Sunday, 15th December 2024

Parinita Ravi Column: ನಮ್ಮ ಪ್ರತಿಚ್ಛಾಯೆಯನ್ನು ನಿರ್ಮಿಸುವವರು ಯಾರು ?

ಮನಸ್ಸು ಕನ್ನಡಿ

ಪರಿಣಿತ ರವಿ

ಕರಿಷ್ಮಾ ಒಂದು ದಿನ ನೇಹಾಳಲ್ಲಿ ಅಂದಳು ಆ ಮಾಲಾ ಕರಣ್ ಸರ್‌ನಲ್ಲಿ ನಿನ್ನ ಬಗ್ಗೆ ಏನೇನೋ ಬೇಡದ್ದು
ಹೇಳಿದ್ದಾಳೆ ಎಂದು. ಅಂದಿನಿಂದ ನೇಹಾಳಿಗೆ ಮಾಲಾಳನ್ನು ಕಂಡಾಗಲೆಲ್ಲ ಎಲ್ಲಿಲ್ಲದ ಸಿಟ್ಟು. ಒಳಗೊಳಗೇ
ರೋಷ, ಉರಿ. ಅವಳ ಬಗೆಗಿನ ನಕಾರಾತ್ಮಕ ಚಿಂತೆಗಳು ಕೊನೆಗೆ ದ್ವೇಷವನ್ನು ಹುಟ್ಟಿಸುವಷ್ಟು ಮಟ್ಟಿಗೆ ಬೆಳೆಯು ತ್ತದೆ.

ಕರಣ್ ಸರ್‌ನ್ನು ಕಂಡಾಗಲೂ ಏನೋ ಕಸಿವಿಸಿ. ಈ ಮನುಷ್ಯ ಅವಳು ಹೇಳಿದ್ದು ನಂಬಿ, ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿರಬಹುದೇ ಅನ್ನುವ ಆತಂಕ ನೇಹಾಳಿಗೆ. ಅವರ ಪ್ರತಿಯೊಂದು ಹಾವಭಾವವೂ, ನಡೆನುಡಿ ಯೂ ಸಂಶಯಾಸ್ಪದವಾಗಿ ಕಾಣತೊಡಗಿತು. ಕೊನೆಗೆ ಅವಳ ಮನಸ್ಸು ರಾಢಿಯಾಗಿ ಮಾನಸಿಕ ನೆಮ್ಮದಿ ಕಳೆದು ಕೊಂಡು ಒದ್ದಾಡಿದಳು ನೇಹಾ. ಪಾಪಾ! ಮಾಲಾಳಿಗೆ ಇದರ ಬಗ್ಗೆ ಯಾವ ಸೂಚನೆಯೂ, ಅರಿವೆಯೂ ಇಲ್ಲ. ಕೆಲವೊಮ್ಮೆ ಅದು ಕರಿಷ್ಮಾಳ ಸೃಷ್ಟಿಯೂ ಆಗಿರಬಹುದು.

ಇಂತಹುದೇ ಸನ್ನಿವೇಶಗಳನ್ನು ನಾವೂ ಸಾಕಷ್ಟು ಎದುರಿಸಿರುತ್ತೇವೆ. ಸೇಮ್ ಘಟನೆಗಳು ನಮಗೂ ಅನುಭವಕ್ಕೆ ಬಂದಿರುತ್ತವೆ. ಯಾರೋ ಬಂದು ನಮ್ಮಲ್ಲಿ ಅವನು/ಳು ನಿನ್ನ ಬಗ್ಗೆ ಅವರಲ್ಲಿ ಹಾಗೆ ಹೇಳಿದರು, ಹೀಗೆ ಹೇಳಿದರು ಎಂದು ಹೇಳಿದ್ದನ್ನು ಕೇಳಿರುತ್ತೇವೆ. ಅಲ್ಲಿಗೆ ಎ ಮುಗಿಯಿತು. ನೇಹಾಳಂತೆ ನಾವೂ ಮಾನಸಿಕ ನೆಮ್ಮದಿ ಕಳೆದು ಕೊಳ್ಳುವವರೂ ಆಗಿರುತ್ತೇವೆ.

ಅಂದರೆ ನಮ್ಮ ಪ್ರತಿಚ್ಛಾಯೆ, ವ್ಯಕ್ತಿತ್ವ ಸೃಷ್ಟಿಯಾಗುವುದು ನಮ್ಮ ಬಗ್ಗೆ ಇನ್ನೊಬ್ಬರ ಅಭಿಪ್ರಾಯದಿಂದ ಎಂದರ್ಥ ವಲ್ಲವೇ? ಬೇರೆಯವರ ಕಣ್ಣುಗಳಿಂದ, ಮಾತುಗಳಿಂದ, ಹೇಳಿಕೆಗಳಿಂದ ನಮ್ಮ ಪ್ರತಿಬಿಂಬ ನಿರ್ಮಾಣವಾಗುವುದು ಎಂದಲ್ಲವೇ? ಅದಕ್ಕೆ ತಾನೇ ನಮ್ಮ ಬಗ್ಗೆ ಬೇರೆಯವರ ಅಭಿಪ್ರಾಯ ನಮಗೆ ಅಷ್ಟು ಮುಖ್ಯವಾಗುವುದು? ಆದರೆ ಈ ಬೇರೆಯವರ ಅಭಿಪ್ರಾಯಗಳು, ಅವರು ಕೊಡುವ ಹೇಳಿಕೆಗಳು ಸರಿ ಇರಬೇಕೆಂದೇನಿದೆ? ಅದು ಸತ್ಯವಾಗಿರ ಬೇಕೆಂದೂ, ನಿಖರವಾಗಿರಬೇಕೆಂದೂ ಯಾವ ನಿಯಮವೂ ಇಲ್ಲ. ಎಲ್ಲರೂ ಅವರವರ ಮೂಗಿನ ನೇರಕ್ಕೆ ಮಾತನಾಡುವವರು ಅನ್ನುವ ಸತ್ಯ ನಮಗೆ ಹೊಸತೇನು? ಖಂಡಿತ ಅಲ್ಲ.

ಅದೂ ಅಲ್ಲದೇ ಈ ಇನ್ನೊಬ್ಬರ ಅಭಿಪ್ರಾಯ ನಮ್ಮ ಹಿಡಿತ ದಲ್ಲಿಲ್ಲ. ನಿಯಂತ್ರಣದಲ್ಲಿಲ್ಲ. ಆದರೂ ಯಾರಾದರೂ
ಏನಾದರೂ ಹೇಳಿದರು ಅಂದರೆ ಸಾಕು ದೂರ್ವಾಸ ಮುನಿಯ ಅವತಾರವೇ ಆಗಿಬಿಡುತ್ತೇವೆ. ನಮ್ಮ ಸುತ್ತು
ನಡೆಯುವ ಆಗುಹೋಗುಗಳನ್ನು ಗಮನಿಸಿದಾಗ ಅರಿವಾಗುತ್ತದೆ ನಾವೆಲ್ಲರೂ ನಮ್ಮ ಬಗ್ಗೆ ಬೇರೆಯವರ ಅಭಿಪ್ರಾಯಕ್ಕೆ ಹೆಚ್ಚು ಬೆಲೆ ಕೊಡುವವರೆಂದು. ಹಾಗಾಗಿ ಬೇರೆಯವರು ಸದಾ ನಮ್ಮ ಬಗ್ಗೆ ಒಳ್ಳೆಯದನ್ನೇ ಹೇಳಬೇಕೆಂದು ಬಯಸುತ್ತೇವೆ.

ನಾವು ಯಾರಾದರೂ ನಮ್ಮ ಯಥಾರ್ಥ ಮುಖವನ್ನು ನೇರವಾಗಿ ನೋಡಿದ್ದೇವೆಯೇ? ನಾವು ನಮ್ಮ ಭಾವ ಚಿತ್ರದ, ಕನ್ನಡಿಯ ಮಾತ್ರವೇ ನಮ್ಮ ಮುಖವನ್ನು ಕಾಣಲಾಗುವುದು. ನಾವು ನೋಡುವ ಕನ್ನಡಿ ಒಡೆದು ಹೋಗಿದ್ದರೆ ಅಥವಾ ಮಸುಕಾಗಿದ್ದರೆ ನಮ್ಮ ಪ್ರತಿಬಿಂಬ ಸ್ಪಷ್ಟವಾಗಿ ಕಾಣಿಸದೆ ವಿಕಾರವಾಗಿರಬಹುದು.

ಆದರೆ ನಮ್ಮೊಳಗಿನ ನಮ್ಮ ಆಂತರ್ಯದ ಮುಖದ ಸ್ಪಷ್ಟ ಪರಿಚಯ ನಮಗೆ ಮಾತ್ರವೇ ಇರಲು ಸಾಧ್ಯ. ಅದು
ಯಾರೋ ಏನೋ ಹೇಳಿದ ಮಾತ್ರಕ್ಕೆ ಬದಲಾಗದು, ವಿಕಾರವಾಗದು. ಹಾಗಾಗಿ ನಾವು ಬೇರೆಯವರ ಮಾತುಗಳಿಂದ,
ಅಭಿಪ್ರಾಯಗಳಿಂದ ನಮ್ಮ ಮೌಲ್ಯಮಾಪನ ಮಾಡಲು ಹೊರಟರೆ ಖಂಡಿತ ನಿರಾಶೆ, ದುಃಖ ಕಟ್ಟಿಟ್ಟ ಬುತ್ತಿ.

ಯಾರಾದರೂ ಹೊಗಳಿದಾಗ ಅತಿಯಾಗಿ ಆನಂದಿಸುವುದು, ತೆಗಳಿದಾಗ ಸಿಟ್ಟಾಗುವುದು, ಬೇಸರ ಪಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದನ್ನು ಅರ್ಥಮಾಡಿಕೊಳ್ಳದೇ ನಮ್ಮ ನಮ್ಮ ಪ್ರತಿಚ್ಛಾಯೆಯನ್ನು ಸೃಷ್ಟಿಸಲು ಕಾಲಿಗೆ ಚಕ್ರ ಕಟ್ಟಿ ಓಡುತ್ತಿರುತ್ತೇವೆ. ಇನ್ನೊಬ್ಬರ ಹೊಗಳಿಕೆಗೆ, ಪ್ರಶಂಸೆಗೆ, ಪ್ರೀತಿಪಾತ್ರರಾಗುವುದಕ್ಕೆ ಏನು ಸರ್ಕಸ್ ಬೇಕಾದರೂ ಮಾಡುತ್ತೇವೆ. ಇಂತಹ ಅಸಹ್ಯ ಹುಟ್ಟಿಸುವ ನಡೆಗಳು, ಸಂದರ್ಭಗಳು ಈಗೀಗ ಕಣ್ಣಿಗೆ ರಾಚುತ್ತಿರುತ್ತವೆ.

ಎಲ್ಲವನ್ನೂ ನೋಡಿ, ಇವರ ಬಂಡವಾಳದ ಅರಿವೂ ಇದ್ದು ಕೈಕಟ್ಟಿ ಸುಮ್ಮನಿರಬೇಕಾದ ದುರ್ಗತಿ ಬೇರೆ. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎಂದು ಬಸವಣ್ಣನವರು ಹೇಳಿದಂತೆ ನಕಲಿಗಳ ಕಂಡು ಚಪ್ಪಾಳೆ ತಟ್ಟಲಾರದ ನನ್ನ ಪರಿಸ್ಥಿತಿಯನ್ನು, ಇವರ ಹಿಂದೆ ಹೋಗುವ ಸೋ ಕಾಲ್ಡ್ ದೊಡ್ಡ ಮನುಷ್ಯರ ಕಂಡು ಸಹಿಸಲೂ ಆಗದ ನನ್ನ‌ ಮನಸ್ಥಿತಿಯನ್ನೇ ತಿದ್ದಿಕೊಂಡು ನನ್ನನ್ನೇ ನಾನು ಸಂತೈಸಿಕೊಳ್ಳುವುದೇ ಒಳ್ಳೆಯದು ಎಂದು ಹಲವು ಸಲ ಅನಿಸುವುದುಂಟು.

ಒಂದು ಕಂಪನಿಯ ಎಂ.ಡಿ ಒಂದು ಸ್ಟಾಫ್‌ ಮೀಟಿಂಗ್ ನಲ್ಲಿ ತೀರಾ ಕಳಪೆ ಮಟ್ಟದ, ನಗುವೇ ತರಿಸದ ನೀರಸ
ಜೋಕೊಂದನ್ನು ಹೇಳಿದನಂತೆ. ಎಲ್ಲರೂ ಬಿದ್ದು ಬಿದ್ದು ನಕ್ಕರಂತೆ. ಆದರೆ ಒಬ್ಬ ಮಾತ್ರ ನಗಾಡದೇ ಗಂಭೀರವಾಗಿ
ಕುಳಿತಿzನೆ. ಪಕ್ಕದವನು ಕೇಳಿದನಂತೆ, ‘ನೀನ್ಯಾಕೆ ನಗುತ್ತಿಲ್ಲ’ ಎಂದು. ಅವನಂದ, ‘ನಾನು ಇವತ್ತು ಈ ಕೆಲಸಕ್ಕೆ ರಾಜೀ
ನಾಮೆ ಕೊಟ್ಟಿದ್ದೇನೆ. ಇನ್ನು ಮೇಲಽಕಾರಿಯನ್ನು ತೃಪ್ತಿ ಪಡಿಸಲು ಈ ನಾಟಕದ ನಗು ನಗಬೇಕಿಲ್ಲ’ ಎಂದು. ಅಂದರೆ
ಅವನಿಗೆ ಅಧಿಕಾರದಲ್ಲಿರುವವರನ್ನು, ದೊಡ್ಡವರೆನಿಸಿಕೊಂಡವರನ್ನು ತೃಪ್ತಿಗೊಳಿಸಲು ಕೃತಕ ನಗುವಿನ, ನಟನೆಯ
ಅವಶ್ಯಕತೆಯಿಲ್ಲ ಎಂದು.

ನಾವೂ ಕೂಡಾ ಬೇರೆಯವರ ಕಣ್ಣಲ್ಲಿ ಒಳ್ಳೆಯವರಾಗಲು ಏನೇನೋ ಕಸರತ್ತು ಮಾಡುತ್ತೇವೆ. ಅದಕ್ಕಾಗಿ ಬರೀ ತೋರಿಕೆ, ಕೃತಕ ಅಭಿನಯ, ನಾಟಕ, ನಕಲಿ ಪ್ರದರ್ಶನದ ಮೊರೆ ಹೋಗುತ್ತೇವೆ. ನಾವು ಕಾಣುವ ಪ್ರತಿಚ್ಛಾಯೆಗಳು ಇಂತಹದ್ದೇ ಫೇಕುಗಳು ಆಗಿರಲೂಬಹುದು ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಅಧಿಕಾರದಲ್ಲಿರುವವರಲ್ಲಿ, ಹಣ, ಅಂತಸ್ತು, ಕೀರ್ತಿ, ಪ್ರಶಸ್ತಿ ವಿಜೇತರು ಮೊದಲಾದವರಲ್ಲಿ ತೋರಿಸುವ ಆದರ, ಗೌರವ, ಒಡನಾಟ, ಹೊಗಳು ವಿಕೆ, ಜೈಕಾರ, ಲೈಕು, ಕಮೆಂಟು ಎಲ್ಲವೂ ಪ್ರಾಮಾಣಿಕವಾಗಿರಬೇಕೆಂದೇನೂ ಇಲ್ಲ.

ಜೊತೆಗಿರುವಾಗ ಅತ್ಯಂತ ಗೌರವಾದರಗಳನ್ನು ತೋರುವ ಜನರು ಅವರ ಹಿಂದೆ ಹೀನವಾಗಿ ಪರದೂಷಣೆ ಮಾಡುವುದನ್ನೂ ಕಂಡಿರುತ್ತೇವೆ. ಕೇವಲ ಒಂದೇ ಒಂದು ಕವನ ಬರೆದು(ಅದೂ ಹಲವು ಕವನಗಳಿಂದ ಆಯ್ದ ಪದಪುಂಜ) ‘ಕವಿರತ್ನ ಕಾಳಿದಾಸ’ ಎಂಬ ಪ್ರಶಸ್ತಿ ಪಡೆದು ಬೀಗುವವರ ಹಿಂದೆ ಹಿಂಬಾಲಕರ ದಂಡೇ ಇರಬಹುದು. ಶೃತಿ, ತಾಳ, ಲಯ ರಹಿತ ಹಾಡುವವರಿಗೆ ‘ಗಾನಗಂಧರ್ವ’ ಎಂಬ ಬಿರುದನ್ನು ಪಡೆದವರ ಹಿಂದೆ ಜೈಕಾರ ಹಾಕಲು ಜನರ ಗುಂಪೇ ಇರಬಹುದು. ತೀರಾ ಸ್ಟಾಂಡರ್ಡ್ ಇಲ್ಲದ ದಿನಕ್ಕೆ ಮೂರರಂತೆ ವೈದ್ಯರು ಬರೆದು ಕೊಡುವ ಪ್ರಿಸ್ಕ್ರಿಪ್ಷನ್ ಥರ ಕಾರ್ಯಕ್ರಮಗಳನ್ನು ನೀಡಿ ‘ಶ್ರೇಷ್ಠ ಸಾಂಸ್ಕೃತಿಕ ಚೈತನ್ಯ’ ಎಂಬ ಬಿರುದು ಕೊಡಲು ಸಾಲು ಸಾಲು ಮಂದಿ ಇರಬಹುದು.

ಅದನ್ನು ಹೊಗಳಿ ಹಾಡುವ ಹೊಗಳುಭಟರೂ ಇರಬಹುದು. ಉಘೇ ಉಘೇ ಅನ್ನಲು ಹಿಂದೆ ಕುರಿಮಂದೆಯಿರ ಬಹುದು. ಅಕ್ಷರ ದೋಷವಿಲ್ಲದೇ, ವ್ಯಾಕರಣ ದೋಷವಿಲ್ಲದೇ ನೆಟ್ಟಗೆ ಒಂದೇ ಒಂದು ಸಾಲು ಬರೆಯಲು ಬಾರದವ ನಿಗೆ ‘ಪರಮಶ್ರೇಷ್ಠ ಸಾಹಿತಿ’ ಅನ್ನುವ ಪ್ರಶಸ್ತಿ ಕೊಡಬಹುದು. ಅದನ್ನು ಕಂಡು ಚಪ್ಪಾಳೆ ತಟ್ಟಿ ಅದು ನಿಜವೆಂಬಂತೆ ಬಿಂಬಿಸಲು ಸಾವಿರಾರು ಅಭಿಮಾನಿಗಳಿರಬಹುದು. ಸ್ಪಷ್ಟ ಕನ್ನಡದಲ್ಲಿ ಒಂದೇ ಒಂದು ಸಾಲು ಮಾತನಾಡಲು ಬಾರದವನಿಗೆ ‘ಉತ್ಕೃಷ್ಟ ಕನ್ನಡಿಗ ರತ್ನ’ ಎಂಬ ಪ್ರಶಸ್ತಿಯೂ ಸಿಗಬಹುದು. ಅದಕ್ಕೆ ಅಭಿನಂದನೆ ಸಲ್ಲಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಸಂಸ್ಥೆಗಳಿರಬಹುದು. ಆದರೆ ಈ ಹೊಗಳುಭಟರು ಕೇವಲ ಎದುರಿನಿಂದ ಮಾತ್ರ ತಮ್ಮ ಬೇಳೆ ಬೇಯಿಸಿಕೊಳ್ಳಲು ಬರೀ ತೋರಿಕೆ ಅಷ್ಟೇ. ಜೈಕಾರ ಹಾಕಿದ ಅದೇ ಬಾಯಿಗಳು ಮರೆಯಲ್ಲಿ ಛೀಮಾರಿ ಹಾಕುವುದನ್ನೂ ಕಂಡಿರುತ್ತೇವೆ.

ಹಾಗಾಗಿ ಬೇರೆಯವರ ಕಣ್ಣಲ್ಲಿ ನಮ್ಮನ್ನು ಕಾಣದೇ ನಮ್ಮೊಳಗೆ ನಾವೇ ನೋಡಿದಾಗ ಕಾಣುವ ನಮ್ಮ ಪ್ರತಿಚ್ಛಾಯೆ
ಶಾಶ್ವತ. ಅಲ್ಲಿ ನಾವೇನು ಎಂಬ ಸತ್ಯದ ದರ್ಶನಾವಗುತ್ತದೆ. ಅದಕ್ಕಿಂತ ದೊಡ್ಡ ಆತ್ಮದರ್ಶನ ಬೇರೆ ಬೇಕಾಗಿಲ್ಲ. ಗುಂಪಿನಲ್ಲಿ ಗೋವಿಂದ ಅನ್ನುವ ಪ್ರವೃತ್ತಿಯವರು ಅಲ್ಲವಾದರೆ, ಹತ್ತರೊಟ್ಟಿಗೆ ಹನ್ನೊಂದಾಗದೇ ಇರುವವರಾದರೆ, ತೆರೆಯ ವಿರುದ್ಧ ದಿಕ್ಕಿಗೆ ಚಲಿಸುವವರಾದರೆ ಖಂಡಿತವಾಗಿಯೂ ಕೆಲವೊಮ್ಮೆ ಮೂಲೆಗುಂಪಾಗಬಹುದು. ಅಂಥವರು ಅದೆಷ್ಟು ಒಳ್ಳೆಯವರಾಗಿದ್ದರೂ, ನೈಜ ಪ್ರತಿಭಾವಂತರಾಗಿದ್ದರೂ ಅವಕಾಶ ವಂಚಿತರಾಗಬಹುದು.

ಜನರು ಕಂಡರೂ ಕಾಣದಂತಿದ್ದು ಗುರುತಿಸದೇ ಇರಬಹುದು. ಅವರು ಹಾಕುವ ಪೋಗೆ ಲೈಕು, ಕಮೆಂಟು ಬಾರದೇ ಇರಬಹುದು. ಜನಮೆಚ್ಚದೇ ಇರಬಹುದು. ಆದರೆ ನಾವೇನು ಅನ್ನುವ ಸತ್ಯ ನಮಗೆ ಗೊತ್ತಿದ್ದರೆ ಅಷ್ಟೇ ಸಾಕು. ನಾವು ಮಾಡುವ ಪ್ರತಿ ಕೆಲಸ, ನಡೆನುಡಿ ನಮಗೆ ಮೆಚ್ಚುಗೆ ಆದರೆ ಸಾಕು. ಪರರಿಗಲ್ಲ. ಮಾಡುವ ಕೆಲಸವನ್ನು
ಮನಃಪೂರ್ವಕವಾಗಿ ತೃಪ್ತಿಯಿಂದ ಮಾಡಿದರಾಯಿತು ಅನ್ನುವುದನ್ನು ಡಿವಿಜಿಯವರ ಈ ಅದ್ಭುತ ಸಾಲುಗಳು
ತಿಳಿಸಿಕೊಟ್ಟು ನಮಗೆ ಸೂರ್ತಿ ತುಂಬುತ್ತವೆ. ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು| ದೊರೆತುದ
ಹಸಾದವೆಂದುಣ್ಣು ಗೊಣಗಿಡದೆ|| ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ| ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ||

(ಲೇಖಕಿ: ಹವ್ಯಾಸಿ ಬರಹಗಾರ್ತಿ)

ಇದನ್ನೂ ಓದಿ:Ravi Sajangadde Column: ಟ್ರುಡೋ ಅಧಿಕಾರ ದಾಸೆಗೆ ಕೆನಡಾ ʼಖಾಲಿʼ ಸ್ತಾನ್‌ ?!