರೀನಿಧಿಯ ಮೇಲೆ ಬೀರಿದ ಪ್ರಭಾವ ವಾದರೂ ಏನು? ಹಾಗಿದ್ದರೆ ಬದಲಾಗಲು ಶ್ರೀನಿಧಿಗೆ ಸಾಧ್ಯವೇ? ಸಾಧ್ಯವಾದರೆ ಹೇಗೆ? ಇದೊಂದು ಉದಾಹರಣೆಯಷ್ಟೇ.

ಈ ತರಹದ ಅನೇಕ ಸನ್ನಿವೇಶ-ಸಂದರ್ಭಗಳಿಗೆ ನಾವು ಮುಖಾಮುಖಿಯಾಗಬೇಕಾಗುತ್ತದೆ. ಆಗೆಲ್ಲಾ ನಮ್ಮನ್ನು ಸಹಜವಾಗಿ ನಕಾರಾತ್ಮಕ ಅಂಶಗಳು ಮುತ್ತುತ್ತವೆ. ಆಗ ಚಿಂತಿಸುವುದನ್ನು ನಿಲ್ಲಿಸಿ ನಾವು ಮನೋಭಾವಗಳನ್ನು ಬದಲಿಸಿಕೊಳ್ಳಬೇಕು. ಆದರೆ ಅದು ಹೇಗೆ ಸಾಧ್ಯ?

ಅದಕ್ಕೆ ಇಲ್ಲಿದೆ ನೋಡಿ ಪರಿಹಾರ: ಮೊದಲಿಗೆ, ನಿಮ್ಮ ಬಗ್ಗೆ ನಿಮಗೆ ನಂಬಿಕೆಯಿರಲಿ. ಅಂದರೆ, ನಿಮ್ಮ ಸಾಮರ್ಥ್ಯ, ಆತ್ಮವಿಶ್ವಾಸಗಳ ಬಗ್ಗೆ ನಿಮಗೆ ನಂಬಿಕೆ ಯಿರಲಿ. ಇವೆರಡೂ ಇರದೆ ಯಶಸ್ಸಾಗಲಿ, ಸಂತೋಷವಾಗಲಿ ಸಾಧ್ಯವಿಲ್ಲ. ಮನಸ್ಸು ಶಾಂತವಾಗಿರಲಿ, ಏಕೆಂದರೆ ಶಾಂತಮನಸ್ಸು ಎಂಬುದು ಸಕಾರಾತ್ಮಕ ಮನೋಭಾವದ ಬಹುಮುಖ್ಯ ಅಂಶ. ನಕಾರಾತ್ಮಕ ಅಂಶಗಳು ನಮ್ಮ ಆಲೋಚನೆಗಳನ್ನು ಆಳಲು ಹೊರಟರೆ, ಬದುಕು ಕಷ್ಟ ಕಷ್ಟ! ಏಕೆಂದರೆ, ಈ ನಕಾರಾತ್ಮಕ ಭಾವಗಳು ನಿಧಾನವಾಗಿ ಕೋಪದ ಮೂಲಕ ವ್ಯಕ್ತವಾಗತೊಡಗುತ್ತವೆ.

ಹಾಗಾಗಿಯೇ, ಅತ್ಯುತ್ತಮ ವಾದುದಕ್ಕೆ ನಾವು ತವಕಿಸ ಬೇಕು. ಆಗ ಹೊಸ ಆಲೋಚನೆ, ಮನೋಭಾವಗಳು ನಮ್ಮನ್ನು ಮರುಸೃಷ್ಟಿಸುತ್ತವೆ.

Leave a Reply

Your email address will not be published. Required fields are marked *

error: Content is protected !!