Thursday, 12th December 2024

ಸ್ಥಳಾಂತರ ತಂದ ಮನೋ-ಸಾಮಾಜಿಕ ಅಧಃಪತನ

ಕಳಕಳಿ

ಡಾ.ಗಾಯತ್ರಿ ಜೈಪ್ರಕಾಶ

ಸ್ಥಳಾಂತರಕ್ಕೂ ಮುನ್ನ ತಮ್ಮ ಸಮುದಾಯದ ಸಾಮಾಜಿಕ ಸನ್ನಿವೇಶಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದ ಕುಣಬಿಗಳು, ಈಗ ಹೇಳಿಕೊಳ್ಳುವ ಉದ್ಯೋಗವಿಲ್ಲದೆ ಕೀಳರಿಮೆಯಿಂದ ಬಳಲುತ್ತಿದ್ದಾರೆ. ಈ ಪ್ರದೇಶದಲ್ಲಿ ಲಭ್ಯವಿರುವ ಕಲ್ಲಿನ ಕೋರೆ ಕೆಲಸ ಮಾಡಲೂ ಅವರಿಗೆ ಸಾಮರ್ಥ್ಯವಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯ ಯೋಜನೆಯಿಂದಾಗಿ ಸ್ಥಳಾಂತರ ಗೊಂಡ ಕುಣಬಿ ಸಮುದಾಯದವರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸದ ಕಾರಣ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅವುಗಳೆಡೆಗೆ ಸಂಬಂಧಪಟ್ಟವರ ಗಮನ ಸೆಳೆವ ಪುಟ್ಟಯತ್ನವಿದು.

ಕುಣಬಿಗಳು ಕೇವಲ ತಾವಿದ್ದ ನೆಲೆಯಿಂದ ಮಾತ್ರವೇ ಸ್ಥಳಾಂತರಗೊಂಡಿಲ್ಲ; ತಮ್ಮ ಮೂಲಬದುಕಿನ ಸ್ವರೂಪಗಳಾದ ಕಾಡಿನ ಆಹ್ಲಾದಕರ ವಾತಾವರಣ, ನೀರು, ಬೇಟೆ, ಉತ್ಪನ್ನಗಳು, ಔಷಧೋಪಚಾರ, ಅನನ್ಯ ಸಂಸ್ಕೃತಿ, ಪಾರಂಪರಿಕ ವಸತಿ ಮತ್ತು ಆಹಾರ ಪದ್ಧತಿ, ರೂಢಿಗತ ಸಂಪ್ರದಾಯಗಳು, ಕುಲಕಸುಬು ಹೀಗೆ ಬಹಳಷ್ಟು ಆಯಾಮಗಳಿಂದಲೂ ಸ್ಥಳಾಂತರಗೊಂಡಿ ದ್ದಾರೆ. ಇದರಿಂದಾಗಿ ಅವರು ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ತಮ್ಮ ಬದುಕಿನ ಅವಶ್ಯಕತೆಗಳ ಪೂರೈಕೆಯಲ್ಲಿನ ಅಸಮತೋಲನದಿಂದಾಗಿ ಅನೇಕ ಮನೋ-ಸಾಮಾಜಿಕ ಸಮಸ್ಯೆಗಳಿಗೆ ಅವರು ತುತ್ತಾಗಿದ್ದಾರೆ. ಸ್ಥಳಾಂತರಪೂರ್ವದಲ್ಲಿ ಸ್ವಂತ ಜಮೀನು, ಕುಮರಿ ಹೊಂದಿದ್ದು ತಮ್ಮದೇ ಆದ  ಜನಸಮುದಾಯ ದೊಂದಿಗೆ ಅವಿಭಕ್ತ ಕುಟುಂಬದಲ್ಲಿ ವಾಸವಿದ್ದ ಕುಣಬಿಗಳಿಗೆ ಆರ್ಥಿಕ, ಕೌಟುಂಬಿಕ, ಪ್ರಾಕೃತಿಕ ಬೆಂಬಲಗಳು ಹೇರಳವಾಗಿ ಸಿಗುತ್ತಿದ್ದವು.

ಬದುಕಲ್ಲಿ ಎಷ್ಟೇ ಕಷ್ಟ ಬಂದರೂ ಸುತ್ತಲಿನ ಪ್ರಕೃತಿ ಸಂಪತ್ತು ತಮ್ಮ ಅಗತ್ಯಗಳನ್ನು ಪೂರೈಸುತ್ತದೆ ಎಂಬ ಭರವಸೆಯಿಂದ ಅವರು ದಿನದೂಡುತ್ತಿದ್ದರು. ಕೃಷಿಕರಾಗಿದ್ದ ಇವರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಸಂಪೂರ್ಣ ನಂಬಿಕೆಯಿತ್ತು. ಆದರೆ ಸೂಪಾ ಜಲಾಶಯದ ನಿರ್ಮಾಣ ಆಗಿದ್ದೇ ಆಗಿದ್ದು, ಇವರ ವಾಸಸ್ಥಾನ, ಜಮೀನು ಮತ್ತು ಎಲ್ಲ ವ್ಯವಸ್ಥೆಗಳೂ ಕಾಳಿನದಿ ನೀರಿನಲ್ಲಿ ಕೊಚ್ಚಿಹೋಗಿ ನಂಬಿಕೆಗಳು ಛಿದ್ರವಾದವು.

ಪರಿಹಾರಧನ ಮತ್ತು ಜಮೀನನ್ನು ಪಡೆದುಕೊಳ್ಳುವ ಸಲುವಾಗಿ ಕೌಟುಂಬಿಕ ಕಲಹಗಳು ಏರ್ಪಟ್ಟು, ಕುಟುಂಬ ವ್ಯವಸ್ಥೆ ಒಡೆಯಿತು. ಪುನರ್ವಸತಿ ಕೇಂದ್ರದಲ್ಲಿ ಬೇರೆ ಬೇರೆ ಕಡೆ ಮನೆ ನಿವೇಶನ ನೀಡಿದ್ದರಿಂದ ಸಂಬಂಧಿಕರೂ ದೂರವಾದರು. ತಮಗೆ ದೊರೆತಿದ್ದ ಹೊಲದಲ್ಲಿ ಬೆಳೆ ಬೆಳೆಯಲು ಯತ್ನಿಸಿದರೂ ಅದು ಸಾಧ್ಯವಾಗದೆ, ಆರ್ಥಿಕ ಸ್ವಾವಲಂಬಿತನಕ್ಕೂ ಧಕ್ಕೆಯಾಯಿತು.

ಹೀಗಾಗಿ ಬದುಕು ಭದ್ರವಾಗಿಲ್ಲ ಎಂಬ ಅಪನಂಬಿಕೆಯಲ್ಲೇ ಅವರು ದಿನದೂಡುವಂತಾಯಿತು. ಬದುಕಿನೆಡೆಗೆ ನಾಚಿಕೆ ಮತ್ತು ಸಂಶಯ ಮೂಡುವಂತಾಯಿತು. ಭತ್ತ ಬೆಳೆಯುವುದು ಬಿಟ್ಟರೆ ಬೇರಾವ ಕೌಶಲವೂ ತಿಳಿದಿಲ್ಲದ ಕಾರಣ ಮತ್ತು ಹೊಸ ಕೌಶಲ ಅಥವಾ ಉದ್ಯೋಗಕ್ಕೆ ಹೊಂದಿಕೊಳ್ಳಲಾಗದ ಕಾರಣ ಕುಣಬಿಗಳೀಗ ಅಸಹಾಯಕತೆಯ ಶಿಶುಗಳಾಗಿಬಿಟ್ಟಿದ್ದಾರೆ. ಪರಾವಲಂಬನೆಯ ಹಂಗಿಲ್ಲದೆ ಸ್ವಾಯತ್ತವಾಗಿ ಬದುಕುತ್ತಿದ್ದ ಅವರು ಈಗ ಪರಸ್ಪರ ಸಂಶಯ ದಿಂದ ದಿನದೂಡುವಂತಾಗಿದೆ. ಅವರ ಮನಸ್ಥಿತಿಯೀಗ ಅಪರಾಧಿ ಮನೋಭಾವದೆಡೆಗೆ ವಾಲಿದೆ.

ತಾವು ಅನುಭವಿಸಿದ್ದ ಜಮೀನನ್ನು ತಮ್ಮ ಮಕ್ಕಳಿಗೆ ನೀಡಲಾಗಲಿಲ್ಲವಲ್ಲ ಎಂಬ ಅಪರಾಧಿ ಪ್ರಜ್ಞೆ ಅವರನ್ನು ಕಾಡುತ್ತಿದೆ. ಇದನ್ನು ಜೀರ್ಣಿಸಿಕೊಳ್ಳಲಾಗದೆ ವಿವಿಧ ದುಶ್ಚಟಗಳಿಗೆ ದಾಸರಾಗಿ, ತಮ್ಮ ಕುಲದ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಳ್ಳು  ತ್ತಿರುವ ಆರೋಪವನ್ನೂ ಕುಣಬಿಗಳು ಹೊರುವಂತಾಗಿದೆ. ಸ್ಥಳಾಂತರಕ್ಕೂ ಮುನ್ನ ತಮ್ಮ ಸಮುದಾಯದ ಸಾಮಾಜಿಕ
ಸನ್ನಿವೇಶಗಳಲ್ಲಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದ ಕುಣಬಿಗಳು, ಈಗ ಹೇಳಿಕೊಳ್ಳುವ
ಉದ್ಯೋಗವಿಲ್ಲದೆ ಕೀಳರಿಮೆಯಿಂದ ಬಳಲುತ್ತಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಲಭ್ಯವಿರುವ ಕಲ್ಲಿನ ಕೋರೆ ಕೆಲಸ
ಮಾಡಲು ಅವರಿಗೆ ಅಷ್ಟೊಂದು ಸಾಮರ್ಥ್ಯ ವಿಲ್ಲ.

ಹಾಗಂತ ಯಾವುದಾದರೂ ಸರಕಾರಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳೋಣವೆಂದರೆ ಅಥವಾ ಉದ್ಯೋಗ ಪಡೆದು ಕೊಳ್ಳೋಣವೆಂದರೆ, ಇವರಿಗೆ ಕನ್ನಡ ಭಾಷಾಜ್ಞಾನ ಹಾಗೂ ವಿದ್ಯಾರ್ಹತೆಯ ಕೊರತೆ ಕಾಡುತ್ತಿದೆ. ಕುಟುಂಬಗಳ
ಯಜಮಾನನ ಪಾತ್ರ ಕೂಡ ಬದಲಾಗಿದೆ. ಕುಟುಂಬ ಜೀವನದ ಯಾವುದೇ ರೀತಿಯ ಗೊಂದಲ, ಸಂಘರ್ಷಗಳನ್ನು
ಯಶಸ್ವಿಯಾಗಿ ಪರಿಹರಿಸಿಕೊಳ್ಳುತ್ತಿದ್ದವರು ಈಗ ಸಣ್ಣ ಸಮಸ್ಯೆಗೂ ಹೆದರಿಕೊಳ್ಳುವಂತಾಗಿದೆ, ಅದರ ನಿರ್ವಹಣೆಗೆ
ಹಿಂಜರಿಯುವಂತಾಗಿದೆ. ಮುಂದಿನ ಜೀವನಕ್ಕೆ ಯಾವ ವೃತ್ತಿಯನ್ನು ಅಪ್ಪಬೇಕು ಎಂಬ ವಿಷಯದಲ್ಲೂ ಅವರನ್ನು ಬಹಳಷ್ಟು ಗೊಂದಲ ಮತ್ತು ಅಸಹಾಯಕತೆ ಕಾಡುತ್ತಿದೆ.

ಸ್ಥಳಾಂತರಪೂರ್ವದಲ್ಲಿ ಸಮುದಾಯದ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಮತ್ತು ಕಾಡಿನ ಜತೆಗೂ ಅನ್ಯೋನ್ಯತೆ ರೂಢಿಸಿಕೊಂಡಿದ್ದ ಕುಣಬಿಗಳಿಗೆ ಈಗ ಅಕ್ಷರಶಃ ಹುಚ್ಚು ಹಿಡಿದಂತಾಗಿದೆ. ಯಾರಾದರೂ ಮನೆಬಾಗಿಲಿಗೆ ಬಂದರೆ ಹೊರಗಡೆ ಬಂದು ಅವರನ್ನು ಮಾತನಾಡಿಸುವ ವರ್ತನೆ ಕುಣಬಿಗಳಲ್ಲಿ ಕಾಣುತ್ತಿಲ್ಲ. ಒತ್ತಾಯ ಪೂರ್ವಕವಾಗಿ ಕರೆದೋ, ಹಠ ತೊಟ್ಟೋ ಅವರನ್ನೂ ಮಾತಾಡಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಏಕಾಂತ ಭಾವನೆಗೆ ನಿರಂತರ ಒಡ್ಡಿಕೊಂಡು ಅವರು ಇನ್ನಷ್ಟು ಮೂಲೆಗುಂಪಾಗಿದ್ದಾರೆ.

ಸ್ಥಳಾಂತರಪೂರ್ವದಲ್ಲಿ ಸೃಷ್ಟಿಶೀಲತೆಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಯತ್ನಿಸುತ್ತಿದ್ದ ಕುಣಬಿಗಳು ಈಗ ಅಂಥ
ಚಲನಶೀಲತೆಯಿಂದ ನಿಲುಗಡೆಯ ಸ್ಥಿತಿಗೆ ಹಂತಹಂತವಾಗಿ ಸಾಗುತ್ತಿದ್ದಾರೆ. ಕುಟುಂಬವನ್ನು ಸಲಹುವಿಕೆ ಮತ್ತು ಮಕ್ಕಳ
ಪೋಷಣೆ ಸೇರಿದಂತೆ ಅನೇಕ ಮಹತ್ವದ ಕೆಲಸಗಳು ಅವರ ಪಾಲಿಗೆ ಈಗ ಆದ್ಯತೆಯ ಬಾಬತ್ತುಗಳಾಗಿ ಉಳಿದಿಲ್ಲ.
ವಯಸ್ಸಾದವರಂತೂ ಆಕಾಶದ ಕಡೆಗೇ ದೃಷ್ಟಿನೆಟ್ಟು ಕೂರುವವರಾಗಿದ್ದಾರೆ, ಏನೂ ಕೆಲಸವಿಲ್ಲದೆ ನಿಷ್ಕ್ರಿಯರಾಗಿದ್ದಾರೆ, ಅಕ್ಷರಶಃ ಜೀವಂತ ಶವಗಳೇ ಆಗಿಬಿಟ್ಟಿದ್ದಾರೆ.

ಕುಟುಂಬದಲ್ಲಿ ಅಪ್ಪಿತಪ್ಪಿ ಯಾವುದಾದರೂ ದುಡಿಯುವ ಕೈಗಳಿದ್ದರೂ, ತಿನ್ನುವ ಬಾಯಿಗಳು ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಯಾರ ಹೊಟ್ಟೆಯೂ ಸರಿಯಾಗಿ ತುಂಬಲಾಗದೆ ಅವರಲ್ಲಿ ಹತಾಶೆ ಮಡುಗಟ್ಟಿದೆ. ಸಮಗ್ರತೆಯ ಮನೋಭಾವವನ್ನು  ಹೊಂದಿದ್ದ ಕುಣಬಿಗಳು ಇದ್ದುದರಲ್ಲೇ ಜೀವನದ ಸಾರ್ಥಕ್ಯವನ್ನು ಕಾಣುತ್ತಿದ್ದರು. ಅಸಮಾಧಾನ, ಅಸಂತುಷ್ಟಿ ಅವರಲ್ಲಿ
ಸುಳಿದದ್ದೇ ಇಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ನಿರಾಳರಾಗಿ ದಿನದೂಡುತ್ತಿದ್ದ ಅವರದ್ದು ಸಾಲವಿಲ್ಲದ ಬದುಕಾಗಿತ್ತು.
ಮನುಷ್ಯನ ಸಮಗ್ರತೆಗೆ ಬೇಕಾಗುವ ಮನೆ, ಕೌಟುಂಬಿಕ ಜೀವನ, ಕೃಷಿ ಜಮೀನು, ಕಾಡಿನ ವಾತಾವರಣ, ತಾಜಾ
ಮತ್ತು ಸ್ವಚ್ಛ ಹಣ್ಣು-ಹಂಪಲು, ಆಹಾರ ಪದಾರ್ಥಗಳು, ಬಯಸಿದಾಗ ಸಿಗುವ ಬೇಟೆ ಇವೆಲ್ಲ ಕೈಗೆಟುಕುವಂತಿರುವಾಗ
ನಿರಾಳ ಬದುಕು ಸಹಜ ತಾನೇ? ಆದರೆ ಈಗಿನ ಪುನರ್ವಸತಿ ಕೇಂದ್ರಗಳಲ್ಲಿ ಅವರು ಅಂದುಕೊಂಡ ಏನೂ ಸಿಗುತ್ತಿಲ್ಲ.

ನಿಜ ಹೇಳಬೇಕೆಂದರೆ, ಏನನ್ನು ಅಂದುಕೊಳ್ಳಬೇಕು ಎಂಬುದನ್ನೇ ಅವರು ಸಂಪೂರ್ಣ ಮರೆತಾಗಿದೆ. ಸ್ಥಳಾಂತರ ತಂದ
ಕಹಿನೋವಿನ ಪೆಟ್ಟಿನಿಂದ ಅವರಿನ್ನೂ ಸುಧಾರಿಸಿಕೊಂಡಿಲ್ಲ. ತಾವಿದ್ದ ಮೂಲನೆಲೆಯ ನೆನಪು ಅವರನ್ನು ಎಡೆಬಿಡದಂತೆ
ಕಾಡುತ್ತಿದೆ. ಯಾರದೋ ಬದುಕನ್ನು ಹಸನು ಮಾಡಲಿಕ್ಕೆ, ಯಾರದೋ ಜೇಬನ್ನು ತುಂಬಿಸಲಿಕ್ಕೆ ನಮ್ಮ ಬದುಕನ್ನು
ಬರಡಾಗಿಸಿಕೊಂಡೆವಲ್ಲಾ, ವ್ಯರ್ಥವಾದ ಈ ಜೀವನ ಮತ್ತೆ ಸಿಗುವುದಿಲ್ಲವಲ್ಲಾ ಎಂಬ ಕೊರಗು ಕುಣಬಿಗಳನ್ನು ಹೈರಾಣಾಗಿಸಿ ಹತಾಶೆಯ ಕೂಪಕ್ಕೆ ತಳ್ಳಿದೆ.

ಸೂಪಾ ಜಲಾಶಯದ ನಿರ್ಮಾಣದಿಂದಾಗಿ ಕುಣಬಿಗಳು ಸೇರಿದಂತೆ ಇನ್ನೂ ಅನೇಕ ಸ್ಥಳಾಂತರಿತ ಜನರಲ್ಲಿ ಕಂಡು ಬಂದಿರುವ ವೈವಿಧ್ಯಮಯ ಮನೋ-ಸಾಮಾಜಿಕ ಸಮಸ್ಯೆಗಳನ್ನು ವಿವರವಾಗಿ ಬಿಡಿಸಿಡುತ್ತ ಹೋದರೆ ಅದೇ ಒಂದು ದೊಡ್ಡ ಗ್ರಂಥವಾದೀತು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಂಥ ಇನ್ನೂ ಅನೇಕ ಅಭಿವೃದ್ಧಿ ಯೋಜನೆಗಳು ಕಾಲಾನುಕಾಲಕ್ಕೆ ನಡೆಯುತ್ತ ಬಂದಿವೆ. ಇಂಥ ಎಲ್ಲ ಸಂದರ್ಭಗಳಲ್ಲೂ, ಕಾಡು ಕಡಿದು ಅಥವಾ ಊರಿನ ಜನರನ್ನು ಒಕ್ಕಲೆಬ್ಬಿಸಿ ಆ ಜಾಗದಲ್ಲಿ ಕಟ್ಟಲಾದ ‘ನಾಗರಿಕತೆಯ ಪ್ರತಿರೂಪದ’ ಜಲಾಶಯಗಳನ್ನೋ ಕಾರ್ಖಾನೆಗಳನ್ನೋ ಅಥವಾ ಮತ್ತಿನ್ನಾವುದೇ ವೈಭವೋಪೇತ ಇಮಾರತುಗಳನ್ನೋ ಕಂಡು ಸಂಭ್ರಮದಿಂದ ಹಿಗ್ಗಿ ನಲಿಯುವ ತಥಾಕಥಿತ ನಾಗರಿಕರು, ಅಂಥ ರಚನೆಗಳ ಹಿಂದೆ ಯಾರೆಲ್ಲರ ನೋವು, ಅಸಹಾಯಕತೆ, ಆಕ್ರೋಶ, ಕಂಬನಿಗಳು ಮಡುಗಟ್ಟಿವೆ ಎಂದು ವಿಶ್ಲೇಷಿಸುವ ಗೋಜಿಗೆ ಹೋಗುವುದಿಲ್ಲ.

ಏಕೆಂದರೆ ಹೀಗೆ ದಮನಕ್ಕೆ ಒಳಗಾದವರು ಅಥವಾ ಅಸಹಾಯಕರು ಅಂಥ ಪ್ರಭಾವಿಗಳಾಗಿರುವುದಿಲ್ಲ. ಹಾಗಾದರೆ, ಮಾನವೀಯತೆ ಎಂಬ ಪರಿಕಲ್ಪನೆಗೆ ಅರ್ಥವೇ ಇಲ್ಲವೇ? ಅಸಹಾಯಕರ ಬದುಕಿಗೆ ಸಂಚಕಾರ ತಂದು, ಅವರ ಆಸೆಯ ಸಮಾಧಿಗಳ ಮೇಲೆ ಮಹಲು ಕಟ್ಟಿಕೊಂಡು ನಲಿಯುವುದನ್ನು ನಾಗರಿಕತೆ ಎನ್ನಲಾದೀತೇ? ಅಭಿವೃದ್ಧಿಯಾಗಬೇಕು, ಗಗನಮುಖಿ ಯಾಗಬೇಕು ಎಂಬ ಒಂದೇ ಕಾರಣಕ್ಕೆ ಕುಣಬಿಗಳಂಥ ಅಸಹಾಯಕರನ್ನು ನೆಲದಾಳಕ್ಕೆ ತುಳಿಯವುದನ್ನು ಮಾನವೀಯತೆ ಎನ್ನಲಾದೀತೇ? ಎಂಬ ಪ್ರಶ್ನೆಗಳು ಪ್ರಜ್ಞಾವಂತರನ್ನು ಕಾಡುವಂತಾಗಬೇಕು. ಅದು ಈ ಕ್ಷಣದ ಅನಿವಾರ್ಯ ತೆಯೂ ಹೌದು.