Sunday, 15th December 2024

ಭಾರತದ ಬಗೆಗೆ ಒಂದಿಷ್ಟು ಸಕಾರಾತ್ಮಕ ಸಂಗತಿಗಳು

ಅವಲೋಕನ

ಗಣೇಶ್‌ ಭಟ್‌ ವಾರಣಾಸಿ

ದಿನ ಬೆಳಗಾದರೆ ನಮಗೆ ನಮಗೆ ಸಿಗುವುದು ನಕಾರಾತ್ಮಕ ವಿಷಯಗಳೇ. ಮುಷ್ಕರ, ಧರಣಿ, ಸಂಚು, ಕೊಲೆ, ಆತ್ಮಹತ್ಯೆ, ಅಪಘಾತ ಮೊದಲಾದ ವಿಷಯಗಳೇ ಇತ್ತೀಚೆಗಿನ ವಾರ್ತೆಗಳ ಮುಖ್ಯಾಂಶಗಳು.

ಇನ್ನು ನ್ಯೂಸ್ ಚ್ಯಾನೆಲ್‌ಗಳ ಕಥೆಯಂತೂ ಹೇಳುವುದು ಬೇಡ. ದೇಶದಲ್ಲಿ ಕರೋನಾ ಜೋರಾಗಿದ್ದ ಸಮಯದಲ್ಲಿ ದಿನ ನಿತ್ಯ ಟಿವಿಗಳಲ್ಲಿ ಕರೋನಾದ ಮರಣ ಮೃದಂಗ, ಸಾವಿನ ತಾಂಡವ ಮೊದಲಾದ ಭಯಾನಕ ಶಬ್ದಗಳ ಪ್ರಯೋಗವು ಕೇಳಿ ಬರುತ್ತಿತ್ತು. ಕ್ರೈಂ ನ್ಯೂಸ್ ಗಳಲ್ಲಂತೂ ಹಿಂಸೆ, ರಕ್ತಪಾತ, ಮಚ್ಚು ಲಾಂಗುಗಳದ್ದೇ ಕಾರುಬಾರು. ಪಾಶ್ಚಿಮಾತ್ಯ ದೇಶಗಳ ದಿನಪತ್ರಿಕೆಗಳಲ್ಲಿ ಪತ್ರಿಕೆಗಳಲ್ಲಿ ನಕಾರಾತ್ಮಕ ಸುದ್ದಿಗಳಿಗೆ ಪ್ರಾಧಾನ್ಯತೆಯಿರುವುದಿಲ್ಲ ಎಂದು ವಿಶ್ವೇಶ್ವರ ಭಟ್ಟರು ತಮ್ಮ ಅಂಕಣದಮ್ಮೆ ಬರೆದಿದ್ದರು.

ಒಂದು ವೇಳೆ ಅಂತಹ ಸುದ್ದಿಗಳು ಇದ್ದರೂ ಪತ್ರಿಕೆಯ ಕೊನೆಗೆ ಯಾವುದೋ ಮೂಲೆಯಲ್ಲಿ ಸಣ್ಣದಾಗಿ ಪ್ರಕಟಿಸಲಾಗುತ್ತದೆ ಎಂದೂ ಭಟ್ಟರು ಹೇಳಿದ್ದರು. ಭಾರತದಲ್ಲಿ ಬರೆಯುವುದಿದ್ದರೆ ಸಾಕಷ್ಟು ಧನಾತ್ಮಕ ವಿಚಾರಗಳಿವೆ. ಆದರೆ ಅಂತಹ ವಿಚಾರಗಳು ಪ್ರಸ್ತಾಪನೆಯಾಗುವುದು ಬಹಳ ಕಡಿಮೆ. ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಂಗಳಗ್ರಹಕ್ಕೆ ಉಪಗ್ರಹವನ್ನು ಕಳುಹಿಸಿದೆ ಎಂದು ಸಂಭ್ರಮಿಸುವ ಸಮಯದಲ್ಲಿ, ಕೆಲವರು ಇದರಿಂದ ಜನಸಾಮಾನ್ಯರಿಗೇನು ಲಾಭ ಎಂದು ಪ್ರಶ್ನಿಸುತ್ತಾರೆ, ಭಾರತಕ್ಕೆ ಬುಲೆಟ್ ಟ್ರೈನ್ ಬರಲಿದೆ ಎನ್ನುವಾಗ ಬಡ ದೇಶವಾದ ಭಾರತಕ್ಕೆ ಬುಲೆಟ್ ಟ್ರೈನ್ ಏಕೆ ಎಂದು
ಕೇಳುತ್ತಾರೆ.

ಪ್ರಾಚೀನ ಕಾಲದಿಂದಲೂ ಭಾರತವು ಖಗೋಳ ವಿಜ್ಞಾನ, ಗಣಿತ, ಸಾಹಿತ್ಯ, ಶಿಲ್ಪಕಲೆ ಮೊದಲಾದ ಹಲವು ವಿಷಯಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡುತ್ತಾ ಬಂದಿದೆ. ಆಧುನಿಕ ಭಾರತವು ಕೂಡಾ ಜಾಗತಿಕವಾಗಿ ಗುರುತಿಸಿಕೊಳ್ಳುವಂಥ ಅನೇಕ ಸಾಧನೆ ಗಳನ್ನು ಮಾಡುತ್ತಿದೆ. ಔಷಧ ತಯಾರಿಕೆಯ ಜಾಗತಿಕ ಕೇಂದ್ರವಾಗಿ ಭಾರತವಿಂದು ಆರೋಗ್ಯ ಹಾಗೂ ಔಷಧಿಯ ಕ್ಷೇತ್ರದಲ್ಲಿ ಬಹಳ ಸಾಧನೆ ಮಾಡುತ್ತಿದೆ. ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ಪ್ರತೀ ವರ್ಷ 50 ಸಾವಿರ ಹೊಸ ವೈದ್ಯರು ರೂಪುಗೊಳ್ಳುತ್ತಿದ್ದಾರೆ. ಉತ್ತಮ ಆಸ್ಪತ್ರೆಗಳು ಭಾರತದಲ್ಲಿ ರೂಪುಗೊಂಡಿವೆ.

ಚಿಕಿತ್ಸೆಗೆಂದು ಭಾರತಕ್ಕೆ ಪ್ರತೀ ವರ್ಷ 5 ಲಕ್ಷಕ್ಕಿಂತಲೂ ಹೆಚ್ಚಿನ ವಿದೇಶೀಯರು ಬರುತ್ತಾರೆ. ಇದರಿಂದ ಭಾರತಕ್ಕೆ ಪ್ರತೀ
ವರ್ಷ 5 ರಿಂದ 6 ಶತಕೋಟಿ ಡಾಲರ್‌ಗಳಷ್ಟು ಆದಾಯ ಬರುತ್ತಿದೆ. ಭಾರತವನ್ನು ಜಗತ್ತಿನ ಫಾರ್ಮಸಿ ಎಂದು ಕರೆಯ ಲಾಗುತ್ತಿದೆ. ಜಗತ್ತಿನ ವಿವಿಧ ದೇಶಗಳಿಗೆ ಭಾರತೀಯ ಔಷಧ ತಯಾರಿಕಾ ಸಂಸ್ಥೆಗಳು ಔಷಧಗಳನ್ನು ಪೂರೈಸುತ್ತಿವೆ.

2014ರಲ್ಲಿ ಸುಮಾರು 11 ಶತಕೋಟಿ ಡಾಲರ್ ಮೌಲ್ಯದ ಔಷಧಿಗಳನ್ನು ಭಾರತವು ನಿರ್ಯಾತ ಮಾಡುತ್ತಿದ್ದರೆ, 2019-20ರಲ್ಲಿ ಈ ಪ್ರಮಾಣ 20.5 ಶತಕೋಟಿ ಡಾಲರ್‌ಗಳನ್ನು ತಲುಪಿತ್ತು.

2020-21ರಲ್ಲಿ ಈ ಮೊತ್ತ ಸುಮಾರು 25 ಶತಕೋಟಿ ಡಾಲರ್‌ಗಳನ್ನು ದಾಟುವ ನಿರೀಕ್ಷೆಯಿದೆ. ಸನ್ ಫಾರ್ಮಾ, ಡಾ.ರೆಡ್ಡೀಸ್ ಲ್ಯಾಬೋರೆರೆಟರೀಸ್ , ದೇವೀಸ್ ಲ್ಯಾಬೋರೇಟರೀಸ್, ಸಿಪ್ಲಾ, ಅರಬಿಂದೋ ಫಾರ್ಮಾ, ಝೈಡಸ್ ಕ್ಯಾಡಿ, ಬಯೋಕಾನ್ ಮೊದಲಾದವುಗಳು ಜಾಗತಿಕವಾಗಿ ಹೆಸರು ಪಡೆದ ಭಾರತದ ಪ್ರಸಿದ್ಧ ಫಾರ್ಮಾಸ್ಯೂಟಿಕಲ್ ಹಾಗೂ ಬಯೋಫಾರ್ಮಾ
ಸಂಸ್ಥೆಗಳು.

ಭಾರತದ ಔಷಧ ತಯಾರಿಕಾ ಸಂಸ್ಥೆಗಳು ಪ್ರತೀ ತಿಂಗಳು 5600 ಮೆಟ್ರಿಕ್ ಟನ್ ಗಳಷ್ಟು ಪ್ಯಾರಾಸಿಟಮಾಲ್ ಮಾತ್ರೆಗಳನ್ನು ತಯಾರಿಸುತ್ತಿದ್ದು, ಇದರಲ್ಲಿ ಭಾರತಲ್ಲಿ ಮಾಸಿಕವಾಗಿ ಬಳಕೆ ಆಗುವುದು ಕೇವಲ 200 ಮೆಟ್ರಿಕ್ ಟನ್ ಗಳಷ್ಟು ಮಾತ್ರ. ಉಳಿದ ಪ್ಯಾರಾಸಿಟಮಾಲ್ ಮಾತ್ರೆಗಳು ಇಟಲಿ, ಜರ್ಮನಿ, ಇಂಗ್ಲೆಂಡ್, ಅಮೆರಿಕಾ, ಸ್ಪೆ ನ್, ಕೆನಡಾ ಮೊದಲಾದ ದೇಶಗಳಿಗೆ ರಫ್ತಾಗುತ್ತವೆ.
ಮಲೇರಿಯಾ ಚಿಕಿತ್ಸೆಗೆ ಬಳಕೆಯಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಕೂಡಾ ಅತೀ ಹೆಚ್ಚು ಉತ್ಪಾದನೆ ಆಗುವುದು ಭಾರತದ. ಕರೋನಾ ಉಲ್ಬಣಗೊಂಡ ಸಂದರ್ಭದಲ್ಲಿ ಅಮೆರಿಕಾದ ಬೇಡಿಕೆಗೆ ಸ್ಪಂದಿಸಿದ್ದ ಭಾರತವು ಅಲ್ಲಿಗೆ 5 ಕೋಟಿ
ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸಿತ್ತು. ಇದೇ ರೀತಿ ಇತರ 55 ದೇಶಗಳಿಗೂ ಭಾರತವು ಈ ಮಾತ್ರೆಗಳನ್ನು
ಪೂರೈಸಿತ್ತು.

ಕರೋನಾ ಉಲ್ಬಣವಾಗಿರುವ ಈ ಕಾಲದಲ್ಲಿ ಜಗತ್ತು ಲಸಿಕೆಗಾಗಿ ಭಾರತದೆಡೆಗೆ ನೋಡುತ್ತಿದೆ. ಭಾರತದಲ್ಲಿ ಎಲ್ಲಾ ದೇಶಗಳಿಗೆ ಸಾಕಾಗುವಷ್ಟು ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯವುಳ್ಳ ಲ್ಯಾಬ್‌ಗಳು ಇವೆ. ಈಗಾಗಲೇ ಪುಣೆಯ ಸೀರಮ್ ಇಂಡಿಯಾ ಇನ್ಸ್ಟಿಟ್ಯೂಟ್ ಹಾಗೂ ಹೈದರಾಬಾದ್ನ ಭಾರತ್ ಬಯೋಟೆಕ್ ಸಂಸ್ಥೆಗಳು ಕರೋನಾ ಲಸಿಕೆಗಳ ಉತ್ಪಾದನೆಯನ್ನು ಆರಂಭಿಸಿವೆ. ಆಸ್ಟ್ರಾಝೆನೆಕಾದ ಸಹ ಉತ್ಪಾದಕ ಸಂಸ್ಥೆಯಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು ಕರೋನಾ ಲಸಿಕೆಯನ್ನು ಕೋವಿ ಶೀಲ್ಡ್ ಹೆಸರಿನಲ್ಲಿ ಉತ್ಪಾದಿಸುತ್ತಿದೆ, ಹಾಗೂ ಐಸಿಎಂಆರ್ ಸಹಯೋಗದಲ್ಲಿ ವ್ಯಾಕ್ಸಿನ್ ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ತನ್ನ ಲಸಿಕೆಗೆ ಕೋವ್ಯಾಕ್ಸಿನ್ ಎಂಬ ಹೆಸರನ್ನು ಇಟ್ಟಿದೆ.

ಭಾರತದ ಲಸಿಕಾ ಸಂಸ್ಥೆಗಳು ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್, ಬ್ರೆಝಿಲ್, ಯುಎಇ, ದಕ್ಷಿಣ ಆಫ್ರಿಕಾ, ಬೆಹ್ರೈನ್, ಒಮಾನ್ ಮೊದಲಾದ ದೇಶಗಳಿಗೆ ಉಚಿತವಾಗಿ ಸುಮಾರು 56 ಲಕ್ಷಗಳಷ್ಟು ಲಸಿಕೆಗಳನ್ನು ಹಂಚಿವೆ. ಕೆನಡಾ ದೇಶ ಹಾಗೂ ಯುರೋಪ್‌ನ 25 ದೇಶಗಳಿಗೆ ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಲಸಿಕೆಗಳನ್ನು ಮಾರಾಟ ಮಾಡಲಿವೆ. ಈ ಎರಡು ಸಂಸ್ಥೆಗಳಲ್ಲದೆ ಝೈಡಸ್ ಕ್ಯಾಡಿ, ಪಿನಾಕಾ ಬಯೋಟೆಕ್, ಇಂಡಿಯನ್ ಇಮ್ಯುನೋಲಾಜಿಕಲ್ಸ, ಮಿನ್ವ್ಯಾಕ್ಸ್ ಹಾಗೂ ಬಯೋಲಾಜಿಕಲ್ ಇ ಸಂಸ್ಥೆಗಳು ಕರೋನಾ ವ್ಯಾಕ್ಸಿನ್ ತಯಾರಿಕೆಯ ಕುರಿತಾಗಿ ಪ್ರಯೋಗಗಳನ್ನು ನಡೆಸುತ್ತಿವೆ. ಈ ಬೆಳವಣಿಗೆಗಳನ್ನು ಗಮನಿಸುವಾಗ ಭಾರತೀಯ ಲಸಿಕಾ ಸಂಸ್ಥೆಗಳು ಇಡೀ ಜಗತ್ತಿಗೇ ಕರೋನಾ ವ್ಯಾಕ್ಸಿನ್‌ಗಳ ಪೂರೈಕೆಗೆ ಸಿದ್ಧವಾಗುತ್ತಿರುವುದು ಕಂಡುಬರುತ್ತಿದೆ.

ಜಾಗತಿಕವಾಗಿ ಮೂರನೇ ಅತೀ ಹೆಚ್ಚು ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳು ರೂಪುಗೊಂಡಿರುವುದು ಭಾರತದ ಭಾರತವಿಂದು ಸ್ಟಾರ್ಟ್‌ಅಪ್ (ನವೋದ್ಯಮಗಳ) ಕೇಂದ್ರವಾಗಿ ಬೆಳೆಯುತ್ತಿದೆ. ಆರು ವರ್ಷಗಳ ಮೊದಲು ನಮ್ಮ ದೇಶದಲ್ಲಿ 29000  ನವೋದ್ಯಮಗಳಿದ್ದವು. ಇಂದು ದೇಶದಲ್ಲಿರುವ ನವೋದ್ಯಮಗಳ ಸಂಖ್ಯೆ 55000. ಈ ಸ್ಟಾರ್ಟ್‌ಅಪ್‌ಗಳದ ಹೂಡಿಕೆ 64 ಶತಕೋಟಿ ಡಾಲರ್ ಗಳಿಗಿಂತಲೂ ಹೆಚ್ಚು. ಒಂದು ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಮೌಲ್ಯದ ನವೋದ್ಯಮಗಳನ್ನು ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳು ಎಂದು ಕರೆಯುತ್ತಾರೆ.

ಅಮೆರಿಕಾ ಹಾಗೂ ಚೀನಾಗಳನ್ನು ಹೊರತುಪಡಿಸಿದರೆ ಅತೀ ಹೆಚ್ಚು ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳನ್ನು ಹೊಂದಿದ ದೇಶ
ಎಂಬ ಖ್ಯಾತಿ ಭಾರತದ್ದಾಗಿದೆ. ಭಾರತದಲ್ಲಿಂದು 38 ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳಿವೆ. ಈ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳ ಒಟ್ಟು ಮೌಲ್ಯ 120 ಶತಕೋಟಿ ಡಾಲರ್ ಗಳಿಗಿಂತಲೂ ಹೆಚ್ಚು. ಕರೋನಾ ಮಹಾಮಾರಿಯ ಸಂದರ್ಭದ ಆರ್ಥಿಕ ಹಿಂಜರಿತದ ಎಡೆಯಲ್ಲೂ , 2020ನೇ ಇಸವಿಯಲ್ಲಿ ಭಾರತದಲ್ಲಿ  ಸ್ಟಾರ್ಟ್ ಅಪ್‌ಗಳು ಹೊಸದಾಗಿ ಯುನಿಕಾರ್ನ್‌ಗಳಾಗಿ ಬೆಳೆದಿವೆ.

ಬೆಂಗಳೂರು ನಗರವು ನವೋದ್ಯಮಗಳ ಕೇಂದ್ರವಾಗಿದೆ. ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳು
ರೂಪುಗೊಂಡಿವೆ. ನವೋದ್ಯಮಗಳು ಏನಿಲ್ಲವೆಂದರೂ 5 ಲಕ್ಷಗಳಷ್ಟು ನೇರ ಉದ್ಯೋಗಗಳನ್ನು ಹಾಗೂ ಅದರ ನಾಲ್ಕು ಪಟ್ಟು ಸಂಖ್ಯೆಯ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಭಾರತದ ನವೋದ್ಯಮಗಳು ಜಾಗತಿಕವಾಗಿ ಭಾರತಕ್ಕೆ ಹೆಸರನ್ನು ತಂದು ಕೊಡುತ್ತಿವೆ ಹಾಗೂ ದೇಶದ ಆರ್ಥಿಕತೆ ಯನ್ನು ಬಲಿಷ್ಠಗೊಳಿಸುತ್ತದೆ.

ಜಗತ್ತಿನ ೨ನೇ ಅತೀ ಹೆಚ್ಚು ಮೊಬೈಲ್ ತಯಾರಿಕೆಯ ಕೇಂದ್ರವಾಗಿದೆ ಭಾರತ. ಚೀನಾದ ನಂತರ ಜಾಗತಿಕವಾಗಿ ಅತೀ ಹೆಚ್ಚು ಮೊಬೈಲ್ ಫೋನ್‌ಗಳನ್ನು ತಯಾರಿಸುತ್ತಿರುವುದು ಭಾರತವೇ. 2014ರಲ್ಲಿ ಭಾರತದಲ್ಲಿ ಮೊಬೈಲ್ ಫೋನ್ ತಯಾರಿಕೆಯ ಎರಡು ಘಟಕಗಳು ಮಾತ್ರವೇ ಇದ್ದಿದ್ದು, ಈಗ ಭಾರತದಲ್ಲಿ 200 ಮೊಬೈಲು ಫೋನ್ ತಯಾರಿಕೆಯ ಘಟಕಗಳಿವೆ.

2014ರಲ್ಲಿ ಭಾರತದಲ್ಲಿ 3 ಶತಕೋಟಿ ಡಾಲರ್ ಮೌಲ್ಯದ 6 ಕೋಟಿ ಮೊಬೈಲ್ ಫೋನ್ ಗಳು ತಯಾರಾಗುತ್ತಿದ್ದರೆ 2019ಲ್ಲಿ ೩೦ ಶತಕೋಟಿ ಡಾಲರ್ ಮೌಲ್ಯದ ೩೩ ಕೋಟಿ ಮೊಬೈಲ್ ಫೋನ್‌ಗಳು ತಯಾರಾಗಿವೆ. ೨೦೧೯ರಲ್ಲಿ ಭಾರತದಿಂದ ೧.೭ ಕೋಟಿ ಮೊಬೈಲ್ ಫೋನ್‌ಗಳು ರಫ್ತಾಗಿದ್ದರೆ, ೨೦೨೦ ರಲ್ಲಿ ೩.೬ ಕೋಟಿ ಮೊಬೈಲ್ ಫೋನ್‌ಗಳು ರಫ್ತಾಗಿವೆ.

೨೦೨೦ರ ಆರ್ಥಿಕ ವರ್ಷದಲ್ಲಿ ೨೧,೦೦೦ ಕೋಟಿ ರುಪಾಯಿಗಳಷ್ಟು ಮೌಲ್ಯದ ಮೊಬೈಲ್ ಫೋನ್‌ಗಳನ್ನು ಭಾರತದಿಂದ
ನಿರ್ಯಾತ ಮಾಡಲಾಗಿದೆ. ಸ್ಯಾಂಮ್ಸಂಗ್ ಕಂಪೆನಿಯು ತನ್ನ ಅತೀ ದೊಡ್ಡ ಮೊಬೈಲ್ ಫೋನ್ ಉತ್ಪಾದನಾ ಘಟಕವನ್ನು
ನೋಯ್ಡಾದಲ್ಲಿ ಆರಂಭಿಸಿದೆ. ಚೀನಾ ಮೂಲದ ಕ್ಸಿಯೋಮಿ – ರೆಡ್ ಮಿ, ಓಪ್ಪೋ, ವಿವೋ, ವನ್ ಪ್ಲಸ್‌ಗಳೂ ಮೇಕ್
ಇನ್ ಇಂಡಿಯಾದ ಅಡಿಯಲ್ಲಿ ಮೊಬೈಲ್ ಫೋನ್‌ಗಳನ್ನು ಭಾರತದ ತಯಾರಿಸುತ್ತಿವೆ. ಆಪಲ – ಐ ಫೋನ್ ಸಂಸ್ಥೆಯು ಕೂಡಾ ಭಾರತ ದಲ್ಲಿ ತನ್ನ ಉತ್ಪಾದನಾ  ಚಟುವಟಿಕೆಯನ್ನು ಆರಂಭಿಸಿದೆ. ಚೀನಾದಲ್ಲಿರುವ ಐಪ್ಯಾಡ್, ಐ ಮ್ಯಾಕ್ ಹಾಗೂ ಐಫೋನ್‌ಗಳ ಬೃಹತ್ ತಯಾರಿಕಾ ಘಟಕಗಳನ್ನು ಮುಚ್ಚಿ ಸಂಪೂರ್ಣವಾಗಿ ಭಾರತಕ್ಕೆ ಬರುವ ಸಿದ್ಧತೆಯನ್ನು ಮಾಡುತ್ತಿದೆ ಆಪಲ.

ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ದಾಪುಗಾಲು: ಭಾರತವಿಂದು ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಜಾಗತಿಕ ವಾಗಿ ಐದನೇ ಸ್ಥಾನದಲ್ಲಿದೆ. ೨೦೧೪ರಲ್ಲಿ ೨.೫ ಗಿಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಭಾರತ ೨೦೨೨ನೇ ಇಸವಿಯ ಒಳಗೆ ೨೦ ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಇಟ್ಟುಕೊಂಡಿತ್ತು. ಆದರೆ ೨೦೧೮ನೇ ಇಸವಿಯ ೨೦ ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಸಾಧಿಸಿದ ಭಾರತವು, ಈಗ ೩೭ ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ಮಾಡುತ್ತಿದೆ ಹಾಗೂ ೨೦೨೨ರ ಅಂತ್ಯದ ಒಳಗೆ ೧೭೫ ಗಿಗಾವ್ಯಾಟ್
ಸೋಲಾರ್ ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದೆ.

ಇದಲ್ಲದೆ ಭಾರತದ ನೇತೃತ್ವದಲ್ಲಿ ಇಂಟರ್ ನ್ಯಾಷನಲ್ ಸೋಲಾರ್ ಅಲಾಯನ್ಸ್ ಅನ್ನುವ ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ೧೨೧ ರಾಷ್ಟ್ರಗಳ ಒಕ್ಕೂಟ ರಚನೆಯಾಗಿದೆ. ಸೌರಶಕ್ತಿಯ ಮೂಲಕ ಉತ್ಪಾದನೆ ಆಗುವ ವಿದ್ಯುತ್ ಪರಿಸರದ ಉಳಿವಿಗೆ ಪೂರಕವಾಗಿದೆ. ಒಂದು ಗಿಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಗಳು ಒಂದು ವರ್ಷದಲ್ಲಿ ೧೦ ಲಕ್ಷ ಟನ್ ಗಳಷ್ಟು ಹೊಗೆ ಹಾಗೂ ಬೂದಿಯನ್ನು ವಾತಾವರಣಕ್ಕೆ ಉಗುಳುತ್ತವೆ. ಸೋಲಾರ್ ವಿದ್ಯುತ್ ಉತ್ಪಾದನೆಯಿಂದ ಕಾರ್ಬನ್ ಹೊರಸುಸುವಿಕೆ ತಪ್ಪುತ್ತದೆ ಹಾಗೂ ಪರಿಸರ ಉಳಿಯುತ್ತದೆ.

ಹೂಡಿಕೆದಾರರ ನೆಚ್ಚಿನ ತಾಣ: ಭಾರತವಿಂದು ಜಾಗತಿಕವಾಗಿ ನೇ ಅತೀ ಹೆಚ್ಚು ನೇರ ವಿದೇಶಿ ಹೂಡಿಕೆಯನ್ನು ಪಡೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಕರೋನಾ ಸಂಕಷ್ಟ ಕಾಲದಲ್ಲೂ ಭಾರತವು ಎಫ್ಡಿಐ ನಲ್ಲಿ ಭಾರೀ ಏರಿಕೆಯನ್ನು ಕಂಡಿದೆ. ಏಪ್ರಿಲ್ ೨೦೨೦ ರಿಂದ ನವೆಂಬರ್ ೨೦೨೦ರ ನಡುವಿನ ತಿಂಗಳುಗಳ ಅವಧಿಯಲ್ಲಿ ಭಾರತದಲ್ಲಿ ೫೮.೩೭ ಶತಕೋಟಿ(ಬಿಲಿಯನ್) ಡಾಲರ್‌ಗಳ ನೇರ ವಿದೇಶಿ ಹೂಡಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೪೭.೬೭ ಶತಕೋಟಿ ಡಾಲರ್‌ಗಳ ವಿದೇಶಿ ಹೂಡಿಕೆ ಆಗಿತ್ತು. ಕಳೆದ ಅವಧಿಗಿಂತ ಈ ಅವಧಿಯಲ್ಲಿ ಭಾರತದದ ನೇರ ವಿದೇಶಿ ಹೂಡಿಕೆ ಯಲ್ಲಿ ಶೇ.೨೨ರಷ್ಟು ವೃದ್ಧಿಯಾಗಿದೆ. ೨೦೧೯ – ೨೦ರಲ್ಲಿ ಭಾರತದಲ್ಲಿ ೭೩.೪೫ ಶತಕೋಟಿ ಡಾಲರ್‌ಗಳ ಹೂಡಿಕೆ ಆಗಿದ್ದು ಈ ವರ್ಷ ಈ ಮೊತ್ತ ೮೦ ಶತ ಕೋಟಿ ಡಾಲರ್‌ಗಳನ್ನು ಮೀರುವ ಸಾಧ್ಯತೆ ಇದೆ.

ಪ್ರಬಲ ಆರ್ಥಿಕ ಶಕ್ತಿಯಾಗಿ ಭಾರತ: ಭಾರತವಿಂದು ಜಗತ್ತಿನ ಆರನೇ ಅತೀ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿದೆ. ಭಾರತವು ಕಳೆದ ಆರ್ಥಿಕ ವರ್ಷದಲ್ಲಿ ಹೆಚ್ಚು ಕಡಿಮೆ ಲಕ್ಷ ಕೋಟಿ (ಟ್ರಿಲಿಯನ್) ಡಾಲರ್‌ಗಳ ಜಿಡಿಪಿ ಸಾಧಿಸಿದೆ. ಬೆಳೆದಿದೆ. ೨೦೧೪ರಲ್ಲಿ ಟ್ರಿಲಿಯನ್ ಡಾಲರ್‌ಗಳ ಆರ್ಥಿಕತೆಯನ್ನು ಹೊಂದಿದ್ದ ಭಾರತವು ೨೦೧೯ಕ್ಕೆ ಆಗುವಾಗ ತನ್ನ ಆರ್ಥಿಕತೆಯನ್ನು ಒಂದು ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸಿಕೊಂಡು ಟ್ರಿಲಿಯನ್ ಡಾಲರ್ ಸಮೀಪಿಸಿದೆ. ೨೦೨೫ರ ಒಳಗೆ ಟ್ರಿಲಿಯನ್
ಡಾಲರ್‌ಗಳ ಆರ್ಥಿಕ ಶಕ್ತಿಯಾಗುವ ಗುರಿಯನ್ನು ಭಾರತವು ಇಟ್ಟುಕೊಂಡಿದೆ.

೨೦೨೧-೨೨ರಲ್ಲಿ ಭಾರತವು ಶೇ.೧೧.೫ರಷ್ಟು ಜಿಡಿಪಿಯನ್ನು ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು (ಐಎಮ್‌ಎಫ್‌) ಭವಿಷ್ಯ ನುಡಿದಿದೆ. ಇಂದು ಭಾರತದಲ್ಲಿ ಸಂಗ್ರಹವಿರುವ ವಿದೇಶಿ ವಿನಿಮಯದ ಪ್ರಮಾಣ ೫೯೦.೧೮೫ ಶತಕೋಟಿ ಡಾಲರ್‌ಗಳು. ಜಾಗತಿಕವಾಗಿ ನೇ ಅತೀ ಹೆಚ್ಚು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದ ದೇಶ ನಮ್ಮದು.
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಜಗತ್ತಿನ ನೇ ಅತ್ಯುತ್ತಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೆಂದು ಗುರುತಿಸಲ್ಪಟ್ಟಿದೆ. ಸಂಶೋಧನಾ ಪೇಟೆಂಟ್ ಗಳಿಗೆ ಜಾಗತಿಕವಾಗಿ ನೇ ಅತೀ ಹೆಚ್ಚು ಅರ್ಜಿ ಸಲ್ಲಿಸಿರುವ ದೇಶ ಭಾರತ.

ಹೀಗೆ ಭಾರತದ ಬಗ್ಗೆ ಹೇಳಿಕೊಳ್ಳಲು ಬಹಳಷ್ಟು ಧನಾತ್ಮಕ ವಿಷಯಗಳಿವೆ. ಆದರೆ ನಕಾರಾತ್ಮಕ ಸುದ್ದಿಗಳ ವೈಭವೀಕರಣದ ಎಡೆಯಲ್ಲಿಇಂತಹ ಸುದ್ದಿಗಳು ನಮ್ಮ ಗಮನಕ್ಕೆ ಬರುತ್ತಿಲ್ಲ.