Saturday, 14th December 2024

ಪುಷ್ಪಭಾಷೆ: ಹೂವುಗಳ ಮೂಲಕ ಭಾವಗಳ ಸಂವಹನ

ತಿಳಿರುತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

‘ಅ ಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಃ| ಸರ್ವಭೂತದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ| ಜ್ಞಾನಪುಷ್ಪಂ ತಪಃ ಪುಷ್ಪಂ ಶಾಂತಿಪುಷ್ಪಂ ತಥೈವ ಚ| ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್’ – ಹೀಗೊಂದು ಸುಂದರವಾದ ಸಂಸ್ಕೃತ ಶ್ಲೋಕವಿದೆ.

ಅಹಿಂಸೆ, ಇಂದ್ರಿಯನಿಗ್ರಹ, ಎಲ್ಲ ಜೀವಿಗಳ ಮೇಲೂ ದಯೆ ತೋರುವುದು, ಕ್ಷಮೆ, ಜ್ಞಾನ, ತಪಸ್ಸು, ಶಾಂತಿ, ಮತ್ತು ಸತ್ಯ- ಇವು ಎಂಟು
ಭಾವಪುಷ್ಪಗಳು. ಇವುಗಳಿಂದ ಅರ್ಚನೆ ಮಾಡಿದರೆ ಭಗವಂತನು ಸಂತುಷ್ಟನಾಗುತ್ತಾನೆ ಎಂದು ಶ್ಲೋಕದ ಅರ್ಥ. ಇರಬಹುದು, ಆದರೆ ಪ್ರಾಪಂಚಿಕ ಸುಖಭೋಗಗಳಿಂದ ದೂರವಿರುವ ಯೋಗಿಗಳಿಗಷ್ಟೇ ಹಾಗೆ ಭಾವಪುಷ್ಪಗಳಿಂದ ದೇವರನ್ನು ಪೂಜಿಸುವುದು ಸಾಧ್ಯ ವಾಗಬಹುದು.

ಪ್ರದರ್ಶನ ಪ್ರಿಯರಾದ ನಾವು ಎಂಥವರೆಂದರೆ ದೇವರ ಪೂಜೆಯಲೂ ನಮ್ಮದು ಡೌಲು ದಂಭಾಚಾರ. ‘ಪೂಜಿಸಲೆಂದೇ ಹೂಗಳ ತಂದೆ…’ ಎಂದುಕೊಂಡು ಬಣ್ಣಬಣ್ಣದ ಹೂವುಗಳು, ನಾನಾವಿಧ ಪರಿಮಳ ಪುಷ್ಪಗಳು – ಸೇವಂತಿಕಾ ಬಕುಲ ಚಂಪಕ ಪಾಟಲ ಪುನ್ನಾಗ ಜಾತಿ ಕರವೀರ ರಸಾಲ ಬಿಲ್ವಪ್ರವಾಲ ತುಲಸೀದಲ ಮಾಲತೀ… ಮುಂತಾದುವೆಲ್ಲ ಇದ್ದರೇನೇ ನಾವು ಮಾಡುವ ಪೂಜೆಗೊಂದು
ಗತ್ತು.

ಬಹುಶಃ ನೀವೂ ಗಮನಿಸಿರಬಹುದು – ಇತ್ತೀಚಿನ ವರ್ಷಗಳಲ್ಲಿ, ಸೋಶಿಯಲ್ ಮೀಡಿಯಾ ಜಮಾನಾದಲ್ಲಿ, ಸತ್ಯನಾರಾಯಣ ಪೂಜೆ ಯಂಥ ಸಾಮಾನ್ಯ ಅರ್ಚನೆಗೂ ದೇವರ ಮಂಟಪದ ಎದುರಿಗೆ ನೆಲದ ಮೇಲೆ ದೊಡ್ಡದೊಡ್ಡ ಮಂಡಲ ಗಳನ್ನು ಬರೆದು ಮಣಗಟ್ಟಲೆ ಹೂವುಗಳಿಂದ ಅಲಂಕರಿಸಿರುತ್ತಾರೆ. ಪೂಜೆ ಮಾಡಿಸುವ ಭಟ್ಟರ ಆದೇಶವೋ, ಮನೆ ಯಜಮಾನನದೇ ಅಂತರಂಗದ ಅಭಿಲಾಷೆಯೋ, ಅಂತೂ ಭರ್ಜರಿ ಮಂಡಲಗಳು ವಿಜೃಂಭಿಸುತ್ತವೆ. ಪರಿಪರಿಯ ಪುಷ್ಪವಿನ್ಯಾಸದ ಚಿತ್ತಾರಗಳು ಕಣ್ಣುಗಳಿಗೆ ಹಬ್ಬವಾಗುತ್ತವೆ. ಅವುಗಳ ಫೋಟೊ ಮತ್ತು ವಿಡಿಯೊಗಳು ಲೈವ್ ಆಗಿ ವಾಟ್ಸಪ್ ಫೇಸ್‌ಬುಕ್‌ಗಳಲ್ಲಿ ಪ್ರಸಾರವಾಗುತ್ತವೆ.

ಮತ್ತೆ ಕೆಲವು ಸಿರಿವಂತರು ಬಂಗಾರದ ಹೂವುಗಳನ್ನೇ ದೇವರಿಗೆ ಅರ್ಪಿಸಿ ತಮ್ಮ ದೌಲತ್ತನ್ನು ಮೆರೆವವರೂ ಇರುತ್ತಾರೆ. ಒಟ್ಟಿನಲ್ಲಿ ಭಾವಪುಷ್ಪವಿರಲಿ, ಜೀವಪುಷ್ಪವಿರಲಿ, ಸ್ವರ್ಣಪುಷ್ಪವೇ ಇರಲಿ, ದೇವರನ್ನು ಸಂಪ್ರೀತಗೊಳಿಸಲಿಕ್ಕೆ ಪುಷ್ಪಗಳನ್ನು ನಾವು ಒಂದು ಮಾಧ್ಯಮ ವಾಗಿಸಿಕೊಂಡಿದ್ದೇವೆ.

ಅದೂ ದ್ವಿಮುಖ ಸಂವಹನದ ಮಾಧ್ಯಮ: ದೇವರ ಅನುಗ್ರಹ ನಮ್ಮನ್ನು ತಲುಪುವುದೂ ಪ್ರಸಾದ ಎಂದು ಮುಡಿದುಕೊಳ್ಳುವ ಪುಷ್ಪ ದಿಂದಲೇ! ಆದರೆ ಭಕ್ತಿಯ ಅಭಿವ್ಯಕ್ತಿಗಷ್ಟೇ ಅಲ್ಲ ನಾವು ಹೂವುಗಳನ್ನು ಬಳಸುವುದು. ಪ್ರೀತಿಯ ಪ್ರತಿಬಿಂಬ ಮೂಡುವುದೂ ಹೂವಿನಲ್ಲೇ.

ಇಂಗ್ಲಿಷ್ ಕವಿ ಆಲ್ರೆಡ್ ಟೆನಿಸನ್ ಒಂದು ತ್ರಿಪದಿಯಲ್ಲಿ ಹೇಳಿದ್ದಾನೆ: Any man that walks the mead| In a bud or blade or bloom may find| A meaning suited to his mind. ಉದ್ಯಾನವನದಲ್ಲಿ ನಡೆದಾಡುವವನೊಬ್ಬ ಯಾವುದೇ ಮೊಗ್ಗನ್ನಾಗಲೀ ಹೂವನ್ನಾಗಲೀ ಕಂಡಾಗ ತನ್ನ ಮನಸ್ಸಿಗೆ ತತ್‌ಕ್ಷಣಕ್ಕೆ ಸಮಂಜಸವೆನಿಸುವ ಒಂದು ಅರ್ಥವನ್ನು ಅದಕ್ಕೆ ಕಟ್ಟುತ್ತಾನೆ. ಅದು ಸಂತೋಷ ಇರಬಹುದು, ಸಂತೃಪ್ತಿ ಇರಬಹುದು, ಉಲ್ಲಾಸ ಇರಬಹುದು, ಉತ್ಸಾಹವೂ ಇರಬಹುದು. ಎಷ್ಟು ನಿಜ ಅಲ್ವಾ!

ಪ್ರವಾದಿ ಮಹಮ್ಮದ ಪೈಗಂಬರರು ಹೇಳಿದ್ದೆನ್ನಲಾದ ಮಾತೊಂದಿದೆ ‘ಹೂವುಗಳು ಆತ್ಮದ ಆಹಾರ’ (Flowers are food for the soul) ಎಂದು. ಅದೂ ನಿಜವೇ. ಭಾವನೆಗಳನ್ನು ಉದ್ದೀಪನಗೊಳಿಸುವ ಶಕ್ತಿ ಹೂವಿಗಿದ್ದಂತೆ ಇನ್ನಾವುದಕ್ಕೂ ಇಲ್ಲ. ಹೂವಿನ ಬಣ್ಣಗಳು ನಮ್ಮ ಅಕ್ಷಿಪಟದ ಮೇಲೆ ಗಾಢವಾಗಿ ಅಚ್ಚೊತ್ತಿದರೆ, ಅದರ ಪರಿಮಳವಂತೂ ಮೂಗಿನ ಮೂಲಕ ಮೆದುಳಿನವರೆಗೂ ತಲುಪುತ್ತದೆ. ಅದು ಬರೀ ಪರಿಮಳವಷ್ಟೇ ಅಲ್ಲ, ಮಧುರವೆನಿಸುವ ರುಚಿ ಎಂದೇ ಮೆದುಳು ಅರ್ಥೈಸಿಕೊಳ್ಳುವಂತೆ ಮಾಡುತ್ತದೆ. ಆ ವಿಶೇಷ ಶಕ್ತಿಯಿಂದಾ ಗಿಯೇ ಹೂವು ಅನಾದಿಕಾಲದಿಂದಲೂ ಭಾವನೆಗಳನ್ನು ಪ್ರತಿಬಿಂಬಿಸಲು, ಅದರಲ್ಲೂ ಮುಖ್ಯವಾಗಿ ಪ್ರೀತಿಯನ್ನು ಪ್ರಕಟಪಡಿಸಲು ಒಂದು ಪರಿಣಾಮಕಾರಿ ಸಂಕೇತವಾಗಿ ರೂಪುಗೊಂಡಿದೆ.

ರೆಡ್ ರೋಸ್ ಎಂದರೆ ಲವ್ ಸಿಂಬಲ್. ಪ್ರಿಯತಮನು ಪ್ರಿಯತಮೆಯ ಎದುರು ಮಂಡಿಯೂರಿ ಕುಳಿತು ಕೆಂಪು ಗುಲಾಬಿ ಕೊಟ್ಟನೆಂದರೆ ತನ್ನೆಲ್ಲ ಪ್ರೀತಿಯನ್ನೂ ಆತ ಹೊರಗೆಡಹಿದ ಎಂದೇ ಅರ್ಥ. ‘ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ. ಈ ಹೂವಿ ನಂದ ಪ್ರೇಯಸೀ ನಿನಗಾಗಿ ಕೇಳೇ ಓ ರತಿ…’ ಅದರಾಚೆಗೆ ಯಾವ ಹೂವು ಯಾರ ಮುಡಿಗೋ. ಯಾರ ಒಲವು ಯಾರ ಕಡೆಗೋ. ಕೆಂಪು ಗುಲಾಬಿ ಪ್ರೀತಿಯ ಸಂಕೇತ ಎನ್ನುವುದರ ಆಚೆಗೂ ಹೂವುಗಳ ಪರಿಭಾಷೆ ವಿಸ್ತರಿಸುತ್ತದೆ.

ಕೆಂಪು ಗುಲಾಬಿ ಅಲ್ಲದೆಯೂ ನಾವು ಬೇರೆಬೇರೆ ಸಂದರ್ಭಗಳಲ್ಲಿ ಹೂಗಳನ್ನು ಬಿಡಿಬಿಡಿಯಾಗಿಯೋ, ಗುಚ್ಛದ ರೂಪದಲ್ಲೋ, ಹಾರದ
ರೂಪದಲ್ಲೋ ವಿನಿಮಯ ಮಾಡಿಕೊಳ್ಳುತ್ತೇವೆ. ಬಹುತೇಕವಾಗಿ ಸೌಹಾರ್ದ ಭಾವನೆ ಯಿಂದಲೇ. ಕೆಲವೊಮ್ಮೆ ಕಾಟಾಚಾರಕ್ಕೂ
ಇರಬಹುದು. ಆದರೆ, ‘ಈ ಹೂವನ್ನು ನಾನು ಈ ಒಂದು ಭಾವನೆಯನ್ನು ವ್ಯಕ್ತಪಡಿಸಲಿಕ್ಕಂತಲೇ ಕೊಡುತ್ತಿದ್ದೇನೆ. ಸ್ವೀಕರಿಸುವವರು ಕೂಡ ಇದನ್ನು ಅದೇ ಭಾವನೆಯ ಪ್ರತೀಕವೆಂದು ಅರ್ಥೈಸಿಕೊಳ್ಳಲಿ’ ಎಂದೆಲ್ಲ ನಾವು ತಲೆಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಅಷ್ಟು ವ್ಯವಧಾನ ನಮಗಿರುವುದಿಲ್ಲ.

ದುಂಡುಮಲ್ಲಿಗೆಯ ದಂಡೆ ಸಿಗದಿದ್ದರೆ ಮೊಳದಷ್ಟು ಉದ್ದದ ಹಳದಿ ಸೇವಂತಿಗೆಯ ಕುಚ್ಚನ್ನು ಕೊಳ್ಳುತ್ತೇವೆ. ಜಾಜಿಯಾದರೇನು
ಕನಕಾಂಬರವಾದರೇನು ಕಾಕಡಾ ಆದರೇನು ಹೂವೊಂದು ಬಳಿಬಂದು ಮನದನ್ನೆಯ ಮುಡಿಯೇರಿ ಆವತ್ತು ಮನೆಯಲ್ಲಿ ಮಲ್ಲಿಗೆಯಂಥ ಬೆಳದಿಂಗಳು ಹರಡಿದರೆ ಅಷ್ಟು ಸಾಕು. ಪ್ರಾಚೀನ ಯುರೋಪ್ ಸಂಸ್ಕೃಯಲ್ಲಿ, ಮುಖ್ಯವಾಗಿ ವಿಕ್ಟೋರಿಯನ್ ಯುಗದಲ್ಲಿ, ಹಾಗಿರಲಿಲ್ಲ. ಅಲ್ಲಿ Floriography ಅಥವಾ Language of flowers ಅಂತೊಂದು ಅಂಗೀಕೃತ ಸಂಪ್ರದಾಯವೇ ಚಾಲ್ತಿಯಲ್ಲಿತ್ತು. ಮೌಖಿಕ ಭಾಷೆಯಲ್ಲಿ ಶಿಷ್ಟಾಚಾರಗಳ ಅಥವಾ ನಿಯಮಗಳ ಪಾಲನೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಕಾಲಘಟ್ಟವದು.

ಮನಸ್ಸಿನ ಭಾವನೆಗಳನ್ನು ಸಂದೇಶ ರೂಪದಲ್ಲಿ ಒಬ್ಬರಿಂದೊಬ್ಬರಿಗೆ ತಲುಪಿಸಬೇಕಾದರೆ ಹೂವುಗಳ ಬಳಕೆ ಅನಿವಾರ್ಯವಾಗಿತ್ತು.
ಹಾಗಾಗಿ ಪ್ರೀತಿಗೆ ಮಾತ್ರವಲ್ಲ, ಸುಖ – ದುಃಖ, ದುಗುಡ – ದುಮ್ಮಾನ, ದ್ವೇಷ – ತಿರಸ್ಕಾರ ಹೀಗೆ ವಿಧವಿಧ ಭಾವನೆಗಳಿಗೆ ವಿಧವಿಧ ಹೂವುಗಳು. ಲ್ಯಾಂಗ್ವೇಜ್ ಆಫ್ -ವರ್ಸ್ ತಿಳಿದುಕೊಂಡಿದ್ದಾನೆ ಅಥವಾ ತಿಳಿದುಕೊಂಡಿದ್ದಾಳೆ ಎಂದರೆ ಆ ವ್ಯಕ್ತಿ ಬರೀ ಕಚಡಾ ಅಲ್ಲ, ಸ್ವಲ್ಪವಾದರೂ ಸುಸಂಸ್ಕೃತ, ಮಾಗಿದ ಮನಸ್ಸಿನವ ಎಂದು ಪರಿಗಣನೆ.

ಫ್ಲೋರಿಯೊಗ್ರಫಿ ನಿಘಂಟುಗಳಲ್ಲಿ ಇಂತಿಂಥ ಭಾವನೆಗಳ ಅಭಿವ್ಯಕ್ತಿಗೆ ಇಂಥಿಂಥ ಹೂವು ಮತ್ತು ಇಂಥಿಂಥ ಬಣ್ಣದ ಹೂವು ಎಂದೆಲ್ಲ ಸ್ಪಷ್ಟ ವಿವರಣೆಗಳಿವೆಯಂತೆ. ಕೆಲವು ಮೂಲಗಳ ಪ್ರಕಾರ, ಪುಷ್ಪಗಳ ಮೂಲಕ ಸಂವಹನ ಆರಂಭವಾದದ್ದು ಪೂರ್ವ ಏಷ್ಯಾದಲ್ಲಿ. ಜಪಾನ್ ದೇಶದಲ್ಲಿ ಅದನ್ನು ಹನಕೊಟೊಬಾ ಎನ್ನುತ್ತಾರಂತೆ. ಅಲ್ಲಿ ಸಮುರಾಯಿ ಗಳು ಈಗಲೂ ತಮ್ಮ ಕುಟುಂಬದ ಲಾಂಛನವಾಗಿ ನಿರ್ದಿಷ್ಟ
ಹೂವುಗಳನ್ನು ಬಳಸುತ್ತಾರೆ. ಬೌದ್ಧಧರ್ಮದಲ್ಲಿಯೂ ಪುಷ್ಪಭಾಷೆಯ ಪ್ರಭಾವವಿದೆ. ಬುದ್ಧನ ಉಪದೇಶಗಳು, ಅದರಿಂದಾಗುವ ಜ್ಞಾನೋದಯ, ವಿವೇಕ ಎಲ್ಲವನ್ನೂ ಪುಷ್ಪಗಳು ಪ್ರತಿನಿಧಿಸಬಲ್ಲವು.

ಹೂವುಗಳನ್ನು ಭಾವನೆಗಳ ಅಭಿವ್ಯಕ್ತಿಯಾಗಿಸುವುದು ಕ್ರಮೇಣ ಒಂದು ಪ್ರದೇಶದಿಂದ ಇನ್ನೊಂದಕ್ಕೆ ಹಬ್ಬುವುದು, ಅಲ್ಪಸ್ವಲ್ಪ ಮಾರ್ಪಾಡುಗೊಳ್ಳುವುದೂ ಇರಬಹುದು. ಉದಾಹರಣೆಗೆ ಇಂಗ್ಲಿಷ್‌ನಲ್ಲಿ ‘ಮೇರಿಗೊಲ್ಡ್’ ಎನ್ನುವ ಗೊಂಡೆ ಹೂವು. ಕಡುಕೇಸರಿ ಮತ್ತು ಹಳದಿ ಬಣ್ಣದ, ಸಾಂದ್ರವಾಗಿ ಪಕಳೆಗಳಿರುವ ಚಂದದ ಹೂವು. ಕಳೆದ ಒಂದೆರಡು ಶತಮಾನಗಳಿಂದ ಭಾರತದಲ್ಲಿ ಗೊಂಡೆ ಹೂವು ಶವಯಾತ್ರೆಯಲ್ಲಿ ಬೇಕೇಬೇಕು. ಅದು ದುಃಖದ, ಶೋಕದ ಸಂಕೇತ ಎಂದು ಪರಿಗಣನೆ. ಹಾಗೆ ನೋಡಿದರೆ ಮೇರಿಗೋಲ್ಡ್ ಹೂವಿನ ತವರೂರು ಮಧ್ಯ ಅಮೆರಿಕ ಪ್ರದೇಶ. ಅಲ್ಲಿ ಅದು ಸಂತೋಷ ಮತ್ತು ಶುಭಪ್ರತೀಕ್ಷೆಯ ಸಂಕೇತ. ಭಾರತಕ್ಕೆ ಮೇರಿಗೊಲ್ಡ್ ಬಂದದ್ದು,
ವಲಸೆಗಾರರ ಮತ್ತು ವಿದೇಶಿ ಆಕ್ರಮಣಕಾರರ ಮೂಲಕ.

ಹೆಚ್ಚೆಂದರೆ ಮೂರು ಶತಮಾನಗಳ ಹಿಂದೆ ಇರಬಹುದು. ಪಾಶ್ಚಾತ್ಯ ಜಗತ್ತಿನಲ್ಲಿ ಸಂತಸ ಸಂಭ್ರಮಗಳಿಗೆ ಬಳಕೆಯಾಗುವ ಮೇರಿಗೋಲ್ಡ್
ಭಾರತಕ್ಕೆ ಬಂದಾಗ ಸೂತಕದ ಛಾಯೆಯನ್ನು ನೆನಪಿಸುವ ಅಶುಭಸೂಚಕವಾಯಿತು. ಶೋಕದ, ಕರಾಳತೆಯ ಸಂಕೇತವಾಯಿತು.
ಪುಷ್ಪಭಾಷೆ ವಿಕ್ಟೋರಿಯಾ ಕಾಲದಲ್ಲಷ್ಟೇ ಶುರುವಾದದ್ದೇನಲ್ಲ ಎಂಬ ಅಭಿಪ್ರಾಯವೂ ಇದೆ. ಪ್ರಾಚೀನ ಗ್ರೀಕರ ಕಾಲದಲ್ಲೂ ಅದು ಇತ್ತಂತೆ. ಗ್ರೀಕ್ ಮತ್ತು ರೋಮನ್ನರ ನಂಬಿಕೆಯ ಪ್ರಕಾರ ಹೂವುಗಳೆಂದರೆ ದೇವಾಽದೇವತೆಗಳ, ಅಪ್ಸರೆಯರ, ಯಕ್ಷ – ಗಂಧರ್ವ – ಕಿನ್ನರ – ಕಿಂಪುರುಷರ ವಿವಿಧ ರೂಪಗಳು.

ಆದ್ದರಿಂದಲೇ ಹೂವಿಗೆ ದೈವತ್ವ ಮತ್ತು ಪಾವಿತ್ರ್ಯ. ಈಜಿಪ್ಟ್, ಗ್ರೀಸ್, ಚೀನಾ, ಭಾರತ ಮುಂತಾಗಿ ಪುರಾತನ ನಾಗರಿಕತೆಗಳಲ್ಲೆಲ್ಲ
ಹೂವು ಅಥವಾ ಹೂವಿನ ಚಿತ್ರಗಳು ಸಂಕೇತಗಳಾಗಿ ಬಳಕೆಯಾಗಿವೆ.Gillyflower is for gentleness, marigold is for marriage, and cowslips is for council ಎಂಬಂಥ ನುಡಿಗಟ್ಟುಗಳು ಹುಟ್ಟಿಕೊಂಡದ್ದೇ ಹಾಗೆ. ಟರ್ಕಿ ದೇಶದ ಜನರಿಗೆ ಬಹಳ ಹಿಂದಿನಿಂದಲೂ ಹೂವುಗಳ ಮೂಲಕವೇ ಭಾವನೆಗಳನ್ನು ವ್ಯಕ್ತಪಡಿಸುವ ಕಲೆ ಸಿದ್ಧಿಸಿತ್ತಂತೆ. ಹದಿನೇಳನೆಯ ಶತಮಾನದಲ್ಲಿ ಟರ್ಕಿ ದೇಶದಲ್ಲಿದ್ದ ಇಂಗ್ಲೆಂಡ್ ರಾಯಭಾರಿಯ ಪತ್ನಿ ಲೇಡಿ ಮೇರಿ ವೊರ್ಟ್ಲೆ ಎಂಬಾಕೆ ಸ್ವದೇಶದಲ್ಲಿದ್ದ ಸ್ನೇಹಿತೆಯೊಬ್ಬಳಿಗೆ ಬರೆದ ಪತ್ರದಲ್ಲಿ, ಟರ್ಕಿ ದೇಶದ ಸುಂದರ ಕನ್ಯೆಯರು ಹೂವುಗಳಿಗೂ ಮೌನಭಾಷೆ ಯೊಂದನ್ನು ಕಲಿಸಿದ್ದಾರೆ ಎಂದು ಬರೆದಿದ್ದಳಂತೆ.

1763ರಲ್ಲಿ ಆಕೆ ತನ್ನ ಕಾಗದಗಳ ಸಂಗ್ರಹವನ್ನು ಪ್ರಕಟಿಸಿ ಅದರಲ್ಲಿ ಪುಷ್ಪಭಾಷೆಯನ್ನು ರಸವತ್ತಾಗಿ ಬಣ್ಣಿಸಿದಳು. ಅಲ್ಲಿಂದ ಮುಂದೆ
ಇಂಗ್ಲೆಂಡ್‌ನಲ್ಲಿ ಫ್ಲೋರಿಯೊಗ್ರಫಿ ಕ್ರೇಜ್ ಬೆಳೆಯಿತು. ಪ್ರೇಮಿಗಳು ತಮ್ಮ ಹೆತ್ತವರ ಅಥವಾ ರಕ್ಷಕರ ಕೆಂಗಣ್ಣಿಗೆ ಗುರಿಯಾಗದೆ ಹೂವುಗಳ ವಿನಿಮಯದ ಮೂಲಕ ಪ್ರೀತಿ ಪ್ರಕಟಪಡಿಸುವ ಸುಲಭೋಪಾಯ ಕಂಡುಕೊಂಡರು. ಕವಿ ಥಾಮಸ್ ಹುಡ್ ಬರೆದಂತೆ sweet flowers alone can say what passion fears revealing  ಎಂದಾಯಿತು.

ಯಾವ ಹೂವು, ಯಾವ ಬಣ್ಣದ್ದು ಅಂತಷ್ಟೇ ಅಲ್ಲ, ಅದನ್ನು ಯಾವ ರೀತಿ ಕೊಡುತ್ತಿರುವುದು ಎನ್ನುವುದಕ್ಕೂ ಅರ್ಥ ಇದೆ. ಊರ್ಧ್ವಮುಖಿ ಯಾಗಿ ಹಿಡಿದು ಕೊಟ್ಟ ಹೂವು ಸಂತೋಷದ ಪ್ರತೀಕ. ಅಧೋಮುಖಿ ಹೂವು ದುಃಖದ ಚಿಹ್ನೆ. ಎಡಗಡೆಗೆ ಬಾಗಿಸಿ ಕೊಟ್ಟರೆ ತನ್ನ ಮನಸ್ಸಿನ ಆ ಕ್ಷಣದ ಸ್ಥಿತಿಯ ಪ್ರತಿಬಿಂಬ. ಬಲಗಡೆಗೆ ವಾಲಿಸಿದರೆ ಎದುರಿನವರ ಮನಸ್ಥಿತಿಯನ್ನು ತಾನೀಗ ಹೇಗೆ ಅರ್ಥೈಸಿದ್ದೇನೆಂಬು ದರ ಪ್ರತಿಬಿಂಬ. ಒಂದುವೇಳೆ ಹೌದು/ ಅಲ್ಲ ಉತ್ತರದ ಪ್ರಶ್ನೆಗಳ ಮೂಲಕ ಸಂಹವನ ಅಂತಾದರೆ ಬಲಗೈಯಿಂದ ಹೂವು ಕೊಟ್ಟರೆ ಸಕಾರಾತ್ಮಕ, ಎಡಗೈಯಿಂದ ಹೂವು ಕೊಟ್ಟರೆ ನಕಾರಾತ್ಮಕ ಉತ್ತರ ಎಂದು ತಿಳಿದುಕೊಳ್ಳಬೇಕು.

ಒಂದು ಉದಾಹರಣೆಯ ಮೂಲಕ ಬಣ್ಣಿಸುವುದಾದರೆ, ಒಬ್ಬ ತರುಣ ಒಬ್ಬ ತರುಣಿಯೆಡೆಗೆ ಆಕರ್ಷಿತನಾಗಿ ಅವಳಿಗೊಂದು ಗುಲಾಬಿ ಹೂವು ಕೊಡುತ್ತಾನೆ ಅಂತಿಟ್ಟುಕೊಳ್ಳೋಣ. ಅದರ ದಂಟಿನಲ್ಲಿ ಮುಳ್ಳುಗಳೂ, ಒಂದೆರಡು ಎಲೆಗಳೂ ಇದ್ದರೆ ತರುಣ ‘ನನಗೇಕೋ ಭಯವಾಗುತ್ತಿದೆ, ಆದರೂ ಭರವಸೆಯಿಂದಿದ್ದೇನೆ’ ಎನ್ನುತ್ತಿದ್ದಾನೆ ಅಂತ ಅರ್ಥ. ತರುಣಿಯೇನಾದರೂ ಅದನ್ನು ಬೋರಲಾಗಿ ಹಿಡಿದು ಹಿಂದಿರುಗಿಸಿದರೆ ‘ನಿನಗೆ ಭಯವೂ ಬೇಡ, ಭರವಸೆಯೂ ಬೇಡ’ ಎನ್ನುತ್ತಿದ್ದಾಳೆಂದು ಅರ್ಥ. ಮುಳ್ಳುಗಳನ್ನು ತೆಗೆದು ಗುಲಾಬಿಯನ್ನು ಹಿಂದಿರುಗಿಸಿದರೆ ‘ಭರವಸೆ ಕೈಗೂಡುವ ಸಾಧ್ಯತೆಯಿದೆ’ ಎಂದರ್ಥ. ಎಲೆಗಳನ್ನಷ್ಟೇ ತೆಗೆದು ಗುಲಾಬಿಯನ್ನು ಅವನಿಗೆ ಹಿಂದಿರುಗಿಸಿದರೆ ‘ಭಯಪಡುವುದಷ್ಟೇ ನಿನ್ನ ಹಣೆಬರಹ’ ಎಂದು ಇಂಗಿತ. ಅವಳೇನಾದರೂ ಗುಲಾಬಿಯನ್ನು ತಲೆಯಲ್ಲಿ ಮುಡಿದುಕೊಂಡರೆ ‘ಸಾವಧಾನ,
ನಿಧಾನವಾಗಿ ಮುನ್ನಡೆ’ ಎಂದು ಅರ್ಥಮಾಡಿಕೊಳ್ಳಬೇಕು.

ಎಲ್ಲ ಸರಿಹೋಗಿ ಅವಳು ಹೂವನ್ನು ಎದೆಗವುಚಿಕೊಂಡರೆ… ಫಲಿಸಿತು ಒಲವಿನ ಪೂಜಾಫಲ ಎನಗಿಂದು ಕೂಡಿಬಂತು ಕಂಕಣಬಲ!
ತರುಣನ ಸಂತಸಕ್ಕೆ ಪಾರವೇ ಇಲ್ಲ. ಹತ್ತೊಂಬತ್ತನೆಯ ಶತಮಾನದ ವೇಳೆಗೆ ಫ್ಲೋರಿಯೊಗ್ರಫಿ ನಿಘಂಟುಗಳು ರಾಶಿರಾಶಿಯಾಗಿ ಪ್ರಕಟಗೊಂಡವು. ಆದರೆ ಅವೆಲ್ಲ ಏಕರೂಪದ ವಿವರಣೆಯುಳ್ಳವುಗಳಲ್ಲ. ಹಾಗಾಗಿ ಎಷ್ಟೋ ಸಲ ಪುಷ್ಪಭಾಷೆಯಲ್ಲೂ ಆಭಾಸಗಳಾಗು ತ್ತಿದ್ದವು. ಲೌಸಾ ಟ್ಯಾಮ್ಲೆ ಎಂಬ ಕವಯಿತ್ರಿ Carnations and Caveliers ಕವನದಲ್ಲಿ ಬಣ್ಣಿಸುತ್ತಾಳೆ – ಒಬ್ಬ ವೀರಯೋಧ ತನ್ನ ಪ್ರಿಯತಮೆಗೆ ಗುಲಾಬಿ ಬಣ್ಣದ ಗುಲಾಬಿ ಹೂವುಗಳನ್ನು ಕಳುಹಿಸಿದನಂತೆ.

ಅವಳಿಗಾದರೋ ಪುಷ್ಪಭಾಷೆ ಗೊತ್ತಿಲ್ಲ ಅಥವಾ ಅವಳು ಅದರ ಬಗ್ಗೆ ಕೇರ್ ಮಾಡುವವಳಲ್ಲ. ಅವಳು ತನ್ನ ಕಡೆಯಿಂದ ವೀರಯೋಧನಿಗೆ ಕಾರ್ನೇಶನ್(ದಾಸವಾಳ ವನ್ನು ಹೋಲುವ) ಹೂವನ್ನು ಕಳುಹಿಸುತ್ತಾಳೆ. ಅದನ್ನವಳು ಮಾಡಿದ್ದು ಉತ್ಕಟವಾದ ಪ್ರೀತಿಯಿಂದಲೇ. ಆದರೆ ಈತನ ಪುಷ್ಪಭಾಷೆಯಲ್ಲಿ ಕಾರ್ನೇಶನ್ ಹೂವೆಂದರೆ ತಿರಸ್ಕಾರದ ಭಾವನೆಯ ಪ್ರತೀಕ. ಆಘಾತಗೊಂಡ ವೀರಯೋಧ ಸತ್ತೇ ಹೋಗುತ್ತಾನೆ. ಅವನು ಸತ್ತನೆಂದು ಕೇಳಿದ ಪ್ರಿಯತಮೆಯೂ ಪ್ರಾಣ ತ್ಯಜಿಸುತ್ತಾಳೆ. ಪದ್ಯ ಟ್ರಾಜಿಕ್ ಅಂತ್ಯ ಕಾಣುತ್ತದೆ. ಪ್ರೀತಿಯ ವ್ಯವಹಾರಕ್ಕಷ್ಟೇ ಅಲ್ಲ. ದ್ವೇಷ ಪ್ರದರ್ಶನಕ್ಕೆ, ಅವಮಾನ ಮಾಡುವುದಕ್ಕೆ, ಉಪೇಕ್ಷೆ ಮಾಡುವುದಕ್ಕೆ ಕೂಡ ಹೂವುಗಳ ಬಳಕೆ ಇದೆ. ನಿರ್ಮಲವಾದ ಸ್ನೇಹಭಾವದ ವರ್ಧನೆಗೂ, ಗತಕಾಲದ ನೆನಪೊಂದನ್ನು ಮರುಕಳಿಸುವ ಸಿಹಿ ಅಚ್ಚರಿಯಾಗಿಯೂ ಹೂವು ಕಾರ್ಯವೆಸಗ ಬಲ್ಲದು.

‘ಹೂವೇ ಹೂವೇ ನಿನ್ನೀ ನಗುವಿಗೆ ಕಾರಣವೇನೇ…?’ ಎಂದು ಹೂವನ್ನೇ ಕೇಳಿ ಕಂಡುಕೊಳ್ಳಬೇಕಾದ ಪರಿಸ್ಥಿತಿಯೂ ಬರಬಹುದು!
ಇದಿಷ್ಟು, ಮನುಷ್ಯನ ಭಾವನೆಗಳನ್ನು ಹೂವುಗಳ ಮೂಲಕ ವ್ಯಕ್ತಪಡಿಸುವುದಾಯ್ತು. ಹೂವಿಗೇ ಭಾವನೆಗಳಿರುತ್ತಿದ್ದರೆ!? ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯ… ಏನೆಂದು ಕೇಳಲು ಹೇಳಿತು ಜೇನಂಥ ಸಿಹಿನುಡಿಯ…’ ಎನ್ನುವುದು ನಿಜವಾಗಿಯೂ ನಮ್ಮ ಅನು ಭವಕ್ಕೆ ಬರುತ್ತಿತ್ತು. ಒಂದು ಹೂವು ಪಿಸುಮಾತಿನಲ್ಲಿ ನಮ್ಮ ಬಳಿ ಏನನ್ನೋ ಹೇಳುತ್ತಿದೆಯೋ, ಮಧುರವಾದದ್ದೇನನ್ನೋ ತಿಳಿಸುತ್ತಿದೆ ಯೋ ಎಂಬ ಚಿತ್ರಣವನ್ನು ಒಮ್ಮೆ ಕಲ್ಪಿಸಿ.

ಬಹುಶಃ ಅಂತಹ ಚಂದದ ಕಲ್ಪನೆಯಿಂದಲೇ ಹಿಂದೀ ಭಾಷೆಯ ಕವಿ ಮಾಖನಲಾಲ್ ಚತುರ್ವೇದಿಯವರು ‘ಪುಷ್ಪ ಕೀ ಅಭಿಲಾಷಾ’ ಕವಿತೆ ಬರೆದರು. ನಮಗೆ ಅದು ಏಳನೆಯ ತರಗತಿಯ ಹಿಂದೀ ಪಠ್ಯಪುಸ್ತಕದಲ್ಲಿ ‘ಫೂಲ್ ಕೀ ಚಾಹ್’ ಎಂಬ ಶೀರ್ಷಿಕೆಯೊಂದಿಗೆ ಇತ್ತು. ಹೂವಿ ನಷ್ಟೇ ಚಂದವಾದ ಪದ್ಯ. ‘ಚಾಹ್ ನಹೀ ಮೈಸುರಬಾಲಾ ಕೇ ಗೆಹನೊ ಮೆ ಗೂಂಥಾ ಜಾವೂಂ…’ ಎಂದು ಅದರ ಮೊದಲ ಸಾಲು. ‘ಮುಝೇ ತೋಡ್ ಲೇನಾ ವನಮಾಲೀ, ಉಸ್ ಪಥ್ ಪರ್ ದೇನಾ ತುಮ್ ಫೇಂಕ್| ಮಾತೃಭೂಮಿ ಪರ್ ಶೀಶ ಚಢಾನೆ ಜಿಸ್ ಥ ಜಾವೇ ವೀರ ಅನೇಕ್|’ ಎಂದು ಕೊನೆಯ ಸಾಲು.

ಆ ಪದ್ಯದಲ್ಲಿ ಹೂವು ಮಾತನಾಡುತ್ತದೆ. ತನ್ನ ಮನದಾಳದ ಆಸೆಯನ್ನು ಹೇಳಿಕೊಳ್ಳುತ್ತದೆ. ‘ಸುರಬಾಲೆಯರ ಕೇಶಶೃಂಗಾರದ ವಸ್ತು ಆಗುವ ಆಸೆ ನನಗಿಲ್ಲ. ಪ್ರೇಮಿಗಳ ಕೊರಳ ಮಾಲೆಯಾಗಿ ಅವರ ಪ್ರೀತಿಯ ಸಂಕೇತವಾಗುವ ಬಯಕೆಯಿಲ್ಲ. ದೇವರ ವಿಗ್ರಹಗಳ ಅಲಂಕಾರವಾಗಿ ಭಾಗ್ಯವಂತ ಎನಿಸಿಕೊಳ್ಳುವ ಇಚ್ಛೆಯಿಲ್ಲ. ಸಮ್ರಾಟರ ಶವಗಳ ಮೇಲಿನ ಹೂವಾಗಿ ಮಾನ್ಯತೆ ಪಡೆಯುವ ಆಸೆಯೂ ನನ್ನದಲ್ಲ. ಎಲೈ ಮಾಲಿಯೇ, ನನ್ನನ್ನು ಗಿಡದಿಂದ ಕಿತ್ತು ಆ ದಾರಿಯುದ್ದಕ್ಕೂ ಬಿಸಾಡು. ಎಲ್ಲಿ ಮಾತೃಭೂಮಿಗಾಗಿ ತಲೆಯನ್ನೇ ಒಪ್ಪಿಸಲು ಸಿದ್ಧರಿರುವ ವೀರ ಸೈನಿಕರು ನಡೆಯುತ್ತಾರೋ ಆ ದಾರಿಯಲ್ಲಿ ನನ್ನ ಎಸಳುಗಳನ್ನು ಹರಡು. ಆ ಸೈನಿಕರ ಪಾದದಡಿಯ ಹುಡಿಯಾಗುವು ದೊಂದೇ ನನಗಿರುವ ಆಸೆ’ ಎನ್ನುತ್ತದೆ.

ಹೂವಿನ ಒಡಲಾಳದಿಂದ ಎಂಥ ಅದ್ಭುತವಾದ ಮಾರ್ಮಿಕವಾದ ಮಾತು! ‘ಚೆಲುವೆಲ್ಲ ನಂದೆಂದಿತು…’ ಎಂದು ಹೂವು ಯಾವಾಗಲೂ ಬೀಗುತ್ತಿರುತ್ತದೆ, ಬಿಂಕದ ಸಿಂಗಾರಿ ಆಗಿರುತ್ತದೆ ಎಂದು ನಾವಂದುಕೊಳ್ಳುತ್ತೇವಷ್ಟೇ. ನಿಜವಾಗಿ ಹೂವಿನ ಮನದ ಆಶೆ, ಅದೇ – ಪುಷ್ಪ ಭಾಷೆ, ಮನಮುಟ್ಟುವಂಥದು. ಹೃದಯವನ್ನು ತಾಕುವಂಥದು.