ತಿಳಿರು ತೋರಣ
srivathsajoshi@yahoo.com
ರಾಜಕಾರಣಿಗಳು ಚುನಾವಣೆ ವೇಳೆ ಮಾಡುವ ಬಿಟ್ಟಿ ಭಾಗ್ಯ ಘೋಷಣೆಗಳು- ಒಂದೊಂದೂ ಘೋರ ಪಾಪಕೃತ್ಯಗಳು. ಅದೂ ಸ್ವಂತ ದುಡ್ಡಿನಿಂದ ಅಲ್ಲ, ಸ್ವಂತ ಪರಿಶ್ರಮದಿಂದ ಅಲ್ಲವೇಅಲ್ಲ. ಜನಸಾಮಾನ್ಯರ ಅಂತಃಶಕ್ತಿ ಆತ್ಮಾಭಿಮಾನಗಳಿಗೆ
ಅವಮಾನ, ಅಗೌರವ. ಸಮಾಜದ ಅಧೋಗತಿ. ರಾಷ್ಟ್ರದ ಅವನತಿ. ಇದಕ್ಕೆ ಕಾರಣರಾಗುವ ಗರುಡರ- ಅಲ್ಲ, ದುರುಳ ರಣಹದ್ದುಗಳ- ರೆಕ್ಕೆಗಳನ್ನಷ್ಟೇ ಅಲ್ಲ ಇಡೀ ಶರೀರವನ್ನೇ ಸುಟ್ಟುಬಿಡಬೇಕೆನ್ನುವಷ್ಟು ಸಿಟ್ಟು ಬರುತ್ತದೆ.
ಅಹಂಕಾರದಿಂದ, ಒಂದು ರೀತಿಯ ಸ್ವಾರ್ಥಸಾಧನೆಗಾಗಿ, ಅಗತ್ಯವಿಲ್ಲ ದವರಿಗೂ ಉಪಕಾರ ಮಾಡಲಿಕ್ಕೆ- ಅಥವಾ ಹಾಗೆಂದು ಭಾವಿಸಿಕೊಂಡು ಬೀಗಲಿಕ್ಕೆ- ಮುಂದಾಗುತ್ತಾರಲ್ಲ ಅಂಥವರು ಈ ಗರುಡಪುರಾಣವನ್ನು ತಿಳಿದುಕೊಳ್ಳಬೇಕು. ಹಾಂ! ಗರುಡ ಪುರಾಣ ಅಂದ್ರೆ ಮರಣಶೋಕ ಸಮಯದಲ್ಲಿ ಓದಲಾಗುವ ಆ ಗರುಡಪುರಾಣ ಅಲ್ಲ, ಇದು ಗರುಡನ ಗರ್ವಭಂಗದ ಒಂದು ಪುರಾಣಕಥೆ. ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುತ್ತದೆ.
ಪಾಂಡವರ ಪಾಲಿನ ರಾಜ್ಯವನ್ನು ಅವರಿಗೆ ಕೊಡುವಂತೆ ಬುದ್ಧಿಮಾತು ಹೇಳಲಿಕ್ಕೆ ಬಂದಿದ್ದ ನಾರದ ಮಹರ್ಷಿಯು ತನ್ನ ಉಪದೇಶದ ಭಾಗವಾಗಿ ದುರ್ಯೋಧನನಿಗೆ ಹೇಳಿದ್ದೆನ್ನಲಾದ ಕಥೆ. ವಿಶ್ವಾಮಿತ್ರ ಮಹರ್ಷಿಯ ಶಿಷ್ಯ ರಲ್ಲೊಬ್ಬ ಗಾಲವ ಎಂಬುವವನು. ಗುರುವಿನ ಬಳಿ ಶುಕ್ಲಯಜುರ್ವೇದವನ್ನು ಸಾಂಗವಾಗಿ ಅಧ್ಯಯನ ಮಾಡಿದ ತರುವಾಯ ಮನೆಗೆ ಮರಳುವಂತೆ ಅಪ್ಪಣೆ ಪಡೆದನು.
‘ಸ್ವಾಮೀ, ತಮಗೆ ನಾನು ಯಾವ ವಿಧವಾದ ಗುರು ದಕ್ಷಿಣೆಯನ್ನು ಸಮರ್ಪಿಸಬೇಕು?’ ಎಂಬುದಾಗಿ ಗಾಲವನು ವಿಶ್ವಾಮಿತ್ರ ನನ್ನು ಕೇಳಿದಾಗ ‘ನೀನು ಇಲ್ಲಿಯವರೆಗೂ ಮಾಡಿದ ಶುಶ್ರೂಷೆಯಿಂದಲೇ ಸಂತುಷ್ಟನಾಗಿದ್ದೇನೆ. ನನಗೆ ಬೇರೆ ಯಾವ
ದಕ್ಷಿಣೆಯೂ ಅಗತ್ಯವಿಲ್ಲ’ ಎಂಬ ಉತ್ತರ ಬಂತು. ಆದರೂ ಗಾಲವನು ಪದೇ ಪದೇ ಒತ್ತಾಯದಿಂದ ಕೇಳಲಾಗಿ, ವಿಶ್ವಾಮಿತ್ರನು
‘ಹಾಗಿದ್ದರೆ ಒಂದು ಕೆಲಸ ಮಾಡು. ಮೈಯೆಲ್ಲವೂ ಬೆಳ್ಳಗಿರುವ, ಒಂದು ಕಿವಿ ಮಾತ್ರ ಕಪ್ಪಗೆ ಇರುವ 800 ಕುದುರೆಗಳನ್ನು
ತಂದೊಪ್ಪಿಸು!’ ಎಂದು ಬೇಡಿಕೆ ಮಂಡಿಸಿದನು. ವಿಶ್ವಾಮಿತ್ರನಿಗೇನೂ ಕುದುರೆಗಳ ಆವಶ್ಯಕತೆಯಿರಲಿಲ್ಲ.
ಆದರೂ ಗಾಲವನಿಗೆ ಅಸಾಧ್ಯವೆನಿಸುವ ಬೇಡಿಕೆಯನ್ನಿಟ್ಟರೆ ಅವನ ಕಾಟ ತಪ್ಪಬಹುದು ಎಂಬುದಷ್ಟೇ ವಿಶ್ವಾಮಿತ್ರನ ಆಗಿನ ಯೋಚನೆ ಇದ್ದದ್ದು. ಗಾಲವ ಸುಲಭಕ್ಕೆ ಬಿಟ್ಟುಕೊಡುವವನಲ್ಲ! ‘ಹಾಗೆಯೇ ಆಗಲಿ ಗುರುಗಳೇ’ ಎಂದವನೇ ಅಂತಹ ವಿಶೇಷ ಕುದುರೆಗಳ ಹುಡುಕಾಟಕ್ಕೆ ತೊಡಗಿದನು. ಎಷ್ಟೆಷ್ಟೋ ಪಾಡು ಪಟ್ಟನು. ಕಾಲ್ನಡಿಗೆಯಲ್ಲೇ ಊರೂರು ಸುತ್ತಿದನು. ಊಹುಂ… ಒಂದು ಕುದುರೆಯೂ ಅವನಿಗೆ ಸಿಗಲಿಲ್ಲ.
ಹತಾಶನಾದ ಮೇಲೆ ತನ್ನ ಯೋಜನೆಯಲ್ಲಿ ಏನಾದರೂ ಸಹಾಯ ಸಿಗಬಹುದೆಂದು ವಿಷ್ಣುವನ್ನು ಕುರಿತು ತಪಸ್ಸು ಮಾಡಿ ದನು. ವಿಷ್ಣುವು ಗರುಡನನ್ನು ಕರೆದು ಗಾಲವನಿಗೆ ನೆರವಾಗುವಂತೆ ಹೇಳಿದನು. ಗಾಲವನು ಗರುಡನ ಮೇಲೆ ಕುಳಿತುಕೊಂಡು ಪ್ರಪಂಚವನ್ನೆಲ್ಲ ಸುತ್ತುತ್ತ ಕುದುರೆ ಹುಡುಕಾಟವನ್ನು ಮುಂದುವರಿಸಿದನು. ಹಾಗೆ ಗರುಡ-ಗಾಲವರು ಆಕಾಶದಲ್ಲಿ ಸಂಚರಿ ಸುತ್ತ ಒಮ್ಮೆ ಆಯಾಸ ಪರಿಹರಿಸುವುದಕ್ಕಾಗಿ ವೃಷಭಪರ್ವತದ ಶಿಖರದಲ್ಲಿ ಇಳಿದರು. ಅಲ್ಲಿ ಒಂದು ದೊಡ್ಡ ಭವನದಂತೆ ಕಾಣುತ್ತಿದ್ದ ಗುಹೆಯಲ್ಲಿ ತೇಜೋಮಯ ತಪಸ್ವಿನಿಯೊಬ್ಬಳನ್ನು ಕಂಡರು. ಆಕೆಯ ತೇಜಸ್ಸು ಸಹಜವೇ, ಏಕೆಂದರೆ ಆಕೆಯ ಹೆಸರೇ ಸ್ವಯಂಪ್ರಭಾ ಎಂದು. ಶಾಂಡಿಲ್ಯ ಋಷಿಯ ಮಗಳಾದ್ದರಿಂದ ಶಾಂಡಿಲಿ ಎಂಬ ಹೆಸರೂ ಆಕೆಗಿದ್ದಿತು. ಅವಳ ಬಗ್ಗೆ ಇನ್ನೊಂಚೂರು ಪೂರ್ವದ ವಿವರಗಳನ್ನಿಲ್ಲಿ ಹೇಳಬೇಕು.
ದೇವಶಿಲ್ಪಿಯಾದ ಮಯನು ತನ್ನ ಮಾಯಾಚಾತುರ್ಯದಿಂದ ಸುವರ್ಣಮಯವಾದ ಒಂದು ವನವನ್ನು ನಿರ್ಮಿಸಿ ಅದರಲ್ಲಿ ದಿವ್ಯವಾದ ಒಂದು ಗುಹೆಯನ್ನು ಕಲ್ಪಿಸಿ, ಅಲ್ಲಿ ತನ್ನ ಪತ್ನಿ ಹೇಮಾ ಎಂಬ ಅಪ್ಸರಸಿಯೊಂದಿಗೆ ಕೆಲವು ಕಾಲ ವಾಸವಾಗಿದ್ದನು. ಆದರೆ ಹೇಮಾ ಅಕಾಲಿಕ ನಿಧನ ಹೊಂದಿ ಸ್ವರ್ಗಕ್ಕೆ ಮರಳಿದಳು. ದುಃಖತಪ್ತ ಮಯನೂ ತನ್ನ ಮಗಳು ಮಂಡೋದರಿಯ ಸಂಗಡ ಆ ಜಾಗವನ್ನು ಬಿಟ್ಟು ತೆರಳಿದನು.
ಮಂಡೋದರಿಯನ್ನು ರಾವಣನಿಗೆ ಮದುವೆ ಮಾಡಿಕೊಟ್ಟನು. ಹೇಮಾಳ ಪ್ರಿಯಸಖಿಯಾಗಿದ್ದ ಸ್ವಯಂಪ್ರಭಾ ಆ ಗುಹೆಯನ್ನು
ಸೇರಿ ಅಲ್ಲಿ ವಾಸಿಸತೊಡಗಿದ್ದಳು. ಹನೂಮಾದಿ ಕಪಿವೀರರು ಸೀತೆ ಯನ್ನು ಹುಡುಕುತ್ತ ದಕ್ಷಿಣದಿಕ್ಕಿನಲ್ಲಿ ಅಲೆಯುತ್ತಿದ್ದಾಗ ಬಾಯಾರಿಕೆಯಿಂದ ಬಳಲಿ ಆ ಗುಹೆಯನ್ನು ಹೊಕ್ಕಿದ್ದರು; ಸ್ವಯಂಪ್ರಭಾಳನ್ನು ಕಂಡು, ಆಕೆಯಿಂದ ಸತ್ಕೃತರಾಗಿದ್ದರು. ಸ್ಟಯಂಪ್ರಭಾ ವರ್ಷಗಟ್ಟಲೆ ಅದೇ ಗುಹೆಯಲ್ಲಿ ತನ್ನ ವಾಸವನ್ನು ಮುಂದುವರಿಸಿ ತಪಸ್ಸಿನ ಪ್ರಭಾವದಿಂದಾಗಿ ಸೂರ್ಯನಂತೆ ತೇಜಸ್ವಿಯಾಗಿದ್ದಳು.
ವೃಷಭಪರ್ವತದ ತುದಿಯಲ್ಲಿದ್ದ ಗುಹೆಯಲ್ಲಿ ಗರುಡ- ಗಾಲವರಿಗೆ ಕಂಡಿದ್ದು ಅದೇ ತಪಸ್ವಿನಿ ಸ್ವಯಂಪ್ರಭಾ. ನೂರಾರು
ವರ್ಷಗಳ ತಪಸ್ಸಿನಿಂದ ದೈಹಿಕವಾಗಿ ಆಕೆ ತೀರ ಕೃಶಳಾಗಿದ್ದಳು, ಆದರೆ ಆಕೆಯ ತೇಜಸ್ಸು ಮಾತ್ರ ಎಂಥವರನ್ನೂ ಸೆಳೆಯುತ್ತಿತ್ತು. ಗುಹೆಯತ್ತ ಬಂದ ಗರುಡ-ಗಾಲವರನ್ನು ಸ್ವಾಗತಿಸಿದ ಸ್ವಯಂ ಪ್ರಭಾ, ಅವರನ್ನು ಒಳಗೆ ಕರೆದು ಉಪಚರಿಸಿದಳು. ಕುಳಿತುಕೊಳ್ಳಲಿಕ್ಕೆ ಯಥೋಚಿತ ಆಸನವನ್ನು, ತಿನ್ನಲಿಕ್ಕೆ ಹಣ್ಣುಗಳನ್ನು, ಕುಡಿಯಲಿಕ್ಕೆ ನೀರನ್ನು ಕೊಟ್ಟು ಸತ್ಕರಿಸಿದಳು. ಅದು ಅವಳ ತಪೋಯಜ್ಞದ ಪ್ರಸಾದವೇ ಆಗಿತ್ತು.
ಗರುಡ ಮತ್ತು ಗಾಲವರು ಆ ತಪಸ್ವಿನಿ ಮಾಡಿದ ಉಪಚಾರಕ್ಕೆ ಕೃತಜ್ಞತೆ ಸಲ್ಲಿಸಿ ಅಲ್ಲೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯ ಲೆಂದು ಮಲಗಿದರು. ಇಬ್ಬರಿಗೂ ಆಯಾಸವಾಗಿದ್ದರಿಂದ ಒಳ್ಳೆಯ ನಿದ್ದೆಯೂ ಬಂದಿತು. ಸ್ವಲ್ಪ ಹೊತ್ತಿನ ಬಳಿಕ ನಿದ್ದೆಯಿಂದ ಎಚ್ಚೆತ್ತ ಗರುಡ ತನ್ನನ್ನು ನೋಡಿಕೊಳ್ಳುತ್ತಾನೆ- ರೆಕ್ಕೆಗಳ ಗರಿಗಳೆಲ್ಲ ಸುಟ್ಟು ಉದುರಿ ಬಿದ್ದಿದ್ದವು! ಬಲಿಷ್ಠ ದೇಹ, ಕಾಲುಗಳು, ಕೊಕ್ಕು ಎಲ್ಲ ಮೊದಲಿಂದತೆಯೇ ಇದ್ದರೂ ಹಾರಾಟಕ್ಕೆ ಮುಖ್ಯ ಅಂಗವಾದ ರೆಕ್ಕೆಗಳೇ ಇಲ್ಲದ್ದರಿಂದ ಗರುಡ ಒಂದು ಮುದ್ದೆಯಂತಾಗಿದ್ದನು!
ಏಕಾಏಕಿ ಹಾಗೆ ಆಗಿದ್ದರಿಂದ ಗರುಡನ ಮನಸ್ಸಿಗೆ ಆಘಾತವಾಯಿತು. ಆತ ಚಿಂತೆಗೀಡಾದನು. ಗಾಲವನನ್ನು ನಿದ್ದೆಯಿಂದ ಎಬ್ಬಿಸಿದನು. ಅಂಥ ಸ್ಥಿತಿಯಲ್ಲಿ ಗರುಡನನ್ನು ಕಂಡ ಗಾಲವನು ತನ್ನ ಕಣ್ಣುಗಳನ್ನೇ ನಂಬದಾದನು. ಈಗೇನು ಮಾಡುವುದು? ನಮ್ಮಿಬ್ಬರ ಪ್ರಯಾಣ, ಅಶ್ವಾನ್ವೇಷಣೆ, ವಿಶ್ವಾಮಿತ್ರ ಮಹರ್ಷಿಗೆ ಗುರುದಕ್ಷಿಣೆ ಸಲ್ಲಿಸಬೇಕೆಂಬ ಆಶಯ ಇವೆಲ್ಲ ಮುಂದುವರಿ ಯುವುದಾದರೂ ಹೇಗೆ? ಒಂದೊಮ್ಮೆಗೆ ಆತನೂ ಚಿಂತಾಕ್ರಾಂತನಾದನು.
ಆದರೂ ಸಾವರಿಸಿಕೊಂಡು ಗಾಲವನು ಗರುಡನಿಗೆ ಇಂತೆಂದನು: ‘ಓ ವೀರ ಗರುಡನೇ, ಇದ್ದಕ್ಕಿದ್ದಂತೆ ನಿನಗೀಗ ಈ ಸ್ಥಿತಿ
ಬಂದಿದೆಯೆಂದರೆ ನಿನ್ನಿಂದ ಏನೋ ಅಪಚಾರವಾಗಿದೆ. ಧರ್ಮ ಮಾರ್ಗಕ್ಕೆ ವಿರುದ್ಧವಾದದ್ದೇನೋ ಸಂಭವಿಸಿದೆ. ಅಥವಾ, ನಿಜವಾಗಿ ಮಾಡದಿದ್ದರೂ ಅಂಥದೇನೋ ಧರ್ಮವಿರೋಽ ಆಲೋಚನೆ ನಿನ್ನ ಮನಸ್ಸಿನಲ್ಲಿ ಸುಳಿದಿದೆ. ಅದೂ ಚಿಕ್ಕಪುಟ್ಟದಲ್ಲ. ನಿನ್ನ ದೇಹದ ಮುಖ್ಯ ಅಂಗಗಳಾದ ರೆಕ್ಕೆಗಳೇ ಸುಟ್ಟು ಬಿದ್ದಿವೆಯೆಂದರೆ ನೀನು ಮಾಡಹೊರಟಿದ್ದ ಕೃತ್ಯವು ಏನೋ ಘೋರ ಪಾಪವೆಂದೇ ನನಗನಿಸುತ್ತಿದೆ. ಯೋಚಿಸಿ ಹೇಳು.
ಧರ್ಮಮಾರ್ಗದಿಂದ ಚ್ಯುತನಾಗುವ ಅದ್ಯಾವ ಕೆಲಸ ನಿನ್ನ ಮನಸ್ಸಿಗೆ ಹೊಳೆಯಿತು?’ ಗರುಡನು ತನಗೊದಗಿದ ಪರಿಸ್ಥಿತಿ ಯಿಂದಾಗಿ ಇನ್ನೂ ದಿಙ್ಮೂಢನಾಗಿಯೇ ಇದ್ದನು. ಆದರೆ ಗಾಲವನ ಮಾತುಗಳನ್ನು ಕೇಳಿ ಜ್ಞಾನೋದಯವಾದಂತೆ ಭಾಸ ವಾಯಿತು. ಧರ್ಮಮಾರ್ಗಕ್ಕೆ ವಿರುದ್ಧವಾದ ಆಲೋಚನೆ ತನಗೆ ಬಂದಿದ್ದು ಯಾವುದೆಂದು ಅರಿಯುವುದರಲ್ಲಿ ಆತ ಸಫಲನಾದನು. ‘ಮಿತ್ರ ಗಾಲವನೇ, ನಾನು ಮಾಡಿದ ತಪ್ಪಿನ ಅರಿವು ಈಗ ನನಗಾಗಿದೆ.
ನಿಜಕ್ಕೂ ಅದೊಂದು ದೊಡ್ಡ ತಪ್ಪೇ. ಆ ತಪಸ್ವಿನಿಯನ್ನು ಕುರಿತಂತೆ ಒಂದು ತಪ್ಪು ಆಲೋಚನೆ ತಲೆಯಲ್ಲಿ ಸುಳಿಯುವುದಕ್ಕೆ ನಾನು ಅವಕಾಶವಿತ್ತೆ’ ಎನ್ನುತ್ತ ನಿಟ್ಟುಸಿರು ಬಿಟ್ಟು ಗರುಡ ಮುಂದುವರಿಸಿದನು: ‘ವೃಷಭಪರ್ವತದ ಗುಹೆಯಲ್ಲಿ ತಪಸ್ಸು ಮಾಡುತ್ತ ಇಷ್ಟು ಕಷ್ಟಕರ ಜೀವನ ನಡೆಸಿ ಕೃಶಳಾಗಿರುವ ಆಕೆಯನ್ನು ಕಂಡು ನನಗನಿಸಿತು, ಆಕೆಯನ್ನು ಇಲ್ಲಿಂದ ಒಯ್ದು
ಆಕೆ ನಿಜವಾಗಿ ಇರಬೇಕಾದ ಸ್ಥಳದಲ್ಲಿ- ಅಂದರೆ ಮಹಾವಿಷ್ಣುವಿನ ಸನ್ನಿಧಾನದಲ್ಲಿ- ಇಡಬೇಕು. ಮಹೇಶ್ವರನೂ, ಪ್ರಜಾಪತಿ ಬ್ರಹ್ಮನೂ ನೆಲೆಸಿರುವ, ಯಜ್ಞಯಾಗಾದಿಗಳಿಂದ ಪರಮಪಾವನವಾದ ದೇವಲೋಕದಲ್ಲಿ ಆಕೆ ಇರಬೇಕಾದ್ದು, ಈ ಪಾಳುಬಿದ್ದ ಗುಹೆಯಲ್ಲಿ ಅಲ್ಲ.
ಇಂಥ ಸುಂದರಿಯನ್ನು ಎತ್ತಿಕೊಂಡು ಹೋಗಿ ಮಹಾವಿಷ್ಣುವಿಗೋ, ಪರಮೇಶ್ವರನಿಗೋ, ಅಥವಾ ಬ್ರಹ್ಮನಿಗೋ, ಕಾಣಿಕೆ ಯಾಗಿ ಕೊಟ್ಟರೆ ಅವರೂ ಎಷ್ಟು ಸಂತೋಷ ಪಡುತ್ತಾರೆ. ನನ್ನ ರೆಕ್ಕೆಗಳ ಶಕ್ತಿಯೂ ಸದುಪಯೋಗವಾಗಿ ನನಗೂ ಒಂದಿಷ್ಟು ಪುಣ್ಯ ಬಂದಂತಾಗುತ್ತದೆ. ಆದ್ದರಿಂದ ನನ್ನ ಭುಜಗಳ ಮೇಲೆ ಕುಳ್ಳಿರಿಸಿ ನನ್ನ ಶಕ್ತಿಶಾಲಿ ರೆಕ್ಕೆಗಳಿಂದ ಒಂದೇ ನೆಗೆತಕ್ಕೆ ಹಾರಿ ಆಕೆಯನ್ನು ಇಲ್ಲಿಂದೆತ್ತಿ ಸ್ವರ್ಗಕ್ಕೊಯ್ಯುವೆ- ಎಂಬ ಆಲೋಚನೆ ನನಗೆ ಬಂದಿದ್ದು ನಿಜ.
ಆದರೆ ಈಗ ಅರಿವಾಗಿದೆ, ಅದು ನನ್ನಿಂದಾದ ತಪ್ಪು. ನಾನು ಹಾಗೆ ಯೋಚಿಸಬಾರದಿತ್ತು. ಈಗಿಂದೀಗಲೇ ನಾನು ಆ ತಪಸ್ವಿನಿಯ ಬಳಿಗೆ ಹೋಗಿ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ. ಧರ್ಮಕ್ಕೆ ವಿರುದ್ಧವಾಗಿ ಹೊರಟ ನನ್ನ ತಪ್ಪನ್ನು ಕ್ಷಮಿಸುವುದೋ ಶಿಕ್ಷಿಸುವುದೋ ಆಕೆಯೇ ನಿರ್ಧರಿಸಲಿ.’ ಹಾಗೆನ್ನುತ್ತಲೇ ಗರುಡನು ತಪಸ್ವಿನಿ ಸ್ವಯಂಪ್ರಭಾಳ ಬಳಿಗೆ ಹೋಗಿ ಆಕೆಯ ಚರಣಾರವಿಂದಗಳಿಗೆ ವಂದಿಸಿದನು.
‘ಓ ತಪಸ್ವಿನಿಯೇ, ನಿನ್ನ ಇಲ್ಲಿಯ ಏಕಾಂಗಿ ಜೀವನ, ದುರ್ಭರ ಪರಿಸ್ಥಿತಿ, ಕಠೋರವಾದ ತಪಸ್ಸು ಇವೆಲ್ಲವನ್ನೂ ನೋಡಿ, ನನ್ನ ಮನಸ್ಸಿನ ಪ್ರಕಾರ ನಿನಗೆ ಸಂತೋಷವಾಗಬಹುದೆಂದು ನಾನೊಂದು ಕೆಲಸ ಮಾಡುವ ಆಲೋಚನೆಯಲ್ಲಿದ್ದೆ. ನಿನ್ನನ್ನು ಇಲ್ಲಿಂದ ಎತ್ತಿ ಒಯ್ದು ಸ್ವರ್ಗದಲ್ಲಿ ಕುಳ್ಳಿರಿಸಬೇಕೆಂದುಕೊಂಡಿದ್ದೆ. ಅದನ್ನು ನಿನ್ನ ಬಗೆಗಿನ ಭಕ್ತಿ-ಗೌರವಗಳಿಂದಲೇ ಮಾಡುವವನಿದ್ದೆ. ಆದರೆ ನಿನಗೆ ಅದು ಒಪ್ಪಿತವಿದೆಯೋ ಇಲ್ಲವೋ, ನಿನ್ನ ಆಶಯಕ್ಕೆ ಹೊಂದುತ್ತದೆಯೋ ಇಲ್ಲವೋ ಎಂಬ ಯೋಚನೆಯನ್ನೂ ನಾನು ಮಾಡಲಿಲ್ಲ! ಇದು ಸರಿಯೋ ತಪ್ಪೋ ನನಗೆ ಗೊತ್ತಿಲ್ಲ. ಆದರೆ ನನಗೆ ಬಂದೊದಗಿದ ಪರಿಸ್ಥಿತಿ ಯನ್ನು ಗಮನಿಸಿದರೆ ಘೋರ ತಪ್ಪೆಂದೇ ತಿಳಿಯುತ್ತಿದೆ.
ಏನಿದ್ದರೂ ನಾನೀಗ ನಿನ್ನಲ್ಲಿ ಕ್ಷಮೆ ಬೇಡುತ್ತಿದ್ದೇನೆ. ನನ್ನನ್ನು ಈ ಸಂಕಷ್ಟದಿಂದ ಪಾರುಗೊಳಿಸು. ನಿನ್ನ ತಪಃಶಕ್ತಿಗೆ ಸರಿ ಕಂಡಂತೆ ಮಾಡು’ ಎಂದು ಬಿನ್ನವಿಸಿಕೊಂಡನು. ಗರುಡನ ಈ ನಿವೇದನೆಯಿಂದ ಸ್ವಯಂಪ್ರಭಾಳಿಗೆ ಸಂತಸವಾಯಿತು. ಗರುಡ ಮತ್ತು ಅಲ್ಲೇ ಪಕ್ಕದಲ್ಲಿ ನಿಂತ ಗಾಲವನನ್ನು ಒಮ್ಮೆ ನೋಡಿ ಆಕೆ ಹೀಗೆಂದಳು: ‘ಹೇ ಸುಪರ್ಣನೆಂದು ಕರೆಸಿಕೊಳ್ಳುವ
ಗರುಡ ಮಹಾಶಯನೇ, ನೀನು ಚಿಂತಿಸಬೇಕಿಲ್ಲ. ನಿನ್ನ ಬಲಿಷ್ಠ ರೆಕ್ಕೆಗಳನ್ನು ಸದ್ಯದಲ್ಲೇ ನೀನು ಪಡೆಯುತ್ತೀ. ತಪ್ಪು ಮಾಡಿದೆನೆಂಬ ಪಶ್ಚಾತ್ತಾಪ ಭಾವದಿಂದ ಹೊರಗೆ ಬಾ. ನನ್ನ ಕಷ್ಟಗಳನ್ನು ಕಂಡು ನೀನು ಮರುಗಿದ್ದು ಹೌದು. ನಾನು ದೈಹಿಕವಾಗಿ ಕೃಶಳಾಗಿದ್ದರೂ ನನ್ನ ಆತ್ಮಾಭಿಮಾನಕ್ಕೆ, ತಪಃಶಕ್ತಿಗೆ ಒಂದಿನಿತೂ ಕುಂದಾಗಿರಲಿಲ್ಲ.
ಆದರೆ ಇದನ್ನು ತಿಳಿದುಕೋ. ನೀನು ಮಾಡಬೇಕೆಂದಿದ್ದ ಕೆಲಸವು ನಿನ್ನ ಮನಸ್ಸಿಗೆ ಒಳ್ಳೆಯದೆಂದೇ ತೋರಿದ್ದರೂ ಅದು ನನಗೆ ನೀನು ಮಾಡಿದ ಅವಮಾನ-ಅಗೌರವವೇ ಆಗಿತ್ತು. ಅಧರ್ಮ ಎಂದು ಕರೆಸಿಕೊಳ್ಳಲು ತಕ್ಕುದಾಗಿತ್ತು. ನಿನ್ನ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆ ನನಗೆ ಗೊತ್ತಾಗಿ ಮನಸ್ಸಿಗೆ ತುಂಬ ನೋವಾಯಿತು. ತ್ರಿಮೂರ್ತಿಗಳಾದ ಮಹಾವಿಷ್ಣು, ಪರಮೇಶ್ವರ ಹಾಗೂ ಬ್ರಹ್ಮ, ಯಾರೂ ಕಡಿಮೆಯಲ್ಲ. ಅವರೆಲ್ಲ ದೇವಾಽದೇವತೆಗಳಿಗೇ ದೇವರು. ಆದರೆ ನೀನು ನನ್ನ ಅನುಮತಿ ಪಡೆಯದೆ, ನಿನ್ನಷ್ಟಕ್ಕೆ ನೀನೇ ನನ್ನನ್ನು ಎತ್ತಿಕೊಂಡು ಹೋಗಿ ಅವರುಗಳಿಗೆ ಕಾಣಿಕೆ ಕೊಡುವ ಯೋಚನೆ ಮಾಡಿದೆಯಲ್ಲ, ಅದು ತಪ್ಪು.
ನಿನ್ನ ಮನಸ್ಸಿನಲ್ಲಿ ಬಂದ ಕೆಟ್ಟ ಆಲೋಚನೆಗಳಿಂದ ನಿನ್ನ ಗಟ್ಟಿಯಾದ ರೆಕ್ಕೆಗಳು ಸುಟ್ಟುಹೋದವು! ಆದರೆ ಅದು ನೀನು ಗೊತ್ತಿಲ್ಲದೇ ಮಾಡಿದ್ದ ತಪ್ಪು, ಈಗ ನಿನಗೆ ಅದರ ಅರಿವಾಗಿದೆ, ಮತ್ತು ಕ್ಷಮೆಯನ್ನೂ ಕೇಳುತ್ತಿದ್ದೀ ಎಂಬ ಕಾರಣಕ್ಕೆ ನಾನು ನಿನ್ನನ್ನು ಕ್ಷಮಿಸಿದ್ದೇನೆ. ನಿನ್ನ ರೆಕ್ಕೆಗಳು ಮತ್ತೆ ಮೊದಲಿನಂತೆ ಶಕ್ತಿಯುತವಾಗಿ ಬರಲಿ. ಆದರೆ ನೆನಪಿರಲಿ, ಮುಂದೆಂದೂ ಇಂಥ ತಪ್ಪು ಮಾಡಬೇಡ. ನನ್ನನ್ನಾ ಗಲೀ, ಬೇರಾವುದೇ ಸ್ವಾಭಿಮಾನಿ ಹೆಣ್ಣನ್ನಾಗಲೀ ಅವಮಾನಿಸಬೇಡ. ನಿನ್ನ ಅಹಂಕಾರ-ಪರಾಕ್ರಮಗಳ ಪ್ರದರ್ಶನಕ್ಕೆ ಅವರನ್ನು ಸಾಧನವಾಗಿಸಬೇಡ. ಈಗಿನ್ನು ಇಲ್ಲಿಂದ ಹೊರಡು. ಆಕಾಶದೆತ್ತರಕ್ಕೆ ಹಾರಿ ನಿನ್ನ ನಿಗದಿತ ಕೆಲಸ ಮುಂದುವರಿಸಿಸು’ ಎಂದಳು. ಆಕೆ ಹಾಗೆಂದದ್ದೇ ತಡ, ಗರುಡನ ರೆಕ್ಕೆಗಳು ಯಥಾಸ್ಥಿತಿಗೆ ಮರಳಿದುವು.
ಸ್ವಯಂಪ್ರಭಾಳ ಆಶೀರ್ವಾದ ಪಡೆದು ಗರುಡ-ಗಾಲವರು ಅಲ್ಲಿಂದ ಪ್ರಯಾಣ ಮುಂದುವರಿಸಿದರು.
ಇದರ ನೀತಿ ಏನು? ಮೊದಲನೆಯದಾಗಿ, ನಮ್ಮ ಕೆಲಸಗಳಲ್ಲಷ್ಟೇ ಅಲ್ಲ ಆಲೋಚನೆಗಳಲ್ಲೇ ಘೋರ ಪ್ರಮಾದ ಆಗಾಗ ಆಗುತ್ತಿರುತ್ತದೆ. ಎರಡನೆಯದಾಗಿ, ಅಂತಹ ಕೆಟ್ಟ ಆಲೋಚನೆಗಳಿಗೆ ನಮ್ಮ ದರ್ಪ, ಅಹಂಕಾರ, ಅಧಕಾರಬಲಗಳು ಮುಖ್ಯ ಕಾರಣವಾಗಿರುತ್ತವೆ. ಗರುಡನಿಗೆ ತನ್ನ ರೆಕ್ಕೆಗಳ ಬಲದಿಂದಲೇ ದರ್ಪ ಬಂದಿತ್ತು, ಇತರರನ್ನು ಅಲ್ಪರೆಂದು ನೋಡುವ ಗುಣ ಮೈಗೂಡಿತ್ತು. ಮೂರನೆಯದಾಗಿ, ತಪಸ್ವಿನಿ ಸ್ವಯಂಪ್ರಭಾಳಿಗೆ ವಿಷ್ಣುವಿನ ಸನ್ನಿಧಾನಕ್ಕೆ ಹೋಗಬೇಕೆಂಬ ಇಚ್ಛೆ ಇತ್ತೇ ಇಲ್ಲವೇ ಎಂಬುದನ್ನೂ ಗರುಡ ಪರಿಗಣಿಸಲಿಲ್ಲ.
ಆಕೆಗೆ ತನ್ನದೇ ಆದ ಗುರಿ ಆಕಾಂಕ್ಷೆಗಳು ಇರುವುದಿಲ್ಲವೇ? ಅವುಗಳನ್ನು ಬದಿಗೆ ತಳ್ಳಿ ತನ್ನದೇನನ್ನೋ ಹೇರಲು ಗರುಡ ಯಾರು? ಆದ್ದರಿಂದಲೇ ಆಕೆಯನ್ನು ಅಗೌರವಿಸಿ ದಂತಾಯಿತು. ಬೇರೆಯವರಿಗೆ ನಾವು ಮಾಡುವ ಕೆಲಸ, ಅದರ ಮೂಲ ಆಲೋಚನೆ ಸಹ, ಅವರ ಒಪ್ಪಿಗೆ ಪಡೆದಿರುವುದು ಅತಿ ಮುಖ್ಯ. ಅದೇ ಧರ್ಮ. ನಾಲ್ಕನೆಯದಾಗಿ, ಸ್ವಯಂಪ್ರಭಾಳ ತಪಃ
ಶಕ್ತಿ ಎಂತಹದೆಂದರೆ ಒಂದುವೇಳೆ ಬಯಸಿದ್ದರೆ ಅವಳು ತಾನಾಗಿಯೇ ವಿಷ್ಣುವಿನ ಸನ್ನಿಧಾನ ಪ್ರಾಪ್ತಿ ಮಾಡಿಕೊಳ್ಳಬಹುದಿತ್ತು.
ಅದಕ್ಕೆ ಗರುಡನ ಪ್ರಭಾವ-ಹಸ್ತಕ್ಷೇಪ ಬೇಕಿಲ್ಲ.
ಬೇರೆಯವರಿಗೆ ನಾವು ಮಾಡುವ ಕೆಲಸವು ಅವರ ಅಗತ್ಯಗಳಂತೆ ಇರಬೇಕೇ ವಿನಾ ನಮ್ಮ ದರ್ಪ ಮತ್ತು ಅಧಿಕಾರಗಳಿಂದ ನಿರ್ಧರಿತವಾಗಬಾರದು, ಅದರ ಅಭಿವ್ಯಕ್ತಿಯಲ್ಲಿ ಎಷ್ಟೇ ಮೃದುತ್ವವಿದ್ದರೂ. ಇನ್ನು, ಗಾಲವನ ಕೃತ್ಯವಾದರೂ ಅಷ್ಟೇ- ವಿಶ್ವಾಮಿತ್ರ ತನಗೇನೂ ಬೇಡವೆಂದಿದ್ದಾಗ ಒತ್ತಾಯದ ಮಾಘಸ್ನಾನ ಮಾಡಿಸಲು ಹೊರಟಿದ್ದೇಕೆ? ಅದಕ್ಕಾಗಿ ಇಲ್ಲಸಲ್ಲದ ಕಷ್ಟಗಳನ್ನು ಮೈಮೇಲೆ ತಂದುಕೊಂಡಿದ್ದೇಕೆ? ಇರಲಿ, ಗರುಡ-ಗಾಲವರಾದರೋ ಏನೋ ಒಳ್ಳೆಯದೆಂದು ಕಂಡಿದ್ದನ್ನು
ತಮ್ಮದೇ ಶ್ರಮದಿಂದ ಮಾಡಲು ಹೊರಟಿದ್ದರು. ಆದರೆ ಈಗಿನ ದರಿದ್ರ ರಾಜಕಾರಣಿಗಳು ಚುನಾವಣೆ ವೇಳೆ ಮಾಡುವ ಬಿಟ್ಟಿ ಭಾಗ್ಯ ಘೋಷಣೆಗಳು- ಕುಕ್ಕರ್ ಕೊಡುತ್ತೇವೆ ನಿಕ್ಕರ್ ಕೊಡುತ್ತೇವೆ, ಉಚಿತ ವಿದ್ಯುತ್ ಕೊಡುತ್ತೇವೆ, ಗೃಹಲಕ್ಷ್ಮಿಯರಿಗೆ ಎರಡುಸಾವಿರ ದುಡ್ಡು ಕೊಡುತ್ತೇವೆ, ಮಹಿಳೆಯರಿಗೆ ಬಸ್ ಪ್ರಯಾಣ ಮುಫತ್ತಾಗಿಸುತ್ತೇವೆ… ಮತದಾನ ಹತ್ತಿರವಾಗುತ್ತಿದ್ದಾ ಗಂತೂ ಹಣ-ಹೆಂಡದ ಹೊಳೆ… ಇವೆಲ್ಲ ಒಂದೊಂದೂ ಘೋರ ಪಾಪಕೃತ್ಯಗಳು.
ಅದೂ ಸ್ವಂತ ದುಡ್ಡಿನಿಂದ ಅಲ್ಲ, ಸ್ವಂತ ಪರಿಶ್ರಮದಿಂದ ಅಲ್ಲವೇಅಲ್ಲ. ಜನಸಾಮಾನ್ಯರ ಅಂತಃಶಕ್ತಿ ಆತ್ಮಾಭಿಮಾನಗಳಿಗೆ
ಅವಮಾನ, ಅಗೌರವ. ಸಮಾಜದ ಅಧೋಗತಿ. ರಾಷ್ಟ್ರದ ಅವನತಿ. ಇದಕ್ಕೆ ಕಾರಣರಾಗುವ ಗರುಡರ- ಅಲ್ಲ, ದುರುಳ ರಣಹದ್ದುಗಳ- ರೆಕ್ಕೆಗಳನ್ನಷ್ಟೇ ಅಲ್ಲ ಇಡೀ ಶರೀರವನ್ನೇ ಸುಟ್ಟುಬಿಡಬೇಕೆನ್ನುವಷ್ಟು ಸಿಟ್ಟು ಬರುತ್ತದೆ. ಅಷ್ಟಾಗಿ, ನಿಜವಾಗಿಯೂ ಯಾರಾದರೂ ಹಸಿದಿದ್ದರೆ- ‘ಹಸಿವಾದವನಿಗೆ ಮೀನು ಕೊಡುವುದಕ್ಕಿಂತ, ಮೀನು ಹಿಡಿಯುವುದನ್ನು ಕಲಿಸಿಕೊಡು’ ಎಂಬ ನುಡಿಗಟ್ಟು ಸಾರ್ವಕಾಲಿಕವಾಗಿ ಅನುಸರಣೀಯ ಆದರ್ಶಪ್ರಾಯ ಅಲ್ಲವೇ? ಅದಿರಲಿ, ಗರುಡ-ಗಾಲವರು ವೃಷಭಪರ್ವತ ದಿಂದ ಹೊರಟವರು ಎಲ್ಲಿಗೆ ಹೋದರು? ಆಮೇಲೇನಾಯ್ತು? ಗಾಲವನಿಗೆ ಹತಾಶೆ ಮುಂದುವರಿದಿತ್ತು.
ದೇಹತ್ಯಾಗ ಮಾಡಲಿಕ್ಕೂ ತಯಾರಾಗಿದ್ದನು. ಗರುಡನು ಅವನಿಗೆ ಮನುಷ್ಯಜನ್ಮದ ಮಹತ್ತ್ವವನ್ನು ತಿಳಿಸಿ, ಗಾಲವನಿಂದ ಅವನ ಇಷ್ಟಾರ್ಥವೇನೆಂಬುದನ್ನು ತಿಳಿದು, ತನ್ನ ಸ್ನೇಹಿತನೂ ಪ್ರತಿಷ್ಠಾನಗರಾಽಶ್ವರನೂ ಆದ ಯಯಾತಿ ರಾಜನಲ್ಲಿಗೆ ಕರೆದುಕೊಂಡು ಹೋದನು. ಗಾಲವನ ಗುರುದಕ್ಷಿಣೆ ವೃತ್ತಾಂತವನ್ನೆಲ್ಲ ಯಯಾತಿಗೆ ತಿಳಿಸಿದನು. ಯಯಾತಿ ರಾಜ
ತನ್ನ ಮಗಳಾದ ಮಾಧವಿಯೆಂಬ ಕನ್ಯೆಯನ್ನು ಗಾಲವನಿಗೆ ಒಪ್ಪಿಸಿ, ಅವಳನ್ನು ಯಾವ ರಾಜನಿಗಾದರೂ ಕೊಟ್ಟು ವಧೂ
ದಕ್ಷಿಣೆಯಾಗಿ ಕುದುರೆಗಳನ್ನು ಸಂಪಾದಿಸಿಕೊಳ್ಳುವ ಹಾಗೆ ಹೇಳಿದನು. ಅದರಂತೆ ಗಾಲವನು ಆ ಕನ್ಯೆಯೊಂದಿಗೆ ಇಕ್ಷ್ವಾಕು ರಾಜನಲ್ಲಿಗೆ ಹೋಗಿ ಮಾಧವಿಯನ್ನು ಒಪ್ಪಿಸಿ ೨೦೦ ಕುದುರೆಗಳನ್ನು ಪಡೆದನು.
ಇಕ್ಷ್ವಾಕು ಮಾಧವಿಯಲ್ಲಿ ವಸುಮಾನನೆಂಬ ಮಗ ನನ್ನು ಪಡೆದ ಬಳಿಕ, ಗಾಲವನು ಮಾಧವಿಯನ್ನು ಕರೆದುಕೊಂಡು ಕಾಶೀರಾಜ ದಿವೋದಾಸನಲ್ಲಿಗೆ ಹೋದನು. ಮಾಧವಿ ಯನ್ನು ಅವನಿಗೆ ಕೊಟ್ಟು ೨೦೦ ಕುದುರೆಗಳನ್ನು ಪಡೆದನು. ಈ
ರಾಜನಿಂದ ಮಾಧವಿಗೆ ಪ್ರತರ್ದನನೆಂಬ ಮಗನು ಹುಟ್ಟಿದನು. ಆಮೇಲೆ ಗಾಲವನು ಮಾಧವಿಯನ್ನು ಕರೆದುಕೊಂಡು ಭೋಜರಾಜನಾದ ಉಷೀನರನಿಗೆ ಕೊಟ್ಟು ೨೦೦ ಕುದುರೆಗಳನ್ನು ಸಂಪಾದಿಸಿದನು. ಉಷೀನರನಿಗೆ ಮಾಧವಿಯಲ್ಲಿ ಶಿಬಿ ಎಂಬ ಮಗನು ಜನಿಸಿದನು. ಕೊನೆಗೆ ಗಾಲವನು ಈ ೬೦೦ ಕುದುರೆಗಳನ್ನೂ, ಉಳಿದ ೨೦೦ ಕುದುರೆಗಳಿಗೆ ಬದಲಾಗಿ ಮಾಧವಿಯನ್ನೂ ವಿಶ್ವಾಮಿತ್ರನಿಗೊಪ್ಪಿಸಿದನು. – ಇದು ಕುದುರೆ ವ್ಯಾಪಾರ!
ಚುನಾವಣೆ ಆದಮೇಲೆ ಇದನ್ನೂ ಕಾಣಲಿದ್ದೇವೆ. ಕರ್ನಾಟಕವೆಂಬ ಮಾಧವಿ ಯನ್ನು ಇದ್ದಬಿದ್ದವರೆಲ್ಲ ಭೋಗಿಸಲಿದ್ದಾರೆ. ಸ್ವಯಂಪ್ರಭೆಯುಳ್ಳ ಸಾಮಾನ್ಯ ಜನತೆ ಮಾತ್ರ ಅಸಹಾಯಕರಾಗಿಯೇ ಉಳಿಯಲಿದ್ದಾರೆ.