ತನ್ನಿಮಿತ್ತ
ಕೆ.ಶ್ರೀನಿವಾಸರಾವ್
ಶುಭ್ರವ್ಠೇ ರಾಮಸ್ವಾಮಯ್ಯ ಸೀತಾರಾಮ ಶರ್ಮ ಎಂದಾಗ ಹುಬ್ಬೇರಿಸುವ ಜನ ಅವರೇ ಪುಟ್ಟಣ ಕಣಗಾಲ್ ಎಂದಾಗ ಅಬಾಲ ವೃದ್ಧರಾದಿಯಾಗಿ ಎಲ್ಲರೂ ಗುರುತಿಸುವರು!
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಜನಿಸಿದ್ದು 1 ಡಿಸೆಂಬರ್ 1933. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ಉದರಂಭರಣಕ್ಕಾಗಿ ನಾಟಕ ಕಂಪನಿಯಲ್ಲಿ ಕೆಲಸ. ನಂತರ ಸುಖ್ಯಾತ ನಿರ್ದೇಶಕ ಬಿ.ಆರ್.ಪಂತಲುರವರ ಆಶ್ರಯದಲ್ಲಿ ಡ್ರೈವರ್, ಸಂಭಾಷಣೆಯ ಶಿಕ್ಷಕ, ಕೊನೆಗೆ ಅವರ ಬಹುತೇಕ ಚಿತ್ರಗಳಿಗೆ ಸಹಾಯಕ ನಿರ್ದೇಶಕನ ಪಟ್ಟ.
ಮಲಯಾಳಂನ ಸ್ಕೂಲ್ ಮಾಸ್ಟರ್ (1964) ಚಿತ್ರದಿಂದ ಪುಟ್ಟಣ್ಣ ನಿರ್ದೇಶಕನ ಹ್ಯಾಟ್ ಧರಿಸಿದರು. ಕೊನೆಯವರೆಗೂ ಆ ಹ್ಯಾಟ್ ಅವರ ತಲೆಯ ಮೇಲಿರುತ್ತಿತ್ತು. ನಂತರ ನಾಲ್ಕೂ ಮಲಯಾಳಂ ಚಿತ್ರಗಳೆ! ಕಳಂಜು ಕೇಟ್ಟಿಯ ತಂಗಂ (1964), ಚೆಟ್ಟಾದಿ (1965), ಮೇಯರ್ ನಾಯರ್ (1966) ನಂತರ ಅವರ ಮೊಟ್ಟ ಮೊದಲ ಕನ್ನಡ ಚಿತ್ರ ಬೆಳ್ಳಿ ಮೋಡ (1967) ರಜತ ಪರದೆಯಲ್ಲಿ ಒಂದು ಪ್ರೇಮ ಕಾವ್ಯವಾಗಿ ಮೂಡಿ ಬಂದಿತು.
ಹೆಂಗಳೆಯರ ಮನಗೆದ್ದ ಈ ಚಿತ್ರದಿಂದ ಪುಟ್ಟಣ್ಣ-ಕಲ್ಪನಾ ಜೋಡಿ ಜನಪ್ರಿಯವಾಯಿತು. ಮುಂದೆ ತೆಲುಗು, ತುಳು, ಮಲ ಯಾಳಂ, ಹಿಂದಿ ಚಿತ್ರಗಳ ನಡುವೆ ಪುಟ್ಟಣ್ಣ ನಿರ್ದೇಶನದ ಒಟ್ಟು 23 ಕನ್ನಡ ಚಿತ್ರಗಳು ತೆರೆಕಂಡವು. ಅವುಗಳಲ್ಲಿ ಶೇಕಡಾ 75 ಹಿಟ್! ಶೇಕಡಾ 25 ಸಾಧಾರಣ ಯಶಸ್ವಿ! ಫೇಲ್ ಆದವು ಸೊನ್ನೆ!
ಪುಟ್ಟಣ್ಣನವರು ಭಾವಜೀ, ಬಹುತೇಕ ಅವರ ಚಿತ್ರಗಳು ಕಾದಂಬರಿ ಆಧಾರಿತ, ಹಿಂದೂ ಧರ್ಮದ ಪ್ರತೀಕ. ಹೆಣ್ಣಿನ ಮನೋ ತಲ್ಲಣಗಳನ್ನು ಸೂಕ್ಷ್ಮವಾಗಿ ತೋರುತ್ತಿದ್ದುದರಿಂದ ಮಹಿಳಾ ಪ್ರೇಕ್ಷಕರೇ ಅಧಿಕ. ಅವರ ಎಲ್ಲಾ ಚಿತ್ರಗಳಲ್ಲಿ ಕನ್ನಡದ ಅಸ್ಮಿತೆ, ಕರ್ನಾಟಕದ ಹೃನ್ಮನ ತಣಿಸುವ ಪ್ರಕೃತಿ ದರ್ಶನ. ಕನ್ನಡ ಕವಿಗಳ ಗೀತೆಗಳು ಸರ್ವೇ ಸಾಮಾನ್ಯ. ಅ,ಆ,ಇ,ಈ ಕನ್ನಡದ ಅಕ್ಷರ ಮಾಲೆ ಹಿಂದೂಸ್ಥಾನವು ಎಂದೂ ಮರೆಯದ, ಕನ್ನಡ ನಾಡಿನ ವೀರರ ರಮಣಿಯ ಇವು ಕೆಲವು ಉದಾಹರಣೆಗಳು.
ಪುಟ್ಟಣ್ಣನವರು ಹಲವು ಕಲಾವಿದರನ್ನು ತೆರೆಗೆ ಪರಿಚಯಿಸಿದರು. ನಟರಲ್ಲಿ ವಿಷ್ಣುವರ್ಧನ್, ಅಂಬರೀಶ್, ರಾಮಕೃಷ್ಣ, ಜೈ ಜಗದೀಶ್, ಶ್ರೀಧರ್, ಪ್ರಮುಖರಾದರೆ, ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾವಾಸಂತಿ ಪ್ರಮುಖರು. ಶ್ರೀನಾಥ್‌ರವರ ತಾರಾ ಜೀವನವೇ ಇನ್ನೇನು ಮುಗಿಯಿತು ಎನ್ನುವಾಗ ಅವರನ್ನು ನಾಯಕರನ್ನಾಗಿಸಿ ಶುಭಮಂಗಳ ಮೂಲಕ ಮತ್ತೆ ಪುನರ್ಜನ್ಮ ನೀಡಿ ದ್ದರು. ಪುಟ್ಟಣ್ಣನವರಿಗೆ ಮೂಗಿನ ತುದಿಗೇ ಕೋಪ, ನಿಜ! ನಟರು ತಮ್ಮ ಕಲ್ಪನೆಯಮಟ್ಟಕ್ಕೆ ಅಭಿನಯಿಸದಿದ್ದರೆ ಕೂಗಾಡಿ ಕೆನ್ನೆಗೆ ಬಾರಿಸುತ್ತಿದ್ದರು. ಜೆಹರೀಲಾ ಇನ್ಸಾನ್ (ಕನ್ನಡದ ನಾಗರಹಾವು) ಚಿತ್ರೀಕರಣದಲ್ಲಿ ಹಿಂದಿಯ ಶೋಮ್ಯಾನ್ ರಾಜ್ ಕಪೂರ್‌ರ ಪುತ್ರ ರಿಶಿ ಕಪೂರ್ ಸರಿಯಾಗಿ ಅಭಿನಯಿಸದೇ ಇದ್ದಾಗ ಕಪಾಲಕ್ಕೆ ರಪ್ಪೆನಿಸಿದ್ದರು. ಪುಟ್ಟಣ್ಣ ಗುಣಮಟ್ಟಕ್ಕೆ ಎಂದಿಗೂ
ರಾಜಿಯಾಗುತ್ತಿರಲಿಲ್ಲ.
ಸಾಕ್ಷಾತ್ಕಾರ ಚಿತ್ರದ ಅಂತಿಮ ದೃಶ್ಯದಲ್ಲಿ ದೃಶ್ಯ ವೈಭವೀಕರಣಕ್ಕಾಗಿ ಆಗಿನ ಕಾಲದಲ್ಲಿಯೇ 50 ಸಾವಿರ ರುಪಾಯಿಯ ಲೋಬಾನ ತರಿಸಿದ್ದರು. ಬೆಳ್ಳಿಮೋಡದ ಕೊನೆಯ ದೃಶ್ಯದಲ್ಲಿ ಗುಡ್ಡದ ತುತ್ತ ತುದಿಯಲ್ಲಿ ನಾಯಕಿಯ ಬೇಗೆಯನ್ನು ತೋರಿಸಲು ಕಾಡಿನಿಂದ ಬೋಳುಮರವೊಂದನ್ನು ಕಿತ್ತು ತರಿಸಿ ಅಲ್ಲಿ ನೆಡಿಸಿದ್ದರು, ಆರತಿಯವರೊಂದಿಗೆ 11 ಚಿತ್ರಗಳನ್ನು ನಿರ್ದೇಶಿಸಿ ಅವರನ್ನೇ ವಿವಾಹವಾಗಿ 5 ವರ್ಷಗಳ ನಂತರ ದೂರವಾಗಿದ್ದರು. ನಾಗರಹಾವು ಕಾದಂಬರಿ ಕರ್ತೃ ತ.ರಾ.ಸು.ರವರು ಚಿತ್ರದ ಪ್ರೀಮಿಯರ್ ಪ್ರದರ್ಶನದಂದು ಇದು ನಾಗರಹಾವಲ್ಲ ಕೇರೆ ಹಾವು ಎಂದು ಜರೆದಿದ್ದರು. ಆದರೆ ಚಿತ್ರ ಅಭೂತಪೂರ್ವ ವಿಜಯ ಸಾಧಿಸಿ ಬೆಂಗಳೂರಿನ 3 ಚಿತ್ರಮಂದಿರಗಳಲ್ಲಿ ಶತದಿನ ಕಂಡು ದಾಖಲೆ ಮಾಡಿತು.
ಪುಟ್ಟಣ್ಣನವರಿಗೆ 3 ಬಾರಿ ರಾಷ್ಟ್ರೀಯ ಪ್ರಶಸ್ತಿ, 3 ಬಾರಿ ಫಿಲಂಫೇರ್ ಪ್ರಶಸ್ತಿ ಹಾಗೂ 13 ಬಾರಿ ರಾಜ್ಯ ಸರಕಾರದ ಪ್ರಶಸ್ತಿಗಳು ಸಂದಿವೆ. ಈ ಅಪೂರ್ವ ನಿರ್ದೇಶಕ 5ನೇ ಜೂನ್ 1985ರಂದು ನಮ್ಮನ್ನಗಲಿದರು. ಡಿಸೆಂಬರ್ 1ರಂದು ಅವರ ಜನ್ಮ ದಿನ. ಅವರ ಆತ್ಮಕ್ಕೆ ಹೃದಯಾಂತರಳದ ನಮನಗಳು.