Thursday, 21st November 2024

ಸಮಸ್ಯೆಗಳನ್ನೂ ಬಿಜಿನೆಸ್ ಆಗಿ ಪರಿವರ್ತಿಸಬಹುದು !

ನೂರೆಂಟು ವಿಶ್ವ

vbhat@me.com

ನಿಮ್ಮಲ್ಲಿ ಯಾವುದಾದರೂ ಬಿಜಿನೆಸ್ ಐಡಿಯಾಗಳಿದ್ದರೆ ಹೇಳಿ, ಅದನ್ನು ಇಂಪ್ಲಿಮೆಂಟ್ ಮಾಡೋಣ’ ಆಪ್ತ ಸ್ನೇಹಿತರಾದ ಬಸು ಉಳ್ಳಾಗಡ್ಡಿ ಹೇಳಿದರು.
ತಟ್ಟನೆ ಏನು ಹೇಳಬೇಕೆಂದು ತೋಚಲಿಲ್ಲ. ಆಗ ಅವರೇ ‘ಯಾವುದಾದರೂ ಐಡಿಯಾಗಳಿದ್ದರೆ ಹೇಳಿ. ಇಲ್ಲವಾದರೆ, ಬೆಂಗಳೂರಿನಲ್ಲಿ ಮೆಜಾರಿಟಿ ಜನ ಎದುರಿಸುವ ಗಂಭೀರ ಸಮಸ್ಯೆಗಳಿದ್ದರೆ ಹೇಳಿ. ಅದಕ್ಕೆ ಪರಿಹಾರ ಸೂಚಿಸುವ ಮೂಲಕ ಅದನ್ನೇ ಬಿಜಿನೆಸ್ ಐಡಿಯಾವಾಗಿ ಪರಿವರ್ತಿಸಬಹುದು.

ಯಾರೂ ಪ್ರಯತ್ನಿಸದ ಕ್ಷೇತ್ರ ಅಥವಾ ಬಿಜಿನೆಸ್‌ನಲ್ಲಿ ಪೈಪೋಟಿ ಇರುವುದಿಲ್ಲ. ಅಂಥ ಬಿಜಿನೆಸ್ ಬಹುಬೇಗ ಕ್ಲಿಕ್ ಆಗುತ್ತದೆ ’ ಅಂದರು. ಅಂದಹಾಗೆ ಬಸವರಾಜ್ ಉಳ್ಳಾಗಡ್ಡಿ ಅವರು ಮೂಲತಃ ಉತ್ತರಕನ್ನಡದ ಬನವಾಸಿಯವರು. ಕಳೆದ ೩೦ ವರ್ಷಗಳಿಂದ  ಅಮೆರಿಕದಲ್ಲಿ ನೆಲೆಸಿದ್ದಾರೆ. ಕೆಲವು ವರ್ಷ ಅಲ್ಲಿಯೇ ನೌಕರಿ ಮಾಡಿ, ಆನಂತರ ಬಿಜಿನೆಸ್ ಆರಂಭಿಸಿದವರು. ಈಗ ತಮ್ಮ ಬಿಜಿನೆಸ್‌ನ್ನು ಬೆಂಗಳೂರು ಹಾಗೂ ಇತರ ನಗರಗಳಿಗೂ ವಿಸ್ತರಿಸಿದ್ದಾರೆ. ಒಬ್ಬ ಯಶಸ್ವಿ entrepreneur ಆಗಿದ್ದಾರೆ.

ಕೆಲ ವರ್ಷದ ಹಿಂದೆ ಈ ರೀತಿ ಹೇಳಿದ್ದ ನೀಡಿದ್ದ ಬಸವರಾಜ್ ಅವರು ತಮ್ಮ ಹೇಳಿಕೆಯನ್ನು ಮನದಟ್ಟು ಮಾಡಿಕೊಡಲು ಒಂದು ನಿದರ್ಶನ ಹೇಳಿದರು. ‘ನೋಡಿ, ಅಮೆರಿಕದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಾರೆ. ಅವರಿಗೆ ತಮ್ಮ ಮನೆಯನ್ನು ಸ್ವಚ್ಛಗೊಳಿಸಲು ಸಮಯ ಸಿಗುವುದಿಲ್ಲ. ವಾರದಲ್ಲಿ ಎರಡು ದಿನ ಮಾತ್ರ ಈ ಕೆಲಸ ಮಾಡಿಕೊಳ್ಳಬೇಕು. ಸಿಗುವ ಎರಡು ದಿನ ರಜಾ ಸಹ ಇದಕ್ಕೇ ಹೋಗಿ ಬಿಡುತ್ತದೆ. ವೀಕೆಂಡ್‌ಗೆಂದು ಬೇರೆಲ್ಲೂ ಹೋಗಲು ಆಗುವುದಿಲ್ಲ. ಅಲ್ಲಿ ಮನೆಗೆಲಸಕ್ಕೆ ಹೆಂಗಸರು (maids) ಸಿಗುವುದಿಲ್ಲ. Its s big problem. ಇದು ಪ್ರತಿ ಮನೆಯ ಸಮಸ್ಯೆ. ಮನೆ ಕೆಲಸಕ್ಕೆಂದು ಹೆಂಡತಿ ದುಡಿಯಲು ಹೋಗದಿದ್ದರೆ ಸಂಸಾರ ರಥ ಸಾಗುವುದಿಲ್ಲ. ಒಂದು ಸಮಸ್ಯೆ ಕೆಲವರನ್ನಷ್ಟೇ ಬಾಧಿಸಿದರೆ ಅದು ವೈಯಕ್ತಿಕ ಸಮಸ್ಯೆಯಾಗುತ್ತದೆ.

ಆದರೆ ಅದರ ಬಿಸಿ ಎಲ್ಲರಿಗೂ ತಟ್ಟಿದರೆ ಅದು ಗಂಭೀರ ಸಮಸ್ಯೆಯಾಗುತ್ತದೆ, talking point ಆಗುತ್ತದೆ. ಮನೆಗೆಲಸದವರ ಸಮಸ್ಯೆಯೂ ಅಮೆರಿಕದಲ್ಲಿ ಅದೇ ಸ್ವರೂಪವನ್ನು ಪಡೆಯಿತು. ಈಗ ಭಾರತದಲ್ಲಿ ಇದರ ಬಿಸಿ ತಟ್ಟಲಾರಂಭಿಸಿದೆ, ಅದು ಬೇರೆ ಮಾತು. ಯಾರೋ ಒಂದಷ್ಟು ಜನ ಸೇರಿ ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡು ಹಿಡಿಯಬಹುದು, ಅದನ್ನು ಬಿಜಿನೆಸ್ ಆಗಿ ಹೇಗೆ ಪರಿವರ್ತಿಸಬಹುದು ಎಂದು ಯೋಚಿಸಿದರು. ಅದರ ಫಲವೇ ಏಳೆಂಟು ವರ್ಷದ ಹಿಂದೆ ಆರಂಭಗೊಂಡ “mollymaid.com’’ ‘ಈ ಮೊಲ್ಲಿಮೇಡ್ ಏನು ಮಾಡುತ್ತದೆ ಅಂದ್ರೆ ನಿಮ್ಮ ಮನೆಗೆ ಕೆಲಸದವರನ್ನು ಕಳಿಸಿಕೊಡುತ್ತದೆ. ನೀವು ಮನೆಯಲ್ಲಿ ಇರಬೇಕೆಂದಿಲ್ಲ. ಅವರೇ ಬಂದು ಮನೆಯನ್ನು ಸ್ವಚ್ಛಗೊಳಿಸಿ, ಅಂದವಾಗಿ ಜೋಡಿಸಿ, ನೀವು ಹೇಳಿದ ಎಲ್ಲ ಕೆಲಸಗಳನ್ನೂ ಒಪ್ಪವಾಗಿ ಮಾಡಿ ಹೋಗುತ್ತಾರೆ.

ನೀವು ಎಷ್ಟೇ ಅಮೂಲ್ಯ ವಸ್ತು, ಒಡವೆ, ಆಭರಣ, ಹಣ ಏನೇ ಇಟ್ಟರೂ ಸ್ವಲ್ಪವೂ ವ್ಯತ್ಯಾಸವಾಗೊಲ್ಲ. ಅವರು ಕೆಲಸ ಮಾಡುವಾಗ ನೀವು ಇರಬೇಕಿಲ್ಲ ಹಾಗೂ ಯಾವ ವಸ್ತುವೂ ಕಳುವಾಗುವುದಿಲ್ಲ ಎಂಬ ಸಂಗತಿಯೇ ಆ ಸೇವೆಯ ವೈಶಿಷ್ಟ್ಯ. ಮೊಲ್ಲಿಮೇಡ್ ಕೆಲಸಕ್ಕೆ ಸೇರಿಸಿಕೊಳ್ಳುವಾಗಲೇ ಸಿಬ್ಬಂದಿ ಯನ್ನು ಇಂಥ ಸೇವೆಗೆ ತರಬೇತಿ ಕೊಟ್ಟು ಅಣಿಗೊಳಿಸುತ್ತದೆ. House Keeping ಬಗ್ಗೆ ಟ್ರೇನಿಂಗ್ ಕೊಡುತ್ತದೆ. ಅವರ ಸಂಪೂರ್ಣ ಜಾತಕ ಸಂಗ್ರಹಿಸು ತ್ತದೆ. ಯಾರ ಮನೆಯಲ್ಲಾದರೂ ಗುಂಡುಸೂಜಿ ಕದ್ದರೂ ಅವರನ್ನು ಸುಲಭವಾಗಿ track ಮಾಡಬಹುದು. ನಿಮ್ಮ ಮನೆಗೇ ಬೇಕಾದ customised maid service ಲಭ್ಯ. ಅವರವರ ಬೇಡಿಕೆ, ಅಪೇಕ್ಷೆ, ಅವಶ್ಯಕತೆಗೆ ಅನುಗುಣವಾಗಿ ಮನೆಯನ್ನು ಸ್ವಚ್ಛಗೊಳಿಸಿ, ಚೆಂದ ಮಾಡಿ ಹೋಗುತ್ತಾರೆ. ಹಾಗಂತ ಇದು ಬಹಳ ದುಬಾರಿಯೇನಲ್ಲ.

ನಮ್ಮ ಮನೆಯನ್ನು ಬೇರೆಯವರಿಗೆ ಒಪ್ಪಿಸಬೇಕಲ್ಲ ಎಂಬ ಚಿಂತೆಯೂ ಇಲ್ಲ. ಅಮೆರಿಕದ ಎಲ್ಲ ಮನೆಗಳಲ್ಲೂ ವ್ಯಾಪಿಸಿದ್ದ, ಜಾಗತಿಕ ಬಿಕ್ಕಟ್ಟಿಗಿಂತ ಗಂಭೀರವಾಗಿ ಬಾಧಿಸುತ್ತಿದ್ದ ಸಮಸ್ಯೆಗೆ ಮೊಲ್ಲಿಮೇಡ್ ಪರಿಹಾರ ಕಲ್ಪಿಸಿದೆ. ಅಲ್ಲದೇ ಸಾವಿರಾರು ಕೋಟಿ ವ್ಯವಹಾರ ನಡೆಸುವ ದೊಡ್ಡ ಸಂಸ್ಥೆಯಾಗಿದೆ.
ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದೆ. ಪ್ರತಿದಿನ ಎರಡು-ಮೂರು ಗಂಟೆ ಬಿಡುವಿನ ಸಮಯ ವಿದೆಯೆನ್ನಿ ಅಂಥವರು ಮೊಲ್ಲಿಮೇಡ್‌ಗೆ ಸೇರಿಕೊಂಡು ಬೇರೆ ಯವರ ಮನೆ ಸ್ವಚ್ಛಗೊಳಿಸಿ ಬರಬಹುದು. ಬಹಳ ದೊಡ್ಡ ಸಂಖ್ಯೆಯಲ್ಲಿ ಯುವಕ, ಯುವತಿಯರು, ವಿದ್ಯಾರ್ಥಿಗಳು, ಗೃಹಿಣಿಯರು ಮೊಲ್ಲಿಮೇಡ್ ಸೇರಿಕೊಂಡು, ಕಂಪನಿಯ ಕಾರಿನಲ್ಲಿ ಗ್ರಾಹಕರ ಮನೆಗೆ ಹೋಗಿ ಡ್ಯೂಟಿ ಮಾಡಿ ಬರುತ್ತಾರೆ.

ಬೇರೆಯವರ ಮನೆಯ ಕೆಲಸ ಮಾಡಬೇಕೆಂಬ ಕೀಳರಿಮೆಯನ್ನು ಹೊಡೆದು ಹಾಕಲಾಗಿದೆ. ಮನೆಗೆಲಸಕ್ಕೂ ಬ್ರಾಂಡಿಂಗ್ ಮಾಡಿ, ಅದೊಂದು ಪ್ರತಿಷ್ಠೆ ಕೆಲಸ ಹಾಗೂ ಲಾಭದಾಯಕ ಉದ್ಯೋಗ ಎಂಬಂತೆ ರೂಪಿಸಲಾಗಿದೆ. ಮೊಲ್ಲಿಮೇಡ್ ಸೇವೆ ಪಡೆದರೆ ಮನೆ ಸ್ವಚ್ಛವಾಗಿರುತ್ತದೆ ಎಂಬ ಅಭಿಪ್ರಾಯ
ಬೇರೂರುವಂತೆ ಆ ಸೇವೆ ಯನ್ನು ರೂಪಿಸಲಾಗಿದೆ. ಒಂದು ಜ್ವಲಂತ ಸಮಸ್ಯೆಗೆ ಯಾರದೋ ತಲೆಯಲ್ಲಿ ಮೂಡಿದ ಒಂದು ಐಡಿಯಾ ಇಂದು ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಬಸು ಅವರು ಯಾವ ವಿಷಯದ ಬಗ್ಗೆ ಹೇಳುತ್ತಿದ್ದಾರೆಂಬುದು ಪಕ್ಕಾ ಆಯಿತು. ‘ಅದು ಸರಿ ನೀವು ಈ ನಿಟ್ಟಿನಲ್ಲಿ ಏನು
ಮಾಡಿದ್ದೀರಿ?’ ಎಂದು ಕೇಳಿದೆ. ಅದಕ್ಕೆ ಅವರು ತಮ್ಮದೇ startup ಕಂಪನಿ ಬಗ್ಗೆ ಹೇಳಿದರು.

ಪ್ರತಿದಿನ ನಾವು ಬೆಂಗಳೂರಿನಲ್ಲಿ ಎದುರಿಸುತ್ತಿರುವ ಸಮಸ್ಯೆಗೆ ಕಂಡುಕೊಂಡ ಪರಿಹಾರ ಹೇಗೆ ಒಂದು ಉದ್ಯಮವಾಗಿದೆ, Business opportunity ಆಗಿ ಪರಿವರ್ತನೆಯಾಗಿದೆಯೆಂಬುದನ್ನು ಅವರು ವಿವರಿಸಿದರು. ನಮಗೆಲ್ಲ ಓಲಾ, ಉಬರ್, ಮೇಹು ಕ್ಯಾಬ್ ಸರ್ವಿಸ್ ಗೊತ್ತು. ಬೆಂಗಳೂರಿನಂಥ ನಗರದಲ್ಲಿ ಆಟೋಗಳ ಹಾಗೆ ಇಂದು ಕ್ಯಾಬ್, ಟ್ಯಾಕ್ಸಿಗಳು ನಾವು ಕರೆದಲ್ಲಿಗೆ ಬರುತ್ತವೆ. ಓಲಾ ಕಾರ್, ಆಟೋ ಬೇಕೆಂದು ಫೋನ್ ಮಾಡಿದರೆ ಐದು ನಿಮಿಷದೊಳಗೆ ನಾವು ಇರುವಲ್ಲಿಗೇ ಬರುತ್ತದೆ. ನಾವು ಎಲ್ಲಿದ್ದೇವೆಂದು ಅಡ್ರೆಸ್ ಸಹ ಹೇಳಬೇಕಿಲ್ಲ. ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ನಾವಿರುವ ಜಾಗವನ್ನು ಹುಡುಕಿಕೊಂಡು ಬರುತ್ತಾರೆ. ಮೂರು-ನಾಲ್ಕು ಜನ ಒಂದೇ ಕಡೆ ಕೆಲಸಕ್ಕೆ ಹೋಗುವವರು ತಮ್ಮ ತಮ್ಮ ಕಾರನ್ನು ತೆಗೆದುಕೊಂಡು ಹೋಗುವ ಬದಲು, ಒಂದೇ ಓಲಾ ಕಾರಿನಲ್ಲಿ ಆಫೀಸಿಗೆ ಹೋಗುವುದು, ಬರುವುದು ಬಹಳ ಲಾಭದಾಯಕ ಹಾಗೂ ಅನುಕೂಲಕರ.

ನಿಮ್ಮ ಬಳಿ ಎರಡು-ಮೂರು ಕಾರುಗಳಿದ್ದರೆ, ಓಲಾ ಕಂಪನಿಗೆ ಕೊಟ್ಟರೆ, ಅವರೇ ಅದನ್ನು ಓಡಿಸಿ ಕೊಂಡು ತಿಂಗಳ ಕೊನೆಯಲ್ಲಿ, ಇಂತಿಷ್ಟು ಅಂತ ಕೊಡುತ್ತಾರೆ. ಒಂದು ಕಾರನ್ನು ಬಾಡಿಗೆ ಬಿಟ್ಟವರು ಎಷ್ಟೋ. ಹಾಗೆ ನೋಡಿದರೆ ಓಲಾ ಕಂಪನಿಯವರ ಬಳಿಯಿರುವುದೆಲ್ಲ ಮಂದಿ ಕಾರುಗಳೇ. ಅವರು ಅದಕ್ಕೆ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಡ್ರೈವರ್‌ಗಳಿಗೂ ಓಲಾ ಸಂಬಳ ಅಂತ ಕೊಡುವುದಿಲ್ಲ. ಗ್ರಾಹಕರು, ಕಾರು ಮಾಲೀಕರು, ಡ್ರೈವರ್‌ಗಳ ಮಧ್ಯೆ ಓಲಾ ಒಂದು ಸೇತುವೆಯಾಗಿದೆ. ಇದಕ್ಕೊಂದಿಷ್ಟು ಕಮಿಶನ್ ಅಂತ ತನ್ನ ಪಾಲನ್ನು ತೆಗೆದುಕೊಳ್ಳುತ್ತದೆ. ಅದೇ ಸಾವಿರಾರು ಕೋಟಿ ರುಪಾಯಿ ಗಳಾಗುತ್ತವೆ! ಇದು ನಿಮಗೆ ಗೊತ್ತಿರಬಹುದು.

ಬಸು ಹಾಗೂ ಅವರ ಸ್ನೇಹಿತರು ಆರಂಭಿಸಿರುವ ಸ್ಟಾರ್ಟ್ ಅಪ್ ಕಂಪನಿ ಇದಕ್ಕಿಂತ ಸ್ವಲ್ಪ ಭಿನ್ನ. ನಿಮ್ಮ ಬಳಿ ಕಾರ್ ಇದೆ. ಆದರೆ ಡ್ರೈವರ್ ಬಂದಿಲ್ಲ. ಹೇಳಿಯೋ, ಹೇಳದೆಯೋ ಮೂರ‍್ನಾಲ್ಕು ದಿನ ಬರುವುದಿಲ್ಲ, ನಿಮಗೆ ಹೊರಹೋಗಬೇಕು, ಡ್ರೈವಿಂಗ್ ಬರೊಲ್ಲ ಅಥವಾ ನಿಮ್ಮ ಸ್ಟೇಟಸ್‌ಗೆ ಡ್ರೈವ್
ಮಾಡಲು ಮನಸ್ಸಿಲ್ಲ ಅಥವಾ ಕಾರಿನಲ್ಲೇ ಆಫೀಸ್‌ಗೆ ಸಂಬಂಧಿಸಿದ ಹತ್ತಾರು ಕೆಲಸಗಳನ್ನು ಮಾಡಬೇಕಾದ್ದರಿಂದ ಡ್ರೈವ್ ಮಾಡುತ್ತಿಲ್ಲ, ಅಂತೂ ಒಟ್ಟಾರೆ ನಿಮಗೆ ತಕ್ಷಣ ಡ್ರೈವರ್ ಬೇಕು ಅಂತಿಟ್ಟುಕೊಳ್ಳಿ, ಬಸು ಅವರ ‘ಡ್ರೈವ್ ಯು’ ಕಂಪನಿಗೆ ಫೋನ್ ಮಾಡಿದರಾಯಿತು. ಐದು-ಹತ್ತು ನಿಮಿಷಗಳಲ್ಲಿ
ಡ್ರೈವರ್‌ನನ್ನು ಕಳಿಸಿಕೊಡುತ್ತಾರೆ. ಗಂಟೆಗೆ ೯೯ ರು. ಛಾರ್ಜ್ ಮಾಡುತ್ತಾರೆ.

ಮನೆಯಿಂದ ಆಫೀಸಿಗೆ ಹೋಗಿ ನಿಮ್ಮನ್ನು ಬಿಟ್ಟ ನಂತರ, ನಿಮ್ಮ ಡ್ರೈವರ್ ವಾಹನದಲ್ಲಿ ಮಲಗಿ ಕಾಲ ಕಳೆಯುತ್ತಾನೆ. ಆತ ವಾಹನ ಓಡಿಸಿ ಡ್ಯೂಟಿ ಮಾಡುವುದೇ ಎರಡು-ಮೂರು ತಾಸು ಅಂತಿಟ್ಟುಕೊಳ್ಳಿ. ಅವರಿಗೆ ೧೬-೧೮ ಸಾವಿರ ರುಪಾಯಿ ಕೊಡುವ ಬದಲು, ಮನೆಯಿಂದ ನಿಮ್ಮನ್ನು ಆಫೀಸಿಗೆ ಕರೆದುಕೊಂಡು ಹೋಗಿ ಬಿಡಲು ಹಾಗೂ ಅಲ್ಲಿಂದ ಮನೆಗೆ ಕರೆದುಕೊಂಡು ಬರಲು ‘ಡ್ರೈವ್ ಯು’ ಸೇವೆ ಪಡೆದರೆ, ತಿಂಗಳಿಗೆ ಆರೇಳು ಸಾವಿರ ರುಪಾಯಿ ಗಳಲ್ಲಿ ನಿಭಾಯಿಸಬಹುದು. ಮೊಲ್ಲಿಮೇಡ್ ಮನೆಗೆ ಮನೆಗೆಲಸದವರನ್ನು ಕಳಿಸಿಕೊಡುವಂತೆ, ‘ಡ್ರೈವ್ ಯು’ ನಿಮಗೆ ಡ್ರೈವರ್‌ಗಳನ್ನು ಕಳಿಸಿಕೊಡುತ್ತದೆ. ತನ್ನ ಸೇವೆಗೆ ಆಯ್ದುಕೊಳ್ಳುವ ಡ್ರೈವರ್‌ಗಳಿಗೆ Drive U ಉತ್ತಮ ತರಬೇತಿ, ಗ್ರಾಹಕರ ಜತೆ ಹೇಗೆ ವರ್ತಿಸಬೇಕು, ರಸ್ತೆ ನಿಯಮ, ಉತ್ತಮ ಸಂಬಂಧ ಹೊಂದುವ ಪರಿ, ಗ್ರಾಹಕ ಸೇವೆ ಮಹತ್ವ ಮುಂತಾದವುಗಳ ಬಗ್ಗೆ ಟ್ರೇನಿಂಗ್ ನೀಡಿ, ಕೆಲಸಕ್ಕೆ ಕಳಿಸುತ್ತದೆ. ಪ್ರತಿದಿನ ನಿಮಗೆ ಮೂರ್ನಾಲ್ಕು ತಾಸು ಹೆಚ್ಚುವರಿ ಸಮಯವಿದ್ದರೆ ‘ಡ್ರೈವ್ ಯು’ನಲ್ಲಿ ಸೇರಿಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಪಾಕೆಟ್ ಮನಿ ಬೇಕಾದರೆ, ಎರಡು-ಮೂರು ತಾಸು ವಾಹನ ಓಡಿಸಬಹುದು. ಅಂದಿನ ಕೆಲಸಕ್ಕೆ ಅಂದೇ ಅವರ ಅಕೌಂಟಿಗೆ ಹಣ ಜಮಾ ಆಗುತ್ತದೆ. ಕಾರಿನ ಮಾಲೀಕರು ಹಾಗೂ ಡ್ರೈವರ್ ಮಧ್ಯೆ ‘ಡ್ರೈವ್ ಯು’ ಸೇತುವೆಯಾಗುತ್ತದೆ. ಅಂದರೆ ಡ್ರೈವರ್‌ಗಳ ಸೇವೆಗೆ ‘ಡ್ರೈವ್ ಯು’ ಒಂದು ಬ್ರಾಂಡಿಂಗ್ ಮಾಡಿ ಅದಕ್ಕೆ ವೃತ್ತಿ ಪರತೆಯ ಮಹತ್ವ ಕಲ್ಪಿಸಿಕೊಟ್ಟಿದೆ. ಕಾರಿದ್ದೂ ಡ್ರೈವರ್‌ಗಳು ಸಿಗದೇ ಪರದಾಡುವ ಅಸಂಖ್ಯ ಜನರಿಗೆ ಈ ಸೇವೆ ನಿಜಕ್ಕೂ ವರದಾನವಾಗಿದೆ. ಈಗಾಗಲೇ ‘ಡ್ರೈವ್ ಯು’ ನಲ್ಲಿ ಏಳುನೂರಕ್ಕೂ ಹೆಚ್ಚು ಡ್ರೈವರ್‌ಗಳಿದ್ದು, ದಿನದ ಯಾವ ಹೊತ್ತಿನಲ್ಲಾದರೂ ಸಂಪರ್ಕಿಸಿದರೆ ತಕ್ಷಣ ಧಾವಿಸಿ ಬರುತ್ತಾರೆ.

ದುಬಾರಿ, ಲಕ್ಷುರಿ ಕಾರಿಗೆ ಅದಕ್ಕೆ ತಕ್ಕ ಹಾಗೆ, ಚೆನ್ನಾಗಿ ಯೂನಿಫಾರ್ಮ್ ಧರಿಸಿದ, ಇಂಗ್ಲಿಷ್ ಮಾತಾಡಬಲ್ಲ ಡ್ರೈವರ್‌ಗಳು ಬರುತ್ತಾರೆ. ‘ಡ್ರೈವ್ ಯು’ ಡ್ರೈವರ್ ಇದ್ದರೆ ಸ್ವಲ್ಪವೂ ಭಯಪಡುವ ಅಗತ್ಯವಿಲ್ಲ. ಈಗ ಈ ಸೇವೆಯನ್ನು ಬೆಂಗಳೂರು ಹೈದರಾಬಾದ್, ಚೆನ್ನೈ, ಮುಂಬೈ, ದಿಲ್ಲಿ ಮುಂತಾದ ನಗರಗಳಿಗೂ ವಿಸ್ತರಿಸಿದೆ. ಕೆಲವು ಜನರ ಐಡಿಯಾ ಹೇಗೆ ಒಂದು ಹೊಸ ಉದ್ಯಮಕ್ಕೆ ನಾಂದಿಯಾಗಿದೆ ನೋಡಿ. ಅದಕ್ಕಿಂತ ಹೆಚ್ಚಾಗಿ ಹಲವರು ನಿತ್ಯ ಎದುರಿಸುವ ಸಮಸ್ಯೆಗೆ ಪರಿಹಾರ ಒದಗಿಸಿದೆ. ಇದೇ ‘ಡ್ರೈವ್ ಯು’ ಹಿಂದಿರುವ ಮನಸ್ಸುಗಳು ಮತ್ತೊಂದು ಸೇವೆಯನ್ನೂ ಆರಂಭಿಸಿದೆ. ಅದು ‘ಪಾರ್ಕ್ ಇನ್’. ನೀವು ಬೆಂಗಳೂರಿನ ಯಾವುದಾದರೂ ಏರಿಯಾಕ್ಕೆ ಹೋಗು ತ್ತೀರಿ. ಆದರೆ ವಾಹನ ಪಾರ್ಕ್ ಮಾಡಲು ಜಾಗ ಸಿಗುವುದಿಲ್ಲ.

ಆಗ ‘ಪಾರ್ಕ್ ಇನ್’ಗೆ ಫೋನ್ ಮಾಡಿದರೆ, ಅವರು ನಿಮ್ಮ ವಾಹನವನ್ನು ತೆಗೆದುಕೊಂಡು ಹೋಗಿ ಪಾರ್ಕ್ ಮಾಡುತ್ತಾರೆ. ಎಲ್ಲಿ ಪಾರ್ಕ್ ಮಾಡುತ್ತಾರೆ ಎಂಬುದು ನಿಮ್ಮ ಸಮಸ್ಯೆಯಲ್ಲ. ಅವರೇನು ಮಾಡುತ್ತಾರೆಂದರೆ, ಉದಾಹರಣೆಗೆ, ಎಂಜಿ ರೋಡಿನಲ್ಲಿ ನಿಮಗೆ ಪಾರ್ಕಿಂಗ್‌ಗೆ ಜಾಗ ಸಿಗದಿದ್ದಾಗ ಪಾರ್ಕ್
ಇನ್‌ಗೆ ಫೋನ್ ಮಾಡುತ್ತೀರೆನ್ನಿ. ಅವರು ಸುತ್ತಮುತ್ತ ಒಂದೆರಡು ಕಿಮಿ ದೂರದಲ್ಲಿರುವ ಅಪಾರ್ಟ್‌ಮೆಂಟ್ ಮಾಲೀಕರ ಕಾರ್ ಪಾರ್ಕಿಂಗ್ ಜಾಗವನ್ನು ಬಾಡಿಗೆಗೆ ಪಡೆಯುತ್ತಾರೆ.

ಅಪಾರ್ಟ್‌ಮೆಂಟ್ ಮಾಲೀಕರು ತಮ್ಮ ವಾಹನದಲ್ಲಿ ಆಫೀಸ್ ಗೆ ಹೋಗುವುದರಿಂದ, ಇಡೀ ದಿನ ಆ ಜಾಗ ಖಾಲಿಯಿರುತ್ತದೆ. ಆ ಜಾಗವನ್ನು ‘ಪಾರ್ಕ್ ಇನ್’ ಬಳಸಿಕೊಳ್ಳುತ್ತದೆ. ಇದರಿಂದ ಅಪಾರ್ಟ್‌ಮೆಂಟ್‌ಗಳ ಮಾಲೀಕರಿಗೆ ಎಕ್ಸ್‌ಟ್ರಾ ಹಣ ಸಿಕ್ಕಂತಾಯಿತು. ಜನಸಾಮಾನ್ಯರಿಗೆ ಪಾರ್ಕಿಂಗ್ ತಲೆನೋವು ಬಗೆಹರಿದಂತಾಯಿತು. ಯಾರದ್ದೋ ಕಾರನ್ನು ಯಾರದ್ದೋ ಜಾಗದಲ್ಲಿ ನಿಲ್ಲಿಸಲು ಅನುವು ಮಾಡಿಕೊಟ್ಟ ‘ಪಾರ್ಕ್ ಇನ್’ಗೂ ಲಾಭ. ಅಲ್ಲದೇ ಪಾರ್ಕಿಂಗ್‌ನಂಥ ಜ್ವಲಂತ ಸಮಸ್ಯೆಯನ್ನು ಅಷ್ಟರಮಟ್ಟಿಗೆ ಬಗೆಹರಿಸಿದಂತಾಯಿತು.

ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಬಿಗ್ ಬಾಸ್ಕೆಟ್, ಓಎಲ್‌ಎಕ್ಸ್…ಇವೆಲ್ಲವೂ ಆರಂಭವಾಗಿದ್ದು ಸ್ಟಾರ್ಟ್‌ಪ್‌ಗಳಾಗಿಯೇ. ಫ್ಲಿಪ್‌ಕಾರ್ಟ್ ಶುರುವಾಗಿದ್ದು ಕೋರಮಂಗಲದ ಒಂದು ಗ್ಯಾರೇಜಿನಲ್ಲಿ. ಇಂದು ಅವರ ಮೌಲ್ಯ ಹತ್ತಾರು ಸಾವಿರ ಕೋಟಿ ರುಪಾಯಿಗೆ ಕಮ್ಮಿಯಿಲ್ಲ. ಒಂದು ಸಣ್ಣ ಐಡಿಯಾ ಇಂದು ಹೆಮ್ಮರವಾಗಿ ಇಡೀ ದೇಶವನ್ನೇ ಆಕ್ರಮಿಸಿಕೊಂಡಿದೆ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.

ಇನ್ನೊಂದು ಉದಾಹರಣೆ ನೀಡುವುದಾದರೆ, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆನ್ನಿ. ವಾರದಲ್ಲಿ ಒಂದು ದಿನ ಜಯನಗರದ ಮಯ್ಯಾಸ್‌ಗೆ ಹೋಗಿ ದೋಸೆ, ಇಡ್ಲಿ, ವಡಾ ತಿನ್ನುವ ಆಸೆ. ಕೋರಮಂಗಲದಲ್ಲಿರುವ ಅವರಿಗೆ ಅಲ್ಲಿಗೆ ಹೋಗಿ ತಿನ್ನಲು ಟೈಮಿಲ್ಲ. ಮಯ್ಯಾಸ್ ಸಹ ತಮ್ಮ ತಿಂಡಿ ಗಳನ್ನು ಹೊರಗೆ ಪೂರೈಸುವ ವ್ಯವಸ್ಥೆಯನ್ನು ಹೊಂದಿಲ್ಲ. ಅದೇ ರೀತಿ, ಮತ್ಯಾರಿಗೋ ವಾರದಲ್ಲಿ ಒಂದು ಸಲವಾದರೂ ಶಂಕರಪುರಂನಲ್ಲಿರುವ ಬ್ರಾಹ್ಮಣ ಕಾಫಿಬಾರ್‌ನ ಇಡ್ಲಿ-ವಡಾ, ಚಟ್ನಿ ತಿನ್ನುವ ಆಸೆಯಾಯಿತೆನ್ನಿ ಅಥವಾ ರಾಮಕೃಷ್ಣ ಆಶ್ರಮದ ಸರ್ಕಲ್ ಸನಿಹವಿರುವ ಎಸ್‌ಎಲ್‌ವಿ ಹೋಟೆಲ್‌ನ ತಿಂಡಿ ಸೇವಿಸಬೇಕೆಂದು ಅನಿಸಿತೆನ್ನಿ. ಆದರೆ ಈ ಟ್ರಾಫಿಕ್ ಭರಾಟೆಯಲ್ಲಿ ಅಲ್ಲಿಗೇ ಹೋಗಿ ತಿನ್ನಲು ಆಗೊಲ್ಲ. ಇದಕ್ಕೆ ಹುಟ್ಟಿಕೊಂಡ ಐಡಿಯಾವೇ ‘ಸ್ವಿಗ್ಗಿ’, ಜೋಮ್ಯಾಟೋ.

ಈ ರೀತಿಯ ವ್ಯವಸ್ಥೆ ಅಮೆರಿಕದಲ್ಲಿ ಆರಂಭವಾಯಿತು. Door Dash ಎಂಬ ಆಪ್‌ಗೆ ಹೋದರೆ ನಿಮಗೆ ಬೇಕಾದ ಹೋಟೆಲ್‌ನಿಂದ, ನಿಮಗಿಷ್ಟವಾದ ತಿಂಡಿಗಳನ್ನು ತರಿಸಿಕೊಂಡು ತಿನ್ನಬಹುದು. ಅಲ್ಲಿ ಸಾಧ್ಯವಾಗುವುದು, ಇಲ್ಲಿ ಯೂ ಸಾಧ್ಯವಾಗಬಹುದು. ಒಂದು ವ್ಯವಸ್ಥಿತ ಪ್ಲಾನ್ ರೂಪಿಸಿದರೆ, ಐಡಿಯಾ ಕ್ಲಿಕ್ ಆಗಬಹುದು. ಮನೆಮನೆಗೆ ಪಿಜ್ಜಾ, ಪುಸ್ತಕ, ತರಕಾರಿ, ಹಣ್ಣು-ಹಂಪಲು ಕಳಿಸುವುದು ಸಾಧ್ಯವಾಗುವುದಾದರೆ, ಗಿಫ್ಟ್ ಗಳನ್ನು ತಲುಪಿಸುವುದೇನು ಮಹಾ?! ಅದೂ ಸಾಧ್ಯ ತಾನೆ. Sendmygif ಜನ್ಮ ತಾಳಿದ್ದು ಈ ಯೋಚನೆಯ ಮೂಲದಿಂದ .ನಿಮಗೆ ಆಪ್ತರಾದವರು ನಗರದ ಯಾವುದೇ ಮೂಲೆಯಲ್ಲಿರಲಿ, ಮೂವತ್ತನೇ ಮಹಡಿಯಲ್ಲಿರಲಿ, ಸೆಂಡ್‌ಮೈಗಿ-ನವರಿಗೆ ಹೇಳಿದರೆ , ಅವರ ಜನ್ಮದಿನ, ಮದುವೆ ಆನಿವರ್ಸರಿ ಅಥವಾ ಇನ್ನಿತರ ಮಹತ್ವದ ದಿನಗಳಂದು ಖುದ್ದಾಗಿ ಹೋಗಿ ಹೂಗೊಂಚಲು, ಚಾಕಲೇಟ್ ಕೊಟ್ಟು ನಿಮ್ಮ ಪರವಾಗಿ ಅಭಿನಂದನೆ ಸಲ್ಲಿಸಿ ಬರುತ್ತಾರೆ.
ಸೆಂಡ್ ಮೈ ಗಿ-ನವರು ಕೇವಲ ಸಂಪರ್ಕವಾಗಿಯಷ್ಟೇ ಕೆಲಸ ಮಾಡುತ್ತದೆ.

ಖುದ್ದಾಗಿ ಹೋಗಿ ತಲುಪಿಸುವವರು ಆಯಾ ಏರಿಯಾಗಳಲ್ಲಿರುವ ವೆಂಡರ್‌ಗಳು. ಅವರು ಕೆಲವೊಂದು Specification ಗಳನ್ನು ಕೂಡ ಪಾಲಿಸಬೇಕಾಗುತ್ತದೆ ಅಷ್ಟೆ. ಇದರಿಂದ ಹೂಗುಚ್ಛ ಮಾರಾಟ ಮಾಡುವವರಿಗೆ ಹೆಚ್ಚುವರಿ ಬಿಜಿನೆಸ್ ಆದಂತಾಯಿತು. ಜನರಿಗೆ ಸುಲಭವಾಗಿ ತಮ್ಮ ಕೆಲಸ ಈಡೇರಿಸಿದಂತಾಯಿತು. ಸೆಂಡ್ ಮೈಗಿಫ್ಟ್ ಇವರಿಬ್ಬರ ಮಧ್ಯೆ ಸೇತುವೆಯಾಗಿ ತನ್ನ ಪಾಲಿನ ಲಾಭವನ್ನು ಪಡೆದಂತಾಯಿತು. ಬೆಂಗಳೂರಿನ ತುಂಬಾ ಇಂಥ ಸ್ಟಾರ್ಟ್‌ಪ್‌ಗಳದ್ದೇ ಸುದ್ದಿ.

ಕೋರಮಂಗಲಕ್ಕೆ ಹೋದರೆ ಅಮೆರಿಕಕ್ಕೆ ಹೋದ ಅನುಭವವಾಗುತ್ತದೆ. ಈ ಹೊಸ ಐಡಿಯಾಗಳಿಗೆ ಕಾವು ಕೊಡುತ್ತಿರುವವರು ಇಪ್ಪತ್ತೈದರಿಂದ ಮೂವತ್ತೈದು ವರ್ಷದವರು. ಇವರ ಐಡಿಯಾಗಳನ್ನು ವಾಸ್ತವ ರೂಪಕ್ಕಿಳಿಸಲು ಯಾರಾ ದರೂ ಹಣ ಹೂಡುವವರು ಸಿಕ್ಕೇ ಸಿಗುತ್ತಾರೆ. ಅದರಲ್ಲೂ
ಭಾರತದಂಥ ದೇಶ ಇಂಥ ಬಿಜಿನೆಸ್‌ಗೆ ಹೇಳಿ ಮಾಡಿಸಿದ ಚಿನ್ನದ ಗಣಿ! ‘ನಿಮ್ಮಲ್ಲಿ ಯಾವುದಾದರೂ ಐಡಿಯಾಗಳಿದ್ದರೆ ಹೇಳಿ’ ಎಂದು ಬಸು ಅವರು ಹೇಳಿದ್ದು ಈ ಉದ್ದೇಶದಿಂದ. ಹೌದು ನಿಮ್ಮಲ್ಲೂ ಅಂಥ ಐಡಿಯಾಗಳಿದ್ದರೆ, ನೀವು ಚಿನ್ನದ ಗಣಿ ಮೇಲೆ ಕುಳಿತಿದ್ದೀರಿ ಎಂದರ್ಥ. ಆದರೆ ನಿಮ್ಮ ಐಡಿಯಾ
ಇಲ್ಲಿತನಕ ಯಾರ ತಲೆಯಲ್ಲೂ ಹೊಳೆದಿರಬಾರದು ಅಥವಾ ಯಾರೂ ಅನುಷ್ಠಾನ ಮಾಡಿರಬಾರದು. ನಿಮ್ಮ ಐಡಿಯಾದ ಮೇಲೆ ದುಡ್ಡು ಹೂಡುವವರು ಸಾಲುಗಟ್ಟಿ ನಿಂತಿರುತ್ತಾರೆ, ಯೋಚನೆ ಬೇಡ.