Saturday, 14th December 2024

Prabhu Chawla Column: ಬಿಜೆಪಿಯಲ್ಲೀಗ ಹೊಸ ಅಧ್ಯಕ್ಷನ ಹುಡುಕಾಟದ ಭರಾಟೆ

ಪ್ರಭು ಪ್ರವರ

ಪ್ರಭು ಚಾವ್ಲಾ

ಪ್ರಕೃತಿಯಲ್ಲಿ ನಿರ್ವಾತಕ್ಕೆ ಅವಕಾಶವಿಲ್ಲ ಮತ್ತು ನಿರ್ವಾತದಲ್ಲಿ ಗೊಂದಲಕ್ಕೆ ಅವಕಾಶವಿಲ್ಲ. ಆದರೆ, ಈಗ ಸೃಷ್ಟಿಯಾಗಿರುವ ಬಿಜೆಪಿಯ ಅಧ್ಯಕ್ಷ ಸ್ಥಾನವೆಂಬ ನಿರ್ವಾತವನ್ನು ತುಂಬುವ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲ ಗಳು ಹುಟ್ಟಿಕೊಂಡಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗಳಿಕೆ 400 ಸ್ಥಾನಗಳ ಆಸುಪಾಸಿಗೂ ಬಾರದ ಹಿನ್ನೆಲೆಯಲ್ಲಿ ಹಾಗೂ ಪಕ್ಷವು ಸ್ವತಃ ಸರಳ ಬಹುಮತವನ್ನೂ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರೀಯ ಅಧ್ಯಕ್ಷನ ಆಯ್ಕೆಯೆಂಬುದು ಗೊಂದಲದ ಗೂಡಾಗಿದೆ.

ಜೆ.ಪಿ.ನಡ್ಡಾ ಅವಧಿ ಜೂನ್‌ನ ಕೊನೆಯಾಗಿದೆ. ಆದರೆ, ಅವರಿಗೊಬ್ಬ ಬದಲಿ ನಾಯಕನನ್ನು ಹುಡುಕಲು ವರಿಷ್ಠ ರಿಗೆ ಇನ್ನೂ ಸಾಧ್ಯವಾಗದ ಕಾರಣ ಅವರೇ ಇನ್ನೂ ಹಾಟ್ ಸೀಟ್‌ನಲ್ಲಿ ಕುಳಿತಿದ್ದಾರೆ. ನಡ್ಡಾ ಈಗ ಪಕ್ಷದ ಮಧ್ಯಂತರ ಅಧ್ಯಕ್ಷನಷ್ಟೇ ಅಲ್ಲ, ಅವರು ಕೇಂದ್ರ ಸಚಿವರೂ ಹೌದು. ಆದರೆ, ಒಬ್ಬ ವ್ಯಕ್ತಿ ಎರಡು ಪ್ರಮುಖ ಹುದ್ದೆಗಳಲ್ಲಿ ಇರಬಾರದು ಎಂಬ ಪಕ್ಷದ ನಿಯಮದಿಂದಾಗಿ ಅವರನ್ನೀಗ ಬದಲಿಸಲೇಬೇಕಿದೆ.

ಬಿಜೆಪಿಯಲ್ಲೀಗ ಮೊದಲಿನಂತೆ ಕಠಿಣ ನಿರ್ಧಾರಗಳನ್ನು ಸುಲಭವಾಗಿ ತೆಗೆದುಕೊಳ್ಳುವುದು ಪಕ್ಷದ ನಾಯಕತ್ವಕ್ಕೆ
ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ನಿಧಾನವಾಗಿ ಹರಳುಗಟ್ಟುತ್ತಿರುವುದನ್ನು ಸುಳ್ಳಾಗಿಸುವು ದಕ್ಕಾದರೂ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷನನ್ನು ತಾಪ್ಡ್ ತೋಪ್ಡ್ ಹುಡುಕಲೇಬೇಕಿದೆ. ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿ. ಅದರಲ್ಲಿ ಸಂಸದರಿಗೆ ಕೊರತೆಯಿಲ್ಲ. ಸಾಕಷ್ಟು ಮುಖ್ಯಮಂತ್ರಿಗಳೂ ಇದ್ದಾರೆ. ಆದರೆ ಪ್ರತಿಭೆಗೆ ಕೊರತೆ ಕಾಣಿಸುತ್ತಿದೆ.

ದೀರ್ಘಕಾಲದಿಂದ ಅಧಿಕಾರದಲ್ಲಿರುವುದರಿಂದ ಸಹಜವಾಗಿಯೇ ಬೇಕಾದಷ್ಟು ಯಶಸ್ವಿ ಆಡಳಿತಗಾರರು ಸೃಷ್ಟಿ ಯಾಗಿದ್ದಾರೆ. ಬಿಜೆಪಿ ವಿಪಕ್ಷವಾಗಿದ್ದಾಗ ಅದರಲ್ಲಿ ಒಬ್ಬ ಅಟಲ್‌ಗೆ ನಾಲ್ವರು ವಾಜಪೇಯಿಗಳಿದ್ದರು! ಅಥವಾ ಅವರ ಜಾಗ ತುಂಬುವುದಕ್ಕೆ ಇನ್ನೊಬ್ಬ ಆಡ್ವಾಣಿ ಇದ್ದರು. ಅವರಲ್ಲಿ ಯಾರಾದರೊಬ್ಬರು ಪಕ್ಷದ ಅಧ್ಯಕ್ಷರಾಗಿ ರಥವನ್ನು ಮುನ್ನಡೆಸುತ್ತಿದ್ದರು. ಈಗ 12ನೇ ಅಧ್ಯಕ್ಷನ ಆಯ್ಕೆಗೆ ಹುಡುಕಾಟ ನಡೆದಿರುವಾಗ ಅನೇಕ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. ಆದರೆ ಯಾವ ಹೆಸರಿನ ಮೇಲೂ ಈವರೆಗೆ ಶಾಯಿ ಒಣಗಿಲ್ಲ.

ಶಿವರಾಜ್‌ಸಿಂಗ್ ಚೌಹಾಣ್

13ನೇ ವರ್ಷದ ಆರ್‌ಎಸ್‌ಎಸ್ ಸ್ವಯಂಸೇವಕನಾಗಿ ಸಾಮಾಜಿಕ ಜೀವನ ಆರಂಭಿಸಿದ ನಾಯಕ. 1972ರಿಂದ ಸಾರ್ವಜನಿಕ ಬದುಕಿನಲ್ಲಿದ್ದಾರೆ. ಅವರಿಗೀಗ 65 ವರ್ಷ. ಸದ್ಯಕ್ಕೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಎಲ್ಲರಿಗಿಂತ ಮುಂಚೂಣಿ ಯಲ್ಲಿರುವ ವ್ಯಕ್ತಿಯಂತೆ ತೋರುತ್ತಿದ್ದಾರೆ. ವಯಸ್ಸು, ಜಾತಿ, ವಿಶ್ವಾಸಾರ್ಹತೆ, ಅನುಭವ ಹಾಗೂ ಸ್ವೀಕಾರಾರ್ಹತೆ ಅವರ ಪ್ಲಸ್ ಪಾಯಿಂಟ್ ಗಳು. ಈ ಕಾರಣಕ್ಕಾಗಿಯೇ ಅವರ ಹೆಸರು ಮುಂದಿದೆ. ಮೂರು ಬಾರಿ ಮುಖ್ಯಮಂತ್ರಿ ಯಾಗಿ ಯಶಸ್ವಿ ಆಡಳಿತ ನೀಡಿದ ನಾಯಕ. ಆರ್‌ಎಸ್‌ಎಸ್‌ನ ನೀಲಿಗಣ್ಣಿನ ಹುಡುಗ. ವಿರೋಧ ಪಕ್ಷಗಳಿಂದಲೂ ಅತ್ಯಂತ ಕಡಿಮೆ ದ್ವೇಷಿಸಿಕೊಳ್ಳುವ ಆಸಾಮಿ. ಮಧ್ಯಪ್ರದೇಶದಲ್ಲಿ ಇವರನ್ನು ಪ್ರೀತಿಯಿಂದ ‘ಮಾಮಾ’ ಎಂದು ಕರೆಯುತ್ತಾರೆ. ಜನಸಾಮಾನ್ಯರ ಕೈಗೆ ಸುಲಭವಾಗಿ ಸಿಗುತ್ತಾರೆ.

ಎಲ್ಲರ ಜತೆಗೂ ಫ್ರೆಂಡ್ಲಿಯಾಗಿ ಇರುವ ಸರಳ ಮನುಷ್ಯ. ಅವರು ಜಾರಿಗೆ ತಂದ ಸೃಜನಶೀಲ ಜನಕಲ್ಯಾಣ ಯೋಜನೆ ಗಳು ಹಾಗೂ ಅಭಿವೃದ್ಧಿ ಯೋಜನೆಗಳು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲಾಗದ ಹಂತಕ್ಕೆ ಕೊಂಡೊಯ್ದಿವೆ. ‘ಹಿಂದುತ್ವ’ ಅವರ ಆಡಳಿತದ ಕೇಂದ್ರಬಿಂದುವಾಗಿತ್ತು. ಅದೇ ಅವರ ರಾಜಕಾರಣದ ಸಿದ್ಧಾಂತವೂ ಹೌದು. ಅಟಲ್ ಮತ್ತು ಆಡ್ವಾಣಿಯವರು ಬಹಳ ಹಿಂದೆಯೇ ಇವರನ್ನು ಭವಿಷ್ಯದ ನಾಯಕನೆಂದು ಗುರುತಿಸಿ 2005ರಲ್ಲಿ ಸಿಎಂ ಮತ್ತು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯನನ್ನಾಗಿ ಮಾಡಿದ್ದರು. ಕೃಷಿಕರ ಕಲ್ಯಾಣಕ್ಕಾಗಿ ನಾನಾ ಯೋಜನೆ ಗಳನ್ನು ಜಾರಿಗೊಳಿಸಿದ ಖ್ಯಾತಿ ಇವರದು. ಹೀಗಾಗಿ ಗ್ರಾಮೀಣ ಭಾಗದಲ್ಲಿ ದೊಡ್ಡ ಪ್ರಮಾಣದ ಜನಬೆಂಬಲ ಹೊಂದಿದ್ದಾರೆ. ಆದರೆ, ಇವರು ಹೊಂದಿರುವ ಸ್ವತಂತ್ರ ವ್ಯಕ್ತಿತ್ವವೇ ಪಕ್ಷದಲ್ಲಿ ಮೇಲೆ ಬರುವುದಕ್ಕೆ ಕೆಲವೊಮ್ಮೆ ದೌರ್ಬಲ್ಯವಾಗಿ ಅಡ್ಡಿಬರುತ್ತದೆ.

ದೇವೇಂದ್ರ ಫಡ್ನವೀಸ್
35 ವರ್ಷಗಳಿಂದ ಸಂಘ ಪರಿವಾರದ ಜತೆಗೆ ಗುರುತಿಸಿಕೊಂಡಿದ್ದಾರೆ. ಈಗ 54 ವರ್ಷ ವಯಸ್ಸು. ಮಹಾರಾಷ್ಟ್ರದ ನಾಗ್ಪುರದಿಂದ ಎಬಿವಿಪಿ ಮೂಲಕ ರಾಜಕೀಯ ಜೀವನ ಆರಂಭಿಸಿದ ಈ ನಾಯಕ ಈಗ ದೇಶದ ಅತ್ಯಂತ
ಶ್ರೀಮಂತ ರಾಜ್ಯದಲ್ಲಿ ಬಿಜೆಪಿಯ ಅತಿದೊಡ್ಡ ಹೆಸರು. ಹೊಸ ಹೊಸ ಪ್ರತಿಭೆಗಳನ್ನು ಹುಡುಕುವುದಕ್ಕೆ ಖ್ಯಾತಿ ಪಡೆದಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯು ೨೦೧೪ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಗೆ ಹುಡುಕಿದ್ದು ಆಗ 44 ವರ್ಷದವರಾಗಿದ್ದ ಈ ಬ್ರಾಹ್ಮಣ ನಾಯಕನನ್ನು. ಸಿಎಂ ಆದ ಭಾರತದ ಎರಡನೇ ಅತ್ಯಂತ ಕಿರಿಯ ವ್ಯಕ್ತಿ. ಇವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಆಗಲೇ ಹಿರಿಯ ನಾಯಕ ರಾಗಿದ್ದ ನಿತಿನ್ ಗಡ್ಕರಿ ಮತ್ತು ಗೋಪಿನಾಥ್ ಮುಂಡೆಯನ್ನು ಮೋದಿ ಮತ್ತು ಅಮಿತ್ ಶಾ ಜೋಡಿ ಬದಿಗೆ
ಸರಿಸಿತ್ತು.

ಫಡ್ನವೀಸ್ ಮಹಾರಾಷ್ಟ್ರದ ಬಿಜೆಪಿಯ ಯಾವುದೇ ಸ್ಥಳೀಯ ಬಣಗಳ ಜತೆಗೆ ಗುರುತಿಸಿಕೊಳ್ಳದೆ ಪಕ್ಷದ ವರಿಷ್ಠರಿಗೆ
ಹತ್ತಿರವಾಗಿರುವುದೇ ಬಿಜೆಪಿಯ ಹೊಸ ಅಧ್ಯಕ್ಷನ ಹುದ್ದೆಗೆ ಅವರನ್ನು ಮುಂಚೂಣಿ ಸ್ಪರ್ಧಾಳುವನ್ನಾಗಿ ಮಾಡಿದೆ. ಆದರೆ ಅವರಿಗೆ ಪಕ್ಷದಲ್ಲಿ ಯಾವುದೇ ರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯನ್ನು ನಿಭಾಯಿಸಿದ ಅನುಭವವಿಲ್ಲ. ಹಾಗೆಯೇ ಪಕ್ಷದ ರಾಷ್ಟ್ರೀಯ ನಾಯಕರ ಜತೆಗೆ ಸೀಮಿತ ಸಂಪರ್ಕ ಹೊಂದಿದ್ದಾರೆ. ಪಕ್ಷದ ಪರಮೋಚ್ಚ ಹುದ್ದೆ ಗೇರಲು ಮೋದಿ ಮತ್ತು ಶಾ ಜತೆಗೆ ಹೊಂದಿರುವ ಸಂಪರ್ಕವೊಂದೇ ಸಾಲದೆ ಹೋಗಬಹುದು.

ವಸುಂಧರಾ ರಾಜೇ
71 ವರ್ಷದ, ರಾಜಮನೆತನದ, ರಾಜಸ್ಥಾನದ ಈ ನಾಯಕಿ ಸದ್ಯಕ್ಕೆ ಪಕ್ಷದಲ್ಲಿ ಹಿನ್ನಡೆ ಅನುಭವಿಸುತ್ತಿರುವಂತೆ
ಕಾಣಿಸಬಹುದು. ಆದರೆ ಖಂಡಿತ ಸೋತು ಸ್ಪರ್ಧೆಯಿಂದ ದೂರವುಳಿದಿಲ್ಲ. ಮೂರನೇ ಬಾರಿ ರಾಜಸ್ಥಾನದ ಮುಖ್ಯ ಮಂತ್ರಿಯಾಗುವುದಕ್ಕೆ ಹೊರಟಾಗ ಪಕ್ಷದ ರಾಷ್ಟ್ರೀಯ ನಾಯಕರು ಅವರನ್ನು ಹಿಂದಕ್ಕೆಳೆದು ಕೂರಿಸಿದರು. ಈಗ ಅವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಒಬ್ಬರು. ಸಂಘ ಪರಿವಾರದ ಜತೆಗೆ ಬೇಕಾದಾಗ ಒಳ್ಳೆಯ ಸಂಬಂಧ, ಬೇಡದಿದ್ದಾಗ ದೂರದ ಸಂಬಂಧ ಹೊಂದುವ ವ್ಯಕ್ತಿ. ಆದರೂ ಅವರ ದಿವಂಗತ ತಾಯಿ ವಿಜಯರಾಜೇ ಬಿಟ್ಟು ಹೋದ ಪರಂಪರೆಯಿಂದಾಗಿ ಆರ್‌ಎಸ್‌ಎಸ್ ನಾಯಕತ್ವವು ವಸುಂಧರಾ ಬಗ್ಗೆ ಒಳ್ಳೆಯ ಭಾವನೆಯನ್ನೇ ಹೊಂದಿದೆ. ವಸುಂಧರಾ ಸ್ವತಃ ಸಾಕಷ್ಟು ಮಹತ್ವದ ಹಾಗೂ ಸೂಕ್ಷ್ಮ ಹುದ್ದೆಗಳನ್ನು ಕೇಂದ್ರ, ರಾಜ್ಯ ಹಾಗೂ ಪಕ್ಷದ ಮಟ್ಟದಲ್ಲಿ ನಿಭಾಯಿಸಿದ ಅನುಭವ ಹೊಂದಿದ್ದಾರೆ.

ಅದ್ಭುತವಾದ ಮಾತುಗಾರ್ತಿ. ದೇಶಾದ್ಯಂತ ಮುಖಪರಿಚಯ ಹೊಂದಿರುವ ನಾಯಕಿ. ಬಿಜೆಪಿಯೇನಾದರೂ ಮೊದಲ ಅಧ್ಯಕ್ಷೆಯನ್ನು ಹುಡುಕುತ್ತಿದ್ದರೆ ಹಿರಿತನ, ಅನುಭವ ಹಾಗೂ ಆಕರ್ಷಣೆಯ ಕಾರಣಕ್ಕೆ ವಸುಂಧರಾ ಆ ಹುzಗೆ ಬೇರೆಲ್ಲರಿಗಿಂತ ಸೂಕ್ತ ವ್ಯಕ್ತಿಯಾಗಿ ಹೊರಹೊಮ್ಮಬಹುದು. ಅವರ ದೌರ್ಬಲ್ಯವೇನೆಂದರೆ, ಪಕ್ಷದ ಕೇಡರ್
ಜತೆಗೆ ನೇರ ಸಂಪರ್ಕ ಹೊಂದಿರುವ ಯಾವುದೇ ರಾಷ್ಟ್ರೀಯ ಜವಾಬ್ದಾರಿಯನ್ನು ಈವರೆಗೆ ನಿಭಾಯಿಸಿಲ್ಲ. ಅದಕ್ಕಿಂತ ಹೆಚ್ಚಾಗಿ ಮೋದಿ-ಶಾ ಜತೆಗೆ ಯಾವಾಗಲೂ ಅಂತರ ಕಾಯ್ದುಕೊಂಡಿದ್ದಾರೆ. ಆದರೂ ಪಕ್ಷ ಅವರನ್ನು ಪೂರ್ತಿಯಾಗಿ ಕೈಬಿಟ್ಟಿಲ್ಲ.

ಧರ್ಮೇಂದ್ರ ಪ್ರಧಾನ್
ಇನ್ನೊಬ್ಬ ಮಾಜಿ ವಿದ್ಯಾರ್ಥಿ ನಾಯಕ. ಎಬಿವಿಪಿಯಿಂದ ಸಾರ್ವಜನಿಕ ಜೀವನಕ್ಕೆ ಬಂದ 55 ವರ್ಷದ ಈ ಒಡಿಶಾ
ಮೂಲದ ಸಂಸದ ಬಿಜೆಪಿಯ ಚತುರ ನಾಯಕರಲ್ಲಿ ಒಬ್ಬರು. ಸಂಘ ಮತ್ತು ಬಿಜೆಪಿಯಲ್ಲಿ ಒಡಿಶಾ ಹಾಗೂ ದೆಹಲಿಯ ವ್ಯವಹಾರಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರಲ್ಲಿ ಪಕ್ಷವು ಒಬ್ಬ ಭವಿಷ್ಯದ ರಾಷ್ಟ್ರೀಯ ನಾಯಕನನ್ನು ನೋಡುತ್ತಿದೆ. ಸೈದ್ಧಾಂತಿಕವಾಗಿಯೂ ಇವರೊಬ್ಬ ವಿಶ್ವಾಸಾರ್ಹ ನಾಯಕ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಧರ್ಮೇಂದ್ರ ಪ್ರಧಾನ್ ಕರ್ನಾಟಕ, ಜಾರ್ಖಂಡ್, ಛತ್ತೀಸ್‌ಗಢ,
ಬಿಹಾರ, ಉತ್ತರ ಪ್ರದೇಶ ಹಾಗೂ ಹರಿಯಾಣದ ವಿಧಾನಸಭೆ ಚುನಾವಣೆಗಳ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಅಟಲ-ಆಡ್ವಾಣಿ ಯುಗ ಮುಗಿದ ನಂತರ ನರೇಂದ್ರ ಮೋದಿಯವರು ಇವರನ್ನು ಪಕ್ಷದ ಹಾಗೂ ಸರಕಾರದ ವಿವಿಧ
ಹುದ್ದೆಗಳಲ್ಲಿ ಸ್ಥಾಪಿಸಿ ಸಾಮರ್ಥ್ಯ ಪರೀಕ್ಷೆ ಮಾಡಿದ್ದಾರೆ. ಅವುಗಳ ಪೈಕಿ ಒಂದು ಪ್ರಮುಖ ಹುದ್ದೆಯೆಂದರೆ, ಇವರು
ಸ್ವಾತಂತ್ರ್ಯಾನಂತರದ ಭಾರತದ ಅತ್ಯಂತ ಸುದೀರ್ಘ ಅವಧಿಯ ಪೆಟ್ರೋಲಿಯಂ ಮಂತ್ರಿ. ಸೂಕ್ಷ್ಮ ಹಾಗೂ ಕೌಶಲ ಪೂರ್ಣ ಆಡಳಿತಾತ್ಮಕ ನೈಪುಣ್ಯವನ್ನು ಹೊಂದಿರುವ ಇವರು ಪಕ್ಷದ ಪರಮೋಚ್ಚ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿ ಕಾಣಿಸಬಹುದು. ಆದರೆ ಪಕ್ಷದ ಇರುವ ವಿರೋಧಿಗಳು ಇವರಿಗೆ ರಾಷ್ಟ್ರಮಟ್ಟದ ನಾಯಕತ್ವದ ವ್ಯಕ್ತಿತ್ವ ಹಾಗೂ ದೇಶವ್ಯಾಪಿಯಾದ ಸ್ವೀಕಾರಾರ್ಹತೆ ಇಲ್ಲ ಎಂದು ವಾದಿಸುತ್ತಾರೆ.

ಭೂಪೇಂದ್ರ ಯಾದವ್
55 ವರ್ಷದ ರಾಜಸ್ಥಾನ ಮೂಲದ ವಕೀಲ. ಆರ್‌ಎಸ್‌ಎಸ್ ನಿಯಂತ್ರಿತ ಬಿಜೆಪಿಯ ವಕೀಲರ ಪ್ರಕೋಷ್ಠದ ಕಾರ್ಯ ದರ್ಶಿಯಾಗಿ ರಾಜಕೀಯ ಜೀವನ ಆರಂಭಿಸಿದವರು. ಅಟಲ್-ಆಡ್ವಾಣಿ ಯುಗದ ಭವಿಷ್ಯದ ರಾಷ್ಟ್ರೀಯ ನಾಯಕ ನಾಗಿ ಹೊರಹೊಮ್ಮಿದ್ದಾರೆ. 2010ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಇವರನ್ನು ನಿತಿನ್ ಗಡ್ಕರಿ‌ ಆಯ್ಕೆ ಮಾಡಿದ್ದರು. ನಂತರ ನಿರಂತರವಾಗಿ ಪಕ್ಷದ ವರಿಷ್ಠರು ಇವರಿಗೆ ಒಂದ ಒಂದು ಪ್ರಮುಖ ಹುದ್ದೆ ನೀಡುತ್ತಲೇ
ಬಂದಿದ್ದಾರೆ. ವಿವಾದಗಳಿಗೆ ಗುರಿಯಾಗದ ಭೂಪೇಂದ್ರ ಯಾದವ್ ವಿಶ್ವಾಸಕ್ಕೆ ಯೋಗ್ಯರು.

2014ರಲ್ಲಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದಾಗ ತಮ್ಮ ಆಪ್ತ ತಂಡದಲ್ಲಿ ಇವರನ್ನು ಇರಿಸಿಕೊಂಡಿ ದ್ದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಾಜಸ್ಥಾನ, ಗುಜರಾತ್ ಹಾಗೂ ಛತ್ತೀಸ್‌ಗಢದ ಬಹು ಚರ್ಚಿತ ವಿಧಾನಸಭೆ ಚುನಾವಣೆಗಳನ್ನು ನಿಭಾಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯ ಸರಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸದಾ ತೆರೆಮರೆಯ ಇರುವ ಈ ವ್ಯಕ್ತಿಯ ಪ್ರಾಮುಖ್ಯ ಎಲ್ಲರಿಗೂ ಅರ್ಥವಾಗಿದ್ದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾಗಿ ಇವರು ಕೆಲಸ ಮಾಡಿದ ರೀತಿಯಿಂದ. ‘ವಿಕಸಿತ ಭಾರತ’ ಅಜೆಂಡಾ ಕಾರಣ ದಿಂದ ಮೋದಿ ಸರಕಾರದಲ್ಲಿ ಇದು ಬಹಳ ಸೂಕ್ಷ್ಮವಾದ ಹಾಗೂ ಮಹತ್ವದ ಸಚಿವಾಲಯ. ಆದರೆ ಆರ್‌ಎಸ್‌ಎಸ್ ನಲ್ಲಿರುವ ಒಂದು ಬಣವು ಇವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುವಷ್ಟು ದೊಡ್ಡ ವಯಸ್ಸಿನ ವ್ಯಕ್ತಿಯಲ್ಲ ಎಂದು ಭಾವಿಸುತ್ತದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳನ್ನು ನಿಭಾಯಿಸುವುದಕ್ಕೂ ಇವರದು ಸಣ್ಣ ವಯಸ್ಸು ಎಂಬುದು ಅವರ ಅಂಬೋಣ.

ಸುನೀಲ್ ಬನ್ಸಾಲ್
ಪೂರ್ಣಾವಧಿ ಆರ್‌ಎಸ್‌ಎಸ್ ಪ್ರಚಾರಕ. ಈಗ ಡೆಪ್ಯುಟೇಶನ್ ಮೇಲೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. 55 ವರ್ಷದ ಬನ್ಸಾಲ್‌ಗೆ ಇರುವ ಎಬಿವಿಪಿ ಹಿನ್ನೆಲೆ ಹಾಗೂ ಆರ್‌ಎಸ್ ಎಸ್‌ನ ಅನುಭವಗಳು ಇವರನ್ನು ಅದ್ಭುತ ಟೀಂ ಲೀಡರ್ ಆಗಿ ತಯಾರು ಮಾಡಿವೆ. ಇವರ ಏಕಮೇವ ಸಿದ್ಧಾಂತವೆಂದರೆ ರಾಷ್ಟ್ರೀಯತೆ. 2010ರಿಂದ 2014 ರವರೆಗೆ ಆರ್‌ಎಸ್‌ಎಸ್‌ನ ‘ಯೂತ್ ಅಗೇನ ಕರಪ್ಷನ್’ ಆಂದೋಲವನ್ನು ಇವರೇ ಮುನ್ನಡೆಸಿದ್ದರು. ಆರ್‌ಎಸ್‌ಎಸ್‌ನ ಉಳಿಯಿಂದ ರೂಪುಗೊಂಡ ಪುತ್ಥಳಿಯಿದು. 2014ರಲ್ಲಿ ಬಿಜೆಪಿಯ ಚುನಾವಣಾ ಪ್ರಚಾರವನ್ನು ಅಮಿತ್ ಶಾ ಕೈಗೆತ್ತಿಕೊಂಡಾಗ ಬನ್ಸಾಲ್‌ರನ್ನು ಅವರು ಉತ್ತರ ಪ್ರದೇಶದ ಉಸ್ತುವಾರಿ ಮಾಡಿದ್ದರು. ಅವರ ಉಸ್ತುವಾರಿ ಅವಧಿಯ ಉತ್ತರ ಪ್ರದೇಶದ ಲೋಕಸಭೆ ಹಾಗೂ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಬಹುಮತ ಗಳಿಸಿತ್ತು. ಈ ಬಾರಿ ಒಡಿಶಾದ ಚುನಾವಣೆಗೆ ಅವರೇ ಉಸ್ತುವಾರಿಯಾಗಿದ್ದರು. ಅಲ್ಲೂ ತಮ್ಮ ಕೈಚಳಕ ತೋರಿಸಿರುವ ಅವರು, ಒಡಿಶಾದಲ್ಲಿ ಮೊದಲ ಬಾರಿ ಬಿಜೆಪಿ ಸರಕಾರ ರಚನೆಯಾಗುವಂತೆ ನೋಡಿ ಕೊಂಡಿದ್ದಾರೆ. ಆದರೆ, ಪಕ್ಷದಲ್ಲಿರುವ ಒಂದು ಬಣವು ಬನ್ಸಾಲ್‌ಗೆ ರಾಷ್ಟ್ರೀಯ ರಾಜಕಾರಣದಲ್ಲಿ ಇನ್ನಷ್ಟು ಅನುಭವ ಬೇಕು ಮತ್ತು ಪಕ್ಷದ ರಾಜ್ಯ ಮಟ್ಟದ ರಾಜಕೀಯ ವ್ಯವಸ್ಥೆಯ ಪರಿಚಯ ಇನ್ನಷ್ಟು ಆಗಬೇಕು ಎಂದು ಭಾವಿಸುತ್ತದೆ.

ಆದರೆ ಬಿಜೆಪಿಯಲ್ಲಿ ನಿಮಗೆ ಏನು ಕಾಣಿಸುತ್ತದೆಯೋ ಅದೇ ಆಗಬೇಕು ಎಂದೇನಿಲ್ಲ. ಮೋದಿ ಮತ್ತು ಆರ್‌ಎಸ್‌ಎಸ್
ಇಬ್ಬರಿಗೂ ಎಲ್ಲದರ ಮೇಲೂ ವೀಟೋ ಪವರ್ ಇದೆ. ಇಂಥ ಪರಿಸ್ಥಿತಿ ಹಿಂದೆ ಯಾವತ್ತೂ ಯಾವ ರಾಜ್ಯದಲ್ಲೂ ಇರಲಿಲ್ಲ. ಹಳೆಯ ಬಿಜೆಪಿಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸತ್ರಪರ ಪಡೆಯೇ ಇತ್ತು. ಅವರಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗುವ ಅರ್ಹತೆಯುಳ್ಳ ಅನೇಕರು ಇರುತ್ತಿದ್ದರು. ಆದರೆ ಈಗ ಅವರೆಲ್ಲ ಇತಿಹಾಸದ ಕಠಿಣ ಯುದ್ಧಗಳನ್ನು ಮುನ್ನಡೆಸಿ ವಿಶ್ರಾಂತಿಗೆ ಸರಿದಿರುವ ನಾಯಕರು. ಆರು ದಶಕಗಳ ಕಾಲ ಅವರು ಕಾಂಗ್ರೆಸ್ ಮತ್ತು ವಿಪಕ್ಷಗಳ ಜತೆಗೆ ಸೆಣಸಾಡಿ ಸುಸ್ತಾಗಿzರೆ. ಪಕ್ಷದಲ್ಲಿ ಭೈರೋನ್ ಸಿಂಗ್ ಶೆಖಾವತ್, ಪ್ರಮೋದ್ ಮಹಾಜನ್, ಕಲ್ಯಾಣ್ ಸಿಂಗ್, ಗೋಪಿ ನಾಥ್ ಮುಂಡೆ, ಅನಂತ ಕುಮಾರ್, ಸುಷ್ಮಾ ಸ್ವರಾಜ್‌ರಂಥ ಘಟಾನುಘಟಿಗಳು ಇದ್ದರು. ಬಿ.ಎಸ್.ಯಡಿಯೂರಪ್ಪ ಈಗಲೂ ಇದ್ದಾರೆ.

ಮಂತ್ರಿಗಳಿಂದ ರಾಜೀನಾಮೆ ಪಡೆದು ಪಕ್ಷದ ಕೆಲಸದಲ್ಲಿ ನಿಯೋಜಿಸುವುದಕ್ಕೆ ಮೋದಿ ಪ್ರಸಿದ್ಧರು. ಹೀಗಾಗಿ ರಾಜನಾಥ್ ಸಿಂಗ್, ಗಡ್ಕರಿ ಅಥವಾ ಚೌಹಾಣ್‌ರನ್ನು ಅಥವಾ ಇನ್ನೂ ಕಡಿಮೆ ಪ್ರಸಿದ್ಧಿಯ ನಂಬಿಕಸ್ಥ ಸ್ವಯಂ ಸೇವಕರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರೂ ಆಶ್ಚರ್ಯವಿಲ್ಲ. ಬಿಜೆಪಿ ಅಸ್ತಿತ್ವದಲ್ಲಿರುವ ಕಳೆದ 44 ವರ್ಷಗಳಲ್ಲಿ ಅಟಲ್ ಹಾಗೂ ಆಡ್ವಾಣಿ ಜೋಡಿ 15 ವರ್ಷ ಪಕ್ಷವನ್ನು ಮುನ್ನಡೆಸಿದೆ. ನಂತರ ಅಮಿತ್ ಶಾ ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸಿದ್ದಾರೆ. ಆರ್ ಎಸ್‌ಎಸ್ ಇಲ್ಲದೆಯೂ ಬಿಜೆಪಿ ಬದುಕಬಹುದು ಎಂಬ
ಯೋಚನೆ ನಡ್ಡಾಗೆ ದುಬಾರಿಯಾಗಿ ಪರಿಣಮಿಸಿದೆ.

ಬಹುಶಃ ಮುಂದಿನ ಅಧ್ಯಕ್ಷರ ಆಯ್ಕೆಯಲ್ಲಿ ನಡ್ಡಾ ಅಭಿಪ್ರಾಯ ಸರಿಯೋ ಅಥವಾ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಈಗಲೂ ಮೋದಿ ಮತ್ತು ಅವರ ಬಿಜೆಪಿಯು ಹುಟ್ಟುಹಾಕಿರುವ ಹಿಂದುತ್ವದ ಅಲೆಗಳ ಮೇಲೆ ತೇಲುವ ಪಕ್ಷದ ಮಾತೃನೌಕೆಯೋ ಎಂಬುದು ತಿಳಿಯಬಹುದು.

(ಲೇಖಕರು ಹಿರಿಯ ಪತ್ರಕರ್ತರು)

ಇದನ್ನೂ ಓದಿ: Samantha Ruth Prabhu : ತಮ್ಮ ವಿಚ್ಛೇದನ ಕುರಿತು ವಿವಾದಾತ್ಮಕವಾಗಿ ಮಾತನಾಡಿದ ತೆಲಂಗಾಣ ಸಚಿವೆಗೆ ತಿರುಗೇಟು ಕೊಟ್ಟ ಸಮಂತಾ