Wednesday, 30th October 2024

Prakash Shesharaghavachar Column: ನಿರೀಕ್ಷೆಗಳನ್ನು ಬುಡಮೇಲು ಮಾಡಿದ ಚುನಾವಣಾ ಫಲಿತಾಂಶ

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಹರಿಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳ ಅಬ್ಬರ ಇತ್ತೀಚೆಗಷ್ಟೇ ಮುಗಿದಿದೆ. ಈ ಪೈಕಿ ಹರಿಯಾಣ ಚುನಾವಣೆಯ ಮತಗಳ ಎಣಿಕೆಯು ಬೆಳಗ್ಗೆ 8 ಗಂಟೆಗೆ ಆರಂಭವಾದಾಗ, ಅಂಚೆಮತದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಮತ ಎಣಿಕೆಯು ಪ್ರಾರಂಭವಾಗಿ, ‌9 ಗಂಟೆಯ ವೇಳೆಗೆ ಕಾಂಗ್ರೆಸ್ 62 ಕ್ಷೇತ್ರಗಳಲ್ಲಿ ಮುಂದಿದ್ದರೆ, ಬಿಜೆಪಿ 16 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿತ್ತು.

ಫಲಿತಾಂಶವು ಚುನಾವಣಾ ವಿಶ್ಲೇಷಕರ ಅಂದಾಜು ಮತ್ತು ‘ಎಕ್ಸಿಟ್ ಪೋಲ್’ ನುಡಿದ ಭವಿಷ್ಯವಾಣಿಯ ಹಾದಿ ಯಲ್ಲೇ ಸಾಗಿತ್ತು. ಗೆಲುವಿನ ಬರಗಾಲ ಎದುರಿಸುತ್ತಿದ್ದ ಕಾಂಗ್ರೆಸ್‌ನ ದೆಹಲಿ ಕಚೇರಿಯಲ್ಲಿ ಪಟಾಕಿಗಳು ಸಿಡಿದವು. ಮನೆಯಲ್ಲಿದ್ದ ಕಾಂಗ್ರೆಸ್ ವಕ್ತಾರ ಪವನ್ ಖೇರ ಮತ್ತು ಜೈರಾಂ ರಮೇಶ್ ಅವರು ಅಪರೂಪದ ಗೆಲುವಿನ ಕ್ಷಣಗಳ ಆನಂದ ಅನುಭವಿ ಸಲು ಎಐಸಿಸಿ ಕಚೇರಿಗೆ ಧಾವಿಸಿ ಬಂದರು.

ವಾಹಿನಿಗಳಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ನ ವಕ್ತಾರರು ಮೋದಿ ಸರಕಾರದ ಮೇಲೆ ವಾಗ್ದಾಳಿಗೆ ಮುಂದಾದರು. ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾತೆ ಅವರಂತೂ, “ಹರಿಯಾಣದಲ್ಲಿ ಬಿಜೆಪಿಗೆ ಇಪ್ಪತ್ತಕ್ಕಿಂತ ಹೆಚ್ಚು ಸ್ಥಾನ ಬಂದರೆ ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ” ಎಂದು ಘೋಷಿಸಿ ಬಿಟ್ಟರು.

ಮತ ಎಣಿಕೆಗೂ ಮುನ್ನ, ಹರಿಯಾಣದಲ್ಲಿ ಪಕ್ಷವು ಗೆಲ್ಲುವುದರ ಕುರಿತು ಬಿಜೆಪಿಯವರಿಗೇ ವಿಶ್ವಾಸವಿರಲಿಲ್ಲ. ಮಿಕ್ಕಂತೆ ಕೆಲವರು, “ಮೋದಿ ಜನಪ್ರಿಯತೆ ಕುಗ್ಗಿದೆ, ಮೂರನೆಯ ಅವಧಿಯಲ್ಲಿ ಅವರಿಗೆ ಆಡಳಿತ-ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸುವ ಶಕ್ತಿಯಿಲ್ಲ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ” ಎಂದಿದ್ದರು.

ಚುನಾವಣೋತ್ತರ ಸಮೀಕ್ಷೆ ಕೈಗೊಂಡ ಆರು ಸಂಸ್ಥೆಗಳು, “ಹರಿಯಾಣದಲ್ಲಿ ಕಾಂಗ್ರೆಸ್ ನಿಶ್ಚಿತವಾಗಿ ಗೆಲ್ಲುತ್ತದೆ ಮತ್ತು ಬಿಜೆಪಿ ಗೆಲುವಿನ ಸಮೀಪಕ್ಕೂ ಬರುವುದಿಲ್ಲ” ಎಂದಿದ್ದವು. ಚುನಾವಣಾ ವಿಶ್ಲೇಷಕರಾದ ರಾಜದೀಪ್ ಸರ್‌ದೇಸಾಯಿ, ಯೋಗೇಂದ್ರ ಯಾದವ್, ಅಜಿತ್ ಅಂಜುಂ, ಪ್ರೀತಿ ಚೌಧರಿ, ಇತರ ಪತ್ರಕರ್ತರು ಹರಿಯಾಣದಲ್ಲಿ
ಬಿಜೆಪಿಯ ಸೋಲನ್ನು ನಿರ್ಧರಿಸಿಯಾಗಿತ್ತು. ಈ ಪೈಕಿ ಯೋಗೇಂದ್ರ ಯಾದವ್ “ಹರಿಯಾಣದಲ್ಲಿ ಇರುವುದು
ಕಾಂಗ್ರೆಸ್ ಅಲೆ, ಇಲ್ಲವೇ ಬಿರುಗಾಳಿ ಮತ್ತು ಸುನಾಮಿ ಮಾತ್ರ” ಎಂದು ಅತಿಯಾದ ಆತ್ಮವಿಶ್ವಾಸವನ್ನು ಪ್ರಕಟ ಮಾಡಿದರು. ಈ ಹೇಳಿಕೆ ಅವರನ್ನು ಅನೇಕ ವರ್ಷಗಳವರೆಗೆ ಕಾಡುವುದರಲ್ಲಿ ಸಂಶಯವಿಲ್ಲ.

2024ರ ಲೋಕಸಭಾ ಚುನಾವಣಾ ಫಲಿತಾಂಶದ ತರುವಾಯದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ತಮ್ಮ ವಿಶ್ವಾ
ಸಾರ್ಹತೆಯನ್ನು ಸಾಕಷ್ಟು ಕಳೆದುಕೊಂಡಿವೆ. ಇಷ್ಟಾಗಿಯೂ ಕೆಲವರು ಛಲ ಬಿಡದೆ ಮತ್ತೆ ಹರಿಯಾಣದ ಚುನಾ ವಣೋತ್ತರ ಸಮೀಕ್ಷೆಗೆ ಮುಂದಾದರು. ಆದರೆ ಫಲಿತಾಂಶ ತಿರುವು- ಮುರುವಾದ್ದರಿಂದ, ಇವರೆಲ್ಲಾ ಕೈ ಮಾತ್ರ ಸುಟ್ಟುಕೊಂಡಿಲ್ಲ, ಜನರ ವಿಶ್ವಾಸವನ್ನೂ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಚುನಾವಣಾ ಪ್ರಚಾರದ ಸಭೆಗಳಲ್ಲಿ, “ಹರಿಯಾಣದ ಮಗ
ನನ್ನು ಜೈಲಿಗೆ ಕಳುಹಿಸಿದ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೀರಾ? ನಾನು ಭ್ರಷ್ಟನಲ್ಲ ಎಂದು ಸಂದೇಶ ಕಳುಹಿಸುತ್ತೀರಾ?” ಎಂದು ಭಾವನಾತ್ಮಕವಾಗಿ ಮಾತಾಡಿ ವೋಟು ಪಡೆಯಲು ಹವಣಿಸಿದರು. ಫಲಿತಾಂಶ ಬಂದಾಗ, ಆಮ್ ಆದ್ಮಿ ಸ್ಪರ್ಧಿಸಿದ್ದ 88 ಕ್ಷೇತ್ರಗಳ ಪೈಕಿ 87ರಲ್ಲಿ ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿ, ಅವರೆಲ್ಲ ಕೇವಲ ಶೇ.1.8ರಷ್ಟು ಮತ ಪಡೆದು ಹೀನಾಯ ಸೋಲು ಕಂಡಿದ್ದರು. ಬೆಳಗ್ಗೆ 10 ಗಂಟೆಯ ನಂತರ ಬಿಜೆಪಿ ಮೇಲುಗೈ ಸಾಧಿಸತೊಡಗಿತು.

ಗೆದ್ದೆವೆಂದು ಬೀಗುತ್ತಿದ್ದ ಕಾಂಗ್ರೆಸ್ಸಿಗರಿಗೆ ಅನಿರೀಕ್ಷಿತ ಆಘಾತವಾಗಿತ್ತು. ಅವರ ಕೆಂಗಣ್ಣು ಚುನಾವಣಾ ಆಯೋಗದ ಮೇಲೆ ಹರಿಯತೊಡಗಿ, “ಆಯೋಗದ ವೆಬ್‌ಸೈಟಿನಲ್ಲಿ ಮತ ಎಣಿಕೆಯ ವಿವರವನ್ನು ನಿಧಾನವಾಗಿ ಅಪ್‌ಲೋಡ್ ಮಾಡಿ ಆಡಳಿತದ ಮೇಲೆ ಒತ್ತಡ ಹಾಕುತ್ತಿದ್ದಾರೆ” ಎಂದೂ, ಹನ್ನೆರಡು ಗಂಟೆ ವೇಳೆಗೆ ಕಾಂಗ್ರೆಸ್ಸಿನ ಸೋಲು ಖಚಿತವಾಗುತ್ತಿದ್ದಂತೆ, “ಇವಿಎಂಗಳನ್ನು ಅದಲು- ಬದಲು ಮಾಡಲಾಗಿದೆ” ಎಂದೂ ಆಯೋಗಕ್ಕೆ ದೂರು ಸಲ್ಲಿಸಿ ದರು. ಹರಿಯಾಣದ ಜತೆಗೆ ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಯ ಮತ ಎಣಿಕೆಯೂ ನಡೆದಿತ್ತು. ಅದರಲ್ಲಿ ನ್ಯಾಷನಲ್ ಕಾನರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಬಹು ಮತ ಪಡೆದಿತ್ತು. ಆದರೆ, ಇಲ್ಲಿ ಆಯೋಗದ ನಿಷ್ಪಕ್ಷಪಾತತೆಯ ಕುರಿತು ಅವರು ಸೊಲ್ಲೆತ್ತಲಿಲ್ಲ, ಇವಿಎಂಗಳ ಬಗ್ಗೆ ತಕರಾರು ತೆಗೆಯಲಿಲ್ಲ. ಹೀಗೆ, ಇಬ್ಬಗೆಯ ನೀತಿಯನ್ನು ಎಗ್ಗಿಲ್ಲದೆ ತೋರ್ಪಡಿಸಿಕೊಂಡರು ಈ ಕಾಂಗ್ರೆಸ್ಸಿಗರು!

ರಾಜದೀಪ್ ಸರ್‌ದೇಸಾಯಿ, ಬರ್ಖಾದತ್ ಹಾಗೂ ಇತರ ಪತ್ರಕರ್ತರು, “ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಬಣ
ರಾಜಕೀಯವೇ ಕಾರಣ; ಪ್ರಮುಖ ಹಾಗೂ ಜಾಟ್ ಕೇಂದ್ರೀಕೃತ ಪ್ರಚಾರ ಕೈಗೊಂಡು ದಲಿತ ನಾಯಕಿ ಶೆಲ್ಜಾ
ಕುಮಾರಿ ಅವರನ್ನು ಅಲ್ಲಿ ನಿರ್ಲಕ್ಷಿಸಲಾಗಿತ್ತು” ಎಂದು ಅಭಿ ಪ್ರಾಯಪಟ್ಟಿದ್ದಾರೆ. ಭೂಪಿಂದರ್ ಹೂಡಾರ ಹಿಡಿತ ಹೇಗಿತ್ತೆಂದರೆ, ಅವರು ಹೇಳಿದ 72 ಅಭ್ಯರ್ಥಿಗಳಿಗೆ ಹೈಕಮಾಂಡ್ ಮಣೆ ಹಾಕಿತ್ತು. ಇತ್ತ ಬಿಜೆಪಿಯು ಸದ್ದಿಲ್ಲದೆ ದಲಿತ ಮತ್ತು ಹಿಂದುಳಿದ ಸಮುದಾಯಗಳ ಮತದಾರರ ಮನವೊಲಿಸುವ ಕಾರ್ಯದಲ್ಲಿ ತೊಡಗಿತ್ತು. ಹತ್ತು ವರ್ಷದ ಭ್ರಷ್ಟಾಚಾರ-ರಹಿತ ಆಡಳಿತ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ಸರಕಾರದ ಯೋಜನೆಗಳನ್ನು ತಲುಪಿಸಿದ್ದು ಇಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಜತೆಗೆ, ಮನೋ ಹರಲಾಲ್ ಖಟ್ಟರ್‌ರನ್ನು ಬದಲಾಯಿಸಿ ಹಿಂದುಳಿದ ವರ್ಗದ ನಯಾಬ್ ಸಿಂಗ್ ಸೈನಿಯವರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿಯ ಗೆಲುವಿಗೆ ಮತ್ತಷ್ಟು ಬಲ ನೀಡಿತು.

ಹರಿಯಾಣ ಕಾಂಗ್ರೆಸ್‌ನಲ್ಲಿ ಭೂಪಿಂದರ್ ಹೂಡಾ, ಶೆಲ್ಜಾ ಕುಮಾರಿ ಮತ್ತು ರಣದೀಪ್‌ಸಿಂಗ್ ಸುರ್ಜೇವಾಲಾ ಹೀಗೆ ೩
ಬಣಗಳ ಪ್ರಾಬಲ್ಯವಿದೆ, ಒಬ್ಬರ ಮುಖವನ್ನು ಮತ್ತೊಬ್ಬರು ನೋಡದಷ್ಟು ಆತ್ಮೀಯತೆಯಿದೆ! ಹೀಗಾಗಿ ಚುನಾವಣಾ
ಸಮಯದಲ್ಲಿ ಈ ಬಣಗಳ ನಡುವೆ ಸಾಮರಸ್ಯ ಮೂಡಿಸಲು ಸಾಧ್ಯವಾಗಲಿಲ್ಲ. ‘ಕಿಸಾನ್-ಜವಾನ್-ಪೈಲ್ವಾನ್’ ಅಜೆಂಡಾ ಯಶಸ್ವಿಯಾಗುತ್ತದೆ ಎಂದು ಕಾಂಗ್ರೆಸ್ ನಂಬಿತ್ತು. ಆದರೆ ಈ ಮೂರೂ ಸಂಗತಿಗಳು ಅದರ ಕೈಹಿಡಿಯ ಲಿಲ್ಲ. ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಬಾರ್ಡರ್‌ನಲ್ಲಿ ಹೆದ್ದಾರಿ ಅಡ್ಡಗಟ್ಟಿ ಧರಣಿ ಕುಳಿತ ರೈತ ಚಳವಳಿ ತಮಗೆ ಲಾಭ ತರುತ್ತದೆ ಎಂಬುದು ಕಾಂಗ್ರೆಸ್ಸಿಗರ ನಿರೀಕ್ಷೆಯಾಗಿತ್ತು. ಅಗ್ನಿವೀರ್ ಯೋಜನೆಯನ್ನು ಚುನಾವಣೆಯ ಚರ್ಚಾವಿಷಯವಾಗಿಸಿ ಯುವಮತದಾರರನ್ನು ಸೆಳೆಯುವ ಅವರ ಯತ್ನವೂ ವಿಫಲವಾಯಿತು. ಇನ್ನು, ಕುಸ್ತಿಪಟುಗಳ ಮೇಲಿನ ದೌರ್ಜನ್ಯದ ಘಟನೆ ಬಿಜೆಪಿಗೆ ಮುಳುವಾಗಬಹುದು ಎಂಬ ಗ್ರಹಿಕೆಯಲ್ಲಿ ವಿನೇಶ್ ಪೋಗಟ್‌ರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೂ, ಆಕೆ ಪ್ರಯಾಸಪಟ್ಟು ಅಲ್ಪ ಅಂತರದಿಂದ ಆಯ್ಕೆಯಾಗುವಂತಾ ಯಿತು.

ಕಾಂಗ್ರೆಸ್‌ನಲ್ಲಿನ ಆಂತರಿಕ ಗೊಂದಲಗಳ ಕುರಿತು ಈಗಾಗಲೇ ಪುಟಗಟ್ಟಲೆ ಲೇಖನಗಳು ಪ್ರಕಟವಾಗಿದ್ದು, ತಂತ್ರ ಗಾರಿಕೆಯಲ್ಲಿ ಆಗಿರುವ ಲೋಪಗಳನ್ನು ಇವು ಎತ್ತಿತೋರಿಸಿವೆ. ಆದರೆ ಕಾಂಗ್ರೆಸ್ಸಿಗರು ಅವುಗಳ ಬಗ್ಗೆ ಗಂಭೀರವಾಗಿ ಗಮನ ಹರಿಸುವುದನ್ನು ನಿರ್ಲಕ್ಷಿಸಿ, ತಮ್ಮ ಸೋಲಿಗೆ ಚುನಾವಣಾ ಆಯೋಗ, ಇವಿಎಂ ಕಾರಣ ಎಂದಿದ್ದಾರೆ. ಪ್ರಚಾರದ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿಯವರ ವೈಫಲ್ಯವನ್ನು ಪ್ರಶ್ನಿಸುವ ಧೈರ್ಯವಿಲ್ಲದ ಕಾಂಗ್ರೆಸ್ಸಿಗರು, ಸಂಬಂಧವಿಲ್ಲದ ಕಾರಣ ದೊಂದಿಗೆ ತಮ್ಮ ಸೋಲನ್ನು ತಳುಕುಹಾಕುವ ಮೂಲಕ ವಿಷಯಾಂತರ ಮಾಡುತ್ತಿದ್ದಾರೆ.

ತನ್ನ ಹಿತಾಸಕ್ತಿಗೆ ಧಕ್ಕೆಯಾದಾಗ ಸಂವಿಧಾನದ ಬಗ್ಗೆ ಪಾಠ ಹೇಳುವ ಕಾಂಗ್ರೆಸ್, ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆಗೆ ಮಸಿ ಬಳಿಯಲು ಕಿಂಚಿತ್ತೂ ಹಿಂಜರಿಯುತ್ತಿಲ್ಲ. ತಾವು ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು, ಚುನಾವಣೆಯಲ್ಲಿ ಸೋತ ಮೇಲೆ “ನಾವು ಜನತೆಯ ತೀರ್ಪನ್ನು ಒಪ್ಪುವುದಿಲ್ಲ” ಎನ್ನುತ್ತಿದ್ದಾರೆ, ದೇಶದ ಸಂವಿಧಾನ, ಪ್ರಜಾಪ್ರಭುತ್ವವನ್ನು ತಾವೊಬ್ಬರೇ ಗುತ್ತಿಗೆ ಪಡೆದಿರುವ ಹಾಗೆ ವರ್ತಿಸುತ್ತಿದ್ದಾರೆ. ಹರಿಯಾಣದಲ್ಲಿ ತಾನೇ ಗೆಲ್ಲುವುದು ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್, ತನ್ನ ಕಾಲಬುಡದಲ್ಲಿ ಕುಸಿಯುತ್ತಿದ್ದ ನೆಲದ ಬಗ್ಗೆಯೇ ಗಮನ ಕೊಡಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಸದ್ದಿಲ್ಲದೆ ಹೂಡಿದ ರಣತಂತ್ರ ಕಾಂಗ್ರೆಸ್‌ನ ಕನಸನ್ನು ಭಗ್ನಗೊಳಿಸಿತು.

2014ರಲ್ಲಿ ಬಿಜೆಪಿ ಹರಿಯಾಣದಲ್ಲಿ ಅಧಿಕಾರಕ್ಕೆ ಬಂದಾಗ 47 ಸ್ಥಾನಗಳನ್ನು ಗೆದ್ದಿತ್ತು. 2019 ರಲ್ಲಿ 40 ಸ್ಥಾನಗಳು ದಕ್ಕಿದಾಗ, ಸರಕಾರದ ರಚನೆಗೆ ಅದು ಜನನಾಯಕ್ ಜನತಾ ಪಕ್ಷದ ನೆರವನ್ನು ಕೇಳಬೇಕಾಯಿತು. ಈ ಬಾರಿ ಬಿಜೆಪಿ 2014ರ ಜನಾದೇಶಕ್ಕಿಂತ ಒಂದು ಸ್ಥಾನ ಹೆಚ್ಚು ಗೆದ್ದು ಅಧಿಕಾರಕ್ಕೆ ಬಂದಿದೆಯೆಂದರೆ, ಸರಕಾರದ ಕಾರ್ಯವೈಖರಿಗೆ ಜನಮನ್ನಣೆ ದೊರೆತಿದೆ ಎಂದೇ ಅರ್ಥ.

ಕೆಲವೊಂದು ರಾಜಕೀಯ ವಿಶ್ಲೇಷಕರಿಗೆ, ಪತ್ರಕರ್ತರಿಗೆ ಮತ್ತು ಪಕ್ಷಗಳ ವಕ್ತಾರರಿಗೆ ಹರಿಯಾಣ ಫಲಿತಾಂಶವು ಒಳ್ಳೆಯ ಪಾಠವನ್ನೇ ಕಲಿಸಿದೆ. ಚರ್ಚೆಯ ಸಂದರ್ಭದಲ್ಲಿ ಆತುರದಿಂದ ವಿಶ್ಲೇಷಣೆ ಮಾಡಿ ನಂತರ ‘ನನ್ನ ಮುಖಕ್ಕೆ ಮೊಟ್ಟೆ ಹೊಡೆಯಲಾಗಿದೆ’ ಎಂದು ಗೋಳಾಡುವ, ತಮ್ಮ ಮಾತನ್ನು ತಾವೇ ನುಂಗಬೇಕಾಗುವ ಪರಿಸ್ಥಿತಿಯನ್ನು ಅನೇಕರು ಎದುರಿಸುತ್ತಿದ್ದಾರೆ. ಗೆಲ್ಲುವ ಹಮ್ಮಿನಲ್ಲಿದ್ದ ಕಾಂಗ್ರೆಸ್, ಹರಿಯಾಣದಲ್ಲಿನ ಸೋಲಿನಿಂದ ತತ್ತರಿಸಿ ಹೋಗಿದೆ. ಜಮ್ಮು- ಕಾಶ್ಮೀರದಲ್ಲಿನ ಕಳಪೆ ಪ್ರದರ್ಶನದಿಂದಾಗಿ ಕಾಂಗ್ರೆಸ್‌ನ ವರ್ಚಸ್ಸು ಮಸುಕಾಗಿಹೋಗಿದೆ. ಹಿಂದೂಗಳ ಪ್ರಾಬಲ್ಯವಿರುವ ಜಮ್ಮು ಭಾಗದಲ್ಲಿ ಅದು ಗೆದ್ದಿರುವುದು ಒಂದು ಸೀಟನ್ನು ಮಾತ್ರ; ಉಳಿದಂತೆ ಆರು ಕಡೆ ಗೆದ್ದಿರುವ ಅದರ ಅಭ್ಯರ್ಥಿಗಳು ಒಂದೇ ಸಮುದಾಯಕ್ಕೆ ಸೇರಿದವರು. ಆದರೆ ಈ ಹಿನ್ನಡೆಯ ಬಗ್ಗೆ ಪಕ್ಷವು ಚಕಾರವೆತ್ತಿಲ್ಲ.

ರಾಹುಲ್ ಗಾಂಧಿಯವರ ‘ಭಾರತ್ ಜೋಡೋ’ ಯಾತ್ರೆಯಿಂದ ಜಮ್ಮು-ಕಾಶ್ಮೀರದಲ್ಲಿ ತನಗೆ ಬಹುದೊಡ್ಡ ಲಾಭವಾಗುತ್ತದೆ ಎಂದುಕೊಂಡಿದ್ದ ಕಾಂಗ್ರೆಸ್‌ನ ನಿರೀಕ್ಷೆ ಸುಳ್ಳಾಗಿದೆ. ರಾಹುಲ್ ಗಾಂಧಿಯವರ ಜಾತಿ ಕೇಂದ್ರಿತ ವಿಭಜನೆಯ ಅಜೆಂಡಾ ಬಗ್ಗೆ ಕಾಂಗ್ರೆಸ್‌ನಲ್ಲೇ ಅಪಸ್ವರಗಳು ಏಳುತ್ತಿವೆ. ಹೊಸತನ ಕಾಣದ ‘ಅದಾನಿ ಅದಾನಿ’ ರಾಗವನ್ನು ‘ರಾಗಾ’ರವರು ತೊರೆದು, ತಮ್ಮ ತಂತ್ರಗಾರಿಕೆ ಯನ್ನು ಮರುವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

(ಲೇಖಕರು ಬಿಜೆಪಿ ವಕ್ತಾರರು)

ಇದನ್ನೂ ಓದಿ: Prakash Shesharaghavachar Column: ಏಕಕಾಲಿಕ ಚುನಾವಣೆಯ ಸಾಧಕ- ಬಾಧಕಗಳು