Saturday, 14th December 2024

Prof C Shivaraju Column: ಸಾರ್ಥಕ ಬದುಕಿಗೆ ಬೇಕು ಸಕಾರಾತ್ಮಕತೆ, ಯಶಸ್ವಿ ಜೀವನಕ್ಕೆ ಅದೇ ಕೀಲಿ ಕೈ

ಸುಖೀ ಬದುಕು

ಪ್ರೊ.ಸಿ.ಶಿವರಾಜು

ಎಲ್ಲರನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳಿ, ಪ್ರೀತಿಯಿಂದ ನೋಡುವ, ಮನಸ್ಸುಳ್ಳವರಿಗೆ ಜಾತಿ, ದೇಶ, ಜನಾಂಗ ಹಾಗೂ ಲಿಂಗವನ್ನು ಮೀರಿರುವ ವ್ಯಕ್ತಿತ್ವವಿರುತ್ತದೆ. ಅಂತಹವರು ಜನರನ್ನು ಸಾಮಾಜಿಕ ಅಂತಸ್ತಿನಿಂದ ಅಳೆಯುವುದಿಲ್ಲ. ನಾವು ಇತರರನ್ನು ಪ್ರೀತಿಸುವುದನ್ನು ಕಲಿಯಬೇಕು. ಈ ವಿಶ್ವದಲ್ಲಿ ಯಾರು ಇನ್ನೊಬ್ಬರನ್ನು ಅವರ ರೋಗ ಅಥವಾ ಅನಿವಾರ್ಯ ದುಃಸ್ಥಿತಿಯನ್ನು ನೋಡಿ ಕಡೆಗಣಿಸಬಾರದು.

ಸಕಾರಾತ್ಮಕ ಚಿಂತನೆಯು ಯಾವಾಗಲೂ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ಯಶಸ್ವಿ ಜೀವನದ ಕೀಲಿ ಕೈ ಇದ್ದಂತೆ. ಸಕಾರಾತ್ಮಕವಾಗಿ ಆಲೋಚಿಸದೆ ಇರುವುದು ನಮ್ಮ ಮಾನಸಿಕ ನೆಮ್ಮೆದಿಯನ್ನು ಕಂಗೆಡಸುತ್ತದೆ. ಇಂತಹ
ಮನಸ್ಸುಳ್ಳವರು ಯಾವಾಗಲು ಸಂತೋಷ, ನೆಮ್ಮದಿ, ಆರೋಗ್ಯ,ಮತ್ತು ಯಶಸ್ಸನ್ನು ಪ್ರತಿ ಸಂದರ್ಭದಲ್ಲಿ ಮತ್ತು ಕ್ರಿಯೆಯಲ್ಲಿ ಎದುರು ನೋಡು ತ್ತಾರೆ. ಆಲೋಚಿಸುವಾಗ ಮತ್ತು ಮಾತನಾಡುವಾಗ ಯಾವಗಲೂ ಸಕಾರಾತ್ಮಕ ಶಬ್ದಗಳನ್ನೇ ಪ್ರಯೋಗಿಸಿ ನನ್ನಿಂದ ಸಾಧ್ಯ, ನಾನು ಮಾಡಬಲ್ಲೆ, ಇದನ್ನು ಮಾಡಬಹುದು.

ಇಂತಹ ಮಾತುಗಳನ್ನೇ ಉಪಯೋಗಿಸಿ. ಋಣಾತ್ಮಕ ಆಲೋಚನೆಗಳನ್ನು ಮರೆತು ಅಂತಹ ಆಲೋಚನೆಗಳನ್ನು ಕಡೆಗಣಿಸಿ ಅವುಗಳನ್ನು ಸಂತೋಷ ನೀಡುವಂತಹ ಆಲೋಚನೆಗಳಾಗಿ ಮಾರ್ಪಡಿಸಿ ಸ್ಪೂರ್ತಿಯನ್ನು ನೀಡುವಂತಹ ಪುಸ್ತಕಗಳನ್ನು ಕನಿಷ್ಠ ಪಕ್ಷ ದಿನದಲ್ಲಿ ಒಂದು ಬಾರಿಯಾದರೂ ಓದಿ, ನಿಮಗೆ ಖುಷಿ ನೀಡುವಂತಹ ಚಲನಚಿತ್ರಗಳನ್ನು ವೀಕ್ಷಿಸಿ, ನಿಸರ್ಗದ ಜೊತೆ ಹೆಚ್ಚು ಕಾಲಕಳೆಯಿರಿ, ದೈಹಿಕ ಚಟುವಟಿಕೆಗಳಾದ, ಈಜು ನಡೆಯುವುದನ್ನು ಮಾಡುವುದು ಪ್ರತಿನಿತ್ಯ ಜೊತೆಗೆ ಹತ್ತು ನಿಮಿಷ ಧ್ಯಾನ ಮಾಡಿದರೆ ಮನಸ್ಸು ಉಲ್ಲಾಸ ವಾಗುತ್ತದೆ. ಕೆಲವೊಮ್ಮೆ ನಿಮ್ಮ ಜೀವನದಲ್ಲಿ ತೊಂದರೆಗಳು ಬರುತ್ತವೆ ಅಂತಹ ಸಂದರ್ಭದಲ್ಲಿ ಸಕಾರಾತ್ಮಕ ಆಲೋಚನೆಗಳು ನಿಮಗೆ
ಪರಿಸ್ಥಿತಿಯನ್ನು ಎದುರಿಸಲು ಶಕ್ತಿಯನ್ನು ತುಂಬುತ್ತದೆ.

ನಮ್ಮ ನಂಬಿಕೆ ಮತ್ತು ನಿರೀಕ್ಷೆಗಳ ಈಡೇರಿಕೆಗಾಗಿ ಸಕಾರಾತ್ಮಕ ಚಿಂತನೆ, ಅಗತ್ಯವೆನಿಸುತ್ತದೆ. ನಿಮ್ಮನ್ನು ನೀವು ಬದಲಾಯಿಸಿ ಕೊಳ್ಳಿ, ನಿಮ್ಮ ಕೆಟ್ಟಗುಣಗಳನ್ನು ಮರೆತು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಆಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ವಾಗುತ್ತದೆ. ಶ್ರೇಷ್ಠಸಂಕಲ್ಪ ಹೊಂದಿರುವವರಿಗೆ ಪ್ರಕೃತಿಯೇ ನೂರಾರು ಮಂದಿಯನ್ನು ಜೊತೆ ಮಾಡಿಕೊಡುತ್ತದೆ. ‘ಯಾರ ಹೃದಯದಲ್ಲಿ ಕರುಣೆ, ಪ್ರೀತಿ, ಸ್ನೇಹ ಹಾಗೂ ಗೌರವದ ಭಾವನೆಗಳಿವೆಯೂ ಅವರೇ ಎಲ್ಲರಿಗಿಂತ ದೊಡ್ಡವರು’, ನಾವು ಎದುರಿಗೆ ಇಲ್ಲವಾದಾಗಲೂ ನಮ್ಮನ್ನು ಯಾರು ಗೌರವಿಸುವರೋ ಅಂತಹವರನ್ನು ತಪ್ಪದೇ ಗೌರವಿಸಿ, ಅನಗತ್ಯವಾದುದನ್ನು ಹೊರಗೆ ಹಾಕಿದಾಗ ಮಾತ್ರ ಅಗತ್ಯವಾದುದಕ್ಕೆ ಜಾಗ ದೊರೆಯುತ್ತದೆ.

ಸಹನೆ ಇದ್ದರೆ ಸಕಲವೂ ನಿನ್ನದೆ, ವಿನಯವಿದ್ದರೆ ವಿಜಯವೂ ನಿನ್ನದೆ, ಸಹನೆ ಮತ್ತು ವಿನಯದಿಂದ ಜೀವಿಸಿದರೆ ಮಾತ್ರ ಬದುಕಿನ ಉನ್ನತಸ್ಥಾನ ತಲುಪಬಹುದು. ಸುಂದರವಾದ ಮಾರ್ಗವು ಯಾವಾಗಲೂ ನಮ್ಮ ಗುರಿಯನ್ನು ತಲುಪಲು ಕಾರಣವಾಗುವುದಿಲ್ಲ. ಆದರೆ ನಮ್ಮ ಗುರಿಯು ಸುಂದರವಾಗಿದ್ದರೆ ಮಾರ್ಗದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಲಿಷ್ಠವಾದ ಎರಡು ತೋಳುಗಳು ಎಷ್ಟು ಜಗತ್ತನ್ನು ಗೆಲ್ಲಬಹುದೋ ಅದಕ್ಕಿಂತಲೂ ಹೆಚ್ಚಿನದನ್ನು ಮಾನವೀಯತೆ ಯಿಂದ ಕೂಡಿದ ನಮಸ್ಕಾರ ಮಾಡುವ ಎರಡು ಕೈಗಳು ಗೆಲ್ಲಬಹುದು. ನಿಮ್ಮ ಆಲೋಚನಾ ಶಕ್ತಿಯನ್ನು ಬೆಳೆಸುವ ದಿಕ್ಕಿನಲ್ಲಿ ಸಾಗಿ ಎಲ್ಲರ ಹೃದಯವನ್ನು ಅದರಿಂದ ಸಂಪಾದಿಸಿದ ಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಯನ್ನು ಹೊಂದಿರಿ.

ಸಾಧನೆಯ ಹಾದಿಯಲ್ಲಿ ಸೋಲುಗಳು ಬಂದರೆ ಊಟದಲ್ಲಿ ಕಲ್ಲುಗಳು ಬಂದಂತೆ. ಊಟದಲ್ಲಿನ ಕಲ್ಲುಗಳನ್ನು ತೆಗೆಯಬೇಕೇ ವಿನಃ ಉಟ
ವನ್ನೇ ಬಿಡಬಾರದು. ಅಂದರೆ ಜೀವನದಲ್ಲಿ ಎಷ್ಟೇ ಅಡಚಣೆಗಳು ಬಂದರೂ ನಾನು ಗೆದ್ದೇಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಿಂದ ಸಕಾರಾತ್ಮಕ ಚಿಂತನೆಯಿಂದ ಮುಂದುವರೆದು ಗುರಿಸಾಧಿಸಬೇಕು ಸೃಜನಶೀಲ ಮನಷ್ಯನು ಏನನ್ನಾದರು ಸಾಧಿಸಬೇಕೆಂಬುದರಿಂದ ಪ್ರೇರಿತನಾಗಿರುವನೇ ಹೊರತು ಇನ್ನೊಬ್ಬರನ್ನು ಸೋಲಿಸಲು ಅಲ್ಲ ಎಂಬುದನ್ನು ಮನಗಾಣಬೇಕು. ಕನಸುಕಾಣು, ಬದ್ಧನಾಗು, ಕ್ರಿಯೆಗೆಸಜ್ಜಾಗು, ಆತ್ಮವಿಶ್ವಾಸವಿರಲಿ, ನಿನ್ನ ಶಕ್ತಿಯ ಮೇಲೆ ನಿನಗೆ ನಂಬಿಕೆ ಇರಲಿ, ಫಲಿತಾಂಶದ ಮೇಲೆ ವಿಶ್ವಾಸವಿಡು, ಏನೇ ಬಂದರೂ ಗೆಲ್ಲುವೆನೆಂಬ ಧೈರ್ಯವಿರಲಿ. ಅವಿರತ ಶ್ರಮದಿಂದ ಕಷ್ಟಗಳನ್ನು ನೀಗಿಸಿಕೋ, ಧೈರ್ಯ ಉತ್ಸಾಹವಿದ್ದವರು ವಿಜಯಿಯಾಗುತ್ತಾರೆ.

ಸಮಾಜದಲ್ಲಿ ಒಳ್ಳೆಯತನವಿರುವ ಜನರು ಬಹಳ ವಿರಳ, ಒಳ್ಳೆಯದನ್ನು ಯೋಚಿಸುವವರು ಇನ್ನೂ ವಿರಳ, ಈ ವಿರಳವಾದ ಜನರಿಗೆ ಬೇರೆ ಯವರು ಕೆಟ್ಟದನ್ನು ಬಯಸಿದರೂ ಅವರು ಒಳ್ಳೆಯದನ್ನೇ ಮಾಡುತ್ತಾರೆ, ಅಂತಹವರ ಮೇಲೆ ಮಮಕಾರ ತೋರಿಸುತ್ತಾರೆ. ಇಂತಹ ಗುಣ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ಇಂದಿನ ಸಮಾಜದಲ್ಲಿ ನಿರೀಕ್ಷಿಸುವುದು ಸರಿಯಲ್ಲ. ಒಳ್ಳೆಯತನ ಇರುವವರಿಗೆ ಕಷ್ಟ ನೋವು, ದುಃಖಗಳನ್ನು ನಿಗ್ರಹಿಸುವ ಸಾಮಾರ್ಥ್ಯವಿರುತ್ತದೆ. ಇತರರನ್ನು ಕಂಡರೆ ದಯೆ, ಕರುಣೆ, ಮಾನವೀಯತೆ ಹಾಗೂ ಸಹಾನುಭೂತಿ ಇರುತ್ತದೆ. ತಮ್ಮ ಸ್ವಯಂ ಕರಣೆಯನ್ನು ಅಭ್ಯಾಸ ಮಾಡುವ ಜನರು ಕಡಿಮೆ ಮಟ್ಟದ ಖಿನ್ನತೆಯನ್ನು ಹೊಂದಿರುತ್ತಾರೆ. ತಮಗೆ ನೋವು ಕೊಟ್ಟವರಿಗೂ ಒಳ್ಳೆಯದನ್ನು ಬಯಸುವ ತಾಳ್ಮೆ ಇರುತ್ತದೆ. ಬೇರೆಯವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ಇಂತಹವರಿಗೆ ಆಂತರಿಕ ಶಕ್ತಿ ಹೆಚ್ಚಿರುತ್ತದೆ.

ಸಕಾರಾತ್ಮಕವಾಗಿ ಚಿಂತಿಸುವವರಿಗೆ, ತಾಳ್ಮೆ, ಸಹನೆ, ಮಮತೆ, ಮಾನವೀಯತೆ, ಧೈರ್ಯ, ಶಕ್ತಿ, ಇದೆಲ್ಲರ ಜೊತೆಗೆ ಕ್ಷಮಾಗುಣ ವಿರುತ್ತದೆ. ಮನಸ್ಸು ಸಕಾರಾತ್ಮಕವಾಗಿದ್ದರೆ ಅರವತ್ತು ವರ್ಷದವರಲ್ಲಿಯೂ ಉತ್ಸಾಹ ಮತ್ತು ಮಾನಸಿಕ ಶಕ್ತಿಯನ್ನು ತುಂಬಿರುತ್ತದೆ. ಯಾವುದೇ ಕೆಲಸದಲ್ಲಿ ಜಯ ಸಾಧಿಸಬಹುದು. ಗುರಿಯನ್ನು ಸಾಧಿಸಬಹುದು. ಏಕೆಂದರೆ ಅವರು ಎಲ್ಲಿಗೆ ಹೋಗಬೇಕೆಂದು ನಿಶ್ಚಯ ಮಾಡಿರುತ್ತಾರೆ, ನಿಮ್ಮ ಎಲ್ಲ
ಆಲೋಚನೆಗಳನ್ನು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಸೂರ್ಯನ ಕಿರಣಗಳು ಕೂಡ ಕೇಂದ್ರೀಕೃತವಾಗದ ಹೊರತು ಸುಡುವುದಿಲ್ಲ, ಮೇಧಾವಿಯೂ ಕೂಡ ಅತ್ಯಗತ್ಯವಾದ ಅಂಶದ ಮೇಲೆ ಮಾತ್ರ ಗಮನಹರಿಸಿ ಉಳಿದವುಗಳನ್ನು ಬಿಟ್ಟುಬಿಡುತ್ತಾನೆ. ನಿಮ್ಮ ಸಕಾರಾತ್ಮಕತೆ ನಿಮ್ಮ ವಿಜಯದ ಶಕ್ತಿ, ಈ ಶಕ್ತಿಯು ಮಾನವ ಜೀವನದ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಿ ಮಾನಸಿಕ ಕ್ರಾಂತಿಯನ್ನು ತರುತ್ತದೆ.

ನೀವು ನಗುವಾಗ ಸಂತೋಷವಿರುತ್ತದೆ, ಸಂತೋಷವಿದ್ದಾಗ ದ್ವೇಷ ಅಸಮಧಾನ, ಅಸೂಯೆ ಅಥವಾ ಇತರೆ ಯಾವ ನಕರಾತ್ಮಕ ಭಾವನೆಗಳು ಇರುವುದಿಲ್ಲ. ನಕರಾತ್ಮಕ ಭಾವನೆಗಳಿಲ್ಲದ ಕಡೆ ಪ್ರೇಮ ಹಾಗೂ ಅನುಕಂಪ ನೆಲೆಸುತ್ತದೆ. ಇದು ಅಧ್ಯಾತ್ಮಿಕತೆಯ ಕೊನೆಯ ಹಂತ, ಇದನ್ನು ಯಾರಾದರೂ ನಗುವಿನಿಂದ ಸಾಧಿಸಬಹುದು. ತಪ್ಪು ಕೆಲಸಮಾಡಿ ಪಡುವ ಪಶ್ಚಾತ್ತಾಪವು ಹೆಮ್ಮೆಯೊಂದೊಡಗೂಡಿದ ಸದ್ಗುಣಕ್ಕಿಂತ ಉತ್ತಮ ವಾದದ್ದು.

ಚುರುಕಾಗಿ ಕೆಲಸ ಮಾಡುವುದನ್ನು ಕಲಿಯಿರಿ, ಬುದ್ಧಿಯನ್ನು ಬಳಸಿ ಉತ್ತಮವಾಗಿ ಯೋಚಿಸುವವರು ಮಾತ್ರ ಫಲವನ್ನು ನೀಡುತ್ತಾರೆ. ಆದ್ದರಿಂದ ಒಳ್ಳೆಯದನ್ನು ಆಲೋಚಿಸಿ, ಇತರರ ಸೇವೆಯಲ್ಲಿ ನಿಮ್ಮ ಬದುಕನ್ನು ಕಳೆಯಿರಿ, ಇದು ಆನಂದವನ್ನು ಉಂಟುಮಾಡುತ್ತದೆ. ನಾವು ಇತರರನ್ನು ಕ್ಷಮಿಸಿದರೆ ನಮಗೆ ಶಾಂತಭಾವ ಉಂಟಾಗುತ್ತದೆ. ದ್ವೇಷವಿರಬಾರದು ಏಕೆಂದರೆ ದ್ವೇಷವು ಒತ್ತಡ ಮತ್ತು ಆತಂಕವನ್ನುಂಟು ಮಾಡುತ್ತದೆ. ನಮ್ಮ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಬದುಕಿನಲ್ಲಿ ಯಶಸ್ಸು ಅಭಿವೃದ್ಧಿ ಹೊಂದುವ ಕಡೆ ಮುಖಮಾಡಿ, ಅದು ನಿಮ್ಮನ್ನು ಜಾಗರೂಕರನ್ನಾಗಿ ಮಾಡುತ್ತದೆ. ಆಶಾಭಾವನೆಯನ್ನುಂಟು ಮಾಡುತ್ತದೆ.

ಉದಾರತೆಯ ಮನೋಭಾವವನ್ನು ಹೊಂದಿರಿ, ಅದು ಎಲ್ಲರ ಹೃದಯವನ್ನು ಗೆಲ್ಲುತ್ತದೆ. ವಿನಮ್ರತೆಯಿಂದ ಕೂಡಿರಿ, ಇದು ನಿಮ್ಮನ್ನು ಬಹಳ ಎತ್ತರಕ್ಕೆ ಕರೆದೊಯ್ಯುತ್ತದೆ. ‘ಒಂದು ದಯೆಯ ಮಾತು ಪ್ರೀತಿಯ ಅಪ್ಪುಗೆ ಮತ್ತು ನಿಷ್ಕಲ್ಮಶ ನಗುವು ಬದುಕನ್ನು ಪೂರ್ಣವಾಗಿ ಬದಲಿಸುತ್ತದೆ. ಯಾವ ಕೆಲಸವನ್ನು ಇದು ಚಿಕದು, ಅದು ದೊಡ್ಡದು ಎಂದು ಭಾವಿಸಬಾರದು, ಫಲಿತಾಂಶ ಏನೇ ಇರಲಿ ಎಲ್ಲ ಕೆಲಸಗಳನ್ನು ನಾವು
ಸಕಾರಾ ತ್ಮಕವಾಗಿ ಕಾಣುವುದನ್ನು ಕಲಿಯಬೇಕು. ಯಶಸ್ಸು ಯಾವ ಹಿನ್ನಡೆಯಿಲ್ಲದೆ ಬರುವುದಿಲ್ಲ. ಪರಿಶ್ರಮ ಹಾಗೂ ಸಕಾರಾತ್ಮಕ ಪ್ರಯತ್ನದಿಂದ ಹಠಾತ್ತನೆ ನಾವು ದೊಡ್ಡ ಕಾರ್ಯಗಳನ್ನು ಮಾಡಿ ಗೆಲ್ಲಬಹುದು. ಯಾರೋ ಟೀಕೆ ಮಾಡುತ್ತಾರೆ ಎಂದು ಕೂರಬಾರದು. ಹೆಚ್ಚು ಟೀಕೆಗಳಿದ್ದಲ್ಲಿ ಹೆಚ್ಚು ಕೊಡುಗೆ. ಹೀಗಾಗಿ ಟೀಕೆಯಿಂದ ನಿರುತ್ಸಾಹಿಗಳಾಗಬಾರದು.

ಟೀಕೆಯನ್ನು ಸಕಾರಾತ್ಮಕವಾಗಿ ನೋಡಬೇಕು, ಇದು ನಮ್ಮ ಪ್ರಗತಿಗೆ ಪೂರಕವಾಗುತ್ತದೆ. ನಾವು ಏನು ಮಾಡಬೇಕು ಅದಕ್ಕೆ ಬದ್ಧರಾಗಬೇಕು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೆಚ್ಚು ಹೆಚ್ಚು ಕೆಲಸ ಮಾಡುವ ಕಡೆ ಗಮನಹರಿಸಿ, ಆಗ ನಿಮ್ಮ ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಮೆಚ್ಚುಗೆ ಹಾಗೂ ಟೀಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುವವರು ನಿಜವಾದ ಜ್ಞಾನಿಗಳು, ಇವರು ಅಪಾರ ಮನೋಶಕ್ತಿ ಮತ್ತು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ನಿನ್ನನ್ನು ಹೊರತುಪಡಿಸಿ ಇತರರಲ್ಲಿ ಅವಲಂಬಿತನಾಗಬಾರದು, ಬಳ್ಳಿ
ಮರವನ್ನು ಆಶ್ರಯಿಸಿದಾಗ ಮರಕ್ಕೆ ತೊಂದರೆಯಾದರೆ ಬಳ್ಳಿಗೂ ತೊಂದರೆಯಾಗುತ್ತದೆ. ಆದ್ದರಿಂದ ಸ್ವಂತ ಶಕ್ತಿಯ ಕಡೆ ಮುಖಮಾ
ಡುವುದರಿಂದ ನೈಜ ಸಂತೋಷ ಉಂಟಾಗಿ ಸ್ವಾವಲಂಬಿತನದ ಬದುಕು ಸೃಷ್ಟಿಯಾಗುತ್ತದೆ.

ಸೌಜನ್ಯದಿಂದ ವರ್ತಿಸುವವರು ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ. ದಯೆಯ ಸಸಿಯನ್ನು ಬೆಳೆಸುವವರು ಪ್ರೇಮವನ್ನು ಗಳಿಸುತ್ತಾರೆ. ಸ್ನೇಹಿತ ನೊಬ್ಬನ ಸ್ನೇಹವನ್ನು ಗಳಿಸಿದವರು ಎಲ್ಲವನ್ನೂ ಪಡೆದಂತೆಯಾಗುತ್ತದೆ. ನಮ್ಮ ಸಕಾರಾತ್ಮಕ ಚಿಂತನೆ ಎಷ್ಟರ ಮಟ್ಟಿಗೆ ಇರಬೇಕೆಂದರೆ, ಯಾರಾದರೂ ದ್ವೇಷದಿಂದ ನನ್ನ ಎಡಗಣ್ಣನ್ನು ತೆಗೆಯುವಂತಿದ್ದರೆ ತನ್ನ ಬಲಗಣ್ಣಿನಿಂದ ನೋಡುತ್ತೇನೆ. ಅವರು ತನ್ನ ಎರಡು ಕಣ್ಣುಗಳನ್ನು ತೆಗೆದರೆ ಅಂತಹವರನ್ನು ಪ್ರೀತಿಸಲು ನನ್ನ ಹೃದಯವಿರುತ್ತದೆ ಎಂಬ ಇಚ್ಛೆವುಳ್ಳವರಾಗಬೇಕಾಗಿದೆ. ಗಟ್ಟಿ ವ್ಯಕ್ತಿತ್ವದ ವ್ಯಕ್ತಿಯು ತನ್ನ ಭಾವನೆ ಗಳನ್ನು ನಿಯಂತ್ರಿಸಲು ಸಮರ್ಥನಾಗಿರುತ್ತಾನೆ. ತನ್ನ ಬುದ್ಧಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಮರ್ಥ್ಯ ಪಡೆದಿರುತ್ತಾನೆ. ಇಂತಹ ವ್ಯಕ್ತಿಗಳು ಸಂಕಷ್ಟದ ಸಮಯದಲ್ಲೂ ಶಾಂತರಾಗಿರುತ್ತಾರೆಯೇ ವಿನಃ ಉದ್ರಿಕ್ತರಾಗುವುದಿಲ್ಲ. ವಾಸ್ತವದೊಂದಿಗೆ ತಮ್ಮ ಆದರ್ಶಗಳನ್ನು ಸೂಕ್ತವಾಗಿ ಹೊಂದಿಸಲು ಸಮರ್ಥರಾಗಿರುತ್ತಾರೆ.

ಎಲ್ಲರನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳಿ, ಪ್ರೀತಿಯಿಂದ ನೋಡುವ, ಮನಸ್ಸುಳ್ಳವರಿಗೆ ಜಾತಿ, ದೇಶ, ಜನಾಂಗ ಹಾಗೂ ಲಿಂಗವನ್ನು ಮೀರಿರುವ ವ್ಯಕ್ತಿತ್ವವಿರುತ್ತದೆ. ಅಂತಹವರು ಜನರನ್ನು ಸಾಮಾಜಿಕ ಅಂತಸ್ತಿನಿಂದ ಅಳೆಯುವುದಿಲ್ಲ. ನಾವು ಇತರರನ್ನು ಪ್ರೀತಿಸುವುದನ್ನು ಕಲಿಯಬೇಕು. ಈ ವಿಶ್ವದಲ್ಲಿ ಯಾರು ಇನ್ನೊಬ್ಬರನ್ನು ಅವರ ರೋಗ ಅಥವಾ ಅನಿವಾರ್ಯ ದುಃಸ್ಥಿತಿಯನ್ನು ನೋಡಿ ಕಡೆಗಣಿಸಬಾರದು. ಅಂತಹವರಿಗೆ ತುಂಬು ಹೃದಯದ ಪ್ರೀತಿ, ಸುರಕ್ಷತೆಯ ಭಾವ ಮತ್ತು ನೆರವನ್ನು ನೀಡಿದರೆ ನಮಗೆ ಅಪಾರ ಸಂತೃಪ್ತಿ, ಹಾಗೂ ಸಂತೋಷ
ಉಂಟಾಗುತ್ತದೆ. ಸಂತೋಷವು ಪ್ರೀತಿ ಹಾಗೂ ಸೇವೆಯ ನಿರ್ಣಾಯಕ ಪ್ರತಿಫಲ.

ಬಹುತೇಕ ಜನರು ಪ್ರಮಾಣಿಕರು ಮತ್ತು ನಂಬಲು ಅರ್ಹರೂ ಆಗಿರುತ್ತಾರೆ. ಕೇವಲ ಅತ್ಯಲ್ಪ ಪ್ರಮಾಣದ ಜನರು ಮಾತ್ರ ಅಪ್ರಮಾಣಿಕರು. ಜನರನ್ನು ಅಪನಂಬಿಕೆಯಿಂದ ನೋಡುವುದರ ಬದಲು ಅವರನ್ನು ನಂಬುವುದು ಉತ್ತಮ. ಆಗ ಮಾತ್ರ ಪ್ರಾಮಾಣಿಕರ ಸಂಖ್ಯೆ ಹೆಚ್ಚಾಗಿ ಸಮಾಜದ ಅಭಿವೃದ್ಧಿಯಾಗುತ್ತದೆ. ವರ್ತಮಾನದಲ್ಲಿ ಬದುಕುವುದರಲ್ಲಿ ತೃಪ್ತಿ ಇದೆ. ನಾಳೆಯ ಕೆಲಸದ ಅತ್ಯುತ್ತಮ ಸಿದ್ಧತೆಯೆಂದರೆ ನಿಮ್ಮ
ಕೆಲಸವನ್ನು ಇಂದೇ ಮಾಡುವುದು ಯಾವಾಗಲೂ ಕೊಡುವುದರಲ್ಲಿ ಹಾಗೂ ಹಂಚಿ ತಿನ್ನುವುದರಲ್ಲಿ ಸಿಗುವ ಸಂತೋಷ, ಆನಂದ ಹಾಗೂ ತೃಪ್ತಿ ಬೇರೆಲ್ಲೂ ಸಿಗುವುದಿಲ್ಲ, ನಮ್ಮದು ಹಂಚಿ ತಿನ್ನುವ ಸಂಸ್ಕೃತಿಯಾಗಬೇಕು.

ಹೀಗೆ ಸಕಾರಾತ್ಮಕ ಚಿಂತನೆಯಿಂದ, ಸಕಲವನ್ನು ಸಾಧಿಸುವ ಮಾರ್ಗ ಸುಗಮವಾಗುತ್ತದೆ. ಪ್ರೀತಿ, ದಯೆ, ವಿನಮ್ರತೆಯ ಗುಣಗಳಿಂದ ಎಲ್ಲರ ಹೃದಯವನ್ನು ಗೆಲ್ಲಬಹುದು. ದ್ವೇಷ, ಅಸೂಯೆ, ಕ್ರೂರತ್ವವನ್ನು ಬಿಡುವುದರಿಂದ ಒತ್ತಡ ಕಡಿಮೆ ಯಾಗಿ, ನಿರ್ಭೀತಿಯಿಂದ ಜೀವಿಸಬಹುದು. ಇಂತಹ ಆಲೋಚನೆಗಳು ನಮ್ಮನ್ನು ಬಹಳ ಎತ್ತರಕ್ಕೆ ಬೆಳೆಯುವಂತೆ ಪ್ರೇರೇಪಿಸುತ್ತವೆ. ಒಳ್ಳೆಯ ಗುಣ, ನಡತೆಯಿಂದ ನಾವು ಏನನ್ನು
ಕಳೆದುಕೊಳ್ಳುವುದಿಲ್ಲ. ಇಂತಹ ಚಿಂತನೆಗಳು ನಮ್ಮನ್ನು ಧೈರ್ಯವಂತರಾಗಿ, ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ, ನಮ್ಮ ಗುರಿಯನ್ನು ತಲುಪಲು, ಜೀವನದಲ್ಲಿ ಎದುರಾಗುವ ಎಲ್ಲ ಕಷ್ಟ ದುಃಖ, ನೋವುಗಳನ್ನು ಸರಾಗವಾಗಿ ಎದುರಿಸುವ ತಾಳ್ಮೆ, ಸಹನೆ, ವಿಶ್ವಾಸ, ನಂಬಿಕೆ, ಆತ್ಮಸ್ಥೈರ್ಯ ಎಲ್ಲವನ್ನು ಗಳಿಸುವಂತಾಗುತ್ತದೆ.

ಇವೆಲ್ಲವೂ ಮನಷ್ಯನಿಗೆ ಅವಶ್ಯಕವಾಗಿದೆ. ಆದ್ದರಿಂದ ಸಕರಾತ್ಮಕವಾಗಿ ಚಿಂತಿಸೋಣ, ಅಭಿವೃದ್ಧಿಯನ್ನು ಹೊಂದೋಣ ಎಂಬುದೇ ನಮ್ಮ ಮನದಾಸೆಯಾಗಿದೆ.

(ಲೇಖಕರು: ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಅಧ್ಯಕ್ಷರು)