Saturday, 14th December 2024

ಸಾರಥಿ ಆಗ್ತಾರಾ ಪ್ರಲ್ಹಾದ್ ಜೋಶಿ ?

ಮೂರ್ತಿ ಪೂಜೆ

ಕಳೆದ ವಾರ ದಿಲ್ಲಿಯಿಂದ ಬಂದ ಒಂದು ವರ್ತಮಾನ ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ವಿಸ್ಮಯ ಮೂಡಿಸಿತು. ಹಾಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಪಕ್ಷದ ಮುಂದಿನ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ ಎಂಬುದು ಈ ವರ್ತಮಾನ. ಈ ನಾಯಕರಿಗೆ ದಿಲ್ಲಿ ಮೂಲಗಳು ಹೇಳಿದ ಪ್ರಕಾರ, ಮುಂಬರುವ ಲೋಕಸಭಾ
ಚುನಾವಣೆಯ ನಂತರ ಹಾಲಿ ಅಧ್ಯಕ್ಷ ನಡ್ಡಾರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.

ಅವರು ತೆರವು ಮಾಡುವ ಜಾಗಕ್ಕೆ ಕರ್ನಾಟಕದ ಪ್ರಲ್ಹಾದ್ ಜೋಷಿ ಅವರನ್ನು ಕೂರಿಸುವುದು ಮೋದಿಯವರ ಯೋಚನೆ. ಅಂದ ಹಾಗೆ, ನಡ್ಡಾ ಈ ಹಿಂದೆ ಮೋದಿ
ಸಂಪುಟದಲ್ಲಿ ಸಚಿವರಾಗಿದ್ದವರು. ಸಂಕೀರ್ಣ ಕಾಲಘಟ್ಟದಲ್ಲಿ ತಮಗೆ ನಿಷ್ಠರಾದವರೊಬ್ಬರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬರಲಿ ಅಂತ ಮೋದಿ-ಅಮಿತ್ ಶಾ ಜೋಡಿ ಬಯಸಿದ ಫಲವಾಗಿ ಪಕ್ಷದ ಚುಕ್ಕಾಣಿ ಹಿಡಿದರು. ಆದರೆ ಮುಂಬರುವ ಲೋಕಸಭಾ ಚುನಾವಣೆಯ ನಂತರ ನಡ್ಡಾರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳುವುದು ಮೋದಿಯವರ ಬಯಕೆ.

ಈ ಚುನಾವಣೆಯಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಕನಿಷ್ಠ ೩೩೦ ಸ್ಥಾನಗಳನ್ನು ಗೆಲ್ಲಲಿದೆ ಎಂಬುದು ಮೋದಿಯವರ ವಿಶ್ವಾಸ. ಈ ಕಾರಣಕ್ಕಾಗಿಯೇ ಮುಂದಿನ ದಿನಗಳಲ್ಲಿ ಕ್ಷ ಮತ್ತು ಸರಕಾರ ಹೇಗಿರಬೇಕು ಎಂಬ ಬಗ್ಗೆ ನೀಲಿನಕ್ಷೆ ರೂಪಿಸಿರುವ ಅವರು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪ್ರಲ್ಹಾದ್ ಜೋಷಿ ಅವರನ್ನು ಕೂರಿಸಲು ಬಯಸಿದ್ದಾರೆ. ಮೋದಿಯವರ ಈ ಲೆಕ್ಕಾಚಾರಕ್ಕೆ ಹಲವು ಒಳಮುಖಗಳಿವೆ. ತಮಗೆ ಮತ್ತು ಸಂಘಪರಿವಾರಕ್ಕೆ ಜೋಷಿ ನಿಷ್ಠರು ಎಂಬುದು ಮೊದಲ ಮುಖ.

ಇನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಜೋಷಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂಬುದು ಎರಡನೇ ಮುಖ. ಮತ್ತೊಂದು ಮುಖವೆಂದರೆ, ಕರ್ನಾಟಕದ ರಾಜಕೀಯ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ತೊರೆದ ಹಲವು ನಾಯಕರು, ‘ಬಿಜೆಪಿ ಲಿಂಗಾಯತ
ವಿರೋಧಿ’ ಅಂತ ಬ್ರ್ಯಾಂಡ್ ಮಾಡಿ ಅಡ್ಡೇಟು ಹಾಕಿದ್ದರು. ಈ ಅಡ್ಡೇಟಿನ ಪರಿಣಾಮವನ್ನು ನಿವಾರಿಸಬೇಕು ಎಂದರೆ ಪ್ರಬಲ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು. ಸದ್ಯಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆ ಸಮುದಾಯದ ವಿಜಯೇಂದ್ರರನ್ನು ಕೂರಿಸಿರುವುದರಿಂದ ಲಿಂಗಾಯತ ವೋಟ್‌ಬ್ಯಾಂಕು ಮೆಲ್ಲಗೆ ಬಿಜೆಪಿಯ ಕಡೆ ಹೊರಳಿ ನೋಡುತ್ತಿರುವುದೇನೋ ನಿಜ.

ಆದರೆ ಇದೇ ಕಾಲಕ್ಕೆ ಅದರ ವಿಶ್ವಾಸವನ್ನು ಗಟ್ಟಿಗೊಳಿಸಲು ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂಬುದು ಮೋದಿಯವರ ಯೋಚನೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೋಷಿಯವರು ಪ್ರತಿನಿಽಸುತ್ತಿರುವ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ಟನ್ನು ಲಿಂಗಾಯತ ಸಮುದಾಯದವರಿಗೆ ಕೊಡಬೇಕು ಎಂಬ ಲೆಕ್ಕಾಚಾರ ಅವರಲ್ಲಿದೆ. ಕಾರಣ? ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಪವರ್ ಜಾಸ್ತಿ. ಹೀಗಾಗಿ ಅದೇ ಸಮುದಾಯದವರಿಗೆ ಟಿಕೆಟ್ ನೀಡಿದರೆ ಸಹಜವಾಗಿಯೇ ಅವರಿಗೆ ಬಿಜೆಪಿಯ ಮೇಲೆ ವಿಶ್ವಾಸ ಹೆಚ್ಚುತ್ತದೆ.

ಇದು ಕರ್ನಾಟಕದಲ್ಲಿ ಪಕ್ಷದ ಇಮೇಜ್ ರೀಬಿಲ್ಡ್ ಆಗಲು ನೆರವಾಗುತ್ತದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಕಮಲ ಪಾಳಯ ನೆಲೆಯಾಗಲು ಸಾಧ್ಯವಾಗುತ್ತದೆ. ಲೋಕಸಭಾ ಚುನಾವಣೆಯ ನಂತರ ದೇಶದ ಯಾವುದಾದರೂ ರಾಜ್ಯ ದಿಂದ ಪ್ರಲ್ಹಾದ್ ಜೋಷಿ ರಾಜ್ಯಸಭೆಗೆ ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಬೇಕು ಎಂಬುದು ಮೋದಿಯವರ ಯೋಚನೆ. ಅಂದ ಹಾಗೆ ಜೋಷಿ ಅವರ ವಿಷಯದಲ್ಲಿ ಮೋದಿಯವರಿಗೆ ವಿಶ್ವಾಸ ಬೆಳೆಯಲು ಸಂಘಪರಿವಾರ ಪ್ರಮುಖ ಕಾರಣವೆಂಬುದು ರಹಸ್ಯವಲ್ಲ. ಹೀಗಾಗಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಕಾಲದಲ್ಲೇ ಜೋಷಿಯವರ ಹೆಸರು ಲೈಮ್‌ಲೈಟಿಗೆ ಬಂದು ಇನ್ನೇನು ಅವರೇ ಸಿಎಂ ಆಗುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಯಾವಾಗ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು, ‘ಪೇಶ್ವೆ ಮೂಲದ ಬ್ರಾಹ್ಮಣರಾದ ಪ್ರಲ್ಹಾದ್ ಜೋಷಿಯವರನ್ನು ತಂದು ಕೂರಿಸಲು ಅರೆಸ್ಸೆಸ್ ಹುನ್ನಾರ ನಡೆಸಿದೆ’ ಅಂತ ಬಾಂಬು ಹಾಕಿದರೋ, ಜೋಷಿ ಅವರನ್ನು ತಂದು ಕೂರಿಸುವ ಮಾತು ಇದ್ದಕ್ಕಿದ್ದಂತೆ ಸೈಡ್‌ಲೈನಿಗೆ ಸರಿಯಿತು.

ಇದೇ ರೀತಿ ೨೦೨೩ರ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲ್‌ರನ್ನು ಕೆಳಗಿಳಿಸಿ ಜೋಷಿ ಅವರನ್ನು ಕೂರಿಸುವ ಯತ್ನ ನಡೆಯಿತು. ಆದರೆ ದಿಲ್ಲಿಯಲ್ಲಿ ತಮ್ಮ ಪರಮಾಪ್ತರಾಗಿ ಸೆಟ್ಲ್ ಆಗಿದ್ದ ಜೋಷಿಯವರನ್ನು ರಾಜ್ಯ ರಾಜಕಾರಣಕ್ಕೆ ಕಳಿಸಲು ಇದ್ದಕ್ಕಿದ್ದಂತೆ ಮೋದಿ ಹಿಂದೇಟು ಹಾಕಿದರು. ಆದರೆ ಪಕ್ಷದ ಹಾಲಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಮುಂಬರುವ ಲೋಕಸಭಾ ಚುನಾವಣೆಯ ನಂತರ ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲು ಅವರು ಬಯಸಿರುವುದರಿಂದ, ಅವರ ಜಾಗಕ್ಕೆ ಜೋಷಿ ಬರಲಿ ಅಂತ ಬಯಸಿದ್ದಾರೆ ಎಂಬುದು ರಾಜ್ಯದ ಕೆಲ ನಾಯಕರಿಗೆ ಈಗ ತಲುಪಿರುವ ವರ್ತಮಾನ.

ಅಂದ ಹಾಗೆ, ಮೋದಿಯವರ ಈ ಲೆಕ್ಕಾಚಾರ ಕಾರ್ಯಗತವಾದರೆ ಕರ್ನಾಟಕ ಒಂದು ಚರಿತ್ರಾರ್ಹ ಬೆಳವಣಿಗೆಗೆ ಸಾಕ್ಷಿಯಾಗುತ್ತದೆ. ಕಾರಣ? ಇವತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿರುವ ರಾಷ್ಟ್ರೀಯ ಕಾಂಗೆಸ್ ಪಕ್ಷಕ್ಕೆ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾರೆ. ಮುಂದೆ ಜೋಷಿ ಅವರೇನಾದರೂ
ಬಿಜೆಪಿಯ ರಾಷ್ಟೀಯ ಅಧ್ಯಕ್ಷರಾದರೆ ಕರ್ನಾಟಕದ ಖದರೇ ಬದಲಾಗಿ ಹೋಗುತ್ತದೆ. ಹಾಗಾಗುತ್ತದಾ? ಕಾದುನೋಡಬೇಕು.

ಕುಮಾರಣ್ಣ ಏಕೆ ರಥ ಹತ್ತುತ್ತಿಲ್ಲ?

ಈ ಮಧ್ಯೆ, ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಾದ ಡಿ.ಸಿ.ತಮ್ಮಣ್ಣ, ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಸೇರಿದಂತೆ ಹಲವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ದೇವೇಗೌಡರ ಕುಟುಂಬದವರೇ ಪಕ್ಷದ ಕ್ಯಾಂಡಿಡೇಟ್ ಆಗಬೇಕು ಅಂತ ಠರಾವು ಪಾಸ್ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೇವೇಗೌಡರ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ ಅವರು ಸೋಲು ಅನುಭವಿಸಿದರು. ಈ ಕಹಿ ಮರೆಯಾಗಬೇಕು ಎಂದರೆ ಅದೇ ಕುಟುಂಬದವರು ಮತ್ತೊಮ್ಮೆ ಮಂಡ್ಯ ಕ್ಷೇತ್ರದಿಂದ ಸ್ಪಽಸಬೇಕು, ಅವರನ್ನು ಗೆಲ್ಲಿಸಿ ನಾವು ಕಹಿ ಮರೆಯಬೇಕು ಎಂಬುದು ಈ ನಾಯಕರ ವಾದ. ಅರ್ಥಾತ್, ಈ ಸಲ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿ ಆಗಬೇಕು ಎಂಬುದು ಈ ನಾಯಕರ ಬಯಕೆ. ಹೀಗೆ ಅವರು ಕುಮಾರಸ್ವಾಮಿ ಅವರಿಗೆ ಗಾಳ ಹಾಕಲು ಯತ್ನಿಸುತ್ತಿರುವ ಕಾಲದಲ್ಲೇ ಬಿಜೆಪಿ ನಾಯಕ ಸಿ.ಪಿ.ಯೋಗೀಶ್ವರ್ ಕೂಡಾ, ‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧಿಸಿದರೆ ಗೆಲ್ಲಿಸಿ ಕಳಿಸುತ್ತೇವೆ’ ಎನ್ನತೊಡಗಿದ್ದಾರೆ.

ಈ ಮಧ್ಯೆ ಖುದ್ದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು, ‘ಕರ್ನಾಟಕದಿಂದ ಲೋಕಸಭೆಗೆ ಗೆದ್ದು ಬಂದು ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಿ’ ಎಂಬ ಪ್ರಪೋಸಲ್ಲು ಕೊಟ್ಟು ಹಲವು ದಿನಗಳೇ ಆಗಿಹೋಗಿವೆ. ಹೀಗೆ ಎಲ್ಲ ಸೇರಿ ಗಾಳ ಹಾಕುತ್ತಿದ್ದರೂ ಕುಮಾರಸ್ವಾಮಿ ಮಾತ್ರ ಆ ಗಾಳಕ್ಕೆ ಬಾಯಿ ಕೊಡಲು ಸಿದ್ಧರಾಗುತ್ತಿಲ್ಲ. ಕಾರಣ? ಒಂದು ಸಲ ರಾಷ್ಟ್ರ ರಾಜಕಾರಣದ ಪಡಸಾಲೆ ತಲುಪಿದರೆ ಇಲ್ಲಿ ತಮ್ಮ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯ ಮೇಲಿನ
ಹಿಡಿತ ತಪ್ಪಿಹೋಗುತ್ತದೆ. ಮೊದಲೇ ‘ಡಿಕೆ ಬ್ರದರ್ಸ್’ ರಾಮನಗರ ಜಿಲ್ಲೆಯ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಕಾದು ಕುಳಿತಿದ್ದಾರೆ. ಇಂಥ ಸಂದರ್ಭದಲ್ಲಿ
ದಿಲ್ಲಿಗೆ ಹೋಗುವುದು ಎಂದರೆ ತಾವೇ ಖುದ್ದಾಗಿ ಜಿಲ್ಲೆಯನ್ನು ಅವರ ವಶಕ್ಕೆ ಕೊಡುವುದು ಎಂದರ್ಥ.

ಇದೇ ರೀತಿ ತಾವು ಲೋಕಸಭೆಗೆ ಹೋದರೆ ಸದ್ಯ ತಾವು ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಯೋಗೀಶ್ವರ್ ನಿರಾಯಾಸವಾಗಿ ಗೆದ್ದುಕೊಳ್ಳುತ್ತಾರೆ. ಹೀಗೆ ಒಂದು ಕಡೆಯಿಂದ ಡಿಕೆ ಬ್ರದರ್ಸ್ ಮತ್ತೊಂದು ಕಡೆಯಿಂದ ಯೋಗೀಶ್ವರ್ ಜಿಲ್ಲೆಯನ್ನು ಹತೋಟಿಗೆ ತೆಗೆದುಕೊಂಡರೆ ಅದರ ಮೇಲಿನ ತಮ್ಮ ಹಿಡಿತ ಕೈತಪ್ಪಿ ಹೋಗುತ್ತದೆ ಎಂಬುದು ಕುಮಾರಸ್ವಾಮಿ ಅವರ ಚಿಂತೆ. ಈ ಮಧ್ಯೆ, ಲೋಕಸಭೆ ಚುನಾವಣೆಗೆ ನಿಲ್ಲಲು ಅವರಿಗೆ ಮತ್ತೊಂದು ಸಮಸ್ಯೆಯೂ ಇದೆ. ಅದೆಂದರೆ, ಬಿಜೆಪಿ ಜತೆಗಿನ ಮೈತ್ರಿ. ಒಂದು ವೇಳೆ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ತಮ್ಮ ಕುಟುಂಬದಿಂದ ಎಷ್ಟು ಮಂದಿ ಸ್ಪಽಸ
ಬೇಕು ಎಂಬ ವಿಷಯದಲ್ಲಿ ಅವರು ತಲೆಕೆಡಿಸಿಕೊಳ್ಳುವ ಅಗತ್ಯ ಇರಲಿಲ್ಲ. ಆದರೆ ಈ ಸಲ ಹಾಗಲ್ಲ, ತಮ್ಮ ಕುಟುಂಬ ದಿಂದ ಇಬ್ಬಿಬ್ಬರು ಸ್ಪಽಸುವುದು ಸರಿಯಲ್ಲ ಎಂಬುದು ಕುಮಾರಸ್ವಾಮಿ ಅವರ ಯೋಚನೆ.

ಹಾಸನ ಕ್ಷೇತ್ರದಿಂದ ರೇವಣ್ಣ ಅವರ ಪುತ್ರ ಪ್ರಜ್ವಲ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿರುವುದರಿಂದ ತಾವೂ ಸ್ಪರ್ಧಿಸುವುದು ಸರಿಯಲ್ಲ ಎಂಬುದು ಅವರ ಯೋಚನೆ. ಹೀಗಾಗಿ ಲೋಕಸಭೆಗೆ ಸ್ಪರ್ಧಿಸುವಂತೆ ಯಾವ ಮೂಲೆಯಿಂದ ಆಫರ್ ಬಂದರೂ ರಥ ಹತ್ತಲು ಅವರು ಇಷ್ಟಪಡುತ್ತಿಲ್ಲ.

ಬಿಜೆಪಿಗೆ ಮಾಸ್ಟರ್ಸ್ ಸ್ಟ್ರೋಕ್?
ಇನ್ನು ಪ್ರಧಾನಿ ಮೋದಿ ಅಲೆಯ ಬಲದಿಂದ ಕರ್ನಾಟಕದಲ್ಲಿ ಬಂಪರ್ ಗೆಲುವು ಸಾಽಸುವ ಕನಸು ಕಾಣುತ್ತಿರುವ ವಿಜಯೇಂದ್ರ ಪಡೆಗೆ ಮಾಸ್ಟರ್ಸ್ ಸ್ಟ್ರೋಕ್ ಆಗುವ ಲಕ್ಷಣ ಗಳು ಕಾಣುತ್ತಿವೆ. ಅರ್ಥಾತ್, ಲೋಕಸಭೆ ಚುನಾವಣೆಗೆ ಅಂತ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಕಟ್ಟಲು ಹೊರಟಿರುವ ಪಡೆ ಪಕ್ಷದ ಬಹುತೇಕ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಅದು ಪದಾಧಿಕಾರಿಗಳಿರಲಿ, ಇನ್ನೇನೇ ಪೋಸ್ಟುಗಳಿರಲಿ, ೬೦ ವರ್ಷ ಮೀರಿದವರಿಗೆ ಪಟ್ಟಿಯಲ್ಲಿ ಜಾಗವಿಲ್ಲ ಅಂತ ವಿಜಯೇಂದ್ರ ಔಟ್‌ರೈಟಾಗಿ ಹೇಳಿರುವುದು ಹಿರಿಯರ ಈ ಸಿಟ್ಟಿಗೆ ಕಾರಣ. ಅದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಇರಬಹುದು, ತುರುವಕೆರೆಯ ಎಂ.ಡಿ.ಲಕ್ಷ್ಮೀನಾರಾಯಣ್ ಇರಬಹುದು, ವಿರಾಜಪೇಟೆಯ ಮಾಜಿ ಶಾಸಕ ಎಚ್.ಡಿ.ಬಸವರಾಜು ಇರಬಹುದು, ಒಟ್ಟಿನಲ್ಲಿ ಹಿರಿಯರು ಅಂತ ಯಾರಿದ್ದಾರೆ ಅವರು ತಮ್ಮನ್ನು ಇಂಡಿಪೆಂಡೆಂಟಾಗಿ ಭೇಟಿಮಾಡಿ ಪಟ್ಟಿಯಲ್ಲಿ ಜಾಗ ಕೊಡಿ ಅಂತ ಕೇಳಿದರೆ, ‘ರೀ ೬೦ ವರ್ಷ ಮೀರಿದವರಿಗೆ ಪಕ್ಷದಲ್ಲಿ ಯಾವ ಸ್ಥಾನ ಕೊಡಬೇಡಿ ಅಂತ ಹೈಕಮಾಂಡ್ ಹೇಳಿದೆ.

ನಿಮಗೂ ಈಗ ೬೦ ದಾಟಿದೆ. ಹೀಗಾಗಿ ನಿಮಗೆ ಚಾನ್ಸು ಕೊಡುವುದು ಇಂಪಾಸಿಬಲ್’ ಅಂತ ವಿಜಯೇಂದ್ರ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಇದಾದ ನಂತರ ರಾಜ್ಯ ಬಿಜೆಪಿಯ ಬಹುತೇಕ ಹಿರಿಯ ನಾಯಕರು ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಕಡೆ ತಲೆಹಾಕುತ್ತಿಲ್ಲ. ಹೀಗೆ ಜಾಗ ಕೇಳಿ ನಿರಾಶರಾಗಿರುವ ಸುಬ್ರಹ್ಮಣ್ಯ ನಾಯ್ಡು ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ರೀ-ಬರ್ತ್‌ಗೆ ಕಾರಣವಾಗಿದ್ದ ಸಮಾವೇಶವೊಂದರ ಮೂಲಶಕ್ತಿಯಾಗಿದ್ದವರು. ೨೦೦೪ರಲ್ಲಿ ತಮಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನ ಸಿಗಲು ಅನಂತಕುಮಾರ್ ಅಡ್ಡಿಯಾದಾಗ ಇದೇ ಯಡಿಯೂರಪ್ಪನವರು ತಮ್ಮ ಹುಟ್ಟುಹಬ್ಬದ ನೆಪದಲ್ಲಿ
ಬೆಂಗಳೂರಿನ ಜಕ್ಕರಾಯನಕೆರೆ ಮೈದಾನದಲ್ಲಿ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಿದ್ದರು. ಈ ಸಮಾವೇಶಕ್ಕೆ ಲಿಂಗಾಯತ ಮಠಾಧಿಪತಿಗಳನ್ನು ಕರೆಸಿ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ರವಾನೆಯಾಗುವಂತೆ ನೋಡಿಕೊಂಡ ಯಡಿಯೂರಪ್ಪನವರು ಆ ಮೂಲಕ ಲಿಂಗಾಯತ ನಾಯಕರಾಗಿ ಎಮರ್ಜ್ ಆಗಿದ್ದರು.

ಆ ಸಮಾವೇಶದ ಹಿಂದೆ ಶಕ್ತಿಯಾಗಿ ನಿಂತಿದ್ದ ತಮಗೆ ಇವತ್ತು ಪಕ್ಷದ ಪದಾಧಿಕಾರಿಯಾಗಲು ಸಾಧ್ಯವಾಗುತ್ತಿಲ್ಲ ಎಂಬುದು ಕಟ್ಟಾ ನೋವು. ಇದೇ ರೀತಿ ರಾಜ್ಯದ ನೇಕಾರ ಸಮುದಾಯದ ಲೀಡರು ಅಂತ ಗುರುತಿಸಿಕೊಂಡ ಲಕ್ಷ್ಮೀನಾರಾಯಣ್ ಅವರಿಗೂ ಈಗ ‘ಸಿಕ್ಸ್‌ಟಿ’ ಹೊಡೆತ ಬಿದ್ದಿದೆ. ಹೀಗೆ ಹೇಳುತ್ತಾ ಹೋದರೆ ಪಕ್ಷದ
ಬಹುತೇಕ ಹಿರಿಯರದು ಇದೇ ಕತೆ.