Saturday, 7th September 2024

ಸಾರ್ವಜನಿಕ ಗಣೇಶೋತ್ಸವದ ಆಶಯ

-ವಿನಾಯಕ ಭಟ್

ಮಾದರಿ ಗಣೇಶೋತ್ಸವ ನಮ್ಮಲ್ಲೇ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ಯಶವಂತಪುರದಲ್ಲಿ ಇದು ನಡೆಯಲಿದೆ. ನಿಜವಾದ ಸಾಮಾಜಿಕ ಆಶಯಗಳಿಗೆ ಸ್ಪಂದಿಸುವ ಗಣೇಶೋತ್ಸವವಾಗಿ ಇದು ಆಚರಣೆ ಆಗುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.

ಸನಾತನ ಹಿಂದೂ ಧರ್ಮದ ಮುಖ್ಯ ಶಕ್ತಿಗಳಲ್ಲಿ ನಮ್ಮ ಹಬ್ಬಗಳೂ ಮಹತ್ವದ ಪಾತ್ರವನ್ನು ವಹಿಸುತ್ತವೆ. ಧರ್ಮ ಜಾಗೃತಿ, ಒಗ್ಗಟ್ಟು, ನಮ್ಮ ಮೂಲಬೇರುಗಳ ನೆನಹುಗಳನ್ನು ಹೊತ್ತು ತರುವುದರ ಜತೆಗೆ, ನಿತ್ಯ ಬದುಕಿನ ಜಂಜಾಟಗಳ ನಡುವೆಯೇ ಸಂಭ್ರಮವನ್ನು ತರುವುದು ಕೂಡಾ ಹಬ್ಬಗಳ ಅಗ್ಗಳಿಕೆ. ಕಾಲದಿಂದ ಕಾಲಕ್ಕೆ, ಹಬ್ಬಗಳ ಸ್ವರೂಪಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಕಂಡುಬಂದರೂ, ಸತ್ವ ಒಂದಿನಿತೂ ಕಡಿಮೆ ಆಗುವುದೇ ಇಲ್ಲ. ಅದಕ್ಕೆ ಕಾರಣ ನಮ್ಮ ಧರ್ಮದ ಭದ್ರಬುನಾದಿ ಹಾಗೂ ನಮ್ಮ ಸಾಂಸ್ಕೃತಿಕ ಬೇರುಗಳು ನಮ್ಮ ಜೀನ್ಸ್‌ನಲ್ಲಿ ಹಾಸುಹೊಕ್ಕಾಗಿ ಬಂದಿರುವುದು. ತಲತಲಾಂತರಗಳಿಂದ ಆಚರಿಸಿಕೊಂಡು
ಬಂದಿರುವ ಹಬ್ಬಗಳನ್ನು ಹತ್ತಿರದಿಂದ ನೋಡಿದಾಗ, ಅವುಗಳಲ್ಲಿ ಧರ್ಮೋನ್ನತಿಯ ಆಶಯಗಳೇ ವಿಶಿಷ್ಟವಾಗಿ ಕೆನೆಗಟ್ಟಿರುವುದು ಕಂಡುಬರುತ್ತದೆ. ಮುಕ್ಕೋಟಿ ದೇವತೆಗಳನ್ನು ಪೂಜಿಸುವ ಧರ್ಮ ನಮ್ಮದು. ನಮ್ಮಲ್ಲಿ ಎಲ್ಲ ದೇವಾನುದೇವತೆಗಳನ್ನೂ ಗೌರವಿಸುತ್ತೇವೆ. ಎಲ್ಲ ದೇವತೆಗಳೂ ಒಂದೊಂದು ತತ್ತ್ವಗಳ ಆಧಾರದಲ್ಲಿಯೇ ಬದುಕಿನ ಆಶಯಗಳನ್ನು, ದಾರಿಯನ್ನು, ಆದರ್ಶಗಳನ್ನು ಜನಮಾನಸದಲ್ಲಿ ಮೂಡಿಸುತ್ತವೆ.

ಅಂದರೆ ನಮ್ಮ ಧರ್ಮದಲ್ಲಿ ಉತ್ಸವ, ಹಬ್ಬ, ಪೂಜೆ, ಆಚರಣೆಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ, ಸಮಾಜದ ಸ್ವಾಸ್ಥ್ಯಕ್ಕೆ ಕಾರಣವಾಗುವ ಉದ್ದೇಶಗಳನ್ನು ಹೊಂದಿವೆ ಅನ್ನುವುದೂ ಸ್ಪಷ್ಟ. ಅಂತಹುದೇ ಒಂದು ಹಬ್ಬ- ಬರುತ್ತಿರುವ ಗಣೇಶೋತ್ಸವ. ಮನೆ-ಮನಗಳಲ್ಲಿ ಪ್ರಥಮ ಪೂಜಿತನಾದ ಗಣಾಧಿಪತಿ ವಿಘ್ನೇಶ್ವರ ಎಲ್ಲರನ್ನೂ ಪೊರೆಯುವ ದೇವರು. ಭಾದ್ರಪದ ಶುಕ್ಲದ ಚೌತಿಯಂದು ಗಣೇಶೋತ್ಸವದ ಹಬ್ಬ. ಮನೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಿ, ಸಂಭ್ರಮಿಸುವ ಪರ್ವದಿನ. ಮನೆಯ ಹಬ್ಬವಾಗಿದ್ದ ಈ ಆಚರಣೆಗೆ ಹಿಂದೂ ಸಮಾಜೋತ್ಸವದ ಮೆರುಗನ್ನು ತಂದುಕೊಟ್ಟವರು, ಉತ್ಸವಕ್ಕೆ ಸ್ವಾತಂತ್ರ್ಯ ಸಂಗ್ರಾಮದ ಹೊಳಪನ್ನು ಕೊಟ್ಟು, ಸಮಾಜದಲ್ಲಿ ಚೈತನ್ಯವನ್ನು ತುಂಬುವ ಹಬ್ಬವಾಗಿ ಹೊಸ ಚಿಂತನೆಯನ್ನು ತುಂಬಿದವರು ಮಾನ್ಯ ಬಾಲ ಗಂಗಾಧರ ತಿಲಕರು. ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಅವರದು ಎಂದು ಓದಿದ್ದೇವೆ. ಆ ಚಿಂತನೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮವನ್ನು ಕೊಟ್ಟಿದ್ದನ್ನೂ ನಮ್ಮ ಇತಿಹಾಸ ಹೇಳುತ್ತದೆ. ಅಲ್ಲಿಂದ ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ಇಂದಿಗೂ ಮುಂದುವರಿದುಕೊಂಡು ಬಂದಿದ್ದು, ಆ ಚಿಂತನೆಯ ಗಟ್ಟಿತನವನ್ನು ತೋರಿಸುತ್ತದೆ. ಜೊಳ್ಳಾದ ಯಾವ ಕಾರ್ಯಕ್ರಮವೂ ಹೆಚ್ಚು ದಿನ ನಡೆಯದು. ಆದರೆ ಈ ವಿಚಾರ ಮಾತ್ರ ಇಂದಿಗೂ ಪ್ರಸ್ತುತವೂ, ಪ್ರಭಾವಶಾಲಿಯೂ ಆಗಿದೆ.

ವಿಷಾದದ ಸಂಗತಿಯೆಂದರೆ, ಯಾವ ಕಾರ್ಯಕ್ರಮ ಸಮಾಜದಲ್ಲಿ ಹಿಂದೂ ಸಂಸ್ಕೃತಿಯ ಸತತ ಪುನರುಜ್ಜೀವನಕ್ಕೆ ಕಾರಣ ಆಗಬೇಕಿತ್ತೋ, ಅದು ಕೆಲವು ಕಡೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಪೂಜೆ, ಪುನಸ್ಕಾರಗಳಿಲ್ಲದ, ಸರಿಯಾದ ಸ್ವಚ್ಛ ಪರಿಸರ ಇಲ್ಲದ, ನಮ್ಮ ಸಂಸ್ಕೃತಿಯ ಲವಲೇಶಗಳಿಲ್ಲದ ಸಂಯೋಜನೆಗಳಿಂದಾಗಿ ಕೆಲವು ಸಾರ್ವಜನಿಕ ಗಣೇಶೋತ್ಸವಗಳು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಅಂಥ ಒಂದು ಕಾಲಘಟ್ಟದಲ್ಲಿ ಒಂದು ಮಾದರಿಯಾಗಿರುವ ಗಣೇಶೋತ್ಸವ ನಮ್ಮಲ್ಲೇ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಅದು ರಾಜ್ಯದ ರಾಜಧಾನಿ ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ಯಶವಂತಪುರ
ದಲ್ಲಿಯದು. ಅದೆಷ್ಟೋ ಅಪಸವ್ಯಗಳನ್ನು ಮಾಡುವ ಗಣೇಶೋತ್ಸವಗಳಿಗೆ ಬದಲಾಗಿ, ನಿಜವಾದ ಸಾಮಾಜಿಕ ಆಶಯಗಳಿಗೆ ಸ್ಪಂದಿಸುವ ಗಣೇಶೋತ್ಸವವಾಗಿ ಇದು ಆಚರಣೆ ಆಗುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಯಶವಂತಪುರದ ಗಣೇಶೋತ್ಸವವನ್ನು ಮಾದರಿಯಾಗಿಸಬೇಕೆಂದು ಇಲ್ಲಿನ ಮಹಾಗಣಪತಿ ಸೇವಾ ಸಮಿತಿ ಪಣ ತೊಟ್ಟಿದೆ. ಇಲ್ಲಿನ ಎಲ್ಲ ಕಾರ್ಯಕರ್ತರು ಹಿಂದೂ ಸಂಘಟನೆಗಳ ಒಕ್ಕೂಟವೆನ್ನಬೇಕು. ‘ವಿಶ್ವ ಶಾಂತಿಗಾಗಿ ಹಿಂದೂ ಧರ್ಮ’ ಎನ್ನುವ ಧ್ಯೇಯವಾಕ್ಯ ಈ ಗಣೇಶೋತ್ಸವ ಸಮಿತಿಯದ್ದು. ಸಾಯಿರಾಮ ಮಂದಿರ ಯಶವಂತಪುರ ಇಲ್ಲಿ ಕಳೆದ ವರ್ಷ ಕೂಡಾ ಮಾದರಿಯಾಗಿಯೇ ಗಣೇಶೋತ್ಸವದ ಆಚರಣೆ ನಡೆದಿತ್ತು. ಇಲ್ಲಿನ ಗಣೇಶೋತ್ಸವವು ಪುರುಸೊತ್ತಿದ್ದಾಗ ಅಥವಾ ವಾರಾಂತ್ಯದಲ್ಲಿ ಆಗುವ ಉತ್ಸವ ಅಲ್ಲ. ಈ ವರ್ಷ ಸೆಪ್ಟೆಂಬರ್ ೨೦ರಂದು ವಿಧ್ಯುಕ್ತವಾಗಿ ಗಣಹೋಮದೊಂದಿಗೆ ಗಣೇಶ ಪ್ರತಿಷ್ಠಾಪನೆ ನಡೆಯಲಿದೆ.

ಜತೆಗೆ, ದೇಶಭಕ್ತಿಯ ಜಾಗರಣಕ್ಕಾಗಿ ಧ್ವಜಾರೋಹಣ, ವಂದೇ ಮಾತರಂ ಪಠಣ ಕೂಡ ಇದೆ. ದೇವರ ಪೂಜೆಯ ಮಹತ್ವದಷ್ಟೇ, ದೇಶಭಕ್ತಿಯ ಮಹತ್ವವನ್ನು ಸಾರಿ ಹೇಳುತ್ತಲೇ ಗಣೇಶೋತ್ಸವದ ಆರಂಭ. ತಿಲಕರ ಆಶಯವೂ ಇದೇ ಆಗಿತ್ತಲ್ಲವೇ? ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೂಡಾ, ಪಾಶ್ಚಾತ್ಯ ಸಂಗೀತವೋ ಅಥವಾ ಇಂದಿನ ಚಿತ್ರವಿಚಿತ್ರ ಗೀತೆಗಳ ಗಾಯನವೋ ಇವುಗಳನ್ನ ಬದಿಗಿಟ್ಟು ಶುದ್ಧ ದೇಶೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗ ಸ್ಥಳೀಯರೇ ಆಗಿರುವ, ವಿವಿಧ ರಾಜ್ಯದ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ರಾಜಸ್ಥಾನಿ, ಗುಜರಾತಿ ಬಂಧುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಆಯೋಜಿಸಲ್ಪಟ್ಟಿವೆ. ಅಂದರೆ, ನಾವೆಲ್ಲ ಹಿಂದೂಗಳು, ನಾವೆಲ್ಲ ಭಾರತೀಯರು ಅನ್ನುವ ಘೋಷವಾಕ್ಯದ ಯಥಾವತ್ ಅನುಸರಣೆ ಪ್ರತಿದಿನದ ಕಾರ್ಯಕ್ರಮದಲ್ಲೂ ಕಾಣಸಿಗಲಿದೆ. ಇನ್ನು ಸಭಾ ಕಾರ್ಯಕ್ರಮಗಳ ಸಂಯೋಜನೆಯಲ್ಲೂ ಹಿಂದೂ ಧರ್ಮದ ಕುರಿತಾದ ಉಪನ್ಯಾಸಗಳು ಪ್ರತಿದಿನವೂ ಐದು ದಿನಗಳ ಕಾಲ ನಡೆಯಲಿದೆ. ಮುಖ್ಯ ಅತಿಥಿ ಕೂಡಾ ವಿಶೇಷವೇ. ಕಳೆದ ವರ್ಷ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಬಂದಿದ್ದರು. ಈ ವರ್ಷ ಪದ್ಮಶ್ರೀ ಪುರಸ್ಕೃತ ನಾಡೋಜ ಡಾ. ಮುನಿ ವೆಂಕಟಪ್ಪ ಬರಲಿದ್ದಾರೆ. ಇಂಥ ಮಹನೀಯರನ್ನು ಕರೆತಂದು ಜನರಿಗೆ ಪರಿಚಯ ಮಾಡಿಸಿ ಅವರ ಆದರ್ಶಗಳನ್ನು ಪ್ರಸ್ತುತಪಡಿಸುವ ವಿಶಿಷ್ಟ ಸಂಪ್ರದಾಯಕ್ಕೆ ಇಲ್ಲಿನ ಗಣೇಶೋತ್ಸವ ಸಮಿತಿ ಮುಂದಾಗಿರುವುದು ಹೆಮ್ಮೆಯ ಸಂಗತಿ.

ಇದೇ ಸೆಪ್ಟೆಂಬರ್ ೨೦ರಿಂದ ೨೫ರವರೆಗೆ ಯಶವಂತಪುರದಲ್ಲಿ ಮಾದರಿ ಗಣೇಶೋತ್ಸವ ನಡೆಯಲಿದೆ. ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಗಳು, ಜತೆಗೆ ದೇಶೀಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು.
ಕೊನೆಯ ದಿನ ‘ಹಿಂದುತ್ವ ಭಾರತ ಪ್ರದರ್ಶಿನಿ’ ಕಾರ್ಯಕ್ರಮ ಮತ್ತು ಶೋಭಾಯಾತ್ರೆ. ಪ್ರತಿಯೊಂದು ಹಂತದಲ್ಲೂ ಗಣೇಶೋತ್ಸವದ ನಿಜವಾದ ಆಶಯಗಳಾದ ಧರ್ಮಜಾಗೃತಿ, ದೇಶಭಕ್ತಿಯ ಜಾಗೃತಿಯನ್ನು ಉತ್ಸವ ಸಮಿತಿ ಆಲೋಚಿಸಿದೆ. ಇಂಥ ಒಂದು ಅದ್ಭುತ ಉತ್ಸವದಲ್ಲಿ ಹೆಚ್ಚು ಜನ ಪಾಲ್ಗೊಳ್ಳಲಿ, ದೇವರ ಆರಾಧನೆಯ ಜತೆಗೆ ಧರ್ಮಜಾಗೃತಿಯ ಇಂಥ ಕಾರ್ಯಕ್ರಮಗಳು ಹೆಚ್ಚಲಿ ಎಂಬುದು ಆಶಯ.
(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

error: Content is protected !!