ತಿಳಿರು ತೋರಣ
srivathsajoshi@yahoo.com
ತ್ರಿಲೋಕಗಳಲ್ಲಿ ಜುಜುಬಿ ಏಳು ಮಂದಿಯಷ್ಟೇ ಅಪ್ಸರೆಯರೇ? ಉಳಿದವರೆಲ್ಲ ಚೆಲುವೆಯರಲ್ಲವೇ? ಭೂಲೋಕದ ಲಲನೆಯರಿಗೆ ಈ ಸಂಗತಿ ಅಷ್ಟು ಹಿತವೆನಿಸಲಿಕ್ಕಿಲ್ಲ, ಜೀರ್ಣವಾಗಲಿಕ್ಕಿಲ್ಲ. ಆದರೆ ಗಾಬರಿಯಾಗಬೇಕಾದ್ದಿಲ್ಲ. ಅಪ್ಸರೆಯರ ಸಂಖ್ಯೆ ತುಂಬ ದೊಡ್ಡದಿದೆ. ಅವರಲ್ಲಿ ಎಲ್ಲರೂ ಸ್ವರ್ಗದಲ್ಲಿರುವವರೇ ಎಂದುಕೊಳ್ಳಬೇಕಿಲ್ಲ. ಭೂಲೋಕದಿಂದ ಹೋದವರೂ- ಮಿಸ್ ಯುನಿವರ್ಸ್, ಮಿಸ್ ವರ್ಲ್ಡ್ ಸ್ಪರ್ಧೆಗಳಲ್ಲಿ ವಿಜೇತರಾದವರೂ- ಇರಬಹುದು.
ಅಪ್ಸರೆಯರ ಹಿಂದೆ ಬಿದ್ದಿದ್ದೇನೆ ಎಂದು ಹೇಳಿದರೆ ಅಪಾರ್ಥವಾದೀತು! ಆದರೆ ಇಂದಿನ ತೋರಣದಲ್ಲಿ ಅಕ್ಷರಶಃ ಅಪ್ಸರೆಯೊಬ್ಬಳ ಹಿಂದೆ ಬೀಳುವ ಪ್ರಸಂಗ. ನಾನಷ್ಟೇ ಅಲ್ಲ, ನೀವೂ! ರೆಡಿ ಇದ್ದೀರಾ? ಅಪ್ಸರೆ ಎಂದೊಡನೆ ತತ್‌ಕ್ಷಣ ನಮ್ಮ ಮನಸ್ಸಿಗೆ ಹೊಳೆಯುವ ಹೆಸರುಗಳು ರಂಭೆ, ಊರ್ವಶಿ, ಮತ್ತು ಮೇನಕೆ. ಇಂಗ್ಲಿಷ್‌ನಲ್ಲಿ ಕೋಡ್ ವರ್ಡ್ ಬಳಸಿ ಹೇಳುವುದಾದರೆ ಖಿI. ಅದರ ಹಾಗೆಯೇ ಮತ್ತೇರಿಸುವ ಸಾಮರ್ಥ್ಯ ಈ ಮೂವರದು ಎಂದು ಸಹ ಅರ್ಥೈಸಬಹುದು.
ಇವರಿಗಿಂತಲೂ ತಿಲದಷ್ಟು ಹೆಚ್ಚೇ ಉತ್ತಮಳೆನಿಸುವ ಅಂದರೆ ಹೆಚ್ಚು ಸೌಂದರ್ಯವುಳ್ಳ ಅಪ್ಸರೆ ತಿಲೋತ್ತಮೆ. ಈ ನಾಲ್ವರಷ್ಟೇ ಅಲ್ಲ, ಅಮರಕೋಶ ದಲ್ಲಿ ಕೊಟ್ಟಿರುವ ‘ಊರ್ವಶೀ ಮೇನಕಾ ರಂಭಾ ಘೃತಾಚೀ ಚ ತಿಲೋತ್ತಮಾ| ಸುಕೇಶೀ ಮಂಜುಘೋಷಾದ್ಯಾಃ ಕಥ್ಯಂತೇಧಿ ಪ್ಸರಸೋ ಬುಧೈಃ’ ಶ್ಲೋಕದ ಪಟ್ಟಿಯಲ್ಲಿರುವ ಇನ್ನೂ ಮೂವರು ಸೇರಿದರೆ ಒಟ್ಟು ಏಳು ಅಪ್ಸರೆಯರು. ಇಷ್ಟೇನಾ? ತ್ರಿಲೋಕಗಳಲ್ಲಿ ಜುಜುಬಿ ಏಳು ಮಂದಿಯಷ್ಟೇ ಅಪ್ಸರೆಯರೇ? ಹಾಗಿದ್ದರೆ ಉಳಿದವರೆಲ್ಲ ಚೆಲುವೆಯರಲ್ಲವೇ? ಭೂಲೋಕದ ಲಲನೆಯರಿಗೆ ಈ ಸಂಗತಿ ಅಷ್ಟು ಹಿತವೆನಿಸಲಿಕ್ಕಿಲ್ಲ, ಜೀರ್ಣವಾಗಲಿಕ್ಕಿಲ್ಲ. ಆದರೆ ಗಾಬರಿಯಾಗಬೇಕಾದ್ದಿಲ್ಲ.
ಕುಮಾರವ್ಯಾಸನ ಲೆಕ್ಕದಲ್ಲಿ ಅಪ್ಸರೆಯರ ಸಂಖ್ಯೆ ತುಂಬ ದೊಡ್ಡದಿದೆ. ಅವರಲ್ಲಿ ಎಲ್ಲರೂ ಸ್ವರ್ಗದಲ್ಲಿರುವವರೇ ಎಂದುಕೊಳ್ಳಬೇಕಿಲ್ಲ. ಕುಮಾರ ವ್ಯಾಸನಿಗೆ ಪರಿಚಿತರು ಅಂದ ಮೇಲೆ ಭೂಲೋಕದಿಂದ ಹೋದವರೂ- ಆಗಿನ ಕಾಲದಲ್ಲಿ ಮಿಸ್ ಯುನಿವರ್ಸ್, ಮಿಸ್ ವರ್ಲ್ಡ್ ಸ್ಪರ್ಧೆಗಳಲ್ಲಿ ವಿಜೇತರಾ
ದವರೂ- ಇರಬಹುದು. ‘ಅರ್ಜುನನು ಇಂದ್ರನ ಆಸ್ಥಾನಕ್ಕೆ ಹೋದ ಸಂದರ್ಭ ಅಲ್ಲಿ ಕೋಟಿ ಸಂಖ್ಯೆಯಲ್ಲಿ ಅಪ್ಸರೆಯರು ಬಂದರು, ನೃತ್ಯಗಾಯನವೇ ಮೊದಲಾದ ಕಲೆಗಳಿಂದ ಮನೋರಂಜನೆ ನೀಡಿದರು’ ಎಂದು ಕುಮಾರವ್ಯಾಸ ಬಣ್ಣಿಸುತ್ತಾನೆ: ‘ವರತಿಲೋತ್ತಮೆ ರಂಭೆ ಮಧುರ| ಸ್ವರೆ ಘೃತಾಚಿ ಸುಕೇಶಿ ಗೌರೀ| ಶ್ವರಿ ವರೂಥಿನಿ ಪೂರ್ವಚಿತ್ತಿ ಸುಲೇಖೆ ಚಿತ್ರರಥಿ| ಸುರಭಿಗಂಧಿನಿ ಚಾರುಮುಖಿ ಸೌಂ| ದರಿಯನಿಽಯೂರ್ವಶಿ ಸುಲೋಚನೆ| ಸುರಸೆಯೆ ನಿಪಂಗನೆಯರೈದಿತು ಕೋಟಿ ಸಂಖ್ಯೆಯಲಿ||’ ಆಹಾ… ಒಬ್ಬೊಬ್ಬ ಅಪ್ಸರೆಯ ಹೆಸರೇ ಎಷ್ಟು ಮೋಹಕವಾಗಿದೆ!
ಈಗ, ಅಮರಕೋಶದ ಪಟ್ಟಿಯಲ್ಲೂ ಕುಮಾರವ್ಯಾಸನ ಯಾದಿಯಲ್ಲೂ ಇರುವ ಒಂದು ಹೆಸರು ‘ಘೃತಾಚಿ’ಯನ್ನು ಗಮನಿಸಿ. ಈಕೆಯ ಹಿಂದೆಯೇ ನಾವಿವತ್ತು ಬೀಳಲಿಕ್ಕಿರುವುದು. ಅರ್ಥಾತ್, ಈಕೆಯ ಪೂರ್ವಾಪರ ವೃತ್ತಾಂತವನ್ನು ತಿಳಿಯಲಿಕ್ಕಿರುವುದು. ಪುರಾಣಪಾತ್ರಗಳ ಸ್ಥೂಲ ಪರಿಚಯವನ್ನು ಸಾಮಾನ್ಯವಾಗಿ ನಾನು ‘ಪುರಾಣನಾಮ ಚೂಡಾಮಣಿ’ ಗ್ರಂಥದಿಂದ ಕಂಡುಕೊಳ್ಳುತ್ತೇನೆ. ಇದೊಂಥರದಲ್ಲಿ ಪೌರಾಣಿಕ ಹೆಸರುಗಳ ನಿಘಂಟು ಇದ್ದಂತೆ. ನಾನು ಆಗಾಗ ಪರಾಮರ್ಶಿಸುತ್ತಿರುತ್ತೇನೆ. ರಸವತ್ತಾದ ಕಥೆಗಳು ಉಪಕಥೆಗಳು ಇದರಲ್ಲಿ ಸಿಗುತ್ತವೆ.
ಘೃತಾಚಿ ಅಪ್ಸರೆಯ ಬಗ್ಗೆ ಈ ಗ್ರಂಥದಲ್ಲಿರುವ ವಿವರ ನೋಡಿ: ‘ಒಮ್ಮೆ ಈಕೆ ದಿವ್ಯಾಲಂಕಾರಭೂಷಿತೆಯಾಗಿ ಸಂಚರಿಸುತ್ತಿದ್ದಾಗ, ದೇವತೆಗಳ ಬಡಗಿಯಾದ ವಿಶ್ವಕರ್ಮನು ಈಕೆಯಲ್ಲಿ ಮೋಹಿತನಾದನು. ಘೃತಾಚಿ ಸಮ್ಮತಿಸದಿದ್ದಾಗ ವಿಶ್ವಕರ್ಮನು ಈಕೆಯನ್ನು ಭೂಲೋಕದಲ್ಲಿ ಜನಿಸುವಂತೆ ಶಾಪವಿತ್ತನು. ಇವಳೂ ವಿಶ್ವಕರ್ಮನನ್ನು ಅಂತೆಯೇ ಶಪಿಸಿದಳು. ಬಳಿಕ ಘೃತಾಚಿಯು ಪ್ರಯಾಗ ಕ್ಷೇತ್ರದಲ್ಲಿ ಒಬ್ಬ ಗೊಲ್ಲನ ಮಗಳಾಗಿ ಹುಟ್ಟಿದಳು. ವಿಶ್ವಕರ್ಮನು ಅಲ್ಲೇ ಆಸುಪಾಸಿನಲ್ಲಿ ಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿದನು. ಒಂದು ದಿನ ಘೃತಾಚಿ ವಿಶ್ವಕರ್ಮನನ್ನು ಕಂಡಳು. ಮೊದಲ ನೋಟದಲ್ಲೇ ಮೋಹಗೊಂಡಳು. ಇಬ್ಬರಿಗೂ ಹಿಂದಿನ ಕಥೆ ನೆನಪಿಗೆ ಬಂತು.
ಬೇಗನೆ ಮನುಷ್ಯಜನ್ಮವನ್ನು ತೊಲಗಿಸಿಕೊಳ್ಳಬೇಕೆಂಬ ಆಸೆಯಿಂದ ಇಬ್ಬರೂ ಕಲೆತರು. ಸುಖಸಂಸಾರದಲ್ಲಿ ಅನೇಕ ಮಕ್ಕಳಿಗೆ ಜನ್ಮನೀಡಿದ ಮೇಲೆ ದೇಹತ್ಯಾಗ ಮಾಡಿ ತಮ್ಮ ಪೂರ್ವರೂಪವನ್ನು ಹೊಂದಿದರು. ಇಂತು ಇವರಿಬ್ಬರೂ ಪರಸ್ಪರ ಶಾಪದಿಂದ ಭೂಲೋಕದಲ್ಲಿದ್ದಾಗ ಹುಟ್ಟಿದ ಮಕ್ಕಳೇ
ಅಕ್ಕಸಾಲಿಗರು, ಬಡಗಿಗಳು, ಕಂಬಾರರು, ಕುಲುಮೆ ಕೆಲಸ ಮಾಡುವವರು ಮತ್ತು ಶಿಲ್ಪಿಗಳು ಎಂದು ಹೇಳಲಾಗಿದೆ.’- ಇದು ಬ್ರಹ್ಮವೈವರ್ತ ಪುರಾಣದಲ್ಲಿ ಬರುವ ಉಲ್ಲೇಖವೆಂದೂ ಅಲ್ಲೇ ನಮೂದಿಸಿದ್ದಾರೆ.
ವಿಶ್ವಕರ್ಮನ ವೃತ್ತಿಕೌಶಲ ಮತ್ತು ಘೃತಾಚಿಯ ಚೆಲುವು- ಇವೆರಡೂ ತಮಗೆ ವಂಶಪಾರಂಪರ್ಯವಾಗಿ ಬಳುವಳಿಯಂತೆ ಬಂದಿವೆ ಎಂದು ಹೆಮ್ಮೆಪಟ್ಟುಕೊಳ್ಳಬಹುದು ಈ ಎಲ್ಲ ಕುಲಕಸುಬುದಾರರು. ಬೇರೆ ಕೆಲವು ಆಕರಗ್ರಂಥಗಳಲ್ಲಿ ವಿಶ್ವಕರ್ಮ-ಘೃತಾಚಿ ಜೋಡಿಯ ಕಥೆ ಬೇರೆಯದೇ ಇದೆ. ಅದರ ಪ್ರಕಾರ, ವಿಶ್ವಕರ್ಮನು ಚಿತ್ರಾಂಗದೆಯೆಂಬ ತನ್ನ ಮಗಳ ಮೇಲೆ ಕಿಂಚಿತ್ತೂ ವಾತ್ಸಲ್ಯವಿಲ್ಲದೆ ಸಂಬಂಧವನ್ನೇ ತೊರೆದುಕೊಂಡಿದ್ದನು. ಅದರಿಂ
ದಾಗಿ ಆಕೆ ವೈವಾಹಿಕ ಸುಖದಿಂದಲೂ ವಂಚಿತಳಾಗುವಂತಾಯಿತು. ಇದನ್ನು ತಿಳಿದ ಋತಧ್ವಜ ಎಂಬ ಋಷಿಯು ವಿಶ್ವಕರ್ಮನು ವಾನರನಾಗಲೆಂದು ಶಾಪವಿತ್ತನು.
ವಿಶ್ವಕರ್ಮ ವಾನರನಾಗಿ ಕಾಡುಮೇಡುಗಳಲ್ಲಿ ವಾಸಿಸತೊಡಗಿದನು. ಹೀಗೆ ಒಮ್ಮೆ, ಹಲವಾರು ವರ್ಷಗಳ ಕಾಲ ಆಲದ ಮರವೊಂದಕ್ಕೆ ಕಟ್ಟಿ ಹಾಕಲ್ಪಟ್ಟಿದ್ದ ಜಾಬಾಲಿ ಎಂಬ ಋಷಿಯನ್ನು ವಾನರನಾಗಿದ್ದ ವಿಶ್ವಕರ್ಮನು ಬಂಧನದಿಂದ ಬಿಡಿಸಿದನು. ಇದನ್ನರಿತ ಋತಧ್ವಜ ಋಷಿ ಸಂಪ್ರೀತನಾಗಿ ಬೇಕಾದ ವರವನ್ನು ಕೇಳುವಂತೆ ವಾನರನಿಗೆ ಅನುಗ್ರಹಿಸಿದರು. ಆಗ ಆ ವಾನರನು ‘ಮುನಿವರ್ಯ! ನಾನು ಚಿತ್ರಾಂಗದೆಯ ತಂದೆ ವಿಶ್ವಕರ್ಮ. ತಮ್ಮದೇ ಶಾಪಕ್ಕೊಳಗಾಗಿ ಕಪಿಯಾಗಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಬೇಕಾಗಿ ಬೇಡಿಕೊಳ್ಳುತ್ತೇನೆ. ಈ ಶಾಪದಿಂದ ಮುಕ್ತಗೊಳಿಸಿ ಪುನಃ ನನಗೆ ಮಾನವ ದೇಹವನ್ನು ಅನುಗ್ರಹಿಸಬೇಕೆಂದು ಕೋರಿಕೊಳ್ಳುತ್ತೇನೆ’ ಎಂದು ವಿನಮ್ರವಾಗಿ ಕೇಳಿಕೊಂಡನು.
ಆಗ ಋತಧ್ವಜರು, ‘ಅಷ್ಟು ಸುಲಭವಾಗಿ ಶಾಪವಿಮೋಚನೆ ಆಗುವುದಿಲ್ಲ. ವಾನರ ರೂಪದಲ್ಲಿರುವ ನೀನು ಅಪ್ಸರೆ ಘೃತಾಚಿಯನ್ನು ಸೇರಿದರೆ
ನಿಮ್ಮಿಬ್ಬರಿಂದಾಗುವ ಮಗುವಿನ ಜನನದ ಸಂದರ್ಭದಲ್ಲಿ ನಿನ್ನ ಶಾಪವಿಮೋಚನೆಯೂ ಆಗುತ್ತದೆ’ ಎಂದು ಆಶೀರ್ವದಿಸಿದರು. ಅಪ್ಸರೆ ಘೃತಾಚಿಗೆ ಆ ಕಪಿಯ ನಿಜ ಸಂಗತಿ ತಿಳಿದುಬಂದು ತಾನೂ ಒಬ್ಬ ಕಪಿಯಾಗಿ ಮಾರ್ಪಟ್ಟಳು. ಅವರಿಬ್ಬರೂ ಸೇರಿದರು. ಹತ್ತು ತಿಂಗಳ ಬಳಿಕ ಅವರಿಗೆ ‘ನಳ’ ಎಂಬ ಮಗ
ಹುಟ್ಟಿದನು, ಅಂದೇ ವಿಶ್ವಕರ್ಮನ ಶಾಪವಿಮೋಚನೆಯೂ ಆಯಿತು. ಈ ಮೇಧಾವಿ ನಳನೇ ರಾಮಾಯಣದಲ್ಲಿ ಲಂಕೆಗೆ ಸೇತುವೆ ನಿರ್ಮಾಣ ಪ್ರಾಜೆಕ್ಟ್‌ನಲ್ಲಿ ಚೀಫ್ ಎಂಜಿನಿಯರ್. ಈತ ನೀರಿನಲ್ಲಿ ಹಾಕಿದ ವಸ್ತು ಮುಳುಗದ ಹಾಗೆ ತಂದೆ ವಿಶ್ವಕರ್ಮನೇ ಈತನಿಗೆ ವರ ಕೊಟ್ಟಿದ್ದನು. ಅದರಂತೆಯೇ
ನೀರಿನ ಮೇಲೆ ತೇಲುವ ಕಲ್ಲುಗಳಿಂದ ಸೇತುವೆ ನಿರ್ಮಾಣ ಸಾಧ್ಯವಾಯಿತು. ಆಮೇಲಿನ ಕಥೆ ನಮಗೆಲ್ಲ ಗೊತ್ತಿದ್ದದ್ದೇ.
ಘೃತಾಚಿಯು ವಿಶ್ವಕರ್ಮನನ್ನು ಸೇರಿದ ಕಥೆಗಳನ್ನು ನಾನು ಮೊದಲಿಗೆ ಎತ್ತಿಕೊಂಡಿದ್ದು ವಿಶ್ವಕರ್ಮ ಒಂಥರದಲ್ಲಿ ನಮ್ಮೆಲ್ಲರಂತೆ ಸಾಮಾನ್ಯ ಮನುಷ್ಯ, ಅಂಥವನಿಗೂ ಅಪ್ಸರೆ ಸಿಕ್ಕಿದಳು ಎಂಬುದನ್ನು ಹೈಲೈಟ್ ಮಾಡುವುದಕ್ಕೆ. ಆದರೆ ಅಪ್ಸರೆ ಘೃತಾಚಿ ಕೆಲವು ಹೈ-ಪ್ರೊಫೈಲ್ ಪವರ್‌ಫುಲ್ ಋಷಿಮುನಿ ಗಳನ್ನೂ ಸೇರಿದ್ದಾಳೆ. ತನ್ಮೂಲಕ ಪವರ್‌ಫುಲ್ ಸಂತತಿಗೆ ಕಾರಣಳಾಗಿದ್ದಾಳೆ. ಅದರಲ್ಲಿ ಮೊತ್ತಮೊದಲಿಗೆ ಉಲ್ಲೇಖಿಸಬಹುದಾದದ್ದು ದ್ರೋಣಾ ಚಾರ್ಯರ ಜನನದ ಕಥೆ. ಮಹಾತಪಸ್ವಿ ಭರದ್ವಾಜ ಮುನಿ ಗಂಗಾನದಿಯ ತೀರದಲ್ಲಿ ತಪಸ್ಸನ್ನಾಚರಿಸುತ್ತಿದ್ದರು.
ವ್ರತಾಚರಣೆಯಲ್ಲಿ ಅತ್ಯಂತ ಕಟ್ಟುನಿಟ್ಟಿನವರು ಅವರು. ಒಂದು ದಿನ ಸ್ನಾನಾರ್ಥವಾಗಿ ಗಂಗೆಯಲ್ಲಿ ಕಾಲಿಟ್ಟರು. ಮೊದಲೇ ಅಲ್ಲಿಗೆ ಬಂದಿದ್ದು ಸ್ನಾನ ಮುಗಿಸಿದ್ದ ಅಪ್ಸರೆ ಸ್ತ್ರೀಯೊಬ್ಬಳನ್ನು ಕಂಡರು. ಆಕೆ ಬೇರಾರೂ ಅಲ್ಲ, ಘೃತಾಚಿ! ಆಕೆ ವಸ್ತ್ರಧಾರಣೆ ಮಾಡುವಾಗ ಗಾಳಿ ಬೀಸಿ ಅವಳ ವಸ್ತ್ರ ಹಾರಿಹೋಯಿತು. ಆಕೆಯ ರೂಪಾತಿಶಯಕ್ಕೆ ಒಂದು ಕ್ಷಣ ಸ್ತಂಭೀಭೂತರಾದ ಭರದ್ವಾಜರು ಆಕೆಯನ್ನೇ ನೋಡತೊಡಗಿದರು. ಆಕೆಯೂ ಇವರನ್ನು ನೋಡಿ ಇಷ್ಟಪಟ್ಟಳು. ಅಷ್ಟರಲ್ಲಿ ಭರದ್ವಾಜರ ದಿವ್ಯತೇಜಸ್ಸು ಸ್ಖಲನವಾಯಿತು. ಅದನ್ನು ಅವರು ಒಂದು ದೊನ್ನೆ(ಪಾತ್ರೆ)ಯಲ್ಲಿಟ್ಟರು. ಕಾಲಕ್ರಮದಲ್ಲಿ ಅದರಿಂದ ಒಬ್ಬ ತೇಜೋಮಯ ಗಂಡು ಶಿಶುವು ಹೊರಬಂದನು. ದೊನ್ನೆಯಲ್ಲಿ ಜನಿಸಿದ ಆ ಸುತನಿಗೆ ದ್ರೋಣನೆಂದು ಹೆಸರಿಟ್ಟರು.
ಈ ಪ್ರಸಂಗ ವನ್ನು ಕುಮಾರವ್ಯಾಸನೂ ಘೃತಾಚಿಯ ಹೆಸರು ಉಲ್ಲೇಖಿಸದೆ ಬರೀ ದಿವಿಜಾಂಗನೆ ಎಂದಷ್ಟೇ ಹೇಳಿ ಬರೆದಿದ್ದಾನೆ: ‘ಮುನಿ ಭರದ್ವಾಜಾಖ್ಯನಿರ್ದನು| ಘನ ತಪೋನಿಷ್ಠೆಯಲಿ ದಿವಿಜಾಂ| ಗನೆಯ ಕಂಡನು ಗಾಯವಡೆದನು ಮದನನೆಸುಗೆಯಲಿ| ತನು ಪರಿಚ್ಯುತ ವೀರ್ಯವನು ಸ| ತ್ಕನಕ ಕಲಶದೊಳಿರಿಸಲಲ್ಲಿಯೆ| ಜನಿಸಿದನು ದ್ರೋಣಾಭಿದಾನನು ಮುನಿಯ ದೆಸೆಯಿಂದ||’ ಅಂದರೆ, ಭರದ್ವಾಜ ಮುನಿಗಳು ತಪೋನಿಷ್ಠರಾಗಿದ್ದಾಗ ಒಬ್ಬ ಅಪ್ಸರೆ(ಘೃತಾಚಿ)ಯನ್ನು ಕಂಡು ಕಾಮಜ್ವರಿತರಾದರು.
ಮದನನ ಬಾಣದ ಆಕ್ರಮಣದಿಂದ ಗಾಯಗೊಂಡ ಮುನಿಯು ಆ ಸಮಯದಲ್ಲಿ ಸ್ಖಲಿಸಿದ ತನ್ನ ವೀರ್ಯವನ್ನು ಒಂದು ಚಿನ್ನದ ಕಲಶದಲ್ಲಿಟ್ಟರು. ಆ ಕಲಶದಿಂದ ಮುಂದೆ ಒಂದು ಗಂಡು ಮಗು ಜನಿಸಿತು. ಅದೇ ಬೆಳೆದು ದ್ರೋಣಾಚಾರ್ಯರಾದದ್ದು ಎಂದು ವಿವರಣೆ. ದ್ರೋಣ ಎಂದರೆ ಈಗ ನಾವು ಬಾಳೆಲೆಯಿಂದ ಮಾಡುವ ದೊನ್ನೆ ಎಂದುಕೊಳ್ಳಬಹುದಾದರೂ ಕುಮಾರವ್ಯಾಸನ ಪ್ರಕಾರ ಅದು ಬಹುಮಟ್ಟಿಗೆ ತಂಬಿಗೆ ಗಾತ್ರದ ಪಾತ್ರೆ. ‘ಕುಂಭದ್ರೋಣ ಮಳೆ’ ಎಂಬ ನುಡಿಗಟ್ಟು ಬಂದಿರುವುದಕ್ಕೂ ಇದೇ ಕಾರಣ. ಕುಂಭ ಅಥವಾ ಮಡಕೆಯಿಂದ, ಮತ್ತು ದ್ರೋಣ ಅಥವಾ ತಂಬಿಗೆಯಿಂದ, ನೀರು ಸುರಿದರೆ ಆ ಧಾರೆ ಎಷ್ಟು ದಪ್ಪವಿರುತ್ತದೆಯೋ ಅಷ್ಟು ದಪ್ಪ ಧಾರೆಯ ಮಳೆ ಬಿದ್ದರೆ ಅದೇ ಕುಂಭದ್ರೋಣ ಮಳೆ!
ಘೃತಾಚಿಯ ಇನ್ನೊಂದು ಪವರ್‌ಫುಲ್ ಪ್ರಣಯಪ್ರಸಂಗ ಕೃಷ್ಣದ್ವೈಪಾಯನ ವ್ಯಾಸಮಹರ್ಷಿಯ ಜೊತೆಗಿನದು. ವ್ಯಾಸರಿಗೆ ಒಮ್ಮೆ ಒಬ್ಬ ಪುತ್ರನನ್ನು ಪಡೆಯಬೇಕೆಂಬ ಇಚ್ಛೆಯಾಯಿತು, ಆದರೆ ವಿವಾಹವಾಗುವ ಮನಸ್ಸಿಲ್ಲ. ಮತ್ತೆ ಇಚ್ಛೆ ಹೇಗೆ ಕೈಗೂಡುವುದು? ಜಗನ್ಮಾತೆ ದೇವಿಯನ್ನು
ಆರಾಧಿಸು ವಂತೆ ದೇವರ್ಷಿ ನಾರದರು ನಿರ್ದೇಶಿಸಿದರು. ಆ ಪ್ರಕಾರ ವ್ಯಾಸಮಹರ್ಷಿ ಮೇರು ಪರ್ವತಕ್ಕೆ ಹೋಗಿ ಭಗವತಿ ದೇವಿಯನ್ನು ಉದ್ದೇಶಿಸಿ ಧ್ಯಾನ ಮಾಡಲಾರಂಭಿಸಿದರು. ಹಲವು ವರ್ಷಗಳು ಕಳೆದವು. ಒಂದು ದಿನ ಮಹಾದೇವ ಮತ್ತು ಜಗನ್ಮಾತೆಯು ಪ್ರತ್ಯಕ್ಷವಾಗಿ ವ್ಯಾಸ ಮಹರ್ಷಿಯ ಮನೋ ಭಿಲಾಷೆ ಈಡೇರುವಂತೆ ಅನುಗ್ರಹಿಸಿದರು.
ಅವಿವಾಹಿತನಾಗಿಯೇ ಸಂತಾನವನ್ನು ಪಡೆಯುವುದಾದರೂ ಹೇಗೆಂದು ವ್ಯಾಸರು ಬಹಳ ಗೊಂದಲದಲ್ಲಿ ಸಿಕ್ಕಿಕೊಂಡಿದ್ದರು. ಆಗ ಅವರಿಗೆ ಅಪ್ಸರೆ ಘೃತಾಚಿಯು ಕಾಣಿಸಿಕೊಂಡಳು. ಯಜ್ಞ ಮಾಡಲು ಸಜ್ಜಾಗಿದ್ದ ವ್ಯಾಸರು ಅವಳ ರೂಪಲಾವಣ್ಯ ಕಂಡು ತೀವ್ರವಾಗಿ ಆಕರ್ಷಿತರಾದರು. ಆಗ ಅವರ ರೇತಸ್ಸು ಯಜ್ಞಕುಂಡದ ಪಕ್ಕದಲ್ಲಿದ್ದ ಅರಣಿಮಥನ ಕಾಷ್ಠದ ಮಧ್ಯದಲ್ಲಿ ಸಂಗ್ರಹಿಸಿಕೊಂಡಿತು. ಈ ಪರಿಸ್ಥಿತಿಯಲ್ಲಿ ವ್ಯಾಸರ ಕಣ್ಣಿಗೆ ಬಿದ್ದರೆ ತಾನು ಶಾಪಗ್ರಸ್ತಳಾಗಿಬಿಡುವ ಭಯದಿಂದ ಘೃತಾಚಿಯು ತನ್ನ ಮಾಯಾಶಕ್ತಿಯಿಂದ ಶುಕಿ(ಹೆಣ್ಣು ಗಿಳಿ)ಯ ರೂಪ ಧರಿಸಿ ಹಾರಿಹೋದಳು. ವ್ಯಾಸರ ವೀರ್ಯದಿಂದ ಜನಿಸಿದ ಆ ಗಂಡು ಮಗು ದೊಡ್ಡವನಾಗಿ ಶುಕ ಮಹರ್ಷಿ ಎನಿಸಿದನು.
ಮಹಾಭಾರತ ಕಥೆಯನ್ನು ಗಂಧರ್ವರಿಗೆ ಹೇಳಿದ, ಭಾಗವತವನ್ನು ಪರೀಕ್ಷಿತರಾಜನಿಗೆ ಹೇಳಿದ ಶುಕ ತಾತ ತಪೋನಿಧಿ ಈತನೇ. ಮತ್ತೊಂದು ಕಥೆ ರಾಮಾಯಣದಲ್ಲಿ ಬರುವ ಕುಶನಾಭನದು. ಚಂದ್ರವಂಶದ ಕುಶ ಚಕ್ರವರ್ತಿಯ ನಾಲ್ಕು ಮಕ್ಕಳಲ್ಲೊಬ್ಬ ಕುಶನಾಭ. ಈತ ಮಹೋದಯ ಎಂಬ ರಾಜ್ಯವನ್ನು ಸ್ಥಾಪಿಸಿ ಅಲ್ಲಿನ ಅರಸನಾಗಿದ್ದನು. ಒಮ್ಮೆ ಅಪ್ಸರೆ ಘೃತಾಚಿಯನ್ನು ನೋಡಿದ ಕುಶನಾಭನು ಅವಳ ಸೌಂದರ್ಯಕ್ಕೆ ಮನಸೋತನು. ಕಾಲಾಂತರದಲ್ಲಿ ಕುಶನಾಭನ ವಿವಾಹವು ಅಪ್ಸರೆ ಘೃತಾಚಿಯ ಜೊತೆಯೇ ನೆರವೇರಿತು. ಅವರಿಗೆ ಅಲೌಕಿಕ ಸೌಂದರ್ಯವಿದ್ದ ನೂರು ಜನ ಹೆಣ್ಣು ಮಕ್ಕಳು ಜನಿಸಿದರು. ಈ ಶತಪುತ್ರಿಯರದೊಂದು ಸ್ವಾರಸ್ಯಕರ ಉಪಕಥೆ ಇದೆ. ಒಮ್ಮೆ ಅವರೆಲ್ಲರೂ ಪರ್ವತದ ಮೇಲೆ ಹಾಡು ಹಾಡುತ್ತ, ವೀಣೆ
ನುಡಿಸುತ್ತ, ಆನಂದದಿಂದ ಸಮಯ ಕಳೆಯುತ್ತಿದ್ದಾಗ ಅಲ್ಲಿಗೆ ವಾಯುದೇವನು ಬಂದನು. ಅನುಪಮ ಸುಂದರಿಯರಾಗಿದ್ದ ಅವರ ರೂಪಕ್ಕೆ ಬಲಿಯಾಗಿ ವಾಯುವು ಕಾಮಮೋಹಿತನಾದನು.
ಸಕ್ಕರೆ ಮಾತುಗಳಿಂದ ಅವರನ್ನು ಮರುಳುಮಾಡಲು ಯತ್ನಿಸಿದನು. ಅವರೊಡನೆ ವಿವಾಹವಾಗುವ ಪ್ರಸ್ತಾವವಿಟ್ಟನು. ಆ ಕನ್ಯೆಯರು ವಾಯುವಿನ ಬೇಡಿಕೆಯನ್ನು ಖಡಾಖಂಡಿತ ನಿರಾಕರಿಸಿದರು. ಅದರಿಂದ ಕೋಪಗೊಂಡ ವಾಯುವು ಆ ಮೋಹಕ ರೂಪದ ಯುವತಿಯರಿಗೆ ಭೂಷಣಪ್ರಾಯವಾದ ಸೌಂದರ್ಯವೇ ಕುಂದುಹೋಗಬೇಕೆಂದು ಅವರ ದೇಹದೊಳಗೆ ಸೇರಿಕೊಂಡು ಅವರ ಸುಂದರವಾದ ಮೈಮಾಟವನ್ನು ಕೆಡವಿ ವಿಕಾರಗೊಳಿಸಿ ಗೂನು ಬೆನ್ನಿನ ಕುಬ್ಜೆಯರನ್ನಾಗಿ ಮಾಡಿಬಿಟ್ಟನು. ವಾಯುವಿನ ಕಾಮುಕತನವನ್ನು ಯಶಸ್ವಿಯಾಗಿ ಎದುರಿಸಿದ ಪುತ್ರಿಯರ ಧೈರ್ಯವನ್ನು ತಂದೆ ಕುಶನಾಭ ಮೆಚ್ಚಿದನು.
ಆದರೂ ಮಕ್ಕಳ ದುಃಸ್ಥಿತಿಯನ್ನು ಕಂಡು ಬಹಳ ನೊಂದುಕೊಂಡನು. ಅಂದಿನಿಂದ ಮಹೋದಯ ನಗರಿಯು ಕನ್ಯಾಕುಬ್ಜ ಎಂದರೆ ಕುಬ್ಜ ಕನ್ಯೆಯರ ರಾಜ್ಯ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತು. ಮುಂದೆ ಕುಶನಾಭನು ಶತಪುತ್ರಿಯರನ್ನು ಬ್ರಹ್ಮದತ್ತನಿಗೆ ವಿವಾಹ ಮಾಡಿಕೊಟ್ಟನು. ಪತಿಯ ಪ್ರಥಮ
ಸ್ಪರ್ಶದಿಂದ ಅವರ ಕುರೂಪವು ಇಲ್ಲದಂತಾಗಿ ಅವರು ಮೊದಲಿನಂತೆ ಸೌಂದರ್ಯಸಂಪನ್ನೆಯರಾದರು. ಪುತ್ರಿಯರ ವಿವಾಹವಾದ ಮೇಲೆ, ತನಗೊಬ್ಬ ಮಗನೂ ಇದ್ದರೆ ಚೆನ್ನಿತ್ತು ಅನಿಸಿತು ಕುಶನಾಭನಿಗೆ. ಘೃತಾಚಿ ಮತ್ತು ಕುಶನಾಭ ದಂಪತಿ ಪುತ್ರಕಾಮೇಷ್ಟಿ ಯಾಗ ಕೈಗೊಂಡರು. ಬ್ರಹ್ಮನ ಮಾನಸಪುತ್ರ
ನಾದ ಕುಶ ಅಂದರೆ ಕುಶನಾಭನ ತಂದೆಯೇ ಅಲ್ಲಿ ಆವಿರ್ಭವಿಸಿ ‘ಹೇ ಪುತ್ರ! ನಿನಗೆ ನಿನ್ನಂತೆಯೇ ಕೀರ್ತಿವಂತನಾದ ಮತ್ತು ಧಾರ್ಮಿಕನಾದ ಗಾಧಿ ಎಂಬ ಮಗನ ಅನುಗ್ರಹವಾಗುತ್ತದೆ.
ಅವನಿಂದಾಗಿ ಲೋಕದಲ್ಲಿ ನಿನ್ನ ಕೀರ್ತಿಯೂ ಶಾಶ್ವತವಾಗಿ ಮೆರೆಯುವಂತಾಗುತ್ತದೆ.’ ಎಂದು ಆಶೀರ್ವದಿಸಿದನು. ಕುಶನ ಆಶೀರ್ವಾದ ಫಲಿಸಿ ಅಪ್ಸರೆ ಘೃತಾಚಿಯಲ್ಲಿ ಗಾದಿ ಎಂಬ ಪುತ್ರರತ್ನನ ಜನನವಾಯಿತು. ಈ ಗಾಧಿಯ ಮಗನೇ ಮಹರ್ಷಿ ವಿಶ್ವಾಮಿತ್ರ. ಕುಶನ ವಂಶದವನಾದ್ದರಿಂದ ಕೌಶಿಕ ಎಂದು ಮೂಲ ಹೆಸರು. ಅಷ್ಟಾಗಿ, ಮುಂದೊಮ್ಮೆ ವಿಶ್ವಾಮಿತ್ರನೂ ಘೃತಾಚಿ (ತಂದೆಯ ಕಡೆಯಿಂದ ಅಜ್ಜಿ)ಯಲ್ಲಿ ಆಸಕ್ತನಾದವನೇ! ‘ಘೃತಾಚಿಯ ಸಹವಾಸ ದಲ್ಲಿ ಕಳೆದ ಹತ್ತು ವರ್ಷಗಳ ಕಾಲವೂ ಒಂದು ದಿನದಂತೆ ಮಾತ್ರ ಭಾಸವಾಯಿತೆಂದು ವಿಶ್ವಾಮಿತ್ರನಿಗನಿಸಿತು’ ಎಂಬ ಉಲ್ಲೇಖವಿದೆ ರಾಮಾಯಣ ದಲ್ಲೇ.
ಆದರೆ ಇಂಥವನ್ನು ನಾವು ನಮ್ಮ ಮೂಗಿನ ನೇರದಲ್ಲಿ ಅಳೆದು ಛೀ ಥೂ ಎನ್ನಬಾರದು. ಅಸಹ್ಯ ಪಡಬಾರದು. ಇವೆಲ್ಲವೂ ಜಗನ್ನಿ ಯಾಮಕನ ಕಪಟನಾಟಕ ಸೂತ್ರಗಳು ಎಂದಷ್ಟೇ ಪರಿಗಣಿಸಬೇಕು. ಗೌರವದಿಂದ ಕಾಣಬೇಕು. ಘೃತಾಚಿಯ ವಂಶವೃಕ್ಷದ ಇನ್ನೊಂದು ಕವಲು ಹೀಗಿದೆ: ಭೃಗು ಮುನಿಗಳಿಗೆ ಚ್ಯವನ ಎಂಬ ಮಗ. ಚ್ಯವನನ ಮಗ ಪ್ರಮತಿ. ಧಾರ್ಮಿಕನಾದ ಪ್ರಮತಿ ಮತ್ತು ಅಪ್ಸರೆ ಘೃತಾಚಿ ವಿವಾಹವಾದರು. ಅವರಿಗೆ ಜನಿಸಿದ ಮಗನೇ ರುರು. ಆತನೂ ದೊಡ್ಡವನಾಗಿ ಒಬ್ಬ ಮುನಿಯಾದನು. ಪ್ರಮದ್ವರೆಯನ್ನು ಮದುವೆಯಾದನು. ಪ್ರಮದ್ವರೆಯದೂ ಒಂದು ಕುತೂಹಲಕಾರಿ
ಕಥೆ. ಈಕೆ ವಿಶ್ವಾವಸುವೆಂಬ ಗಂಧರ್ವನಿಂದ ಅಪ್ಸರೆ ಮೇನಕೆಯಲ್ಲಿ ಜನಿಸಿದವಳು.
ಮೇನಕೆ ಮಗುವನ್ನು ಬಿಟ್ಟುಹೋದ ತರುವಾಯ ಸ್ಥೂಲಕೇಶನೆಂಬ ಮುನಿಯು ಈಕೆಯನ್ನು ಕಾಪಾಡಿದನು. ಈಕೆ ಪ್ರಾಪ್ತವಯಸ್ಕಳಾದಾಗ ರುರು
ಮಹರ್ಷಿಯನ್ನು ಮದುವೆಯಾಗಬೇಕೆಂದಿದ್ದಳು. ರುರುವಿಗೂ ಆಕೆಯ ಮೇಲೆ ಸಹಜವಾಗಿಯೇ ಪ್ರೀತಿ ಚಿಗುರಿತ್ತು. ಒಮ್ಮೆ ಪ್ರಮದ್ವರೆಯು ಅರಣ್ಯದಲ್ಲಿ ಸಖಿಯರೊಂದಿಗೆ ಸಂಚರಿಸುತ್ತಿದ್ದಾಗ ಹಾವು ಕಚ್ಚಿ ಸತ್ತಳು. ಸುತ್ತಮುತ್ತಣ ಮುನಿಗಳು ಅವಳ ಶವವನ್ನು ಸ್ಥೂಲಕೇಶನಲ್ಲಿಗೆ ತಂದರು. ಆಗ ರುರು ತನ್ನ ಆಯುಷ್ಯದಲ್ಲಿ ಅರ್ಧ ಭಾಗವನ್ನು ಪ್ರಮದ್ವರೆಗೆ ಕೊಟ್ಟು ಬದುಕಿಸಿ ಅವಳನ್ನೇ ಮದುವೆಯಾದನು. ಆ ದಂಪತಿಗೆ ಧರ್ಮಾತ್ಮನಾದ ಮಗ ಶುನಕನು ಜನಿಸಿದನು.
ವೇದಜ್ಞನೂ ಧೀಮಂತನೂ ಆದ ಶುನಕನು ಸಂನ್ಯಾಸ ಸ್ವೀಕರಿಸಿ ತನ್ನ ಪೂರ್ವಜರಂತೆಯೇ ವಿಖ್ಯಾತನಾದನು. ಇಷ್ಟೆಲ್ಲ ಪುರಾಣಕಥೆಗಳಿಗೆ ಕಾರಣಳಾದ ಘೃತಾಚಿಯ ತಂದೆ-ತಾಯಿ ಯಾರು? ಅಥವಾ ಆಕೆ ಯಾರಿಗೆ/ಹೇಗೆ ಹುಟ್ಟಿದವಳು? ‘ಕಶ್ಯಪ ಮುನಿಯಿಂದ ಪ್ರಾಧಾ ಎಂಬುವವಳಲ್ಲಿ ಜನಿಸಿದವಳು’ ಎಂದಷ್ಟೇ ಇದೆ ಪುರಾಣನಾಮ ಚೂಡಾಮಣಿಯಲ್ಲಿ. ‘ಕ್ಷೀರಸಾಗರವನ್ನು ಮಥಿಸುತ್ತಿದ್ದಾಗ ಅಲೌಕಿಕ ಸುಂದರಿಯರಾದ ಕೆಲವು ಅಪ್ಸರೆಯರೂ ಹೊರಬಂದರಂತೆ; ಘೃತಾಚಿ ಎಂಬ ಅಪ್ಸರೆಯ ನೇತೃತ್ವದಲ್ಲಿ ಸಮಸ್ತ ಅಪ್ಸರೆಯರ ಬಳಗವು ಶ್ರೀಸೂಕ್ತವನ್ನು ಸ್ತುತಿಸುತ್ತ, ಸಂಗೀತ-ನೃತ್ಯಗಳಿಂದ ಲಕ್ಷ್ಮೀದೇವಿ ಯನ್ನು ಸ್ವಾಗತಿಸಿದರಂತೆ…’ ರೀತಿಯ ಅಂತೆಕಂತೆ ಪುರಾಣಗಳೂ ಬೇಕಷ್ಟಿವೆಯೆನ್ನಿ.
ಆದರೆ ಇಷ್ಟೆಲ್ಲ ಮಹಾಮಹಿಮ ಸಂತತಿಗೆ ಕಾರಣಳಾದ ಘೃತಾಚಿಯು ಪುರಾಣಕಥನವೆಂಬ ಅಗ್ನಿಜ್ವಾಲೆ ಆರದೆ ಉರಿಯುತ್ತಲೇ ಇರುವಂತೆ, ತನ್ನ ಹೆಸರಿಗೆ ತಕ್ಕಂತೆ, ತುಪ್ಪ ಸುರಿವವಳೇ ಇರಬೇಕು.ಪು