Saturday, 14th December 2024

ಒಗ್ಗಟ್ಟಿನಿಂದ ಮಾತ್ರ ಬಲಿಷ್ಠ ಭಾರತ ಸಾಧ್ಯ

ಸಂಗತ

ವಿಜಯ್‌ ದರ್‌ಡ

ನಿಸ್ಸಂದೇಹವಾಗಿ, ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಮುಸ್ಲಿಮನೂ ಭಾರತೀಯನೇ ಆಗಿದ್ದಾನೆ. ಆತನ ನಿಷ್ಠೆಯನ್ನು ಎಂದೂ ಶಂಕಿಸಲಾಗದು. ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಕೆಲಸದಿಂದ ಭಾರತಕ್ಕೆ ಒಳಿತಾ ಗುವುದಿಲ್ಲ. ನಮ್ಮ ಸಂವಿಧಾನ, ಈ ದೇಶದಲ್ಲಿರುವ ಎಲ್ಲರನ್ನೂ ಸಮಾನರು ಎಂದು ಪರಿಗಣಿಸುತ್ತದೆ ಮತ್ತು ನಮ್ಮ ಪೂರ್ವಜರು ಕೂಡ ಇದರಿಂದ ಹೊರತಲ್ಲ.

ಜ್ಞಾನವಾಪಿ ಕುರಿತಾಗಿ ಇಡೀ ದೇಶದಲ್ಲಿ ಭರಪೂರ ಚರ್ಚೆ ಆರಂಭವಾರುವ ಬೆನ್ನಲ್ಲೇ ದೇಶದೆಡೆ ಇರುವ ಹಲವಾರು ಮಂದಿರ-ಮಸೀದಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಕೆಲವರಂತೂ ಇತಿಹಾಸದ ವಿವಾದಾತ್ಮಕ ಪುಟಗಳನ್ನು ತಿರುಚುವ ಯತ್ನ ಮಾಡುತ್ತಿದ್ದಾರೆ. ದೇಶ ಯಾವ ಪಥದಲ್ಲಿ ಹೋಗುತ್ತಿದೆ ಎಂಬುದರ ಬಗ್ಗೆ ‘ಬುದ್ಧಿಜೀವಿ’ಗಳು ಆತಂಕಿತ ರಾಗಿದ್ದಾರೆ.

ಇಂತಹದೊಂದು ಉದ್ವಿಗ್ನ ವಾತಾವರಣದ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗಮನಾರ್ಹ ಹೇಳಿಕೆನಿಡಿದ್ದಾರೆ. ಮಾವಲ್ಲ ಎಲ್ಲದಕ್ಕೂ ಪರಿಹಾರ ರೂಪದಲ್ಲಿದೆ. ಜ್ಞಾನವಾಪಿ ವಿವಾದವನ್ನು ಸೌಹಾರ್ದಯುತ ವಾಗಿ, ನ್ಯಾಯಾಲಯದ ಆದೇಶವನ್ನು ಗೌರವಿಸಿ ಇತ್ಯರ್ಥಪಡಿಸಬೇಕು, ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗ ಹುಡುಕುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥರ ಈ ಹೇಳಿಕೆ ಖಂಡಿತವಾಗಿಯೂ ಒಪ್ಪತಕ್ಕ ಮಾತು.

ಇತಿಹಾಸದ ಪುಟಗಳಲ್ಲಿ ಹೂತುಹೋಗಿರುವ ಘಟನೆಗಳ ಗಾಯಕ್ಕೆ ಈಗ ಉಪ್ಪುಸವರಿ ಉಲ್ಬಣಿಸುವಂತೆ ಮಾಡುವುದು ಸರಿ ಯಲ್ಲ. ಖಂಡಿತವಾಗಿಯೂ ಬಹುಸಂಖ್ಯಾತ ಹಿಂದೂಗಳು ಸಂಘಪ್ರಮುಖರ ಅಭಿಪ್ರಾಯ ಮತ್ತು ಆಲೋಚನೆಗಳನ್ನು ಗೌರವಿಸು ತ್ತಾರೆ. ಅವರ ಮಾತುಗಳಿಗೆ ಎಡೆ ಮಾನ್ಯತೆ ಸಿಗಲಿ ಮತ್ತು ಇನ್ನಷ್ಟು ವಿವಾದಗಳು ಉದ್ಭವವಾಗದಿರಲಿ ಎಂಬುದು ಎಲ್ಲರ ಆಶಯ ವಾಗಿದೆ.

ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಪೂಜಾಸ್ಥಳಗಳ ಕಾಯಿದೆ ೧೯೯೧ರ ಅನುಸಾರ ಎಲ್ಲ ಧಾರ್ಮಿಕ ಸ್ಥಳಗಳು ಆಗಸ್ಟ್ ೧೫, ೧೯೪೭ರಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬುದು ಕಾಯಿದೆಬದ್ಧ ವಿಚಾರ. ಹಾಗಾಗಿ ಕಾನೂನಾತ್ಮಕವಾಗಿ ಹೇಳುವುದಾದರೆ ಯಾವುದೇ ವಿವಾದ ಸೃಷ್ಟಿಸುವುದು ಸರಿಯಲ್ಲ. ಇತಿಹಾಸದ ಪುಟಗಳಡಿ ಹೂತುಹೋಗಿರುವ ಅನೇಕ ಶೋಷಣೆಯ ಕಥೆಗಳ ಕುರಿತಾಗಿ ಬಹುಸಂಖ್ಯಾತ ಹಿಂದೂಗಳ ಮನಸ್ಸಿನಲ್ಲಿ ಆಕ್ರೋಶವಿದೆ. ಏಳನೇ ಶತಮಾನದಲ್ಲಿ ಖಲೀಫರ ಸೈನ್ಯ ಭಾರತದ ಮೇಲೆ ದಂಡೆತ್ತಿ ಬಂದುದರದಲ್ಲಿ ಯಾವ ಸಂಶಯವೂ ಇಲ್ಲ. ಎಂಟನೇ ಶತಮಾನದ ಆದಿಯಲ್ಲಿ ಅವರಿಗೆ ಸತತವಾಗಿ ಗೆಲುವು ಸಿಗಲಾರಂಭಿಸಿತು. ಆ ನಂತರದಲ್ಲಿ ಅನೇಕ ಕ್ರೂರ ಮತ್ತು ದಬ್ಬಾಳಿಕೆಯ ಮನಃಸ್ಥಿತಿಯ ಆಳ್ವಿಕೆದಾರರು ಭಾರತವನ್ನು ಆಕ್ರಮಿಸಿದರು.

ಹಿಂಸೆ ಮತ್ತು ಶೋಷಣೆಯ ಅನೇಕ ವೃತ್ತಾಂತಗಳು ಇತಿಹಾಸದ ಪುಟಗಳಲ್ಲಿವೆ. ಅವರು ಭಾರತ ಮಾತ್ರವಲ್ಲ ವಿಶ್ವದ ನಾನಾ ಭಾಗಗಳಲ್ಲಿ ಇದೇ ರೀತಿಯ ಶೋಷಣೆ ಮಾಡಿದರು. ಇಂದು ಬಹುಮಂದಿ ಅವರ ದೌರ್ಜನ್ಯಗಳ ಹಿನ್ನಲೆಯನ್ನು ನೆನೆದು ಕೋಪಕ್ಕೀಡಾಗಿದ್ದಾರೆ. ಈ ಆಕ್ರೋಶ ನ್ಯಾಯಯುತವಾದದ್ದೇ ಆಗಿದೆ. ಆದರೆ ಇಂತಹ ಆಕ್ರೋಶದ ಫಲಿತಾಂಶ ಏನಾಗುತ್ತದೆ? ಇದು ನಿಜಕ್ಕೂ ಯೋಚಿಸಬೇಕಾದ ಸಂಗತಿ. ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕಾದ ಸಿದ್ಧಾಂತವನ್ನು ಮತ್ತೆ ದಬ್ಬಾಳಿಕೆಯ ದಿನಗಳತ್ತ ದೂಡಬೇಕೇ? ಭಾರತ ಇಬ್ಭಾಗವಾದಾಗ ನಾವು ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇವೆ.

ಸಾಕು, ಅದು ಮುಂದುವರಿಯುವುದು ಬೇಡ. ಖ್ಯಾತ ಕವಿ ಆಡಂ ಗೋಂಡ್ವಿ ಬರೆದ ಒಂದು ಅರ್ಥಪೂರ್ಣ ಗಝಲ್ ನ ಸಾರ ಹೀಗಿದೆ: ನಮ್ಮ ನಡುವೆ ಯಾರೂ ಶತ್ರುಗಳಿಲ್ಲ, ಅನುಮಾನವಿದೆಯೇ ಇನ್ನೂ ಅಂತಹ ಮಾತುಗಳನ್ನು ಹೂತುಬಿಡಿ, ಈಗ ಮತ್ತದನ್ನು ಕೆಣಕದಿರಿ ಬಾಬರ ಮಾಡಿದ ಪ್ರಮಾದಗಳಿಗೆ ಜುಮ್ಮಾನನ ಮನೆಯೇಕೆ ಸುಡಬೇಕು? ಇಂತಹ ಸಂಕೀರ್ಣ ಕಾಲಘಟ್ಟ ದಲ್ಲಿ ಯಾರನ್ನೂ ಕೆಣಕದಿರಿ ಹಿಟ್ಲರ್‌, ಹುಲಗು, ಚಂಗೇಸ್ ಖಾನ್ ಈಗೆಲ್ಲಿದ್ದಾರೆ? ಅವರೆಲ್ಲ ಮಣ್ಣಲ್ಲಿ ಮಣ್ಣಾಗಿದ್ದಾರೆ, ಈಗ ಯಾರನ್ನೂ ಕೆಣಕುವುದು ಬೇಡ ಬಡತನದ ವಿರುದ್ಧದ ಒಂದು ಯುದ್ಧಕ್ಕೆ ನೀವೆಲ್ಲ ಒಂದಾಗಿ ಬನ್ನಿ ನಮ್ಮ ನಡುವಣ ಧಾರ್ಮಿಕ ನಂಬಿಕೆಗಳನ್ನು ಎಂದೂ ಕೆಣಕದಿರಿ ಗೆಲುವಿನ ಉನ್ಮಾದಕ್ಕೆ ಇತಿಹಾಸವೆಂಬುದು ಸಾಕ್ಷಿಯಾಗುತ್ತದೆ ಮತ್ತು ಅದು ದಮನಿತ ಸಮಾಜದ ಅವಮಾನಕ್ಕೂ ಕಾರಣವಾಗುತ್ತದೆ. ಕೆಲವೊಮ್ಮೆ ಅದು ಪೂಜಾ ಸ್ಥಳಗಳ ಧ್ವಂಸದ ಮೂಲಕ ಹೊರಹೊಮ್ಮಿದರೆ ಮತ್ತೆ ಕೆಲವೊಮ್ಮೆ ಅತ್ಯಾಚಾರಗಳ ಮೂಲಕ ವ್ಯಕ್ತವಾಗುತ್ತದೆ.

ಇದು ಜಗತ್ತಿನೆಡೆ ನಡೆದುಬಂದ ವಿದ್ಯಮಾನ. ಇಂದು ಉಕ್ರೇನಿನಲ್ಲಿ ಏನಾಗುತ್ತಿದೆ? ಅತ್ಯಾಚಾರದ ಕ್ರೂರ ಕಥೆಗಳು ಹೊರ ಬರುತ್ತಿವೆ. ಹಸಿದ ತೋಳಗಳು ಉಕ್ರೇನಿನ ಮಹಿಳೆಯರ ಮೇಲೆ ಮುಗಿಬೀಳುತ್ತಿವೆ. ಇಡೀ ಜಗತ್ತಿನಲ್ಲಿ ಇಸ್ಲಾಮಿಕ್ ಖಿಲಾಪತ್ತನ್ನು ಸ್ಥಾಪನೆ ಮಾಡಬೇಕೆಂಬ ಆತ್ಮರತಿಯ ದುಷ್ಟ ವ್ಯಕ್ತಿತ್ವದ ಪ್ರತೀಕ ಉಗ್ರವಾದಿ ಅಬೂಬಕರ್ ಎಲ್ಲಿದ್ದಾನೆ? ಏನು ಮಾಡಿದ್ದಾನೆ? ತಾನು ಸೋಲಿಸಿದ ಪ್ರಾಂತಗಳ ಹೆಣ್ಮಕ್ಕಳನ್ನು ಆತ ಬರ್ಬರ ಮನಃಸ್ಥಿತಿಯ ಉಗ್ರರ ಕೈಗೆ ಕೊಟ್ಟಿದ್ದಾನೆ.

ಲಕ್ಷಗಟ್ಟಲೆ ಹೆಣ್ಮಕ್ಕಳು ಅತ್ಯಾಚಾರಕ್ಕೆ ಗುರಿಯಾದರು, ಹತರಾದರು, ಇನ್ನೂ ಬಾಳಿ ಬದುಕಬೇಕಾದ ದಿನಗಳಿದ್ದಾಗಲೇ ಇತಿಹಾಸ ದಡಿ ಹೂತು ಹೋದರು. ಅಂತಹ ದುಷ್ಟ ಅಬೂಬಕರ್‌ನನ್ನು ಕೊಂದ ಆರ್ಮಿ ಕೂಡ ಅದೇ ರೀತಿ ವರ್ತಿಸಬೇಕೇ? ಇಲ್ಲ, ಅಲ್ಲಿ ಹಿತವಾದ ಮುಲಾಮು ಹಚ್ಚುವ ಕೆಲಸವಾಗಬೇಕು. ಇತಿಹಾಸದ ಕಪ್ಪುಪುಟಗಳನ್ನು ಚೊಕ್ಕಗೊಳಿಸಿ ಶಾಂತಿಯ ಸಂದೇಶ ಸಾರಬೇಕು. ಇತಿಹಾಸದ ಪುಟಗಳು ಚೊಕ್ಕವಾಗುವ ತನಕ ಹೊಸ ಶಕೆ ಆರಂಭವಾಗದು.

ದುರದೃಷ್ಟವಶಾತ್ ಇಂದು ದ್ವೇಷದ ಸುಳಿಗಾಳಿ ಚಂಡಮಾರುತವಾಗುವ ಸಂದರ್ಭ ಎದುರಾಗಿದೆ. ಎರಡೂ ಕಡೆಗಳಿಂದ ಬೆಂಕಿಯ ಕಿಡಿಗಳು ಹೊತ್ತಿಕೊಂಡಿವೆ. ನಿಮ್ಮನ್ನು ಭೀತರಾಗಿಸುವ ಉದ್ದೇಶ ನನ್ನದಲ್ಲ, ನಾನು ನಿಮ್ಮ ಮುಂದೆ ಕನ್ನಡಿ ಹಿಡಿ ಯುವ ಕೆಲಸ ಮಾಡುತ್ತಿದ್ದೇನೆ ಅಷ್ಟೆ. ಈ ದ್ವೇಷದ ಬಿರುಗಾಳಿ ಎತ್ತೆತ್ತಲೋ ಸಾಗುತ್ತಿದೆ. ಇಂದು ಅದು ಇಸ್ಲಾಂ ಹೆಸರಿನಲ್ಲಿ, ಉಗ್ರವಾದದ ಹೆಸರಿನಲ್ಲಿ ಎಡೆ ಹರಡಿದೆ ಮತ್ತು ಮುಸ್ಲಿಮರೇ ಇಲ್ಲಿ ಬಲಿಪಶುಗಳಾಗುತ್ತಿದ್ದಾರೆ.

ಒಬ್ಬ ನಿಜವಾದ ಮುಸ್ಲಿಮ್ ಎಂದೂ ಉಗ್ರವಾದದೆಡೆ ಸಹಾನುಭೂತಿ ಹೊಂದಿರಬಾರದು. ಆತ ಉಗ್ರವಾದದ ವಿರುದ್ಧ ದನಿ
ಎತ್ತುವ ಕೆಲಸವನ್ನು ಮಾಡಬೇಕು. ಇಡೀ ಜಗತ್ತಿನಲ್ಲಿ ಜನಸಂಖ್ಯೆಯ ಲೆಕ್ಕಾಚಾರದಲ್ಲಿ ಹೇಳುವುದಾದರೆ ಭಾರತ ಮುಸ್ಲಿಂ
ಪ್ರಾಬಲ್ಯ ಹೊಂದಿರುವ ಎರಡನೇ ದೊಡ್ಡ ರಾಷ್ಟ್ರ. ನಿಸ್ಸಂದೇಹವಾಗಿ, ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಮುಸ್ಲಿಮನೂ
ಭಾರತೀಯನೇ ಆಗಿzನೆ. ಆತನ ನಿಷ್ಠೆಯನ್ನು ಎಂದೂ ಶಂಕಿಸಲಾಗದು. ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಕೆಲಸದಿಂದ ಭಾರತಕ್ಕೆ ಒಳಿತಾಗುವುದಿಲ್ಲ.

ನಮ್ಮ ಸಂವಿಧಾನ, ಈ ದೇಶದಲ್ಲಿರುವ ಎಲ್ಲರನ್ನೂ ಸಮಾನರು ಎಂದು ಪರಿಗಣಿಸುತ್ತದೆ ಮತ್ತು ನಮ್ಮ ಪೂರ್ವಜರು ಕೂಡ ಇದರಿಂದ ಹೊರತಲ್ಲ. ಹಾಗಾಗಿ ನಾವು ಪರಸ್ಪರರ ನಡುವೆ ಅಚಲವಾದ ವಿಶ್ವಾಸವನ್ನಿಡೋಣ. ನಮ್ಮ ಒಗ್ಗಟ್ಟಿನಿಂದ ಮಾತ್ರ ಭಾರತವನ್ನು ವಿಶ್ವದಲ್ಲಿ ಬಲಿಷ್ಠಗೊಳಿಸುವುದು ಸಾಧ್ಯ. ಜೈಹಿಂದ್.