Thursday, 12th December 2024

ಭಾರತ ಔಷಧ ಉದ್ಯಮಕ್ಕೆ ಹೊಸ ಭಾಷೆ ಬರೆದ ಪ್ರಫುಲ್ಲ ಚಂದ್ರ

ಪ್ರಚಲಿತ

ಎಲ್‌.ಪಿ.ಕುಲಕರ್ಣಿ, ಬಾದಾಮಿ

kulkarnilp007@gmail.com

ಈಗ ಕೊವಿಡ್-19 ರಂತೆ, ಆಗ ಮಲೇರಿಯಾ ಎಂಬ ಮಹಾಮಾರಿ ಜಗತ್ತಿನ ನಿದ್ದೆಗೆಡಿಸಿತ್ತು. ಅಂತಹ ಸಂದರ್ಭದಲ್ಲಿ ಆಸ್ಟ್ರೀಯಾದ ವಿಜ್ಞಾನಿ ಹ್ಯಾನ್ಸ್ ಂಡರ್ಸನ್’ ಅವರು ಜರ್ಮನಿಯ ಬಹುರಾಷ್ಟ್ರೀಯ ಔಷಧ ಉತ್ಪಾದನಾ ಪ್ರಯೋಗಶಾಲೆ ’ಬೇಯರ್ ಎ.ಜಿ’ಯಲ್ಲಿ ಮೊಟ್ಟ ಮೊದಲ ಂಟಿ ಮಲೇರಿಯಾ ಡ್ರಗ್ ’ ಕ್ಲೋರೋಕ್ವೀನ್’ ನ್ನು 1934 ರಲ್ಲಿ ಕಂಡುಹಿಡಿದಿದ್ದರು.

ಅದು ಪ್ರಬಲವಾದ ಔಷಧಿಯಾದ ಕಾರಣ, ಅದರಿಂದ ರೋಗಿಗಳಿಗೆ ಹಲವಾರು ತೊಂದರೆಗಳಾಗುತ್ತಲಿದ್ದವು. ಇದನ್ನು ಮನಗಂಡ ಆಗಿನ ಕೆಲವು ತಜ್ಞರು ಕ್ಲೊರೊಕ್ವಿನ್‌ನ ದುರ್ಬಲ ರೂಪವಾದ ,’ಹೈಡ್ರಾಕ್ಸಿಕ್ಲೋರೋಕ್ವೀನ್ ’ ಅನ್ನು ಎರಡನೆಯ ಮಹಾಯುದ್ದದ ಸಮಯದಲ್ಲಿ ಅಭಿವೃದ್ಧಿ ಪಡಿಸಿದರು. ಆ ದಿನಗಳಲ್ಲಿ ಮಲೇರಿಯವು ಇಡೀ ಪ್ರಪಂಚವನ್ನು, ಅದರಲ್ಲೂ ಭಾರತವನ್ನು ಹೆಚ್ಚಾಗಿ ಬಾಧಿಸುತ್ತಿತ್ತು. ಆಗತಾನೆ ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದಿದ್ದ ಪ್ರಪುಲ್ಲಚಂದ್ರ ರೇ ಅವರು ಭಾರತದಲ್ಲಿ ’ಹೈಡ್ರಾಕ್ಸಿಕ್ಲೋರೋಕ್ವೀನ್ ’ನ ತಯಾರಿಕೆಯನ್ನು ಪಾರಂಭಿಸಿ ದರು.

ಅವರೇ ಸ್ಥಾಪಿಸಿದ ಔಷಧ ಕಂಪನಿ-’ ಬೆಂಗಾಲ್ ಕೆಮಿಕಲ್ಸ್ ಅಂಡ್ ಫಾರ್ಮಾಸುಟಿಕಲ್ಸ್ ಲಿಮಿಟೆಡ್ ’ನಲ್ಲಿ ಈ ಔಷಧಿಯನ್ನು ಉತ್ಪಾದಿಸಲು ಆರಂಭಿಸಿದರು. ವೈದ್ಯಕೀಯ ವಲಯದಲ್ಲಿ ’ಹೈಡ್ರಾಕ್ಸಿ ಕ್ಲೋರೋಕ್ವೀನ್ ’ ಕೋವಿಡ್ 19ಗೆ ತಕ್ಕ ಮಟ್ಟಿಗೆ ಸಹಾಯ ಮಾಡಬಹುದು ಎನ್ನುವ ಅಭಿಪ್ರಾಯವಿದೆಯೇ ಹೊರತು, ಪೂರ್ಣ ಪ್ರಮಾಣದ ಮದ್ದಲ್ಲ. ಮೊದಲೇ ಈ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದ ಅಮೆರಿಕವನ್ನು ಕಾಪಾಡಲು ಅಧ್ಯಕ್ಷ್ಷಡೊನಾಲ್ಡ್ ಟ್ರಂಪ್, ಕಳೆದ ವರ್ಷ, ಈ ’ಹೈಡ್ರಾಕ್ಸಿ ಕ್ಲೋರೋಕ್ವೀನ್ ’ ಮಾತ್ರೆಗಳನ್ನು ಕಳಿಸಿಕೊಡಿ ಎಂದು ಭಾರತಕ್ಕೆ ಬೇಡಿ ಕೊಂಡಿದ್ದರು. ಅದರಂತೆ ಭಾರತ ಅಮೆರಿಕಗೆ ಮಾತ್ರೆಗಳನ್ನು ತಕ್ಷಣವೇ ಕಳಿಸಿ ಪ್ರಶಂಸೆ ಗಳಿಸಿದ್ದೂ ಆಯಿತು.

ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆದ ಅಮೆರಿಕದಲ್ಲಿ ’ ಹೈಡ್ರಾಕ್ಸಿಕ್ಲೊರೊ ಕ್ವಿನ್’ ಮಾತ್ರೆಗಳನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲವೇ ಎಂದು ಭಾವಿಸಬೇಡಿ. ಏಕೆಂದರೆ ಅಮೆರಿಕಾದಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೆ ಭಾರತದಲ್ಲಿ ಅದು ಇನ್ನೂ ನಾಮಾವಶೇಷವಾಗಿಲ್ಲ. ಹೀಗಾಗಿ ಭಾರತ ಜಗತ್ತಿನಲ್ಲೆ ಅತಿ ಹೆಚ್ಚು ’ ಹೈಡ್ರಾಕ್ಸಿ ಕ್ಲೋರೋಕ್ವೀನ್ ’ ಉತ್ಪಾದಿಸುವ ರಾಷ್ಟ್ರ್ಟ್ರವಾಗಿದೆ. ಇದರ ಮಧ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಸಾಯನ ಶಾಸ್ತ್ರಜ್ಞ ಆಚಾರ್ಯ ಪ್ರಫುಲ್ ಚಂದ್ರ ರೇ ಅವರ ಹೆಸರು ಕೇಳಿಬಂದಿತ್ತು.

ಹಾಗಾದರೆ ಯಾರೀ ಪ್ರಫುಲ್ಲಚಂದ್ರ ರೇ? ಏನವರ ಸಾಧನೆ? ಎಂದು ತಿಳಿದುಕೊಳ್ಳುವುದು ಈ ಸಂದರ್ಭದಲ್ಲಿ ಬಹಳ ಮುಖ್ಯ ಮತ್ತು ಹೆಮ್ಮೆ ಅನಿಸುತ್ತದೆ.
ಭಾರತದ ಆಧುನಿಕ ರಾಸಾಯನ ಶಾಸ್ತ್ರದ ಪಿತಾಮಹ ಮತ್ತು ನಮ್ಮ ದೇಶದಲ್ಲಿ ಆಯುರ್ವೇದೇತರ ಮೊದಲ ಔಷಽಯ ಕಂಪನಿಯ ಜನಕನೆಂದು ಗುರುತಿಸಲ್ಪ ಡುವ ರಸಾಯನಶಾಸ್ತ್ರಜ್ಞನೆಂದರೆ ಪ್ರಫುಲ್ಲಚಂದ್ರ ರೇ. ಹಾಗೆಂದು ಇಂಗ್ಲೆಂಡಿನ ರಾಯಲ್ ಸಂಸ್ಥೆಯೂ ರೇ ಅವರನ್ನು ಕಂಡಿದೆ. ಒಬ್ಬ ಸನ್ಯಾಸಿ ಅಥವಾ ವೇದಾಂತಿಯ ಲಕ್ಷಣಗಳನ್ನು ಹೊಂದಿದ್ದ ಪ್ರಫುಲ್ಲ ರೇ ಅವರು ಆಜನ್ಮ ಬ್ರಹ್ಮಚಾರಿಗಳು.

ಸಂಸ್ಕೃತ, ಆಂಗ್ಲ, ಬಾಂಗ್ಲಾ, ಗ್ರೀಕ್ ಮತ್ತು ರ‍್ಯಾಟಿನ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿ, ಭಾರತೀಯ ಇತಿಹಾಸವನ್ನು ವೇದ ಕಾಲದಿಂದ 20ನೇ
ಶತಮಾನದವರೆಗೂ ಅಧ್ಯಯನ ಮಾಡಿದವರು. ಇಂದಿನ ಬಾಂಗ್ಲಾದೇಶಕ್ಕೆ ಸೇರಿದ ಖುಲ್ನಾ ಜಿಲ್ಲೆಯ ರರೂಲಿ ಎಂಬ ಪುಟ್ಟಹಳ್ಳಿಯಲ್ಲಿ ಹರಿಶ್ಚಂದ್ರ ಚೌಧುರಿ
ಮತ್ತು ಭುವನ ಮೋಹನ ದೇವಿಯವರ ಪುತ್ರನಾಗಿ, ಪ್ರಫುಲ್ಲಚಂದ್ರ 1861 ರ ಅಗಸ್ಟ್ 2 ರಂದು ಜನಿಸಿದರು. ಸ್ವಗ್ರಾಮದಲ್ಲೇ ಅಣ್ಣನೊಡನೆ ಶಾಲೆಗೆ
ಹೋಗುತ್ತಾ ನಾಲ್ಕನೇ ತರಗತಿಯವರೆಗೆ ಓದಿದರು.

ಆಗಲೇ, ಅವರ ಶಾಲಾ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸಬೇಕಾಗಿ ಬಂತು. ಒಂಬತ್ತರ ಎಳೆಯ ಹುಡುಗನಿಗೆ ಆದ ವಿಪರೀತ ಭೇದಿ ಕಾಯಿಲೆಯ ಪರಿ
ಣಾಮವನ್ನು ಜೀವಮಾನವಿಡೀ ಅನುಭವಿಸ ಬೇಕಾಗಿ ಬಂತು. ಆದರೂ, ಅವರೆಂದೂ ಧೃತಿಗೆಡಲಿಲ್ಲ. ರೇ ಅವರು ಎರಡು ವರ್ಷಗಳ ಕಾಲ ಶಾಲೆಗೆ ಹೋಗಲಿಲ್ಲ. ತನ್ನ ಹತ್ತನೇ ಪ್ರಾಯದಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆ ಕೂಡಾ ಕಲಿತರು. ಒಮ್ಮೆ ಆರೋಗ್ಯದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡ ಮೇಲೆ ಕೊಲ್ಕತ್ತೆಯ ಆಲ್ಬರ್ಟ್ ಶಾಲೆಗೆ ದಾಖಲಾದರು.

ಮುಂದೆ ಎನ್ಟ್ರಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಈಶ್ವರ ಚಂದ್ರ ವಿದ್ಯಾಸಾಗರ ಸ್ಥಾಪಿತ ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ
ಗಳನ್ನು ಓದಿದರು. ತಾನು ಕಲಿಯುತ್ತಿದ್ದ ಕಾಲೇಜಿನಲ್ಲಿ ಸರಿಯಾದ ಪ್ರಯೋಗಶಾಲೆಗಳು ಇಲ್ಲವಾದುದರಿಂದ, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಹೊರಗಿನ ವಿದ್ಯಾರ್ಥಿ ಯಾಗಿ ಸೇರಿದರು. ಅಲ್ಲಿ ಅಲೆಗ್ಸಾಂಡರ್ ಪೆಡ್ಲರ್ ಅವರ ಉಪನ್ಯಾಸಗಳಿಂದ ಆಕರ್ಷಿತರಾಗಿ, ರಸಾಯನಶಾಸ ಅವರ ಪ್ರೀತಿಯ ವಿಷಯವಾಯಿತು. ಜೀವನ ಪಯಂತ ಪ್ರೊ.ಪೆಡ್ಲರ್ ಅವರಿಗೆ ರೇ ಋಣಿಯಾಗಿದ್ದರು.

ಕೊಲ್ಕತ್ತದಲ್ಲಿ ಪದವಿ ವಿದ್ಯಾಭ್ಯಾಸ ಪೂರೈಸುವ ಮೊದಲೇ, ಪ್ರಫುಲ್ಲರು ಇಂಗ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆಯ್ಕೆಯಾದರು. ಇಂಗ್ಲೆಂಡಿನಲ್ಲಿ ಇದ್ದಷ್ಟ್ಟುಕಾಲವೂ ತನ್ನ ಪೂರ್ಣ ಸಮಯವನ್ನು ಜ್ಞಾನಾಭಿವೃದ್ಧಿಗಾಗಿಯೇ ವಿನಿಯೋಗಿಸಿದವರು, ಪ್ರಫುಲ್ಲರು. ಬಿ.ಎಸ್ಸಿ. ಮುಗಿಸಿ, ಸ್ನಾತಕೋತ್ತರ ಮತ್ತು ಡಿ.ಎಸ್ಸಿ. ಪದವಿಯ ನ್ನೂ ವಿಶೇಷ ಪ್ರಬಂಧಗಳಿಗಾಗಿ ಪಡೆದುಕೊಂಡರು. 1888 ರಲ್ಲಿ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಸ್ವದೇಶಕ್ಕೆ ಮರಳಿದರು. ಇಂಗ್ಲೆಂಡಿನಲ್ಲಿ ತನಗೆ ದೊರಕಿದ ಮೆಚ್ಚುಗೆಯ ಪತ್ರಗಳು, ಬಹುಮಾನಗಳು, ಶಿಫಾರಸ್ಸುಗಳು ಭಾರತದಲ್ಲಿ ಉಪಯೋಗವಾಗಬಹುದೆಂದು ರೇ ಅವರು ಅಂದುಕೊಂಡಿದ್ದರು.

ಆದರೆ, ಅದು ಹುಸಿಯಾಯಿತು. ಕೊಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಎಷ್ಟೇ
ಅರ್ಹತೆಯಿದ್ದರೂ, ಬ್ರಿಟಿಷರ ಕಾಲದಲ್ಲಿ ಇವೆಲ್ಲಾ ಏನೂ ನಡೆಯಲಿಲ್ಲ. ದೊಡ್ಡ ಹುದ್ದೆಗಳೆಲ್ಲಾ ಆಂಗ್ಲ ಪ್ರಾಧ್ಯಾಪಕರುಗಳ ಕೈವಶವಿತ್ತು. ರೇ ಅವರು ಸಾಕಷ್ಟ್ಟು ವಿರೋಧವನ್ನು ಮೌಕಿಕವಾಗಿಯೂ ಮತ್ತು ಲಿಖಿತವಾಗಿಯೂ ವ್ಯಕ್ತಪಡಿಸಿದ್ದರು. ಆದರೆ, ಉನ್ನತ ಅಽಕಾರಿಗಳ ಕಿವಿ ಕಿವುಡೇ ಇತ್ತು. ಆದರೇನಂತೆ, ಕಾಲೇಜಿನಲ್ಲಿ ರೇ ಅವರ ಉಪನ್ಯಾಸಗಳನ್ನು ಕೇಳಲು ಎಲ್ಲೆಡೆ ಉತ್ಸಾಹ ಮತ್ತು ಆಸಕ್ತಿ ಹರಡಿತ್ತು.

ರಸಾಯನಶಾಸ್ತ್ರದ ಪ್ರವಚನಗಳೆಲ್ಲಾ ರಸಭರಿತವಾಗಿರುತ್ತಿತ್ತು. ಹಾಸ್ಯದ ಲೇಪವಿರುವ ಮೇಧಾವೀ ಉಪನ್ಯಾಸಗಳು! ಕವಿ ರವೀಂದ್ರರ ಕವನಗಳು, ಪ್ರಾಚೀನ
ರಸಾಯನಶಾಸ್ತ್ರಜ್ಞ ನಾಗಾರ್ಜುನರು ಬರೆದ ರಸ ರತ್ನಾಕರ ಗ್ರಂಥದ ಶ್ಲೋಕಗಳು ಮಾತಿನುದ್ದಕ್ಕೂ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದ್ದವು. ಪ್ರಫುಲ್ಲ ಚಂದ್ರ ರೇ ಭಾರತದಲ್ಲಿ ರಸಾಯನಶಾಸ್ತ್ರದ ಕ್ರಮಬದ್ಧ ಅಧ್ಯಯನ ಮತ್ತು ಭಾರತದಲ್ಲಿ ರಾಸಾಯನಿಕ ಕೈಗಾರಿಕೆಗಳ ಸ್ಥಾಪಕರು. ಆದರೆ, ಆಂತರಿಕವಾಗಿ ಸಾಹಿತಿಗಳಾಗಿಯೇ ಇದ್ದವರು. ಅವರೇ ಒಪ್ಪಿಕೊಳ್ಳುವಂತೆ, “ನಾನು ರಸಾಯನಶಾಸ್ತ್ರಜ್ಞ ಆದುದು ಒಂದು ಆಕಸ್ಮಿಕವಷ್ಟೇ”. ಈ ವಿಚಾರ ಅವರ ಆತ್ಮಕಥನದಲ್ಲಿ ಬರುತ್ತದೆ. ಭಾರತದ ಏಳಿಗೆ ವೈಜ್ಞಾನಿಕ ಮನೋಧರ್ಮದಿಂದಲೇ ಆಗಬೇಕಷ್ಟೇ ಎಂಬುದನ್ನು ಇಂದಿಗೆ ನೂರು ವರ್ಷಗಳ ಮೊದಲೇ ಪ್ರತಿಪಾದಿಸಿದರು.

ಹೀಗೆ ಚಿಂತನೆ ಮಾಡುತ್ತಿದ್ದ ಪ್ರಫುಲ್ಲ ಚಂದ್ರರು ವಿಜ್ಞಾನವನ್ನು ಬಿಡದೆ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಲಯಗಳಲ್ಲೂ ತಮ್ಮನ್ನು ತೊಡಗಿಸಿ ಕೊಂಡವರು. ಪ್ರಫುಲ್ಲಚಂದ್ರ ರೇ ಅವರ ಸಾಧನೆಗಳಿಗೆ ಪ್ರತೀಕವಾದ ಇನ್ನೊಂದು ಪಾಂಡಿತ್ಯಪೂರ್ಣ ಗ್ರಂಥ, 1902 ರಲ್ಲಿ ಪ್ರಕಟಿತ, “ಹಿಂದೂ ರಸಾಯನ ಶಾಸ್ತ್ರದ ಚರಿತ್ರೆ: ಪ್ರಾಚೀನ ಕಾಲದಿಂದ 16 ನೇ ಶತಮಾನದ ಮಧ್ಯ ಭಾಗದವರೆಗೆ”. ಈ ಗ್ರಂಥದ ಮುಂದುವರಿದ ಎರಡನೇ ಸಂಪುಟ 1909 ಪ್ರಕಾಶಿತ ವಾಯಿತು. ಈ ಗ್ರಂಥಗಳಲ್ಲಿ ಭಾರತೀಯ ರಸಾಯನಶಾಸ್ತ್ರದ ಸಮಗ್ರ ಅಧ್ಯಯನಗಳನ್ನು ಮಾಡಲಾಗಿವೆ.

ಪ್ರಾಚೀನ ಮೂಲವಾದ ಸಂಸ್ಕೃತದಲ್ಲಿಯ ಬರಹಗಳನ್ನು ಇಂಗಿಷ್‌ಗೆ ರೂಪಾಂತರಿಸಲಾಗಿದ್ದು, ಅಧ್ಯಯನಶೀಲರಿಗೆ ರಸಾಯನಶಾಸ್ತ್ರದ ಪರಿಚಯವಾಗುತ್ತದೆ. ಗ್ರಂಥಕಾರರು ಪ್ರಾಚೀನ ಕಾಲದ ಗ್ರೀಕ್ ದೇಶದ ಜ್ಞಾನವು ಭಾರತೀಯ ಗ್ರಂಥಗಳಿಂದಲೂ ಹೇಗೆ ಪ್ರಭಾವಿತವಾಗಿದೆ ಎಂಬಲ್ಲಿಂದ ಪ್ರಾರಂಭಿಸಿ, ಅಥರ್ವ ವೇದದ ಕೆಲವು ಯಂತ್ರ-ತಂತ್ರಗಳ ಉಲ್ಲೇಖವನ್ನೂ ಮಾಡಿರುತ್ತಾರೆ. ಎಂಟನೇ ಶತಮಾನದ ವಾಗ್ಬಟ ಅವರ ರಸಶಾಸ್ತ್ರ ಅಧ್ಯಯನ, ಅನಂತರ ಸುಶ್ರುತ ಮತ್ತು ಚರಕರ ವೈದ್ಯರಸಾಯನ ಶಾಸ್ತ್ರದ ಜ್ಞಾನ, ಪ್ರಾಚೀನ ಕಾಲದ ಭಾರತೀಯ ಲೋಹಶಾಸ್ತ್ರಗಳು, ಅದಿರಿನಿಂದ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ ಇತ್ಯಾದಿ ಲೋಹಗಳ ಪ್ರತ್ಯೇಕಿಸುವಿಕೆ, ಈ ಲೋಹಗಳ ಸಂಯುಕ್ತಗಳ ತಯಾರಿ, ಅವುಗಳ ಉಪಯೋಗ, ಸುಡುಮದ್ದುಗಳು, ಆಮ್ಲಗಳು, ವಿಷಕಾರಿ ರಾಸಾಯನಿಕಗಳು ಅಲ್ಲದೇ ಇನ್ನೂ ಹತ್ತು ಹಲವು ರಸಾಯನಶಾಸ್ತ್ರ ಸಂಬಂಧಪಟ್ಟ ವಿಚಾರಗಳನ್ನು ಈ ಗ್ರಂಥದಲ್ಲಿ ದಾಖಲಿಸಿದ್ದಾರೆ.

ಲೋಹ-ಅಲೋಹಗಳನ್ನು ಮತ್ತು ಔಷಧಗಳನ್ನು ತಯಾರು ಮಾಡಲು ಬೇಕಾಗುವ ಉಪಕರಣಗಳ ಪರಿಚಯವೂ ಈ ಗ್ರಂಥದಲ್ಲಿ ಉಲ್ಲೇಖವಾಗಿದೆ. ಒಟ್ಟಿನಲ್ಲಿ, ಪ್ರಾಚೀನ ಭಾರತೀಯ ರಸಾಯನಶಾಸ್ತ್ರ ಎಷ್ಟ್ಟು ಕ್ರಮಬದ್ಧ ಮತ್ತು ಸಮಗ್ರವಾಗಿತ್ತು ಎನ್ನುವುದಕ್ಕೆ ಪ್ರಫುಲ್ಲಚಂದ್ರರೇ ಅವರ ಈ ಗ್ರಂಥಗಳು ನೇರ ಸಾಕ್ಷಿಯಾಗಿದೆ.
1888 ರಿಂದ 1916ರ ವರೆಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಪ್ರಫುಲ್ಲಚಂದ್ರ ರೇ ಅಲ್ಲಿಂದ ಹೊರಬಂದರು. ಈ ಮಧ್ಯೆ ಪ್ರಸಿದ್ಧ ವಿಜ್ಞಾನಿ ಸರ್
ಜೆ.ಸಿ.ಬೋಸ್ ಅವರೊಡನೆಯೂ ಒಂದು ವರ್ಷ ಕಾಲ ಕಾರ್ಯನಿರತರಿದ್ದರು.

1924 ರಲ್ಲಿ “ಇಂಡಿಯನ್ ಸ್ಕೂಲ್ ಆಫ್ ಕೆಮಿಸ್ಟ್ರಿ” ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿದರು. 1921 ರಲ್ಲಿ, ಅಂದರೆ ಅರುವತ್ತರ ಪ್ರಾಯದಲ್ಲಿ ತನ್ನ ಸಂಬಳ ವನ್ನೆಲ್ಲಾ ಕಲ್ಕತ್ತಾ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಪ್ರಯುಕ್ತ ಉಪಯೋಗಕ್ಕೆಂದು ನೀಡಿದರು. 1917 ರಲ್ಲಿ ಬ್ರಿಟಿಷ ಸರಕಾರ ಪ್ರಫುಲ್ಲಚಂದ್ರರಿಗೆ ನೈಟ್ ಹುಡ್ ಪ್ರಶಸ್ತಿ ನೀಡಿ, ಸರ್ ಉಪಾದಿಯಿಂದ ಸನ್ಮಾನಿಸಿದರೂ, ಅವರು ತಮ್ಮ ಹೆಸರಿನ ಹಿಂದೆ ಸರ್ ಪ್ರಫುಲ್ಲಚಂದ್ರ ರೇ ಅನ್ನುವ ಬದಲು, ಆಚಾರ್ಯ ಪ್ರಫುಲ್ಲಚಂದ್ರ ರೇ ಎಂದು ಕರೆಯಿಸಿಕೊಳ್ಳುವುದರಲ್ಲಿ ಕೃತಾರ್ಥತೆಯನ್ನು ಕಂಡವರು. ಆಚಾರ್ಯಯರ ತಂದೆ ಹರಿಶ್ಚಂದ್ರ ಚೌಧುರಿಯವರು ಬ್ರಹ್ಮ ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಆಚಾರ್ಯರೂ ಅಷ್ಟೇ, ಬ್ರಹ್ಮ ಸಮಾಜಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದವರು. ಪ್ರತಿ ಭಾನುವಾರ ಸಮಾಜದ ಕೇಶಬ್ ಚಂದ್ರ ಸೇನ್ ಅವರ
ಪ್ರವಚನಗಳನ್ನು ತಪ್ಪಿಸುತ್ತಿರಲಿಲ್ಲ. ಇಂಗ್ಲೆಂಡಿನಿಂದ ಹಿಂದುರಿಗಿದ ಮೇಲೆ, ಆಚಾರ್ಯರ ವೇಷದಲ್ಲೂ ಬದಲಾವಣೆಯಾಯಿತು. ಖಾದಿ ಮಾತ್ರ ಈಗ ಅವರ ಉಡುಪು. ತನ್ನ ಎಲ್ಲಾ ಕೆಲಸಗಳನ್ನು ಎಂದೂ ಅವರು ಇತರರಿಗೆ ಮಾಡಲು ಬಿಡುತ್ತಿರಲಿಲ್ಲ. ಕೊಲ್ಕತ್ತದ ಅವರ ಕೋಣೆಯ ನೆಲದಿಂದ ಹಿಡಿದು, ಅವರ ಬಟ್ಟೆ ಬರೆ ಮತ್ತು ಪಾದರಕ್ಷೆಗಳನ್ನು ಅವರೇ ಸ್ವಚ್ಚಗೊಳಿಸುತ್ತಿದ್ದರು.

1901 ರಲ್ಲಿ ಗೋಪಾಲಕೃಷ್ಣ್ಣ ಗೋಖಲೆಯವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಗೋಖಲೆಯವರ ಮನೆಯಲ್ಲಿಯೇ ಆಚಾರ್ಯರು, ಮೊದಲಬಾರಿಗೆ ಗಾಂಧೀಜಿಯ ವರನ್ನು ದಕ್ಷಿಣ ಆಫ್ರೀಕಾದಿಂದ ಬಂದ ಹೊಸದರಲ್ಲಿ ಭೇಟಿ ಆಗಿದ್ದರು. ಆಚಾರ್ಯರಿಂದ ಪ್ರಭಾವಿತರಾಗಿ ವಿಜ್ಞಾನದಲ್ಲಿ ಹೆಸರು ಮಾಡಿದವರಲ್ಲಿ ಮೇಘನಾಥ ಸಹಾ, ಸತ್ಯೇಂದ್ರನಾಥ್ ಬೋಸ್ ಮತ್ತು ಶಾಂತಿ ಸ್ವರೂಪ ಭಟ್ನಾಗರ್ ಪ್ರಮುಖರು. ಪ್ರಫುಲ್ಲ ಚಂದ್ರರಿಗೆ ಇನ್ನೊಂದು ವಿಷಯವೂ ಚೆನ್ನಾಗಿ ತಿಳಿದಿತ್ತು- ಹಿಂದಿನ ಹಿರಿಮೆಯನ್ನು ಸರಿಸಿಕೊಂಡು ಹಿಗ್ಗಿದರೆ ಸಾಲದು, ಮತ್ತೆ ನಮ್ಮ ಹಿರಿಯರ ಜ್ಞಾನಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು.

ವಿಜ್ಞಾನ ಮತ್ತು ಕೈಗಾರಿಕೆಗಳಲ್ಲಿ ಮುಂದುವರಿಯಬೇಕು. ಒಂದು ಕಂಪನಿಯನ್ನು ಪ್ರಾರಂಭಿಸುವುದು ಮಾತ್ರವಲ್ಲದೇ ಅದನ್ನು ಯಶಸ್ವಿಯಾಗಿ ಮುನ್ನಡೆಸವುದು
ಸಾಮಾನ್ಯ ಕೆಲಸವಲ್ಲ. ಆದರೆ ಪ್ರಫುಲ್ಲ ಚಂದ್ರ ರೇ ಅವರು ಎಲ್ಲ ಅಡ್ಡಿ ಆತಂಕಗಳನ್ನು ಬದಿಗೊತ್ತಿ ಯಶಸ್ವಿಯಾದರು. 1936 ರಲ್ಲಿ ಅಂದರೆ ತಮ್ಮ 75 ನೇ ವಯಸ್ಸಿನಲ್ಲಿ ನಿವೃತ್ತಿಯಾಗಿ 25 ರ್ಷಗಳ ಕಾಲ ವಾಸಿಸುತ್ತಿದ್ದ ಕೊಲ್ಕತ್ತದ ತಮ್ಮ ಒಂದು-ಕೋಣೆಯ ಮನೆಯಲ್ಲಿ 1944 ರ ಜೂನ್ 16 ರಂದು ಭಾರತದ ಈ ವಿಜ್ಞಾನದ ಧ್ರುವತಾರೆ ತಮ್ಮ 84 ನೇ ವಯಸ್ಸಿನಲ್ಲಿ ಇಹಲೋಕದಿಂದ ಮರೆಯಾಯಿತು.

2011 ರಲ್ಲಿ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರ 150 ನೇ ಜನ್ಮದಿನವನ್ನು ಆಚರಿಸಲಾಯಿತು. ಈ ವೇಳೆ, ಇಂಗ್ಲೆಂಡ್‌ನ ’ ದಿ ರಾಯಲ್ ಸೊಸೈಟಿ ಆಫ್
ಕೆಮಿಸ್ಟ್ರಿ ’ ಸಂಸ್ಥೆಯು ’ ಕೆಮಿಕಲ್ ಲ್ಯಾಂಡ್ ಮಾರ್ಕ್ ’ ಫಲಕವನ್ನು ರೇ ಅವರಿಗೆ ಸಮರ್ಪಿಸಿತು. ಈ ರೀತಿಯ ಗೌರವ ಪಡೆದ ಮೊದಲ ಯುರೋಪಿಯನೇತರ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದರು. ಹಿಂದೂ ಸಂಸ್ಕ ತಿಯ ಪ್ರತೀಕವಾದ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರು ಕೊನೆಯ ದಿನಗಳಲ್ಲಿ ಆಡಿದ ಮಾತುಗಳು ಸ್ವಾಭಿಮಾನದ ನುಡಿ ಮುತ್ತುಗಳೇ ಸರಿ, “ಇನ್ನೊಂದು ಜನ್ಮದಲ್ಲೂ ನಾನು ಭಾರತದಲ್ಲಿಯೇ ಹುಟ್ಟುವೆ, ಇಲ್ಲಿ ನಾನು ಮಾಡಬೇಕಾದ ಕೆಲಸಗಳು ಇನ್ನೂ ಬಾಕಿ ಇವೆ”. ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ದೊರಕಿರಲಿಲ್ಲ.!