ಒಡಲಾಳ
ಡಾ.ಆರ್.ನಾಗರಾಜು
ಮೌಲ್ಯಯುತ ಪ್ರಜೆಗಳನ್ನು ರೂಪಿಸುವ ಗುರುವಿನ ಸ್ಥಾನದಲ್ಲಿರುವ ಪ್ರಾಧ್ಯಾಪಕರ ಸ್ಥಿತಿ ಇಂದು ಗಂಭೀರವಾಗಿದೆ. ಕೆಲವೊಂದು ವಿಶ್ವ ವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರನ್ನು ವಿಲಕ್ಷಣವಾಗಿ ನಡೆಸಿಕೊಳ್ಳಲಾಗುತ್ತಿದೆ. ಅದರಲ್ಲೂ, ವಿದ್ಯಾರ್ಥಿಗಳ ಪರೀಕ್ಷೆ, ಉತ್ತರ ಪತ್ರಿಕೆಯ ಮೌಲ್ಯಮಾಪನದ ವೇಳೆ ಇವರನ್ನು ನಾಲ್ಕನೇ ದರ್ಜೆಯ ನೌಕರರಿಗಿಂತ ಕಡೆಯಾಗಿ ನೋಡಲಾಗುತ್ತದೆ.
ಶಿಕ್ಷಕ ಅಥವಾ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ. ಶಿಕ್ಷಕನು ಭೌತಿಕವಾಗಿ ಏನನ್ನೂ ಸೃಷ್ಟಿಸದಿರಬಹುದು. ಆದರೆ ಜೀವನದ ಗುರಿ, ಉದ್ದೇಶಗಳು ಮತ್ತು ಅವನ್ನು ಸಾಧಿಸುವ ಮಾರ್ಗಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತ ಸೃಷ್ಟಿಸಬಲ್ಲ. ಅವು ಪಕ್ವವಾಗಿ ಬೆಳೆಯುವಂತೆ ವಿವಿಧ
ತತ್ವಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬುವವನು, ಅವರ ಕೆಟ್ಟ ಯೋಚನೆಗಳನ್ನು ನಾಶಮಾಡಿ ಸರಿಯಾದ ದಾರಿಯನ್ನು ತೋರುವವನು, ವಿದ್ಯಾರ್ಥಿಗಳ ನಡೆ- ನುಡಿಯನ್ನು ತಿದ್ದುವವನೂ ಗುರುವೇ ಆಗಿದ್ದಾನೆ.
ಈ ಭೂಮಂಡಲದಲ್ಲಿನ ಎಲ್ಲಾ ಪ್ರಾಣಿಗಳಂತೆ ಮನುಷ್ಯನೂ ಪ್ರಾಣಿಯೇ ಆಗಿದ್ದರೂ, ತನ್ನ ಆಲೋಚನಾ ಸಾಮರ್ಥ್ಯದಿಂದಾಗಿ ಆತ ಭಿನ್ನ ಎನಿಸಿ ಕೊಳ್ಳುತ್ತಾನೆ. ಆದರೂ ಪ್ರಾಣಿಗಳಿಗೆ ಜನ್ಮಜಾತವಾಗಿ ಬರುವಂಥ ಗುಣಗಳು ಮನುಷ್ಯನಿಗೆ ಬಂದಿರುವುದಿಲ್ಲ. ಹುಲಿಯನ್ನು ಅದರ ಗುಂಪಿನಿಂದ ಬೇರ್ಪಡಿಸಿದರೂ ಅದು ಬೇಟೆಯಾಡಲು ಕಲಿಯುತ್ತದೆ. ಜಿಂಕೆಯನ್ನು ಎಲ್ಲೇ ಬಿಟ್ಟರೂ ಅದು ಹುಲ್ಲನ್ನು ತಿಂದೇ ಜೀವಿಸುತ್ತದೆ. ಮರದಿಂದ ಮರಕ್ಕೆ ಜಿಗಿಯುವುದನ್ನು ಕೋತಿಯು ತಾನಾಗಿಯೇ ಕಲಿಯುತ್ತದೆ.
ಆದರೆ ಮನುಷ್ಯನಿಗೆ ಎಲ್ಲಾ ಗುಣಗಳನ್ನು ಹೇಳಿಕೊಟ್ಟರೆ ಮಾತ್ರ ಕಲಿಯಬಲ್ಲ. ಹುಟ್ಟುತ್ತಲೇ ಏನೇನೂ ತಿಳಿಯದ ಮಗು ಕ್ರಮೇಣ ತನ್ನ ಸುತ್ತ ಮುತ್ತ
ಲಿನ ಭಾಷೆಯನ್ನು ಗಮನಿಸುತ್ತಾ ಕೆಲವು ಶಬ್ದಗಳನ್ನು ಕಲಿಯುತ್ತದೆ. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ವಿವಿಧ ಜನರು, ವಸ್ತು ಗಳಿಂದ ಅನೇಕ ವಿಷಯಗಳನ್ನು ನಿಧಾನವಾಗಿ ಅರಿಯುತ್ತದೆ. ಆದರೆ ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಮಕ್ಕಳಿಗೆ ಸಾಮಾಜಿಕ ಜೀವನದ ಪರಿಚಯ ಆಗುತ್ತಾ ಹೋಗುತ್ತದೆ.
ಈ ಹಂತದಿಂದ ಮಗುವಿನ ಕಲಿಕೆಯ ರೀತಿ ಮತ್ತು ವೇಗ ಎರಡೂ ಬದಲಾಗುತ್ತಾ ಹೋಗುತ್ತವೆ. ಇದು ಪ್ರಮುಖವಾಗಿ ಮನುಷ್ಯನ ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಇಲ್ಲಿಂದ ಮಕ್ಕಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವವರು ಮಾತ್ರವೇ ಗುರುಗಳಲ್ಲ. ಮನೆಯಲ್ಲಿರುವ ತಾಯಿ- ತಂದೆ, ಅಜ್ಜ-ಅಜ್ಜಿ, ಬಂಧು-ಬಳಗದವರು, ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ಜನರು, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯವ್ಯಕ್ತಿಗಳು, ಮಹನೀಯರನ್ನೂ ಗುರುಗಳಾಗಿ ಭಾವಿಸಿದರೆ ಮನುಷ್ಯ ಬಹಳ
ಎತ್ತರಕ್ಕೆ ಏರಬಹುದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ಮಾತು ಗುರುವಿನ ಮಹತ್ವವನ್ನು ತಿಳಿಸುತ್ತದೆ. ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನಿಗೆ, ಜೀವನದ ಮೌಲ್ಯಗಳು, ಅರ್ಥ, ಗುರಿ, ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾ ದವನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ.
ಪ್ರಪಂಚದ ಮಹಾನ್ ವ್ಯಕ್ತಿಗಳು, ಸಂತರು, ದಾರ್ಶನಿಕರು, ರಾಜಕೀಯ ಮುತ್ಸದ್ದಿಗಳ ಬದುಕಿನ ವಿವಿಧ ಹಂತಗಳನ್ನು ಗಮನಿಸಿದಾಗ, ಆ ಪ್ರತಿ ಹಂತ ದಲ್ಲೂ ಮಾರ್ಗದರ್ಶಕರಾಗಿ ಒಬ್ಬ ಗುರುವು ಜತೆಗಿದ್ದುದು ತಿಳಿಯುತ್ತದೆ. ಹುಚ್ಚು ಕುದುರೆಯಂತೆ ಎಲ್ಲೆಂದರಲ್ಲಿ ಓಡುವ ಮನಸ್ಸಿಗೆ ಕಡಿವಾಣ ಹಾಕಿ ಸರಿಯಾದ ದಾರಿ ತೋರುವವನು ಗುರು. ಸಮಾಜಕ್ಕೆ ಒಳಿತು ಮಾಡುವಂಥ ಮಾರ್ಗದರ್ಶನ ತೋರಿಸುವ ಶಕ್ತಿಯಿರುವುದು ಗುರುವಿನಲ್ಲಿ ಮಾತ್ರ.
ಪುರಾಣದ ಕಥೆಗಳನ್ನು ನೋಡಿದರೆ, ನಮ್ಮ ಪ್ರಾಚೀನರು ಗುರುವಿಗೆ ಎಂಥಾ ಮಹತ್ವವನ್ನು ನೀಡಿದ್ದರು ಎಂಬುದು ತಿಳಿಯುತ್ತದೆ.
ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳು ನಮ್ಮ ಪೂರ್ವಜರ ಜೀವನ ಕ್ರಮ, ಸಂಸ್ಕೃತಿ, ಅವರು ನಂಬಿದ್ದ, ಗೌರವಿಸುತ್ತಿದ್ದ ಮೌಲ್ಯಗಳನ್ನು ತಿಳಿಸುತ್ತವೆ. ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಳ್ಳಲು ಅವನಿಗೆ ಜೀವನದ ವಿವಿಧ ಹಂತಗಳಲ್ಲಿ ದೊರೆತ ಗುರುಗಳೇ ಕಾರಣ. ಅವರೆಲ್ಲರ ಮಾರ್ಗದರ್ಶನವೇ ಅವನನ್ನು ಆದರ್ಶ ಪುರುಷನನ್ನಾಗಿ ರೂಪಿಸಿದವು. ಅಂತೆಯೇ ಮಹಾಭಾರತದಲ್ಲಿ ಅರ್ಜುನನು ಒಬ್ಬ ಬಿಲ್ಲು
ವಿದ್ಯಾ ಪ್ರವೀಣನಾಗಲು ದ್ರೋಣಾಚಾರ್ಯರಂಥ ಗುರುಗಳೇ ಕಾರಣ. ನಮ್ಮ ಇತಿಹಾಸ ಪ್ರಸಿದ್ಧ ದೊರೆಗಳಾದ ಹಕ್ಕ-ಬುಕ್ಕರಿಗೆ, ಶತ್ರುಗಳ ದಾಳಿಯಿಂದ ಕೈತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ವಿದ್ಯಾರಣ್ಯರಂಥ ಗುರುಗಳ ಮಾರ್ಗದರ್ಶನ ಅತ್ಯಗತ್ಯವಾಗಿತ್ತು.
ಶಿವಾಜಿ ಮಹಾರಾಜ ಸೋತು ಬಸವಳಿದು ಕಂಗೆಟ್ಟು ಕುಳಿತಿದ್ದಾಗ, ಸಮರ್ಥ ರಾಮದಾಸರಂಥ ಗುರುಗಳು ಅನೇಕ ಉಪದೇಶಗಳ ಮೂಲಕ ಆತನಲ್ಲಿ
ಆತ್ಮವಿಶ್ವಾಸ ತುಂಬುತ್ತಾರೆ ಹಾಗೂ ಆತ ಪುನಃ ತನ್ನ ಸಾಮ್ರಾಜ್ಯವನ್ನು ಪಡೆಯುವಂತಾಗುವಲ್ಲಿ ಕಾರಣರಾಗುತ್ತಾರೆ. ಅಂಬೇಡ್ಕರ್‌ರು ಬರೆದ ಸಂವಿಧಾನ ವಿಂದು ದೇಶದ ಹಣೆಬರಹವನ್ನು ನಿರ್ಧರಿಸುವ ಒಂದು ಸಂಹಿತೆಯಾಗಿದೆ. ಆದರೆ ಅವರಿಗೆ ಸಿಕ್ಕಂಥ ಗುರುಗಳು ಸೂಕ್ತ ಮಾರ್ಗದರ್ಶನ ನೀಡದಿದ್ದಿದ್ದರೆ ಅಂಬೇಡ್ಕರ್‌ರಿಗೆ ಓದು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ.
ಮಹಾತ್ಮ ಗಾಂಧಿಯವರನ್ನು ವಿಶ್ವವೇ ಕೊಂಡಾಡುತ್ತದೆ. ಅವರ ಅಹಿಂಸಾ ತತ್ವ ಗಳನ್ನು ಮೆಚ್ಚದವರಿಲ್ಲ. ಆದರೆ ಮೋಹನದಾಸ ಕರಮಚಂದ ಗಾಂಧಿಯು ‘ಮಹಾತ್ಮ ಗಾಂಧಿ’ಯಾಗಲು ಕಾರಣರಾದ ಗುರುಗಳು ಅನೇಕರು. ಅವರ ತತ್ವೋಪದೇಶಗಳು ಗಾಂಧಿಯವರ ಮನಸ್ಸನ್ನು ಆಳವಾಗಿ ಹೊಕ್ಕು, ಅಹಿಂಸೆ ಮತ್ತು ಸತ್ಯದ ಬಗೆಗಿನ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಇದರಿಂದಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕೇ ಬದಲಾಗಿ ಅಹಿಂಸೆಯಿಂದ ಸ್ವರಾಜ್ಯ ವನ್ನು ಪಡೆದ ಪ್ರಪಂಚದ ಮೊದಲ ರಾಷ್ಟ್ರವಾಯಿತು ಭಾರತ. ಈಗಲೂ ನಮ್ಮ ಸುತ್ತಮುತ್ತಲಿನ ಯಾರೇ
ನಾಯಕರನ್ನು ಕೇಳಿದರೆ, ಅವರ ಗುರುಗಳು ಹಾಕಿಕೊಟ್ಟ ಮಾರ್ಗದ ಮೇಲೆಯೇ ಅವರ ಜೀವನ ನಡೆಯುತ್ತಿದೆ ಎಂಬ ಸತ್ಯ ತಿಳಿಯುತ್ತದೆ.
ಆದರೆ ಸಮಾಜವಿಂದು ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದ್ದು, ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ. ಗುರುಗಳ ಮೇಲಿನ ಗೌರವ ಮೊದಲಿ ನಂತಿಲ್ಲ. ಇದಕ್ಕೆ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ, ಅವರ ಪೋಷಕರು, ನಮ್ಮ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳೂ ಕಾರಣ. ಅಲ್ಲದೆ ಶಿಕ್ಷಕರೂ ಹಾದಿ ತಪ್ಪುತ್ತಿರುವ ನಿದರ್ಶನಗಳಿದ್ದು, ಅವರ ವರ್ತನೆಗಳು ಎಲ್ಲ ಸಂದರ್ಭದಲ್ಲೂ ಅನುಕರಣೀಯವಾಗಿ ಇರುವುದಿಲ್ಲ. ಇದರಿಂದಾಗಿ ನಮ್ಮ ಸಾಮಾಜಿಕ
ತಳಹದಿಯೇ ಅಲುಗಾಡುತ್ತಿದೆ. ಸಮಾಜದಲ್ಲಿಂದು ಮೋಸ, ದಗಾ, ವಂಚನೆ, ಭ್ರಷ್ಟಾಚಾರ, ಅತ್ಯಾಚಾರದಂಥ ಅಪಸವ್ಯಗಳು ಹೆಚ್ಚಾಗುತ್ತಿವೆ. ಸರಿಯಾದ ಗುರುವಿನ ಮಾರ್ಗದರ್ಶನವಿಲ್ಲದಿರುವುದೇ ಇದಕ್ಕೆಲ್ಲ ಕಾರಣ. ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.
ಮೌಲ್ಯಯುತ ಪ್ರಜೆಗಳನ್ನು ರೂಪಿಸುವ ಗುರುವಿನ ಸ್ಥಾನದಲ್ಲಿರುವ ಪದವಿ ಕಾಲೇಜು ಪ್ರಾಧ್ಯಾಪಕರ ಸ್ಥಿತಿ ಇಂದು ಗಂಭೀರವಾಗಿದೆ. ರಾಜಕಾರಣಿ ಗಳನ್ನು, ಐಎಎಸ್ -ಕೆಎಎಸ್ ಅಧಿಕಾರಿಗಳನ್ನು ಸೃಷ್ಟಿಸುವ ಈ ಪ್ರಾಧ್ಯಾಪಕರನ್ನು ಕೆಲವೊಂದು ವಿಶ್ವವಿದ್ಯಾಲಯಗಳಲ್ಲಿ ವಿಲಕ್ಷಣವಾಗಿ ನಡೆಸಿಕೊಳ್ಳ ಲಾಗುತ್ತಿದೆ. ಅದರಲ್ಲೂ, ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಉತ್ತರ ಪತ್ರಿಕೆಯ ಮೌಲ್ಯಮಾಪನದ ಸಂದರ್ಭಗಳಲ್ಲಿ ಇವರನ್ನು ನಾಲ್ಕನೇ ದರ್ಜೆಯ ನೌಕರರಿ
ಗಿಂತ ಕಡೆಯಾಗಿ ನೋಡಲಾಗುತ್ತದೆ. ಇನ್ನು ಸರಕಾರ ಗಳಂತೂ ಎರಡು ತಿಂಗಳಾದರೂ ಸಂಬಳ ಬಿಡುಗಡೆ ಮಾಡದೆ ಸತಾಯಿಸುವ ನಿದರ್ಶನಗಳೂ ಕಂಡು ಬರುತ್ತವೆ.
ಅತಿಥಿ ಉಪನ್ಯಾಸಕರ ಜೀವನವಂತೂ ಗೋಳಿನ ಮೂಟೆಯಾಗಿದೆ, ಐದು-ಹತ್ತು ತಿಂಗಳು ಕಳೆದರೂ ಅವರಿಗೆ ಸಲ್ಲಬೇಕಾದ ಗೌರವಧನ ಬಿಡುಗಡೆಯಾಗು
ವುದಿಲ್ಲ. ಇನ್ನು ಮಹಾವಿದ್ಯಾಲಯಗಳಲ್ಲಿ ‘ಸರಕಾರದ ಆದೇಶವಿದೆ’ ಎಂದು ಹೇಳಿ ಹೆಚ್ಚುವರಿ ಅವಧಿಯವರೆಗೆ ದುಡಿಸಿಕೊಳ್ಳುವುದೂ ಕಂಡುಬರುತ್ತಿದೆ. ಬಡ್ತಿ, ಅರಿಯರ್ಸ್, ಪಿಂಚಣಿಗಾಗಿ ನಾವೇ ಸೃಷ್ಟಿಸಿದ ರಾಜಕಾರಣಿಗಳ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ, ಕಚೇರಿ ಕಚೇರಿಗೆ ಅಲೆಯಬೇಕಾಗುತ್ತದೆ.
ಇನ್ನು ವಿಶ್ವವಿದ್ಯಾಲಯಗಳು ಸೇವಾಜೇಷ್ಠತೆಯಲ್ಲಿ ರುವ ಪ್ರಾಧ್ಯಾಪಕರನ್ನು ಕಡೆಗಣಿಸಿ, ಅಭ್ಯಾಸ ಮಂಡಳಿ, ಪರೀಕ್ಷಾ ಮಂಡಳಿಗಳಲ್ಲಿ ತಮಗೆ ತಾಳ ಹಾಕುವ, ತೀರ್ಥ-ಪ್ರಸಾದ ನೀಡುವ ಪ್ರಾಧ್ಯಾಪಕರಿಗೆ ಮಣೆ ಹಾಕುವ ವಾತಾವರಣವನ್ನೂ ಕಾಣಬಹುದಾಗಿದೆ.
ಪ್ರಾಧ್ಯಾಪಕ ವರ್ಗದ ನಡುವೆಯೇ ತಾರತಮ್ಯ ತಂದು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದನ್ನು ಕೂಡ ಕಾಣಬಹುದಾಗಿದೆ. ಗಣನೀಯ ಅವಧಿಯವರೆಗೆ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದಂಥವರಿಗೆ ಅಭ್ಯಾಸ ಮಂಡಳಿ ಮತ್ತು ಪರೀಕ್ಷಾ ಮಂಡಳಿಗಳಲ್ಲಿ ಅವಕಾಶ ಸಿಕ್ಕದಿರುವುದೂ ಉಂಟು. ‘ಟೇಬಲ್ ಕೆಳಗಡೆ ನೋಟು ತಳ್ಳಿದರೆ ಎಲ್ಲಾ ಕೆಲಸವು ಸ್ಯಾಂಕ್ಷನ್ ಉಂಟು’ ಎನ್ನುವ ಮಾತಿನಂತೆ ಸರಕಾರಿ ಕಚೇರಿಗಳು ಪ್ರಾಧ್ಯಾಪಕರನ್ನು ಹುರಿದು ಮುಕ್ಕುತ್ತಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು.
ಇಷ್ಟೆಲ್ಲಾ ಕಷ್ಟ, ನೋವುಗಳನ್ನು ಅನುಭವಿಸಿದರೂ ಪ್ರಾಧ್ಯಾಪಕರು ತಮ್ಮ ಪಾಲಿನ ಕರ್ತವ್ಯವನ್ನು ಸಂತೋಷ ದಿಂದಲೇ ನಿರ್ವಹಿಸುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಎಲ್ಲ ತೆರನಾದ ಮಾರ್ಗದರ್ಶನವನ್ನು ನೀಡಿ, ಸಮಾಜ ದಲ್ಲಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಿರುವ ಈ ಪ್ರಾಧ್ಯಾಪಕರು,
ಉನ್ನತ ಶಿಕ್ಷಣ ಸಂಸ್ಥೆಗಳು, ಉನ್ನತ ಶಿಕ್ಷಣ ಇಲಾಖೆಗಳು, ವಿಶ್ವವಿದ್ಯಾಲಯಗಳು, ಇನ್ನಿತರ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ತೊಂದರೆಗೊಳಗಾಗು ತ್ತಿರುವುದು ಶೋಚನೀಯ.
ಈ ಪರಿಪಾಠಕ್ಕೆ ಇನ್ನಾದರೂ ತಡೆಗೋಡೆ ಒಡ್ಡಬೇಕಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು? ಎಂಬುದೇ ಇಲ್ಲಿ ಕಾಡುತ್ತಿರುವ ಯಕ್ಷಪ್ರಶ್ನೆ.
(ಲೇಖಕರು ಕನ್ನಡ ಪ್ರಾಧ್ಯಾಪಕರು)