Thursday, 12th December 2024

ಅಧಿಕಾರ ಹೊಂದಾಣಿಕೆಯಿಂದ ಪಕ್ಷಗಳು ಶಿಥಿಲ

ವಿಶ್ಲೇಷಣೆ

ಪ್ರೊ.ಆರ್‌.ಜಿ.ಹೆಗಡೆ

ramhegde62@gmail.com

ಕರ್ನಾಟಕದಲ್ಲಿ ಪಕ್ಷಗಳನ್ನು ಕಾಡುತ್ತಿರುವ ಇಂದಿನ ಪ್ರಮುಖ ಚಿಂತೆ ಟೀಂ ಬಿಲ್ಡಿಂಗ್‌ನದು. ಕೆಲಸ ಮಾಡುವ, ಚುನಾವಣೆಗೆ ನಿಲ್ಲುವ, ಗೆದ್ದರೆ ಸರಕಾರ
ರಚಿಸಲು ಬೇಕಾಗುವ, ಕನಿಷ್ಠ ಪ್ರತಿಪಕ್ಷವಾಗಿ ಕೆಲಸ ಮಾಡುವಂತಹ ಗುಂಪನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ? ಒಳಯುದ್ಧಗಳನ್ನು ನಿಲ್ಲಿಸಿ ಪಕ್ಷದೊಳಗಿನವರೇ ಒಬ್ಬರನ್ನೊಬ್ಬರು ಸೋಲಿಸಿಬಿಡುವುದನ್ನು ತಪ್ಪಿಸುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ.

ಪ್ರಮುಖ ನಾಯಕರನ್ನು ಬಿಟ್ಟರೆ ಎಲ್ಲ ಪಕ್ಷಗಳ ಬಹಳಷ್ಟು ನಾಯಕರು ಬೇರೆ ಪಕ್ಷಗಳ ಜತೆ ಒಳಮಾತುಕತೆಯಲ್ಲಿ ಇದ್ದಂತಿದೆ. ತಮ್ಮಲ್ಲಿ ಸೂಕ್ತ ‘ಗೌರವ’ ಸಿಗದಿದ್ದರೆ ಅಥವಾ ಬೇರೆಡೆ ‘ಹೆಚ್ಚು ಗೌರವ’ ಸಿಗುವ ಭರವಸೆಯಿದ್ದರೆ ಹೋಗಲು ಸಿದ್ಧರಾಗಿ ಕುಳಿತಿದ್ದಾರೆ. ಟಿಕೆಟ್ ತಪ್ಪಿದರಂತೂ ಹೊರಟೇ ಬಿಡಲು ಸಿದ್ಧರಾಗಿದ್ದಾರೆ. ಹೀಗಾಗಿ ‘ಟೀಂ ಬಿಲ್ಡ್’ ಮಾಡದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ. ಆದರೆ ಕೆಲಸ ಸುಲಭವೇನೂ ಅಲ್ಲ. ಚುನಾವಣೆಗೆ ಮುನ್ನ ಹೋಗುವವರನ್ನು ತಡೆಯಲು ಯಾವ ರೀತಿಯ ಬೇಲಿಗಳೂ ಇಲ್ಲ. ಕಾನೂನಾತ್ಮಕ ದಿಗ್ಬಂಧನಗಳನ್ನು ಹಾಕಲು ಸಾಧ್ಯವಿಲ್ಲ. ‘ಹಿಡಿದಿಡ ಬಹುದಾ  ರೇಟು’ ಕೂಡ ವಿಪರೀತ. ಪಕ್ಷದಿಂದ ಪಕ್ಷಕ್ಕೆ ಹಾರುವುದು ಚಿಟಿಕೆ ಹೊಡೆಯುವಷ್ಟು ಸುಲಭ.

ಬಿಜೆಪಿ ಸೇರುವುದಾದರೆ ಪಕ್ಷದ ತತ್ವ- ಸಿದ್ಧಾಂತವನ್ನು ಮತ್ತು ಮೋದಿ ನಾಯಕತ್ವವನ್ನು ಮೆಚ್ಚಿ ಸೇರುತ್ತಿದ್ದೇನೆ ಎಂದು ಹೇಳಿದರಾಯಿತು. ಬಿಡುವುದಾದರೆ ಸಿದ್ಧಾಂತಗಳ, ಮೋದಿ ನಾಯಕತ್ವದ ಕುರಿತು ಭ್ರಮನಿರಸನ ಎಂದರಾಯಿತು. ಕಾಂಗ್ರೆಸ್ ಸೇರುವುದಾದರೆ ಮೊದಲು ಬಿಜೆಪಿಯ ಎಂದು ಹೇಳಿದ ಸ್ಥಳದಲ್ಲಿ ಕಾಂಗ್ರೆಸ್‌ನ ಹಾಗೂ ಮೋದಿ ಇರುವಲ್ಲಿ ಸೋನಿಯಾ ಗಾಂಧಿ ಎಂದು ತಿದ್ದಿಕೊಂಡರಾಯಿತು. ಇನ್ನು ಜೆಡಿಎಸ್ ಸೇರುವು ದಿದ್ದರೆ ದೇವೇಗೌಡರ ಹಾಗೂ ಕುಮಾರಸ್ವಾಮಿಯವರ ನಾಯಕತ್ವ ಮೆಚ್ಚಿ ಎಂದು ಹೇಳಿದರಾಯಿತು. ಭ್ರಮನಿರಸನವಂತೂ ಎಷ್ಟು ಹೊತ್ತಿಗೂ ಆಗಬಹುದು.

ಹೀಗಾಗಿ ಪಕ್ಷಗಳು ತೀವ್ರ ಅಸ್ಥಿರತೆ ಎದುರಿಸುತ್ತಿವೆ. ಕಂಗಾಲು ಬಿದ್ದಂತಿವೆ. ಪಕ್ಷಗಳ ತಲೆನೋವಿಗೆ ಕಾರಣ ಇದು. ಪರಿಹಾರ ಕಂಡು ಹಿಡಿಯುವ ಮುನ್ನ ಸದಸ್ಯರನ್ನು ಪಕ್ಷ ನಿಷ್ಠರನ್ನಾಗಿರುವಂತೆ ಮಾಡುವ ಶಕ್ತಿ ಯಾವುದು? ಪಕ್ಷವೊಂದು ಹೇಗೆ ಬೆಳೆಯುತ್ತದೆ? ಯಾಕೆ ಸಾಯುತ್ತದೆ? ಇಂತಹ
ವಿಷಯಗಳನ್ನು ತಾತ್ವಿಕವಾಗಿ ಅರ್ಥಮಾಡಿಕೊಳ್ಳಬೇಕು. ಪಕ್ಷವೊಂದರ ಕೇಂದ್ರ ಪ್ರಜ್ಞೆ ಅದರ ಐ ಯಾಲಜಿ ಅಂದರೆ ಸಿದ್ಧಾಂತ. ಸಾಮಾಜಿಕ, ಆರ್ಥಿಕ, ಅಂತಾರಾಷ್ಟ್ರೀಯ ಮತ್ತಿ ತರ ನೀತಿಗಳನ್ನು ನಿರೂಪಿಸುವುದು ಅದು. ಪಕ್ಷದ ಜೀವಾಳ ಮತ್ತು ಆತ್ಮ ಅದೇ. ಜನರನ್ನು ಪಕ್ಷಕ್ಕೆ ಕರೆತರುವ, ಅವರನ್ನು
ಒಂದುಗೂಡಿಸಿ ಇಡುವ ವಿಚಿತ್ರ ಶಕ್ತಿಯೂ ಅದೇ.

ಕುತೂಹಲವೆಂದರೆ ರಾಜಕೀಯ ವಿಚಾರಗಳು ಮನಸ್ಸಿನ ಮೇಲೆ ಭಾರಿ ಪ್ರಭಾವ ಬೀರುತ್ತವೆ. ನಿಗೂಢ ಕಾರಣಕ್ಕೆ. ಬಹುಶಃ ಕಾರಣ ಮನಶ್ಶಾಸೀಯ ವಾದದ್ದು. ಅಂದರೆ ಮನುಷ್ಯನ ಮನಸ್ಸು ಧರ್ಮದಂತೆ ರಾಜಕೀಯವನ್ನೂ ಆಳವಾಗಿ ಪ್ರೀತಿಸುತ್ತದೆ. ಮನುಷ್ಯ ರಾಜಕೀಯ ಪ್ರಾಣಿ. ಇದನ್ನೆಲ್ಲ ಗುರುತಿಸಿಯೇ ‘ಕಾರ್ಲ್ ಮಾರ್ಕ್ಸ್’ ವಿಚಾರಕ್ಕಿಂತಲೂ ಹೆಚ್ಚು ಶಕ್ತಿಯುತವಾದದ್ದು ಬೇರೆ ಯಾವುದೂ ಇಲ್ಲ ಎಂದು ಹೇಳಿದ್ದು. ವಿಚಾರಕ್ಕೆ, ಸಿದ್ಧಾಂತಕ್ಕೆ ಜನರನ್ನು ಸೆಳೆಯುವ, ಹುರಿದುಂಬಿಸುವ, ಹುಚ್ಚಾಗಿಸುವ ಶಕ್ತಿ ಇದೆ. ಲಕ್ಷ ಲಕ್ಷ ಜನ ರಾಜಕೀಯದತ್ತ, ನಾಯಕರತ್ತ, ಪಕ್ಷಗಳತ್ತ  ಆಕರ್ಷಿತರಾಗು ವುದು, ಕಾರ್ಯಕರ್ತರಾಗುವುದು ಇದಕ್ಕೆ. ಪಕ್ಷ ಬೆಳೆಸುವ, ಒಂದಾಗಿಸುವ ಶಕ್ತಿ ಇದು.

ಐಡಿಯಾಲಜಿಯನ್ನು ಸೃಷ್ಟಿಸುವುದು ಚಿಂತಕರು/ ನಾಯಕರು. ಆದರೆ ಮುಂದಿನ ಹಂತದ ನಾಯಕ/ ಕಾರ್ಯಕರ್ತರನ್ನು ಸ್ರಷ್ಟಿಸುವವು ಸಿದ್ಧಾಂತಗಳೇ. ಗಾಂಧಿ, ನೆಹರು, ಇಂದಿರಾ, ವಾಜಪೇಯಿ, ಆದ್ವಾಣಿ, ಮೋದಿಯವರಂಥ ಮಹಾನಾಯಕರೆಲ್ಲರೂ ಸಿದ್ಧಾಂತಗಳಿಂದಲೇ ಸೃಷ್ಟಿಯಾ
ದವರು. ಗಮನಿಸಿ. ಅವರ ಶಕ್ತಿ ಇರುವುದು, ಬರುವುದು ಹಿಂದಿರುವ ಸಿದ್ಧಾಂತದ ಶಕ್ತಿಯಿಂದಾಗಿಯೇ. ನಾಝಿ ಐಡಿಯಾಲಜಿಯಿಂದಾಗಿಯೇ ಹಿಟ್ಲರನಿಗೆ ಅಂತಹ ಶಕ್ತಿ ಬಂದಿದ್ದು. ಅಹಿಂಸಾ ತತ್ವವೇ ಗಾಂಽಗೆ ಶಕ್ತಿ ಕೊಟ್ಟಿದ್ದು.

ಧರ್ಮ ಒಂದು ಅಪೀಮು. ಅದಕ್ಕೆ ಜನರಿಗೆ ಅಮಲೇರಿಸುವ ಶಕ್ತಿ ಇದೆ ಎಂದು ಕಾರ್ಲ್ ಮಾರ್ಕ್ಸ್ ಹೇಳಿದ. ಆದರೆ ನಾವು ಅರಿಯಬೇಕು. ಏನೆಂದರೆ ರಾಜಕೀಯವೂ ಅಪೀಮು ಇದ್ದ ಹಾಗೆಯೇ. ಮುಖ್ಯವಾಗಿ ರಾಜಕೀಯ ಸಿದ್ಧಾಂತ ಅಪೀಮು ಇದ್ದ ಹಾಗೆ. ಅದಕ್ಕೂ ಜನರ ತಲೆ ತಿರುಗಿಸುವ ಶಕ್ತಿ
ಇದೆ. ಸಿದ್ಧಾಂತ ಪಕ್ಷವೊಂದರ ಧರ್ಮಗ್ರಂಥ. ನಾಯಕರುಗಳು ದೇವರುಗಳು. ಜನ, ಕಾರ್ಯಕರ್ತರು ಭಕ್ತರು. ಹೀಗೆ ಒಂದುಗೂಡಿದಾಗ ಪಕ್ಷ ಅಥವಾ ರಾಜಕೀಯ ವೇದಿಕೆಯಲ್ಲಿರುವ ಜನ ಧಾರ್ಮಿಕವಾಗಿ ಒಂದಾಗಿ ಹೋಗುತ್ತಾರೆ.

ಎಷ್ಟರ ಮಟ್ಟಿಗೆಂದರೆ ವಿಚಾರಧಾರೆಯೇ ಅವರ ಜೀವನವಾಗಿ ಹೋಗುತ್ತದೆ. ಸಿದ್ಧಾಂತ ತಮಗೆ ನೀಡಿರುವ ವ್ಯಕ್ತಿತ್ವವನ್ನು, ಜೀವನ ದೃಷ್ಟಿಯನ್ನು, ಐಡೆಂಟಿಟಿಯನ್ನು ಕಳಚಿಡಲು ಅವರಿಗೆ ಸಾಧ್ಯವಾಗುವುದೇ ಇಲ್ಲ. ಪಕ್ಷ ಬಿಡುವುದೆಂದರೆ ಧರ್ಮ, ದೇಹ ತ್ಯಜಿಸಿದ ಹಾಗೆ. ಹೀಗೆ ಆದಾಗ ಒಂದು ಅಪರಿಮಿತ ಶಕ್ತಿ ಹುಟ್ಟಿಕೊಳ್ಳುತ್ತದೆ. ಬೇಕಾದರೆ ಜನ ಯುದ್ಧ ಮಾಡಲು ಸಿದ್ಧಾವಾಗುತ್ತಾರೆ. ಸಾಯಲು ಸಿದ್ಧವಾಗುತ್ತಾರೆ. ಚುನಾವಣೆಯಲ್ಲಿ ಒಂದಾಗುವಂತಹ ಚಿಲ್ಲರೆ ವಿಷಯ ಬಿಡಿ. ಸಿದ್ಧಾಂತಗಳು ಜನರ ಮೇಲೆ ಹೇಗೆ ಪ್ರಭಾವ ಬೀರಿದ್ದವು, ಬೀರುತ್ತವೆ ಎಂಬುದನ್ನು ಅರಿಯಲು ಎಂಬತ್ತ ರವರೆಗಿನ ನಮ್ಮ ದೇಶದ ರಾಜಕೀಯವನ್ನು ನೋಡಬೇಕು. ಜನಮನದ ಮೇಲೆ ದೊಡ್ಡ ಪ್ರಭಾವ ಬೀರಿದ್ದ ಪ್ರಮುಖ ವಿಚಾರಧಾರೆಗಳು
ಕಾಂಗ್ರೆಸ್, ಜನಸಂಘ (ಬಿಜೆಪಿ) ಮತ್ತು ಕಮ್ಯುನಿಸ್ಟ್ ಪಕ್ಷಗಳು. ಅವು ತಮ್ಮ ಜನರ ಮೇಲೆ ಎಂತಹ ಪ್ರಭಾವ ಹೊಂದಿದ್ದವೆಂದರೆ ಕಾರ್ಯಕರ್ತರು ಈ ಐಡಿಯಾಲಜಿಗಳ ಕೈಗೊಂಬೆಗಳಾಗಿ ಹೋಗಿದ್ದರು.

ಕಾಂಗ್ರೆಸ್, ಜನ ಸಂಘ ಮತ್ತು ಕಮ್ಯುನಿಸ್ಟ್ ವ್ಯಕ್ತಿತ್ವ ಹೀಗೆ ಸ್ಪಷ್ಟ ಐಡೆಂಟಿಟಿಗಳನ್ನು ವೈಯಕ್ತಿಕ ಬದುಕಿನಲ್ಲಿ ಕೂಡ ನಿರೂಪಿಸಿಕೊಂಡುಬಿಟ್ಟಿದ್ದರು.
ಕಾರ್ಯಕರ್ತರನ್ನು ನೋಡಿದರೆ ಸಾಕು, ಅವರು ಯಾವ ಪಕ್ಷದ ಬೆಂಬಲಿಗರೆಂಬುದು ಗೊತ್ತಾಗಿ ಹೋಗುತ್ತಿತ್ತು. ಕಾರ್ಯಕರ್ತರು ಕ್ಯಾರಿಕೇಚರ್‌ ಗಳಾಗಿ, ಕಾರ್ಟೂನ್‌ಗಳಾಗಿ ಹೋಗಿದ್ದರು. ಅಂದರೆ ಒಂದು ಪಕ್ಷದ ಜನ ಎಲ್ಲರೂ ಒಂದೇ ರೀತಿ. ಅವರು ಮಾತನಾಡುವುದು, ನಿಲ್ಲುವುದು, ಕೂಡುವುದು, ನಗುವುದು, ಮುಖಚಹರೆ ಮಾಡುವುದು ಎಲ್ಲವೂ ತಮ್ಮ ಹಿರಿಯ ನಾಯಕರ ಹಾಗೆ. ಪಕ್ಷದ ಸಿದ್ಧಾಂತವನ್ನು ಅನುಸರಿಸಿ; ಒಂದೇ ಅಚ್ಚಿನಲ್ಲಿ ತಯಾರಿಸಿದ ಹಾಗೆ. ಮತ್ತೆ ಬೇರೆ ಪಕ್ಷದವರು ತಯಾರಾಗುವುದು ಬೇರೆಯದೇ ಆದ ಅಚ್ಚಿನಲ್ಲಿ.

ಕಾಂಗ್ರೆಸ್ ವ್ಯಕ್ತಿತ್ವಗಳನ್ನು ರೂಪಿಸಿದ್ದು ಜಾತ್ಯತೀತತೆ, ‘ಗಾಂಧಿವಾದ’ ಮತ್ತು ‘ಸಮಾಜವಾದ’ವನ್ನು ಕೂಡಿಸಿದ ಚಿಂತನ ಕ್ರಮ. ಕಾಂಗ್ರೆಸಿಗರಿಗೆ (ನೆಹರು ಹಾಗೆ) ರಾಜಕೀಯವೇ ಮುಖ್ಯವಾಗಿರಲಿಲ್ಲ. ಸಂಗೀತ, ಸಾಹಿತ್ಯ, ಕಲೆ ಸೌಂದರ್ಯ ಎಲ್ಲವುಗಳ ಖಯಾಲಿಯಿತ್ತು. ನಿಧಾನಗತಿಯ
ರಾಜಕೀಯ, ಸರಳತೆ, ಭೋಳೆತನ, ಮೈಕೈ ನೋವು ಮಾಡಿಕೊಳ್ಳದ ರಾಜಕೀಯ ಶೈಲಿ, ತುಸು ಆಳಸಿತನ(?) ಗಾಂಧಿ ಟೊಪ್ಪಿಗೆ, ಕೆಳಗೆ ದೋತರ, ಮೇಲೆ ವೇಸ್ಟ್ ಕೋಟ್, ದೊಡ್ಡ ಹೊಟ್ಟೆ ಕೂಡ ಅಂದಿನ ಕಾಂಗ್ರೆಸ್ ವ್ಯಕ್ತಿತ್ವದ ಅಂಶಗಳು. ಕಾಂಗ್ರೆಸ್‌ಗೆ ಸೇರಿದವರು ಸ್ಥೂಲವಾಗಿ ಹೀಗೆ.
ಕಾಂಗ್ರೆಸ್ ಬೆಂಬಲಿಗರು ತಮಗೆ ಅರಿವೇ ಇಲ್ಲದ ಹಾಗೆ ನೆಹರೂ ಅಥವಾ ಶಾಸಿಯವರ ನೆರಳಾಗಿ ಹೋಗಿದ್ದರು.

ಜನಸಂಘದ ಮಾದರಿಯ ರಾಜಕಾರಣಿಗಳ ವ್ಯಕ್ತಿತ್ವ ಬೇರೆಯೇ ಇತ್ತು. ಹಿಂದುತ್ವ ಸಂಸ್ಕೃತಿಗೆ ಕಠಿಣವಾಗಿ ಬದ್ಧವಾದವರು ಅವರು. ಹಣೆಯ ಮೇಲೆ ಕುಂಕುಮದ ಬೊಟ್ಟು. ಬಹಳ (ಅತಿರೇಕವೆನಿಸುವಂತಹ) ಶಿಸ್ತಿನವರು. ಹಠವಾದಿಗಳು. ಕಠಿಣ ಪರಿಶ್ರಮಿಗಳು. ದೊಡ್ಡ ಭಾಷಣಕಾರರು. ದೇಶಕ್ಕೆ ತಮ್ಮನ್ನೇ ಮುಡುಪಾಗಿ ಇಟ್ಟವರು. ಬೇರೆಯವರು ಹೇಳಿದ್ದನ್ನು ಕೇಳುವ ಮನಸ್ಸು ಅವರು ಹೊಂದಿದ್ದು ಕಡಿಮೆ. ಮೊಲಕ್ಕೆ ಮೂರೇ ಕಾಲು ಎಂಬ ವಾದಕ್ಕಿಳಿಯುವುದೂ ಅವರ ಸ್ವಭಾವವೇ ಆಗಿತ್ತು. ಎಲ್ಲ ಕಾರ್ಯಕರ್ತರ ಮಾತನಾಡುವ ಶೈಲಿಯೂ- ತಲೆ ಅಲುಗಾಡಿಸುವ, ಮಾತಾಡಬೇಕಾದರೆ ಉಸಿರು ತೆಗೆದುಕೊಳ್ಳುವ ವಿಧಾನ ಎಲ್ಲವೂ- ಒಂದೇ ರೀತಿ.

ವಾಜಪೇಯಿ ಹಾಗೆ. ಅಥವಾ ಆದ್ವಾಣಿ ಹಾಗೆ. ಕಮ್ಯುನಿಸ್ಟರ ವ್ಯಕ್ತಿತ್ವ ಬೇರೆಯೇ. ಜೀವನದ ಆನಂದ, ಹಾಸ್ಯಪ್ರಜ್ಞೆ ಕಳೆದುಕೊಂಡು ನಿಂತಂತೆ ಅನಿಸಿದವರು ಅವರು. ಸಣಕಲು ವ್ಯಕ್ತಿತ್ವ. ಊಟ ಮಾಡದವರಂತೆ ಕಾಣುತ್ತಿದ್ದವರು. ಅಸ್ತವ್ಯಸ್ತ ಕೂದಲಿನ ಅವರ ಹೆಗಲಿಗೆ ಯಾವಾಗಲೂ ಒಂದು ಜೋತುಬಿದ್ದ ಬಟ್ಟೆಯ ಚೀಲ. ಕದ್ದುಮುಚ್ಚದೇ ಬಾರು ಗೀರಿಗೆ ನೇರ ಹೋಗುವ ಧೈರ್ಯವಿದ್ದವರು ಅವರು. ಜಗತ್ತನ್ನೇ ತಲೆಯ ಮೇಲೆ ಹೊತ್ತುಕೊಂಡು ನಿಂತಿರುವ ರೀತಿಯ ಮುಖಚಹರೆ. ಸಮಾಜದ ರಿವಾಕಅಜುಗಳ ಹೊರಗೆ ನಿಂತಿದ್ದವರು ಅವರು. ಸದಾ ಬಂಡಾಯದ ಮಾತು. ಅವರ ದೇವತೆಗಳು ಇ.ಎಂ.ಎಸ್. ನಂಬೂದ್ರಿಪಾದ್ ಮತ್ತು ಜ್ಯೋತಿ ಬಸು.

ಹೀಗೆ ಕಾರ್ಯಕರ್ತರು ಯಾರು ಯಾವ ಪಕ್ಷದವರು ಎನ್ನುವುದನ್ನು ಸುಲಭವಾಗಿ ಹೇಳಿಬಿಡಬಹುದಾಗಿತ್ತು. ಎಂಬತ್ತರ ದಶಕದ ನಂತರ ನಿಧಾನವಾಗಿ ಸಿದ್ಧಾಂತಗಳ ಹಿಡಿತ ಕಡಿಮೆಯಾಗುತ್ತ ಹೋಯಿತು. ಅದಕ್ಕೂ ಕಾರಣಗಳಿವೆ. ಏನೆಂದರೆ ಸಿದ್ಧಾಂತಗಳು ತಮ್ಮನ್ನು ಅಪ್ ಗ್ರೇಡ್ ಮಾಡಿಕೊಳ್ಳಲೇ ಇಲ್ಲ. ನಿಂತ ನೀರಾಗಿ ಹೋಗಿಬಿಟ್ಟವು. ಮತ್ತೆ ಕಾಂಗ್ರೆಸ್ ಪಕ್ಷ ಜಾಗತೀಕರಣದ ಗಾಳಿ, ರಾಮ ಮಂದಿರ ಚಳವಳಿ ಆರಂಭವಾದಂತೆ ಸೈದ್ಧಾಂತಿಕ ಗೊಂದಲದಲ್ಲಿ ಬಿದ್ದುಬಿಟ್ಟಿತು. ತಾನು ಎಡವೋ, ಬಲವೋ, ಮಧ್ಯಮವೋ ಎನ್ನುವ ಕುರಿತ ಸ್ಪಷ್ಟತೆ ಅದಕ್ಕೆ ಹೋಗಿಬಿಟ್ಟಿತು.

ಇನ್ನೂ ಅದು ಗೊಂದಲದಲ್ಲಿ ಇದ್ದಂತಿದೆ. ಕಮ್ಯುನಿಸಂ ಬಿಡಿ. ಸೋವಿಯಟ್ ಯೂನಿಯನ್ನನ ಪತನದ ನಂತರ ಕಮ್ಯೂನಿಸಂ ಮತ್ತು
ಸಮಾಜವಾದ ಗಳ ಕುರಿತ ವಿಶ್ವಾಸಾರ್ಹತೆ ಹೋಗಿಬಿಟ್ಟಿತು. ಸೈದ್ಧಾಂತಿಕತೆ ಇಟ್ಟುಕೊಂಡು ಬಂದಿದ್ದು ಬಿಜೆಪಿ ತನ್ನ ಸಾಂಸ್ಕೃತಿಕ ರಾಜಕೀಯ ಸಿದ್ಧಾಂತದ ಮೇಲೆ ನಿಂತಿರುವ ಅದು ಇಂದಿನ ಗಟ್ಟಿಯಾದ ಪಕ್ಷ. ಆದರೆ ಅಧಿಕಾರ ರಾಜಕೀಯ ಬಿಜೆಪಿಯ ಶಿಲ್ಪವನ್ನೂ ಕ್ರಮೇಣ ಶಿಥಿಲಗೊಳಿಸುತ್ತಿದೆ.
ಸೈದ್ಧಾಂತಿಕ ಹಿನ್ನೆಲೆ ಇಲ್ಲದವರನ್ನು ರಾಜಕೀಯ ಕಾರಣಗಳಿಗಾಗಿ ಓಲೈಸಬೇಕಾಗಿ ಬಂದ ಬಿಜೆಪಿ.

ಅಂಥವರಿಂದಾಗಿ ಆಂತರಿಕವಾಗಿ ಪೊಳ್ಳಾಗುತ್ತಿದೆ. ನಾಯಕರನ್ನು, ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಮಾರ್ಗ ಸೈದ್ಧಾಂತಿಕ ರಾಜಕೀಯ ಮಾತ್ರ. ಹಿಡಿದಿಡಲು ಅಂತಹ ಬಂಧ ಬೇರೊಂದಿಲ್ಲ. ಅಧಿಕಾರಕ್ಕಾಗಿ ಎಲ್ಲರ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತ ಹೊರಟಿದ್ದರಿಂದಾಗಿಯೇ
ಇಂದು ಪಕ್ಷಗಳು ಅಸ್ಥಿರತೆಯಲ್ಲಿರುವುದು. ಇದು ಮುಂದುವರಿಯುತ್ತ ಹೋದರೆ ಜನರನ್ನು ಕೂಡಿಸಿಡುವ ಬಂಧವೇ ಇಲ್ಲವಾಗಿ ಹೋಗಿ ಪಕ್ಷಗಳು ಕಷ್ಟಕ್ಕೀಡಾಗಲಿವೆ.