Thursday, 12th December 2024

ಗಾಂಧಿಯೆಂಬ ಸರಳ ಬದುಕಿನ ತತ್ತ್ವದ ಅರಿವು

ದಾಸ್ ಕ್ಯಾಪಿಟಲ್

ಟಿ.ದೇವದಾಸ್, ಬರಹಗಾರ, ಶಿಕ್ಷಕ

ಗಾಂಧಿ ಎಂದರೆ ತಕ್ಷಣ ನೆನಪಾಗುವುದು ಸರಳತನ. ಇದು ಯುನಿವರ್ಸಲ್ ಒಪ್ಪಿದ ಸತ್ಯ. ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿ ಈ ಜಗತ್ತು ಎರಡು ಪ್ರಮುಖ ಪೊಲಿಟಿಕಲ್ ಅಜೆಂಡಾಗಳಿಗೆ ಮುಖಾಮುಖಿಯಾಗ ಬೇಕಾಗುತ್ತದೆ. ಒಂದು; ಗಾಂಧಿ, ಇನ್ನೊಂದು;
ಅಣುಬಾಂಬು. ಈ ಎರಡರಲ್ಲಿ ಯಾವುದನ್ನು ಮನುಷ್ಯ ಆಯ್ಕೆ ಮಾಡುತ್ತಾನೆ ಎಂಬುದರ ಮೇಲೆ ಮುಂದಿನ ಶತಮಾನದ ಮಾನವನ ಭವಿಷ್ಯ ನಿಂತಿದೆ ಎಂದು ಜಾರ್ಜ್ ಬರ್ನಾಡ್ ಷಾ ಹೇಳಿದ್ದ. ಮನುಷ್ಯನ ಅತೀ ದುರಾಸೆಯನ್ನು ಮೀರಿದ ದುರಾಸೆಯನ್ನು ಅನುಭವಿಸಿದ ಅನುಭೋಗಶೀಲ ಪಾಶ್ಚಾತ್ಯ ಜಗತ್ತು ಗಾಂಧಿಯನ್ನು ಈ ಶತಮಾನದ ಶ್ರೇಷ್ಠ ವ್ಯಕ್ತಿಯೆಂದು ಗುರುತಿಸಿತು.

ಐಹಿಕದ ಸುಖಭೋಗಗಳನ್ನು ಮಿತಿಮೀರಿ ಅನುಭವಿಸುವ ಮನುಷ್ಯನ ಒಟ್ಟೂ ಬದುಕೇ ಹದ ತಪ್ಪಿತು. ಉಳಿವಿನ ಚಿಂತನೆಯ ಮಹತ್ತ್ವ ಈಗ ಅರ್ಥವಾದಂತಿದೆ. ಈ ಪ್ರಕೃತಿಯ ಕೊಡುವ ಎಲ್ಲವನ್ನೂ ಅನುಭವಿಸುತ್ತ ಸಾಗುವ ಮನುಷ್ಯ ಎಷ್ಟರಮಟ್ಟಿಗೆ
ಗಾಂಧಿಯ ಹಾದಿಯಲ್ಲಿ ಸಾಗುತ್ತಾನೆ ಎಂಬುದರ ಮೇಲೆ ಅವನ ಅಸ್ತಿತ್ವದ ಉಳಿವು ಉಳಿಯಲು ಸಾಧ್ಯ ಎಂಬುದರ ಮೇಲೆ ನಿರ್ಧರಿತ ವಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮನುಷ್ಯ ತನ್ನೊಳಬಗೆಯಲ್ಲಿ ಗಾಂಧಿಯ ಸರಳ ಬದುಕಿನ ತತ್ವಗಳನ್ನು ಅಳವಡಿಸಿಕೊಳ್ಳಲೇ ಬೇಕಾದ ದರ್ದು ಈಗ ಒದಗಿಬಂದಿದೆ. ತೇನ ತ್ಯಕ್ತೇನ ಭುಂಜೀತಾ ಮಾಗೃಧಃ ಕಸ್ಯಸ್ವಿದ್ಧನಮ್ – ಈ ಜಗತ್ತಿನ ಸಂಪತ್ತು ಯಾರಿಗೂ ಸೇರಿದ್ದಲ್ಲ. ನಿನ್ನ ಆವಶ್ಯಕತೆಗೆ ತಕ್ಕಷ್ಟೇ ಭೋಗಿಸಿ, ತ್ಯಾಗದಿಂದ ಬದುಕನ್ನು ಕಾಪಾಡಿಕೋ.

ಪರರಿಗೆ ಸಲ್ಲಬೇಕಾದ ಸಂಪತ್ತನ್ನು ಕಸಿದುಕೊಳ್ಳಬೇಡ. ಇಷ್ಟಕ್ಕೂ ಇದು ಯಾರ ಸ್ವತ್ತು? ಎಂಬ ಗಾಂಧಿಯ ಸರಳ ತತ್ತ್ವವನ್ನು ಅನುಸರಿಸಿಕೊಂಡು ಬದುಕುವ ಸ್ಥಿತಿಯನ್ನು ನಾವು ತಲುಪಿದ್ದೇವೆ. ಸಹಜ ಕೃಷಿ, ಸರಳ ಸಹಜ ಬದುಕು, ಪರಿಸರ ರಕ್ಷಣೆಯಂಥ ಜೀವಪೋಷಕ ಮೌಲ್ಯಗಳು ಇಂದಿನ ಕಂಪ್ಯೂಟರ್, ರೊಬೋಟ್, ಮೊಬೈಲ, ಇಂಟರ್ನೆಟ್, ಸೈಬರ್ ಸ್ಪೇಸ್, ಡಿಜಿಟಲೀಕರಣ ಮುಂತಾದ ಹೈ-ಟೆಕ್ ಬದುಕು ಅಥವಾ ಆಧುನಿಕ ಪ್ರಗತಿಯ ದ್ಯೋತಕ ಎಂದೇ ಬಗೆಯುವ ಕಾಲದಲ್ಲಿ ಗಾಂಧಿಯ ಸರಳ ಬದುಕು
ಹಾಸ್ಯಾಸ್ಪದವಾಗಿ ಕಾಣಬಹುದು. ಒಂದು ಶಿಸ್ತುಬದ್ಧ ಅರ್ಥನಿರ್ವಹಣೆಯನ್ನು ಗಾಂಧಿಯ ಅರ್ಥಶಾಸ್ತ್ರ ನಿರ್ವಹಿಸುತ್ತದೆ.

ಹಾಸಿಗೆಯಿದ್ದಷ್ಟೇ ಕಾಲುಚಾಚುವ ವಿವೇಕ ನಮಗೀಗ ಅನಿವಾರ್ಯವಾದ ಅಗತ್ಯವಾಗಿದೆ. ಸಂಪತ್ತಿಗೆ ತಕ್ಕಂತೆ ನಮ್ಮ ಬಯಕೆ ಗಳನ್ನು ಮಿತಗೊಳಿಸಿಕೊಳ್ಳುವ ಜೀವಪೋಷಕ ತಪಸ್ಸು ಈಗ ಗಾಂಧಿಯ ಸರಳ ಮಂತ್ರವನ್ನು ನೆನಪಿಸುತ್ತಿದೆ. ‘ಅರ್ಥ’ದ ನಿರ್ವಹಣೆ ಯನ್ನು ಪ್ರತಿ ವ್ಯಕ್ತಿಯೂ ಕಲಿಯಬೇಕಾಗಿದೆ. ಪುಷ್ಪವತೀ ಭೂಮಿಯನ್ನು ಲಂಪಟನಾಗಿ ದೋಚುವ ದುರ್ಬುದ್ಧಿ ನಾಶ ಗೊಳಿಸಿಕೊಳ್ಳುವ ಅನಿವಾರ್ಯತೆಯಿದೆ. ಈ ನೆಲದ ಜತೆ ತಾದಾತ್ಮ್ಯವನ್ನು ಬೆಸೆಯುವ ಅಗತ್ಯ ಕಂಡುಕೊಳ್ಳಬೇಕಿದೆ.

ವಿಸ್ತಾರವಾದ ಜೀವಜಾಲದ ಪ್ರೀತಿಯನ್ನು ಅನುಭವಿಸಬೇಕಾಗಿದೆ. ಇದ್ದುದರಲ್ಲಿಯೇ ಸುಖವನ್ನು ಕಾಣುವ ಹಂಬಲವನ್ನು ಹೆಚ್ಚಿಸಿಕೊಳ್ಳಬೇಕಿದೆ. ನಿಸರ್ಗಕ್ಕೆ ಸಹಜವಾದ ನಿಕಟವಾದ ಸಂಬಂಧದ ಬದುಕನ್ನು ರೂಢಿಸಿಕೊಳ್ಳಬೇಕಿದೆ. ಜೀವನಕ್ರಮದಲ್ಲಿ
ರಾಕ್ಷಸೀ ಪ್ರವೃತ್ತಿಯ ಕೊಳ್ಳುಬಾಕುತನವನ್ನು ನಿಗ್ರಹಿಸಿಕೊಳ್ಳಬೇಕಿದೆ. ಈ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತೀ
ಆಧುನಿಕತೆಯ ಹುಚ್ಚು ತನ್ನ ಕರಾಳ ಮುಖವನ್ನು ಈಗಾಗಲೇ ವ್ಯಕ್ತಪಡಿಸಿದೆ.

ಮನುಷ್ಯ ನಿರ್ಮಿತ ಸೋಂಕೊಂದು ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಆದರೂ ಮದಭರಿತ ರಾಷ್ಟ್ರಗಳ ಅಟ್ಟಹಾಸ ಕಡಿಮೆಯಾಗುತ್ತಲೇ ಇಲ್ಲ. ಚೀನಾ ನಾಗರಿಕ ಪ್ರಪಂಚಕ್ಕೆ ದೊಡ್ಡ ಕಳಂಕವಾಗಿ ಪರಿವರ್ತನೆಗೊಂಡು ದೊಡ್ಡಣ್ಣನ ಪಟ್ಟಕ್ಕೆ
ಹೊಂಚನ್ನು ನೇರವಾಗಿಯೇ ಪ್ರಯತ್ನಿಸುತ್ತಿದೆ. ಜಗತ್ತಿನ ಕೆಡುಕಿನ ಮೂಲವಾಗಿ ಚೀನಾ ಬದಲಾದದ್ದು ಮಾತ್ರ ಅತ್ಯಂತ ವಿಪರ್ಯಾಸ. ಚೀನಾದ ನಡೆಗಳು ಇಡಿಯ ಭೂಮಂಡಲದ ನಿತ್ಯದ ಬದುಕನ್ನು ಅಲ – ಕಲಗೊಳಿಸಿ ಬಿಟ್ಟಿದೆ. ಆಧುನಿಕತೆಯ ಆರಾಧನೆಯ ವ್ಯಾಮೋಹ ಯಾವ ದೇಶವನ್ನೂ ಬಿಡಲಿಲ್ಲ. ಅದೊಂದು ರೀತಿಯ ಭಸ್ಮಾಸುರನಿಗೆ ಆದ ಮೋಹಿನಿಯ ಆಕರ್ಷಣೆ. ಕಾರಣ: ಜಗತ್ತನ್ನಾವರಿಸಿದ ಭಯೋತ್ಪಾದನೆ. ಇನ್ನೊಂದು ಅಭಿವೃದ್ಧಿಯ ಹಂಬಲ.

ಆಧುನಿಕ ಬಂಡವಾಳಷಾಹೀ ಕೈಗಾರಿಕಾ ನಿರ್ಮಿತಿಯ ನೆಲಗಟ್ಟ ಭದ್ರ ರಾಷ್ಟ್ರವನ್ನು ಕಟ್ಟಿಕೊಳ್ಳುವ ವಾಂಛೆ ಯಾವ ರಾಷ್ಟ್ರ ವನ್ನು ಬಿಟ್ಟಿದೆ! ನೀರು, ಬೆಳಕು, ಅನ್ನ, ವಸತಿ, ಆರೋಗ್ಯ, ವಿದ್ಯೆಯೇ ಈ ಮುಂತಾದ ಮೂಲಭೂತಾಂಶಗಳು ದೊರಕಿದ್ದಷ್ಟೇ ಮುಖ್ಯವಾಗಿ ಸಬಲವಾಗುವುದನ್ನು ಪ್ರತಿ ದೇಶವೂ ಚಿಂತಿಸಬೇಕಿದೆ. ಚಿಂತಿಸುತ್ತಿದೆ. ಮುಂಚೂಣಿ ಯಲ್ಲಿರುವ ಕೆಲವು ರಾಷ್ಟ್ರಗಳಿಗೆ ವರ್ತಮಾನದಲ್ಲಂತೂ ಮಸುಕಾಗಿ ಗೋಚರಿಸುತ್ತಿರುವ ಯುದ್ಧೋನ್ಮಾದ!

ದಟ್ಟದರಿದ್ರವನ್ನು ಬರಸೆಳೆದು ಅಪ್ಪಿಕೊಳ್ಳುವ ಹಪಹಪಿ ಪಾಕಿಸ್ತಾನಕ್ಕೆ! ಯಾರು ಯಾವಾಗ ಆಕ್ರಮಣ ಮಾಡುತ್ತಾರೋ ಎಂಬ ಭಯದಲ್ಲಿ ಸಣ್ಣ ಸಣ್ಣ ರಾಷ್ಟ್ರಗಳು ಯಂತ್ರ ನಾಗರಿಕತೆಯನ್ನು ಹೊರತುಪಡಿಸಿದ ಲೋಕವಿದ್ಯೆಯ ಹಂಬಲದಲ್ಲಿರಬೇಕೆಂದು ಗಾಂಧೀಯದ್ದಾಗಿತ್ತು. ಪರಂಪರಾಗತ ವಿಜ್ಞಾನ ಮತ್ತು ತಂತ್ರಜ್ಞಾನಗಳು ಇಂದಿಗೂ ಯಾವ ಆಧುನಿಕ ಶಿಕ್ಷಣದ ಹಂಗಿಲ್ಲದೆ ಜನಪದದ ಪ್ರಾದೇಶಿಕ ತಿಳಿವಳಿಕೆಯ ಸಂಚಯವಾಗಿ ಅಸ್ತಿತ್ವದಲ್ಲಿದೆ.

ಬುಡಕಟ್ಟು ಜನಾಂಗಗಳು, ಕೃಷಿಕರು, ಕರಕುಶಲಗಾರರು, ಮಹಿಳೆಯರ ಅನುಭವ ಜನ್ಯ ಪಾರಂಪರಿಕ ಜ್ಞಾನ ಸಂಪತ್ತು,
ಕೌಶಲ, ಸ್ಥಳೀಯ ಸನ್ನಿವೇಶಗಳಿಗೆ ಮತ್ತು ಅಗತ್ಯಗಳಿಗೆ ತಕ್ಕಂತೆ ತಂತ್ರಜ್ಞಾನದ ಆವಿಷ್ಕಾರ ಮತ್ತು ವಿನ್ಯಾಸದ ಒಟ್ಟು ಸಂಗ್ರಹ ರೂಪವೇ ಗಾಂಧಿಯ ಲೋಕವಿದ್ಯೆ. ಇದು ಇಂದಿನ ಆಧುನಿಕ ಕೈಗಾರಿಕೀಕರಣವಾಗಲಿ, ಅಭಿವೃದ್ಧಿಯನ್ನು ಮಾದರಿಯನ್ನು ಹೋಲುತ್ತಿದ್ದರೂ ಮಾನವ ಶ್ರಮವನ್ನು ನಿರಾಕರಿಸುವುದಿಲ್ಲ. ವಿಶ್ವೇಶ್ವರಯ್ಯ ಅವರ ಕೈಗಾರಿಕೀಕರಣ ನೆಹರೂ ಹಂಬಲದ ಕೈಗಾರಿಕೀಕರಣಕ್ಕಿಂತ ಬೇರೆಯದ್ದೇ ಸ್ವರೂಪದ್ದು. ಹಾಗೆ ಗಾಂಧಿಯದ್ದೂ ಕೂಡ.

ಅವರೀರ್ವರದ್ದೂ ಮನುಷ್ಯನನ್ನು ಕಡೆಗಣಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿರಲಿಲ್ಲ. ಅವುಗಳ ವಿನಿಯೋಗದ ಕ್ರಮವೂ ಅಲ್ಲ. ಸದ್ಯ ಒಂದು ಬಿಕ್ಕಟ್ಟು ಈಗ ಸೃಷ್ಟಿಯಾಗಿದ್ದಂತೂ ಸತ್ಯವೇ ಆಗಿದೆ. ಗಾಂಧಿ ಬಯಸಿದ ಈ ಲೋಕವಿದ್ಯೆ ಈಗ ದೇಶಕ್ಕೆ ತುರ್ತಾಗಿದೆ. ಒಂದು ಸರಳ ಬದುಕಿನ ತತ್ತ್ವವನ್ನು ಈ ಮೂಲಕವಾದರೂ ನಾವು ಯಾವ ಪೂರ್ವಗ್ರಹವೂ ಇಲ್ಲದೆ ಸ್ವೀಕರಿಸಬೇಕಿದೆ. ಗಾಂಧಿ ಸಂಪೂರ್ಣವಾಗಿ ಯಂತ್ರವಿರೋಧಿಯಾಗಿರಲಿಲ್ಲ.

ಯಂತ್ರಗಳನ್ನು ಬಳಸೋಣ. ಆದರೆ ನಾವು ಅದಕ್ಕೆ ಗುಲಾಮರಾಗೋದು ಬೇಡ. ನಮ್ಮ ನಿಯಂತ್ರಣದಲ್ಲಿರುವಂಥ ಯಂತ್ರ ಗಳನ್ನು ಮಾತ್ರ ಬಳಸೋಣ ಎಂಬುದು ಅವರ ನಿಲುವು. ಅಷ್ಟು ಗಟ್ಟಿಯಾಗಿ ಚರಕಾವನ್ನು ನೆಚ್ಚಿಕೊಂಡಿದ್ದ ಗಾಂಧಿ ಒಮ್ಮೆ ಹೊಲಿಗೆ ಯಂತ್ರವನ್ನು ನೋಡಿ ತುಂಬ ಮೆಚ್ಚಿಕೊಂಡು, ಎಲ್ಲರ ಮನೆಯಲ್ಲೂ ಇಂಥದ್ದೊಂದು ಯಂತ್ರವಿರಬೇಕು ಎಂದರಂತೆ. ಆದೇ ಸಮಯಕ್ಕೆ ಹೊಲವನ್ನು ಊಳುವುದಕ್ಕೆ ಟ್ರ್ಯಾಕ್ಟರುಗಳನ್ನು ಬಳಸತೊಡಗಿದಾಗ ಅವರು ಅದು ಸೆಗಣಿ ಹಾಕುತ್ತದೆಯೇ
ಪ್ರಶ್ನಿಸಿದರಂತೆ!

ಅಂದರೆ ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಲ್ಲಿಯೂ ಮಾನವ ಶ್ರಮವಷ್ಟೇ ಅಲ್ಲ, ನಿರುದ್ಯೋಗದ ಚಿಂತನೆಯಷ್ಟೇ ಅಲ್ಲ, ಜಾನುವಾರುಗಳು ಬದುಕಬೇಕು ಎಂಬ ಪ್ರಜ್ಞೆಯಿತ್ತು. ಇದು ಇಂದು ಅರ್ಥವಾಗುತ್ತಿದೆ. ಶ್ರೀಮಂತ ಕಾರ್ಪೋರೇಟ್ ಕಂಪನಿಗಳಿಗೆ ಹಣದಾಸೆಯಿಂದ ನಮ್ಮ ಜಮೀನನ್ನು ಮಾರಿಕೊಂಡವರಿಗೆ ಸಾಕುಪ್ರಾಣಿಗಳ
ಮಹತ್ವದರಿವು ಇಲ್ಲವೆನ್ನಲು ಹೇಗೆ ಸಾಧ್ಯ? ಹಣದಾಸೆ ಯಾವ ಮೌಲ್ಯಗಳನ್ನೂ ಉಳಿಸಲಾರದು.

ಯಂತ್ರವೆಂದರೆ ನಿಮಗೆ ದ್ವೇಷವೇ ಎಂಬ ಪ್ರಶ್ನೆಗೆ ಗಾಂಧಿ ಉತ್ತರವಿದು: ಉಂಟೆ? ಹಾಗೆನ್ನಬಹುದೆ? ನಮ್ಮ ಮೈಯೇ ಒಂದು ಕುಶಲವಾದ ಯಂತ್ರವಲ್ಲವೆ? ರಾಟೆಯೇ ಒಂದು ಯಂತ್ರ. ಹಲ್ಲಿನ ಸಂದಿಯೊಳಗೆ ಸೇರಿದ ಕಸ ತೆಗೆವ ಹುಲ್ಲುಕಡ್ಡಿಯೂ ಒಂದು ಯಂತ್ರ. ಯಂತ್ರವನ್ನಲ್ಲ ನಾನು ಬೇಡ ಎನ್ನುವುದು; ಯಂತ್ರ ಯಂತ್ರ ಎಂಬ ಭ್ರಾಂತಿಯನ್ನು. ಶರೀರ ಶ್ರಮವನ್ನು ಕಡಿಮೆ ಮಾಡುವ ಯಂತ್ರ ಬೇಕೆಂಬ ಭ್ರಾಂತಿ ಈಗ ಬೆಳೆಯುತ್ತಿದೆ. ದುಡಿತ ಕಡಿಮೆಯಾಗಿ, ಸಾವಿರಾರು ಜನ ಹಸಿವಿನಿಂದ ಸಾಲಾಗಿ
ಬೀದಿಯಲ್ಲಿ ಬಿzರು. ಹತ್ತು ಜನಕ್ಕೆ ದುಡಿತ ಕಡಿಮೆ ಮಾಡುವ ಉದ್ದೇಶವಲ್ಲ ನನ್ನದು; ಇಡೀ ಮಾನವ ಕೋಟಿಗೆ ದುಡಿಮೆ ಮಾಡಬಯಸುತ್ತೇನೆ.

ಹತ್ತು ಜನರ ಕೈಯಲ್ಲಿ ಧನ ಸಂಗ್ರಹವಾಗಲೆಂದಲ್ಲ, ಎಲ್ಲರ ಕೈಯಲ್ಲೂ ಹಣ ಸೇರಲಿ ಎಂದು ನನ್ನ ಬಯಕೆ. ಸಾವಿರಾರು ಜನರ ಬೆನ್ನ ಮೇಲೆ ಒಂದು ಹಿಡಿ ಜನರು ಸವಾರಿ ಮಾಡುವ ಹಾಗಾಗಿದೆ ಇಂದು ಯಂತ್ರದಿಂದ. ಇದೆಲ್ಲದರ ಹಿಂದಿನ ಉದ್ದೇಶ, ದುಡಿತ
ಕಡಿಮೆ ಮಾಡುವ ಔದಾರ್ಯವಲ್ಲ; ಲೋಭ. ಇದನ್ನು ನಾನು ಸಹಿಸಲಾರೆ. ನನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ ನಾನು ವಿರೋಧಿಸುತ್ತಿರುವುದು ಈ ಪರಿಯ ನಿರ್ಮಾಣವನ್ನು. ನಮಗೆಲ್ಲರಿಗೂ ಬೇಕಾದ ಅನ್ನವನ್ನು ಉತ್ಪಾದನೆ ಮಾಡುವ ರೈತರು, ನಮ್ಮ ದಿನಬಳಕೆಯ ವಸ್ತುಗಳನ್ನು ಉತ್ಪಾದಿಸುವ ಕರಕುಶಲಗಾರರು, ಪ್ರತಿ ಕುಟುಂಬದ ಆರೋಗ್ಯವನ್ನು ಕಾಪಿಡುವ ನಮ್ಮ ಹೆಂಗಳೆಯರು, ಬುಡಕಟ್ಟು ಜನಾಂಗದವರ ಬೇಸಾಯ ಮತ್ತು ಕರಕೌಶಲ ನೈಪುಣ್ಯ, ನಮ್ಮ ಕೆಲಸಗಳಿಗೆ ತೀರಾ ಅಗತ್ಯವಾಗಿ ಬೇಕಾಗುವ ಕೂಲಿ ಕಾರ್ಮಿಕರು, ನಿಸರ್ಗದೊಂದಿಗೆ ಪ್ರೀತಿ ತಾದಾತ್ಮ್ಯದೊಂದಿಗೆ ಬಾಳಿ ಬದುಕುವ ಜನರು, ತಮ್ಮ ಜ್ಞಾನ ಮತ್ತು
ವಿವಿಧ ಬಗೆಯ ಸ್ಕಿಲ್‌ಗಳಿಂದ ಜೀವನವನ್ನು ನಡೆಸುವ ಪಾರಂಪರಿಕ ವರ್ಗದವರು – ಲೋಕವಿದ್ಯೆಯ ಯಾಜಮಾನ್ಯವನ್ನು ಅಘೋಷಿತವಾಗಿ ಹೊತ್ತವರು.

ಮರವೇರುವ, ನಾಟಿ ಮಾಡುವ, ನೇಯುವ, ಊಳುವ, ಕಟ್ಟುವ, ಹೊಸೆಯುವ, ಬೆಸೆಯುವ, ಕೊಯ್ಯುವ, ಕೀಳುವ, ನೆಡುವ ಜನರು ತಮ್ಮ ಮೂಲ ಕಾಯಕದ ಸ್ವರೂಪದ ಬದಲಾವಣೆಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದಂಥ ಆಧುನಿಕ ಪ್ರಗತಿಯ ಅಮಲಿನ ಲೋಕದಲ್ಲಿ ಬದುಕನ್ನು ಸಾಗಿಸುವುದಾದರೂ ಹೇಗೆ ಸಾಧ್ಯ? ಒಬ್ಬ ಆರ್ಕಿಟೆಕ್ಚರ್‌ಗಿಂತಲೂ ಚೆನ್ನಾಗಿ ಕಸುಬನ್ನು ಬಲ್ಲ
ಲೋಕವಿದ್ಯೆಯ ಹಳ್ಳಿಗರನ್ನು ನಾವು ಕಡೆಗಣಿಸುತ್ತಿದ್ದುದರ ಪರಿಣಾಮವಾಗಿ ಯಂತ್ರಗಳು ಇಂದು ಅವರ ಸ್ಥಾನದಲ್ಲಿ ಬಂದು ಕಾರ್ಯನಿರ್ವಹಿಸುತ್ತಿವೆ. ಇದು ಭಾರತದಂಥ ರಾಷ್ಟ್ರಕ್ಕೆ ಸಮಸ್ಯೆಯಾಗಿ ಬೆಳೆಯುತ್ತಲೇ ಇದೆ. ಮಾತ್ರವಲ್ಲದೆ ವಿಶ್ವಕ್ಕೂ ಸಮಸ್ಯೆ ಯಾಗಿಯೇ ವಿಸ್ತರಿಸಿಕೊಳ್ಳುತ್ತಿದೆ.

ಹಳ್ಳಿಗಳಿಂದಲೇ ತುಂಬಿರುವ ಈ ದೇಶವನ್ನು ಸಮಸ್ತ ಪ್ರಜೆಗಳ ಹಿತಕ್ಕೆ ಪೂರಕವಾಗಿ ಕಳೆದ ಹಲವಾರು ದಶಕಗಳಿಂದ ಕಲಿಯುತ್ತ ಬಂದ ಶಿಕ್ಷಣದ ಭಾರವನ್ನು ನಾವು ಮೊದಲು ಕಳಚಿಕೊಳ್ಳಬೇಕು ಎಂದು ೧೯೪೭ರ ಗಾಂಧಿ ಹೇಳಿದ್ದರು. ಲೋಕವಿದ್ಯೆಯನ್ನು ಇನ್ನಾದರೂ ಉಳಿಸಿಕೊಳ್ಳುವ ಅನಿವಾರ್ಯ ಅಗತ್ಯ ನಮ್ಮ ಮುಂದಿದೆ. ಯಂತ್ರ ನಾಗರಿಕತೆಯೇ ನಮ್ಮನ್ನು ಸರ್ವವಿಧದಲ್ಲೂ ಆವರಿಸದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಿದೆ. ಇಂದಿಗೂ ದೇಶಭಾಷೆಗಳು ಜೀವಂತವಾಗಿರುವುದು ಹಳ್ಳಿಗರ!

ಉಳಿದವರು ಇಂಗ್ಲಿಷಿಗೆ ಮಾರಿಕೊಂಡವರು. ಕಂಪ್ಯೂಟರನ್ನು ಹೆರುವ ಬಯಕೆ ತಾಯಂದಿರಿಗೆ. ಹುಟ್ಟುವ ಮಕ್ಕಳು ಚಿನ್ನದ
ಮೊಟ್ಟೆಯಿಡುವ ಕೋಳಿಗಳಾಗಬೇಕೆಂಬ ಅತೀವ ವಾಂಛೆ ಪೋಷಕರಲ್ಲಿ! ಇದು ನಮ್ಮ ಕಾಲದ ದುರಂತವಲ್ಲದೆ ಮತ್ತೇನು?
ಇರುವುದನ್ನೆಲ್ಲ ಕಳಚಿಕೊಂಡು ಸರಳ ಬದುಕಿನ ಮೇರುಸಾಧಕರಾಗಿ ಕಂಡ ಗಾಂಧಿ ಬಹುವರ್ಣ ರಂಜಿತದ ವ್ಯಕ್ತಿಯೇನಲ್ಲ. ಆದರೂ ಗಾಂಧಿ ವಿಶ್ವಕ್ಕೇ ಬಹುಪರಿಚಿತ, ಅಪರೂಪದ ವ್ಯಕ್ತಿಯೆನಿಸಿದವರು.

ನಿತ್ಯಬದುಕನ್ನು ಹೀಗೆಯೂ ಬಾಳಲು ಸಾಧ್ಯವೆಂದು ಗಾಂಧಿಯ ಸರಳ ಬದುಕು ಹೇಳುತ್ತದೆ. ಗಾಂಧಿಗೆ ಮಾತ್ರ ಸಾಧ್ಯವಾದ ಈ ಸರಳ ಬದುಕು ಜಗತ್ತಿನ ಅನೇಕ ದಾರ್ಶನಿಕರಲ್ಲಿ ಕಂಡುಬಂದರೂ ಗಾಂಧಿಯಲ್ಲಿರುವಷ್ಟು ಸರಳತೆಯಿಲ್ಲ. ತನ್ನ ಜೀವನ
ಪ್ರಯೋಗಗಳೆಲ್ಲವೂ ಬಹಿರಂಗವಾಗಿಯೇ ನಡೆದಿದೆ ಯೆನ್ನುವ ಗಾಂಧಿ ಯಾವುದನ್ನೂ ರಹಸ್ಯವಾಗಿ ಇಟ್ಟುಕೊಳ್ಳಲಿಲ್ಲ. ಯಾರ ಬದುಕಿನಲ್ಲಿ ರಹಸ್ಯಗಳು ಇರುವುದಿಲ್ಲ ಹೇಳಿ? ಯಾವ ರಹಸ್ಯವೂ ಇಲ್ಲದೆ ಬದುಕಲು ಯಾರಿಗೂ ಸಾಧ್ಯವಿಲ್ಲವೇನೋ!