Thursday, 12th December 2024

ಸಿದ್ಧಾಂತಗಳು ಇಷ್ಟವಾದರೆ ಮಾರುಹೋಗಬಹುದು, ಮಾರಿಕೊಳ್ಳಬಾರದು !

ನೂರೆಂಟು ವಿಶ್ವ

vbhat@me.com

ಖರೆ ಹೇಳಬೇಕೆಂದರೆ, ಈ ವಿಷಯವನ್ನು ಟಚ್ ಮಾಡಬಾರದು ಎಂದು ಅಂದುಕೊಂಡಿದ್ದೆ. ಆದರೆ ದಿನದಿಂದ ದಿನಕ್ಕೆ ಇದು ಲಂಬಿಸಿ, ಅದರಲ್ಲೂ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ವಿವಿಧ ಆಯಾಮ ಪಡೆದುಕೊಳ್ಳುತ್ತಿರುವುದರಿಂದ ಒಲ್ಲದ ಮನಸ್ಸಿ
ನಿಂದಲೇ ಬರೆಯುತ್ತಿದ್ದೇನೆ. ಮೊನ್ನೆ ನನ್ನ ಜನ್ಮದಿನದ ಪ್ರಯುಕ್ತ, ನಾನು ಬರೆದ ಮೂರು ಪುಸ್ತಕಗಳ ಹಾಗೂ ನನ್ನ ಬಗ್ಗೆ ಆತ್ಮೀಯ ಸ್ನೇಹಿತರಾದ ಬೆಹರೈನ್ ವಾಸಿ ಕಿರಣ್ ಉಪಾಧ್ಯಾಯ ಬರೆದ ಒಂದು ಪುಸ್ತಕ ಲೋಕಾ ರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆ.

ಇಂಥ ಕಾರ್ಯಕ್ರಮಗಳನ್ನು  ಏರ್ಪಡಿಸುವುದು ಕಷ್ಟವಲ್ಲ. ಆದರೆ ಇಂಥ ಕಾರ್ಯಕ್ರಮಗಳಿಗೆ ಉದ್ಘಾಟಕರು, ಮುಖ್ಯ ಅತಿಥಿಗಳನ್ನು ಸೇರಿಸುವುದು ಸುಲಭವಲ್ಲ. ನಾವು ಯಾರನ್ನು ಕರೆಯಬೇಕು ಅಂದುಕೊಂಡಿರುತ್ತೇವೋ, ಅವರು ಬೇರೊಂದು ಕಾರ್ಯಕ್ರಮಕ್ಕೆ ಒಪ್ಪಿ ಕೊಂಡಿರುತ್ತಾರೆ. ಅದೇ ದಿನ ಬೇರೆ ಊರಿನಲ್ಲಿರುತ್ತಾರೆ. ಇಲ್ಲವೇ ಬರಲು ಮನಸ್ಸಿರುವುದಿಲ್ಲ. ಹೀಗಾಗಿ ಏನೋ ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆ. ಕಾರ್ಯಕ್ರಮಕ್ಕೆ ನಾಲ್ಕು ಜನ ವೇದಿಕೆ ಮೇಲೆ ಕುಳ್ಳಿರಿಸುವವರನ್ನು ಕೂಡಿಸುವ
ಹೊತ್ತಿಗೆ ಹೈರಾಣಾಗಿರುತ್ತೇವೆ.

ಆದರೆ ಮೊನ್ನೆ ನನಗೆ ಹಾಗಾಗಲಿಲ್ಲ. ನಾನು ಕರೆದವರೆಲ್ಲ ದೂಸರಾ ಮಾತಾಡದೇ ಸಮ್ಮತಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರನ್ನು ಮೊದಲು ಸಂಪರ್ಕಿಸಿದಾಗ, ಅವರು ಸಂತಸದಿಂದ ಒಪ್ಪಿಗೆ ಸೂಚಿಸಿದರು. ಇನ್ನು ಡಾ.ಎಸ್.ಎಲ್.ಭೈರಪ್ಪ. ಅವರು ಆಗಲೇ ಹಲ್ಲು ಕೀಳಿಸಿಕೊಂಡಿದ್ದರು. ಕಾರ್ಯಕ್ರಮಕ್ಕೆ ಮೂರು ದಿನಗಳಿರುವಾಗ ಮತ್ತೆರಡು ಹಲ್ಲುಗಳನ್ನು ಕೀಳುವುದಾಗಿ ಅವರ ದಂತವೈದ್ಯರು ಹೇಳಿದ್ದರಂತೆ. ಹೀಗಾಗಿ ಬರಲಾರೆ ಎಂದು ಹೇಳುತ್ತಾ ರೇನೋ ಎಂದು ಭಾವಿಸಿz. ಆದರೆ ಅವರು ನಿಮ್ಮ ಕಾರ್ಯಕ್ರಮಕ್ಕೆ ಬರುತ್ತೇನೆ, ಆದರೆ ಮಾತಾಡುವುದಿಲ್ಲ ಎಂದು ಹೇಳಿದರು.

ಡಾ.ಭೈರಪ್ಪನವರ ಉಪಸ್ಥಿತಿಯೇ ಒಂದು ಭೂಷಣ. ಮಾತಾಡದಿದ್ದರೇನಂತೆ, ಅವರು ಬರಲಿ ಅಷ್ಟೇ ಸಾಕು ಅಂದುಕೊಂಡೆ. ಸುಧಾಮೂರ್ತಿಯವರನ್ನು ಆಹ್ವಾನಿಸಿದೆ. ನನಗೆ ಅವರ ಉತ್ತರ ಏನಿರುತ್ತದೆ ಎಂಬುದು ಗೊತ್ತಿತ್ತು. ಅವರಿಗೆ ವೇದಿಕೆಯಲ್ಲಿ ಕೂರುವುದೆಂದರೆ, ಭಾಷಣ ಮಾಡುವುದೆಂದರೆ ತೀರಾ ಸಂಕೋಚ. ಅದನ್ನು ಅವರು ಇಷ್ಟಪಡುವುದಿಲ್ಲ. ಅದರ ಬದಲು ಸಭೆ ಯಲ್ಲಿ ವೀಕ್ಷಕರಾಗಿ ಬನ್ನಿ ಅಂದ್ರೆ ಪ್ರೀತಿಯಿಂದ ಬರುತ್ತಾರೆ. ಅದು ಗೊತ್ತಿದ್ದೇ ಕರೆದೆ. ನಿರೀಕ್ಷೆಯಂತೆ, ಅವರ ಉತ್ತರದಲ್ಲಿ ಸ್ವಲ್ಪವೂ ಬದಲಾವಣೆ ಇರಲಿಲ್ಲ.

ಪ್ರತಾಪಸಿಂಹ ಕರೆಯದೇ ಬಹಳ ದಿನಗಳಾಯ್ತಲ್ಲ, ಅವರಿರಲಿ ಎಂದೆನಿಸಿತು. ಆ ದಿನ ಸಂಸತ್ ಅಽವೇಶನವಿರುತ್ತೆ, ಆದರೂ ಬರುವುದಾಗಿ ಪ್ರತಾಪಸಿಂಹ ಹೇಳಿದರು. ಇನ್ನು ನಾಗೇಶ ಹೆಗಡೆ. ಅವರನ್ನು ನಮ್ಮ ಮೋಹನ್ ಸಂಪರ್ಕಿಸಿದರು. ಆಗ ಅವರು ಮೈಸೂರಿನ ಕುಕ್ಕರಹಳ್ಳಿಯಲ್ಲಿ ಕೆರೆಗುಂಟ ವಾಕಿಂಗ್ ಮಾಡುತ್ತಿದ್ದರಂತೆ. ಅವರೂ ಸಹ ಪ್ರೀತಿಯಿಂದಲೇ ಒಪ್ಪಿಕೊಂಡರು. ಕಾರ್ಯಕ್ರಮಕ್ಕೆ ನಾಲ್ಕು ದಿನಗಳಿರುವಾಗ, ನಾನು ಹೆಗಡೆಯವರಿಗೆ ಫೋನ್ ಮಾಡಿ ಖುದ್ದಾಗಿ ಆಮಂತ್ರಿಸಿದೆ. ಆಗ ಅವರು, ‘ನೀವು ಹೇಗೆ ಇಷ್ಟೆ ಬರೆಯುತ್ತೀರೋ? ರವಿ ಬೆಳಗೆರೆಯೂ ಹೀಗೆ ಬರೆಯುತ್ತಿದ್ದರು. ಅವರನ್ನೂ ಮೀರಿಸುವ ರೀತಿ ಬರೆಯು ತ್ತಿದ್ದೀರಿ.

ನಿಮಗೆ ದಿನಕ್ಕೆ ಮೂವತ್ತಾರು ಗಂಟೆ ಬೇಕು ಬಿಡಿ, ಇಪ್ಪತ್ನಾಲ್ಕು ಸಾಕಾಗೊಲ್ಲ, ಕಾರ್ಯಕ್ರಮಕ್ಕೆ ಬರುತ್ತೇನೆ’ ಎಂದರು. ನಾನು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ವಿತರಿಸಲಾರಂಭಿಸಿದೆ. ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ ಗಳಲ್ಲಿ ಅದನ್ನು ಹರಿಯಬಿಟ್ಟೆ. ಶುರುವಾಯ್ತು ನೋಡಿ, ಒಂದೇ ಸಲ ಪ್ರಶ್ನೆಗಳ ಸುರಿಮಳೆ! ಆ ಎ ಸುರಿಮಳೆಯಲ್ಲಿ ಇದ್ದ ಒಂದು ಹನಿ ಯೆಂದರೆ, ‘ಅದೆ ಸರಿ, ನಾಗೇಶ ಹೆಗಡೆ ಅವರನ್ನೇಕೆ ಕರೆಯುತ್ತಿದ್ದೀರಿ? ಅವರನ್ನು ಕರೆಯಬೇಕಾಗಿತ್ತಾ? ಅವರನ್ನು ಕರೆಯ ದಿದ್ದರೇ ಚೆನ್ನಾಗಿತ್ತು.

ಅವರನ್ನು ಕರೆದು ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ?’ ಆದರೆ ನಾನು ಯಾರಿಗೂ ಉತ್ತರ ಕೊಡುವ ಗೋಜಿಗೆ, ಉಸಾಬ ರಿಗೆ ಹೋಗಲಿಲ್ಲ. ಒಂದಿಬ್ಬರಂತೂ ಫೋನ್ ಮಾಡಿ, ‘ನಾಗೇಶ ಹೆಗಡೆ ಪಕ್ಕಾ ಎಡಚರ. ಅದು ಗೊತ್ತಿದ್ದೇ ನೀವು ಕರೆಯು ತ್ತಿದ್ದೀರಿ ತಾನೇ? ಹಾಗಾದರೆ ನಾವು ನಿಮ್ಮ ಕಾರ್ಯಕ್ರಮಕ್ಕೆ ಬರುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ. ಅವರು ಬರದಿರುವಂತೆ ನೋಡಿಕೊಳ್ಳಿ. ಡಾ.ಭೈರಪ್ಪ ಮತ್ತು ಪ್ರತಾಪ ಇರುವ ವೇದಿಕೆಯಲ್ಲಿ ನಾಗೇಶ ಹೆಗಡೆಯವರನ್ನು ಕರೆದು ಅಪವಿತ್ರ ಮಾಡಬೇಡಿ. ನಿಮ್ಮ ಬಗ್ಗೆ ಇರುವ ಗೌರವವನ್ನು ಕೆಡಿಸಿಕೊಳ್ಳಬೇಡಿ’ ಎಂದು ಖಾರವಾಗಿ ಹೇಳಿದರು.

‘ನನಗೆ ನಾಗೇಶ ಹೆಗಡೆ ಆಪ್ತರು..’ ಎಂದು ಹೇಳಲು ಆರಂಭಿಸುತ್ತಿದ್ದಂತೆ, ‘ಅವೆ ಪುರಾಣ-ಬದ್ನೇಕಾಯಿ ಬೇಡ, ಅವರು ಬರಕೂಡದು’ ಎಂದರು. ‘ಕ್ಷಮಿಸಿ, ನೀವು ಬರದಿದ್ದರೂ ಪರವಾಗಿಲ್ಲ, ಈಗಾಗಲೇ ಆಹ್ವಾನಿಸಿರುವ ಅತಿಥಿಗೆ ಬರಬೇಡಿ ಎಂದು ಮಾತ್ರ ಹೇಳಲಾರೆ. ನನ್ನ ಮನಸ್ಸಿನಲ್ಲಿ ಹೆಗಡೆಯವರು ಎತ್ತರದಲ್ಲಿದದ್ದಾರೆ’ ಎಂದು ಹೇಳಿದೆ. ಅತ್ತ ಕಡೆಯಿಂದ ಫೋನ್ ಕಟ್ ಆಯಿತು. ಆದರೂ ಈ ಕುರಿತು ನನಗೆ ಮೆಸೇಜುಗಳು ಬರುವುದು ನಿಲ್ಲಲಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಒಂದಷ್ಟು ಬಿಸಿಬಿಸಿ ಚರ್ಚೆ ನಡೆಯುತ್ತಿರುವುದನ್ನು ನನ್ನ ಸಹೋದ್ಯೋಗಿಗಳು ಗಮನಕ್ಕೆ ತಂದರು. ನಾನು ಅದನ್ನು ನಿರ್ಲಕ್ಷಿಸಿದೆ. ಇದೇ ರೀತಿ ಹೆಗಡೆಯವರಿಗೂ ಪ್ರತಿಕ್ರಿಯೆಗಳು ಬಂದಿರಬಹುದು ಎಂದು ಅನಿಸಿತು. ಕಾರ್ಯಕ್ರಮದ ಹಿಂದಿನ ದಿನ, ‘ನಾಳಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ವಾಹನ ವ್ಯವಸ್ಥೆ ಬೇಕಿದ್ದರೆ ತಿಳಿಸಿ’ ಎಂಬ ಮೆಸೇಜ್ ಹಾಕಿದ್ದೆ. ಅದಕ್ಕೆ ಅವರು, ‘ನಡ್ಕೊಂಡು ಬರೋಕಂತೂ ಆಗಲ್ಲ… ಓಲಾ ಹಿಡ್ಕೊಂಡ್ ಬರ್ತೀನಿ’ ಎಂದು ಹೇಳಿದ್ದರು.

ರಾತ್ರಿ ಹತ್ತೂಕಾಲು ಗಂಟೆಗೆ, ‘ಭಟ್ರೇ, ನನಗೆ ನಿನ್ನೆಯಿಂದ ಜ್ವರ ಇದೆ. ಕೋವಿಡ್ ಅಲ್ಲ; (ಅದು ಫೇಕ್ ನ್ಯೂಸೂ ಅಲ್ಲ.) ನಿಮ್ಮ ಕಾರ್ಯಕ್ರಮಕ್ಕೆ ಬರಲೇಬೇಕೆಂಬ ಉತ್ಸಾಹದಿಂದ ಗುಳಿಗೆ ಪಳಿಗೆ ನುಂಗಿ, ದಪ್ಪನ್ನ ದಟ್ಟಿ ಹೊದ್ದು ತೆಪ್ಪಗೆ ಮಲಗಿದ್ದೇನೆ. ಬೆಳಗ್ಗೆ ಸರಿಹೋಗಲೇಬೇಕು. ಆದರೂ ಜ್ವರ ಇಳಿಯದಿದ್ದರೆ, ನನಗೆ ಬರಲಾಗದಿದ್ದರೆ ಇದು ಕುಂಟು ನೆಪ ಖಂಡಿತ ಅಲ್ಲ..’ ಎಂದು ಮೆಸೇಜ್ ಮಾಡಿದ್ದರು. ಆಗ ನಾನು, ‘ಒಂದು ಪುಸ್ತಕ ನಿಮಗೇ ಅರ್ಪಣೆ ಮಾಡಿದ್ದೇನೆ’ ಎಂದು ಮೆಸೇಜ್ ಹಾಕಿದೆ.

ಅದಕ್ಕೆ ಅವರು, ’’Thanks. ಇನ್ನಂತೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿ ಕ್ರಿಯಿಸಿದರು ಮತ್ತು ಮರುದಿನ ಸರಿಯಾದ ಸಮಯಕ್ಕೆ ಆಗಮಿಸಿ, ತಮ್ಮ ಭಾಷಣದಲ್ಲಿ ನನ್ನ ಬಗ್ಗೆ ಅಭಿಮಾನದ ಮಾತುಗಳನ್ನು ಹೇಳಿದರು. ಅಷ್ಟೇ ಅಲ್ಲ, ತಮ್ಮ ಅಭಿಪ್ರಾಯಗಳನ್ನು ನೇರಾನೇರ ಹೇಳಿದರು. ನಾನು ನಾಗೇಶ ಹೆಗಡೆಯವರನ್ನು ಕರೆಯಲು ಕಾರಣವಿತ್ತು. ಆದರೆ ಯಾವುದೇ (ಹಿಡನ್) ಅಜೆಂಡಾ ಇರಲಿಲ್ಲ. ಮೂಲತಃ ಅವರು ನನ್ನ ಹಾಗೆ ಉತ್ತರ ಕನ್ನಡ ಜಿಲ್ಲೆಯವರು.

ನಾನು ಅವರಂತೆ ಭೂವಿeನ ವಿದ್ಯಾರ್ಥಿ ಮತ್ತು ನಂತರ ಪತ್ರಿಕೋದ್ಯಮಕ್ಕೆ ಕಟ್ಟುಬಿದ್ದವನು. ಇವೆಲ್ಲಕ್ಕಿಂತ ಮುಖ್ಯವಾಗಿ
ಮತ್ತು ಮುಂಚಿತವಾಗಿ, ನಾನು ಅವರನ್ನು ಒಬ್ಬ ಪತ್ರಕರ್ತನಾಗಿ ಇಷ್ಟಪಟ್ಟವನು, ಗೌರವಿಸಿದವನು. ನಾನು ಕಸುಬಿಗೆ ಇಳಿದ ಆರಂಭಿಕ ದಿನಗಳಲ್ಲಿ, ಹೆಗಡೆಯವರು ‘ಸುಧಾ’ ವಾರ ಪತ್ರಿಕೆಯಲ್ಲಿ ಫೀಚರ್ ಎಡಿಟರ್ ಆಗಿದ್ದರು. ಕನ್ನಡ ಪತ್ರಿಕೋದ್ಯಮದಲ್ಲಿ ಅದೊಂದು ಹೊಸ ಹುದ್ದೆಯಾಗಿತ್ತು. ‘ಸುಧಾ’ಕ್ಕೆ ಒಂದು ಲೇಖನ ಕಳಿಸಿದರೆ, ಹೆಗಡೆಯವರು ಯಥಾವತ್ ಪ್ರಕಟಿಸುತ್ತಿರಲಿಲ್ಲ.

ಬರೆದವರಿಂದ ಹತ್ತಾರು ಮಾಹಿತಿಯನ್ನು ತರಿಸಿಕೊಂಡು, ಆ ಲೇಖನದ ಒಟ್ಟಂದವನ್ನು ಹೆಚ್ಚಿಸಿ ಪ್ರಕಟಿಸುತ್ತಿದ್ದರು. ಇದು ಆಗ ತಾನೇ ಬರೆಯಲಾರಂಭಿಸಿದವರಿಗೆ, ಪತ್ರಿಕೋದ್ಯಮದ ಕ್ಲಾಸಿನಲ್ಲಿ ಹೇಳಿಕೊಡದ ಪಾಠದಂತಿದ್ದವು. ಹೆಗಡೆಯವರು ಈ ಕೆಲಸ ವನ್ನು ಅತ್ಯಂತ ನಿಷ್ಠೆಯಿಂದ, ಒಬ್ಬ ತಪಸ್ವಿಯ ಹಾಗೆ ಮಾಡಿದರು. ಅದಲ್ಲದೇ ತಾವೇ ವಿಷಯ, ಒಳನೋಟ ಕೊಟ್ಟು ನೂರಾರು ಜನರಿಂದ ಬರೆಯಿಸಿದರು. ಬರವಣಿಗೆಯನ್ನು ಸುಧಾರಿಸಿಕೊಳ್ಳುವ ಬದುವನ್ನು ತೋರಿಸಿಕೊಟ್ಟರು.

ಆಗ ಅವರು ಕಟ್ಟಿಕೊಡುತ್ತಿದ್ದ ‘ಸುಧಾ’ ಮತ್ತು ‘ಪ್ರಜಾವಾಣಿ’ಯ ‘ಕರ್ನಾಟಕ ದರ್ಶನ’ ಪುಟಗಳು ಓದುಗರ, ಅದಕ್ಕಿಂತ ಮಿಗಿಲಾಗಿ ಹವ್ಯಾಸಿ ಪತ್ರಕರ್ತರ ಪ್ರೇಕ್ಷಣೀಯ ತಾಣಗಳಾಗಿದ್ದವು. ಇದರ ಹಿಂದೆ, ಹೆಗಡೆಯವರ ಪರಿಶ್ರಮವಿತ್ತು. ನನ್ನ ಹಾಗೆ ರಾಜ್ಯಾದ್ಯಂತ ನೂರಾರು ಹವ್ಯಾಸಿ ಬರಹಗಾರರು ಮತ್ತು ಪತ್ರಕರ್ತರನ್ನು ಬರೆಯುವ ಕಸುಬಿಗೆ ಅವರು ತೊಡಗಿಸಿದರು. ಅಷ್ಟೇ ಅಲ್ಲ, ತಾವೇ ಸ್ವತಃ ಬರೆದರು.

ವಿeನ ಮತ್ತು ಪರಿಸರಕ್ಕೆ ಸಂಬಂಽಸಿದ ಹಲವಾರು ಲೇಖನಗಳನ್ನು ಬರೆದರು. ಅವೆ ಕನ್ನಡ ವಿeನ ಬರವಣಿಗೆಯ ಹೊಸ ಸಾಧ್ಯತೆಯನ್ನು ತೆರೆದಿಟ್ಟವು. ಬೇರೆ ಪ್ರಕಾರಗಳ ಬರಹ ಗಳೂ ಅವರಿಂದ ಹರಿದುಬಂದವು. ಅವರಂಥ ಕರ್ಮಯೋಗಿ ಯಾವುದೇ ಸುದ್ದಿಮನೆಗೂ ಭೂಷಣ, ಲಕ್ಷಣ. ಹತ್ತಾರು ಕಡೆಗಳಲ್ಲಿ, ಸಂದರ್ಭಗಳಲ್ಲಿ ನಾನು ಹೇಳಿದ್ದಿದೆ, ‘ನಾಗೇಶ ಹೆಗಡೆ ಯವರು ಪ್ರಜಾವಾಣಿ ಮತ್ತು ಕನ್ನಡದ ಪತ್ರಿಕೋದ್ಯಮದ ಗಟ್ಟಿಕಾಳು ಮತ್ತು ಅವರನ್ನು ಸಂಪಾದಕರ ನ್ನಾಗಿ ಮಾಡದೇ ಆ ಪತ್ರಿಕೆ ಜೊಳ್ಳಾಯಿತು’ ಎಂದು. ಅವರಿಗೆ ಕನ್ನಡದ ಯಾವುದೇ ರಾಜ್ಯಮಟ್ಟದ ಪತ್ರಿಕೆಗೆ ಸಂಪಾದಕ ಆಗುವ ಎಲ್ಲ ಸಾಮರ್ಥ್ಯ, ತಾಕತ್ತು, ವ್ಯಕ್ತಿತ್ವ, ಘನತೆ ಇತ್ತು.

ಪತ್ರಿಕೋದ್ಯಮದ ಹಿತದೃಷ್ಟಿಯಿಂದಾದರೂ ಅವರು ಸಂಪಾದಕರಾಗಬೇಕಿತ್ತು. ಒಂದು ವೇಳೆ ಹಾಗಾಗಿದ್ದರೆ ಅವರು ಒಂದಷ್ಟು ಬದಲಾವಣೆಗಳನ್ನು ತರದೇ ಹೋಗುತ್ತಿರಲಿಲ್ಲ. ಆದರೆ ಅದು ಫಲಿಸದಿರುವುದು ಅವರ ಸೋಲಲ್ಲ, ಅವರ ಸಾಮರ್ಥ್ಯವನ್ನು ಬಳಸಿಕೊಳ್ಳದ ಪತ್ರಿಕೆಯದು. ಅವರು ‘ಪ್ರಜಾವಾಣಿ’ಯಿಂದ ನಿವೃತ್ತರಾದ ವಾರ, ಪ್ರತಿಸ್ಪರ್ಧಿ ಪತ್ರಿಕೆ ಉದ್ಯೋಗಿ ಎಂಬುದನ್ನು ನೋಡದೇ, ‘ವಿಜಯ ಕರ್ನಾಟಕ’ದಲ್ಲಿ ನಾನೊಂದು ಲೇಖನ ಬರೆದಿದ್ದೆ. ನನಗೆ ಅವರ ಬಗ್ಗೆ ಅಂಥ ಅಭಿಮಾನ. ಅದು ಸ್ವಲ್ಪವೂ ಮುಕ್ಕಾಗಿಲ್ಲ. ಅವರು ನಿವೃತ್ತರಾಗಿ ಹದಿನೈದು ವರ್ಷಗಳ ಮೇಲಾದವು. ಅವರ ವಾರಿಗೆಯವರೆ ವೃತ್ತಿಯಲ್ಲಿದಾಗಷ್ಟೇ ಬರವಣಿಗೆ ಎಂದು ಭಾವಿಸಿದ್ದರೂ, ಹೆಗಡೆಯವರು ಇಂದಿಗೂ ಓದುತ್ತಾ, ಬರೆಯುತ್ತಾ ಕ್ರಿಯಾಶೀಲರಾಗಿದ್ದಾರೆ.

ಹೀಗಾಗಿ ಅವರ ಬಗ್ಗೆ ಈಗಲೂ ನನಗೆ ಒಂದು ಹಿಡಿ ಗೌರವ ಜಾಸ್ತಿ. ಈ ಮಧ್ಯೆ ಹೆಗಡೆ ಬಗ್ಗೆ ತೀರ ಕೀಳುಭಾಷೆಯಲ್ಲಿ ಟ್ರೋಲ್ ಮಾಡುತ್ತಿದ್ದವರನ್ನು ನಾನು ಗದರಿಸಿದ್ದೂ ಉಂಟು. ಈ ಎ ಕಾರಣಗಳಿಂದ, ನನಗೆ ಆಪ್ತರಾದ, ನಾನು ಗೌರವಿಸುವ ಸುತ್ತೂರು ಶ್ರೀಗಳು, ಡಾ.ಭೈರಪ್ಪ ಮತ್ತು ಪ್ರತಾಪಸಿಂಹ ಅವರೊಂದಿಗೆ, ನಾಗೇಶ ಹೆಗಡೆಯವರೂ ಬರಲಿ, ಇರಲಿ ಎಂದು ಭಾವಿಸಿ ನಾನು ಅವರನ್ನು ಆಹ್ವಾನಿಸಿದೆ.

ನಾಗೇಶ ಹೆಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ದೊಡ್ಡ ಅಪರಾಧವಾಗಬಹುದು ಎಂದು ನಾನಂತೂ ನಿರೀಕ್ಷಿಸಿ ರಲಿಲ್ಲ. ‘ವಿಶ್ವೇಶ್ವರ ಭಟ್ ಅವರ ಪುಸ್ತಕಗಳ ಬಿಡುಗಡೆ ಮತ್ತು ಜನ್ಮದಿನ ಸಮಾರಂಭದಲ್ಲಿ ನಾನು ಭಾಗವಹಿಸಿದ್ದೇಕೆ
ಎಂದು ಅನೇಕ ಕಡೆ ಟೀಕೆ ವ್ಯಕ್ತವಾಗುತ್ತಿದೆ. ಅದಕ್ಕೊಂದು ಸ್ಪಷ್ಟೀಕರಣ ಇಲ್ಲಿದೆ’ ಎಂದು ಮರುದಿನ ಹೆಗಡೆ ಅವರ ಫೇಸ್ ಬುಕ್ ಗೋಡೆಯ ಮೇಲಿನ ಬರಹ ಮತ್ತು ಅದಕ್ಕೆ ಮೂಡಿ ಬಂದ ಕಾಮೆಂಟುಗಳನ್ನು ಓದಿದಾಗಲೇ, ನನಗೆ ಗೊತ್ತಾಗಿದ್ದು.

ಆ ಕ್ಷಣಕ್ಕೆ ನನಗೆ ಅನಿಸಿದ್ದೇನೆಂದರೆ, ಇಂಥವುಗಳಿಗೆ ಸ್ಪಷ್ಟಿಕರಣ ನೀಡಬೇಕಾ ಎಂಬುದು. ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಭಾಗವಹಿಸಬಾರದು ಎಂಬುದನ್ನು ಬೇರೆಯವರು ನಿರ್ಧರಿಸಬೇಕಾ? ಅಷ್ಟು ಸ್ವಾತಂತ್ರ್ಯವೂ ನಮಗಿಲ್ಲವಾ? ದಿನೇಶ ಮಟ್ಟು ನನ್ನನ್ನು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಮಂತ್ರಿಸಿದಾಗಲೂ ಇಂಥದೇ ವಿವಾದವುಂಟಾಗಿತ್ತು.

ಇದೊಂದು ಡೇಂಜರಸ್ ಟ್ರೆಂಡ್! ಸರಿ, ಒಂದು ವೇಳೆ ಹೆಗಡೆಯವರು ಎಡಚರ ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ಅವರನ್ನು ಕರೆಯಬಾರದಾ? ಅವರು ಮನುಷ್ಯರಲ್ಲವಾ? ಎಡಚರ ಆದ ಮಾತ್ರಕ್ಕೆ ಅವರನ್ನು ದೂರ ಇಡಬೇಕಾ? ಅವರ ಅಭಿಪ್ರಾಯಕ್ಕೆ ಕಿವಿಯಾಗಬಾರದಾ? ಅವರನ್ನು ಗೌರವಿಸುವುದು ತಪ್ಪಾ? ಒಂದು ವೇಳೆ ನಾನು ಬಲಪಂಥೀಯನಾದರೆ, ಎಡಪಂಥೀಯರನ್ನು ಆಹ್ವಾನಿಸ ಬಾರದಾ? ಇದೆಂಥ ಮನಸ್ಥಿತಿ? ಪ್ರತಿಯೊಬ್ಬರೂ ಅವರದ್ದೇ ಆದ ನಿಲುವು, ಅಭಿಪ್ರಾಯ, ಸಿದ್ಧಾಂತ ಇಟ್ಟುಕೊಳ್ಳಲು ಸ್ವತಂತ್ರರು.

ಮೊದಲಿಗೆ ನಾವು ಮನುಷ್ಯರು, ನಂತರ ಬಲಪಂಥೀಯ, ಎಡಪಂಥೀಯ, ಪ್ರಗತಿಪರ, ಕೋಮುವಾದಿ, ಚೆಡ್ಡಿ, ಲುಂಗಿ, ಬರ್ಮುಡಾ.. ಇತ್ಯಾದಿ ಇತ್ಯಾದಿ. ನಿಲುವಿಗಿಂತ ನಿಷ್ಠೆ ದೊಡ್ಡದು. ಸಿದ್ಧಾಂತಕ್ಕಿಂತ ಸಂಬಂಧ ದೊಡ್ಡದು. ಆಯ್ತು, ಪರವಾಗಿಲ್ಲ, ಒಂದು ಕ್ಷಣ ನನ್ನನ್ನು ಬಲಪಂಥೀಯ ಎಂದೇ ಭಾವಿಸಿ. ಒಬ್ಬ ವ್ಯಕ್ತಿ ಎಡಪಂಥೀಯನಾಗಿದ್ದರೂ, ಅವನನ್ನು ಇಷ್ಟಪಡಿಸಲು ನನಗೆ ಅನೇಕ ಸಂಗತಿಗಳು ಕಾಣುತ್ತವೆ. ಆ ಕಾರಣದಿಂದ ನಾನು ಅವನನ್ನು ಇಷ್ಟಪಡುತ್ತೇನೆ.

ಬಲಪಂಥೀಯ ಎಂಬ ಒಂದೇ ಕಾರಣಕ್ಕೆ ಅವನ ಅಪಸವ್ಯಗಳನ್ನೆ ಒಪ್ಪಿಕೊಳ್ಳಬೇಕಿಲ್ಲ. ಅಷ್ಟರಮಟ್ಟಿಗೆ ನಾನು ನನ್ನ ಸ್ವಂತಿಕೆ ಯನ್ನು ಭೋಗ್ಯಕ್ಕೆ, ಬಾಡಿಗೆಗೆ ಕೊಟ್ಟಿಲ್ಲ. ಅಷ್ಟಕ್ಕೂ ಎಡ ಮತ್ತು ಬಲ ಎನ್ನುವುದು ಒಂದು ವಾದ, ಸಿದ್ಧಾಂತ. ಅದಕ್ಕೆ ಮಾರಿಕೊಳ್ಳುವಂಥ ಮಾನಸಿಕ ದಾರಿದ್ರ್ಯ ಮತ್ತೊಂದಿಲ್ಲ. ಆ ಸಿದ್ಧಾಂತವನ್ನು ಎಷ್ಟರಮಟ್ಟಿಗೆ ಸ್ವೀಕರಿಸಬೇಕು ಎಂಬ ವಿವೇಚನೆ ನಮಗಿರಬೇಕು. ಸಿದ್ಧಾಂತಕ್ಕೆ ಸಂಬಂಧವನ್ನು ಬಲಿ ಕೊಡುವುದು ಮಾನವೀಯತೆ ಅಲ್ಲ.

ಸಂಬಂಧವನ್ನು ಮನುಷ್ಯತ್ವದ ನೆಲೆಯಲ್ಲಿ ಕಟ್ಟಬೇಕೇ ಹೊರತು ಸಿದ್ಧಾಂತದ ಭೂಮಿಕೆಯ ಮೇಲೆ ಕಟ್ಟಬಾರದು. ಹೀಗಾಗಿ
ದಿನೇಶ ಮಟ್ಟು ಕರೆದಾಗಲೂ ನಾನು ಹೋಗಿ ಬಂದೆ. ನನಗೆ ಅವರು ‘ಎಡಚರ’ ಎಂದು ಕಾಣುವುದಕ್ಕಿಂತ ಒಬ್ಬ ಮನುಷ್ಯ
ಎಂದೇ ಈಗಲೂ ಕಾಣುತ್ತಾರೆ. ಅವರನ್ನು ಗುರುತಿಸಲು ಅದೇ ಸರಿಯಾದ ಮಾರ್ಗ. ಅದಾದ ನಂತರ ನಡೆದ ಬೆಳವಣಿಗೆಗಳು
ಬೇಸರ ಮೂಡಿಸಿದವು. ಕಾರಣ ಆಗ ಅವರಿಗೆ ನಮ್ಮ ಸಂಬಂಧಕ್ಕಿಂತ ಸಿದ್ಧಾಂತಗಳೇ ಮುಖ್ಯವಾಗಿದ್ದು. ಅದು ಮಾನವೀಯ ನಡೆ ಅಲ್ಲ. ಯಾವ  ಸಿದ್ಧಾಂತವೂ ತನ್ನ ವಿರೋಧಿಗಳನ್ನು ವೈರಿಯೆಂದು ಭಾವಿಸಿ ಎಂದು ಹೇಳುವುದಿಲ್ಲ.

ಒಮ್ಮೆ ಹಾಗೆ ಹೇಳಿದ್ದರೆ, ಅದನ್ನೂ ಒಂದು ಸಿದ್ಧಾಂತ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಹೀಗಾಗಿ ನನಗೆ ನಾಗೇಶ ಹೆಗಡೆ
ಯವರನ್ನು ದೂರವಿಡಬೇಕು ಎಂದು ಎಂದೂ ಅನಿಸಿಲ್ಲ. ಅವರು ಎಡಪಂಥೀ ಯರು ಎಂಬುದನ್ನು ಒಪ್ಪಿಕೊಳ್ಳುತ್ತಲೇ, ನನಗೆ ಅವರನ್ನು ಇಷ್ಟಪಡುವುದು, ಗೌರವಿಸುವುದು ಸಾಧ್ಯವಾಗಿದೆ. ಕಾರಣ ನಾನು ಯಾವತ್ತೂ ಸಿದ್ಧಾಂತಕ್ಕಿಂತ ಸಂಬಂಧವೇ ದೊಡ್ಡದು ಎಂದು ಭಾವಿಸಿದವನು.

ಈ ಸಿದ್ಧಾಂತಕ್ಕೆ ಕಟ್ಟು ಬಿದ್ದರೆ, ಬಲಪಂಥೀಯನನ್ನೋ, ಎಡಪಂಥೀಯನನ್ನೋ ವಿರೋಧಿಸುವ ಭರದಲ್ಲಿ ಅವನ ಮನೆಯ ನಾಯಿಯನ್ನೂ ವಿರೋಧಿಸುವವರನ್ನು ನೋಡಿದ್ದೇನೆ. ಬುಲ್ ಶಿಟ್! ಎಡಪಂಥೀಯರು ಬಲಪಂಥೀಯರ ಕಾರ್ಯಕ್ರಮಕ್ಕೆ, ಬಲಪಂಥೀಯರು ಎಡಪಂಥೀಯರ ಕಾರ್ಯಕ್ರಮಕ್ಕೆ ಹೋಗಲಾರದಷ್ಟು ದೊಡ್ಡ ಮನಸ್ಸು ಇಟ್ಟುಕೊಳ್ಳದಿದ್ದರೆ, ಅವರವರ ಸಿದ್ಧಾಂತಗಳನ್ನು ಗೌರವಿಸುವ ಮನಸ್ಥಿತಿಯನ್ನಾದರೂ ಬೆಳೆಸಿಕೊಳ್ಳದಿದ್ದರೆ, ಅದಕ್ಕಿಂತ ವಿವೇಕಶೂನ್ಯತೆ ಮತ್ತೊಂದಿಲ್ಲ ಎಂಬುದೇ ನನ್ನ ಪ್ರಬಲ ನಂಬಿಕೆ.

ಆದರೆ ಇಂದು ಪರಸ್ಪರರು ಬದ್ಧವೈರಿಗಳಂತೆ ವರ್ತಿಸುತ್ತಿದ್ದಾರೆ. ಇದು ಎರಡೂ ಸಿದ್ಧಾಂತಗಳನ್ನು ಒಪ್ಪಿದವರ ಸೋಲಿಗಿಂತ,
ಆಯಾ ಸಿದ್ಧಾಂತದ ಸೋಲೂ ಸಹ ಹೌದು. ಯಾವುದೋ ಒಂದು ಸಿದ್ಧಾಂತವನ್ನು ಒಪ್ಪಿಕೊಂಡ ಮಾತ್ರಕ್ಕೆ ಅದನ್ನು ಒಪ್ಪದ
ಮನುಷ್ಯರನ್ನು ಒಪ್ಪಿಕೊಳ್ಳಬಾರದೆನ್ನುವುದು ಯಾವ ಸಿದ್ಧಾಂತ? ನಮಗೆ ಸಿದ್ಧಾಂತಗಳು ಇಷ್ಟವಾದರೆ ಮೆಚ್ಚಿಕೊಳ್ಳಬಹುದು,
ಮಾರುಹೋಗಬಹುದು. ಆದರೆ ಖಂಡಿತವಾಗಿಯೂ ಅದಕ್ಕೆ ಮಾರಿಕೊಳ್ಳಬಾರದು ಫುಲ್ ಸ್ಟಾಪ್.