Sunday, 15th December 2024

ಸಂದರ್ಭದಿಂದ ಕೆಲ ವಸ್ತುಗಳಿಗೆ ಬೆಲೆ !

ವಿದೇಶವಾಸಿ

dhyapaa@gmail.com

ಈ ಲೋಕದಲ್ಲಿ ಯಾವುದೇ ವಸ್ತುವಿಗೆ ಅದರದ್ದೇ ಆದ ಬೆಲೆ ಇಲ್ಲ. ಪ್ರತಿಯೊಂದಕ್ಕೂ ಬೆಲೆ ಬರುವುದು ಸ್ಥಳದಿಂದ, ಸಮಯ ದಿಂದ ಅಥವಾ ಹೋಲಿಕೆಯಿಂದ. ಅಥವಾ ನಾವಾಗಿಯೇ ಅದಕ್ಕೆ ಕಟ್ಟುವ ಬೆಲೆಯಿಂದ. ಅದು ಹಣವಾಗಲಿ, ಆಸ್ತಿಯಾಗಲಿ, ಸೌಂದರ್ಯ ಅಥವಾ ಪ್ರತಿಭೆಯೇ ಆಗಲಿ. ಬೆಲೆ ಬರುವುದು ಏನಿದ್ದರೂ ತುಲನೆಯಿಂದ.

ಅಲೆಕ್ಸಾಂಡರ್ ಚಕ್ರವರ್ತಿಯ ಒಂದು ಕಥೆಯಿದೆ. ಪ್ರಪಂಚವನ್ನೇ ವಶಪಡಿಸಿ ಕೊಳ್ಳಬೇಕೆಂಬ ಹಂಬಲದಿಂದ ಅಲೆಕ್ಸಾಂಡರ್ ತನ್ನ ಸೇನೆಯನ್ನು ಕೂಡಿ ಕೊಂಡು ದಂಡೆತ್ತಿ ಹೋಗುತ್ತಾನೆ. ಭಾರತದ ರಾಜಸ್ಥಾನದ ಮರುಭೂಮಿಯ ಬಳಿ ಬರುತ್ತಿದ್ದಂತೆ ಜೋರಾದ ಬಿರುಗಾಳಿ ಬೀಸತೊಡಗುತ್ತದೆ. ಆ ಬಿರುಗಾಳಿ ಯಲ್ಲಿ ಆತನ ಹಲವು ಸೈನಿಕರು ಸಾವನ್ನಪ್ಪುತ್ತಾರೆ, ಉಳಿದವರು ದಿಕ್ಕು ತಪ್ಪಿ ಚದುರಿಹೋಗುತ್ತಾರೆ.

ಚಕ್ರವರ್ತಿಯೂ ದಾರಿ ತಪ್ಪಿ, ಒಬ್ಬಂಟಿಗನಾಗಿ ಮರುಭೂಮಿಯಲ್ಲಿ ಕಳೆದು ಹೋಗುತ್ತಾನೆ. ಆತನ ಬಳಿ ಇರುವ ಆಹಾರ, ಧಾನ್ಯ, ನೀರು ಎಲ್ಲವೂ ಖಾಲಿಯಾಗುತ್ತದೆ. ಅಲೆಕ್ಸಾಂಡರ್ ಒಬ್ಬಂಟಿಗನಾಗಿ ಮರುಭೂಮಿಯಲ್ಲಿ ಆಯಾಸಗೊಂಡು ನೀರಿಗಾಗಿಅಲೆದಾಡುತ್ತಿರುತ್ತಾನೆ. ಆ ಸಂದರ್ಭದಲ್ಲಿ ಆತನಿಗೆ ಊರಿಂದ ಊರಿಗೆ ಅಲೆದಾಡುವ ಒಬ್ಬ ಫಕೀರ ಎದುರಾಗುತ್ತಾನೆ.

ಫಕೀರನ ಬಳಿ ನೀರು ಇದ್ದುದ್ದನ್ನು ತಿಳಿದ ಅಲೆಕ್ಸಾಂಡರ್, ಸ್ವಲ್ಪ ನೀರು ಕೊಡುವಂತೆ ಆತನಲ್ಲಿ ಕೇಳಿಕೊಳ್ಳುತ್ತಾನೆ. ಫಕೀರನ ಬಳಿ ಇರುವುದು ಸ್ವಲ್ಪವೇ ಆದದ್ದರಿಂದ ಆತ ನೀರು ಕೊಡಲು ಒಪ್ಪದಿದ್ದಾಗ, ತಾನು ಅಲೆಕ್ಸಾಂಡರ್ ಚಕ್ರವರ್ತಿ ಎಂದು ಪರಿಚಯ ಹೇಳಿಕೊಂಡು, ನೀರಿನ ಬದಲು ತನ್ನ ಅರ್ಧ ರಾಜ್ಯ ಕೊಡುವುದಾಗಿ ಹೇಳುತ್ತಾನೆ. ಆಗಲೂ ಫಕೀರ ಒಪ್ಪದಿದ್ದಾಗ ತನ್ನ ಬದುಕು ಮತ್ತು ಸಾವಿನ ಪ್ರಶ್ನೆಯಾದದ್ದರಿಂದ, ತನ್ನ ಸರ್ವಸ್ವವನ್ನೂ ಕೊಡುವುದಾಗಿಯೂ, ಬದಲಾಗಿ ಸ್ವಲ್ಪ ನೀರು ಕೊಡುವಂತೆಯೂ ಅಂಗಲಾಚುತ್ತಾನೆ.

ಆಗ ಫಕೀರ ಹೇಳುತ್ತಾನೆ, ನೀನು ಚಕ್ರವರ್ತಿಯಾದರೇನು? ನಿನ್ನ ಬಳಿ ಎಷ್ಟೇ ಐಶ್ವರ್ಯ, ಸಂಪತ್ತು ಇದ್ದರೇನು? ನೀನು ಜೀವನ ಪೂರ್ತಿ ಹೊಡೆದಾಡಿ ಕಟ್ಟಿದ ಇಷ್ಟು ದೊಡ್ಡ ಸಾಮ್ರಾಜ್ಯದಿಂದ ಪ್ರಯೋಜನ ಏನು? ಈ ಕ್ಷಣದಲ್ಲಿ ನೀನು ಗಳಿಸಿದ್ದೆಲ್ಲ ಒಂದು ಲೋಟ ನೀರಿಗೆ ಸಮಾನ. ಅಷ್ಟೇ ಅಲ್ಲ, ಇದುವರೆಗೂ ನೀನು ಗಳಿಸಿದ್ದಕ್ಕೆಲ್ಲ ಈ ಕ್ಷಣದಲ್ಲಿ ಬೆಲೆ ಕಟ್ಟುವವನು, ಅದರ ಮೌಲ್ಯ ಅಳೆಯುವವನು ನೀನಲ್ಲ, ನಾನು ಎಂದಾಯಿತು. ಈ ಕ್ಷಣದಲ್ಲಿ ನಿನಗೆ ಅರ್ಧ ಲೋಟ ನೀರು ಕೊಟ್ಟು ನಿನ್ನ ಸರ್ವಸ್ವವನ್ನೂ ಕೊಂಡುಕೊಳ್ಳಬಹುದು, ನನ್ನದಾಗಿಸಿಕೊಳ್ಳಬಹುದು ಎಂದಾದರೆ, ನಿನಗಿಂತಲೂ ನಾನೇ ಶ್ರೀಮಂತ ಎಂದಾಯಿತಲ್ಲ? ಅಲ್ಲದೇ, ನಾನು ನಿನಗೆ ಏಕೆ ನೀರು ಕೊಡಬೇಕು? ಈ ಮರುಭೂಮಿಯಲ್ಲಿ ನೀರಿನ ಅವಶ್ಯಕತೆ ನಿನ್ನಷ್ಟೇ
ನನಗೂ ಇದೆ.

ನನ್ನ ಜೀವವಕ್ಕೂ ನಿನ್ನ ಜೀವಕ್ಕಿರುವಷ್ಟೇ ಬೆಲೆ ಇದೆ. ಈ ಕ್ಷಣದಲ್ಲಿ ನೀನು ಕೂಡಿಟ್ಟ ಸಂಪತ್ತು ನಿನ್ನ ಜೀವ ಉಳಿಸಲು ಸಾಧ್ಯವಿಲ್ಲ, ಆದರೆ ನಾನು ಕಟ್ಟಿಕೊಂಡು ಬಂದ ನೀರು ನನ್ನದಷ್ಟೇ ಅಲ್ಲ, ನಿನ್ನ ಜೀವವನ್ನೂ ಉಳಿಸಬಹುದು. ನಂತರ ಫಕೀರ ಅಲೆಕ್ಸಾಂಡರ್‌ನಿಂದ ಏನನ್ನೂ ಪಡೆಯದೇ ಅವನಿಗೆ ನೀರು ಕೊಡುತ್ತಾನೆ. ಅಸಲಿಗೆ ಫಕೀರ ಚಕ್ರವರ್ತಿಯಲ್ಲಿರುವ ಅಹಂಕಾರವನ್ನು ಹೊಡೆದೋಡಿಸಲು ಈ ರೀತಿ ಹೇಳುತ್ತಾನೆ ಎಂಬುದು ಕಥೆ. ಇಲ್ಲಿ ಕಥೆಯ ಸತ್ಯಾಸತ್ಯತೆಯ ಕುರಿತು ಚರ್ಚೆ ಬೇಡ. ಅದರಲ್ಲಿರುವ ನೀತಿ ಏನೆಂದರೆ, ಯಾವುದೇ ವಸ್ತುವಿನ ಮೌಲ್ಯ, ಆಯಾ ಸ್ಥಳಕ್ಕೆ, ಸಂದರ್ಭಕ್ಕೆ ಸಂಬಂಧಪಟ್ಟಂತೆ ಬದಲಾಗುತ್ತದೆ ಎಂಬುದು.

ಸ್ಥಳ, ಸಮಯ ಬದಲಾದಂತೆ ವಸ್ತುವಿನ ಮೌಲ್ಯವೂ ಬದಲಾಗುತ್ತದೆ. ಒಂದು ವೇಳೆ ಅಲೆಕ್ಸಾಂಡರ್ ಸಿಂಧೂ ನದಿಯ ತೀರದ,
ಗಂಗೆಯ ತಟದ ಇದ್ದಿದ್ದರೆ ನೀರಿಗಾಗಿ ಇಷ್ಟು ಪರಿತಪಿಸಬೇಕಾಗಿರಲಿಲ್ಲ. ಮರುಭೂಮಿಯದದ್ದರಿಂದ ನೀರಿಗೆ ಅಷ್ಟು ಬೆಲೆ ಬಂದದ್ದು. ಬಹಳ ದೂರ ಹೋಗುವುದು ಬೇಡ, ಬಂಗಾರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಬಂಗಾರ ಇತರ ಲೋಹದಂತೆಯಾದರೂ, ಅದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಂದಿರುವುದು ನಮ್ಮಿಂದಾಗಿ. ಸಾಮಾನ್ಯ ಲೋಹಕ್ಕೆ ಬೆಲೆಕಟ್ಟಿ ನಾವು ಅದನ್ನು ಬಂಗಾರವನ್ನಾಗಿಸಿದ್ದೇವೆ.

ಲೋಕದಲ್ಲಿ ಬಹುತೇಕ ವಸ್ತುಗಳು ಹಾಗೆಯೇ. ವಜ್ರ, ಬೆಳ್ಳಿ, ಮುತ್ತು, ಹರಳು ಎಲ್ಲವೂ ಅಷ್ಟೇ. ವಸ್ತುವಿನ ನಿಜವಾದ ಬೆಲೆ ಏನೆಂದು ತಿಳಿಯದಿದ್ದರೂ ಜನರು ಅದಕ್ಕೊಂದು ಬೆಲೆ ಕಟ್ಟಿ ಅದನ್ನು ಬೆಲೆಬಾಳುವ ವಸ್ತುವನ್ನಾಗಿಸುತ್ತಾರೆ. (ಇದುವರೆಗೂ ಕಣ್ಣಿಗೆ ಕಾಣದ ಬಿಟ್‌ಕಾಯಿನ್ ಇದಕ್ಕೆ ಅದ್ಭುತ ಉದಾಹರಣೆ.) ಹಾಗೆ ನೋಡಿದರೆ, ಬಂಗಾರಕ್ಕೆ ನಿಜವಾದ ಬೆಲೆ ಬರುವುದು ಅದು ಆಭರಣವಾಗಿ ಪರಿವರ್ತನೆಗೊಂಡು ಮನುಷ್ಯನ ದೇಹದ ಮೇಲೆ ಕುಳಿತಾಗ ವಿನಃ ಮನೆಯ ತಿಜೋರಿಯ ಅಥವಾ ಬ್ಯಾಂಕಿನ ಲಾಕರ್‌ನ ಭದ್ರವಾಗಿ ಇಟ್ಟಾಗ ಅಲ್ಲ.

ಒಂದು ಹೊಲದಲ್ಲಿ ಏನೂ ಬೆಳೆಯದಿದ್ದರೆ ಆ ಹೊಲಕ್ಕೆ ಬೆಲೆ ಇಲ್ಲ. ಹೋಗಲಿ ನೂರಾರು ಎಕರೆ ಹೊಲದ ಮಧ್ಯದಲ್ಲಿ ಒಂದು
ಅಂಗಡಿ ಇಟ್ಟರೂ ಅಷ್ಟಕ್ಕಷ್ಟೇ. ಅದೇ ಪಟ್ಟಣ ಪ್ರದೇಶದಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವ ಸಣ್ಣ ಭೂಮಿ ಇದ್ದರೂ ಅದಕ್ಕೆ
ಬೆಲೆ ಹೆಚ್ಚು. ಅದೇ ಭೂಮಿ ಪಟ್ಟಣದಿಂದ ದೂರವಾದಂತೆ ಅದರ ಬೆಲೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಅಂದರೆ,
ಭೂಮಿಯ ಬೆಲೆ ನಿರ್ಣ ಯವಾಗುವುದು ಅದು ಇರುವ ಸ್ಥಳದ ಮೇಲೆ ಎಂದಾಯಿತು. ಇದಕ್ಕಿಂತಲೂ ಸರಳ ಸರಳವಾದ ಉದಾಹರಣೆಯಿದೆ.

ಬೆಂಗಳೂರಿನ ಕಲಾಸಿಪಾಳ್ಯದ ಬೀದಿ ಬದಿಯಲ್ಲಿರುವ ಸಣ್ಣ ಹೊಟೇಲಿನಲ್ಲಿ ಒಂದು ದೋಸೆಯ ಬೆಲೆ ಇಪ್ಪತ್ತೈದು ರುಪಾಯಿ ಅಂದುಕೊಳ್ಳಿ. ಅದೇ ದೋಸೆಗೆ ಡಾಲರ್ಸ್ ಕಾಲನಿಯ ಹವಾನಿಯಂತ್ರಿತ ಹೊಟೇಲಿನಲ್ಲಿ ನೂರು ರುಪಾಯಿ, ಕೆಂಪೇಗೌಡ
ವಿಮಾನ ನಿಲ್ದಾಣದಲ್ಲಿ ಇನ್ನೂರು ರೂಪಾಯಿ, ದುಬೈ ಅಥವಾ ಲಂಡನ್ ವಿಮಾನ ನಿಲ್ದಾಣದಲ್ಲಿ ನಾಲ್ಕುನೂರು ರುಪಾಯಿ! ಒಂದೇ ದೋಸೆ ಸ್ಥಳಕ್ಕೆ ಅನುಗುಣವಾಗಿ ತನ್ನ ಬೆಲೆ ಬದಲಾಯಿಸಿಕೊಳ್ಳುತ್ತದೆ.

ಇಲ್ಲಿ ದೋಸೆಯ ಸಂಖ್ಯೆಯಾಗಲೀ, ಗಾತ್ರವಾಗಲೀ ಹೆಚ್ಚಾಗುವುದಿಲ್ಲ, ಹೆಚ್ಚಾಗುವುದು ಸ್ಥಳಕ್ಕೆ ತಕ್ಕಂತೆ ಅದರ ಬೆಲೆ ಮಾತ್ರ.
ಒಬ್ಬ ವ್ಯಕ್ತಿ ಐವತ್ತು ಲಕ್ಷ ರುಪಾಯಿ ಖರ್ಚು ಮಾಡಿ ಒಂದು ಮನೆ ಕಟ್ಟಿದ ಅಂದುಕೊಳ್ಳೋಣ. ಕಾಲ ಕ್ರಮೇಣ, ಐವತ್ತು ವರ್ಷದ ನಂತರ ಆ ಮನೆಯ ಬೆಲೆ ಐದು ಕೋಟಿ ರುಪಾಯಿ ಆಯಿತು ಎಂದು ಎಣಿಸೋಣ. ಒಮ್ಮೆ ಯೋಚಿಸಿ, ಅಸಲಿಗೆ ಆ ಮನೆ ಐವತ್ತು ವರ್ಷ ಹಳೆಯದಾಗಿದೆ. ಮಳೆ ಬಂದಾಗ ಛಾವಣಿಯಿಂದ ನೀರು ಸೋರುತ್ತದೆ, ಗೋಡೆಯಿಂದ ಆರ್ದ್ರತೆಯ ಪಸೆ ಒಸರುತ್ತದೆ, ಬಣ್ಣ ಮಾಸಿದೆ, ದುರಸ್ತಿಗೊಳಿಸದಿದ್ದರೆ ಇಂದೋ- ಅಂದೋ ನೆಲಸಮವಾಗುವ ಸ್ಥಿತಿಯಲ್ಲಿದೆ, ಮನುಷ್ಯರು ಉಳಿಯಲು ಯೋಗ್ಯವಲ್ಲದಂತಾಗಿದೆ.

ಆದರೆ, ಈ ಐವತ್ತು ವರ್ಷಗಳಲ್ಲಿ ಮನೆಯ ಸಮೀಪ ವಿಮಾನ ನಿಲ್ದಾಣವೋ, ರೇಲ್ವೆ ನಿಲ್ದಾಣವೋ, ಶಾಲೆ-ಕಾಲೇಜುಗಳೋ, ಸುಸಜ್ಜಿತ ಆಸ್ಪತ್ರೆಯೋ ನಿರ್ಮಾಣವಾಗಿದೆ ಅಂದರೆ ಆ ಮಾರುಕಟ್ಟೆಯಲ್ಲಿ ಆ ಮನೆಯಿರುವ ಜಾಗಕ್ಕೆ ಹೆಚ್ಚಿನ ಬೆಲೆ ಬಂದು ಮೌಲ್ಯ ಏರಿರುತ್ತದೆ. ಅಂದರೆ, ಮೂಲ ಮನೆಯಲ್ಲಿ ಅದರ ಮೌಲ್ಯ ವೃದ್ಧಿಸುವ ಯಾವುದೇ ಉತ್ತಮ ಬದಲಾವಣೆ ಆಗದಿದ್ದರೂ, ಆಸುಪಾಸಿನ ಪರಿಸರದಿಂದಾಗಿ ಅದರ ಮೌಲ್ಯ ವೃದ್ಧಿಸಿದೆ ಎಂದಾಯಿತು.

ಹಾಗಾದರೆ ಆ ಮನೆಯ ಒಡೆಯ ನಿಜವಾಗಿಯೂ ಶ್ರೀಮಂತ ಆದಂತಾಯಿತೇ? ಅದೆಲ್ಲವೂ ಸರಿ ಎಂದೇ ಇಟ್ಟುಕೊಳ್ಳೋಣ.
ಒಂದು ವೇಳೆ, ಭಾವನಾತ್ಮಕ ಸಂಬಂಧದಿಂದ ಮನೆಯ ಒಡೆಯ ಆ ಮನೆಯನ್ನು ಮಾರಲು ಇಷ್ಟ ಪಡದಿದ್ದರೆ? ಮಾರುಕಟ್ಟೆಯಲ್ಲಿ ಅದರ ಬೆಲೆ ಎಷ್ಟೇ ಕೋಟಿ ಇದ್ದರೂ ಅದು ಮಾಲೀಕನಿಗೆ ನಿಷ್ಪ್ರಯೋಜಕ ಎಂದಾಯಿತು. ಎಷ್ಟೋ ರೈತರು ಬೆಲೆ ಬಾಳುವ ಭೂಮಿ ಹೊಂದಿದ್ದರೂ, ಅತ್ತ ಏನೂ ಬೆಳೆಯದೇ, ಇತ್ತ ಮಾರಾಟವನ್ನೂ ಮಾಡದೇ ಇಟ್ಟುಕೊಂಡ
ಉದಾಹರಣೆ ಎಷ್ಟಿಲ್ಲ? ಹಾಗಂತ ಅವರೆಲ್ಲರೂ ಶ್ರೀಮಂತರೇ ಎಂದರೆ ಖಂಡಿತ ಅಲ್ಲ.

ಪಟ್ಟಣದ ಪ್ರಮುಖ ರಸ್ತೆಯಲ್ಲಿದ್ದರೂ, ದಿನಕ್ಕೆ ಒಂದೂ ಗಿರಾಕಿ ಬಾರದ ಅಂಗಡಿಗಳು, ಹೊಟೇಲುಗಳು ಎಷ್ಟಿಲ್ಲ? ಕೆಲವು ಹೊಟೇಲುಗಳಲ್ಲಿ, ಅಂಗಡಿಗಳಲ್ಲಿ ತೀರಾ ಕಮ್ಮಿ ವ್ಯಾಪಾರವಿದೆ ಅಥವಾ ನಿತ್ಯದ ವ್ಯಾಪಾರ ಅಲ್ಲಿಂದಲ್ಲಿಗೆ ಆಗುತ್ತಿದ್ದರೂ, ಪ್ರತಿಷ್ಠೆಗಾಗಿಯೋ, ಸ್ಪರ್ಧೆಗಾಗಿಯೋ ಮಾಲೀಕರು ವ್ಯಾಪಾರ ಮುಂದುವರಿಸುತ್ತಿರುತ್ತಾರೆ. ಹೊರಗಿನಿಂದ ನೋಡುವವರ
ದೃಷ್ಟಿಯಲ್ಲಿ ಆ ವ್ಯಾಪಾರಸ್ಥ ಶ್ರೀಮಂತನಾಗಿ ಕಾಣುತ್ತಾನೆ. ಅದಕ್ಕೆ ಕಾರಣ ವ್ಯಾಪಾರವಲ್ಲ, ವ್ಯಾಪಾರ ಮಾಡುತ್ತಿರುವ ಸ್ಥಳದ ಮೌಲ್ಯ.

ಒಬ್ಬ ವ್ಯಕ್ತಿ ತನ್ನ ಆಸ್ತಿಗೆ ಏನನ್ನೂ ಸೇರಿಸದೇ, ಮಾರುಕಟ್ಟೆಯಲ್ಲಿ ಮೌಲ್ಯ ಏರಿದ್ದರಿಂದ ಲಕ್ಷಾಧೀಶ್ವರನಿಂದ ಕೋಟ್ಯಾಧೀಶ್ವರ ನಾಗುತ್ತಾನೆ ಎಂದಾದರೆ, ಅದು ಯಾವ ರೀತಿಯ ಶ್ರೀಮಂತಿಕೆ? ಅನೇಕ ಬಾರಿ ವಸ್ತುವಿನ ಅಥವಾ ಆಸ್ತಿಯ ಮೌಲ್ಯ ಹೆಚ್ಚುತ್ತದೆಯಾದರೂ ಗುಣಮಟ್ಟದಗಲಿ, ಸ್ವಭಾವದಗಲಿ, ಯೋಗ್ಯತೆಯಗಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ. ನಗರದ ಪ್ರಮುಖ ಸ್ಥಳದಲ್ಲಿರುವ ಒಂದೇ ಕೊಠಡಿಯ ಚಿಕ್ಕ ಮನೆಗೆ ಕೋಟಿ ರುಪಾಯಿ ಬೆಲೆ ಇದ್ದರೆ, ಪಟ್ಟಣದಿಂದ ದೂರ ಇರುವ ವಿಶಾಲವಾದ ಬಂಗಲೆಗೆ ಅದಕ್ಕಿಂತ ಬೆಲೆ ಕಮ್ಮಿ. ಎರಡನ್ನೂ ತುಲನೆ ಮಾಡಿದರೆ, ಚಿಕ್ಕ ಮನೆಗೂ, ಬಂಗಲೆಗೂ ಅಜಗಜಾಂತರ.

ಸಣ್ಣ ಮನೆಗಿಂತ ಬಂಗಲೆಯಲ್ಲಿ ಹೆಚ್ಚು ಸುಖವಾಗಿ ಇರಬಹುದಾದರೂ ಕಷ್ಟವಾದರೂ ಸಣ್ಣ ಮನೆಯಲ್ಲಿಯೇ ಉಳಿದು, ಅದರ ಮೌಲ್ಯವನ್ನು ಪರಿಗಣಿಸಿ ಸಂತೋಷಪಡುವವರು ಎಷ್ಟಿಲ್ಲ? ನಮ್ಮ ಜೀವನವನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಎಷ್ಟೋ ಬಾರಿ ಯಾವುದೇ ಪ್ರಯತ್ನವಿಲ್ಲದೇ ನಮ್ಮ ಆಸ್ತಿಯ ಮೌಲ್ಯದಲ್ಲಿ ಆಗುವ ಬದಲಾವಣೆಯನ್ನು ಗಮನಿಸಬಹುದು. ಉದ್ಯಮ ಚೆನ್ನಾಗಿ ನಡೆಯದಿದ್ದರೆ, ನಾವು ಹೊಂದಿದ ಭೂಮಿಯ ಮೌಲ್ಯ ಕುಸಿದರೆ, ಆಸ್ತಿಯ ಅಥವಾ ವಸ್ತುವಿನ ಸಂಖ್ಯಾಬಲ ಅಷ್ಟೇ ಇದ್ದರೂ ಮೌಲ್ಯ ಕಡಿಮೆಯಾದುದ್ದಕ್ಕೆ ನಾವು ಖಿನ್ನರಾಗುತ್ತೇವೆ.

ಅದೇ ಆಸ್ತಿಯ ಮೌಲ್ಯ ವೃದ್ಧಿಸಿದರೆ ನಾವು ಖುಷಿಪಡುತ್ತೇವೆ. ಈ ಎಲ್ಲಾ ಮೌಲ್ಯಗಳೂ ಕ್ಷಣಿಕ ಎಂಬುದು ಪರಮ ಸತ್ಯ. ಆದರೆ ನಾವು ಅದನ್ನು ಮರೆತು, ಕ್ಷಣಿಕವಾದ ಮೌಲ್ಯವನ್ನೇ ನಂಬಿಕೊಂಡು ಮುನ್ನಡೆಯುತ್ತೇವೆ. ಒಟ್ಟಾರೆ ಹೇಳುವುದಾದರೆ, ನಾವು ಎಷ್ಟು ಆನಂದದಿಂದ ಇದ್ದೇವೆ ಎಂಬುದು ಶ್ರೀಮಂತಿಕೆಯ ಅಳತೆಗೋಲು ಆಗಬೇಕೇ ಹೊರತು ನಮ್ಮ ಬಳಿ ಇರುವ ಆಸ್ತಿಯಿಂದ ಅಲ್ಲ.

ನಮ್ಮಲ್ಲಿರುವ ಹಣದಿಂದ ಐಷಾರಾಮಿ ವಸ್ತುಗಳನ್ನು ಕೊಂಡುಕೊಳ್ಳಬಹುದೇ ವಿನಃ ಆನಂದವನ್ನಲ್ಲ. ಹಂಸತೂಲಿಕಾತಲ್ಪದಲ್ಲಿ ಮೃದುವಾದ ಹಾಸಿಗೆ, ಮೆತ್ತನೆಯ ದಿಂಬನ್ನಿಟ್ಟುಕೊಂಡು ಪವಡಿಸಿದರೂ ನಿದ್ರೆ ಬಾರದ ಕಣ್ಣುಗಳು ಎಷ್ಟಿಲ್ಲ ಹೇಳಿ? ಜೀವನದಲ್ಲಿ ನಾವು ಏನೆಲ್ಲ ಕಲೆಹಾಕುತ್ತೇವೆ. ಅವೆಲ್ಲ ಅನಿವಾರ್ಯವೋ, ಅವಶ್ಯಕವೋ, ಪ್ರಯೋಜಕವೋ, ಅಪ್ರಯೋಜಕವೋ ಎಂದು ವಿಚಾರ ಮಾಡದೆಯೇ ಸಾಕಷ್ಟು ವಸ್ತುಗಳನ್ನು, ಆಸ್ತಿಯನ್ನು ಕೂಡಿಹಾಕುತ್ತೇವೆ.

ಮತ್ತೊಮ್ಮೆ ಹೇಳುತ್ತೇನೆ, ಈ ಲೋಕದಲ್ಲಿ ಯಾವುದೇ ವಸ್ತುವಿಗೆ ಅದರದ್ದೇ ಆದ ಬೆಲೆ ಇಲ್ಲ. ಪ್ರತಿಯೊಂದಕ್ಕೂ ಬೆಲೆ ಬರುವುದು ಸ್ಥಳದಿಂದ, ಸಮಯದಿಂದ ಅಥವಾ ಹೋಲಿಕೆಯಿಂದ. ಅಥವಾ ನಾವಾಗಿಯೇ ಅದಕ್ಕೆ ಕಟ್ಟುವ ಬೆಲೆಯಿಂದ. ಅದು ಹಣವಾಗಲಿ, ಆಸ್ತಿಯಾಗಲಿ, ಸೌಂದರ್ಯವಾಗಲಿ ಅಥವಾ ಪ್ರತಿಭೆಯೇ ಆಗಲಿ. ಬೆಲೆ ಬರುವುದು ಏನಿದ್ದರೂ ತುಲನೆಯಿಂದ. ಮೌಲ್ಯ ಯಾವತ್ತಿದ್ದರೂ ಸಂದರ್ಭ ಮತ್ತು ಸಮಯದ ವ್ಯಾಪ್ತಿಗೆ ಒಳಪಟ್ಟಿದ್ದು ಎಂದಾದರೆ ಅದು ನಿಜವಾದ ಸತ್ಯವಲ್ಲ.

ಅದನ್ನು ಬೇಕಾದರೆ ಸಾಂದರ್ಭಿಕ ಸತ್ಯ ಎನ್ನಬಹುದು. ಒಂದು ಕಾಲದಲ್ಲಿ ಒಬ್ಬ ರಾಜ ಅಥವಾ ಒಂದು ರಾಜ್ಯ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ಅಲ್ಲಿರುವ ಹಸು, ಕುದುರೆ, ಆನೆಗಳನ್ನು ಪರಿಗಣಿಸಿ ಹೇಳಲಾಗುತ್ತಿತ್ತು. ಇಂದು ಅದ್ಯಾವುದೂ ಅಳತೆಗೋಲಲ್ಲ. ಇಂದಿನ ಕಾಲಮಾನವೇ ಬೇರೆ. ಇಂದಿನ ಕಾಲಮಾನವೇ ಸ್ಥಿರ, ಸ್ಥಾಯಿ ಎಂದು ನಂಬಬೇಕಿಲ್ಲ. ಇದೂ ಬದಲಾವಣೆಗೆ ಒಳಗಾಗಬೇಕಾದದ್ದೇ. ಆದ್ದರಿಂದ ನಿಜವಾಗಿ ಆನಂದದಿಂದ ಇರಲು ಏನು ಬೇಕೋ ಅದನ್ನು ಸಂಪಾದಿಸಬೇಕೇ ವಿನಃ ಕ್ಷಣದ ಸಂತೋಷಕ್ಕೆ ಬೇಕಾದದ್ದನ್ನಲ್ಲ.