ಶ್ವೇತಪತ್ರ
shwethabc@gmail.com
ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಧೈರ್ಯವಾಗಲಿ, ಅಂಜುಬುರುಕುತನವಿರಲಿ ಎಲ್ಲವನ್ನೂ ಕಂಟ್ರೋಲ್ ಮಾಡುವುದು ನಮ್ಮ ಮನಸ್ಸು. ಈ ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಂಡು ಅನುಭೂತಿಯನ್ನು ಬೆಳೆಸಿಕೊಂಡು ನಮ್ಮದೇ ತತ್ವಗಳನ್ನು ರೂಢಿಸಿಕೊಂಡರೆ ನಿಧಾನವಾಗಿ ಹೇಡಿತನವನ್ನು ಬದಿಗೆ ಸರಿಸಿ ಧೈರ್ಯವನ್ನು ಅಪ್ಪಿಕೊಳ್ಳ ಬಹುದು.
ನೀವು ಹೇಡಿ ಅಂತ ಡಿಸೈಡ್ ಮಾಡುವ ಯಾರಾದರೂ ನಿಮಗೆ ಗೊತ್ತಿದ್ದಾರಾ? ಅವರನ್ನು ಹೇಡಿ ಅಂತ ವ್ಯಾಖ್ಯಾನಿಸಲು ನಿಮ್ಮ ಕಾರಣಗಳೇನು? ನಿಮ್ಮ ಈ ನಂಬಿಕೆಯನ್ನು ನೀವು ಸಮರ್ಥಿಸಿಕೊಳ್ಳಬಲ್ಲಿರಾ? ನಾವು ಕೆಲಸ ಮಾಡುವ ಜಾಗದಲ್ಲಿ, ನಮ್ಮ ಕುಟುಂಬದಲ್ಲಿ ಅಥವಾ ನಮ್ಮ ಸ್ನೇಹಿತರ ಗುಂಪಲ್ಲಿ ನಮಗೆ ಹತ್ತಿರವಿರುವ ಕೆಲವರನ್ನ ನಾವು ಹೇಡಿ ಅಂತ ಹಣೆಪಟ್ಟಿ ಕಟ್ಟಿ ಬಿಟ್ಟಿರುತ್ತೇವೆ. ಎಷ್ಟೋ ಬಾರಿ ನಮ್ಮಲ್ಲಿಯೂ ಹೇಡಿತನ ಇದ್ದು ಬಿಟ್ಟಿರಲೂಬಹುದು.
ಹೇಡಿತನ ಮನುಷ್ಯನಲ್ಲಿರುವ ಮತ್ತು ಕೆಲವೊಮ್ಮೆ ಅವನಿಗೆ ಅತಿ ಅಗತ್ಯವಾಗಿ ಬೇಕಿರುವ ಗುಣಲಕ್ಷಣವೆಂದರೆ ನಿಮಗೆ ಆಶ್ಚರ್ಯ ವಾಗಬಹುದು! ಬೇರೆಯವರನ್ನ ಹೇಡಿ ಅಂತ ನಾವು ಹಣೆಪಟ್ಟಿ ಕಟ್ಟಿ ನಿರ್ಣಯಿಸಿ ಬಿಟ್ಟಿರುತ್ತೇವೆ. ಆದರೆ ನಾವು ಹೆದರಿಕೆಯ ಹೇಡಿ ತನದ ಹಿಂದಿರುವ ಮನೋವಿಜ್ಞಾನವನ್ನು ಅರ್ಥ ಮಾಡಿಕೊಳ್ಳುವುದನ್ನು ಮರೆತು ಬಿಟ್ಟಿದ್ದೇವೆ.
Yes, ಇದೇ ಹೇಡಿತನವೆಂಬ ಮನುಷ್ಯ ಸಹಜ ಗುಣಲಕ್ಷಣ, ಸ್ವಭಾವವನ್ನು ನಾವೆಲ್ಲರೂ ಕೆಲವೊಂದು ಸಂದರ್ಭದಲ್ಲಿ ಹೊಂದಾ ಣಿಕೆ ತಂತ್ರವಾಗಿಯೂ ಬಳಸುತ್ತೇವೆ. ಹಾಗೆ ನಮ್ಮೆಲ್ಲರ ಬದುಕಿನ ಘಟನೆಗಳನ್ನು ಒಮ್ಮೆ ರಿವೈಂಡ್ ಮಾಡಿಕೊಂಡು ನೋಡೋಣ. ಅನೇಕ ಸಂದರ್ಭಗಳು ನಮ್ಮಲ್ಲಿ ಅನುಮಾನವನ್ನು ಹುಟ್ಟುಹಾಕಿದ್ದವು. ಸರಿಯಾಗಿ ಯೋಚಿಸಿ ನೋಡಿದರೆ ನಮ್ಮೊಳಗಿನ ಹೆದರಿಕೆಯ ಹೇಡಿತನಗಳೇ ಈ ಅನುಮಾನಗಳಿಗೆ ಕಾರಣವಾಗಿದ್ದವು.
Infact, ನಮ್ಮ ಭಯ ಮತ್ತು ಭಯದ ಕುರಿತಾದ ನಂಬಿಕೆಗಳೇ ಹೇಡಿತನಕ್ಕೆ ಮೂಲಕಾರಣ. ಇವೆರಡು ಬೇರ್ಪಡಿಸಲಾಗದ ಅಂಶ ಗಳು. ಭಯ ಇಲ್ಲದೆ ಹೋದರೆ ಅದು ಹೇಡಿತನವೇ ಅಲ್ಲ. ಯಾವುದೇ ರಿಸ್ಕ್ ತೆಗೆದುಕೊಳ್ಳದೇ Comfort zone ಗೆ ಹೊಂದ ಕೊಂಡು ಇದ್ದುಬಿಡಬೇಕು ಎಂಬ ಬಯಕೆಯ ಮೂಲದ ಹೇಡಿತನವಿರುತ್ತದೆ.
ನಮ್ಮ ಭಾವನೆಗಳಲ್ಲಿ, ವರ್ತನೆಯಲ್ಲಿ, ಮಿದುಳಿನ ಕ್ರಿಯೆಯಲ್ಲಿ ಹೇಡಿತನ ಅವಿತುಬಿಟ್ಟಿದೆ. ನಿಜವಾಗಿಯೂ ನಮ್ಮನ್ನು ಹೇಡಿ ಗಳಾಗಿ ಮಾಡಿದ್ದೇನು? ಹೇಗೆ ನಮ್ಮಲ್ಲಿ ಹೇಡಿತನ ರೂಪುಗೊಳ್ಳುತ್ತದೆ? ಸಹಜವಾಗೇ ಪ್ರಶ್ನೆ ಮೂಡುತ್ತವೆ. ಅನೇಕ ಬಗೆಗಳಲ್ಲಿ ನಾವೆಲ್ಲ ಹೇಡಿತನವನ್ನು ತೋರ್ಪಡಿಸುತ್ತೇವೆ. ಬಹಳ ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ವರ್ತನೆಯಲ್ಲಿ ಕಾಣಿಸುತ್ತದೆ. ಇದೇ ಹೇಡಿತನ ನಮ್ಮ ಭಾವನೆಗಳಲ್ಲಿ ಆಲೋಚನೆಗಳಲ್ಲು ಕಾಣಿಸಿಕೊಳ್ಳುತ್ತಿರುತ್ತದೆ.
ಎಷ್ಟೋ ಸಂದರ್ಭಗಳು ನಮ್ಮನ್ನು ಹಿಂಗೆ ನಡೆದುಕೊಳ್ಳಬೇಕು ಅಂತ ಡಿಮಾಂಡ್ ಮಾಡುತ್ತವೆ ಆದರೆ ನಾವು ಆ ರೀತಿ ನಡೆದು ಕೊಂಡಿರುವುದಿಲ್ಲ ಯಾವುದೇ ಪ್ರತಿಕ್ರಿಯೆ ತೋರಿಸದೆ ಸುಮ್ಮನಾಗಿ ಬಿಟ್ಟಿರುತ್ತೇವೆ. ಇದು ನಮ್ಮ ಅಭದ್ರತೆ, ಅಸ್ಥಿರತೆಯ
ರಿಫ್ಲೆಕ್ಷನ್ ಆಗಿರುತ್ತದೆ. ಈ ಭಯ, ಅಸ್ಥಿರತೆ, ಅಭದ್ರತೆಯೇ ನಮ್ಮೆಲ್ಲರ ಹೇಡಿತನ. ಒಂದು ನಿಮಿಷ ಹಾಗೇ ಯೋಚಿಸಿ ಎಷ್ಟೋ ಸಲ ನಾವು ಹೇಳಬೇಕಾಗಿರುವುದನ್ನು ಹೇಳಲಾಗದೆ ಸುಮ್ಮನಾಗಿಬಿಟ್ಟಿರುತ್ತೇವೆ. ಇನ್ನು ಕೆಲವು ಸಲ ನಾನು ಒಬ್ಬಂಟಿಯಾಗಿರಬೇಕು ಬಿಟ್ಟುಬಿಡಿ ಅಂತ ಹೇಳಿ ಬಿಟ್ಟಿರುತ್ತೇವೆ.
ಅದು ನಿನ್ನ ಕೆಲಸ ನೀನು ಮಾಡ್ಕೋ ಅಂದು ಬಿಟ್ಟಿರುತ್ತೇವೆ ಹೀಗೆ ಅಸಂತೋಷಕರವಾದ ಆಲೋಚನೆಗಳನ್ನು ಎದುರಿಸುವು ದನ್ನು ಬಿಟ್ಟು ನಿರ್ಲಕ್ಷಿಸಿಬಿಟ್ಟಿರುತ್ತೇವೆ. ಹಾಗಾಗಿ ನಮ್ಮ ಆಲೋಚನೆಗಳಲ್ಲೂ ಹೇಡಿತನವಿರುತ್ತದೆ. ನಮ್ಮ ಯಾವುದೋ ಒಂದು ಐಡಿಯಾ, ಬದುಕಿನ ಸಂದರ್ಭ ಒಂದು ನೆನಪು, ನಮ್ಮನ್ನು ಕಾಡಿ ಭಯಪಡಿಸಿ ಬಿಟ್ಟಿರುತ್ತದೆ. ಇವುಗಳಿಗೆ ನಾವು ಪ್ರತಿಕ್ರಿಯಿಸುವು ದನ್ನು ಬಿಟ್ಟು ಜಸ್ಟ್ ಪಾಸ್ ಆನ್ ಮಾಡಿರುತ್ತೇವೆ. ಹೀಗೆ ಪಾಸ್ ಆನ್ ಆದ ವಿಷಯಗಳನ್ನು ಯಾರಾದರೂ ನಮಗೆ ಮತ್ತೆ ನೆನಪಿಸಿ ದರೆ ಒಂದು ಆ topic ಚೇಂಜ್ ಮಾಡ್ತಿವಿ ಇಲ್ಲ ಅವರ ಮಾತುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ.
ಇನ್ನು ನಮ್ಮ ಭಾವನೆಗಳಲ್ಲೂ ಹೇಡಿತನವಿದೆ. ಹೇಗೆಂದರೆ ಬೇರೆಯವರ ಭಾವನೆಗಳಿಗೆ ಸ್ಪಂದಿಸದೆ ಸುಮ್ಮನಿದ್ದುಬಿಡುವುದು.
ಆಗ ಭಾವನೆಗಳು ನೋಯುವುದಿಲ್ಲ. ಹೇಡಿಗಳು ಭಾವನೆಗಳನ್ನು ಕ್ಲಿಷ್ಟಕರವೆಂದೇ ಭಾವಿಸಿ ಆದಷ್ಟು ಅವುಗಳಿಂದ ದೂರ ಇದ್ದು ಬಿಡುವ ಪ್ರಯತ್ನ ಮಾಡುತ್ತಾರೆ. ಹೇಡಿಗಳು ಆತ್ಮೀಯತೆ, ದುಃಖ ಇವುಗಳಿಗೆ ವಿಮುಖರಾಗುವುದು ಸಹಜ. ಸಂಬಂಧಗಳಲ್ಲಿ ಸಂಕೀರ್ಣತೆ, ಬಾಲ್ಯದ ಆಘಾತ, ಸಹಾನುಭೂತಿಯನ್ನು ವ್ಯಕ್ತಪಡಿಸುವಲ್ಲಿ ಇರುವ ಸಮಸ್ಯೆ ಹೀಗೆ ಅವರಲ್ಲಿನ ಅಭದ್ರತೆಗಳು ಅವರ ನಿಯಂತ್ರಣವನ್ನು ತಪ್ಪಿಬಿಡಬಹುದೆಂಬ ಭಯವೂ ಕೂಡ ಹೇಡಿತನಕ್ಕೆ ದಾರಿಮಾಡಿಕೊಡುತ್ತದೆ.
ನಾವೆಲ್ಲ ಹೇಡಿತನದಿಂದ ನಡೆದುಕೊಳ್ಳಲು ಕಾರಣವೇನು? ನಾವೇ ಹೇಡಿಗಳಾಗಿರಬಹುದು ಅಥವಾ ನಮಗೆ ಗೊತ್ತಿರುವವರು
ಹೇಡಿಗಳಾಗಿರಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಹೇಡಿತನ ನಮ್ಮಲ್ಲಿನ ಅಪೂರ್ಣತೆ, ನಿರಾಶೆಯ ಭಾವಕ್ಕೆ ಕಾರಣ ವಾಗಿರಬಿಡಬಹುದು. ಧೈರ್ಯ ಅಥವಾ ಹೇಡಿತನ ಇವೆರೆಡರಲ್ಲಿ ಯಾವುದನ್ನು ನಾವು ಹೆಚ್ಚು ಪೋಷಿಸುತ್ತೇವೆಯೋ ಅದು ನಮ್ಮಲ್ಲಿ ಮೈಗೂಡುತ್ತದೆ. ಎರ್ ನೆಸ್ಟ್ ಮ್ಯಾರೋನ ಮಾತುಗಳಲ್ಲಿ ಹೇಳುವುದಾದರೆ ಜಗತ್ತಿನಲ್ಲಿ ಎರಡು ರೀತಿಯ ಹೇಡಿ ಗಳಿರು ತ್ತಾರೆ- ಮುನ್ನುಗ್ಗಿ ಬದುಕನ್ನು ಏನಾಗುತ್ತೋ ನೋಡೋಣ ಎನ್ನುವವನು ಒಬ್ಬನಾದರೆ ನನ್ನ ಕೈಯಲ್ಲಿ ಆಗಲ್ಲ ಅಂತ ಹಿಂದೆ ಸರಿಯೋನು ಇನ್ನೊಬ್ಬ.
ಆಗಲ್ಲ ಅಂತ ಯೋಚಿಸಿ ಆಮೇಲೆ ಆಗಬಹುದು ಮಾಡೋಣ ಅನ್ನುವ ಮನಸ್ಥಿತಿಯಲ್ಲಿರುವುದೇ ಹೇಡಿತನ. ಭಯ ನಮ್ಮಲ್ಲಿರುವ
ಒಂದು ಎಮೋಷನ್ ಆದರೆ ಹೇಡಿತನ ನಮ್ಮ ಮನೋಭಾವ ನಮ್ಮ ಆಟಿಟ್ಯೂಡ್. ಭಯವನ್ನು ಎದುರಿಸಲು ನಾವು ಆಯ್ಕೆ ಮಾಡಿಕೊಳ್ಳುವ ನಮ್ಮ ಮನಸ್ಸಿನ ಸ್ಥಿತಿ. ಹೇಡಿತನ ಲಾಜಿಕಲ್ಲು ಹೌದು ಮನುಷ್ಯ ಸಹಜವೂ ಹೌದು. ಆತಂಕ ನಮ್ಮ ಪ್ರತಿದಿನದ ಭಾಗ ಇಂತಹ ಆತಂಕದ ಮನಸ್ಥಿತಿಯಲ್ಲಿ ನಮ್ಮನ್ನು ಮುಖ್ಯವಾಗಿ ಕಾಡುವುದು ಅಧೈರ್ಯ.
ಎಷ್ಟುಸಲ ನಮ್ಮೆಲ್ಲರಿಗೂ ಅನಿಸಿದ್ದಿದೆ ಇನ್ನೊಂಚೂರು ಧೈರ್ಯ ಮಾಡಿದ್ದರೆ ಏನಾದರೂ ಮಾಡಿಬಿಡಬಹುದಿತ್ತು ಅಂತ.
ಈ ಧೈರ್ಯ ಅನ್ನುವುದು ನಮ್ಮೊಳಗೆ ಇರುವ ಸ್ಕಿಲ್. ಧೈರ್ಯವನ್ನು ನಮ್ಮ ಎಮೋಷನ್ಸ್‌ಗೆ ಹೇಗೆ ರಿಲೇಟ್ ಮಾಡಿಕೊಳ್ಳುತ್ತೇವೆ ಅನ್ನುವುದರ ಮೇಲೆ ಈ ಸ್ಕಿಲ್ ಹೊರಹೊಮ್ಮುತ್ತದೆ. ಹೇಡಿ ಎಂಬ ಕನ್ನಡ ಪದದ ಇಂಗ್ಲಿಷ್ ಸಮನಾರ್ಥಕ ಪದ Coward ಅತ್ಯಂತ ಶಕ್ತಿಯುತವಾದ ಭಾವನೆಗಳನ್ನು ಹೊರಹೊಮ್ಮಿಸುತ್ತದೆ.
ಹೇಡಿತನವೆಂಬುದು ಮನುಷ್ಯನ ಮನಸ್ಸಿನ ಒಂದು ವೀಕ್ನೆಸ್. ಹೀಗೆ ನಿಮಗೆ ನೀವೇ ಕೇಳಿಕೊಳ್ಳಿ ಯಾವಾಗಲಾದರೂ ಸುಲಭದ ಅಥವಾ ಕಷ್ಟಕರವಾದ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಕ್ಕಾಗ ನಿಮ್ಮ ಆಯ್ಕೆ ಯಾವುದಾಗಿತ್ತು ಎಂದು. ಕೆಲವೊಮ್ಮೆ ಸುಲಭದ್ದು ಕೆಲವೊಮ್ಮೆ ಕಷ್ಟದ್ದು ಆಯ್ಕೆ ಪಲ್ಲಟವಾಗಿರುತ್ತದೆ. ಪ್ರತಿದಿನ ನಮ್ಮ ಆಯ್ಕೆಗಳು ಬದಲಾಗು ತ್ತವೆ. ಆಯ್ಕೆಯಲ್ಲಿನ ವಿವಿಧ ವರ್ಗಗಳು ಅವುಗಳೆಡೆಗೆ ನಮ್ಮ ನಿರ್ಧಾರಗಳನ್ನು ಬದಲಾಯಿಸುತ್ತವೆ. ಹೇಡಿತನದ ವಿಚಾರದಲ್ಲೂ ಅಷ್ಟೇ!
ಎಲ್ಲವೂ ನಮ್ಮ ಮನಸ್ಸಿನಲ್ಲಿಯೇ ಇವೆ ನಾವು ಯಾವ ವಿಚಾರಕ್ಕೆ ಕುಗ್ಗುತ್ತಿದ್ದೇವೆ, ಕುಸಿಯುತ್ತಿದ್ದೇವೆ ಎಂಬುದು ನೇರವಾಗಿ ನಮ್ಮ ಮನಸ್ಸಿನ ಶಕ್ತಿಯನ್ನು ಅವಲಂಬಿಸಿರುತ್ತದೆ. ಮನಸ್ಸಿನ ಗಟ್ಟಿತನವನ್ನು ಹೊರತುಪಡಿಸಿ ಇರುವ ಬದುಕಿನ ಯಾವ ಮೂಲವೂ ಇಲ್ಲ. ಬಸ್ಸು ಹಿಡಿಯೋದರಿಂದ ಹಿಡಿದು ಬಿಸಿನೆಸ್ಸು ಮಾಡುವ ತನಕ ಎಲ್ಲಕ್ಕೂ ಮನಸ್ಸಿನ ಶಕ್ತಿಯೇ ಮೂಲ, ಜೀವಾಳ. ಇಲ್ಲಿ ಮುಖ್ಯವಾದ ವಿಷಯ ಏನಪ್ಪಾ ಅಂದರೆ ಧೈರ್ಯವಾಗಲಿ, ಅಂಜುಬುರುಕುತನವಿರಲಿ ಎಲ್ಲವನ್ನೂ ಕಂಟ್ರೋಲ್ ಮಾಡುವುದು ನಮ್ಮ ಮನಸ್ಸು. ನಮ್ಮ ಮನಸ್ಸನ್ನು ನಾವು ಆರೋಗ್ಯವಾಗಿ ಇಟ್ಟುಕೊಂಡು ಅನುಭೂತಿಯನ್ನು ಬೆಳೆಸಿಕೊಂಡು ನಮ್ಮದೇ ತತ್ವಗಳನ್ನು ರೂಢಿಸಿಕೊಂಡರೆ ನಿಧಾನವಾಗಿ ಹೇಡಿತನವನ್ನು ಬದಿಗೆ ಸರಿಸಿ ಧೈರ್ಯವನ್ನು ಅಪ್ಪಿಕೊಳ್ಳಬಹುದು.
ಬೇರೆಯವರ ಶೂ ಒಳಗೆ ನಿಂತು ನೋಡಿದಾಗಲೇ ಆ ಶೂ ಹಾಕಿಕೊಂಡ ಎದುರಿಗಿರುವ ವ್ಯಕ್ತಿಯ ಹೊರ ಹಾಗೂ ಒಳ ಜಗತ್ತಿನ ಸಮಸ್ಯೆಗಳು ನಮ್ಮ ಅರಿವಿಗೆ ಬರುವುದು. ಈ ಅರ್ಥೈಸುವಿಕೆಯೇ ನಮ್ಮಲ್ಲಿ ಭಾವನಾತ್ಮಕ ಗಟ್ಟಿತನವನ್ನು, compassion ಅನ್ನು ತುಂಬುತ್ತದೆ. ಈ compassion ಬೇರೆಯವರೆಡೆಗೆ ನಮ್ಮಲ್ಲಿ ಗೌರವವನ್ನು ಮೂಡಿಸುತ್ತದೆ. ನಮ್ಮೆಲ್ಲರ ಹೇಡಿತನಕ್ಕೆ, ಅಂಜು ಬುರುಕುತನಕ್ಕೆ ಸಂಬಂಧಗಳಲ್ಲಿ ಉಂಟಾದ ದ್ರೋಹವು ಕಾರಣವೆನಿಸುತ್ತದೆ.
ಇಲ್ಲಿ ಮೋಸ ಅಥವಾ ದ್ರೋಹ ಮಾಡಿದ ವ್ಯಕ್ತಿ ಹೇಡಿ ಎನಿಸಿಕೊಳ್ಳುತ್ತಾನೆ. ಏಕೆಂದರೆ ಆ ವ್ಯಕ್ತಿ ತನ್ನನ್ನು ತಾನೇ ಸಂಬಂಧದಿಂದ ಬಿಟ್ಟುಕೊಟ್ಟು ಎದ್ದು ಹೊರನಡೆದುಬಿಟ್ಟಿರುತ್ತಾನೆ ಯಾವುದೇ ಸಹಾನುಭೂತಿಯಿಲ್ಲದೇ ಏನನ್ನೂ ಯೋಚಿಸದೇ. ಈ ಸಹಾನು ಭೂತಿಯೇ ನಮ್ಮನ್ನು ಹೆಚ್ಚು ಧೈರ್ಯವಂತರನ್ನಾಗಿ ಮಾಡಿಬಿಡುವುದು. ಬದುಕೇ ಅಸ್ವಸ್ಥತೆಗಳ ಅನುಭವ. ದಿಕ್ಕು ಗೊತ್ತಿಲ್ಲದೆ ಬದುಕನ್ನು ನಡೆಸುವುದು ನಿರರ್ಥಕ. ಹಾಗಿದ್ದರೆ ಬದುಕಿಗೆ ಅರ್ಥ ತುಂಬಬಹುದಾದರೆ ನಾವೆ ನಮ್ಮವೆ ಆದ ಮೌಲ್ಯ,
ತತ್ವ ಗಳನ್ನು ರೂಢಿಸಿಕೊಳ್ಳಬೇಕು.
ಇವು ಕತ್ತಲೆಯ ಜಗತ್ತಿನೊಳಗೆ ನಮ್ಮನ್ನು ಕೈಹಿಡಿದು ನಡೆಸುತ್ತವೆ. ಹಾಗಾದರೆ ನೀವೇ ಯೋಚಿಸಿ ಕತ್ತಲೆಯ ಹಾದಿಯನ್ನು ನಿಮ್ಮದೇ ಆದ ಮೌಲ್ಯಗಳೊಂದಿಗೆ ತತ್ವಗಳೊಂದಿಗೆ ಸವೆಸಲು ಬಯಸುತ್ತೀರಾ? ಹಾಗೆ ನಿಮ್ಮ ಜತೆ ಇರುವವರನ್ನು ದಡ ಸೇರಿಸುತ್ತಿರಾ? ಅಥವಾ ನಿಮ್ಮ ಹೇಡಿತನಕ್ಕೆ ನೀವೇ ಶರಣಾಗಿ ಆದರ್ಶಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಪಡದೆ ಸುಮ್ಮನಿದ್ದು ಬಿಡುತ್ತೀರಾ? ಆಯ್ಕೆ ನಿಮ್ಮದು. ನೀವು ರೂಢಿಸಿಕೊಳ್ಳಬೇಕಾದ ತತ್ವಗಳು ಮೌಲ್ಯಗಳು ಬೇರೆಯವರಿಂದ ಸೂರ್ತಿ ಪಡೆದವು ಆಗಿರಬಹುದು ಅಥವಾ ನಿಮ್ಮವೇ ಆಗಿರಬಹುದು ಆದರೆ ಈ ತತ್ವಗಳು ಆದರ್ಶಗಳು ನಿಮ್ಮೊಳಗಿನ ಸತ್ಯವನ್ನು ಪ್ರತಿನಿಧಿಸುತ್ತ ಬದುಕಿಗೆ ಅಪ್ಲೈ ಮಾಡಿಕೊಳ್ಳುವಂತಿರಬೇಕು. ಹೇಡಿತನವನ್ನು ಎದುರಿಸಲು ಆದರ್ಶಗಳು ಎಷ್ಟು ಮುಖ್ಯವೋ ಪ್ರೀತಿಯೂ ಅಷ್ಟೇ ಮುಖ್ಯವಾಗುತ್ತದೆ.
ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಸ್ವಯಂ-ಸಂಯಮದ ಮಂತ್ರವನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕು. ಈ ಸ್ವಯಂ-ಸಂಯಮವೆಂಬ ಮಂತ್ರ ಬದುಕಲ್ಲಿ ಯಾವುದರ ಮೇಲೆ ನಮ್ಮ ನಿಯಂತ್ರಣವಿದೆಯೋ ಅದರ ಬಗ್ಗೆ ಅಷ್ಟೇ ಗಮನ ಹರಿಸಲು ಪ್ರೇರೇಪಿಸುತ್ತದೆ. ಈ ಪ್ರಕ್ರಿಯೆ ಶೇ.೯೫ರಷ್ಟು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ಬದುಕನ್ನು ಸರಾಗ ವಾಗಿಸುತ್ತದೆ.
ಧೈರ್ಯ ತಾನಾಗೇ ಮೂಡುತ್ತದೆ. ಹೇಡಿತನ ಯಾವಾಗಲೂ ನಾವು ನಮ್ಮ ಬಗ್ಗೆಯಷ್ಟೇ ಯೋಚಿಸುವುದಕ್ಕೆ ಕೇಂದ್ರೀಕರಿಸುವುದು ಸೀಮಿತವಾಗಿರುತ್ತದೆ. ಹೇಡಿತನ ನಮ್ಮ ಅಹಃ ನಮ್ಮನ್ನು dictate ಮಾಡುವಂತೆ ಮಾಡುತ್ತದೆ. ಹೇಡಿತನದ ಈ ಬಲೆಯಿಂದ ಹೊರಬರಬೇಕಾದರೆ ಮೌಲ್ಯಗಳನ್ನು ರೂಢಿಸಿಳ್ಳುತ್ತ ಪ್ರತಿದಿನ ನಾವು improve ಆಗ್ತಾ ಹೋಗಬೇಕು. ಕಲಿಕೆ ನಮ್ಮ ಪ್ರತಿದಿನದ ಭಾಗವಾಗಬೇಕು ಆ ಕಲಿಕೆಯನ್ನು ಬದುಕಿಗೆ ಅನ್ವಯಿಸಿಕೊಳ್ಳುತ್ತ ಬದುಕಬೇಕು. ಜತೆಗೆ ಕಲಿತದ್ದನ್ನು ಬೇರೆಯವರೊಟ್ಟಿಗೆ ಹಂಚಿಕೊಳ್ಳುತ್ತಾ ಬದುಕಬೇಕು.
ಹೇಡಿತನವೆಂಬುದು ನಾವು ಬೆಳೆಸಿಕೊಂಡಿರುವ ವ್ಯಕ್ತಿತ್ವದ ಒಂದು ಗುಣ ಬದುಕಿನ ಹಾದಿಯಲ್ಲಿ ಆದಷ್ಟು ನೋವುಗಳನ್ನು
ಅವಾಯ್ಡ ಮಾಡುತ್ತ ಸುಲಭದ ದಾರಿಯನ್ನು ಹುಡುಕುವ ಪ್ರಯತ್ನವೇ ಹೇಡಿತನ. ಕುಟುಂಬ ಸ್ನೇಹಿತರೊಂದಿಗೆ ಅನುಭೂತಿ ಯನ್ನು ಬೆಳೆಸಿಕೊಳ್ಳಿ ಇದು ಹೇಡಿತನದಿಂದ ಹೊರಬರುವ ಒಂದು ಗುಡ್ ಸ್ಟಾರ್ಟ್ .ಇದು ನಿಮಗೆ ಹೇಡಿತನದಿಂದ ಆಚೆ
ಬೆಳೆಯಲು ಒಂದು ಉತ್ತಮ ಕಾರಣವನ್ನು ಒದಗಿಸಿಕೊಡುತ್ತದೆ, ನಿಮ್ಮನ್ನು ಪ್ರೇರೇಪಿಸುತ್ತದೆ.
ಹೇಡಿತನ ಎಂಬ ಪದವೇ ಭಾವನೆಗಳನ್ನು ಆರೋಪಿಸುವುದಕ್ಕೆ ಉಪಯೋಗಿಸುವುದಾಗಿರುತ್ತದೆ. ಈ ಹೇಡಿತನ ಆಗಾಗ್ಗೆ ನಿಮ್ಮಲ್ಲೂ ಇಣುಕಬಹುದು. ಹಿಂದೆ ನಮ್ಮ ಬದುಕಲ್ಲಿ ನಾವು ಹೇಡಿತನದಿಂದ ಬದುಕಿದ್ದಕ್ಕೆ ನಾಚಿಕೆ ಬೇಡ ಒಟ್ಟಾರೆಯಾಗಿ
ಹೇಳುವುದಾದರೆ ಈ ಹೇಡಿತನವೆಂಬುದು ನಾವೆಲ್ಲರೂ deal ಮಾಡಲೇಬೇಕಾದ ಒಂದು ಅಂಶ ಅದು ನಮ್ಮ ಆಗಿರಬಹುದು ಅಥವಾ ಬೇರೆಯವರಲ್ಲಿ ಆಗಿರಬಹುದು. ಕೊನೆಯದಾಗಿ ಒಂದು ವಿಚಾರ, ಪ್ರತಿ ಹೊಸ ಶುರುವಿಗೂ ಮೊದಲ ಒಂದೊಂದೇ ಹೆಜ್ಜೆಯನ್ನು ಎತ್ತಿಡಬೇಕು. ಹೀಗೆ ಒಂದೊಂದೇ ಹೆಜ್ಜೆಗಳು ನಮ್ಮಲ್ಲಿನ ಹೇಡಿತನದ ಆಲೋಚನೆಗಳನ್ನು ಭಾವನೆಗಳನ್ನು ಸರಿಸಿ ಧೈರ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮದಾಗಲಿ.