Thursday, 12th December 2024

ಕ್ಯೂ ಎಂಬ ಕಿರಿಕಿರಿ, ಸಾಮಾಜಿಕ ಬದ್ಧತೆ ಮತ್ತು ಅಗತ್ಯ

ಶಿಶಿರ ಕಾಲ

shishirh@gmail.com

ನಾವು ದಿನಕ್ಕೆ ಸರಾಸರಿ ಎಷ್ಟು ಫೋಟೋಗಳನ್ನು ನೋಡುತ್ತೇವೆ? ಪ್ರತಿಯೊಬ್ಬರೂ ಏನಿಲ್ಲ ವೆಂದರೂ ದಿನಕ್ಕೆ ನೂರಿನ್ನೂರು ಫೋಟೋ ನೋಡುತ್ತಾರೆ. ವಾಟ್ಸ್ಯಾಪ್ ಬಳಕೆದಾರರಾಗಿದ್ದಲ್ಲಿ ಇನ್ನೊಂದೈವತ್ತು. ಸೋಷಿಯಲ್ ಮೀಡಿಯಾದಲ್ಲಿದ್ದಾರೆ ಇನ್ನೊಂದು ನೂರಿನ್ನೂರು- ವ್ಯರ್ಥಮಾಡಲು ಎಷ್ಟು ಸಮಯವಿದೆಯೋ ಅಷ್ಟು. ಹೀಗೆ ದಿನಕ್ಕೆ ಹಲವು ನೂರು ಫೋಟೋಗಳು ಕಣ್ಣೆದುರು ಹಾದುಹೋಗುತ್ತವೆ.

ಒಂದು ಚಿತ್ರ ಸಾವಿರ ಶಬ್ದಕ್ಕೆ ಸಮ ಎಂದೆಲ್ಲ ಲೆಕ್ಕಹಾಕಬೇಡಿ! ಈ ವಿಷಯದಲ್ಲಿ ಅದು ಲಾಗು ಆಗುವುದಿಲ್ಲ. ಒಟ್ಟಾರೆ ಫೋಟೋಗಳು, ಜತೆಯಲ್ಲಿ
ವಿಡಿಯೋಗಳನ್ನು ನಾವು ಎಲ್ಲಿಲ್ಲದ ಪ್ರಮಾಣದಲ್ಲಿ ಇಂದು ಸೇವಿಸುತ್ತಿದ್ದೇವೆ, ಅಜೀರ್ಣವಾಗುವಷ್ಟು. ಹೀಗೆ ಹಾದು ಹೋಗುವ ಅದೆಷ್ಟೋ ಫೋಟೋ ಗಳಲ್ಲಿ ಕೆಲವೇ ಕೆಲವು ನಮ್ಮ ನೆನಪಿನಲ್ಲಿ ಅಚ್ಚೊತ್ತಿಬಿಡುತ್ತವೆ. ಈಗ ಹೇಳಲಿಕ್ಕೆ ಹೊರಟ ವಿಷಯ ಅದಲ್ಲ.

ನಾನು ಹೇಳುತ್ತಿರುವ ಈ ಒಂದು ಫೋಟೋವನ್ನು ನೀವು ನೋಡಿರಬಹುದು. ಕಂಪ್ಯೂಟರ್ ಮುಂದೆ ಕೂತ ಸ್ಟೇಟ್ ಬ್ಯಾಂಕ್‌ನ ಉದ್ಯೋಗಿಯೊಬ್ಬರ ಫೋಟೋ. ಎದುರುಗಡೆ ಗ್ರಾಹಕರ ಉದ್ದದ ಕ್ಯೂ. ಆ ಮಹಿಳೆಯ ಕಂಪ್ಯೂಟರಿನ ಪರದೆಯ ಮೇಲೆ ಆಕೆ ಕಾರ್ಡ್ಸ್ ಆಡುತ್ತಿರುವ ಫೋಟೋ. ಈಗ ಕೆಲವು ವರ್ಷದ ಹಿಂದೆ ಅತ್ಯಂತ ವೈರಲ್ ಆದ ಫೋಟೋ ಅದು. ಆ ಫೋಟೋವನ್ನು ಜಾಲತಾಣಗಳಲ್ಲಿ ಕಂಡವರೆಲ್ಲ ತಮ್ಮ ಹತಾಶೆಯನ್ನು, ಸಿಟ್ಟನ್ನು ಹೊರ ಹಾಕಿದ್ದರು. ಅದು ಆ ವರ್ಷ ಭಾರತದ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಹಂಚಲ್ಪಟ್ಟ ಐವತ್ತು ಫೋಟೋಗಳಲ್ಲಿ ಒಂದು ಎಂದರೆ ಅದ್ಯಾವ ಪ್ರಮಾಣ ದಲ್ಲಿ ವೈರಲ್ ಆಗಿರಬಹುದು, ನೀವೇ ಊಹಿಸಿ.

ಅದನ್ನು ಕಂಡವರೆಲ್ಲ ಸ್ಟೇಟ್ ಬ್ಯಾಂಕ್‌ನಲ್ಲಿನ ಅಂದಿನ ಅವ್ಯವಸ್ಥೆಯನ್ನು ಜರೆದಿದ್ದರು. ಆ ಫೋಟೋ ಫೇಕ್ ಇತ್ತೋ ಅಥವಾ ನಿಜವಾದದ್ದೋ ಗೊತ್ತಿಲ್ಲ. ಆದರೆ ಜನರಿಗೆ ಸಿಟ್ಟಿಗೇಳಲು ಅವರಿಗಾದ ನಿರಂತರ ಕೆಟ್ಟ ಅನುಭವ ಕಾರಣವಾಗಿತ್ತು. ಈ ಒಂದು ಫೋಟೋ ಸ್ಟೇಟ್ ಬ್ಯಾಂಕಿನ ಅದೆಷ್ಟೋ ವರ್ಷದ ಒಳ್ಳೆಯ ಸೇವೆಯನ್ನೇ ಅಳಿಸಿಹಾಕುವಷ್ಟು ಹರಡಿತು, ಇಂದಿಗೂ ಹರಿದಾಡುತ್ತಿದೆ.

ಸ್ಟೇಟ್ ಬ್ಯಾಂಕಿನ ಈ ಫೋಟೋ ಅಷ್ಟು ವೈರಲ್ ಆಗಲು ಕಾರಣವಾದರೂ ಏನು? ಆ ದಿನಗಳಲ್ಲಿ (ಈಗ ಹೇಗೆಂದು ಗೊತ್ತಿಲ್ಲ), ಒಂದು ಚಿಕ್ಕ ಕೆಲಸಕ್ಕೆ ಈ ಬ್ಯಾಂಕಿಗೆ ಹೊಕ್ಕರೆ ಮುಗಿಸಿ ಹೊರಬರುವುದಕ್ಕೆ ಕೆಲವು ಗಂಟೆಗಳಾಗುತ್ತಿತ್ತು. ಕೆಲಸ ಎರಡೇ ನಿಮಿಷದ್ದಿರುತ್ತಿತ್ತು- ಆದರೆ ಬ್ಯಾಂಕಿಗೆ ಹೋಗುವುದೆಂದರೆ
ಒಂದರ್ಧ ದಿನದ ಆಳುಲೆಕ್ಕ ಹಾಳು. ಅಲ್ಲಿ ಅತ್ಯಂತ ಕಿರಿಕಿರಿ ಯಾಗುತ್ತಿದ್ದುದು ಬಾಗಿಲಿನಿಂದಾಚೆಯವರೆಗೂ ಹೊರ ಚಾಚಿರುತ್ತಿದ್ದ ಸರತಿ-ಸಾಲು. ಬ್ಯಾಂಕ್ ಉದ್ಯೋಗಿಗಳ ಮೀರಿದ ಕೆಲಸದ ಒತ್ತಡದಿಂದಲೋ ಏನೋ, ಅಲ್ಲಿ ಸೇವಾಭಾವಕ್ಕೆ ಅವಕಾಶಗಳೇ ಇರಲಿಲ್ಲವೆನಿಸುತ್ತದೆ. ಅಷ್ಟೊಂದು ಉದ್ದದ ಸಾಲಿನಲ್ಲಿ ತಾಸುಗಟ್ಟಲೆ ನಿಂತು, ಏನೋ ಒಂದು ಡಾಕ್ಯುಮೆಂಟ್ ತಂದಿಲ್ಲವೆಂಬ ಕಾರಣಕ್ಕೆ ಕೆಲಸವೇ ಆಗದ ಸ್ಥಿತಿ ಎದುರಾಗುವುದಿತ್ತು.

ಅಂದಿನ ದಿನಗಳಲ್ಲಿ ಬದುಕಿನ ಹಲವು ಜಂಜಡಗಳ ನಡುವೆ ಅತ್ಯಂತ ಕಿರಿಕಿರಿಯುಂಟುಮಾಡುತ್ತಿದ್ದ ಕ್ರಿಯೆ- ಬ್ಯಾಂಕಿನ ಕೆಲಸ! ಜನರು ಅರ್ಧ ದಿನ ರಜೆ ಹಾಕಿ ಬ್ಯಾಂಕಿಗೆ ಹೋಗುವುದಿತ್ತು. ಬ್ಯಾಂಕಿನ ಈ ಕಿರಿಕಿರಿ ಅನುಭವಕ್ಕೆ ಮೂಲಕಾರಣವಾಗಿದ್ದದ್ದು ಅಲ್ಲಿನ ಕ್ಯೂ. ಕ್ಯೂ ಯಾವಾಗ ನಿರ್ಮಾಣವಾಗುತ್ತದೆ ಅಥವಾ ಅವಶ್ಯವಾಗುತ್ತದೆ? ಸರಳವಾಗಿ ಹೇಳಬೇಕೆಂದರೆ ಸೇವೆಯ ಪೂರೈಕೆಯು ಬೇಡಿಕೆಗಿಂತ ಕಡಿಮೆಯಾದಾಗ. ಕ್ಯೂ ಎಂದರೆ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ್ದು. ಮೊದಲು ಬಂದವರು ಮೊದಲು ಸೇವೆಯನ್ನು ಪಡೆಯಲು ನಾವು ಮಾಡಿಕೊಳ್ಳುವ ಒಂದು ವ್ಯವಸ್ಥೆ. ಇದೊಂದು ತಾತ್ಕಾಲಿಕ, ಸಾಮೂಹಿಕ, ಪರಸ್ಪರ ಒಡಂಬಡಿಕೆ. ನಮಗಿಂತ ಮೊದಲು ಬಂದವರು ನಮಗಿಂತ ಮೊದಲು ಸೇವೆ ಪಡೆಯಲು ಅರ್ಹರು ಎಂಬ ಸಾಮಾಜಿಕ ಒಪ್ಪಿಗೆ.

Micro-social situation.. ಕ್ಯೂದಲ್ಲಿ ನಿಂತಾಗ ಯಾರೇ ಒಬ್ಬರು ಕ್ಯೂ ತಪ್ಪಿಸಿ ಮಧ್ಯದಲ್ಲಿ ನುಗ್ಗಿದರೆ ಅಲ್ಲಿರುವ ಸಮಸ್ತ ಜನಸ್ತೋಮವೇ ಸಿಟ್ಟಿಗೇಳುತ್ತದೆ. ‘ನಿನ್ನ ಸಮಯಕ್ಕೆ ಮಾತ್ರ ಬೆಲೆಯೇ, ಉಳಿದವರ ಸಮಯಕ್ಕೆ ಬೆಲೆ ಇಲ್ಲವೇ?’ ಎಂದು ಗಲಾಟೆಯಾಗುತ್ತದೆ. ನಮ್ಮ ಜೀವನದ ಅಮೂಲ್ಯ ಸಮಯವನ್ನು ಇನ್ಯಾರೋ ಅಜ್ಞಾತ ವ್ಯಕ್ತಿ ಕಸಿದುಕೊಂಡ ಅನುಭವ. ಜನರಿಗೆ ಕ್ಯೂನಲ್ಲಿ ಎಷ್ಟು ಸಮಯ ಕಾಯಬೇಕು ಎಂಬ ವಿಷಯಕ್ಕಿಂತ, ಕ್ಯೂ ಎಷ್ಟು ಸರಿಯಾಗಿ ಪಾಲನೆಯಾಗುತ್ತಿದೆ ಎನ್ನುವುದು ಮುಖ್ಯ. ಕ್ಯೂ ತುಂಡುಮಾಡುವುದು ಅಕ್ಷಮ್ಯ ಅಪರಾಧ. ಕ್ಯೂ ನಿಂತಾಗ ಗಲಾಟೆಗಳಾಗುವುದೇ ಈ ಸಾಮಾಜಿಕ ಸಮಾನತೆ ಮತ್ತು ನ್ಯಾಯದ ಅರಿವಿನ ಕಾರಣಕ್ಕೆ. ಆ ಕಾರಣಕ್ಕೆ ಅಂಥವರನ್ನು ಪ್ರಶ್ನಿಸುವವರ ಬೆಂಬಲಕ್ಕೆ ಇಡೀ ಸಮೂಹ ಬೆನ್ನಾಗಿ ನಿಲ್ಲುತ್ತದೆ.

ಅತ್ಯಂತ ಶಿಸ್ತಿನ ಸರದಿಯನ್ನು ಬ್ರಿಟಿಷ್ ಕ್ಯೂ ಎಂದು ಕರೆಯುವುದಿದೆ. ಬ್ರಿಟನ್ ಜನರು ಕ್ಯೂ ಪಾಲನೆಯ ಶಿಸ್ತಿಗೆ ಹಸರುವಾಸಿ. An Englishman, even if he is alone, forms an orderly queue of one- ‘ಬ್ರಿಟಿಷ್ ಒಬ್ಬನೇ ಇದ್ದರೂ ಸರದಿಯಲ್ಲಿಯೇ ನಿಲ್ಲುವುದು’ ಎಂಬ ಕಿಚಾಯಿಸುವ ಮಾತಿದೆ. ನೀವು ಲಂಡನ್ನಿನ ವಿಂಬಲ್ಡನ್ ಪಂದ್ಯಾವಳಿ ಬಗ್ಗೆ ಕೇಳಿರುತ್ತೀರಿ. ೧೮೭೭ರಲ್ಲಿ ಆರಂಭವಾದ ಈ ಪಂದ್ಯಾವಳಿ ಇಂದಿಗೂ ಪ್ರತಿಷ್ಠಿತ. ಪ್ರತಿಯೊಬ್ಬ ಟೆನಿಸ್ ಆಟಗಾರನಿಗೂ ಇಲ್ಲಿ ಕಪ್ ಗೆಲ್ಲಬೇಕು ಎಂಬ ಬಯಕೆ. ಈ ಪಂದ್ಯಾವಳಿಯನ್ನು ಸುಮಾರು ಐದರಿಂದ ಆರು ಲಕ್ಷ ಮಂದಿ ಪ್ರತ್ಯಕ್ಷ ವೀಕ್ಷಿಸುತ್ತಾರೆ. ಪ್ರತಿ ಆಟಕ್ಕೂ ಆಸನಗಳು ಭರ್ತಿಯಾಗುತ್ತವೆ.

ಈ ಪಂದ್ಯಾವಳಿ ಇನ್ನೊಂದು ವಿಷಯಕ್ಕೆ ಕೂಡ ಫೇಮಸ್. ಅದುವೇ ಕ್ಯೂ. ಪಂದ್ಯಾವಳಿಯ ಯಶಸ್ಸು ಟೆನಿಸ್ ಪಂದ್ಯಗಳು ಎಷ್ಟು ರೋಚಕವಾಗಿ ನಡೆದಿವೆ ಎಂಬುದಲ್ಲ, ಬದಲಿಗೆ ಪಂದ್ಯವನ್ನು ವೀಕ್ಷಿಸಲು ಬರುವವರ ಕ್ಯೂ, ಕಾಯುವಿಕೆಯ ಅನುಭವ ಎಲ್ಲಕ್ಕಿಂತ ಮುಖ್ಯ ಎಂಬುದು ಅಲ್ಲಿನ ಆಯೋಜಕರ ಒಮ್ಮತ. ಇಲ್ಲಿ ಟಿಕೆಟ್ ಖರೀದಿಸಿದರೆ ಅದರ ಜತೆಯಲ್ಲಿಯೇ ಸುಮಾರು ೨೧ ಪುಟಗಳ ಕಿರು ಹೊತ್ತಿಗೆ ಕೊಡಲಾಗುತ್ತದೆ. ಅದರಲ್ಲಿ ಕ್ಯೂ ಎಲ್ಲಿಂದ ಆರಂಭವಾಗುತ್ತದೆ, ಯಾವ ಕ್ಯೂನಲ್ಲಿ ಯಾವ ಟಿಕೆಟಿನವರು ನಿಲ್ಲಬೇಕು, ಎಷ್ಟು ಮೊದಲು ಬಂದಿರಬೇಕು, ಯಾವ ಸಮಯದಿಂದ ಕ್ಯೂ
ಆರಂಭವಾಗುತ್ತದೆ, ಹೀಗೆ ಎಲ್ಲಾ ವಿವರಗಳಿರುತ್ತವೆ. ಅದನ್ನು ಓದಿ ಮನನ ಮಾಡಿಕೊಂಡರೆ ಎಲ್ಲ ಸುಲಭ. ಜತೆಯಲ್ಲಿ ಕ್ಯೂ ಕಾರ್ಡ್ ಅನ್ನು ಕೊಡಲಾಗುತ್ತದೆ. ಅದನ್ನು ಹೊಂದಿದವರು ನಿಗದಿತ ಸಮಯದಲ್ಲಿ ಬಂದು ಕ್ಯೂನಲ್ಲಿ ನಿಲ್ಲಬೇಕು.

ಇದರಿಂದ ಕ್ಯೂ ಯಾವತ್ತೂ ಚಿಕ್ಕದಿರುತ್ತದೆ. ಟಿಕೆಟ್ ಬೆಲೆಗೆ ತಕ್ಕಂತೆ ಕ್ಯೂ ಉದ್ದ ಮತ್ತು ವೇಗ. ಇನ್ನೊಂದು ಜನರಲ್ ಕ್ಯೂ. ಅದಕ್ಕೆ ಎಷ್ಟು ಮೊದಲು ಬೇಕಾದರೂ ಬಂದು ನಿಲ್ಲಬಹುದು. ಮೊದಲು ಬಂದವರಿಗೆ ಒಳ್ಳೆಯ ಸೀಟು. ಸಾಮಾನ್ಯವಾಗಿ ಹಿಂದಿನ ದಿನವೇ ಬಂದು ಕ್ಯೂನಲ್ಲಿ ನಿಂತು, ಅಲ್ಲಿಯೇ
ಕ್ಯಾಂಪಿಂಗ್ ಟೆಂಟ್‌ಗಳನ್ನು ಹಾಕಿಕೊಂಡು ಮಲಗುವವರಿ ದ್ದಾರೆ. ಅವರಿಗೂ ಕೆಲವೊಂದು ನಿಯಮಗಳಿವೆ. ಅವರು ಈ ಟೆಂಟಿನಲ್ಲಿಯೇ ಮಲಗಿರಬೇಕು. ಖಾಲಿ ಟೆಂಟ್ ಬಿಟ್ಟು ಎಲ್ಲಿಗೋ ಹೋಗುವಂತಿಲ್ಲ. ಗಲಾಟೆ ಮಾಡುವಂತಿಲ್ಲ, ಜಾಸ್ತಿ ಕುಡಿದು ರಂಪ ಮಾಡುವಂತಿಲ್ಲ ಇತ್ಯಾದಿ.

ಜತೆಯಲ್ಲಿ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಸರದಿಯ ಸದ್ಯದ ಉದ್ದ ಮತ್ತು ಕಾಯುವ ಸಮಯವನ್ನು ಲೈವ್ ತಿಳಿಸಲಾಗುತ್ತದೆ. ಒಟ್ಟಾರೆ ಕ್ಯೂ ವ್ಯವಸ್ಥೆಯ ಇನ್ನೊಂದು ಹಂತವನ್ನು ನೋಡಬೇಕೆಂದರೆ ಅದು ಲಂಡನ್ನಿನ ವಿಂಬಲ್ಡನ್ ಪಂದ್ಯಾವಳಿಯಲ್ಲಿ. ಕ್ಯೂ ಯಾರಿಗೆ ತಾನೇ ಸಹ್ಯ? ವ್ಯರ್ಥವಾಗುವಷ್ಟು ಮಿಕ್ಕಿದ ಸಮಯ ಯಾರಿಗಿದೆ? ಕ್ಯೂ ಒಂದು ಪ್ರಮಾಣಕ್ಕಿಂತ ಜಾಸ್ತಿ ಉದ್ದವಾದರೆ ವ್ಯಾಪಾರ, ವ್ಯವಹಾರಗಳಿಗೆ ಒಳ್ಳೆಯದಲ್ಲ. ಹೋಟೆಲ್ಲಿನಲ್ಲಿ ಊಟಕ್ಕೆ ಕಾಯುವ ಕ್ಯೂ ಉದ್ದವಿದ್ದರೆ ಪಕ್ಕದ ಹೋಟೆಲ್ಲಿಗೆ ಗ್ರಾಹಕ ಹೋಗಿಬಿಡುತ್ತಾನೆ. ಹೀಗೆ ಪ್ರತಿ ಯೊಂದು ಸ್ಪರ್ಧಾತ್ಮಕ ವ್ಯಾಪಾರದಲ್ಲಿಯೂ ಕ್ಯೂ ನಿಭಾಯಿ ಸುವುದು ಮುಖ್ಯ. ಕ್ಯೂ ಪಾಲನೆಗಿಂತ ಆ ಸಮಯದಲ್ಲಿ ಗ್ರಾಹಕರನ್ನು ಸಂಧಿಸಿ ಹಿಡಿದಿಟ್ಟುಕೊಳ್ಳುವುದು, ಗ್ರಾಹಕನ ಕ್ಯೂ ಅನುಭವ ಮಹತ್ವದ್ದು. ಸರದಿ ಅನುಭವ ಸರಿಯಾಗಿಲ್ಲವೆಂದರೆ ಆ ಗ್ರಾಹಕನನ್ನು ಇಂದಲ್ಲ ನಾಳೆ ಕಳೆದುಕೊಳ್ಳಬೇಕಾಗುತ್ತದೆ.

ಕ್ಯೂನ ಉದ್ದಕ್ಕಿಂತ ಅದು ಎಷ್ಟು ವೇಗವಾಗಿ ಸಾಗುತ್ತಿದೆ ಎನ್ನುವುದು ಮುಖ್ಯ. ಸರಾಸರಿ ನಾಲ್ಕು ನಿಮಿಷಕ್ಕೊಮ್ಮೆ ಕ್ಯೂ ಮುಂದುವರಿಯದಿದ್ದಲ್ಲಿ ಅದು ಮನುಷ್ಯನ ಅಸಹನೆಯ ಮಿತಿಯಂತೆ. ಅಮೆರಿಕದ ಹಲವು ಕಡೆ ಕ್ರಿಸ್ಪಿ ಕ್ರೀಮ್ ಎಂಬ ಬೆಳಗ್ಗಿನ ಕಾಫಿ-ತಿಂಡಿಯ ರೆಸ್ಟೋರೆಂಟುಗಳಿವೆ. ಫಾಸ್ಟ್ ಫುಡ್ ಚೈನ್. ಸುಮಾರು ತೊಂಬತ್ತು ವರ್ಷದಿಂದ ಇದು ಅಮೆರಿಕನ್ನರ ಅಚ್ಚುಮೆಚ್ಚಿನ ಉಪಾಹಾರ. ಈಗ ಕೆಲವು ವರ್ಷಗಳ ಹಿಂದೆ ಅದರ ವ್ಯಾಪಾರ ಕುಗ್ಗಲು ಆರಂಭವಾಯಿತು. ಆಗ ಅದರ ಸಿಇಒ ಕಾರಣ ಹುಡುಕಲು ಆರಂಭಿಸಿದ. ನಂತರ ಗ್ರಾಹಕರ ಸರ್ವೇ ಮಾಡುವುದು ಎಂದಾಯಿತು. ಮೊದಲು ಕಾಯಂ
ಆಗಿ ಬರುತ್ತಿದ್ದ, ಈಗ ನಿಲ್ಲಿಸಿದ ಗ್ರಾಹಕರಲ್ಲಿ ಎಲ್ಲರದೂ ಒಂದೇ ಫಿರ್ಯಾದು. ನಿಮ್ಮ ಹೋಟೆಲ್ಲಿನಲ್ಲಿ ಆಹಾರ ಪಡೆಯಬೇಕೆಂದರೆ ಕ್ಯೂನಲ್ಲಿ ನಿಲ್ಲಬೇಕು, ಅದು ಉದ್ದವಿರುತ್ತದೆ.

ಇದು ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸುವ ಡೋನಟ್, ಕಾಫಿ, ಚಹಾ ಮಾರುವ ಫಾಸ್ಟ್ ಫುಡ್. ಇದಕ್ಕೆ ಬರುವ ಗ್ರಾಹಕರೆಂದರೆ ಒಂದೋ ಕೆಲಸಕ್ಕೆ ಹೊರಡುವ ಬೆಳಗಿನ ಗಡಿಬಿಡಿ ಯವರು ಅಥವಾ ಕೆಲಸ ಮುಗಿಸಿ ಮನೆಗೆ ಹೊರಟವರು. ಬೆಳಗ್ಗೆ ಮತ್ತು ಸಾಯಂಕಾಲ ಬಹುತೇಕ ವ್ಯವಹಾರ. ಹಾಗಾಗಿ
ಅಲ್ಲಿಯೇ ಹತ್ತಿರದಲ್ಲಿ ಇನ್ನೊಂದು ರೆಸ್ಟೋರೆಂಟ್ ತೆರೆಯು ವುದು ಕೂಡ ವ್ಯಾವಹಾರಿಕವಾಗಿ ಲಾಭತರುವಂಥದ್ದಲ್ಲ. ಇದಕ್ಕೆ ಸಿಇಒ ಜೇಮ್ಸ್ ಮಾರ್ಗನ್ ಒಂದು ವಿನೂತನ ಪರಿಹಾರವನ್ನು ಜಾರಿಗೆ ತಂದ. ಕ್ರಿಸ್ಪಿ ಕ್ರೀಮ್‌ನ ಒಳಗಡೆ ಡೋನಟ್ ತಯಾರಾಗುವುದನ್ನು ಗ್ರಾಹಕರಿಗೆ ಕಾಣಿಸುವಂತೆ ಮಾಡಿದ. ಅಲ್ಲಿನ ಗೋಡೆಗಳನ್ನು ತೆಗೆಸಿ ಗ್ಲಾಸ್ ಹಾಕಿಸಿದ.

ತರುವಾಯ ಸಾಲಿನಲ್ಲಿ ನಿಲ್ಲುವ ಗ್ರಾಹಕರ ಗಮನ ಪೂರ್ತಿ ಆ ಮಷಿನ್ನುಗಳ ಚಲನವಲನಗಳತ್ತ ಹರಿಯುವಂತಾಯಿತು. ಅದು ಚಿಕ್ಕ ಮಕ್ಕಳಿಗೂ ಕಾಣು ವಂತೆ ಸುಮಾರು ಮೂನ್ನೂರು ರೆಸ್ಟೋರೆಂಟುಗಳನ್ನು ನವೀಕರಿಸಲಾಯಿತು. ಇದರಿಂದ ಗ್ರಾಹಕರ ಕ್ಯೂ ಪುಕಾರು ಕ್ರಮೇಣ ಕಡಿಮೆಯಾಯಿತು.
ವ್ಯವಹಾರ ಚಿಗುರಿತು. ಈಗ ಗ್ರಾಹಕರಿಗೆ ಡೋನಟ್ ಜತೆ ಆ ಯಾಂತಿಕ್ರ ಡೋನಟ್ ಮೇಕರ್ ಅನ್ನು ನೋಡುವುದೂ ಅಲ್ಲಿ ಸಿಗಬಹುದಾದ ಅನುಭವದ ಭಾಗವಾಯಿತು.

ಕ್ಯೂನಲ್ಲಿ ನಿಂತಾಗ ಏನೂ ಮಾಡಲಿಕ್ಕಿರುವುದಿಲ್ಲ. ಕೈಯಲೊಂದು ಮೊಬೈಲ್ ಇದ್ದರೆ ಸ್ವಲ್ಪ ಸಮಯ ಹೋಗಬಹುದು, ಆದರೂ ಅದು ಕೂಡ ಕ್ರಮೇಣ ಅಸಹನೆಯತ್ತ ಹೊರಳಿ ಕೊಳ್ಳುತ್ತದೆ. ನಾವು ಏನೋ ಒಂದರಲ್ಲಿ ತೊಡಗಿಕೊಂಡಾಗ ಸಮಯ ಬೇಗ ಸರಿಯುತ್ತದೆ ಎಂಬುದು ಎಲ್ಲರ ಅನುಭವ ವಲ್ಲವೇ? ಕಾಯಿಸುವಿಕೆ ಚಿಕ್ಕದಾಗಿಸಲು ಸಾಧ್ಯವಾಗದಾಗ ಏನೋ ಒಂದರಲ್ಲಿ ತೊಡಗಿಕೊಳ್ಳುವಂತೆ ಮಾಡಿದರೆ ಅವರಿಗೆ ಕಾಯುವಿಕೆಯ ಪೂರ್ಣ ಅನುಭವ ವಾಗುವುದಿಲ್ಲ. ಡಾಕ್ಟರ್ ಕ್ಲಿನಿಕ್ಕುಗಳಲ್ಲಿ ಒಂದು ರಾಶಿ (ಯಾವುದೋ ಕಾಲದ) ಪತ್ರಿಕೆ ಗಳನ್ನು ಗುಡ್ಡೆ ಹಾಕಿಡುವುದು, ಲಿಫ್ಟಿನಲ್ಲಿ ಕನ್ನಡಿ ಇಡುವುದು ಇತ್ಯಾದಿ ಈ ಕಾರಣಕ್ಕೇ. ಯಾವುದೇ ತುಟ್ಟಿಯ ರೆಸ್ಟೋರೆಂಟು ಗಳಿಗೆ ಹೋದಾಗ ಮೊದಲು ‘ಕುಡಿಯಲಿಕ್ಕೆ ಏನು?’ ಎಂದು ಕೇಳುತ್ತಾರಲ್ಲ. ಪೇಯ ಸಾಮಾನ್ಯವಾಗಿ ಸಿದ್ಧ ವಾಗಿರುತ್ತದೆ.

ಅದನ್ನು ಕೊಟ್ಟುಬಿಟ್ಟರೆ ಆಹಾರ ಸಿಗಲು ಆರಂಭವಾಗಿದೆ, ಊಟ ಶುರುವಾಗಿದೆ ಎಂದೆನಿಸಿ ನಂತರದ ಕಾಯುವಿಕೆ ಸಹ್ಯವೆನಿಸುತ್ತದೆ. ಆಹಾರ ಕೊಡಲು ಸ್ವಲ್ಪ ತಡಮಾಡಿದರೂ ಪರವಾಗಿಲ್ಲವೆನಿಸುತ್ತದೆ. ಟೇಬಲ್ಲಿಗೆ ಕೂತ ಕೆಲವು ನಿಮಿಷದೊಳಗೆ ನೀರನ್ನೂ ಇಟ್ಟಿಲ್ಲವೆಂದರೆ ನಮ್ಮಲ್ಲಿ ಅಸಹನೆ ತಾಂಡವ ವಾಡುತ್ತದೆ. ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ಅವರು ಮಧ್ಯದಲ್ಲಿ ಸಂಗೀತ ಕೇಳಿಸುವುದು ಇದೇ ಕಾರಣಕ್ಕೆ. ಇದೆಲ್ಲದರ ಜತೆಯಲ್ಲಿ ಕ್ಯೂನಲ್ಲಿ ಎಷ್ಟು ಹೊತ್ತು ನಿಲ್ಲಬೇಕಾಗಬಹುದು ಎಂಬುದರ ನಿಶ್ಚಿತತೆಗೂ ಸಹನೆಗೂ ನೇರ ಸಂಬಂಧವಿದೆ. ಅನಿಶ್ಚಿತತೆಯೇ ಅಸಹನೆಗೆ ಕಾರಣವಾಗುವುದು. ಒಂದು ವೇಳೆ ಅಂದಾಜಿಗಿಂತ ಜಾಸ್ತಿ ವಿಳಂಬವಾಗುತ್ತಿದ್ದರೆ ಅದನ್ನು ಗ್ರಾಹಕರಿಗೆ ವಿವರಿಸುವುದು ಒಂದೊಳ್ಳೆ ಲಕ್ಷಣ.

ವಿಮಾನಗಳು, ಅದರಲ್ಲಿಯೂ ಅಂತಾರಾಷ್ಟ್ರೀಯ ವಿಮಾನಗಳು ವಿಳಂಬವಾಗುವುದು ಸಾಮಾನ್ಯ. ಯಾವುದೋ ಊರಿನಿಂದ ಬರಬೇಕಾಗಿದ್ದ ವಿಮಾನ ಎಲ್ಲಿಯದೋ ಹವಾಮಾನ ವೈಪರೀತ್ಯ ಇತ್ಯಾದಿ ಕಾರಣದಿಂದ ಹಲವು ತಾಸು ವಿಳಂಬವಾಗಿಬಿಡುತ್ತದೆ. ಪ್ರಯಾಣ ಇಪ್ಪತ್ತು ಮೂವತ್ತು ತಾಸಿನಷ್ಟು ದೀರ್ಘವಾದದ್ದಾದರೆ ಪ್ರಯಾಣಿಕರಿಗೆ ನಿದ್ರೆ, ಆಹಾರ ಎಲ್ಲವೂ ಏರುಪೇರಾಗಿರುತ್ತದೆ. ಆ ಸಮಯದಲ್ಲಿ ಪೈಲಟ್, ವಿಮಾನ ಕರ್ಮಚಾರಿಗಳು ಸುಮ್ಮನೆ ನಿಷ್ಕಾರಣ ವಿಳಂಬವೆಂದು ಘೋಷಿಸಿದರೆ ಜನರ ಸಹನೆಯ ಕಟ್ಟೆ ಸುಲಭದಲ್ಲಿ ಒಡೆಯುತ್ತದೆ. ಹಾಗಾಗಿ ವಿಳಂಬ ಯಾವ ಕಾರಣಕ್ಕೆ ಎಂಬ ವಿವರವನ್ನೂ ಕೊಡಲಾಗುತ್ತದೆ. ಪೂರ್ಣ ವಿವರ ಒಂದಿಷ್ಟು ಸಾಂತ್ವನ, ನಿಶ್ಚಿತತೆ ನಿರ್ಮಿಸುತ್ತದೆ.

ಹಾಗಂತ ಕೆಲವೊಂದು ಕಡೆ ಅತಿಯಾದ, ಕ್ಷಣಕ್ಷಣದ ವಿವರಗಳನ್ನು ಕೊಟ್ಟರೆ ಅದು ಕೂಡ ಕಾಯುವವರ ಸಿಟ್ಟಿಗೆ ಕಾರಣವಾಗುವುದುಂಟು. ಕ್ಯೂ ಒಂದು ಸಾಮಾಜಿಕ ಬದ್ಧತೆ, ಅವಶ್ಯಕ ಮಾನಸಿಕತೆ. ಇದು ಕೇವಲ ಬ್ಯಾಂಕಿನಲ್ಲಿ, ಹೋಟೆಲ್ಲಿನಲ್ಲಿ, ಬಿಲ್ ತುಂಬುವಾಗ ಸರದಿಯಲ್ಲಿ ನಿಲ್ಲುವ ವಿಚಾರಕ್ಕಷ್ಟೇ ಸೀಮಿತವಲ್ಲ. ಇದು ತನಗಿಂತ ಮೊದಲಿನವನಿಗೆ ಆದ್ಯತೆ ಕೊಡುವ ಒಂದು ಮನಸ್ಥಿತಿ. ಟ್ರಾಫಿಕ್ಕಿನಲ್ಲಿ ಒಂದರ ಹಿಂದೆ ಇನ್ನೊಂದರಂತೆ ವಾಹನ ಚಲಾ ಯಿಸುವುದು Macro-social situation. ಎಲ್ಲೆಂದರಲ್ಲಿ, ಚಿಕ್ಕ ಜಾಗ ಸಿಕ್ಕರೆ, ಫುಟ್ ಪಾತಿನಲ್ಲಿ ತಮ್ಮ ವಾಹನವನ್ನು ನುಗ್ಗಿಸಿ ಮುಂದೆ ಹೋಗುವುದು ಸರದಿಯನ್ನು ತುಂಡುಮಾಡುವುದರದ್ದೇ ಮುಂದುವರಿದ ಇನ್ನೊಂದು ಅವತಾರ. ಲಿಫ್ಟಿಗೆ ಕಾದು ನಿಲ್ಲುವಾಗ ತಮಗಿಂತ ಮೊದಲು ಬಂದವರನ್ನು ಗುರುತಿಸಿ ಅವರಿಗೆ ದಾರಿ ಮಾಡಿ ಕೊಡುವ ಸೂಕ್ಷ್ಮತೆ ಸಾಮಾಜಿಕ ಅವಶ್ಯಕತೆ. ಕೊನೆಯಲ್ಲಿ ಬಂದವರು ಉಳಿದವರಿಗಿಂತ ಮೊದಲೇ ಒಳನುಗ್ಗಿದರೆ ಅದು ಅಲ್ಲಿರುವ ಎಲ್ಲರಲ್ಲೂ ಕಿರಿಕಿರಿ ಉಂಟುಮಾಡುತ್ತದೆ.

ಹೀಗೆಯೇ, ಬಸ್ಸಿನಲ್ಲಿ, ರೈಲಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸೇವೆ ಪಡೆಯುವಾಗ ಎಲ್ಲೆಡೆಯೂ ಈ ಕ್ಯೂ ಮಾನಸಿಕತೆ ಎಲ್ಲರಲ್ಲಿಯೂ ಇದ್ದರೆ ಆ ಸಮಾಜದಲ್ಲಿ ಅಷ್ಟು ಅಸಹನೆ ಕಡಿಮೆಯಾಗುತ್ತದೆ. ಅಮೆರಿಕದ ಶಾಲೆಗಳಲ್ಲಿ ಮಕ್ಕಳಿಗೆ ಮೊದಲು ಕಲಿಸುವ ಪಾಠ ಕ್ಯೂ. ಇಲ್ಲಿ ಶಾಲೆಯ ವಾಹನದ ನಿಲ್ದಾಣದಲ್ಲಿ ಸೇರುವ ಐದಾರು ಮಕ್ಕಳು ಸಾಲಿನಲ್ಲಿ ನಿಂತುಬಿಡುತ್ತಾರೆ. ಇಬ್ಬರೇ ಇದ್ದರೂ ಒಬ್ಬರ ಹಿಂದೆ ಒಬ್ಬರು. ಅಂತೆಯೇ ಶಾಲೆಯಲ್ಲಿ, ಲೈಬ್ರರಿ ಯಲ್ಲಿ ಹೀಗೆ ಎಲ್ಲ ಜಾಗಗಳಲ್ಲಿ ಮಕ್ಕಳು ಸಾಲಿನಲ್ಲಿಯೇ ನಿಲ್ಲುವುದು. ಅಷ್ಟೇ ಅಲ್ಲ, ಜಾತ್ರೆಗಳಲ್ಲಿ, ಐಸ್ ಕ್ರೀಮ್ ಅಂಗಡಿಗಳಲ್ಲಿ ಹೀಗೆ ಎಲ್ಲೆಡೆಯೂ ಯಾರೂ ಹೇಳದೆಯೇ ಕ್ಯೂ ನಿರ್ಮಾಣವಾಗಿಬಿಡುತ್ತದೆ.

ನಾನು ಅಮೆರಿಕದಲ್ಲಿ ಇಷ್ಟು ಕಾಲ ಯಾವುದಕ್ಕೂ ಜನರು ಒಮ್ಮೆಲೇ, ಕ್ಯೂ ಇಲ್ಲದೇ ನುಗ್ಗಿದ್ದು ನೋಡಿಯೇ ಇಲ್ಲ. ಇದನ್ನು ಬಾಲ್ಯದಿಂದಲೇ ಮಕ್ಕಳಿಗೆ
ಅಭ್ಯಾಸಮಾಡಿಸಲಾಗುತ್ತದೆ. ಈ ಸಾಮಾಜಿಕ ಶಿಸ್ತು ಇಲ್ಲಿ ಅತ್ಯಂತ ಸಹಜ. ಸರದಿಯಲ್ಲಿ ನಿಂತಾಗ ಸಾಲಿನಿಂದ ಸ್ವಲ್ಪ ಪಕ್ಕಕ್ಕೆ ನಿಂತರೆ ಇಲ್ಲಿ ಯಾರೂ ಒಳನುಗ್ಗುವುದಿಲ್ಲ. ಒಂದು ವೇಳೆ ಕಾಯುವಾಗ ನಮ್ಮ ಗಮನ ಬೇರೆಡೆ ಹೋಗಿ, ಸಾಲಿನಿಂದ ಸರಿದು ನಿಂತರೆ, ಹಿಂದೆ ಬರುವವರು ನೀವು ಕ್ಯೂನಲ್ಲಿದ್ದೀರಾ
ಎಂದು ಕೇಳುವುದು ಅತ್ಯಂತ ಸಹಜ ಸೌಜನ್ಯ. ಕ್ಯೂ ತುಂಡರಿಸುವವರನ್ನು ಸಮಾಜವೇ ತುಚ್ಛವಾಗಿ ಕಾಣುತ್ತದೆ.

ಇದುವೇ ಇಲ್ಲಿ ಮುಂದುವರಿದು ಟ್ರಾಫಿಕ್ ಶಿಸ್ತು ಸೇರಿದಂತೆ ಒಂದಿಡೀ ಸಮಾಜದ ಶಿಸ್ತಿಗೆ ಕಾರಣವಾಗಿದೆ. ಭಾರತದಲ್ಲಿಯೂ ಮೆಟ್ರೋ ಮೊದಲಾದಲ್ಲಿ ಶಿಸ್ತಿನ ಕ್ಯೂಗಳನ್ನು ನೋಡಿದ್ದೇನೆ. ಈಗೊಂದು ಇಪ್ಪತ್ತು ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಅದೆಷ್ಟೋ ವಾಸಿ. ಆದರೂ ನಮ್ಮಲ್ಲಿ ಈ ಕ್ಯೂ ಮನೋಭಾವದ ಕೊರತೆ ಇರುವುದಂತೂ ಸ್ಪಷ್ಟ. ಅಭಿವೃದ್ಧಿ ಹೊಂದುವುದರ ಜತೆಯಲ್ಲಿ ಕ್ಯೂ ಮಾನಸಿಕತೆ ಯನ್ನು ನಾವು ಇನ್ನಷ್ಟು ಸ್ವೀಕರಿಸಲೇ ಬೇಕಿದೆ. ಇದರಿಂದ ಬದುಕು ಚಂದವಾಗುತ್ತದೆ. ಸಾಮಾಜಿಕ ಅಸಹನೆ ಕುಗ್ಗುತ್ತದೆ.