ತುಂಟರಗಾಳಿ
ಸಿನಿಗನ್ನಡ
ಚಿತ್ರರಂಗದಲ್ಲಿ ಆಗಾಗ ಸದ್ದು ಮಾಡೋ ಕಾಯಿಲೆ ಇದು. ಇದನ್ನು ಕಾಯಿಲೆ ಅನ್ನೋದೋ ಅಥವಾ ಖಯಾಲಿ ಅನ್ನೋದೋ ಗೊತ್ತಾಗ್ತಿಲ್ಲ. ಆದ್ರೆ, ಇತ್ತೀಚಿನ ಬಾಯ್ಕಾಟ್ ಸಂಸ್ಕೃತಿಯ ಜತೆಗೆ ಈಗ ನಮ್ಮ ಭಾವನೆಗಳಿಗೆ ಧಕ್ಕೆ ಬಂದಿದೆ ಅಂತ ಸಿನಿಮಾಗಳಿಗೆ ಕೊಕ್ಕೆ ಹಾಕುವ ಮನಸ್ಥಿತಿಗಳು ಜಾಸ್ತಿ ಆಗುತ್ತಿವೆ. ಇದಕ್ಕೆ ಕಾರಣ ರಾಜಕೀಯ ಅಂದ್ರೆ ತಪ್ಪಿಲ್ಲ.
ಚಿತ್ರರಂಗದಲ್ಲಿ ಪೊಲಿಟಿಕಲ್ ಸಿನಿಮಾಗಳು ಬರೋದು ಕಾಮನ್. ಆದರೆ ಸಿನಿಮಾಗಳಿಗೇ ಪೊಲಿಟಿಕಲ್ ಆಂಗಲ್ ಬರ್ತಾ ಇರೋದು ಇತ್ತೀಚಿನ ಕೆಟ್ಟ
ಬೆಳವಣಿಗೆ. ಇಲ್ಲಿ ಗಮನಿಸಬೇಕಾದ ಅಂಶಗಳು ಅಂದ್ರೆ ಇವ್ಯಾವೂ ಒಳ್ಳೆಯ ಉದ್ದೇಶದಿಂದ ಅಥವಾ ನಿಜವಾದ ಭಾವನೆಗಳಿಗೆ ಧಕ್ಕೆ ತರೋ ಸಂಗತಿ
ಗಳಲ್ಲ. ಬದಲಾಗಿ ಚಿತ್ರಕ್ಕೆ ಸಂಬಂಧ ಪಟ್ಟ ಯಾರಾದರೂ ಒಂದು ರಾಜಕೀಯ ಪಂಗಡದ ಪರ ಮಾತಾಡಿದರೆ ಅವರ ವಿರೋಧಿ ಪಕ್ಷಗಳು ಬೇಕೆಂತಲೇ
ಮಾಡುತ್ತಿರುವ ಬೃಹನ್ನಾಟಕಗಳು ಇವು. ಮಾತೆತ್ತಿದರೆ ಅವರಿಗೆ ಅವಮಾನ ಆಗಿದೆ, ಇವರಿಗೆ ಅವಮಾನ ಆಗಿದೆ ಅಂತ ಕುಂಟುನೆಪ ಹೂಡಿ ಸಮಾಜದ
ಆರೋಗ್ಯ ಕೆಡಿಸುವ ಪ್ರಯತ್ನಗಳು ಇವು.
ಇದು ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದು ತುಂಬಾ ಕೀಳಾಗಿ ವರ್ತಿಸುತ್ತಿ ರುವ ಅನೇಕ ಉದಾಹರಣೆಗಳನ್ನು ನಾವು ಇಂದು ನೋಡಬೇಕಾಗಿರೋದು ದುರದೃಷ್ಟಕರ. ಇದರಿಂದ ಕೋಟಿ ಗಟ್ಟಲೆ ಹಣ ಹಾಕಿ ಸಿನಿಮಾ ಮಾಡುವ ಮಂದಿ ಈಗ ‘ಏನಾದರೂ ಮಾಡು, ಮೊದಲು ಸಿನಿಮಾನ ಸಿನಿಮಾ ಥರ ನೋಡು’ ಅಂತ ಇಂಥ ಕಿರಿಕ್ ಪಾರ್ಟಿ ಗಳಿಗೆ ಹೇಳಬೇಕಾಗಿರೋ ಪರಿಸ್ಥಿತಿ ಬಂದಿದೆ. ಇಂಥ ಬೆಳವಣಿಗೆಗಳನ್ನು ನೋಡಿದಾಗ ಒಮ್ಮೊಮ್ಮೆ, ಸರಿಯೋ ತಪ್ಪೋ, ಸಿನಿಮಾ ಅನ್ನೋದು ನಿರ್ದೇಶಕರ ಸ್ವಾತಂತ್ರ್ಯ, ಅವರಿಗೆ ಇಷ್ಟ ಆಗಿದ್ದನ್ನು ಅವರು ಮಾಡ್ತಾರೆ, ನಿಮಗೆ ಇಷ್ಟ ಇದ್ರೆ ನೋಡಿ, ಇಲ್ಲಾಂದ್ರೆ ಬಿಡಿ ಅನ್ನೋ ಕಾನೂನು ಬಂದ್ರೆ ಒಳ್ಳೆಯದು ಅನ್ನಿಸೋದು ನಿಜ.
ಲೂಸ್ ಟಾಕ್: ಪ್ರದೀಪ್ ಈಶ್ವರ್
ಸುಧಾಕರ್ ಗೆದ್ರೆ ರಾಜೀನಾಮೆ ಕೊಡ್ತೀನಿ ಅಂದಿದ್ರಿ. ಈಗೇನಾಯ್ತು?
– ಏನೋ ಜೋಷ್‌ನಲ್ಲಿ ‘ಸುಧಾಕರ್ ಗೆದ್ರೆ ಪ್ರದೀಪ್ ಈಶ್ವರ್ ಅಲ್ಲ ಮೇರೆ ನಾಮ್’ ಅನ್ನೋ ಥರ ಮಾತಾಡಿದ್ದೆ ಬಿಡ್ರಿ.
ಆದ್ರೂ ಸ್ಪೀಕರ್‌ಗೆ ರಾಜೀನಾಮೆ ಕಳಿಸಿದ್ರಿ ಅಂತ ಸುದ್ದಿ ಇದೆಯಲ್ಲ?
– ನಾನು ಸ್ಪೀಕರ್‌ಗೆ ಕಳಿಸಿದ್ದೆ. ಆದ್ರೆ ಅವರು ಸ್ಪೀಕರ್, ಲಿಸನರ್ ಅಲ್ಲ, ಹಂಗಾಗಿ ನನ್ನ ಮಾತು ಕೇಳಲಿಲ್ಲ
ಆದ್ರೂ ಇವೆಲ್ಲ ಬೇಕಿತ್ತಾ ನಿಮಗೆ?
– ಏನ್ ಮಾಡೋದು ಬ್ಯಾಡ್ ಟೈಮ್. ಈಶ್ವರ್ ಅನ್ನೋ ಹೆಸರಲ್ಲೇ ಸಮಸ್ಯೆ ಇದೆ. ಈಶ್ವರಪ್ಪನವರ ಥರ ಈ ಪ್ರದೀಪ್ ಈಶ್ವರ್‌ದೂ ಮರ್ಯಾದೆ ಹೋಯ್ತು.
ಈ ವಿಷಯದಿಂದ ನಿಮ್ಮನ್ನು ಆಡಿಕೊಳ್ಳೋರಿಗೆ ಇನ್ನೂ ಜಾಸ್ತಿ ಚಾನ್ಸ್ ಕೊಟ್ಟ ಹಾಗಾಗಲಿಲ್ವಾ?
– ನಿಜ. ಆದ್ರೆ, ಜನ ‘ನೀಟ್’ ಆಗಿ ‘ಪರಿಶ್ರಮ’ ಪಟ್ಟು ಬೆಳೆದಿರೋರನ್ನ ಆಡಿಕೊಳ್ಳೋದು ಕಾಮನ್ ಅಲ್ವಾ. ಹೋಗ್ಲಿ ಬಿಡಿ.
ಸರಿ, ಮುಂದಿನ ಸಲ ಮೋದಿ ಚುನಾವಣೆಯಲ್ಲಿ ಗೆಲ್ತಾರಾ ಇಲ್ವಾ?
– ಸುಮ್ನೆ ಇರ್ಬೇಕೀಗ ಅಷ್ಟೇ. ನಾನು ಭವಿಷ್ಯ ಹೇಳೋದೆಲ್ಲ ಬಿಟ್ಟಿದ್ದೀನಿ ಈಗ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮುನ ಮಾವ ಫುಲ್ ಸೀರಿಯಸ್ ಆಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ಅವರನ್ನು ನೋಡಿದ ಎಲ್ಲಾ ಡಾಕ್ಟರ್‌ಗಳೂ ಅವರು ಬದುಕೋ ಯಾವ ಸಾಧ್ಯತೆಗಳೂ ಇಲ್ಲ ಅಂತ ಹೇಳಿದ್ರು. ಅಲ್ಲದೆ, ಪೇಷೆಂಟ್ ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಯಾವ ಡಾಕ್ಟರ್ ಕೂಡ ಆಪರೇಷನ್ ಮಾಡಲು ಮುಂದೆ
ಬರಲಿಲ್ಲ. ಅಳಿಯ ಖೇಮು ಕೂಡ ಸ್ವತಃ ಡಾಕ್ಟರ್ ಆಗಿದ್ದ. ಹಾಗಾಗಿ ಖೇಮು ಆಗಿದ್ದಾಗ್ಲಿ ಒಂದ್ ಕೈ ನೋಡೇಬಿಡೋಣ ಅಂತ ಆಪರೇಷನ್ ಮಾಡಲು ತಯಾರಾದ. ಆಪರೇಷನ್‌ಗೆ ಮುಂಚೆ ಮಂಚದ ಮೇಲೆ ಮಲಗಿದ್ದ ಖೇಮು ಮಾವ ಆಪರೇಷನ್ ಛೇಂಬರ್‌ಗೆ ಬಂದ ಖೇಮುವನ್ನು ನೋಡಿ ಸನ್ನೆ ಮಾಡಿ, ನಿನ್ನ ಬಳಿ ಏನೋ ಹೇಳಬೇಕು ಹತ್ತಿರ ಬಾ ಅಂತ ಕರೆದ್ರು, ಖೇಮು ಹೋದ.
ಖೇಮುನ ಕಿವಿಯಲ್ಲಿ ಅವನ ಮಾವ ಏನೋ ಹೇಳಿದ್ರು. ಸರಿ ಆಪರೇಷನ್ ಶುರುವಾಯ್ತು, ಸತತ ನಾಲ್ಕು ತಾಸು ಆಪರೇಷನ್ ನಡೆಯಿತು. ಏನೇ ಆದ್ರೂ ರೋಗಿ ಬದುಕೋಲ್ಲ ಅಂದಿದ್ದ ಡಾಕ್ಟರ್‌ಗಳಿಗೆಲ್ಲಾ ಅಚ್ಚರಿ ಎಂಬಂತೆ ಆಪರೇಷನ್ ಸಕ್ಸಸ್ ಫುಲ್! ‘ಇದೊಂದು ವೈದ್ಯಲೋಕದ ವಿಸ್ಮಯ’ ಎಂದರು ಅವರೆಲ್ಲ. ನಿರಾಳವಾಗಿ ಆಪರೇಷನ್ ಕೋಣೆಯಿಂದ ಹೊರಬಂದ ಖೇಮುವನ್ನು ‘ಇದೆಲ್ಲಾ ಹೇಗಾಯ್ತು. ನಿಮ್ಮ ಮಾವ ಆಪರೇಷನ್‌ಗೆ ಮುಂಚೆ ನಿಮ್ಮ ಕಿವಿಯಲ್ಲಿ ಏನೋ ಹೇಳಿದ್ರಂತೆ, ಏನು ಹೇಳಿದ್ರು’ ಅಂತ ಕೇಳಿದ್ರು ಆಸ್ಪತ್ರೆಯ ಸೀನಿಯರ್ ಡಾಕ್ಟರ್ಸ್. ಅದಕ್ಕೆ ಖೇಮು ಹೇಳಿದ ‘ಮಾವ ಹೇಳಿದ್ದು ಇಷ್ಟೆ, ನೋಡಪ್ಪ ಅಳೀಮಯ್ಯ, ನಾನು ನಿಮ್ಮ ಮಾವ ಅಂತ ನರ್ವಸ್ ಆಗ್‌ಬೇಡ. ಧೈರ್ಯವಾಗಿ ನಿನ್ ಕೆಲಸ ನೀನು ಮಾಡು, ಉಳಿದಿದ್ದು ದೇವರಿಗೆ ಬಿಟ್ಟಿದ್ದು.
ಆದ್ರೆ ಒಂದ್ ಮಾತ್ ನೆನಪಿಟ್ಕೋ, ನಿಮ್ಮತ್ತೆಗೆ ನನ್ನ ಬಿಟ್ರೆ ಯಾರೂ ಇಲ್ಲ; ನಾನು ಹೆಚ್ಚುಕಮ್ಮಿ ಆಗಿ ಸತ್ತುಹೋದ್ರೆ, ಅವಳು ನಿಮ್ಮ ಮನೆಯಲ್ಲೇ ಒಂದು ಇರ್ತಾಳೆ, ಅವಳನ್ನ ಚೆನ್ನಾಗಿ ನೋಡ್ಕೊಳಪ್ಪಾ’.
ಲೈನ್ ಮ್ಯಾನ್
ಅಯೋಧ್ಯೆಯಲ್ಲಿ ಸೋತ ಬಿಜೆಪಿ ಹೇಳಿದ್ದು
– ಸದ್ಯ, ರಾಮಮಂದಿರನ ಉತ್ತರಪ್ರದೇಶದಲ್ಲಿ ಮಾತ್ರ ಕಟ್ಟಿಸಿದ್ವಿ
‘ಏನಾದ್ರೂ ಮಾಡ್ಕೊಳಿ, ಬೇಗ ಸರಕಾರ ಮಾಡಿ’ ಅಂತ ನಿತೀಶ್ ಕುಮಾರ್ ಹೇಳಿದ್ದಕ್ಕೆ ಕಾರಣ ಏನು?
– ಅವರ ಒಳಮಾತು… ‘ಎಷ್ಟೇ ಕಮಿಟ್ ಆದ್ರೂ, ಒಂದೊಂದ್ಸಲ ನನ್ ಮಾತ್ ನಾನೇ ಕೇಳಲ್ಲ’
ಈ ಬಿಜೆಪಿ ಸರಕಾರ ಎಷ್ಟು ದಿನ ಇರುತ್ತೋ ಹೇಳೋಕಾಗಲ್ಲ
– ಯಾಕಂದ್ರೆ ನಾಯ್ಡು, ನಿತೀಶ್ ‘ಎನ್‌ಡಿಎ’ ಸೇರಿರಬಹುದು. ಆದ್ರೆ, ಅವ್ರ್ ‘ಡಿಎನ್‌ಎ’ ನಂಬೋಕಾಗಲ್ಲ.
ಈ ಬಾರಿಯ ಎಕ್ಸಿಟ್ ಪೋಲ್ ವಿಶೇಷ
– ಏನೇನೋ ಸರ್ಕಸ್ ಮಾಡಿ ಅಂಕಿ ಅಂಶ ಕೊಡ್ತೀವಿ ಅಂತ ಬಡಾಯಿ ಕೊಚ್ಚಿಕೊಳ್ಳೋ ಈ ಎಕ್ಸಿಟ್ ಪೋಲ್ ಗಳಿಗಿಂತ ಸಾಮಾನ್ಯ ಜನರೇ ವಾಸಿ.
ಮನೇಲಿ ಕೂತ್ಕೊಂಡೇ ಈ ರಿಸಲ್ಟ್ ಗೆಸ್ ಮಾಡಿದ್ರು.
ಧರ್ಮರಾಜಕಾರಣದ ಮೂಲಕ ಉತ್ತರ ಪ್ರದೇಶದಲ್ಲಿ ರಾಮಮಂದಿರ ಕಟ್ಟಿಸಿದ ಬಿಜೆಪಿಗೆ ಅಲ್ಲಿ ಸಿಕ್ಕಿದ್ದು
– ‘ಧರ್ಮದೋಟು’
ದೇವರ ಹೆಸರು ಬಳಸಿಕೊಂಡು, ದೇವಸ್ಥಾನಗಳನ್ನು ಉದ್ಯಮವನ್ನಾಗಿ ಮಾಡಿಕೊಂಡಿರೋರ ಉದ್ಯೋಗ
– ಗುಡಿ ಕೈಗಾರಿಕೆ
ಪೊಲಿಟಿಕಲ್ ಡೌಟ್
– ದೇಶದ ೧೩೦ ಕೋಟಿ ಜನರ ಪರವಾಗಿ ಕೇಳ್ತಾ ಇದ್ದೀನಿ ಅಂತ ಮಾತಾಡ್ತಾರಲ್ಲ, ಇವ್ರಿಗೆಲ್ಲ ನಮ್ಮನ್ನು ಕೇಳದೇ, ನಮ್ಮ ಪರವಾಗಿ ಮಾತಾಡೋ
ಅಧಿಕಾರ ಕೊಟ್ಟೋರು ಯಾರು?
ನಾಲ್ಕು ಭಾಷೆಗಳ ಚಿತ್ರಗಳಲ್ಲಿ ನಟಿಸೋ ನಟ
– ಚತುರ್ಭಾಷಾ ನಟ
ನಾಲ್ಕು ಜನ ಮೆಚ್ಚುವಂಥ ಕನ್ನಡ ಮಾತಾಡೋ ನಟ ಸುಚೇಂದ್ರ ಪ್ರಸಾದ್
– ಚತುರ ಭಾಷಾ ನಟ
ಒಂದೇ ಘಟನೆಯನ್ನು ಮತ್ತೆ ಮತ್ತೆ ತೋರಿಸಿ ಕಿರಿಕಿರಿ ಮಾಡುವ ಟಿವಿ ಚಾನೆಲ್‌ಗಳ ವರದಿ
– ಘಟ‘ನಾವಳಿ’
ವೆಯ್ಟ್ ‘ಲಿಫ್ಟರ್’ ಅಂದ್ರೇನು?
– ತೂಕ ಹೆಚ್ಚಿಸಿಕೊಳ್ಳುವವನು