Thursday, 12th December 2024

ಅಪ್ರತಿಮ ಸಾಧಕ ಪ್ರೊ.ಕೆ.ಪಿ.ರಾವ್

ಗುಣಗಾನ

ಎನ್.ನಾರಾಯಣ ಬಲ್ಲಾಳ

ಪ್ರಸ್ತುತ ನೂರಾರು ಸಾಫ್ಟ್ ವೇರ್ ತಂತ್ರಜ್ಞರಿಗೆ ಮಾರ್ಗದರ್ಶನ ನೀಡುತ್ತಿರುವ ಕೆ.ಪಿ.ರಾವ್ ಅವರು, ಪಾಣಿನಿ, ಪತಂಜಲಿಯಂಥ ಸಂಸ್ಕೃತ ವ್ಯಾಕರಣ ಸೂತ್ರಕಾರರಿಂದ ತೊಡಗಿ ವರ್ತಮಾನದ ಹಲವು ಅಧ್ಯಯನ ಕ್ರಮಗಳಲ್ಲಿನ ಭಾಷ್ಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಸಂಗೀತ, ವಿಜ್ಞಾನ ಹಾಗೂ ಸಿನಿಮಾ ಬಗ್ಗೆ ಅನುಪಮ ಒಲವು ಹೊಂದಿದ್ದಾರೆ.

‘ಕೆ.ಪಿ.ರಾವ್’ ಎಂದೇ ಜನಪ್ರಿಯರಾಗಿರುವ ಕಿನ್ನಿಕಂಬ್ಳ ಪದ್ಮನಾಭ ರಾವ್ ಅಪ್ರತಿಮ ಸಾಧಕರು. ಇವರ ಕೃತಿಗಳೇ ಇದನ್ನು ಸಾಬೀತುಮಾಡುತ್ತವೆ. ಗಣಕ
ಯಂತ್ರಗಳಲ್ಲಿ ಬಳಸುವ ಕನ್ನಡ ತಂತ್ರಾಂಶ ಮತ್ತು ಕೀಲಿಮಣೆಯನ್ನು ಅಭಿವೃದ್ಧಿಪಡಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

೧೯೪೦ರ ಫೆಬ್ರವರಿ ೨೯ರಂದು ಜನಿಸಿದ ಕೆ.ಪಿ.ರಾವ್ ಅವರು ಭಾರತೀಯ ಭಾಷೆಗಳಲ್ಲಿನ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆಯ ಮೂಲ ವಿನ್ಯಾಸವನ್ನು (ನುಡಿ) ರೂಪಿಸಿದ್ದು ಶ್ರೀಯುತರ ಸಾಧನೆ. ಮೂಲತಃ ವಿಜ್ಞಾನಿಯಾಗಿರುವ ಇವರು ಹೋಮಿ ಬಾಬಾ ಸೇರಿದಂತೆ ಹಲವು ವಿಜ್ಞಾನಿಗಳ ಜತೆ ಕೆಲಸ ಮಾಡಿದ್ದಾರೆ. ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ಗೆ ಅಳವಡಿಸುವ ಸಂಶೋಧನೆಯಲ್ಲಿ ಇವರು ಮೊದಲಿಗರು. ಸಿಂಧೂ ಲಿಪಿಯನ್ನು ಬಳಸಿ ಯಶಸ್ವಿಯಾಗಿ, ನಂತರ ಕನ್ನಡ ಕೀಲಿಮಣೆ
(ಕೀಬೋರ್ಡ್) ರೂಪಿಸಿದರು ಕೆ.ಪಿ.ರಾವ್. ಕಿನ್ನಿಕಂಬ್ಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾಭ್ಯಾಸ ಮುಗಿಸಿ ರಸಾಯನ ಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ ಪಡೆದ ರಾವ್ ಅವರು, ಬಳಿಕ ಅಣುಶಕ್ತಿ ಇಲಾಖೆಯ ವತಿಯಿಂದ ತರಬೇತಿ ಪಡೆದು ಬಾಬಾ ಅಣು ಸಂಶೋಧನಾ ಕೇಂದ್ರದ ವಿದ್ಯುನ್ಮಾನ ವಿಭಾಗದಲ್ಲಿ ದುಡಿದರು.

ತರುವಾಯದಲ್ಲಿ ಮಣಿಪಾಲ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾದರು. ರಾವ್ ಅಭಿವೃದ್ಧಿಪಡಿಸಿದ ಮು-ತ್ತು ಕನ್ನಡ ತಂತ್ರಾಂಶವು, ‘ನುಡಿ’ ಹಾಗೂ ‘ಬರಹ’ದಂಥ ಇತರ ತಂತ್ರಾಂಶಗಳಿಗೆ ಆಧಾರವಾಗಿತ್ತು. ಇಂಗ್ಲಿಷ್‌ನ ‘QWERTY’ ಕೀಲಿಮಣೆಯನ್ನು ಅವರು ಕನ್ನಡ ಮತ್ತು ಇತರ ಭಾರತೀಯ ಭಾಷೆಗಳಿಗಾಗಿ ಪರಿಣಾಮಕಾರಿಯಾಗಿ ಬಳಸುವುದಕ್ಕೂ ಅಳವಡಿಸಿದರು. ಕನ್ನಡದ ಪ್ರಪ್ರಥಮ ತಂತ್ರಾಂಶವೆಂದು ಪರಿಗಣಿತವಾಗಿರುವ ‘ಸೇಡಿಯಾಪು’ ವಿನ ಕರ್ತೃ ಕೆ.ಪಿ.ರಾವ್. ಇದು ತರುವಾಯದಲ್ಲಿ ‘ಕೆಜಿಪಿ ಲೇಔಟ್’ ಅಥವಾ ‘ನುಡಿ ಚೌಕಟ್ಟು’ ಎಂದು ಜನಪ್ರಿಯವಾಯಿತು.

ಭಾರತೀಯ ಭಾಷೆಗಳಲ್ಲಿನ ತಂತ್ರಾಂಶದ ಭಾಷಾ ಉಚ್ಚಾರದ ಕೀಲಿಮಣೆ ಅವರ ಹೆಸರಿಗೆ ಸಮರ್ಪಿತವಾಗಿದೆ ಮತ್ತು ‘ಕೆ.ಪಿ.ರಾವ್ ಕೀಲಿಮಣೆ’ ಎಂದು ಹೆಸರಾಗಿದೆ. ರಾವ್ ಅವರ ಇಂಥ ಅಮೋಘ ಸಾಧನೆ ಯನ್ನು ಪರಿಗಣಿಸಿ ಪ್ರತಿಷ್ಠಿತ ‘ನಾಡೋಜ’ ಗೌರವದೊಂದಿಗೆ ಅವರನ್ನು ಪುರಸ್ಕರಿಸಲಾಗಿದೆ. ರಾವ್ ಅವರು ಟಾಟಾ ಮುದ್ರಣಾಲಯಕ್ಕೆ ಸೇರಿದಾಗ ಬರಹಗಳೊಡನೆ ಒಡನಾಟ ಪ್ರಾರಂಭವಾಯಿತು. ಅಲ್ಲಿ ಗಣಕಯಂತ್ರದಲ್ಲಿ ಸಿಂಧೂ ಬರಹವನ್ನು ಮುದ್ರಿಸುವಲ್ಲಿ ರಾವ್ ಮಹತ್ತರ ಪಾತ್ರ ವಹಿಸಿದರು. ತರುವಾಯ ಮಾನೋಟೈಪ್‌ನ ನಿರ್ದೇಶಕರಾಗಿ ಹಾಗೂ ಇತರ ಸಂಸ್ಥೆಗಳ ಪೈಕಿ ‘ಕ್ವಾರ್ಕ್ ಎಕ್ಸ್‌ಪ್ರೆಸ್
ಅಡೋಬ್ ಸಿಸ್ಟಮ್ಸ್’ಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.

ಇಂಗ್ಲಿಷ್‌ನಲ್ಲಿ ತಂತ್ರಜ್ಞಾನದ ಮಿತಿಗಳು ವಿಸ್ತರಿಸಿವೆ. ಈಗ ಗಣಕಯಂತ್ರದಲ್ಲಿ ಕನ್ನಡವಷ್ಟೇ ಅಲ್ಲದೆ ವಿಶ್ವದ ಎಲ್ಲ ಭಾಷೆಗಳನ್ನು ಬಳಸುವುದು ಸುಲಭ ವಾಗಿದೆ. ಇದಕ್ಕೆ ಮುಖ್ಯ ಕಾರಣ ಪಠ್ಯವನ್ನು ಭಿನ್ನಗೊಳಿಸುವ ಹೊಸ ಪದ್ಧತಿ. ಮುಂಚಿನ ಭಿನ್ನಗೊಳಿಸುವ ಪದ್ಧತಿಯಲ್ಲಿ ೨೫೬ ಅಕ್ಷರಗಳಿಗಷ್ಟೇ ಸ್ಥಳಾವಕಾಶವಿತ್ತು; ಆದರೀಗ ೧೬ ತುಂಡು ಭಿನ್ನಗಾರಿಕೆ ಪದ್ಧತಿ (16 Bit Unicode Encoding System) ಜಾರಿಗೊಳಿಸಿರುವುದರಿಂದ, ೬೫,೦೦೦ಕ್ಕಿಂತ ಹೆಚ್ಚು ಅಕ್ಷರಗಳನ್ನು ಗುರುತುಗೊಳಿಸಲು ಸಾಧ್ಯವಿದೆ. ಲಿಪಿಗಳಿರುವ ವಿಶ್ವದ ಎಲ್ಲಾ ಭಾಷೆಗಳ ಅಕ್ಷರಗಳಿಗಾಗಿ ಗಣಕಯಂತ್ರದಲ್ಲಿ ಆಸ್ಪದವಿದೆ.

ಹಿಂದೆ ಆಯ್ಕೆ ಮಾಡಿ ನಿರ್ದಿಷ್ಟ ಬಗೆಯನ್ನು ಗಣಕಯಂತ್ರಕ್ಕೆ ತಿಳಿಸದೆ, ಕನ್ನಡ ಪಠ್ಯ ಅಕ್ಷರಗಳು ವಿಕ್ಷಿಪ್ತ ಬರಹವಾಗಿ ಪ್ರಾರಂಭವಾಗುತ್ತಿದ್ದವು. ಯೂನಿ ಕೋಡ್ ಶಿಷ್ಟತೆಯಿಂದಾಗಿ ಈಗ ಗಣಕ ಯಂತ್ರಗಳು ಕಾರ್ಯಾಚರಣಾ ಪದ್ಧತಿಯ ಮಟ್ಟದಿಂದ ಭಾಷೆಗಳನ್ನು ಗುರುತಿಸಬಲ್ಲವು. ಹೀಗಾಗಿ ಎಲ್ಲಾ
ಅನ್ವಯಗಳಲ್ಲಿ (ಅಪ್ಲಿಕೇಶನ್‌ಗಳಲ್ಲಿ) ಕನ್ನಡದ ಬಳಕೆ ಈಗ ಸುಲಭ ಸಾಮಾನ್ಯವಾಗಿದೆ ಮತ್ತು ಗಣಕಯಂತ್ರದಲ್ಲಿ ಕನ್ನಡ ಬಳಸುವಿಕೆಯಲ್ಲಿ ಎದುರಾದ
ಬಹುತೇಕ ಸಮಸ್ಯೆಗಳು ಈಗ ದೂರವಾಗಿವೆ. ಹಾಗಾಗಿ ಎಲ್ಲ ಅನ್ವಯಗಳಲ್ಲಿ ಕನ್ನಡದ ಬಳಕೆ ಸುಲಭವಾಗಿದೆ.

ಹಿಂದೆ ಬೆರಳಚ್ಚಿಗಷ್ಟೇ ಸೀಮಿತವಾಗಿದ್ದ ಕನ್ನಡದ ಬಳಕೆ ಈಗ ವೆಬ್‌ಸೈಟ್, ಬ್ಲಾಗಿಂಗ್, ಚಾಟಿಂಗ್, ಇ-ಮೇಲ್ ಇತ್ಯಾದಿಗಳಿಗೆ ವಿಸ್ತರಿಸಿದೆ. ಇವೆಲ್ಲವನ್ನು ಕನ್ನಡದಲ್ಲಿ ಹೇಗೆ ಬಳಸುವುದೆಂಬುದನ್ನು ಮಂಡಿಸಲು ಈ ಪದ್ಧತಿಯ ತರಬೇತಿ ವ್ಯವಸ್ಥೆಯ ಅಗತ್ಯವಿದೆ. ಹಿಂದಿನ ದಶಕದಲ್ಲಿ ಕನ್ನಡ ತಂತ್ರಜ್ಞಾನ ಕ್ಷೇತ್ರವು ಗಮನಾರ್ಹವಾಗಿ ವಿಕಸಿತಗೊಂಡಿದೆ; ಆದರೆ ಅದನ್ನು ಜನರಿಗೆ ಪರಿಚಯಿಸುವ ಕೆಲಸಕ್ಕೆ ಮತ್ತಷ್ಟು ವೇಗ ದಕ್ಕಬೇಕಿದೆ. ಕನ್ನಡ ಭಾಷೆಯನ್ನು
ಉಳಿಸುವುದಕ್ಕಾಗಿ, ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಕನ್ನಡವನ್ನೂ ಗಣಕಯಂತ್ರದಲ್ಲಿ ಬಳಸಬಹುದು ಎಂಬ ಸಾಧ್ಯತೆಯನ್ನು ಸಮರ್ಥವಾಗಿ ತೆರೆದಿಟ್ಟ ವರು ಕೆ.ಪಿ.ರಾವ್. ಇದರ ಹಿಂದೆ ಅವರ ಅವಿಶ್ರಾಂತ ದುಡಿಮೆಯಿದೆ.

ಈ ನಿಗರ್ವಿ ಸಾಧಕರು, ತಮ್ಮ ಹೊಸ ಸೃಷ್ಟಿಯನ್ನು ಪ್ರಪಂಚಕ್ಕೆ ಸಮರ್ಪಿಸಿದ್ದಾರೆ. ಯಾವ ಭಾಷೆಯನ್ನಾದರೂ ಓದಲು ಮತ್ತು ಬರೆಯಲು ಅನುವು ಮಾಡಿಕೊಡುವ ಈ ಸೃಷ್ಟಿಯು ಬರಹಗಳ ವಿಶೇಷ ಗುಚ್ಛವಾಗಿದೆ. ವ್ಯಾಪಕತೆಯ ನೈಜ ಅನಿಸಿಕೆಯಲ್ಲಿ ಇದನ್ನು ‘ಅಪಾರ’ (ಅPಅಅ) ಎಂದು ಕರೆಯ ಲಾಗಿದೆ. ಗಮನಾರ್ಹವಾಗಿ ಇಂಗ್ಲಿಷ್ ಅಕ್ಷರಮಾಲೆ ಗೊತ್ತಿರುವ ಸಾಮಾನ್ಯ ವ್ಯಕ್ತಿ ಕನಿಷ್ಠ ಅಭ್ಯಾಸದ ಬಳಿಕ ಇದರಿಂದ ಬರೆಯಲು ಕಲಿಯಬಲ್ಲ. ಈ ಅನ್ವೇಷಣೆಯೊಂದಿಗೆ ಅರೇಬಿಕ್ ಮತ್ತು ಪರ್ಷಿಯನ್‌ನಂಥ ಭಾಷೆಗಳ ವಿಶಿಷ್ಟ ಧ್ವನಿ ಯನ್ನು ಬರಹದ ರೂಪಕ್ಕೆ ತರಲಾಗುತ್ತದೆ.

ಒಂದು ಬರಹದಲ್ಲಿ ಇರುವ ಪದವನ್ನು ಇನ್ನೊಂದು ಬರಹದಲ್ಲಿ ಯಾವುದೇ ಅನನುಕೂಲವಿಲ್ಲದೆ ಓದಲು ಸಾಧ್ಯವಿದೆ. ಬರೆದ ವಿಷಯ ಅಥವಾ ತದ್ರೂಪ ಲೇಖನದ ಅಗತ್ಯಕ್ಕೆ ಅನುಗುಣವಾಗಿ ತಂತ್ರಾಂಶವನ್ನು ಬಳಸಬಹುದಾಗಿದೆ. ಈ ಬರಹವನ್ನು ವೆಬ್‌ಸೈಟ್‌ಗಳಲ್ಲೂ ಕಾಣಬಲ್ಲೆವು. ಕೆ.ಪಿ.ರಾವ್ ಕೀಲಿಮಣೆ ವಿನ್ಯಾಸವನ್ನು ಬಳಸಿ ಬಹಳ ಸುಲಭವಾಗಿ ಬೆರಳಚ್ಚುಗಾರಿಕೆ ಮಾಡಲು ಸಾಧ್ಯವಿದೆ. ಕೆ.ಪಿ. ರಾವ್ ಅವರು ಪ್ರಸ್ತುತ ನೂರಾರು ಸಾಫ್ಟ್ ವೇರ್ ತಂತ್ರಜ್ಞರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪಾಣಿನಿ, ಪತಂಜಲಿಯಂಥ ಸಂಸ್ಕೃತ ವ್ಯಾಕರಣ ಸೂತ್ರಕಾರರಿಂದ ತೊಡಗಿ ವರ್ತಮಾನದ ಹಲವು ಅಧ್ಯಯನ ಕ್ರಮಗಳಲ್ಲಿನ ಭಾಷ್ಯಗಳಲ್ಲಿ ಅವರು ಆಸಕ್ತಿ ಹೊಂದಿದ್ದಾರೆ.

ಸಂಗೀತ, ವಿಜ್ಞಾನ ಹಾಗೂ ಭಾಷೆಯ ಬಗ್ಗೆ ಅನುಪಮ ಒಲವು ಹೊಂದಿರುವ ಇವರಿಗೆ ಸಿನಿಮಾದಲ್ಲಿ ವಿಶೇಷ ಆಸಕ್ತಿಯಿದೆ. ತಮ್ಮೊಳಗಿನ ದನಿಗೆ ಕಿವಿಯಾಗಲೆಂದು, ಅಧ್ಯಾತ್ಮದ ಹಸಿವಿಗೆ ಒತ್ತಾಸೆಯಾಗಲೆಂದು ಇವರು ಹಿಮಾಲಯಕ್ಕೆ ಅನೇಕ ಸಲ ಒಬ್ಬಂಟಿಯಾಗಿ ತೆರಳಿದ್ದೂ ಉಂಟು. ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಲ್ಲಿ ಪಳಗಿರುವ ಇವರು ತಮ್ಮ ಅನ್ವೇಷಣೆಗೆ ಪೇಟೆಂಟ್ ಹೊಂದಬೇಕು ಎಂಬ ಬಗ್ಗೆಯಾಗಲೀ, ಪ್ರಶಸ್ತಿಗಳಿಗೆ ತವಕಿಸುವು ದಕ್ಕಾಗಲೀ ಆಸಕ್ತಿಯನ್ನು ತೋರಲೇ ಇಲ್ಲ. ಯಥಾರ್ಥತೆಯ ಲೋಕಕ್ಕೆ ತಮ್ಮ ಕೊಡುಗೆ ನೀಡಿರುವ ಕೆ.ಪಿ.ರಾವ್ ಅದರಲ್ಲೇ ಸಂತೃಪ್ತ ಭಾವವನ್ನು ಅನುಭವಿಸುತ್ತಿದ್ದಾರೆ.

ಶ್ರೀಯುತರು ‘ವರ್ಣಕ’ ಎಂಬ ೪೮೦ ಪುಟಗಳ ಬೃಹತ್ ಕಾದಂಬರಿಯನ್ನು ಬರೆದಿದ್ದು ಅದು ೨೦೨೧ರಲ್ಲಿ ಬೆಂಗಳೂರಿನ ‘ಅಂಕಿತ ಪ್ರಕಾಶನ’ದಿಂದ ಪ್ರಕಟಗೊಂಡಿದೆ. ಈ ಕೃತಿಯ ಬಗ್ಗೆ ಅವರು, ‘ತಕ್ಷಶಿಲೆಯಲ್ಲಿ ಜೀವತಳೆದ ಭಾಷಾವಿಲಾಸ’ ಎಂದು ಹೇಳಿಕೊಂಡಿರುವುದು ಗಮನಾರ್ಹ. ಕೆ.ಪಿ.ರಾವ್ ಅವರು ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ. ೨೦೦೯ರಲ್ಲಿ ಆಳ್ವಾಸ್ ನುಡಿಸಿರಿ, ೨೦೧೩ರಲ್ಲಿ ವಿಶ್ವಕರ್ಮ ಪ್ರಶಸ್ತಿ ಮತ್ತು ಕನ್ನಡ
ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ೨೦೧೩ರ ರಾಜ್ಯೋತ್ಸವ ಪ್ರಶಸ್ತಿ, ೨೦೨೧ರಲ್ಲಿ ಕಾರಂತ ಬಾಲವನ ಪ್ರಶಸ್ತಿ ಮೊದಲಾದವನ್ನು ಈ ನಿಟ್ಟಿನಲ್ಲಿ ಉಲ್ಲೇಖಿಸಬಹುದು. ೨೦೧೩ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘವು ‘ಕಂಪ್ಯೂಟರ್ ಕನ್ನಡ’ ಎಂಬ ಇವರ ಕೃತಿಯನ್ನು ಪ್ರಕಟಿಸಿದೆ. ಉಡುಪಿಯ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕವು ಇತರರ ಸಹಕಾರದೊಂದಿಗೆ ಒಂದು ಅಭಿನಂದನಾ ಸಮಿತಿಯನ್ನು ರಚಿಸಿ, ಅಸಾಧಾರಣ ಸಾಧನೆ ಮಾಡಿರುವ ‘ನಾಡೋಜ’ ಕೆ.ಪಿ.ರಾವ್ ಅವರನ್ನು ಕಳೆದ ವರ್ಷದ ಜೂನ್ ೬ರಂದು ವಿಜೃಂಭಣೆಯಿಂದ ಸನ್ಮಾನಿಸಿತು. ಇದು ರಾವ್ ಅವರ ಅಭಿಮಾನಿ ಗಳ ಪಾಲಿಗೆ ಹೆಮ್ಮೆಯ ಮತ್ತು ಸಂತಸದ ಸಂಗತಿಯೇ ಸರಿ.

ಅನುಪಮ ಸಾಧನೆಗಳ ಮೂಟೆಯೇ ಆಗಿದ್ದರೂ ಅಹಂಕಾರಕ್ಕೆ ಒಂದಿನಿತೂ ಆಸ್ಪದ ನೀಡದ ವ್ಯಕ್ತಿತ್ವ ಕೆ.ಪಿ.ರಾವ್ ಅವರದ್ದು. ‘ನಿಮ್ಮ ಸಧನೆಯ ಗುಟ್ಟೇನು? ನಿಮ್ಮ ಬದುಕಿನ ಏಳ್ಗೆಯ ಮಜಲುಗಳು ನಂಬಲಾಗದಂತಿವೆಯಲ್ಲಾ, ಅದರ ರಹಸ್ಯವೇನು?’ ಎಂದು ಪ್ರಶ್ನಿಸಿದರೆ, ‘ಬಹುಶಃ ನನ್ನ ಬೆಳವಣಿಗೆ ಯಲ್ಲಿ ನಾನು ನಂಬಲಾಗದಂಥದ್ದೇನೂ ಸಂಭವಿಸಿಲ್ಲ. ನಾನು ದೊಡ್ಡ ಯಶಸ್ಸು ದಕ್ಕಿಸಿಕೊಂಡವನು ಎಂಬುದಕ್ಕಿಂತ ಸೋತವನು ಎಂದೇ ಪರಿಗಣಿಸಿ ಕೊಳ್ಳುತ್ತೇನೆ. ಕಾರಣ, ನಾನು ಜೀವನದಲ್ಲಿ ನನ್ನ ಗುರಿಗಳನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ.

ನಾನು ಜೀವನದುದ್ದಕ್ಕೂ ಕಲಿಯುವವನಾಗಲು ನೋಡುತ್ತಿದ್ದೆ. ಯಶಸ್ವಿ ಮನುಷ್ಯನಾಗುವುದಕ್ಕಿಂತ ವಿದ್ಯಾರ್ಥಿ ಎನಿಸಿಕೊಳ್ಳಲು ತವಕಿಸುತ್ತಿದೆ’ ಎಂಬ
ವಿನಯವಂತಿಕೆಯ ಉತ್ತರವನ್ನು ನೀಡುತ್ತಾರೆ. ಈ ವಿನಯವೇ ಅವರ ಆಭರಣ ಎಂದರೆ ಅತಿಶಯೋಕ್ತಿಯಲ್ಲ.

(ಲೇಖಕರು ಹವ್ಯಾಸಿ ಬರಹಗಾರರು)