Saturday, 14th December 2024

’ರಾಷ್ಟ್ರಪತಿಗಳು ಬೇಕಾಗಿದ್ದಾರೆ’! ಎಂಬ ಜಾಹೀರಾತು ಹೇಗಿರಬಹುದು ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಕೆಲವು ವರ್ಷಗಳ ಹಿಂದೆ, ಖ್ಯಾತ ವಿಡಂಬನಾಕಾರ ಮತ್ತು ಪತ್ರಕರ್ತ ಚೋ.ರಾಮಸ್ವಾಮಿ ತಮ್ಮ ‘ತುಘಲಕ್’ ಪತ್ರಿಕೆಯಲ್ಲಿ ಭಾರತದ ರಾಷ್ಟ್ರಪತಿಗಿರಬೇಕಾದ ಅರ್ಹತೆಗಳನ್ನು ಪಟ್ಟಿ ಮಾಡಿದ್ದರು.

ಒಂದು ವೇಳೆ ‘ಭಾರತಕ್ಕೆ ರಾಷ್ಟ್ರಪತಿಗಳು ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನು ಪತ್ರಿಕೆಗಳಿಗೆ ನೀಡಿದರೆ ಅದು ಹೀಗಿರಬಹುದು ಎಂದು ಅವರು ಅಣಕವಾಡಿದ್ದರು. ನೌಕರಿಯ ಹೆಸರು – ಭಾರತದ ರಾಷ್ಟ್ರಪತಿ ನಿವೃತ್ತರಿಗೆ ಮತ್ತು ವೃದ್ಧರಿಗೆ ಅದ್ಭುತ ಅವಕಾಶ!
ವಯೋಮಿತಿ – 35 ವರ್ಷ. 75 ರಿಂದ 80 ವರ್ಷ ಮೇಲ್ಪಟ್ಟವರಿಗೆ ಆದ್ಯತೆ. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ಮುನ್ನಾ ದಿನ ದೇಶವನ್ನುದ್ದೇಶಿಸಿ ಭಾಷಣ ಮಾಡುವುದು. ಅಂದರೆ ಕಾರ್ಯದರ್ಶಿ ಬರೆದು ಕೊಟ್ಟ 12 ರಿಂದ 15 ಪುಟಗಳನ್ನು
ತಪ್ಪಿಲ್ಲದೇ ಓದುವುದು.

ಅರ್ಜುನ ಪ್ರಶಸ್ತಿ, ಪದ್ಮ ಪ್ರಶಸ್ತಿಗಳನ್ನು ವಿತರಿಸುವುದು. ಹೊಸ ಸಚಿವರಿಗೆ ಪ್ರಮಾಣ ವಚನ ಬೋಧಿಸುವುದು. ಗಲ್ಲಿಗೇರಿಸಿದವರ ಕ್ಷಮಾದಾನ ಕೋರಿಕೆ ಮನವಿಗಳನ್ನು ಸ್ವೀಕರಿಸುವುದು ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು. ಪತ್ನಿ ಮತ್ತು ಮಕ್ಕಳ ಜತೆ ಆಗಾಗ ವಿದೇಶ ಯಾತ್ರೆ ಮಾಡುವುದು.

ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿ, ರಾಷ್ಟ್ರಪತಿ ಭವನಕ್ಕೆ ಬಂದು ಮನವಿಪತ್ರ ನೀಡಿದರೆ ಸ್ವೀಕರಿಸುವುದು ಮತ್ತು
ನಂತರ ರದ್ದಿಗೆ ಹಾಕುವುದು. ವಿದೇಶಿ ಗಣ್ಯರು ಬಂದರೆ, ಅವರನ್ನು ಸ್ವಾಗತಿಸುವುದು ಮತ್ತು ಅವರ ಗೌರವಾರ್ಥ ಭೋಜನ ಕೂಟ ಏರ್ಪಡಿಸುವುದು. ರಾಷ್ಟ್ರಪತಿ ಭವನದ ಮೊಗಲ್ ಗಾರ್ಡನ್‌ನಲ್ಲಿ ಪತ್ನಿಯೊಂದಿಗೆ ವಿಹರಿಸುವುದು.

ಆಗಾಗ ಪ್ರೇಕ್ಷಣೀಯ ಸ್ಥಳ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು. ವರ್ಷಕ್ಕೊಮ್ಮೆ ಜಂಟಿ ಸದನವನ್ನುದ್ದೇಶಿಸಿ ಮಾತಾಡು ವುದು. ಅಲ್ಲಿಯೂ ಬರೆದುಕೊಟ್ಟಿದ್ದನ್ನು ಓದುವುದು. ‘ರಬ್ಬರ್ ಸ್ಟ್ಯಾಂಪ್’ ಎಂದು ಜನ, ಪತ್ರಿಕೆ ಆಗಾಗ ಟೀಕಿಸಿದರೆ, ಅದನ್ನು ಸಹಿಸಿಕೊಳ್ಳುವುದು.

ಸಂಬಳ, ಸೌಕರ್ಯ – ಐದು ಲಕ್ಷ ರುಪಾಯಿ. (ಅವರಿಗೆ ನೀಡಲಾಗುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಲು ಪ್ರತ್ಯೇಕ ಪುಸ್ತಿಕೆ ಯನ್ನು ಓದಬಹುದು) ರಾಷ್ಟ್ರಪತಿ ಕುಟುಂಬದವರಿಗಾಗಿ ಮುನ್ನೂರೈವತ್ತು ಕೊಠಡಿಗಳ ರಾಷ್ಟ್ರಪತಿ ಭವನ ನೀಡಲಾಗುವುದು.
ಎಲ್ಲಾ ನೌಕರಿಗೂ ‘ಬೇಕಾಗಿದ್ದಾರೆ’ ಜಾಹೀರಾತನ್ನು ಪತ್ರಿಕೆಗಳಲ್ಲಿ ಕೊಡುತ್ತಾರೆ. ಆದರೆ ‘ರಾಷ್ಟ್ರಪತಿ ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನು ಕೊಟ್ಟರೆ ಹೇಗಿರುತ್ತದೆ? ಚಿಂತನಾರ್ಹ.

ಕೆಲವು ರಾಷ್ಟ್ರಪತಿಗಳ ಕುರಿತು

ದೇಶದ ಪ್ರಪ್ರಥಮ ಪ್ರಜೆ, ರಾಷ್ಟ್ರಪತಿ ರಾಮನಾಥ ಕೋವಿಂದ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗಾದರೂ ಗೊತ್ತಾ? ರಾಷ್ಟ್ರಪತಿ ಎಂಬ ಘನವ್ಯಕ್ತಿ ಸುದ್ದಿಯ ಇಲ್ಲ. ಅವರ ಮಾತು, ಭಾಷಣ ಸುದ್ದಿಯಾಗುತ್ತಿಲ್ಲ. ಅವರ ಕಾರ್ಯಗಳೂ ಕೂಡ. ಅವರ ತತ್ತ , ಸಿದ್ಧಾಂತಗಳೇನು ಎಂಬುದು ಹೆಚ್ಚಿನವರಿಗೆ ತಿಳಿದಂತಿಲ್ಲ. ಅವರ ಒಲವು – ನಿಲುವುಗಳೇನು ಎಂಬುದು ಇನ್ನೂ ನಿಗೂಢವೇ.

ಅವರ ಅನಿಸಿಕೆ, ಆಚಾರ, ಆಚರಣೆಗಳೇನು ಎಂಬುದು ಸಹ ಗೊತ್ತಾಗುತ್ತಿಲ್ಲ. ಅವರು ರಾಷ್ಟ್ರಪತಿ ಭವನ ಎಂಬ ಭವ್ಯ ಗೂಡಿನಲ್ಲಿ ಗುಬ್ಬಚ್ಚಿಯಂತೆ ಇದ್ದುಬಿಟ್ಟಿದ್ದಾರೆ. ಕೋವಿಂದ ಕನಿಷ್ಠ ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿ ಅಥವಾ ಫೋಟೋ ಸುದ್ದಿಯೂ ಆಗುವುದಿಲ್ಲ. ಕೋವಿಡ್ ನಂತರ ಕೋವಿಂದ ಮತ್ತಷ್ಟು ತೆರೆಮರೆಗೆ ಸೇರಿಬಿಟ್ಟಿದ್ದಾರೆ. ರಾಷ್ಟ್ರಪತಿಯಂಥ ಹುದ್ದೆಯಲ್ಲಿರುವವರು ಇಷ್ಟು ನೇಪಥ್ಯಕ್ಕೆ ರಿಯಬಾರದು ಮತ್ತು ಹೊರ ಜಗತ್ತಿನ ಜತೆ ಸಂಬಂಧ ಕಡಿದುಕೊಂಡು ಬದುಕಬಾರದು.

ತನಗೂ ಒಂದು ಸ್ವತಂತ್ರ ವ್ಯಕ್ತಿತ್ವವಿದೆ ಎಂಬುದನ್ನಾದರೂ ಆಗಾಗ ತೋರಿಸಬೇಕು. ಆದರೆ ಹಾಲಿ ರಾಷ್ಟ್ರಪತಿ ಕೊವಿಂದ ಅವ ರನ್ನು ನೋಡಿದಾಗ, ಇಂಥ ಯಾವ ಲಕ್ಷಣಗಳೂ ಕಾಣಿಸುವುದಿಲ್ಲ. ಹಳೆಯ ಮಾಫತಲಾಲ್ ಶೂಟಿಂಗ್ಸ್‌ನ ವೃದ್ಧ ರೂಪದರ್ಶಿ ಯಂತೆ ಕಾಣುತ್ತಾರೆ!

ಡಾ.ಅಬ್ದುಲ್ ಕಲಾಂ ರಾಜಕಾರಣಿಯಾಗಿರಲಿಲ್ಲ. ಕಾನೂನು, ಸಂವಿಧಾನ, ಸಂಸದೀಯ ನಡಾವಳಿ ಇತ್ಯಾದಿಗಳ ಬಗ್ಗೆ ಅವರಿಗೆ
ಹೆಚ್ಚಿನ ಅರಿವು ಇರಲಿಲ್ಲ. ಮೂಲತಃ ಅವರು ವಿಜ್ಞಾನಿ. ರಕ್ಷಣಾ ಸಚಿವರಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ವೈಜ್ಞಾನಿಕ ಸಲಹೆಗಾರ
ರಾಗಿದ್ದರಿಂದ, ಅಧಿಕಾರದ ಮೊಗಸಾಲೆಗೆ ಬಂದು – ಹೋಗುತ್ತಿದ್ದರು. ಅದು ಬಿಟ್ಟರೆ, ಅವರಿಗೂ ರಾಜಕೀಯಕ್ಕೂ ಅಷ್ಟಕ್ಕಷ್ಟೇ. ಅವರು ರಾಷ್ಟ್ರಪತಿಯಾದಾಗ, ಅನೇಕರಿಗೆ ಸಂದೇಹಗಳಿದ್ದವು.

ಆದರೆ ಡಾ.ಕಲಾಂ ಈ ದೇಶ ಕಂಡ ಅತ್ಯಂತ ವರ್ಚಸ್ವಿ, ಪ್ರಭಾವಿ, ಜನಪ್ರಿಯ, ಜನಸಾಮಾನ್ಯರ ರಾಷ್ಟ್ರಪತಿ ಎಂದು ಕರೆಯಿಸಿ ಕೊಂಡರು. ಘನತೆವೆತ್ತ ರಾಷ್ಟ್ರಪತಿ ಕುರ್ಚಿಯನ್ನು ಅವರು ರಾಷ್ಟ್ರಪತಿ ಭವನದ ಹೊರಗಡೆ ತಂದು ಇಟ್ಟರು. ಜನಸಾಮಾನ್ಯರ ಬಳಿ ಹೋದರು. ರಾಷ್ಟ್ರಪತಿಗೆ ಅಂಟಿಕೊಂಡಿದ್ದ ಶಿಷ್ಟಾಚಾರದ ಮೈಲಿಗೆಯನ್ನು ಕಿತ್ತೆಸೆದರು.

ಹಾಗೆಂದು ರಾಷ್ಟ್ರಪತಿ ಪೀಠದ ಘನತೆಯನ್ನು ಸ್ವಲ್ಪವೂ ದುರ್ಬಲಗೊಳಿಸಲಿಲ್ಲ. ಅವರು ಸಿದ್ಧ ಭಾಷಣ ಬಿಟ್ಟು, ಆಶು ಭಾಷಣ ಮಾಡಿದರು. ಮಕ್ಕಳು ಮತ್ತು ಯುವಕರ ಮಾರ್ಗದರ್ಶನಕ್ಕಾಗಿ ತಮ್ಮ ಸಮಯವನ್ನು ಮುಡಿಪಾಗಿಟ್ಟರು. ಅವರಲ್ಲಿ ಪ್ರೇರಣೆ ತುಂಬುವ, ಹುರಿದುಂಬಿಸುವ ಕೆಲಸ ಮಾಡಿದರು. ಅವರಲ್ಲಿ ಕನಸಿನ ಬೀಜವನ್ನು ಬಿತ್ತಿದರು. ರಾಷ್ಟ್ರಪತಿ ಡಾ.ಕಲಾಂ, ಕಲಾಂ ಮೇಷ್ಟ್ರಾದರು. ಅವರು ಯಾವ ವಿವಾದ ಗಳನ್ನು ಎಳೆದುಕೊಳ್ಳಲಿಲ್ಲ. ರಾಷ್ಟ್ರಪತಿ ಭವನದ ಸುತ್ತಮುತ್ತ ತಮ್ಮ ಕುಟುಂಬ ದವರನ್ನು ಬಿಟ್ಟುಕೊಳ್ಳಲಿಲ್ಲ. ಅವರೇನೂ ಎರಡನೇ ಅವಧಿಗೆ ಯಾರ ಮುಂದೆಯೂ ಹಲ್ಲು ಗಿಂಜಲಿಲ್ಲ.

ಅವರೇ ಮತ್ತೊಂದು ಅವಧಿಗೆ ರಾಷ್ಟ್ರಪತಿ ಆಗಲಿ ಎಂಬ ಜನರ ಒತ್ತಾಸೆಯ ಕೂಗು ಮಾತ್ರ ದೇಶಾದ್ಯಂತ ಕೇಳಿ ಬಂತು. ಆದರೆ ರಾಜಕೀಯ ಕಾರಣಗಳಿಂದ ಅದು ಈಡೇರಲಿಲ್ಲ. ಮಾಜಿ ಆದ ಬಳಿಕವೂ ಕಲಾಂ ವರ್ಚಸ್ಸು ಕಡಿಮೆಯಾಗಲಿಲ್ಲ. ರಾಷ್ಟ್ರಪತಿ ಹುದ್ದೆಗೆ ಡಾ.ಕಲಾಂ ಮರ್ಯಾದೆ, ಘನತೆ, ಅರ್ಥವಂತಿಕೆ ಮತ್ತು ಸಾರ್ಥಕ್ಯವನ್ನು ತಂದುಕೊಟ್ಟರು. ಮಾನ್ಯವಾಗಿ ರಾಷ್ಟ್ರಪತಿ ಹುದ್ದೆಗೇರುವವರು ನಿವೃತ್ತಿಯಂಚಿನಲ್ಲಿರುವ ವೃದ್ಧ ರಾಜಕಾರಣಿಗಳು.

ಜೀವನ ದುದ್ದಕ್ಕೂ ರಾಜಕಾರಣ ಮಾಡಿ ಸುಸ್ತಾಗಿ, ರಾಷ್ಟ್ರಪತಿ ಭವನದಲ್ಲಿ ಸರಕಾರಿ ಖರ್ಚಿನಲ್ಲಿ ದಣಿವು ಆರಿಸಿಕೊಳ್ಳಲು ಅಂತಿಮ ನಿಲ್ದಾಣ ಕಂಡುಕೊಳ್ಳುವವರು. ಅಲ್ಲಿ ಅವರಿಗೆ ಕೈಗೆ – ಕಾಲಿಗೆ ಆಳುಗಳು, ಸೇವಕರು. ಸರಕಾರಿ ಮೇಜವಾನಿಕೆಯಲ್ಲಿ ದೌಲತ್ತು ಮೆರೆದು ಹೋಗುತ್ತಾರೆ. ಮೂಲತಃ ಅವರು ಅಧಿಕಾರದಲ್ಲಿರುವ ಪಕ್ಷದ ನಾಯಕರ ಬಾಲಬಡುಕರಾಗಿರುತ್ತಾರೆ.

ಇಲ್ಲದಿದ್ದರೆ ಆ ಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ. ಡಾ.ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ವಾಜಪೇಯಿ ಸರಕಾರ. ಅವರು
ನಿವೃತ್ತರಾಗುವಾಗ ಯುಪಿಎ ಸರಕಾರವಿತ್ತು. ಸೋನಿಯಾ ಗಾಂಧಿ ಪ್ರಧಾನಿಯಾಗಲು ಡಾ.ಕಲಾಂ ತೊಡಕಾದರು ಎಂಬುದು ಗೊತ್ತಿರುವ ರಹಸ್ಯ. ಹೀಗಾಗಿ ಸೋನಿಯಾ, ಡಾ.ಕಲಾಂ ಇನ್ನೊಂದು ಅವಧಿಗೆ ರಾಷ್ಟ್ರಪತಿ ಆಗಲು ಸಮ್ಮತಿಸಲಿಲ್ಲ. ಅದರ ಬದಲಾಗಿ ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರು. ಅವರು ಮಹಾರಾಷ್ಟ್ರದಲ್ಲಿ ರಾಜಕಾರಣ ಮಾಡಿಕೊಂಡು ಇದ್ದವರು. ಕೊನೆಗೆ ಎಲ್ಲಾ ಆಸೆಗಳೆ ತೀರಿ, ರಾಜಸ್ಥಾನದಲ್ಲಿ ರಾಜ್ಯಪಾಲರಾಗಿ ಐದು ವರ್ಷ ಪೂರ್ಣಗೊಳಿಸಿದ್ದರು. ರಾಷ್ಟ್ರಪತಿಯಾಗುವಂತೆ ಕರೆ ಬಂತು.

ಕಾಂಗ್ರೆಸ್ ನಾಯಕತ್ವ ಅವರಲ್ಲಿ ಅದ್ಯಾವ ಗುಣವೈಶಿಷ್ಟ್ಯಗಳನ್ನು ಕಂಡಿತೋ? ಐದು ವರ್ಷ ರಾಷ್ಟ್ರಪತಿಯಾದರು. ರಾಜಸ್ಥಾನದ ಭಿಲ್ವಾರಾದ ನಾಥುಲಾಲ್ ವ್ಯಾಸ್ ಎಂಬ ಜ್ಯೋತಿಷಿಯನ್ನು ಕೇಳದೇ ಅವರು ಏನನ್ನೂ ಮಾಡುತ್ತಿರಲಿಲ್ಲ. ಡಾ.ಕಲಾಂ ನೆನಪಿನ ಪರದೆಯನ್ನು ಅವರಿಂದ ಸರಿಸಲು ಆಗಲೇ ಇಲ್ಲ.

ಡಾ.ಸರ್ವೆಪಲ್ಲಿ ರಾಧಾಕೃಷ್ಣ ಮತ್ತು ಝಕೀರ್ ಹುಸೇನ್ ಇಬ್ಬರೂ ಅಕೆಡೆಮಿಕ್ ಕ್ಷೇತ್ರದಿಂದ ಬಂದವರು. ಡಾ.ರಾಧಾಕೃಷ್ಣನ್ ಉತ್ತಮ ವಾಗ್ಮಿ ಮತ್ತು ಹಿಂದೂ ಧರ್ಮದ ವಿದ್ವಾಂಸರು. ತಾವು ಬೋಧಿಸಿದಂತೆ ಅವರು ನಡೆದುಕೊಳ್ಳಲಿಲ್ಲ ಮತ್ತು ಅಪಾತ್ರ ರನ್ನು ಬೆಳೆಸಿದರು ಎಂಬುದು ಅವರ ಬಗ್ಗೆ ಇದ್ದ ತಕರಾರು. ರಾಷ್ಟ್ರಪತಿಯಾಗಿ ವಿಶ್ವವಿದ್ಯಾಲಯದ ನೌಕ ರರ ನೇಮಕದಲ್ಲೂ ಪ್ರಭಾವ ಬೀರುತ್ತಿದ್ದರು. ಝಕೀರ್ ಹುಸೇನ್ ಕೂಡ ಉತ್ತಮ ಸ್ಕಾಲರ್. ಆದರೆ ಅವರು ರಾಷ್ಟ್ರಪತಿಯಾಗಿ ಮಾಮೂಲಿ ಕೆಲಸಕ್ಕಿಂತ ಭಿನ್ನವಾದುದೇನನ್ನೂ ಮಾಡಲಿಲ್ಲ. ರಾಷ್ಟ್ರಪತಿಯಾಗಿ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಲಿಲ್ಲ.

ಇನ್ನು ಪ್ರಣಬ್ ಮುಖರ್ಜಿ ಮತ್ತು ಆರ್. ವೆಂಕಟರಾಮನ್ ಅವರನ್ನು ಹೊರತುಪಡಿಸಿದರೆ, ಉಳಿದವರ ಬಗ್ಗೆ ಹೇಳುವಂಥ
ಒಳ್ಳೆಯ ಮಾತುಗಳಿಲ್ಲ. ಇನ್ನುಳಿದ ಅಧಿಕಾರ ಅವಧಿಯ ತನಕ ಕೊವಿಂದ ಇದೇ ರೀತಿ ಇದ್ದರೆ, ಅವರು ಎದ್ದು ಹೋದದ್ದು ಸಹ
ಗೊತ್ತಾಗುವುದಿಲ್ಲ.

ಮರೆಯಲಾಗದ ದುರ್ಲಭಜೀ ಭಾಷಣ

ಅಧ್ಯಕ್ಷತೆ ವಹಿಸಿದ್ದ ಯೋಗಿ ದುರ್ಲಭಜೀ ಮಾತಾಡುವ ಹೊತ್ತಿಗೆ ನಾಲ್ಕು ಗಂಟೆ ಸರಿದು ಹೋಗಿದ್ದವು. ಅವರಿಗಿಂತ ಮೊದಲು ಮಾತಾಡಿದ ಮೂವರು, ತಾಸುಗಟ್ಟಲೆ ಕೊರೆದು ಹಾಕಿದ್ದರು. ಸಭಿಕರು ಸುಸ್ತಾಗಿದ್ದರು. ಆದರೆ ದುರ್ಲಭಜೀ ಮಾತಿಗಾಗಿ ಅವರೆಲ್ಲ ಕಾದು ಕುಳಿತಿದ್ದರು.

ಸಾಮಾನ್ಯವಾಗಿ, ಯೋಗಿಯವರು ಕಾರ್ಯಕ್ರಮಕ್ಕೆ ಹೋಗುವವರಲ್ಲ. ಆದರೆ ಅಂದು ಅವರ ಆತ್ಮೀಯರು ಆಮಂತ್ರಿಸಿದಾಗ, ಇಲ್ಲ ಎನ್ನಲು ಮನಸ್ಸಾಗಲಿಲ್ಲ. ಆದರೆ ಮೊದಲು ಮಾತಾಡಿದವರಲ್ಲ ತಲೆಚಿಟ್ಟು ಹಿಡಿಸುವಂತೆ ಮಾತಾಡಿ, ಎಲ್ಲರ ಸಹನೆ ಪರೀಕ್ಷಿಸಿದ್ದರು. ಎಲ್ಲರ ಮಾತು ಮುಗಿಯಿತು. ಎಲ್ಲರೂ ಯೋಗಿ ಅವರ ಮಾತಿಗಾಗಿ ಎದುರು ನೋಡುತ್ತಿದ್ದರು. ಕಾರ್ಯಕ್ರಮದ
ನಿರೂಪಕರು, ‘”Dear friends, Now we have Yogi Durlabhaji, a great scholar will give you his address’ ಎಂದು ಹೇಳಿ ಮೈಕನ್ನು ಯೋಗಿಜೀಗೆ ಕೊಟ್ಟರು.

ಯೋಗಿಜೀ ಮೈಕನ್ನು ಹಿಡಿದು ಇಡೀ ಸಭೆಯನ್ನು ಸಾವಧಾನದಿಂದ ದಿಟ್ಟಿಸಿದರು. ನಂತರ ತಮ್ಮ ಗಡಸು ದನಿಯಲ್ಲಿ, Dear friends, Ladies and Gentlemen, my address is 27, Ideal Homes, R.R.Nagar, Bengaluru – 98 ಎಂದು ಹೇಳಿ ಕುಳಿತು ಕೊಂಡು ಬಿಟ್ಟರು. ಎಲ್ಲರೂ ಎದ್ದು ನಿಂತು ಹರ್ಷೋದ್ಗಾರದಿಂದ ಚಪ್ಪಾಳೆ ಹೊಡೆದರು. ಯೋಗಿಜೀ ಏನೇ ಮಾತಾಡಿದರೂ, ನೆನಪಿರುತ್ತಿತ್ತೋ, ಇಲ್ಲವೋ ಗೊತ್ತಿಲ್ಲ, ಆದರೆ ಈ ಮಾತುಗಳನ್ನಂತೂ ಮರೆಯುವಂತೆಯೇ ಇಲ್ಲ. ಅದಕ್ಕಿಂತ ಹೆಚ್ಚಾಗಿ, ಯೋಗಿಜೀ ಐದು ನಿಮಿಷ ಮಾತಾಡಿದ್ದರೂ, ಹಸಿದ ಸಭಿಕರು ಶಾಪ ಹಾಕದೇ ಹೋಗುತ್ತಿರಲಿಲ್ಲ.

ಹೀಗಾಗಿ ಏನೂ  ಮಾತಾಡದೇ ಇರುವುದೇ ಲೇಸು ಎಂದು ಭಾವಿಸಿ, ನಿರೂಪಕರ  ಆದೇಶದಂತೆ ತಮ್ಮ ಅಡ್ರೆಸ್ ಹೇಳಿ ಕುಳಿತುಕೊಂಡುಬಿಟ್ಟರು.

ಮಾರ್ಕ್ ಟ್ವೆ ನ್ ಮತ್ತು ಆರ್ಚ್ ಬಿಷಪ್
‘ಮಾರ್ಕ್ ಟ್ವೆ ನ್, ನನಗೆ ನಿಮ್ಮ ಬಗ್ಗೆ ಅಭಿಮಾನ. ಕಾರಣ ನೀವು ಮಾತಾಡಿದರೂ ಬಹಳ ಸೆನ್ಸಿಬಲ್ ಆಗಿ ಮಾತಾಡುತ್ತೀರಿ’
ಎಂದು ಆರ್ಚ್ ಬಿಷಪ್ ಹೇಳಿದರು. ಅದಕ್ಕೆ ಮಾರ್ಕ್ ಟ್ವೆ ನ್ ಸುಮ್ಮನೆ ನಕ್ಕರು. ಅಷ್ಟೊತ್ತಿಗೆ ಜೋರಾಗಿ ಗಾಳಿ ಬೀಸಿತು. ನೋಡನೋಡುತ್ತಿದ್ದಂತೆ, ಮಳೆ ಸುರಿಯಲಾರಂಭಿಸಿತು. ಆಗ ಆರ್ಚ್ ಬಿಷಪ್ ‘ಈ ಮಳೆ ನಿಲ್ಲುತ್ತದೆ ಎಂದು ನಿಮಗೆ ಅನಿಸುವುದಾ?’ ಎಂದು ಕೇಳಿದರು. ಅದಕ್ಕೆ ಟ್ವೆ ನ್ ಹೇಳಿದರು – ‘ಹಿಂದೆ ಮಳೆ ಬಿದ್ದಾಗೆ ಅದು ನಿಂತಿದೆ’

ಸ್ಕೂಪ್ ಸುದ್ದಿ ಅಂದ್ರೆ..

ಆತ ಟ್ರೈನಿ ರಿಪೋರ್ಟರ್ ಎಂದು ಪತ್ರಿಕೆ ಸೇರಿ ಒಂದು ವಾರವಾಗಿತ್ತು. ರಾತ್ರಿ ಹತ್ತು ಗಂಟೆ ಹೊತ್ತಿಗೆ, ಸಂಪಾದಕರಿಗೆ ಒಂದು ಕರೆ ಬಂತು. ನಗರದ ಹೊರವಲಯ ದಲ್ಲಿರುವ ಫ್ಯಾಕ್ಟರಿಯಲ್ಲಿ ಬೆಂಕಿ ಬಿದ್ದಿದೆಯೆಂದು. ತಕ್ಷಣ ಯಾರನ್ನುಕಳಿಸುವುದು? ವರದಿಗಾರ ರೆಲ್ಲ ಡ್ಯೂಟಿ ಮುಗಿಸಿ ಮನೆಗೆ ಹೋಗಿದ್ದರು. ಟ್ರೈನಿ ರಿಪೋರ್ಟರ್ ಮಾತ್ರ ಇದ್ದ.

ಅವನನ್ನು ಕರೆದ ಸಂಪಾದಕರು, ‘ನೋಡು, ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆಯಂತೆ. ತಕ್ಷಣ ಹೋಗು, ವಾಹನ ಸಿದ್ಧವಾಗಿದೆ’ ಎಂದರು. ಟ್ರೈನಿ ರಿಪೋರ್ಟರ್ ಅವಸರದಲ್ಲಿ ಕಾರಿನಲ್ಲಿ ಕುಳಿತುಕೊಂಡ. ಡ್ರೈವರ್ ವೇಗವಾಗಿ ಓಡಿಸಿದ. ಅದು ಅವನ ಮೊದಲ ಔಟ್ ಸೈಡ್ ಅಸೈನ್ ಮೆಂಟ್. ಸರಿ, ಘಟನಾ ಸ್ಥಳ ತಲುಪಿದ. ಬೇರೆ ಯಾವ ಪತ್ರಿಕೆಯ ವರದಿಗಾರರೂ ಬಂದಿರಲಿಲ್ಲ. ಟ್ರೈನಿ ರಿಪೋರ್ಟರ್‌ಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ.

ಸಂಪಾದಕರಿಗೆ ಮೆಸೇಜ್ ಮಾಡಿದ – ‘ನಾನು ಬೆಂಕಿ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ಬಂದಿ ದ್ದೇನೆ. ಮುಂದೇನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ದಯವಿಟ್ಟು ತಿಳಿಸಿ, ನಿಮ್ಮ ಸೂಚನೆಯ ನಿರೀಕ್ಷೆಯಲ್ಲಿದ್ದೇನೆ.’ ಅದಾಗಿ ಕೆಲವೇ ಕ್ಷಣಗಳಲ್ಲಿ ಸಂಪಾದಕರು ಪ್ರತಿಕ್ರಿಯಿಸಿದರು – ‘ಬೆಂಕಿ ದುರ್ಘಟನೆ ಸಂಭವಿಸಿದ ಯಾವ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ತೀವ್ರವಾಗಿದೆ ಎಂಬುದನ್ನು ಪರೀಕ್ಷಿಸು.. ಹಿಂದೆ ಮುಂದೆ ನೋಡದೇ ಅಲ್ಲಿ ಧುಮುಕು. ಯಾರಿಗೂ ಸಿಗದ ಸ್ಕೂಪ್ ಸುದ್ದಿಯನ್ನು ನಾನು ಇಲ್ಲಿ ಕುಳಿತೇ ಬರೆಯುತ್ತೇನೆ.’

ನನ್ನಂತೆ ನೀವೂ ಮಾಡಬಹುದು

ನಾನು ಜರ್ಮನಿಯ ಹೆಡೆಲ್ ಬರ್ಗ್‌ಗೆ ಹೋದಾಗ, ಹದಿನೆಂಟನೇ ಶತಮಾನದ ಜರ್ಮನ್ ಕವಿ ಕ್ಲೋಪ್ ಸ್ಟಾಕ್ ಮನೆಗೆ ಹೋಗಿದ್ದೆ.  ಅಲ್ಲಿ ಓದಿದ ಒಂದು ಪ್ರಸಂಗ. ಆ ದಿನಗಳಲ್ಲಿ ಹೊಸ ಕೃತಿಗಳು ಬಿಡುಗಡೆಯಾದಾಗ, ಕೃತಿಕಾರರೊಂದಿಗೆ ಪ್ರಮುಖ ಊರುಗಳಲ್ಲಿ ಕಾರ್ಯಕ್ರಮ ಗಳನ್ನು ಏರ್ಪ ಡಿಸುತ್ತಿದ್ದರು. ಅದೇ ರೀತಿ ಕ್ಲೋಪ್ ಸ್ಟಾಕ್ ಬರೆದ ಹೊಸ ಕವನ ಸಂಕಲನ  ಬಿಡುಗಡೆಯಾದಾಗ, ಆತ ತನ್ನ ಕೃತಿಯ ಬಗ್ಗೆ ವಿವರಿಸಲು, ಗೋಟಿಂಗೆನ್‌ನಿಂದ ಹ್ಯಾಂಬರ್ಗ್ ತನಕ ಪ್ರವಾಸ ಪ್ರತಿ ದಿನ ಒಂದೆರಡು ಕಾರ್ಯಕ್ರಮ ಗಳಿರುತ್ತಿದ್ದವು.

ಆತ ತನ್ನ ಈ ಪ್ರವಾಸದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ. ಅವನ ಕೊನೆಯ ಕಾರ್ಯಕ್ರಮ
ಹ್ಯಾಂಬರ್ಗ್ ನಲ್ಲಿ. ಅಲ್ಲಿ ಸಭಿಕನೊಬ್ಬ ಎದ್ದು ನಿಂತು ಕ್ಲೋಪ್ ಸ್ಟಾಕ್ ಬರೆದ ಕೆಲವು ಸಾಲುಗಳನ್ನು ಓದಿ, ಇದರ ಅರ್ಥವನ್ನು
ವಿವರಿಸುವಂತೆ ಹೇಳಿದ. ಕ್ಲೋಪ್ ಸ್ಟಾಕ್ ಆಗ ಹೇಳಿದ – ‘ಇದನ್ನು ಬರೆಯುವಾಗ ನನ್ನ ಮನಸ್ಥಿತಿ ಏನಿತ್ತೋ ಗೊತ್ತಿಲ್ಲ. ಆಗಿನ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಕಷ್ಟ. ಆದರೆ ಒಂದು ಮಾತಂತೂ ಸತ್ಯ, ಇವು ನಾನು ಬರೆದ ಚೆಂದದ ಸಾಲುಗಳು. ನಾನು ನನ್ನ ಇಷ್ಟು ವರ್ಷಗಳ ಜೀವನದ ಅನುಭವಗಳನ್ನು ಈ ಸಾಲುಗಳಲ್ಲಿ ಅಡಕವಾಗಿಟ್ಟಿದ್ದೇನೆ. ನಿಮಗೆ ಈ ಸಾಲುಗಳ ಅರ್ಥ ಗಳನ್ನು ತಿಳಿದುಕೊಳ್ಳಬೇಕು ಎಂದು ಗಂಭೀರವಾಗಿ ಅನಿಸಿದರೆ, ನೀವೂ ನಿಮ್ಮ ಜೀವನವನ್ನು ಮುಡಿಪಾಗಿಡಬಹುದು.’