Saturday, 14th December 2024

ಹವ್ಯಾಸಿಗರ ಸ್ನೇಹಿ ಅಂಚೆಚೀಟಿ

ಸಾಂದರ್ಭಿಕ

ನಂ.ಶ್ರೀಕಂಠ ಕುಮಾರ್‌

ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ, ಪ್ರಾಚೀನ ವಸ್ತು ಸಂಗ್ರಹ ಹೀಗೆ ಹಲವಾರು ಹವ್ಯಾಸಗಳಲ್ಲಿ ಅಂಚೆ ಚೀಟಿ ಸಂಗ್ರಹ ವಿಶೇಷ ಹಾಗೂ ವಿಶಿಷ್ಟ ಜನಪ್ರಿಯ ಹವ್ಯಾಸ. ವೈವಿಧ್ಯಮಯವಾಗಿ ನಾನಾ ರಂಗದ, ನಾನಾ ಬಣ್ಣ, ಆಕಾರ ಹಾಗೂ ಬೇರೆ ಬೇರೆ ಮೌಲ್ಯಗಳಲ್ಲಿ ಮುದ್ರಿತಗೊಂಡು ಚಲಾವಣೆಯಲ್ಲಿವೆ.

ದೇಶಾದ್ಯಂತ ಅಂಚೆ ಸೇವೆಯು ನಿರಂತರ 166 ವರ್ಷಗಳಿಂದ ಆಚರಣೆಯ ಈ ಸಂದರ್ಭದಲ್ಲಿ ಅಂಚೆ ಇಲಾಖೆಯು ಅಂಚೆ ಸಪ್ತಾಹವನ್ನು ಅಕ್ಟೋಬರ್ 9 ರಿಂದ ಆಚರಿಸಲಾಗುತ್ತಿದೆ. ಅ.13ರಂದು ದೇಶಾದ್ಯಂತ ಅಂಚೆ ಚೀಟಿ ದಿನವನ್ನಾಗಿ ಆಚರಿಸು ತ್ತಿರುವುದು ಸಂತಸದ ವಿಷಯ.

ಹವ್ಯಾಸಗಳು ಮನುಷ್ಯನ ಮಾನಸಿಕ ಜ್ಞಾನ ವಿಕಾಸಕ್ಕೆ ಪೂರಕವಾಗಿದ್ದು ಈ ನಿಟ್ಟಿನಲ್ಲಿ ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ, ಪ್ರಾಚೀನ ವಸ್ತು ಸಂಗ್ರಹ ಹೀಗೆ ಹಲವಾರು ಹವ್ಯಾಸಗಳಲ್ಲಿ ಅಂಚೆ ಚೀಟಿ ಸಂಗ್ರಹ ವಿಶೇಷ ಹಾಗೂ ವಿಶಿಷ್ಟ ಜನಪ್ರಿಯ ಹವ್ಯಾಸ. ಅಂಚೆ ಚೀಟಿಗಳಲ್ಲಿ ವೈವಿಧ್ಯಮಯ ರೀತಿಯ ಸಾಮಾಜಿಕ, ವಿಜ್ಞಾನ, ಕ್ರೀಡೆಗಳು, ದೇಶದ ರಕ್ಷಣೆ, ಸ್ವಾತಂತ್ರ್ಯದ ಹೋರಾಟಗಳ ನಾನಾ ಮಜಲುಗಳು, ಪುಣ್ಯ ಕ್ಷೇತ್ರಗಳು, ಕಲೆ, ಸಂಸ್ಕೃತಿ, ವನ್ಯಜೀವಿಗಳು, ವಾಸ್ತುಶಿಲ್ಪ ಹೀಗೆ ವೈವಿಧ್ಯಮಯವಾಗಿ ನಾನಾ
ರಂಗದ, ನಾನಾ ಬಣ್ಣ, ಆಕಾರ ಹಾಗೂ ಬೇರೆ ಬೇರೆ ಮೌಲ್ಯಗಳಲ್ಲಿ ಮುದ್ರಿತಗೊಂಡು ಚಲಾವಣೆಯಲ್ಲಿದೆ.

ಅಂಚೆ ಚೀಟಿಗಳಲ್ಲಿ ಸಾಂದರ್ಭಿಕ ಸ್ಮರಣಾರ್ಥ ಅಂಚೆ ಚೀಟಿಗಳು, ಮಿಲಿಟರಿ ಅಂಚೆ ಚೀಟಿಗಳು, ವಿಶೇಷ ಅಂಚೆ ಚೀಟಿಗಳು ಹಾಗೂ ಅದರ ವಿವರಗಳನ್ನು ಸಹ ಮುದ್ರಿಸಿ ಮೊದಲ ದಿನದ ಸ್ಮರಣಾರ್ಥ ಲಕೋಟೆಯಾಗಿ ಮಾರಲಾಗುತ್ತದೆ. ಪ್ರಥಮವಾಗಿ ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಕೋಲ್ಕತ್ತಾದ ಠಂಕಸಾಲೆಯಲ್ಲಿ ಸೂಪರಿಟೆಂಡೆಂಟ್ ಆಗಿದ್ದ
ಪೊರಬ್ಸ್ ಎಂಬಾತನು ೧೮೫೪ರ ಅಕ್ಟೋಬರ್‌ನಲ್ಲಿ ಸಿಂಹ ಮತ್ತು ತಾಳೆ ಮರದ ಚಿತ್ರವಿರುವ ಅರ್ಧಾಣೆಯ ಅಂಚೆ ಚೀಟಿಯನ್ನು ಹೊರತಂದನು.

ಇದೇ ಸಮಗ್ರ ಭಾರತಕ್ಕೆ ಅನ್ವಯವಾದ ಮೊದಲ ಅಂಚೆ ಚೀಟಿ. ಸ್ಥಳೀಯವಾಗಿ ಸಿಗುತ್ತಿದ್ದ ಪರಿಕರಗಳನ್ನು ಉಪಯೋಗಿಸಿ ಕೊಂಡು ಅಂಚೆ ಚೀಟಿಯ ಮೇಲ್ಭಾಗದಲ್ಲಿ ಗೌರ‍್ನಮೆಂಟ್ ಆಫ್ ಇಂಡಿಯ ಎಂದು, ಕೆಳಭಾಗದಲ್ಲಿ ಈಸ್ಟ್ ಇಂಡಿಯ ಪೋಸ್ಟೇಜ್ ಎಂದೂ ವಿಕ್ಟೋರಿಯ ರಾಣಿಯ ಮುಖ ಚಿತ್ರವುಳ್ಳ ನಾನಾ ಬಣ್ಣಗಳ ಹಾಗೂ ನಾಲ್ಕಾಣೆ, ಅರ್ಧಾಣೆ, ಒಂದಾಣೆ ಮೌಲ್ಯಗಳ ಅಂಚೆ ಚೀಟಿಗಳನ್ನು ಚಲಾವಣೆಗೆ ತರಲಾಯಿತು. ಈ ಅಂಚೆ ಚೀಟಿಗಳು ಸಿಪಾಯಿ ಧಂಗೆಯೆಂದು ಕರೆಸಿಕೊಂಡ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದವರೆಗೂ ಚಲಾವಣೆಯಲ್ಲಿದ್ದವು. ಅದೇ ಸಂದರ್ಭದಲ್ಲಿ ಭಾರತದಲ್ಲಿನ ನಾನಾ ಸಂಸ್ಥಾನಗಳು ಪ್ರತ್ಯೇಕವಾಗಿ ಅಂಚೆ ಚೀಟಿಗಳನ್ನು ಉಪಯೋಗಕ್ಕೆ ತಂದರು. ಹೈದರಾಬಾದಿನ ನವಾಬನು ಅಂಚೆ ಚೀಟಿಗಳ ಮೇಲೆ ಚಾರ್ ಮಿನಾರ್ ಚಿತ್ರ ಹಾಗೂ ಅಜಂತಾ ಗುಹೆಗಳ ಚಿತ್ರಗಳನ್ನು ಮುದ್ರಿಸಿ ಬಳಕೆಗೆ ತಂದನು. ತಿರುವಾಂಕೂರ್ ಮಹಾ ರಾಜರು ಶಂಖದ ಚಿತ್ರವುಳ್ಳ ಅಂಚೆ ಚೀಟಿಯನ್ನು ಮುದ್ರಿಸಿ ಚಲಾವಣೆಗೆ ತಂದರು. ಜೈಪುರ ಮಹಾರಾಜರು ಅಂಚೆ ಚೀಟಿಯ ಮೇಲೆ ಸೂರ್ಯ ಭಗವಾನನ ಚಿತ್ರವನ್ನು ಮುದ್ರಿಸಿದ್ದರು. ಹಾಗೂ ಬುಂದ್ ಸಂಸ್ಥಾನಿಕರು 1914ರಲ್ಲಿ ಚಲಾವಣೆಗೆ ತಂದ ಅಂಚೆ ಚೀಟಿಯ ಮೇಲೆ ರಾಜನು ಗೋರಕ್ಷಣೆ ಮಾಡುತ್ತಿರುವ ಚಿತ್ರವಿತ್ತು.

ಇತರ ಸಂಸ್ಥಾನಿಕರಾದ ಜಮ್ಮು ಮತ್ತು ಕಾಶ್ಮೀರ, ಇಂಧೋರ್ ಮುಂತಾದ ರಾಜರುಗಳು ತಮ್ಮ ತಮ್ಮ ಮುಖಚಿತ್ರಗಳನ್ನು ಅಂಚೆ
ಚೀಟಿಗಳಲ್ಲಿ ಮುದ್ರಿಸಿ ಚಲಾವಣೆಗೆ ತಂದರು. ಇಂತಹ ಅಂಚೆ ಚೀಟಿಗಳು ಸಂಗ್ರಾಹಕರಲ್ಲಿ ಅಪರೂಪವಾಗಿ ಇಂದಿಗೂ ಕಾಣ ಬಹುದು. ನಂತರ ಭಾರತವು ಬ್ರಿಟನ್ ರಾಣಿಯ ನೇರ ಆಡಳಿತಕ್ಕೆ ಒಳಪಟ್ಟ ಮೇಲೆ ಅಂಚೆ ಚೀಟಿಗಳ ಮೇಲಿದ್ದ ಈಸ್ಟ್ ಇಂಡಿಯಾ ಪೋಸ್ಟೇಜ್ ಎಂಬ ಬರಹವನ್ನು ತೆಗೆದು ಇಂಡಿಯಾ ಪೋಸ್ಟೇಜ್ ಮಾತ್ರ ಉಳಿಯಿತು.

೧೮೯೫ರ ನಂತರ ವಿಕ್ಟೋರಿಯಾ ರಾಣಿಯ ನಾನಾ ಬಣ್ಣಗಳ ಅಂಚೆ ಚೀಟಿಗಳು ಜಾರಿಯಲ್ಲಿದ್ದು ಆನಂತರ ಪಂಚಮ ಜಾರ್ಜ್‌ರ ಕಿರೀಟ ಸಹಿತ ಚಿತ್ರದೊಂದಿಗೆ ಹೊರಬಂದವು. ಅದುವರೆಗೆ ಇಂಗ್ಲೆಂಡಿನಲ್ಲಿ ಮುದ್ರಿತವಾಗಿ ಬರುತ್ತಿದ್ದ ಅಂಚೆ ಚೀಟಿಗಳು ಏಪ್ರಿಲ್ ೧೯೨೩ರ ನಂತರ ಭಾರತದ ನಾಸಿಕ್ ಸೆಕ್ಯುರಿಟಿ ಪ್ರೆಸ್‌ನಲ್ಲಿ ಮುದ್ರಿತವಾಗತೊಡಗಿದವು. ಹಾಗೂ ನೆರೆ ರಾಷ್ಟ್ರಗಳಾದ ಬರ್ಮಾ,
ನೇಪಾಳ, ಭೂತಾನ್, ಪೋರ್ಚುಗಲ್, ಇಥೋಪಿಯ ದೇಶಗಳಿಗೆ ಅವರ ಬೇಡಿಕೆಯಂತೆ ಮುದ್ರಿಸಿ ಸರಬರಾಜು ಮಾಡಲಾಗುತ್ತಿತ್ತು.
೧೯೩೭ರಲ್ಲಿ ಬಿಡುಗಡೆಯಾದ ಅಂಚೆ ಚೀಟಿಗಳ ವಿಶೇಷತೆ ಎಂದರೆ ಎಂಟನೇ ಎಡ್ವರ್ಡ್ ಚಕ್ರವರ್ತಿಯ ನಾನಾ ಬಣ್ಣದ ಮುಖ ಚಿತ್ರ. ಅದೇ ಸಂದರ್ಭದಲ್ಲಿ ವರ್ತಮಾನ ಪತ್ರಿಕೆಗಳಿಗಾಗಿ ಕಾಲಾಣೆಯ ಅಂಚೆ ಚೀಟಿಗಳನ್ನು ಉಪಯೋಗಿಸಲಾಗುತ್ತಿತ್ತು.

ಇಂದಿಗೂ ಈ ಪದ್ಧತಿ ಮುಂದುವರಿದಿದೆ. ಭಾರತದಲ್ಲಿ ಸುಮಾರು ಎರಡು ಶತಮಾನಗಳ ಬ್ರಿಟೀಷರ ಆಳ್ವಿಕೆ ಕೊನೆಗೊಂಡು ಸ್ವತಂತ್ರ ಭಾರತದ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಪ್ರಥಮವಾಗಿ 1947ರ ನವೆಂಬರ್ 21ರಲ್ಲಿ ಜೈಹಿಂದ್ ಘೋಷಣೆ ಯೊಂದಿಗೆ ರಾಷ್ಟ್ರ ಲಾಂಛನವಾದ ಅಶೋಕ ಸ್ತಂಭ, ತ್ರಿವರ್ಣ ಧ್ವಜ ಮತ್ತು ಪ್ರಗತಿ ಸಂಕೇತವಾದ ಹಾರಾಡುವ ವಿಮಾನದ ಚಿತ್ರವಿರುವ ಮೂರು ಪ್ರತ್ಯೇಕ ಅಂಚೆ ಚೀಟಿಗಳನ್ನು ಒಮ್ಮೆಲೇ ಬಿಡುಗಡೆ ಮಾಡಲಾಯಿತು. ಮರು ವರ್ಷ ಪ್ರಥಮ ಸ್ವಾತಂತ್ರ್ಯೋ ತ್ಸವದ ಸ್ಮರಣೆಗಾಗಿ ಸ್ವಿಜರ್‌ಲ್ಯಾಂಡ್‌ನ ಮೆ. ಕೋರ್‌ವೋ ಯೋಸಿಯರ್ ಕಂಪನಿಯ ಕಡೆಯಿಂದ ವಿನ್ಯಾಸ ಮಾಡಿಸಿದ ಮಹಾತ್ಮ ಗಾಂಧಿಜಿಯವರ ಚಿತ್ರವುಳ್ಳ ನಾಲ್ಕು ಅಂಚೆ ಚೀಟಿಗಳನ್ನು ಏಕಕಾಲದಲ್ಲಿ ಹೊರತರಲಾಯಿತು.

ಇದುವರೆಗೆ ಸುಮಾರು 300ಕ್ಕೂ ಹೆಚ್ಚು ಗಾಂಧಿಜಿಯವರ ಭಾವಚಿತ್ರದ ನೆನಪಿನ ಅಂಚೆ ಚೀಟಿಗಳನ್ನು ಹೊರತರಲಾಗಿದ್ದು, ವಿಶ್ವದಲ್ಲೇ ಅತೀ ಹೆಚ್ಚಿನ ವ್ಯಕ್ತಿಗತ ಅಂಚೆ ಚೀಟಿ ಇದಾಗಿದೆ. ಸುಮಾರು 70 ವರ್ಷಗಳ ನಂತರ, 1948ರಲ್ಲಿ ಬಿಡುಗಡೆಯಾದ
ಗಾಂಧಿಜಿ ಅಂಚೆಚೀಟಿಗಳ 10 ರುಪಾಯಿ ಆವೃತ್ತಿಯನ್ನು ಭಾರತೀಯ ಅಂಚೆ ಚೀಟಿಗಳ ಸಂಗ್ರಹದ ನಿಜವಾದ ರತ್ನವೆಂದು ಪರಿಗಣಿಸಲಾಗಿದೆ. ಏಪ್ರಿಲ್ 2017ರಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದ ಹರಾಜಿನಲ್ಲಿ ಅಪರೂಪದ 10 ರುಪಾಯಿಯ
ಗಾಂಧಿಜಿಯವರ ನಾಲ್ಕು ಅಂಚೆ ಚೀಟಿಗಳು ದಾಖಲೆ 500000 ಪೌಂಡುಗಳಿಗೆ ( ಅಂದಾಜು 1.5 ಕೋಟಿ ರು.) ಆಸ್ಟ್ರೇಲಿಯನ್ ಮೂಲದ ಸಂಗ್ರಾಹಕನಿಗೆ ಮಾರಾಟವಾಯಿತು. ಭಾರತದಲ್ಲಿ ಇದುವರೆಗೆ ಸುಮಾರು 3000ಕ್ಕೂ ಹೆಚ್ಚು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ. 1952ರಲ್ಲಿ ಅಧ್ಯಾತ್ಮಿಕ ಸಾಧಕಿ ಮೀರಾಬಾಯಿ ಅವರ ಮೊದಲ ಮಹಿಳೆಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. 1957ರಲ್ಲಿ ಭಾರತದ ಭೂಗೋಳಿಕ ಚಿತ್ರದ ಅಂಚೆಚೀಟಿಯನ್ನು ಹಾಗೂ ಅಂಚೆ ಸೇವೆಗಲ್ಲದೆ ಸರಕಾರದ ಆದಾಯ ಮೂಲವಾಗಿ ರೆವಿನ್ಯೂ ಸ್ಟಾಂಪ್ ಅನ್ನೂ ಸಹ ಜಾರಿಗೆ ತರಲಾಯಿತು.

ಪ್ರಥಮ ಅಂಚೆ ಫಿಲಾಟಲಿಕ್ ಸೊಸೈಟಿಯು 1897ರಲ್ಲಿ ಕೋಲ್ಕತಾದಲ್ಲಿ ಪ್ರಾರಂಭಗೊಂಡಿತು. ಅಂಚೆಚೀಟಿಯ ಇತಿಹಾಸದ ಮೇಲೆ ಬೆಳಕು ಚೆಲ್ಲಲು 1968ರಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಫಿಲಾಟಲಿ ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಭಾರತ
ಸರಕಾರದ ಆಶ್ರಯದಲ್ಲಿ ಫಿಲಾಟಲಿಕ್ ಕಾಂಗ್ರೆಸ್ ಆಫ್ ಇಂಡಿಯಾ ಏಷ್ಯಾ ಖಂಡದ ಎಲ್ಲಾ ರಾಷ್ಟ್ರಗಳನ್ನೊಳಗೊಂಡ ಪ್ರಥಮ ವಾಗಿ ಏಷಿಯಾನ-77 ಅಂಚೆ ಚೀಟಿಯ ಪ್ರದರ್ಶನವನ್ನು 1977ರ ಅಕ್ಟೋಬರ್ 19 ರಿಂದ 2 ರವರೆಗೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದು ಹೆಮ್ಮೆಯ ಸಂಗತಿ. ಇಂದಿಗೂ ಸಹ ನಿತ್ಯ ಜನಜೀವನದ ಒತ್ತಡಗಳ ನಡುವೆ ಅಂಚೆ ಚೀಟಿ ಸಂಗ್ರಹದ ಹವ್ಯಾಸವನ್ನು ಹಲವಾರು ಜನ ಮುಂದುವರಿಸಿಕೊಂಡು ಬಂದಿರುವುದು ಹವ್ಯಾಸದ ವಿಶಿಷ್ಟವಾಗಿದೆ.