Sunday, 15th December 2024

ಶಕುನಿ, ಮಂಥರೆಯರು ಅಧ್ಯಕ್ಷರ ಪಕ್ಕಕ್ಕಿದ್ದರೆ…

ಶಿಶಿರ ಕಾಲ

shishirh@gmail.com

ಮನುಷ್ಯರಾಗಿ ನಾವು ಏನೇನನ್ನೆಲ್ಲ ಆವಿಷ್ಕರಿಸಿ ಬಿಟ್ಟಿದ್ದೇವೆ. ಮೊಬೈಲ್, ಇಂಟರ್ನೆಟ್, ಕಂಪ್ಯೂಟರ್, ಮೈಕ್ರೋ ಚಿಪ್, ಕಾರು, ರೈಲು, ವಿಮಾನ. ಒಂದೇ ಎರಡೇ? ಕೋಟ್ಯಾನುಕೋಟಿ ಆವಿಷ್ಕಾರಗಳು.

ಅವೆಲ್ಲವನ್ನು ಸೇರಿಸಿದಾಗ ಮಾತ್ರ ನಾವು ಆಧುನಿಕರೆನಿಸಿಕೊಳ್ಳುವುದು. ಅವೆಲ್ಲ ಒಂದೇ ಕ್ಷಣದಲ್ಲಿ ಮಾಯವಾಯಿತೆಂದು ಸುಮ್ಮನೆ ಕಲ್ಪಿಸಿಕೊಳ್ಳಿ. ಮಾರನೆಯ ಕ್ಷಣವೇ ನಾವೆಲ್ಲ ಅದೆಷ್ಟೋ ಸಹಸ್ರ ವರ್ಷ ಹಿಂದಕ್ಕೆ ಸರಿದು ಆದಿಮಾನವರಾಗಿಬಿಡುತ್ತೇವೆ. ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ
ಬದಲಾಗದೇ ಲಕ್ಷ ವರ್ಷವಾಗಿರಬಹುದು, ಆದರೆ ಕಳೆದ ಇನ್ನೂರು ವರ್ಷದ ಆವಿಷ್ಕಾರಗಳು ನಮ್ಮನ್ನು ಎಲ್ಲಿಗೋ ಒಯ್ದು ನಿಲ್ಲಿಸಿವೆ. ಅದರಲ್ಲಿಯೂ ಕಳೆದ ಐವತ್ತು ವರ್ಷದ ಆವಿಷ್ಕಾರಗಳು ಜಗತ್ತನ್ನು ಬದಲಿಸಿದ ರೀತಿಗೆ ನಾವೇ ಸಾಕ್ಷಿಯಾಗಿದ್ದೇವಲ್ಲ.

ಇವೆಲ್ಲ ಆವಿಷ್ಕಾರಗಳು ಒಂದು ಕಡೆಯಾದರೆ ನಾವು ಪರಸ್ಪರ ಮಾಡುವ ಯುದ್ಧ ಇನ್ನೊಂದು ಕಡೆ. ಕ್ರೌರ್ಯ, ದ್ವೇಷ, ಅಸೂಯೆ, ಆಸೆ, ದುರಾಸೆ ಇವೆಲ್ಲವೂ ವೈಯಕ್ತಿಕ. ಯುದ್ಧ ಅದರ ಪರಮ ರೌದ್ರ ಸ್ವರೂಪ. ತೀರಾ ಕಡಿಮೆ ಸಮಯದಲ್ಲಿ, ಕೆಲವೇ ದಿನಗಳಲ್ಲಿ ಒಂದಿಡೀ ಜನಸ್ತೋಮವನ್ನು ಸಾವಿರ ವರ್ಷ ಹಿಂದಕ್ಕೆ ಒಯ್ಯಬಲ್ಲ, ಅಲ್ಲಿನ ಲಕ್ಷಾಂತರ ವರ್ಷದ ಸಂಸ್ಕೃತಿಯನ್ನು ಕ್ಷಣಗಳಲ್ಲಿ ನಾಶಪಡಿಸಬಲ್ಲ ಮನುಷ್ಯನ ಆವಿಷ್ಕಾರವೇ ಯುದ್ಧ. ಯುದ್ಧವು ಕೇವಲ ಬಡ, ಅಸಮರ್ಥ ದೇಶಗಳನ್ನಷ್ಟೇ ಬದಲಿಸುವುದಿಲ್ಲ.

ದೇಶ ಶಾಶ್ವತವಾಗಿ ಬದಲಾಗಿಹೋಗಲಿಕ್ಕೆ ಬಲಿಷ್ಠ ರಾಷ್ಟ್ರಗಳ ಮೇಲೆ ಚಿಕ್ಕದೆನಿಸುವ ದಾಳಿಯೂ ಸಾಕಾಗುತ್ತದೆ. ಚಿಕ್ಕ ದಾಳಿ ಯುದ್ಧವಾಗಿಬಿಡಲಿಕ್ಕೆ ಈಗ ಹೆಚ್ಚಿನ ಸಮಯ ಬೇಕಾಗಿಲ್ಲ. ೨೦೦೧ ಸೆಪ್ಟೆಂಬರ್ ೧೧ರಂದು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಾದ ದಾಳಿಯನ್ನೇ ತೆಗೆದುಕೊಳ್ಳಿ. ಇದು ಅಮೆರಿಕವನ್ನು ಕೂಡ ಶಾಶ್ವತವಾಗಿ ಬದಲಿಸಿತು. ಇಂದಿಗೂ ಇಲ್ಲಿನ ವ್ಯವಹಾರ, ಮಾತುಕತೆಗಳಲ್ಲಿ before 9-11, after 9-11 ಎಂದು ಹೋಲಿಕೆ ಮಾಡು ವುದಿದೆ.

ದೇಶ ಬದಲಾಗುವುದೆಂದರೆ ಏನು? ಅಲ್ಲಿನ ವ್ಯವಸ್ಥೆ, ಕಾನೂನು, ಜನರ ಬದುಕು, ನಂಬಿಕೆ, ದ್ವೇಷ, ಶತ್ರುತ್ವ, ಬೇಹುಗಾರಿಕೆ ಹೀಗೆ ಎಲ್ಲವೂ ಶಾಶ್ವತವಾಗಿ ಬದಲಾಗಿಬಿಡುವುದು. ಅಂದು ಅಮೆರಿಕದಲ್ಲಿನ ಆ ಘಟನೆಯಲ್ಲಿ ಸತ್ತವರ ಸಂಖ್ಯೆ ‘ಕೇವಲ’ ೨೯೯೬. ಕೇವಲ ಎನ್ನಲಿಕ್ಕೆ ಕಾರಣವಿದೆ. ಬಹುಶಃ ಅವ
ರೆಲ್ಲರೂ ದಾಳಿಯಾದ ಕೆಲವೇ ಗಂಟೆ ಅಥವಾ ದಿನ ಎರಡರಲ್ಲಿ ಸತ್ತವರು. ಆದರೆ ಇಂದಿಗೂ ಆ ದಾಳಿ ಇಲ್ಲಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಅಮೆರಿಕದ ಇಡೀ ಆಂತರಿಕ ರಕ್ಷಾಣಾ ವ್ಯವಸ್ಥೆ ಇದರಿಂದ ಬದಲಾಗಿದೆ. ಅದರ ಪರಿಣಾಮಗಳು ಇಂದಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಬಾಧಿಸುತ್ತಿವೆ.

ಈ ದಾಳಿಯ ಪ್ರತಿದಾಳಿ ಯುದ್ಧದ ಪರಿಣಾಮ ಏನಾಯಿತು? ಅಮೆರಿಕ-ಆಫ್ಘನ್ ಯುದ್ಧ ಬರೋಬ್ಬರಿ ಇಪ್ಪತ್ತು ವರ್ಷ ನಡೆಯಿತು. ಅಂದು ಅಮೆರಿಕಕ್ಕೆ ಬಿನ್ ಲಾಡೆನ್‌ನನ್ನು ಕೊಲ್ಲುವುದೇ ಉದ್ದೇಶವಾಗಿತ್ತಲ್ಲ. ಅವನು ಸಿಕ್ಕಿದ್ದು ಪಾಕಿಸ್ತಾನದಲ್ಲಿ. ಅವನನ್ನು ರೋಚಕವಾಗಿ ಕೊಂದದ್ದು, ದೇಹವನ್ನು
ಸಮುದ್ರದ ಅಜ್ಞಾತ ಜಾಗದಲ್ಲಿ ಫ್ಲಶ್ ಮಾಡಿದ್ದು ಎಲ್ಲ ಆಯಿತಲ್ಲ. ಆದರೂ ಯುದ್ಧ ನಿಲ್ಲಲಿಲ್ಲ. ಆಫ್ಘನ್‌ನ ಈ ಎರಡು ದಶಕದ ಯುದ್ಧದಲ್ಲಿ ಸತ್ತವರ ಒಟ್ಟೂ ಸಂಖ್ಯೆ ೧೭೬,೦೦೦! ಈ ಸಂಖ್ಯೆಯ ಹೋಲಿಕೆಗೆ ಅಮೆರಿಕದಲ್ಲಿ ಸತ್ತವರು ಕೇವಲ ಅಷ್ಟು ಎಂದು ಹೇಳಿದ್ದು. ಈಗ ಇಸ್ರೇಲಿನ ಯುದ್ಧವನ್ನೇ ತೆಗೆದು
ಕೊಳ್ಳಿ.

ಅಂದು ಹಮಾಸ್ ದಾಳಿಯಲ್ಲಿ ಇಸ್ರೇಲಿನಲ್ಲಿ ಸತ್ತವರೆಷ್ಟು? ಕೇವಲವೆನ್ನಬೇಕಾದಷ್ಟು. ೧೧೪೩. ಅದಕ್ಕೆ ಪ್ರತ್ಯುತ್ತರ ವಾಗಿ ಈಗ ಗಾಜಾದಲ್ಲಿ ಸತ್ತವರು? ೩೨ ಸಾವಿರ. ಗಾಯಗೊಂಡವರು ೭೫ ಸಾವಿರ. ಯುದ್ಧದ ಭೀಕರತೆಯನ್ನು ಸತ್ತ, ಗಾಯಗೊಂಡ ಜನರ ಸಂಖ್ಯೆಗಳಲ್ಲಿ ಅಳೆಯುವಾಗ ಹಿಂಸೆಯಾಗುತ್ತದೆ. ಆದರೆ ಅದುವೇ ಆಧುನಿಕ ಯುದ್ಧವನ್ನು ಅಂದಾಜಿಸುವ ಮಾಪಕವಾಗಿದೆ. ಈ ಎಲ್ಲ ಯುದ್ಧಗಳಲ್ಲಿ ಆದ ಸಾವು-ನೋವುಗಳಿಗೆ, ಮನುಷ್ಯ ಕೃತ ವಿಕೃತಿ ಗಳಿಗೆ ಸಮಜಾಯಿಷಿ ಇಲ್ಲದಿದ್ದರೂ ಈ ಕೆಲವು ಯುದ್ಧಗಳನ್ನು ಜಗತ್ತು ಒಪ್ಪಲು ಕಾರಣಗಳಿವೆ. ಆದರೆ ಕೆಲವೊಮ್ಮೆ ಹೀಗಾಗುವುದಿದೆ. ಯುದ್ಧದ ನೆರಳಿ ನಲ್ಲಿಯೇ ಇನ್ನೊಂದು ಯುದ್ಧ ನಡೆದು ಒಂದರ ಭೀಕರತೆ ಇನ್ನೊಂದಕ್ಕಿಂತ ಜಾಸ್ತಿಯೆನಿಸಿ, ಚಿಕ್ಕ ಯುದ್ಧವನ್ನು ಜಗತ್ತೇ ಸಂಪೂರ್ಣ ಅಲಕ್ಷಿಸುವುದಿದೆ.

ಅಷ್ಟೇ ಅಲ್ಲ, ಒಬ್ಬ ನಾಯಕನ ಹುಂಬತನ, ಮೂರ್ಖತನ, ಅಥವಾ ಇನ್ನೇನೋ ಚಿಕ್ಕಪುಟ್ಟ ಕಾರಣಕ್ಕೆ ಯುದ್ಧವಾಗುವುದು ಮಹಾಭಾರತದ ಕಾಲಕ್ಕಷ್ಟೇ ಸೀಮಿತವಾಗಿಲ್ಲ, ಇಂದಿಗೂ ಇದೆ. ದುರಂತವೆಂದರೆ ಅಂಥ ಮೂರ್ಖ ತನದಿಂದ ಶುರುವಾದ ಯುದ್ಧಕ್ಕೆ ಕನಿಷ್ಠ ಸಮಜಾಯಿಷಿಯನ್ನೂ ಜಗತ್ತು ಕೇಳುವುದೇ ಇಲ್ಲ. ಅಲಕ್ಷಿಸಿ ಮರೆತುಬಿಡುತ್ತದೆ. ಅಷ್ಟೇ ಅಲ್ಲ, ಯಾರೋ ಒಬ್ಬ ವ್ಯಕ್ತಿ ನಾಯಕನ ಕಿವಿ ಊದಿ ಅದುವೇ ಭೀಕರ ಯುದ್ಧವಾಗಿಬಿಡುವುದು ಇಂದೂ ಇದೆ.

ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ಮಾಡಿದ ಭಯೋತ್ಪಾದಕರೆಲ್ಲ ಮೂಲ ಸೌದಿಅರೇಬಿಯಾ ಪ್ರಜೆಗಳು. ಅಮೆರಿಕದಲ್ಲಿಯೇ ವಿಮಾನ ಹಾರಿಸಲು ಕಲಿತು, ವಿಮಾನವನ್ನು ಹೈಜಾಕ್ ಮಾಡಿ ವರ್ಲ್ಡ್ ಟ್ರೇಡ್ ಸೆಂಟರ್‌ನ ಮೇಲೆ ದಾಳಿಮಾಡಿದ್ದರು. ಈ ದಾಳಿಯಾದ ಕೆಲವೇ ನಿಮಿಷಗಳಲ್ಲಿ, ಇದೆಲ್ಲದರ ಹಿಂದೆ ಬಿನ್ ಲಾಡೆನ್ ಎಂಬ ಭಯೋತ್ಪಾದಕನಿದ್ದಾನೆ ಎಂಬುದು ಇಂಟೆಲಿಜೆನ್ಸ್ ವರದಿಗಳಿಂದ ಅಮೆರಿಕಕ್ಕೆ ಸ್ಪಷ್ಟವಾಗಿತ್ತು. ಬಿನ್ ಲಾಡೆನ್ ಏನೋ ಒಂದು ದೊಡ್ಡ ಪ್ರಮಾಣದ ದಾಳಿಯನ್ನು ಅಮೆರಿಕದ ಮೇಲೆ ಮಾಡಲಿಕ್ಕಿದ್ದಾನೆ ಎಂಬ ಮಾಹಿತಿ ಅಮೆರಿಕಕ್ಕೆ ಅದಾಗಲೇ ಇತ್ತು. ಆದರೆ ಅಮೆರಿಕನ್ ಬೇಹುಗಾರಿಕೆಗೆ ಈ ದಾಳಿ ಅಮೆರಿಕದ ನೆಲದಲ್ಲಿಯೇ ಆಗುವುದಿದೆ ಎಂಬ ಸುಳಿವಿರಲಿಲ್ಲ.

ಅವರು ಅಮೆರಿಕ ಸೈನಿಕರು ಮಧ್ಯಪ್ರಾಚ್ಯದಲ್ಲೆಲ್ಲ ಕ್ಯಾಂಪ್ ಮಾಡಿಕೊಂಡಿರುವಾಗ ಅಲ್ಲಿಯೇ ಯಾವುದೋ ಒಂದು ಅಮೆರಿಕನ್ ಸೈನ್ಯದ ಪೋಸ್ಟ್‌ನ ಮೇಲೆ ದಾಳಿಯಾಗಬಹುದು ಎಂದು ಎಚ್ಚರಿಕೆ ಹೆಚ್ಚಿಸಿಕೊಂಡಿದ್ದರು. ಆದರೆ ದಾಳಿಯಾಯಿತು, ಅದೇ ಬಿನ್ ಲಾಡೆನ್ ಮಾಡಿದ ದಾಳಿ, ಆದದ್ದು ಮಾತ್ರ ಅಮೆರಿಕದ ನೆಲದಲ್ಲಿ, ಜಾಗತಿಕ ಆರ್ಥಿಕ ಕೇಂದ್ರವಾದ ನ್ಯೂಯಾರ್ಕ್‌ನ ಮೇಲೆ, ಇಲ್ಲಿನ ಎರಡು ಅತ್ಯಂತ ಎತ್ತರದ ಕಟ್ಟಡ, ವಿಶ್ವ ವಾಣಿಜ್ಯ ಕೇಂದ್ರದ ಮೇಲೆ. ಅಂದು ಧರೆಗುರು ಳಿದ್ದು ಎರಡು ಬಿಲ್ಡಿಂಗುಗಳಷ್ಟೇ ಆಗಿರಲಿಲ್ಲ. ಅಮೆರಿಕದ ಎರಡು ಕೊಂಬುಗಳೇ ಮುರಿದಿದ್ದವು. ಅಂದು ಅಮೆರಿಕದ ಅಧ್ಯಕ್ಷ ರಾಗಿದ್ದುದು ಜಾರ್ಜ್ ಬುಷ್. ಅವರಿಗೆ ಸುಮ್ಮನಿರಲಿ ಕ್ಕಾಗುತ್ತದೆಯೇ? ಈ ಘಟನೆಗೆ ಕಾರಣರಾದವರನ್ನು ಶಿಕ್ಷಿಸಬೇಕಲ್ಲ.

ಮುಖ್ಯವಾಗಿ ಆ ಶಿಕ್ಷೆ ಅಮೆರಿಕಕ್ಕಾದ ಆಘಾತದಷ್ಟೇ ಬಲವಾದದ್ದಾಗಿರಬೇಕಲ್ಲ. ಜಗತ್ತಿನ ಬಲಿಷ್ಠ ರಾಷ್ಟ್ರವೆಂದಾದಲ್ಲಿ ಅಲ್ಲಿನ ಜನಸಾಮಾನ್ಯ ರಲ್ಲಿಯೂ ಅದೇ ಭಾವ ಗಟ್ಟಿಯಾಗಿ ನೆಲೆಯೂರಿರುತ್ತದೆ. ನಮ್ಮ ದೇಶ ಅತ್ಯಂತ ಬಲಿಷ್ಠ ಎಂದರೆ ಹೆಮ್ಮೆ ಪಡುವುದು ಸಹಜ. ಆ ಹೆಮ್ಮೆಗೆ, ಹಿರಿಮೆಗೆ ಬಿದ್ದ ಹೊಡೆತ ಆ ದಾಳಿ. ಇಡೀ ದೇಶಕ್ಕೇ ಆದ ಆಘಾತದಿಂದಾಗಿ ಅಮೆರಿಕನ್ನರೆಲ್ಲ ಪ್ರತೀಕಾರಕ್ಕೆ ಹಾತೊರೆಯುತ್ತಿದ್ದರು. ಪುಲ್ವಾಮಾ ದಾಳಿಯ ನಂತರ ನಾವು ಪ್ರತೀಕಾರ ಬಯಸಿದಂತೆ. ದಾಳಿ ಮಾಡಿದವರ ಹೆಡೆಮುರಿಯಬೇಕು, ಅಂತ್ಯವಾಗಿಸ ಬೇಕು ಇದು ಬುಷ್ ಎದುರಿಗಿದ್ದ ಆ ಕ್ಷಣದ ಅನಿವಾರ್ಯತೆ.

೯-೧೧ ದಾಳಿಯಾದ ಎರಡು ದಿನಗಳ ನಂತರ ಬುಷ್ ಮತ್ತು ದೇಶದ ಪ್ರಮುಖರು ಕ್ಯಾಂಪ್ ಡೇವಿಡ್ ಎಂಬ ಅಜ್ಞಾತ ಸ್ಥಳದಲ್ಲಿ ಸೇರಿದ್ದರು. ಈ ದಾಳಿಯ ರೂವಾರಿ ಲಾಡೆನ್ ಇದ್ದದ್ದು ಅಫ್ಘಾನಿಸ್ತಾನದಲ್ಲಿ. ಇಡೀ ದೇಶವೇ ಸುಡುಬಿಸಿಲಿನ, ಬರಡು ಗುಡ್ಡ ಗುಡ್ಡವಾಗಿರುವಾಗ ಎಲ್ಲೆಂದು ಹುಡುಕುವುದು? ಒಟ್ಟಾರೆ ಪ್ರತಿದಾಳಿಯ ಯೋಜನೆಯ ಮೀಟಿಂಗುಗಳು ಬೆಳಗ್ಗಿನಿಂದ ನಡೆದಿದ್ದವು. ಹೀಗಿರುವಾಗ ಅಧ್ಯಕ್ಷ ಬುಷ್ ಮೀಟಿಂಗುಗಳ ನಡುವಿನ ವಿಶ್ರಾಂತಿಯ ಸಮಯದಲ್ಲಿ ಕುರ್ಚಿಯೊಂದರಲ್ಲಿ ಕಾಫಿ ಕುಡಿಯುತ್ತ ಏಕಾಂತದಲ್ಲಿದ್ದರು.

ಆಗ ಅವರ ಬಳಿ ಬಂದು ಅಲ್ಲಿಯೇ ಇದ್ದ ಕುರ್ಚಿಯನ್ನು ಎಳೆದು ಕೂತ ವ್ಯಕ್ತಿ ಪೌಲ್ ವೂಲ್ ವಿಟ್ಜ್. ಮೂರನೇ ದರ್ಜೆಯ ರಕ್ಷಣಾ ಉಪಕಾರ್ಯದರ್ಶಿ. ಸಾಮಾನ್ಯವಾಗಿ ಮುಖ್ಯ ಕಾರ್ಯದರ್ಶಿಯೇ ಅಧ್ಯಕ್ಷರ ಜತೆ ಮಾತನಾಡುವುದು. ಆದರೆ ಪೌಲ್ ಅದನ್ನು ಮೀರಿ ಬುಷ್ ಜತೆ ಮಾತಿಗಿಳಿದಿದ್ದ. ‘ಲುಕ್ ಮಿಸ್ಟರ್ ಪ್ರೆಸಿಡೆಂಟ್, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಕೊನೆಯಾಗಿಸುವುದು ಅಮೆರಿಕಕ್ಕೆ ಒಂದು ದೊಡ್ಡ ವಿಷಯವೇ ಅಲ್ಲ. ನೀವು ಆe ಮಾಡಿದ ಒಂದು ವಾರದಲ್ಲಿ ತಾಲಿಬಾನ್ ಸರಕಾರವನ್ನು ತೆಗೆಯಲು ನಾವು ಸಮರ್ಥರು. ಬರೀ ಬಿನ್ ಲಾಡೆನ್ ಎಂಬ ಆಸಾಮಿಯೊಬ್ಬನನ್ನು ಕೊಂದು ಬಿಟ್ಟರೆ ಅಥವಾ ಆ ದರಿದ್ರ ದೇಶದ ಅಸಮರ್ಥ, ದುರ್ಬಲ ಸೈನ್ಯವುಳ್ಳ ತಾಲಿಬಾನ್ ಸರಕಾರವನ್ನು ಉರುಳಿಸಿದರೆ ಆ ಪ್ರತೀಕಾರವನ್ನು ಅಮೆರಿಕದ ಜನರು ಒಪ್ಪುತ್ತಾರೆಯೇ?’ ಎಂದು ಮಾತು ಮುಂದುವರಿಸಿದ. ಇದನ್ನು ಕೇಳಿದ್ದೇ ಬುಷ್‌ಗೆ ಹೌದಲ್ಲ ಎಂದೆನಿಸಿತು.

ಈಗ ಬೇಕಾಗಿದ್ದು ಬಲವಾದ, ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರವಾಗಬಹುದಾದ ಪ್ರತೀಕಾರ. ‘ಸರಿ, ಈಗ ಇದಕ್ಕೆ ಪರಿಹಾರವೇನು? ಇನ್ಯಾರ ಮೇಲೆ ದಾಳಿ ಮಾಡಬಹುದು’ ಎಂದು ಬುಷ್ ಉಪಕಾರ್ಯ ದರ್ಶಿ ಪೌಲ್‌ನನ್ನೇ ಕೇಳಿದರು. ಆಗ ಅವನು ಹೇಳಿದ್ದು ‘ಇರಾಕ್!’. ಇರಾಕ್ ಎಂದಾಕ್ಷಣ ಬುಷ್‌ರ ಇಷ್ಟಗಲದ ಕಿವಿ ಇನ್ನಷ್ಟು ಅರಳಿಕೊಂಡಿತು. ಅದಕ್ಕೆ ಇನ್ನೊಂದು ಕಾರಣವಿತ್ತು. ಜಾರ್ಜ್ ಬುಷ್‌ರ ತಂದೆ ಸೀನಿಯರ್ ಬುಷ್ ಕೂಡ ಅಮೆರಿಕದ ಅಧ್ಯಕ್ಷರಾಗಿದ್ದವರು. ೧೯೮೯ರಿಂದ ೧೯೯೩ರವರೆಗೆ. ಅದಕ್ಕಿಂತ ಮೊದಲು ರೇಗನ್ ಸರಕಾರದಲ್ಲಿ ಅಮೆರಿಕದ ಉಪಾಧ್ಯಕ್ಷರಾಗಿದ್ದವರು. ಸೀನಿಯರ್ ಬುಷ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಇರಾಕ್‌ನ ಸದ್ದಾಂ ಹುಸೇನ್ ಪಕ್ಕದ ದೇಶವಾದ ಕುವೈತ್‌ನ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಿದ್ದ.

ಆಗ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪ್ರಾಬಲ್ಯ ಸಾಕಷ್ಟಿತ್ತು. ಹೀಗಾಗಿ ಸದ್ದಾಂ ಹುಸೇನ್ ನ ಕುವೈತ್ ದಾಳಿ ಸೀನಿಯರ್ ಬುಷ್‌ರ ಅಧ್ಯಕ್ಷತೆಯನ್ನೇ ಪ್ರಶ್ನಿಸಿತ್ತು. ಹೀಗಿರುವಾಗ ಅಮೆರಿಕ ಪ್ರತಿದಾಳಿ ಮಾಡಿ, ಸುಮಾರು ೪೧ ದಿನಗಳ ಕಾಲ ಕಾದಾಡಿ ಸದ್ದಾಂ ಸೈನ್ಯವನ್ನು ಹೊರಕ್ಕಟ್ಟಿತ್ತು. ಸದ್ದಾಂ ಹುಸೇನ್‌ ನಲ್ಲಿ ಸ್ವತಃ ಸೀನಿಯರ್ ಬುಷ್ ಕೋರಿಕೊಂಡರೂ ಅಂದು ಸದ್ದಾಂ ಹಿಂದೆ ಸರಿದಿರಲಿಲ್ಲ. ಅವನೋ ಸರ್ವಾಧಿಕಾರಿ. ಅದಾಗಲೇ ಪೆಟ್ರೋಲ್ ಮತ್ತು ಧಾರ್ಮಿಕ ಕಾರಣ ಮುಂದಿಟ್ಟು ತನ್ನದೇ ನೆಲದಲ್ಲಿ ಸುಮಾರು ಐವತ್ತು ಸಾವಿರ ಕುರ್ದಿಶ್ ಜನಾಂಗದವರನ್ನು ನರಮೇಧ ಮಾಡಿದ್ದ. ಕುವೈತ್ ಅವನಿಗೆ ಅಹಂ ಮತ್ತು ಪೆಟ್ರೋಲ್ ನಿಕ್ಷೇಪದ ಕಾರಣಕ್ಕೆ ಬೇಕಿತ್ತು.

ಒಟ್ಟಾರೆ ಸೀನಿಯರ್ ಬುಷ್ ಮತ್ತು ಸದ್ದಾಂ ಹುಸೇನ್ ನಡುವೆ ವೈಷಮ್ಯವಿತ್ತು, ಮನಸ್ತಾಪವಿತ್ತು. ಗಲ್ ಯುದ್ಧದ ತರುವಾಯ ಇರಾಕ್ ಅಮೆರಿಕದ ಪ್ರಬಲ ವಿರೋಧಿಯೆನಿಸಿಕೊಂಡಿತ್ತು. ಅಧ್ಯಕ್ಷ ಜೂನಿಯರ್ ಬುಷ್ (ಜಾರ್ಜ್ ಡಬ್ಲ್ಯೂ ಬುಷ್) ಕಿವಿ ಅರಳಲಿಕ್ಕೆ ಮೊದಲ ಕಾರಣ ಅವನ ತಂದೆಗೆ ಸದ್ದಾಂ
ಮೇಲಿದ್ದ ಸಿಟ್ಟು, ದ್ವೇಷ. ‘ಅಂದು ನಿಮ್ಮ ತಂದೆ ಮಾಡಲಿಕ್ಕಾಗ ದಿದ್ದುದನ್ನು ಈಗ ನೀವು ಮಾಡಬೇಕು, ಇರಾಕ್ ವಶಪಡಿಸಿಕೊಂಡು ಸದ್ದಾಂನನ್ನು ಕೊಲ್ಲಬೇಕು. ಇರಾಕ್, ಅಲ್ಲಿನ ತೈಲ ನಿಮ್ಮ ತಂದೆ ಅಂದುಕೊಂಡಂತೆ ನಮ್ಮದಾಗಬೇಕು. ಇದು ಅದೆಲ್ಲದಕ್ಕೆ ಸರಿಯಾದ ಕಾಲ. ಅಲ್ಲದೆ ಸದ್ದಾಂನ ಮೇಲೆ ದಾಳಿ ಮಾಡಿದರೆ ಮಾತ್ರ ಅಮೆರಿಕನ್ನರು ಸಮಾಧಾನವಾಗುವುದು’ ಎಂದು ಮೆಲ್ಲಗೆ ಹೇಳಿದ್ದು ಅದೇ ಉಪಕಾರ್ಯದರ್ಶಿ ಪೌಲ್.

ಅಧ್ಯಕ್ಷ ಬುಷ್ ಇದನ್ನು ತನ್ನ ಮಂತ್ರಿವರ್ಗದ ಮುಂದಿಟ್ಟಾಗ ಅವರೆಲ್ಲರೂ ಇದನ್ನು ಒಪ್ಪಲೇ ಇಲ್ಲ. ಅಧ್ಯಕ್ಷ ಬುಷ್ ಮಾತ್ರ ಅಪ್ಪನ ಕಾರ್ಯವನ್ನು ನಾನು ಮುಂದುವರಿಸಿ ಮುಗಿಸಿಯೇ ಸಿದ್ಧ ಎಂದು ಅವಡುಗಚ್ಚಿ ಕೂತಿದ್ದರು. ತಾಲಿಬಾನ್ ಆಡಳಿತವನ್ನು ಕೊನೆ ಮಾಡಿ ಆ ದೇಶವನ್ನು ತನ್ನ ಆಡಳಿತಕ್ಕೆ ಒಳಪಡಿಸುವುದು ಅಮೆರಿಕಕ್ಕೆ ಜುಜುಬಿ ಕೆಲಸವಾಗಿತ್ತು ಎಂಬುದು ಸತ್ಯವಾಗಿತ್ತು. ಅಮೆರಿಕದ ಮೇಲೆ ದಾಳಿಯಾಗಿದ್ದು ಸೆಪ್ಟೆಂಬರ್ ೧೧ರಂದು. ಅಕ್ಟೋಬರ್ ೭ಕ್ಕೆ ತಾಲಿಬಾನ್ ಆಡಳಿತ ಅಂತ್ಯವಾಗಿಸಿ ಆಗಿತ್ತು. ಕೆಲವೇ ದಿನ ಗಳಲ್ಲಿ ಅಮೆರಿಕ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇಷ್ಟೇ ಪ್ರತೀಕಾರ ಸಾಕಾಗುವುದಿಲ್ಲ ಎಂಬ ಭಾವನೆ ಜನಮಾನಸದಲ್ಲಿ ಬಲವಾಗುತ್ತಾ ಹೋಯಿತು. ಹಾಗಾಗಿ ಇರಾಕ್ ದಾಳಿ ಅವರನ್ನು ಸಮಾಧಾನ ಪಡಿಸಬಹುದಿತ್ತು. ಆದರೆ ಇಲ್ಲಿ ಒಂದು ಸಮಸ್ಯೆಯಿತ್ತು. ದಾಳಿ ಮಾಡಿದ್ದು ಬಿನ್ ಲಾಡೆನ್. ಹೀಗಿರುವಾಗ ಸದ್ದಾಂ ಹುಸೇನ್‌ನನ್ನು ಕೊಲ್ಲುವುದನ್ನು, ಇರಾಕನ್ನು ವಶಪಡಿಸಿಕೊಳ್ಳುವುದನ್ನು ಸಮರ್ಥಿಸುವುದು ಹೇಗೆ? ಇರಾಕ್ ಅಫ್ಘಾನಿಸ್ತಾನದ ಪಕ್ಕದ ದೇಶವೂ ಅಲ್ಲ.

ಅಮೆರಿಕನ್ನರನ್ನು ಇದೆಲ್ಲದಕ್ಕೆ ಒಪ್ಪಿಸುವುದು ಹೇಗೆ? ಅಧ್ಯಕ್ಷ ಬುಷ್ ತಮ್ಮ ಪಟ್ಟನ್ನು ಸಡಿಲಿಸದಿದ್ದಾಗ ಕೊನೆಯಲ್ಲಿ ಎಲ್ಲರೂ ಅದನ್ನೇ ಒಪ್ಪಿಕೊಳ್ಳ ಬೇಕಾಯಿತು. ಅಧ್ಯಕ್ಷರ ಆಜ್ಞೆ ಮೀರು ವುದು ಹೇಗೆ? ಆಗ ಕೆಲಸಕ್ಕೆ ಇಳಿದದ್ದು ಅಮೆರಿಕದ ಯುದ್ಧ ಯಂತ್ರ- ವಾರ್ ಮಷಿನ್. ಬುಷ್, ಮಂತ್ರಿವರ್ಗ, ವಿದೇಶಾಂಗ ಸಚಿವರು ಹೀಗೆ ಎಲ್ಲರೂ ಮಾರನೆಯ ದಿನವೇ ಬಿನ್ ಲಾಡೆನ್‌ಗೆ ಸಹಾಯ ಮಾಡಿದ್ದು ಸದ್ದಾಂ ಹುಸೇನ್ ಎಂದರು. ಆದರೆ ಸಾಕ್ಷ್ಯವಿರಲಿಲ್ಲ. ಆಗ ಅದೇ ಬುಷ್ ಸರಕಾರ ಇನ್ನೊಂದು ಹೊಸ ವರಾತ ಶುರುಮಾಡಿಕೊಂಡಿತು. ಸದ್ದಾಂ ಹುಸೇನ್ ಹತ್ತಿರ ಅಣ್ವಸ್ತ್ರವಿದೆ, ಜೈವಿಕ ಶಸ್ತ್ರಾಸ್ತ್ರಗಳಿವೆ, ರಾಸಾಯನಿಕ ಶಸ್ತ್ರಾಸ್ತ್ರವೂ ಇದೆ. ಇದು ಇಡೀ ಅಮೆರಿಕವನ್ನು ೪೫ ನಿಮಿಷದಲ್ಲಿ ಮುಗಿಸಿಬಿಡಬಹುದು ಎಂಬ ಗುಲ್ಲೆಬ್ಬಿಸಲಾಯಿತು.

ಗಲ್ಫ್ ಯುದ್ಧದಿಂದಾಗಿ ಅದಾಗಲೇ ಸದ್ದಾಂ ಅಮೆರಿಕ ನ್ನರ ಪಾಲಿಗೆ ವಿಲನ್ ಆಗಿದ್ದ. ಹೀಗಾಗಿ ದಿನಕಳೆಯುವುದರೊಳಗೆ ಅಮೆರಿಕನ್ ಪ್ರಜೆಗಳೆಲ್ಲ ಬುಷ್ ಬೆನ್ನಿಗೆ ನಿಂತು ಬಿಟ್ಟರು. ಯುದ್ಧ ಶುರುವಾಯಿತು. ಎಂಟು ವರ್ಷ ನಡೆಯಿತು. ಮುಗಿಯಿತು. ಈ ಯುದ್ಧದಲ್ಲಿ ಒಂದು ಲಕ್ಷ ಮಂದಿ ಸತ್ತರು. ಕೊನೆಗೆ ಸದ್ದಾಂ ಸೆರೆ ಸಿಕ್ಕ. ಅವನನ್ನು ಗಲ್ಲಿಗೇರಿಸಲಾಯಿತು. ‘ಡೆವಿಲ್ಸ್ ಡಬಲ್’ ಎಂಬ ಚಲನಚಿತ್ರವೊಂದಿದೆ. ಇದು ಸದ್ದಾಂ ಹುಸೇನ್‌ನ ಮಗನನ್ನಾಧರಿಸಿದ ಚಿತ್ರ. ಈ ಚಲನಚಿತ್ರ ಸತ್ಯಕಥೆಯಾದದ್ದರಿಂದ ವಿಶೇಷ. ಉದಯ್ ಹುಸೇನ್‌ನ ಕ್ರೌರ್ಯ ಮತ್ತು ವಿಕೃತಿಯ ಸುತ್ತ ಹೆಣೆದ ಚಿತ್ರದಲ್ಲಿ ಸದ್ದಾಂ ಒಬ್ಬ ಅಸಹಾಯಕ ತಂದೆಯಂತೆ ಕಾಣಿಸುತ್ತಾನೆ. ಸದ್ದಾಂ ಹುಸೇನ್‌ನ ಮೇಲಿರುವ ಅರ್ಧ ಪಾಲು ಡಾಕ್ಯುಮೆಂಟರಿಗಳು ಅವನ ವ್ಯಕ್ತಿತ್ವದ ಇನ್ನೊಂದು ರೂಪವನ್ನು, ಅವನಿಗೆ ಇದ್ದ ಅನಿವಾರ್ಯತೆಯನ್ನು ವಿವರಿಸುತ್ತವೆ.

ಅಮೆರಿಕದ ರೂಪಕ ಗಳು ಮತ್ತು ಈ ದೃಷ್ಟಿಕೋನ ತದ್ವಿರುದ್ಧ. ಎರಡನ್ನೂ ನಂಬುವಂತಿದೆ, ಅನುಮಾನಿಸುವಂತಿದೆ. ಸ್ವಲ್ಪ ಆಳಕ್ಕಿಳಿದು ನೋಡಿದರೆ
ಗೊಂದಲವಾಗುತ್ತದೆ. ಇಲ್ಲಿ ಯಾರು ಸರಿ, ಯಾರದ್ದು ತಪ್ಪು ಎಂಬುದೇ ತಿಳಿಯದಂತಾಗುತ್ತದೆ. ಸದ್ದಾಂ ಒಬ್ಬ ನೀಚನೆನ್ನುವುದರಲ್ಲಿ ಅನುಮಾನವಿಲ್ಲ. ಅವನು ಶಿಕ್ಷಾರ್ಹನೇ ಆಗಿದ್ದ. ಆದರೆ ಅಮೆರಿಕದ ಈ ದಾಳಿ, ಅದರಲ್ಲಾದ ಅಮಾಯಕರ ಸಾವು-ನೋವನ್ನು ಒಪ್ಪುವುದು ಹೇಗೆ? ಅಷ್ಟಕ್ಕೂ ಕಾರಣವೇ
ಇಲ್ಲದೆ ಅಮೆರಿಕ ಇನ್ನೊಂದು ದೇಶದ ಮೇಲೆ ದಾಳಿ ಮಾಡಿದ್ದು ಸರಿಯೇ? ಹಾಗೆ ಕೇಳಲು ಕಾರಣವಿದೆ. ಅಮೆರಿಕ ಸದ್ದಾಂನನ್ನು ಮುಗಿಸಲು ಕೊಟ್ಟ ಕಾರಣ ಆತನಲ್ಲಿದೆ ಎನ್ನಲಾದ ಅಣ್ವಸ್ತ್ರ, ಅಸಂಖ್ಯ ಜನರನ್ನು ಏಕಕಾಲದಲ್ಲಿ ಕೊಲ್ಲಬಹುದಾದ ಅಣ್ವಸ್ತ್ರ, ಜೈವಿಕ, ರಾಸಾಯನಿಕ ಶಸ್ತ್ರಾಸ್ತ್ರಗಳು. ಯುದ್ಧ ಮುಗಿದು, ಸದ್ದಾಂ ಸತ್ತು ಇಷ್ಟು ವರ್ಷವಾದರೂ ಯಾರಿಗೂ ಇಂಥ ಯಾವುದೇ ಶಸಾಸ ಅಲ್ಲಿ ಸಿಕ್ಕಿಯೇ ಇಲ್ಲ.

ಅಮೆರಿಕದಲ್ಲಿ ಇಂತಿಷ್ಟು ವರ್ಷದ ನಂತರ ಗೌಪ್ಯಮಾಹಿತಿ ಗಳನ್ನು ಬಹಿರಂಗಪಡಿಸಬೇಕೆನ್ನುವ ಕಾನೂನಿದೆ. ಅದರ ಪ್ರಕಾರ ಇತ್ತೀಚೆಗೆ ಹೊರಬಂದ ಮಾಹಿತಿಯಂತೆ ಅಧ್ಯಕ್ಷ ಬುಷ್ ಮತ್ತು ಅವರ ಆಡಳಿತಕ್ಕೆ, ಸದ್ದಾಂ ಹತ್ತಿರ ಇಂಥ ಯಾವುದೇ ಶಸಾಸವಿರಲಿಲ್ಲ ಎಂಬ ಸ್ಪಷ್ಟ ಮಾಹಿತಿಯಿತ್ತಂತೆ.
ಆದಾಗ್ಯೂ ಬುಷ್ ಈ ಯುದ್ಧ ಮಾಡಿದ್ದರು. ಕಾರಣ ಬುಷ್‌ಗೆ ಸದ್ದಾಂ ಮೇಲೆ ಇದ್ದ ದ್ವೇಷ. ಅದು ಅವರ ಅಪ್ಪ ಸೀನಿಯರ್ ಬುಷ್‌ನಿಂದ ಬಳುವಳಿಯಾಗಿ ಬಂದದ್ದು. ಜತೆಯಲ್ಲಿ ಅಮೆರಿಕದ ಪೆಟ್ರೋಲ್ ದಾಹ. ಏನೇ ಇರಲಿ, ಈಗ ಇದೆಲ್ಲ ಇತಿಹಾಸ. ಒಬ್ಬ ಮೂರನೇ ದರ್ಜೆಯ ಕಾರ್ಯದರ್ಶಿಯು ಅಧ್ಯಕ್ಷರ ಕಿವಿಯನ್ನು ಅಂದು ಊದಿದ್ದೇ ಒಂದಿಡೀ ಭೀಕರ ಯುದ್ಧಕ್ಕೆ ಮುನ್ನುಡಿಯಾಯಿತು. ಶಕುನಿ, ಮಂಥರೆಯಂಥ ವರು ಅಮೆರಿಕದ ಅಧ್ಯಕ್ಷರ ಪಕ್ಕಕ್ಕಿದ್ದರೆ ಏನಾಗುತ್ತದೆ ಎಂಬುದಕ್ಕೆ ಇರಾಕ್ ಯುದ್ಧವೇ ಸಾಕ್ಷಿ.