ತಿಳಿರುತೋರಣ
srivathsajoshi@yahoo.com
ಬಾಲ್ಯದ ಐದು ವರ್ಷ ಸಿಕ್ಕಾಪಟ್ಟೆ ನಿಂದನೆ, ಭರ್ತ್ಸನೆ ಅನುಭವಿಸಿದವರು ಚಿತ್ರಕಲಾವಿದ ಪ್ರಶಾಂತ ಶೆಟ್ಟಿ. ಅಂಥ ವಾತಾವರಣದಲ್ಲಿ ನೋವು, ದುಃಖ ಮರೆಯಲಿಕ್ಕೆ ಅವರು ಕಂಡುಕೊಂಡ ಉಪಾಯವೆಂದರೆ ಚಿತ್ರ ಬಿಡಿಸುವುದು. ಕುಂಚದೊಂದಿಗೆ ಆಟವಾಡುವಾಗ ಅವರಲ್ಲಿ ಒಂಥರಾ ಸುರಕ್ಷತೆಯ ಭಾವ ಮತ್ತು ನೆಮ್ಮದಿ ತುಂಬಿಕೊಳ್ಳುತ್ತಿದ್ದವಂತೆ. ಆದರೆ ತಾವು ಬರೆಯುತ್ತಿದ್ದ ಚಿತ್ರಗಳು ಅಪ್ಪನ ಕಣ್ಣಿಗೆ ಬೀಳಬಾರದೆಂದು, ಮಂಚದ ಕೆಳಗೆ ತೂರಿಕೊಂಡು ಅಲ್ಲಿ ಗೋಡೆ ಮೇಲೆಲ್ಲ ಗೀಚುತ್ತಿದ್ದರಂತೆ.
ಅನು ಪಾವಂಜೆ ಮತ್ತು ಚಿತ್ರಮಿತ್ರ- ಮುಂಬೈಯಲ್ಲಿ ನೆಲೆಸಿರುವ ಈ ಪ್ರತಿಭಾನ್ವಿತ ದಂಪತಿಯನ್ನು, ಅವರಿಬ್ಬರ ಅತ್ಯಮೋಘ ಚಿತ್ರಕಲೆಯನ್ನು, ಸಾಭಿನಯವಾಗಿ ಅವರು ಪ್ರಸ್ತುತಪಡಿಸುವ ಕನ್ನಡ ಗಾದೆಗಳನ್ನು, ಇಬ್ಬರಲ್ಲೂ ಇರುವ ಕೃಷ್ಣ-ಹನುಮರ ಮೇಲಣ ಉತ್ಕಟ ಭಕ್ತಿಯನ್ನು, ಮೋದಿ ಬಗೆಗಿನ ಅಭಿಮಾನವನ್ನು, ಅಪ್ಪಟ ರಾಷ್ಟ್ರಪ್ರೇಮವನ್ನು ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಲ ಅಂತಃಕರಣವನ್ನು… ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನ ಬಲ್ಲರು. ಇಬ್ಬರಿಗೂ ದೊಡ್ಡ ಫ್ಯಾನ್-ಫಾಲೋವಿಂಗ್ ಇದೆ. ಜಗದಗಲ ಅಭಿಮಾನಿಗಳಿದ್ದಾರೆ.
ಅನು ಪಾವಂಜೆ ಬಿಡಿಸುವ ಸಾಂಪ್ರದಾಯಿಕ ವರ್ಣಚಿತ್ರಗಳು, ಚಿತ್ರಮಿತ್ರ ರಚಿಸುವ ಕ್ಯಾರಿಕೇಚರ್‌ಗಳು ಅವರ ಫೇಸ್‌ಬುಕ್ ಗೋಡೆಯಲ್ಲಷ್ಟೇ ಅಲ್ಲ, ಸಾವಿರಾರು ಜನರ ಮನಮಂದಿರಗಳಲ್ಲಿ ರಾರಾಜಿಸುತ್ತಿವೆ. ಮೋದಿಯವರ ಅಮ್ಮನ ಕ್ಯಾರಿಕೇಚರ್ ಬಿಡಿಸಿ ಮೋದಿಯವರಿಗೆ ಉಡುಗೊರೆಯಾಗಿ ಕೊಟ್ಟಿದ್ದಂತೂ ದಿಲ್ಲಿಯಲ್ಲಿ
ಪ್ರಧಾನಿ ನಿವಾಸದ ಗೋಡೆಯನ್ನೇ ಅಲಂಕರಿಸಿದೆ. ಇರಲಿ, ನಾನಿಲ್ಲಿ ಹೇಳಹೊರಟಿರುವುದು ಅವೆಲ್ಲದರ ಬಗ್ಗೆ ಅಲ್ಲ. ಚಿತ್ರಮಿತ್ರರ ಚಿತ್ರಗಳನ್ನಷ್ಟೇ ನೋಡಿ ಆನಂದಿಸಿದವರಿಗೆ ಗೊತ್ತೇ ಇಲ್ಲದ ಕೆಲ ಸಂಗತಿಗಳು- ಚಿತ್ರಮಿತ್ರ ಅಂದರೆ ಯಾರು? ಅದು ನಿಜ ಹೆಸರೇ? ಅವರ ಪೂರ್ವಾಶ್ರಮ ವಿವರಗಳೇನು? ಅವರು
ಚಿತ್ರಕಲಾವಿದರಾಗಿ ಹೇಗೆ ಬೆಳೆದರು? ಇತ್ಯಾದಿ ಅವರ ಜೀವನಗಾಥೆಯ ಕೆಲ ಕೌತುಕಮಯ ತುಣುಕುಗಳನ್ನು ಅವರ ಬಾಯಿಂದಲೇ ಕೇಳುವ ಅವಕಾಶ ಮೊನ್ನೆ ನನಗೊಂದು ಝೂಮ್ ಸೆಷನ್‌ನಲ್ಲಿ ಸಿಕ್ಕಿತು.
ಸುಮಾರು ಒಂದೂವರೆ ಗಂಟೆ ಕಾಲ ‘ಕಥೆ ಹೇಳುವೆ ನನ್ನ ಕಥೆ ಹೇಳುವೆ…’ ಎಂಬಂತೆ ಚಿತ್ರಮಿತ್ರ ಮಾತನಾಡಿದರು. ನಾವು ಎಂಟ್ಹತ್ತು ಮಂದಿ ಮೈಯೆಲ್ಲ ಕಿವಿಯಾಗಿ ಕೇಳಿದೆವು. ಮುಗಿಸಿದಾಗ ಗದ್ಗದಿತರಾಗಿ ನಮಗರಿವಿಲ್ಲದಂತೆಯೇ ಕಣ್ಣಹನಿ ಒರೆಸಿಕೊಂಡೆವು. ಆ ಕಥೆಯನ್ನು ಸಂಕ್ಷಿಪ್ತವಾಗಿ ನಿಮಗೂ ತಿಳಿಸುವ ಪ್ರಯತ್ನವಿದು. ಚಿಕ್ಕಚಿಕ್ಕ ವಾಕ್ಯಗಳ ಉತ್ತಮ ಪುರುಷ ಏಕವಚನ ರೀತಿಯಲ್ಲಿ: ‘ನಾನು ಮೂಲತಃ ದಕ್ಷಿಣಕನ್ನಡದ ಬಂಟ(ಶೆಟ್ಟಿ) ಸಮುದಾಯ ದವನು. ಅಪ್ಪನದು ಮುಂಬೈಯಲ್ಲಿ ರೆಸ್ಟೊರೆಂಟ್ ಉದ್ಯಮ. ಹಾಗೆ ನಾನು ಮುಂಬೈಯವನು; ‘ಕನ್ನಡ ಬರೋದಿಲ್ಲ’ ಕ್ಯಾಂಡಿಡೇಟ್.
ಹುಟ್ಟಿದ್ದು ಮಾತ್ರ ಅಮ್ಮನ ತವರೂರಲ್ಲಿ. ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಯಲ್ಲಿ. ದಿನಾಂಕ ೧೯೭೨ ಮಾರ್ಚ್ ೫. ಆ ದಿನದ್ದೇನು ಗ್ರಹಗತಿಯೋ ಗೊತ್ತಿಲ್ಲ, ಮುಂಬೈ ಯಲ್ಲಿ ನನ್ನ ಅಪ್ಪನಿಗೆ ನನ್ನನ್ನು ಕಂಡರಾಗುತ್ತಿರಲಿಲ್ಲ. ಬಾಲ್ಯದ ಐದು ವರ್ಷ ಸಿಕ್ಕಾಪಟ್ಟೆ ನಿಂದನೆ, ಭರ್ತ್ಸನೆ ಅನುಭವಿಸಿದೆ. ಅಮ್ಮ
ಒಳ್ಳೆಯವಳೇ. ಆದರೆ ಅಪ್ಪನ ಹೆದರಿಕೆಯಿಂದ ಅವಳಿಗೂ ಕೈ-ಬಾಯಿ ಕಟ್ಟಿದಂತಾಗುತ್ತಿತ್ತು. ಅಂಥ ವಾತಾವರಣದಲ್ಲಿ ನೋವು ದುಃಖ ಮರೆಯಲಿಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಚಿತ್ರ ಬಿಡಿಸುವುದು. ಚಿತ್ರ ಬಿಡಿಸುತ್ತಿದ್ದರೆ ಮನಸ್ಸಿಗೆ ಒಂಥರ ನೆಮ್ಮದಿ, ಸುರಕ್ಷತೆಯ ಭಾವ. ನಿಲ್ಲಿಸಿದ್ರೆ ಮತ್ತೆ ಭಯ ಶುರು. ಚಿತ್ರಗಳು ಅಪ್ಪನ ಕಣ್ಣಿಗೆ ಬೀಳಬಾರದೆಂದು, ಮಲಗುವ ಮಂಚದ ಕೆಳಗೆ ತೂರಿ ಅಲ್ಲಿ ಗೋಡೆ ಮೇಲೆಲ್ಲ ಗೀಚುತ್ತಿದ್ದೆ.
ದೀಪಾವಳಿ ಹಬ್ಬಕ್ಕೆ ಮನೆಗೆ ಸುಣ್ಣಬಣ್ಣ ಹಚ್ಚುವಾಗ ನನ್ನ ಗೋಡೆಚಿತ್ರಗಳನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಅಳಿಸುತ್ತಿದ್ದರು. ಅಜಮಾಸು ಆಗಲೇ ಇರಬೇಕು, ಒಂದು ಕನ್ನಡ ಫಿಲಂ ನೋಡಿದ್ದೆ. ಅದರಲ್ಲಿ ಮೂವರು ಪುಟ್ಟ ಮಕ್ಕಳಿಗೆ ಕಾಟ ಕೊಡುತ್ತಿದ್ದ ಮಲತಾಯಿ; ಹಸುರು ಬಣ್ಣದ ಆರಡಿ ಎತ್ತರದ ಹನುಮಂತನ ವಿಗ್ರಹವೊಂದರ ಬಳಿ ಆ ಮಕ್ಕಳು ಬೇಡಿಕೊಳ್ಳುತ್ತಿದ್ದುವು; ಮ್ಯಾಜಿಕ್ ಎಂಬಂತೆ ಹನುಮಂತ ಬಂದು ಅವರನ್ನು ರಕ್ಷಿಸುತ್ತಿದ್ದ. ಅದನ್ನು ನೋಡಿ ನನ್ನ ಮನಸ್ಸಲ್ಲೂ ಒಬ್ಬ ಹನುಮ ಮೂಡಿದ. ಕ್ರಮೇಣ ನನ್ನ ಚಿತ್ರಗಳಲ್ಲೂ.
ಅಷ್ಟು ಹೊತ್ತಿಗೆ ನನ್ನನ್ನು ಶಾಲೆಗೆ ಸೇರಿಸಿದ್ದರು. ಕ್ಲಾಸ್‌ಟೀಚರ್ ನನ್ನನ್ನು ಚೆನ್ನಾಗಿಯೇ ಮಾತನಾಡಿಸುತ್ತಿದ್ದರು. ಒಂದುದಿನ ಅವರಿಗೆ ನಾನು ಚಿತ್ರ ಬಿಡಿಸಿದ್ದ ಪುಸ್ತಕ ತೋರಿಸಿದೆ. ಅದರಲ್ಲಿ ಒಂದಲ್ಲ ಎರಡಲ್ಲ ೩೦೦ ಪುಟಗಳಲ್ಲಿ ಬರೋಬ್ಬರಿ ೬೦೦ ಚಿತ್ರಗಳು! ನಾನದನ್ನು ತೋರಿಸಿದ್ದು ಶಭಾಸ್ ಹೇಳಲಿ ಅಂತಲ್ಲ. ನನ್ನ
ಚಿತ್ರಕಲೆಯನ್ನು ನೋಡಿ ಅವರಾದರೂ ನನ್ನನ್ನು ರಕ್ಷಿಸಿಯಾರು ಎಂಬ ಹತಾಶೆಯಿಂದ. ಚಿತ್ರಗಳನ್ನು ನೋಡಿ ವೆರಿ ಗುಡ್ ಎಂದರು. ಮಾರನೆದಿನ ಎರಡನೆ ಪುಸ್ತಕದಲ್ಲಿ ಮತ್ತೂ ೬೦೦ ಚಿತ್ರಗಳನ್ನು ತೋರಿಸಿದೆ. ಏನೂ ಪ್ರತಿಕ್ರಿಯೆಯಿಲ್ಲ, ಸುಮ್ಮನಿದ್ದರು. ಬಹುಶಃ ಅವರಿಗೆ ಚಿತ್ರಗಳು ಇಷ್ಟವಾಗಿಲ್ಲವೇನೋ ಅಂದುಕೊಂಡೆ. ಮೂರನೆಯ ದಿನ ಇನ್ನೂ ೬೦೦ ಚಿತ್ರಗಳ ಮೂರನೆಯ ಪುಸ್ತಕ! ಆವತ್ತು ನಾನು ನಿರೀಕ್ಷಿಸದೇ ಇದ್ದದ್ದು ನಡೆಯಿತು. ನನ್ನ ಹೆತ್ತವರನ್ನು ಪ್ರಾಂಶುಪಾಲರ ಕೊಠಡಿಗೆ
ಕರೆಸಿದರು. ನನ್ನನ್ನೂ ಬರಹೇಳಿದರು. ಕ್ಲಾಸ್‌ಟೀಚರ್ ಅದಾಗಲೇ ಅಲ್ಲಿದ್ದರು.
ನಡುಗುತ್ತಲೇ ಒಳಹೋದವನಿಗೆ ಏನು ಎತ್ತ ಒಂದೂ ಕೇಳದೆ ಫಟೀರ್ ಎಂದು ಅಪ್ಪನಿಂದ ಕಪಾಳಮೋಕ್ಷ. ಭೂಮಿ ನುಂಗಬಾರದೇ ನನ್ನನ್ನು ಅಂತನಿಸಿತು. ಅವಮಾನದಿಂದ ತಲೆ ತಗ್ಗಿಸಿದೆ. ನಾನು ಬಿಡಿಸಿದ ಚಿತ್ರಗಳನ್ನು ಇನ್ನುಮುಂದೆ ಯಾರಿಗೂ ತೋರಿಸುವುದಿಲ್ಲವೆಂದು ತೀರ್ಮಾನಿಸಿದೆ. ಹಾಗಂತ ಚಿತ್ರ
ಬಿಡಿಸುವುದನ್ನೇ ನಿಲ್ಲಿಸಿದೆನೇ? ಖಂಡಿತ ಇಲ್ಲ! ಅಪ್ಪನ ಕಣ್ಣಿಗೆ ಬೀಳದಂತೆ ಕದ್ದುಮುಚ್ಚಿ ಬಿಡಿಸುತ್ತಿದ್ದೆ. ಏಳನೆಯ ತರಗತಿ ಆದಮೇಲೆ ಅಪ್ಪ ನನ್ನನ್ನು ರೆಸ್ಟೊರೆಂಟ್‌ನಲ್ಲಿ ಪಾರ್ಟ್‌ಟೈಂ ಕೆಲಸಕ್ಕೆ ಹಚ್ಚಿದರು. ಶಾಲೆ ಮುಗಿದಮೇಲೆ ರೆಸ್ಟೊರೆಂಟ್‌ನ ಕಿಚನ್‌ನಲ್ಲಿ ಡ್ಯೂಟಿ. ಅಲ್ಲಿ ಪಾರ್ಸೆಲ್‌ಗೆ ಬಳಸುವ ಕಂದು ಲಕೋಟೆಗಳ ಮೇಲೆ ಚಿತ್ರ ಬಿಡಿಸುತ್ತಿದ್ದೆ. ನಮ್ಮದು ಬಾರ್ ಆಂಡ್ ರೆಸ್ಟೊರೆಂಟ್ ಆದ್ದರಿಂದ ಕೆಲವು ಕಚಡಾ ಜನರೂ ಬರುತ್ತಿದ್ದರು.
ಗೂಂಡಾಗಳೂ ಬರುತ್ತಿದ್ದರು. ದಿನಾ ಜಗಳ. ಕೆಲವೊಮ್ಮೆ ಮಾರಾಮಾರಿ ಸಹ. ಮನೆಯಲ್ಲೂ ಹಿಂಸೆ, ಇಲ್ಲಿ ನೋಡಿದರೆ ಇಲ್ಲೂ ಕಣ್ಮುಂದೆ ಹಿಂಸೆ. ಜೀವನ ಅಂದ್ರೆ ಹೀಗೆಯೇ ಇರಬಹುದು ಅಂದ್ಕೊಂಡಿದ್ದೆ. ಆದರೆ ಚಿತ್ರಕಲೆ ನನಗೆ ಸಮಾಧಾನ ತರುತ್ತಿತ್ತು. ಚಿತ್ರ ಬಿಡಿಸಿ ಕಾಗದ ಮುದ್ದೆ ಮಾಡಿ ಬಿಸಾಡ್ತಿದ್ದೆ. ರೆಸ್ಟೊರೆಂಟಿನ
ವೈಟರ್‌ಗಳಿಗೆ ಗುರಿಯಿಟ್ಟು ಬಿಸಾಡುತ್ತಿದ್ದೆ. ನನ್ನೊಳಗಿನ ಬೇಗುದಿ, ಸಿಟ್ಟು ಆ ರೀತಿ ವ್ಯಕ್ತವಾಗುತ್ತಿತ್ತು. ಆ ವೈಟರ್‌ಗಳೂ ಒರಟರೇ. ಬ್ಯಾವರ್ಸಿ… ಬೋಳಿಮಗ… ಅಂತಲೇ ಮಾತು. ಅದರಲ್ಲೊಬ್ಬಾತ ಮಂಗಳೂರಿನಲ್ಲಿರುವ ತನ್ನ ಪ್ರೇಯಸಿಗೆ ಲವ್‌ಲೆಟರ್ ಬರೆಯುತ್ತಿದ್ದ. ೧೫-೨೦ ಪುಟಗಳಷ್ಟು ಉದ್ದುದ್ದ ಪತ್ರಗಳು. ಏನು ಬರೆದ ನೆಂದು ಆಮೇಲೆ ನಮ್ಮಲ್ಲಿ ಹೇಳುತ್ತಿದ್ದ. ಅವನಿಂದಲೇ ನಾನೊಂದಿಷ್ಟು ಕನ್ನಡ ಭಾಷೆಯನ್ನೂ ಕಲಿತೆ. ಆದರೆ ನಾನು ಎಲ್ಲರೊಡನೆ ಸ್ನೇಹದಿಂದಿರುವುದನ್ನೂ ಅಪ್ಪ ಸಹಿಸುತ್ತಿರಲಿಲ್ಲ. ಗಲ್ಲಾದ ಹತ್ತಿರ ಸುಳಿಯಲಿಕ್ಕೂ ಬಿಡುತ್ತಿರಲಿಲ್ಲ. ‘ಉಲಾಯಿ ಪೋ ಉಲಾಯಿ ಪೋ!’ (ಒಳಗೆ ಹೋಗು) ಎಂದು ನನ್ನನ್ನು ಗದರಿಸಿ ಕಿಚನ್‌ಗೆ
ಅಟ್ಟುತ್ತಿದ್ದರು.
ಮುಂಬೈಯಲ್ಲಿ ಮಿಡ್ ಡೇ ಪತ್ರಿಕೆಯ ಕಚೇರಿ ನಮ್ಮ ರೆಸ್ಟೊರೆಂಟ್‌ನ ಎದುರುಗಡೆಗೇ ಇತ್ತು. ಅಲ್ಲಿನ ಜರ್ನಲಿಸ್ಟ್‌ಗಳು ನಮ್ಮಲ್ಲಿಗೆ ಊಟಕ್ಕೆ, ಡ್ರಿಂಕ್ಸ್ ಸೇವನೆಗೆ ಬರುತ್ತಿದ್ದರು. ಒಮ್ಮೆ ಒಬ್ಬಾತ ತಡರಾತ್ರಿ ಬಂದಿದ್ದ. ಇನ್ನೇನು ರೆಸ್ಟೊರೆಂಟ್ ಮುಚ್ಚುವ ಸಮಯ. ಬೇರೆ ಯಾರೂ ಇರಲಿಲ್ಲ. ಅಪ್ಪನೂ ಮನೆಗೆ ಹೋಗಿ
ಯಾಗಿತ್ತು. ನಾನು ಗಲ್ಲಾದಲ್ಲಿ ಕುಳಿತು ಚಿತ್ರ ಬಿಡಿಸುತ್ತಿದ್ದೆ. ಆತ ಅದನ್ನು ನೋಡಿದ. ‘ಹೇ, ಇಷ್ಟು ಒಳ್ಳೇ ಚಿತ್ರ ಬಿಡಿಸುತ್ತೀ, ಇಲ್ಲೇಕೆ ಕಾಲಹರಣ ಮಾಡ್ತಿದ್ದೀ?’ ಎಂದು ನನ್ನನ್ನು ಕೇಳಿದ. ಆತ ಮಿಡ್ ಡೇ ಪತ್ರಿಕೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಅಂತೆ. ಮಾರನೆದಿನ ಮಿಡ್ ಡೇ ಆಫೀಸಿಗೆ ನನಗೆ ಬುಲಾವ್. ಪತ್ರಿಕೆಗೆ ಇಲ್ಲಸ್ಟ್ರೇಟರ್
ಆಗ್ತೀಯಾ ಎಂದು ಕೇಳಿದರು. ಹಾಗೆಂದರೇನು ಅಂತ ನನಗೆ ಗೊತ್ತಿರಲಿಲ್ಲ! ವಿವರಿಸಿದ ಮೇಲೆ ಒಪ್ಪಿಕೊಂಡೆ. ಆದರೆ ಅದೇನೂ ಕಾಯಂ ಉದ್ಯೋಗವಲ್ಲ. ಅವರಿಗೆ ಬೇಕಾದಾಗ ಬೇಕಾದ ಲೇಖನಗಳಿಗೆ ನನ್ನಿಂದ ಚಿತ್ರ ಬರೆಯಿಸುತ್ತಿದ್ದರು. ಇದೆಲ್ಲ ಅಪ್ಪನಿಗೆ ಗೊತ್ತಾಗದಂತೆ ವ್ಯವಸ್ಥೆ ಮಾಡಿದ್ದೆ.
ಪತ್ರಿಕೆಯ ಆಫೀಸಿಂದ ಯಾರಾದರೂ ನನ್ನನ್ನು ಕರೆಯಲಿಕ್ಕೆ ಬರುವುದಿದ್ದರೂ ಕದ್ದುಮುಚ್ಚಿ ಬರಬೇಕು. ಥೇಟ್ ಮುನ್ನಾಭಾಯಿ ಎಂಬಿಬಿಎಸ್ ಸಿನೆಮಾದಲ್ಲಿದ್ದಂತೆ.
ಒಂದುದಿನ ಮಿಡ್ ಡೇ ಕಚೇರಿಯಿಂದ ಬಂದವನು ವ್ಯವಸ್ಥೆ ಗೊತ್ತಿಲ್ಲದ ಹೊಸಬನಿರಬೇಕು. ನೇರವಾಗಿ ಅಪ್ಪನನ್ನೇ ಕೇಳಿದನು, ಚಿತ್ರ ಬಿಡಿಸಲಿಕ್ಕೆ ನಿಮ್ಮ ಮಗನನ್ನು ಕರೆಯುವಂತೆ ಹೇಳಿದ್ದಾರೆಂದು. ಅಪ್ಪ ಸಿಟ್ಟಾಗಲಿಲ್ಲ ಕಂಪ್ಲೀಟ್ ಸೈಲೆಂಟಾದರು. ಹುಡುಗ ತನ್ನ ಕೈಯಿಂದ ಜಾರಿಹೋಗ್ತಿದ್ದಾನೆ ಎಂದು ಅವರಿಗೆ ಅನಿಸಿತೇನೊ.
ಮೊದಲಿಗೆಲ್ಲ ಇಲ್ಲಸ್ಟ್ರೇಷನ್ ಜತೆ ನನ್ನ ಹೆಸರು ಹಾಕಬೇಡಿ ಎಂದು ಪತ್ರಿಕೆಯವರಿಗೆ ಹೇಳಿದ್ದೆ. ಆದರೆ ಕ್ರಮೇಣ ನನ್ನ ಬೈಲೈನ್ ಇರಬೇಕೆಂದು ಒತ್ತಾಯ ಮಾಡಿದರು. ಬೈಲೈನ್ ಏನಂತನೂ ನನಗಾಗ ಗೊತ್ತಿರಲಿಲ್ಲ.
ಅಪ್ಪ ಎಲ್ಲಾದ್ರೂ ಚಿತ್ರ ನೋಡಿ ನನ್ನ ಹೆಸರು ಗಮನಿಸಿದರೆ ಎಂದು ನನಗೆ ಹೆದರಿಕೆ. ಅವರು ಉದಯವಾಣಿ ಮತ್ತು ಕರ್ನಾಟಕ ಮಲ್ಲ ಪತ್ರಿಕೆ ಮಾತ್ರ ಓದ್ತಿದ್ರು.
ಅಕಸ್ಮಾತ್ ಮಿಡ್ ಡೇ ಓದಿದ್ರೆ? ಚಿತ್ರದ ಕೆಳಗೆ ಪ್ರಶಾಂತ ಶೆಟ್ಟಿ ಅಂತ ಕಂಡುಬಂದರೆ? ನನಗೆ ಪುಕುಪುಕು. ಹಾಗಾಗಿ ಪ್ರಶಾಂತ ಶೆಟ್ಟಿ ಎಂದು ಬೇಡ, ಬೇರಾವುದಾದರೂ ಹೆಸರು ಹಾಕುವುದೆಂದಾಯ್ತು. ಹಾಗೆ ಹೊಳೆದದ್ದೇ ಚಿತ್ರಮಿತ್ರ ಎಂಬ ಹೆಸರು! ಏನೋ ರೋಮಾಂಚನ. ಅದನ್ನೇ ಕಾಯಂಗೊಳಿಸಿದೆ. ವರ್ಷಗಳ ಬಳಿಕ ಗೊತ್ತಾಯ್ತು, ಇಂಗ್ಲಿಷಲ್ಲಿ ಇಏಐSಅIಐSಅ ಎಂದು ಬರೆಯುವಾಗ ಅದರೊಳಗೆ ಅI ಸಹ ಇರುತ್ತಾನೆಂದು. ಹನುಮಭಕ್ತನಿಗೆ ಬೇರೇನು ಬೇಕು! ಆದರೆ ನನ್ನ ಚಿತ್ರಗಾರಿಕೆಯನ್ನು ತಡೆಯುವ ಉದ್ದೇಶದಿಂದಲೋ ಎನೋ, ಅಪ್ಪ ನನ್ನನ್ನು ರೆಸ್ಟೊರೆಂಟ್ ಕಿಚನ್ ನಲ್ಲಿ ದೊಡ್ಡ ಬಾಟಲಿಗಳಿಂದ ೬೦, ೯೦ ಮಿ.ಲೀ ಅಳತೆಯಲ್ಲಿ ಗ್ಲಾಸುಗಳಿಗೆ ವ್ಹಿಸ್ಕಿ ಹಾಕಿಕೊಡುವ ಡ್ಯೂಟಿಗೆ ನೇಮಿಸಿದರು.
ನಾನು ಅಂದಿಗೂ ಇಂದಿಗೂ ಒಂದು ಹನಿ ಕೂಡ ಮದ್ಯ ಸೇವಿಸದವನು. ಬಿಯರ್ ರುಚಿನೋಡದವನು. ಅಂಥ ಪ್ರಾಮಾಕನೇ ಬೇಕಿತ್ತು ಅಪ್ಪನಿಗೆ ಆ ಡ್ಯೂಟಿಗೆ. ಆದರೂ ಸಮಯ ಸಿಕ್ಕಾಗೆಲ್ಲ ಚಿತ್ರ ಬಿಡಿಸುತ್ತಿದ್ದೆ. ಕಿಚನ್ ಪಕ್ಕದ ಆ ಸಂದಿ. ಸುಲಿದ ಬಟಾಟೆ ಸಿಪ್ಪೆ, ಕೊಳೆತ ಈರುಳ್ಳಿ, ಅಲ್ಲಲ್ಲಿ ಬಿದ್ದಿರುತ್ತಿದ್ದ ಗೋಲ್ಡ್ ಸ್ಪಾಟ್
ಮುಚ್ಚಳಗಳು. ಇಲಿಗಳ ಓಡಾಟ. ಪಕ್ಕದಲ್ಲೇ ಒಂದು ಡ್ರೈನೇಜ್. ಅಂಥ ಪವಿತ್ರ ಜಾಗವೇ ನನ್ನ ಸ್ಟುಡಿಯೊ. ಅದೇ ನನಗೆ ಸ್ವರ್ಗ. ಚಿತ್ರಕಲೆ ಹೆಚ್ಚಾದಷ್ಟೂ ರೆಸ್ಟೊರೆಂಟ್ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಿತ್ತು. ಅಪ್ಪನ ಭರ್ತ್ಸನೆ ಮತ್ತೂ ಹೆಚ್ಚಿತ್ತು. ಇನ್ನು ತಡೆಯಲಾರೆ ಎಂದು ೧೯೯೩ರಲ್ಲಿ ಒಂದು ದಿನ ಮನೆ
ಬಿಟ್ಟು ಚಿಕ್ಕ ಗಂಟುಮೂಟೆಯೊಂದಿಗೆ ಬೆಂಗಳೂರಿಗೆ ಬಂದಿಳಿದೆ. ನನ್ನೊಂದಿಷ್ಟು ಡ್ರಾಯಿಂಗ್ಸ್ ಸಹ ತಂದಿದ್ದೆ.
ಕಿಸೆಯಲ್ಲಿ ಸುಮಾರು ೧೪,೦೦೦ ರು. ದುಡ್ಡಿತ್ತು. ಅದರಲ್ಲಿ ಬಹುಪಾಲು ಮೊದಲ ನಾಲ್ಕೈದು ದಿನಗಳಲ್ಲೇ ಖರ್ಚು ಮಾಡಿದೆ. ಗವಿಗಂಗಾಧರೇಶ್ವರ ಟೆಂಪಲ್ ಬಳಿ ಒಬ್ಬ ಸ್ನೇಹಿತನಲ್ಲಿ ಉಳಕೊಂಡಿದ್ದೆ. ನಾಗವಾರದಲ್ಲಿ ಒಬ್ಬರು ಗ್ರೇಟ್ ಆರ್ಟಿಸ್ಟ್ ಇದ್ದಾರೆ ಅವರ ಭೇಟಿ ಮಾಡಿಸುತ್ತೇನೆ ಎಂದು ಆತ ನನಗೆ ಭರವಸೆ ಕೊಟ್ಟಿದ್ದನು. ಒಂದು ವಾರ ಸತಾಯಿಸಿದನು. ನನಗೋ ಅಮ್ಮನ ನೆನಪಾಗುತ್ತಿತ್ತು. ಮುಂಬೈಗೆ ವಾಪಸ್ ಹೋಗುತ್ತೇನೆ ಎಂದೆ. ಅಂತೂ ಒಂದುದಿನ ನಾಗವಾರಕ್ಕೆ ನನ್ನನ್ನು ಕರೆದುಕೊಂಡು ಹೋದನು. ಅಲ್ಲಿ ನೀನು ಮುಂಬೈಯವನು ರೆಸ್ಟೊರೆಂಟ್ ಮಾಲೀಕನ ಮಗ ಅಂತೆಲ್ಲ ತಿಳಿಸಬೇಡ ಎಂದು ಮೊದಲೇ ಹೇಳಿಟ್ಟಿದ್ದನು. ಹಾಗೆ ನಾವು ಹೋಗಿ ತಲುಪಿದ್ದು ನಿಜಕ್ಕೂ ಗ್ರೇಟ್ ಆರ್ಟಿಸ್ಟ್ ಬಿ.ಕೆ.ಎಸ್ ವರ್ಮರ ಮನೆಗೆ!
ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡರು. ನನ್ನ ಸ್ನೇಹಿತನೊಡನೆ ತೆಲುಗಲ್ಲಿ ಮಾತಾಡಿದ್ರು. ಅವರ ಚಿತ್ರಗಳ ಗ್ಯಾಲರಿ ತೋರಿಸಿದರು. ಅದೊಂದು ಅದ್ಭುತ ರಮ್ಯ ಪ್ರಪಂಚ. ನನ್ನ ಕೈಲಿದ್ದ ಫೋಲ್ಡರ್ ಇಸಕೊಂಡು ಒಂದೊಂದೇ ಡ್ರಾಯಿಂಗ್ ನೋಡಿದ್ರು. ಅಲ್ಲಿಯವರೆಗೆ ನಾನು ಕಪ್ಪುಬಿಳುಪು ಬಿಡಿಸಿದ್ದೇ ಹೆಚ್ಚು. ಒಂದು ಮಾತ್ರ ಕಲರ್ ಡ್ರಾಯಿಂಗ್ ಇತ್ತು. ಅವರಿಗದು ತುಂಬ ಇಷ್ಟವಾಯ್ತು. ಅವರು ನನ್ನನ್ನು ಶಿಷ್ಯನಾಗಿ ಸ್ವೀಕರಿಸಲಿ ಎಂದು ನನ್ನ ಆಸೆ. ಆದರೆ ತಾನೀಗ ಕಲಿಸುತ್ತಿಲ್ಲ ಎಂದುಬಿಟ್ಟರು. ಆದರೂ ಪ್ರತಿದಿನವೂ ನಾಗವಾರಕ್ಕೆ ಅವರ ಮನೆಗೆ ಹೋಗುತ್ತಿದ್ದೆ. ಸಂಜೆ ಬೇಕರಿಯಲ್ಲಿ ಪಫ್, ನೆಲಗಡ್ಲೆ ಏನಾದರೂ ತಿಂದ್ಕೊಂಡು
ಹೊಟ್ಟೆತುಂಬಿಸಿಕೊಳ್ತಿದ್ದೆ. ಒಂದುದಿನ ನಾಗವಾರದ ಒಂದು ರೆಸ್ಟೊರೆಂಟ್‌ನಿಂದ ಬಿರ್ಯಾನಿ ಪರಿಮಳ ಮೂಗಿಗಡರಿತು.
ಗಡದ್ದಾಗಿ ತಿಂದೆ. ಬಸ್ಸಿಗೆ ದುಡ್ಡಿಲ್ಲವಾಯ್ತು. ರಾತ್ರಿ ಬಸ್ ಸ್ಟಾಪಲ್ಲೇ ಮಲಗಿದೆ. ಅದುಹೇಗೋ ವರ್ಮ ಸರ್‌ಗೆ ಗೊತ್ತಾಯ್ತು. ಕರುಣಾಮಯಿ ಪುಣ್ಯಾತ್ಮ, ಆಮೇಲೆ ಅವರ ಮನೆಯ ಮಹಡಿಯಲ್ಲೇ ನನಗೆ ವಾಸಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ನನಗೆ ಕಲರ್ ಡ್ರಾಯಿಂಗ್ ಕಲಿಸಿಕೊಡಿ ಎಂದು ವರ್ಮರನ್ನು ನಾನು ಕೇಳದಿದ್ದ ದಿನವಿಲ್ಲ. ‘ಬರುತ್ತೆ ಮಿತ್ರ ಒಂದಲ್ಲ ಒಂದುದಿನ ಬರುತ್ತೆ ಮಿತ್ರ…’ ಅಂತ ಅವರ ಉತ್ತರ. ಅವರಲ್ಲಿ ಡೆನ್ನಿಸ್ ಎಂಬುವನೊಬ್ಬ ಸಹಾಯಕ ಇದ್ದ. ಅವನೂ ಒಳ್ಳೆಯ
ಚಿತ್ರಕಾರನೇ. ನನಗೆ ಒಳ್ಳೆಯ ದೋಸ್ತಿಯಾದ. ಕಲಿಸುವಂತೆ ಅವನನ್ನೂ ಕೇಳ್ತಿದ್ದೆ. ಅವನೂ ಹಾಗೇ ಹೇಳ್ತಿದ್ದ. ಏತನ್ಮಧ್ಯೆ ಬೆಂಗಳೂರಲ್ಲಿ ರಾಜಾಜಿನಗರದಲ್ಲಿ ನನ್ನೊಬ್ಬ ಕಸಿನ್ ಇದ್ದ. ಒಮ್ಮೆ ಹೀಗೇ ಅವನೊಡನೆ ಅದೂಇದೂ ಮಾತಾಡುತ್ತ ನಾನು ವರ್ಮ ಸರ್ ಬಳಿ ಪೇಂಟಿಂಗ್ ಕಲಿಯುತ್ತಿದ್ದೇನೆ ಎಂದು ಬಾಯ್ತಪ್ಪಿ
ಹೇಳಿದೆ. ಆತನೋ ಬಲುದೊಡ್ಡ ಬಿಬಿಸಿ. ಸುದ್ದಿ ಮುಂಬೈಯಲ್ಲಿ ನನ್ನ ಅಪ್ಪನಿಗೆ ತಲುಪಿತು.
ಅದಾಗಿ ಒಂದೆರಡು ವಾರ ಕಳೆದಿತ್ತೇನೋ. ಒಂದುದಿನ ವರ್ಮ ಸರ್‌ರ ಮನೆಯ ಗಾರ್ಡನ್ ಪಕ್ಕದಲ್ಲಿದ್ದ ಪಾಯಿಖಾನೆ ತೊಳೆಯುತ್ತ ಇದ್ದೆ. ಅದು ನಾನು
ಖುಷಿಯಿಂದ ಮಾಡುವ ಕೆಲಸ. ನಾನದರಲ್ಲಿ ಮಗ್ನನಾಗಿದ್ದಾಗ ಸಿನಿಮೀಯ ಶೈಲಿಯಲ್ಲಿ ಬಂತು ೧೭ ಜನರ ಒಂದು ದಂಡು! ಅದರಲ್ಲಿ ನನ್ನ ಅಪ್ಪ, ಅಮ್ಮ, ಮಾವ, ಕಸಿನ್ಸ್ ಎಲ್ಲರೂ ಇದ್ದರು. ನನಗೆ ಜೀವ ಬಾಯಿಗೆ ಬಂದಂತಾಯ್ತು. ಸೀದಾ ವರ್ಮ ಸರ್‌ರ ಹೆಂಡತಿಯ ಬಳಿಗೆ ಓಡಿದೆ (ಅವರನ್ನು ನಾನು ಅಮ್ಮ ಎಂದು
ಕರೆದು ಗೌರವಿಸುತ್ತಿದ್ದೆ). ಅಷ್ಟುಹೊತ್ತಿಗೆ ನನ್ನ ಅಪ್ಪನಿಂದ ವರ್ಮ ಸರ್‌ಗೆ ಸಹಸ್ರನಾಮ ಶುರು ಆಗಿತ್ತು. ಮಗ ಇಷ್ಟು ಸೊರಗಿಹೋಗಿದ್ದಾನೆ, ಇಲ್ಲಿ ಅವನಿಂದ ಪಾಯಿಖಾನೆ ಬೇರೆ ತೊಳೆಸು ತ್ತಿದ್ದೀರಿ, ಏನು ಅಂದ್ಕೊಂಡಿದ್ದೀರಿ ನಮ್ಮನ್ನು ಅಂತೆಲ್ಲ ಸಿಕ್ಕಾಪಟ್ಟೆ ಬೈದರು.
ವರ್ಮ ಸರ್ ಮಂದಸ್ಮಿತರಾಗಿ ಅದನ್ನೆಲ್ಲ ಕೇಳಿಸಿಕೊಂಡರು. ಡೆನ್ನಿಸ್ ಮತ್ತು ಅಮ್ಮನ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತವಾಯ್ತು. ನನ್ನ ಮೇಲೆ ಏನೋ ಬ್ಲ್ಯಾಕ್ ಮ್ಯಾಜಿಕ್ ನಡೆದಿದೆ ಎಂದೇ ಅಪ್ಪ ನಂಬಿದ್ದರು. ಅಲ್ಲಿಂದಲೇ ಎಲ್ಲರೂ ತಿರುಪತಿಗೆ ಹೋಗೋದು ಎಂದು ಅಪ್ಪನ ಆeಯಾಯ್ತು. ಮನಸ್ಸಿಲ್ಲದೆ ನಾನೂ ಹೋದೆ. ತಲೆ ಬೋಳಿಸಿಕೊಳ್ಳಲಿಕ್ಕೆ ಒಪ್ಪಲಿಲ್ಲ. ಮಾತ್ರವಲ್ಲ ಅವರೊಟ್ಟಿಗೆ ಮುಂಬೈಗೂ ಹೋಗಲಿಲ್ಲ. ಮತ್ತೆ ನಾಗವಾರಕ್ಕೇ ವಾಪಸಾದೆ. ವರ್ಮ ಸರ್ ನನ್ನನ್ನು ಕರೆದು ಶಾಂತ ಚಿತ್ತದಿಂದ ಉಪದೇಶ ಮಾಡಿದ್ರು. ಹೆತ್ತವರು ಬದುಕಿದ್ದಾಗ ಅವರನ್ನು ನೋಡಿಕೊಳ್ಳಬೇಕು, ಆಮೇಲೆ ನಿನಗೆ ಮುಕ್ತ ಬದುಕು ಹೇಗೂ ಇದ್ದೇ ಇದೆ, ಈಗ ಮುಂಬೈಗೆ ಹೋಗು ಎಂದರು. ಬೇರೆ ದಾರಿಯಿಲ್ಲದೆ ಅವರ ಮಾತಿಗೆ ಒಪ್ಪಿದೆ. ಮುಂಬೈಗೆ ಮರಳಿದೆ.
ಸ್ವರ್ಗ- ನರಕಗಳ ವ್ಯತ್ಯಾಸ ಏನೆಂದು ಆಗ ಅರಿವಾಯ್ತು. ಮುಂಬೈಯಲ್ಲಿ ಹೆಚ್ಚು ದಿನ ಇರಲಾಗಲಿಲ್ಲ. ಮತ್ತೆ ನಾಗವಾರಕ್ಕೆ ಮರಳಿದೆ. ಅಷ್ಟುಹೊತ್ತಿಗೆ ಕಲರ್ ಡ್ರಾಯಿಂಗಲ್ಲಿ ಪರಿಣತನಾಗಿದ್ದೆ. ವರ್ಮ ಸರ್ ನನಗೆ ಚಿತ್ರಕಲೆ ಕಲಿಸದೆಯೂ ಕಲಿಸಿದ್ದರು. ಅಲ್ಲ, ಅದಕ್ಕಿಂತ ಹೆಚ್ಚಾಗಿ ಬದುಕನ್ನು ಕಲಿಸಿದ್ದರು! ಅವರು ಅಷ್ಟು ದೊಡ್ಡ ಕಲಾವಿದನಾದರೂ, ನಾನು ಕಾರ್ಟೂನ್ಸ್ ಕ್ಯಾರಿಕೇಚರ್ಸ್ ಬಿಡಿಸುವಾಗೆಲ್ಲ ಒಬ್ಬ ಪುಟ್ಟ ಹುಡುಗನಂತೆ ಕುತೂಹಲಿಯಾಗಿ ನೋಡ್ತಿದ್ರು. ಮಿತ್ರ ಅದುಹೇಗೆ ಅಷ್ಟು ಚೆನ್ನಾಗಿ ಬಿಡಿಸ್ತಿ ಎಂದು ನನ್ನ ಬೆನ್ನು ತಟ್ಟುತ್ತಿದ್ದರು. ನಿಜವಾಗಿ ಅವರೊಬ್ಬ ಅನರ್ಘ್ಯ ರತ್ನ.
ಮುಗ್ಧ- ಶುದ್ಧ ಮನಸಿನ ಮಗು. ನಾಗವಾರದಲ್ಲಿ ವರ್ಮ ಸರ್ ಮನೆಯಲ್ಲಿ ಕಳೆದ ದಿನಗಳು ನನ್ನ ಬದುಕಿನ ಸ್ವರ್ಣಯುಗ. ನನ್ನ ಪಾಲಿಗೆ ಅವರು ಚಿತ್ರಜಗತ್ತಿನ ಮೌಂಟ್ ಎವರೆಸ್ಟ್. ಅದನ್ನೇ ಪ್ರತಿಬಿಂಬಿಸಿ ಅವರ ಕ್ಯಾರಿಕೇಚರ್ ಬಿಡಿಸಿ ಅವರಿಗೆ ನಾನು ಗುರುದಕ್ಷಿಣೆಯಂತೆ ಕೊಟ್ಟಿದ್ದು, ಅವರು ಅದನ್ನು ನೋಡಿ ಸಂತಸದಿಂದ ಹಿರಿಹಿರಿ ಹಿಗ್ಗಿದ್ದು ನನ್ನ ಜನ್ಮ ಸಾರ್ಥಕಗೊಳಿಸಿದ ಕ್ಷಣಗಳು. ಆರೇಳು ವರ್ಷಗಳ ಗುರುಕುಲವಾಸದ ಬಳಿಕ ಮುಂಬೈಗೆ ಮರಳಿದೆ. ಅನು ಪಾವಂಜೆ ಎಂಬ ಅಭಿಜಾತ ಚಿತ್ರಕಲಾವಿದೆಯ ಪರಿಚಯವಾಯ್ತು. ಪರಿಚಯ ಸ್ನೇಹವಾಗಿ ಬೆಳೆಯಿತು. ನನಗಿಂತ ಹೆಚ್ಚಾಗಿ ನನ್ನ ಅಮ್ಮನಿಗೆ ಅನು ಇಷ್ಟವಾದಳು. ಅಮ್ಮ
ಕ್ಯಾನ್ಸರ್‌ನಿಂದ ಮರಣಶಯ್ಯೆಯಲ್ಲಿದ್ದಾಗ ಸಾಯುವ ನಾಲ್ಕು ದಿನ ಮೊದಲು ನನ್ನ ಬಳಿ ಹೇಳಿದ್ದ ಮಾತು ಈಗಲೂ ಗುಂಯ್ ಗುಡುತ್ತಿದೆ ‘ನಿನಗೆ ಎರಡುಹೊತ್ತು ಗಂಜಿ ಉಣಿಸಿ ಸಾಕಿ ಸಲಹಬಲ್ಲ ಹುಡುಗಿಯೊಬ್ಬಳಿದ್ದರೆ ಅದು ಈ ಅನು ಮಾತ್ರ!’ ಎಂದಿದ್ದರು ಅಮ್ಮ.
‘ಬರುತ್ತೆ ಮಿತ್ರ ಬರುತ್ತೆ ಮಿತ್ರ…’ ಎಂದು ವರ್ಮ ಸರ್ ಹೇಳಿದ್ದು ಚಿತ್ರಕಲಾ ಪರಿಣತಿಗೆ ಮಾತ್ರವಲ್ಲ ಬಾಳಿನಲ್ಲಿ ಸುಂದರ ಚಿತ್ತಾರಕ್ಕೂ ಎಂಬುದು ಅನು ಕೈಹಿಡಿದಾಗ ಅರಿವಾಯಿತು. ಅಮ್ಮನ ನುಡಿಯೂ ನಿಜವಾಯಿತು. ಅಪ್ಪ ಕೊನೆವರೆಗೂ ನನ್ನೊಡನೆ ಒಳ್ಳೆಯ ಮಾತಾಡಲೇ ಇಲ್ಲ ಎಂಬ ಒಂದು ಖೇದ ಮಾತ್ರ ಆಗಾಗ ಕಾಡುತ್ತದೆ. ಅಥವಾ, ಯಾರಿಗೆ ಗೊತ್ತು, ‘ಸಮುದ್ರ ಶಾಂತವಾಗಿಯೇ ಇದ್ದರೆ ನಾವಿಕ ನಿಪುಣನಾಗುವುದೆಂತು?’ ಎಂಬರ್ಥದ ಒಂದು ಇಂಗ್ಲಿಷ್
ನುಡಿಗಟ್ಟಿದೆ. ನಾನಿಂದು ಚಿತ್ರಮಿತ್ರ ಆಗಿರುವುದು ನಿಮ್ಮೆಲ್ಲರ ಪ್ರೀತಿ ಗಳಿಸಿರುವುದು ಕೂಡ ಅಪ್ಪ ಹಾಗೆ ಸಿಟ್ಟು-ಸೆಡವಿನ ಮನುಷ್ಯನಾಗಿದ್ದರಿಂದಲೇ ಇರಬಹುದು!’