Thursday, 12th December 2024

ಜಗತ್ತಿನ ಸ್ಟೇಡಿಯಂ ಗುಣಮಟ್ಟದ ಮಾನದಂಡ ಬದಲಿಸಿದ ಕತಾರ್‌

ಇದೇ ಅಂತರಂಗ ಸುದ್ದಿ

vbhat@me.com

ಕತಾರ್ ನಿರ್ಮಿಸಿದ ಎಲ್ಲಾ ಸ್ಟೇಡಿಯಂಗಳು ಅಂತಾರಾಷ್ಟ್ರೀಯ ಗುಣಮಟ್ಟದವು. ವಿನ್ಯಾಸ, ಶೈಲಿ, ಬಾಳಿಕೆ ಮತ್ತು ಉಪಯೋಗ ದಲ್ಲಿ ಅತ್ಯಂತ ಆಧುನಿಕವಾಗಿವೆ ಎಂಬ ಪ್ರಶಂಸೆಗೆ ಪಾತ್ರವಾಗಿವೆ. ತೊಂಬತ್ತು ಸಾವಿರ ಪ್ರೇಕ್ಷಕರು ತುಂಬಿದ ಸ್ಟೇಡಿಯಂನ್ನು ಕೇವಲ ಇಪ್ಪತ್ತು ನಿಮಿಷಗಳಲ್ಲಿ ಹದಿನೆಂಟು ಡಿಗ್ರಿ ಸೆಲ್ಸಿಯಸ್ ತಂಪಿಗೆ ತರಬಹುದು. ಆಟಗಾರರಿಗೆ ವಿಪರೀತ ಸೆಕೆಯಾಗ ಬಾರದೆಂದು ಮೈದಾನದಿಂದಲೇ ಏರ್ ಕಂಡೀಷನ್ ವ್ಯವಸ್ಥೆಯನ್ನು ಮಾಡಿರುವುದು ಗಮನಾರ್ಹ.

ವಿಶ್ವಕಪ್ ಸಂಘಟಿಸುವುದೆಂದು ತೀರ್ಮಾನವಾಗುವುದಕ್ಕೆ ಮುನ್ನ, ಕತಾರಿನಲ್ಲಿ ಇದ್ದಿದ್ದು ಒಂದೇ ಒಂದು ಸ್ಟೇಡಿಯಂ. ನಿರ್ಧಾರ ವಾದ ಬಳಿಕ ತಲೆಯೆತ್ತಿದ್ದು ಏಳು ಹೊಸ ಸ್ಟೇಡಿಯಂಗಳು. ಮೊದಲಿದ್ದ ಒಂದನ್ನೂ ಸಂಪೂರ್ಣ ನವೀಕರಿಸ ಲಾಯಿತು. ಒಂದೊಂದು ಸ್ಟೇಡಿಯಂ ವಿಭಿನ್ನ, ವಿಚಿತ್ರ ಮತ್ತು ವೈಶಿಷ್ಟ್ಯಪೂರ್ಣ. ಲುಸೈಲ್ ಐಕಾನಿಕ್, ಖಲೀಫಾ ಇಂಟರ್‌ನ್ಯಾಷನಲ್, ಅಲ್ ತುಮಾಮ, ಅಲ್ಜನೊಬ, ಸ್ಟೇಡಿಯಂ 974, ಎಜುಕೇಷನ್ ಸಿಟಿ, ಅಹ್ಮದ್ ಬಿನ್ ಅಲಿ ಸ್ಟೇಡಿಯಂ, ಅಲ್ ಬಯ್ತ್ ಎಂದು ಈ ಸ್ಟೇಡಿಯಮ ಗಳನ್ನುಹೆಸರಿಸಲಾಗಿದೆ.

ಸ್ಟೇಡಿಯಂ 974 ಅಂದ್ರೆ ಏನು ಎಂದು ಅನಿಸಬಹುದು. 974 ರಿಸೈಕಲ್ಡ್ ಶಿಪಿಂಗ್ ಕಂಟೈನರುಗಳನ್ನು ಸೇರಿಸಿ ಈ ಸ್ಟೇಡಿಯಂ ನಿರ್ಮಿಸಲಾಗಿದೆ. ಹಡಗಿನ ಕಂಟೇನರುಗಳನ್ನು ಬಳಸಿ ಚೈನಾದ ನಿರ್ಮಾಣ ಸಂಸ್ಥೆಯೊಂದು ಇದನ್ನು ನಿರ್ಮಿಸಿ ರುವುದು ವಿಶೇಷ. ಸುಮಾರು ನಲವತ್ತು ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಈ ಸ್ಟೇಡಿಯಂನ್ನು ವಿಶ್ವಕಪ್ ನಂತರ, ಬಿಚ್ಚಿ (dismantle) ಹಾಕಬಹುದು.

ಬೇರೆ ಪ್ರದೇಶದಲ್ಲಿ ಇದನ್ನು ಜೋಡಿಸಿ, ಅಲ್ಲಿಯೂ ಸ್ಟೇಡಿಯಂನ್ನು ನಿರ್ಮಿಸಬಹುದು. ಇದು ಒಂದು ರೀತಿಯಲ್ಲಿ ಸಂಚಾರಿ ಸ್ಟೇಡಿಯಂ ಇದ್ದಂತೆ. ಜಗತ್ತಿನಲ್ಲಿಯೇ ಇದು ಮೊದಲ ಮತ್ತು ಏಕೈಕ ಜೋಡಿಸಿ-ಬಿಚ್ಚಿ -ಮರುಜೋಡಿಸಬಹುದಾದ ಸ್ಟೇಡಿಯಂ. ಒಂಥರಾ ಹಡಗಿನಂತೆ ಕಾಣುವ ಈ ಸ್ಟೇಡಿಯಂನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. 974 ಕಂಟೇನರು ಗಳನ್ನು ಬಳಸಿದ್ದೊಂದೇ ಅಲ್ಲ, ಕತಾರಿನ ಮೊಬೈಲ್ ಕಂಟ್ರಿ ಕೋಡ್ ಸಹ 974 ಆಗಿರುವುದರಿಂದ, ಆ ಸ್ಟೇಡಿಯಂಗೆ
ಆ ಹೆಸರು.

ಆ ಸ್ಟೇಡಿಯಂನಲ್ಲಿ ಏಳು ಪಂದ್ಯಗಳು ನಡೆಯಲಿವೆ. ದೋಹಾ ಬಂದರು, ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೋಹಾ ವಿಮಾನ ನಿಲ್ದಾಣಕ್ಕೆ ಸನಿಹವಿರುವ ಈ ಸ್ಟೇಡಿಯಂ ನಿರ್ಮಾಣ ವಿಜ್ಞಾನದಲ್ಲಿ ವಿನೂತನ ಸಾಧ್ಯತೆಗಳನ್ನು ಅನಾವರಣ ಮಾಡಿದೆ. ಇದರಿಂದ ಭವಿಷ್ಯದಲ್ಲಿ ತೀರಾ ಕಡಿಮೆ ಅವಧಿಯಲ್ಲಿ, ಪರಿಸರಕ್ಕೆ ಧಕ್ಕೆ ಮಾಡದೇ, ಶೀಘ್ರದಲ್ಲಿ ಸ್ಟೇಡಿಯಂ ನಿರ್ಮಾಣದ ಅವಕಾಶವನ್ನು ತೋರಿಸಿಕೊಟ್ಟಿದೆ.

ವಲಸೆ ಕಾರ್ಮಿಕರ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂಬ ಆರೋಪ ಹೆಚ್ಚಿದ ಬಳಿಕ, ಕತಾರ್ ಆ ಸ್ಟೇಡಿಯಂನ್ನು  ನಿರ್ಮಿಸಲು ನಿರ್ಧರಿಸಿತು. ಈ ಸ್ಟೇಡಿಯಂನ್ನು ಬಿಚ್ಚಲು ಎಪ್ಪತ್ತೊಂದು ದಿನಗಳು ಸಾಕು. ಹಾಗೇ ಪುನಃ ಜೋಡಿಸಲು ಅರವತ್ತೆಂಟು ದಿನಗಳು ಸಾಕು. ಡಿಸೆಂಬರ್‌ನಲ್ಲಿ ವಿಶ್ವಕಪ್ ಪಂದ್ಯಾವಳಿ ಮುಗಿಯುತ್ತಿದ್ದಂತೆ, ಈ ಸ್ಟೇಡಿಯಂನ್ನು ಬಿಚ್ಚಿ ಇಡಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ.

ನವೆಂಬರ್ 21 ರಿಂದ ಡಿಸೆಂಬರ್ 18 ರವರೆಗೆ, ಎಂಟು ಸ್ಟೇಡಿಯಂಗಳಲ್ಲಿ ಮೂವತ್ತೆರಡು ದೇಶಗಳು 64 ಪಂದ್ಯಗಳನ್ನು
ಆಡಲಿವೆ. ಕತಾರ್ ನಿರ್ಮಿಸಿದ ಎಲ್ಲಾ ಸ್ಟೇಡಿಯಂಗಳು ಅಂತಾರಾಷ್ಟ್ರೀಯ ಗುಣಮಟ್ಟದವು. ವಿನ್ಯಾಸ, ಶೈಲಿ, ಬಾಳಿಕೆ
ಮತ್ತು ಉಪಯೋಗದಲ್ಲಿ ಅತ್ಯಂತ ಆಧುನಿಕವಾಗಿವೆ ಎಂಬ ಪ್ರಶಂಸೆಗೆ ಪಾತ್ರವಾಗಿವೆ. ತೊಂಬತ್ತು ಸಾವಿರ ಪ್ರೇಕ್ಷಕರು
ತುಂಬಿದ ಸ್ಟೇಡಿಯಂನ್ನು ಕೇವಲ ಇಪ್ಪತ್ತು ನಿಮಿಷಗಳಲ್ಲಿ ಹದಿನೆಂಟು ಡಿಗ್ರಿ ಸೆಲ್ಸಿಯಸ್ ತಂಪಿಗೆ ತರಬಹುದು.

ಆಟಗಾರರಿಗೆ ವಿಪರೀತ ಸೆಕೆಯಾಗಬಾರದೆಂದು ಮೈದಾನದಿಂದಲೇ ಏರ್ ಕಂಡೀಷನ್ ವ್ಯವಸ್ಥೆಯನ್ನು ಮಾಡಿರುವುದು
ಗಮನಾರ್ಹ. ಪಂದ್ಯ ಆರಂಭಕ್ಕೆ ಹತ್ತು ನಿಮಿಷ ಮೊದಲು, ಇಡೀ ಮೈದಾನಕ್ಕೆ ಎರಡು ನಿಮಿಷಗಳಲ್ಲಿ ನೀರುಣಿಸಿ, ತಕ್ಷಣ ಹುಲ್ಲನ್ನು ಒಣಗಿಸುವ, ಆ ಮೂಲಕ ಮೈದಾನದ ಮೇಲ್ಮೈಯನ್ನು ತಾಜಾ ಆಗಿ ಇಡುವ ಆಧುನಿಕ ತಂತ್ರಜ್ಞಾನವನ್ನು ಸಹ ಬಳಸಲಾಗಿದೆ. ಇದು ಜಗತ್ತಿನ ಸ್ಟೇಡಿಯಂ ಗುಣಮಟ್ಟದ ಮಾನದಂಡವನ್ನೇ ಬದಲಿಸಿದೆ.

ಅಂಕಿ- ಸಂಖ್ಯೆಗಳಲ್ಲಿ ವಿಶ್ವಕಪ್
ಮೊನ್ನೆ ಸ್ನೇಹಿತರೊಬ್ಬರು ಈ ಸಲದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಕುರಿತು ಆಸಕ್ತಿಕರವಾದ ಅಂಕಿ-ಅಂಶಗಳನ್ನುಹೇಳಿದರು. ಈ ಕ್ರೀಡಾಕೂಟಕ್ಕಾಗಿ ಕತಾರ್ ಸುಮಾರು 220 ಶತಕೋಟಿ ಡಾಲರ್ ಹಣವನ್ನು ವ್ಯಯಿಸಿದೆ
ಯಂತೆ. ಇದು ಫಿಫಾ ಇತಿಹಾಸದಲ್ಲಿಯೇ ದಾಖಲೆಯ ಅತಿ ಹೆಚ್ಚು. 2018 ರಲ್ಲಿ ರಷ್ಯಾ ಹನ್ನೊಂದು ಶತಕೋಟಿ ಡಾಲರ್
ವ್ಯಯಿಸಿತ್ತು. ಅಂದರೆ ಕಳೆದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಿಂತ ಸುಮಾರು ಇಪ್ಪತ್ತು ಪಟ್ಟು ಜಾಸ್ತಿ.

ಕಳೆದ ಏಳು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳನ್ನು ಸಂಘಟಿಸಲು ಖರ್ಚು ಮಾಡಿದ್ದಕ್ಕಿಂತ ಇದೊಂದಕ್ಕೇ ಹೆಚ್ಚು ಹಣ ವೆಚ್ಚವಾಗಿದೆ. ಈ ಸಲದ ವಿಶ್ವಕಪ್‌ಗಾಗಿ ಕತಾರ್ ಇಂಗ್ಲೆಂಡಿನ ಸ್ಟಾರ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕೆಮ್ ಅವರನ್ನು ಫುಟ್ಬಾಲ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿತು. ಅದಕ್ಕಾಗಿ ಅವರಿಗೆ ನೀಡಿದ ಹಣ ಸುಮಾರು 277 ದಶಲಕ್ಷ ಡಾಲರ್. ಸ್ಟೇಡಿಯಂ ನಿರ್ಮಾಣ ಕೆಲಸಕ್ಕೆ, ಕತಾರ್ ಪ್ರತಿ ವಲಸೆ ಕಾರ್ಮಿಕರಿಗೆ ನೀಡಿದ ಹಣ ತಿಂಗಳಿಗೆ 275 ಡಾಲರ್. ಯಾವಾಗ ಕತಾರ್ 2022 ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳನ್ನು ಸಂಘಟಿಸುತ್ತದೆ ಎಂದು ಫಿಫಾ ಘೋಷಿಸಿತೋ, ಅಲ್ಲಿಂದ ಆರಂಭವಾದ ಸ್ಟೇಡಿಯಂ ನಿರ್ಮಾಣ ಕಾರ್ಯದಲ್ಲಿ ಮೃತಪಟ್ಟವರ ವಲಸೆ ಕಾರ್ಮಿಗಳ ಸಂಖ್ಯೆ 6500. (ಆದರೆ ಈ ಸಂಖ್ಯೆ ಸಂಪೂರ್ಣ ಸುಳ್ಳು, ಸತ್ತವರ ಸಂಖ್ಯೆ ಕೇವಲ ಮೂರು ಎಂದು ಕತಾರಿನ ವಿಶ್ವಕಪ್ ಉಸ್ತುವಾರಿ ಸಮತಿ ಹೇಳಿದ್ದು ಬೇರೆ ಮಾತು) ಈ ಸಲ ಮೂವತ್ತೆರಡು ಪಂದ್ಯಗಳು ಸೆಣಸುತ್ತಿವೆ.

ಈ ಪೈಕಿ ಆತಿಥೇಯ ಕತಾರ್ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಆಡುತ್ತಿರುವ 80ನೇ ತಂಡವಾಗಿದೆ. ಬೆಲ್ಜಿಯಂ ಮತ್ತು ಇರಾನ್ ತಂಡದಲ್ಲಿ ಅತಿ ಹೆಚ್ಚು ವಯಸ್ಸಿನವರು (ಸರಾಸರಿ 29) ಆಡುತ್ತಿದ್ದಾರೆ. ಘಾನಾ ತಂಡದ ಆಟಗಾರರ ಸರಾಸರಿ ವಯಸ್ಸು 23. ಈ ಸಲದ ವಿಶ್ವಕಪ್ ಪಂದ್ಯಾವಳಿಯನ್ನು ಐದು ನೂರು ಕೋಟಿ ಜನ ವೀಕ್ಷಿಸಬಹುದು ಎಂದು ಅಂದಾಜಿಸಲಾಗಿದೆ.

ಅಂದರೆ ಈ ಭೂಮಿಯ ಮೇಲಿರುವ ಅರ್ಧಕ್ಕಿಂತ ಹೆಚ್ಚು ಜನ ಈ ಪಂದ್ಯಾವಳಿಯನ್ನು ವೀಕ್ಷಿಸಲಿದ್ದಾರೆ. ಇಲ್ಲಿಯವರೆಗೆ
ಯಾವ ದೇಶ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳನ್ನು ಸಂಘಟಿಸಿವೆಯೋ, ಆ ಎಲ್ಲಾ ದೇಶಗಳ ಪೈಕಿ ಕತಾರ್ ಅಂತ್ಯಂತ ಸಣ್ಣ ದೇಶ. ಕತಾರ್ (ಸುಮಾರು 11500 ಚದರ ಕಿಲೋಮೀಟರ್) ದೇಶ ಅಮೆರಿಕದ ನ್ಯೂಯಾರ್ಕ್ ನಗರಕ್ಕಿಂತ ಚಿಕ್ಕದು ಎಂಬುದು ಗಮನಾರ್ಹ. ಕತಾರಿನ ಜನಸಂಖ್ಯೆ 29 ಲಕ್ಷ. ನ್ಯೂಯಾರ್ಕಿ ನದು ಸುಮಾರು ಒಂದು ಕೋಟಿ ಎಂಬತ್ತೆಂಟು ಲಕ್ಷ.
ಸ್ಟೇಡಿಯಂ ನಿರ್ಮಾಣಕ್ಕೆಂದೇ ಕತಾರ್ ಏನಿಲ್ಲವೆಂದರೂ 15 ಶತಕೋಟಿ ಡಾಲರ್ ಖರ್ಚು ಮಾಡಿದೆ.

ಕಟ್ಟ ಕಡೆ ಸ್ಥಾನ ಪಡೆಯುವ ತಂಡ ಸಹ ಒಂಬತ್ತು ದಶಲಕ್ಷ ಡಾಲರ್ ಬಹುಮಾನ ಪಡೆದರೆ, ಗೆದ್ದ ತಂಡಕ್ಕೆ 42 ದಶಲಕ್ಷ ಡಾಲರ್. ಒಟ್ಟೂ 440 ದಶಲಕ್ಷ ಡಾಲರ್ ಬಹುಮಾನಕ್ಕೇ ವಿನಿಯೋಗವಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ
ಮೂವತ್ತೆರಡು ತಂಡಗಳ ಪೈಕಿ ಮೊದಲಸ್ಥಾನದಲ್ಲಿರುವುದು ಬ್ರೆಜಿಲ್. ನಂತರದ ನಾಲ್ಕು ಸ್ಥಾನಗಳು ಅನುಕ್ರಮವಾಗಿ,
ಬೆಲ್ಜಿಯಂ, ಅರ್ಜೆಂಟಿನಾ, -, ಇಂಗ್ಲೆಂಡ್. ಕೊನೆಯ ಎರಡು ಸ್ಥಾನಗಳು ಸೌದಿ ಅರೇಬಿಯಾ ಮತ್ತು ಘಾನಾ. ಜರ್ಮನಿಯ ಯೌಸ್ಸೋ- ಮೌಕೊಕೋ ಅತಿ ಕಿರಿಯ ಅಂದರೆ ಹದಿನೆಂಟು ವರ್ಷದವ. ಸತತ ಐದು ವಿಶ್ವಕಪ್‌ನಲ್ಲಿ ಆಡುತ್ತಿರುವ ನಾಲ್ವರು ಆಟಗಾರರು; ಆಂಡ್ರೆಸ್ ಗರ್ದದೋ, ಲಿಯೋನೆಲ್ ಮೆಸ್ಸಿ, ಗಿಮೋರ್ ಓಖಾವ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ.

ಆಸ್ಟ್ರೇಲಿಯಾ, ಕ್ಯಾಮರೂನ್, ಜಪಾನ್, ಈಕ್ವೆಡಾರ್, ಘಾನಾ, ಕೊರಿಯಾ, ಮೊರಕ್ಕೋ, ನೆದರ್‌ಲಾಂಡ್, ಸೌದಿ ಅರೇಬಿಯಾ, ಸೆನೆಗಲ, ಸೆರ್ಬಿಯಾ, ಸ್ಪೇನ್, ಟ್ಯುನೀಸಿಯಾ, ಅಮೆರಿಕ ಮತ್ತು ವೇಲ್ಸ್ ಈ ಎಲ್ಲಾ ದೇಶಗಳು ಒಟ್ಟಾಗಿ ಹೊಡೆದಿದ್ದಕ್ಕಿಂತ ಹೆಚ್ಚು ಗೋಲ್‌ಗಳನ್ನು ಕ್ರಿಸ್ಟಿಯಾನೊ ರೊನಾಲ್ಡೊ ಒಬ್ಬನೇ (೧೧೭) ಹೊಡೆದಿದ್ದಾನೆ!

ಫುಟ್ಬಾಲ್ ನೆಪದಲ್ಲಿ ಇಡೀ ದೇಶದ ಮೂಲಸೌಕರ್ಯವನ್ನು ಪರಿವರ್ತಿಸಿದ ಅಗ್ಗಳಿಕೆಗೆ ಪಾತ್ರವಾದ ಕತಾರ್,
ಮರುಭೂಮಿ ಯಲ್ಲಿ ಕಣ್ಣು ಕೋರೈಸುವ ಲುಸೈಲ್ ಎಂಬ ಹೊಸ ನಗರವನ್ನೇ ಸೃಷ್ಟಿಸಿದೆ. ಇಡೀ ಟೂರ್ನಮೆಂಟಿಗಾಗಿ
ಮೂವತ್ತೆರಡು ಲಕ್ಷ ಟಿಕೆಟುಗಳನ್ನು ಮಾರಾಟ ಮಾಡಲಾಗಿದೆ. ಅಕ್ಟೋಬರ್ ಕೊನೆಯ ವೇಳೆಗೇ ೨.೮೯ ದಶಲಕ್ಷ ಟಿಕೆಟುಗಳು
ಮಾರಾಟವಾಗಿದ್ದವು. ಅಕ್ಟೊಬರ್ ಮಧ್ಯಬಾಗದಲ್ಲಿ ಹದಿನೈದು ಲಕ್ಷ ‘ಹಯ್ಯಾ ಕಾರ್ಡ್’ (ವೆಲ್ಕಮ್ ಕಾರ್ಡ್. ಅದೇ ವಿಸಾ ಕಾರ್ಡ್ ಕೂಡ) ಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಕತಾರಿನ ಅಧಿಕಾರಿಗಳು ತಿಳಿಸಿದ್ದರು.

ಇದು ಡಿಸೆಂಬರ್ ಆರಂಭದ ಹೊತ್ತಿಗೆ ಮೂವತ್ತು ಲಕ್ಷ ತಲುಪಬಹುದು ಎಂದು ಅಂದಾಜು ಮಾಡಲಾಗಿದೆಯಂತೆ. ಒಮ್ಮೆ ಹಾಗಾದರೆ, ಕತಾರಿನ ಜನಸಂಖ್ಯೆಗಿಂತ ಆ ದೇಶಕ್ಕೆ ಫುಟ್ಬಾಲ್ ನೆಪದಲ್ಲಿ ಭೇಟಿ ನೀಡಿದವರೇ ಹೆಚ್ಚಾಗುತ್ತಾರೆ.

ತಂತ್ರ – ಪ್ರತಿತಂತ್ರ
ಕತಾರಿನ ಎಂಟು ಸ್ಟೇಡಿಯಮ್ಮುಗಳಲ್ಲಿ ಪಂದ್ಯಗಳು ನಡೆಯುತ್ತಿದ್ದರೂ, ಎಲ್ಲಾ ಫುಟ್ಬಾಲ್ ಪ್ರೇಮಿಗಳು ಪಂದ್ಯಗಳನ್ನು ನೋಡಲು ಕತಾರಿಗೇ ಬಂದಿಲ್ಲ. ಅನೇಕರಿಗೆ ಇಲ್ಲಿಗೆ ಬರಲು ಬೇರೆ ಬೇರೆ ಕಾರಣಗಳಿಂದ ಸಾಧ್ಯವಾಗಿಲ್ಲ. ಕತಾರಿನಲ್ಲಿ ಹೋಟೆಲ್ ರೂಮು ಸಿಗದವರು, ಕೈಗೆಟಕುವ ಸುಲಭ ಬೆಲೆಗೆ ರೂಮು ಸಿಗದವರು, ವಿಶ್ವಕಪ್ ಸಂದರ್ಭದಲ್ಲಿ ಕತಾರಿನಲ್ಲಿ ಎಲ್ಲವೂ ದುಬಾರಿ ಇದ್ದಿರಬಹುದು ಎಂದು ಭಾವಿಸಿದವರು, ದಿನಾಲೂ ಸುತ್ತಲಿನ ದೇಶಗಳಲ್ಲಿ ಉಳಿದುಕೊಂಡು ಅಲ್ಲಿಂದ ಪಂದ್ಯ ವೀಕ್ಷಿಸಲು ಆಗಮಿಸುತ್ತಿದ್ದಾರೆ.

ಬೇರೆ ದೇಶಗಳು ಕತಾರ್ ಜತೆಗೆ ಈ ರೀತಿ ಪೈಪೋಟಿಗೆ ಬಿದ್ದಿವೆ. ಎಲ್ಲಾ ಬಿಜಿನೆಸ್‌ನ್ನು ಕತಾರಿಗೆ ಬಿಟ್ಟುಕೊಡದಿರಲು ಅವೂ ಹೊಂಚು ಹಾಕಿ, ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಉದಾಹರಣೆಗೆ, ಕತಾರಿನ ರಾಜಧಾನಿ ದೊಹಾದಲ್ಲಿ, ಒಂದು ದಿನಕ್ಕೆ ಹೋಟೆಲ್ ರೂಮು ಬಾಡಿಗೆಗೆ 60-70 ಸಾವಿರ ರುಪಾಯಿ ನೀಡುವ ಬದಲು, 10-15 ಸಾವಿರ ರುಪಾಯಿಗೆ
ಪಂಚತಾರಾ ಹೋಟೆಲಿನ ಸೌಲಭ್ಯ ಪಡೆದು, ಅಷ್ಟೇ ಹಣವನ್ನು ವಿಮಾನ ಪ್ರಯಾಣಕ್ಕೆ ನೀಡಿ, ಹಣ ಉಳಿಕೆ ಯೋಜನೆಯನ್ನು
ಜಾರಿಗೆ ತಂದಿವೆ. ಈ ವಿಷಯದಲ್ಲಿ ದುಬೈ, ಅಬುಧಾಬಿ ಈಗಾಗಲೇ ಕತಾರಿನ ಸಿಂಹಪಾಲಿನಲ್ಲಿ ತಮ್ಮ ಪಾಲನ್ನು ಬಾಚಿಕೊಂಡಿವೆ.

ಓಮಾನ್, ಸೌದಿ ಅರೇಬಿಯಾ, ಕುವೇಟ್ ರಾಷ್ಟ್ರಗಳು ಸಹ ಹಿಂದೆ ಬಿದ್ದಿಲ್ಲ. ತಾನು ಎಷ್ಟೇ ಹಣ ವಿಧಿಸಿದರೂ ಫುಟ್ಬಾಲ್ ಪ್ರೇಮಿಗಳು ಹೇಳಿದಷ್ಟು ಹಣವನ್ನು ಪೀಕುತ್ತಾರೆ ಎಂದು ಭಾವಿಸಿದ್ದ ಕತಾರಿಗೆ ಇದು ತಿರುಗೇಟು. ದುಬೈಯಿಂದ ದೋಹಾಕ್ಕೆ ದಿನಕ್ಕೆ ಅರವತ್ತು ವಿಮಾನಗಳು ಹಾರುತ್ತಲಿವೆ. ಶಟಲ್ ಬಸ್ಸುಗಳ ಮಾದರಿಯಲ್ಲಿ ವಿಮಾನುಗಳ ಸೇವೆ ಆರಂಭವಾಗಿವೆ. ಮಸ್ಕತ್‌ನಿಂದ 40, ಸೌದಿ ಅರೇಬಿಯಾದ ರಿಯಾದ್‌ನಿಂದ 40, ಜೆಡ್ದಾದಿಂದ 30 ಮತ್ತು ಕುವೇಟ್‌ನಿಂದ 20 ವಿಮಾನಗಳು ನಿತ್ಯವೂ ವಿಶ್ವಕಪ್ ಮುಗಿಯುವ ತನಕ ಹಾರಾಡಲಿವೆ.

ಕಳೆದ 27 ವರ್ಷಗಳಲ್ಲಿ ಮೊದಲ ಬಾರಿಗೆ, ಏರ್  ಫ್ರಾನ್ಸ್, ಪ್ಯಾರಿಸಿನಿಂದ ದೋಹಾಕ್ಕೆ ಪ್ರತಿದಿನವೂ ವಿಮಾನ
ಸೇವೆ ಯನ್ನು ಆರಂಭಿಸಿದೆ. ಬೇರೆ ದೇಶಗಳಲ್ಲಿ ಉಳಿದು ಕತಾರಿಗೆ ಆಗಮಿಸಿ, ಪಂದ್ಯನೋಡಿ ಮರಳುವುದು ಲಾಭದಾಯಕ ವಾಗಿ ಪರಿಣಮಿಸಿದೆ.

ಈ ಸಂಗತಿಯನ್ನು ಗಮನಿಸಿದ ಕತಾರಿನ ಅಧಿಕಾರಿಗಳು ಪಂದ್ಯಾವಳಿ ಆರಂಭವಾದ ಬಳಿಕ ಕಡಿಮೆ ವೆಚ್ಚದ ಹೋಟೆಲುಗಳ ಲಭ್ಯತೆಯನ್ನು ಘೋಷಿಸಿದೆ. ತನ್ನ ಲಾಭವನ್ನು ಅಕ್ಕ-ಪಕ್ಕದ ದೇಶಗಳು ಹಂಚಿಕೊಳ್ಳುವುದನ್ನು ತಡೆಯುವುದು ಉದ್ದೇಶ. ಈ ಕಾರಣಕ್ಕೆ ಕತಾರ್ ಹತ್ತಾರು ಬೃಹತ್ ಹಡಗುಗಳನ್ನು ತರಿಸಿ ತನ್ನ ಸಮುದ್ರ ಕಿನಾರೆಯಲ್ಲಿ ನಿಲ್ಲಿಸಿದೆ. ಒಂದೊಂದು ಹಡಗಿನಲ್ಲಿ ಮೂರರಿಂದ ಐದು ಸಾವಿರ ರೂಮುಗಳಿರುವುದರಿಂದ ಕನಿಷ್ಠ ಹತ್ತು ಸಾವಿರ ಜನರನ್ನು ಉಳಿಸಬಹುದಾಗಿದೆ. ಬೇಡಿಕೆಗೆ ತಕ್ಕ ಹಾಗೆ ಮತ್ತಷ್ಟು ಹಡಗುಗಳನ್ನು ತರಿಸಲಾಗುತ್ತಿದೆ.

ಪ್ರತಿ ಹಡಗುದಾಣದಿಂದ ಜನರನ್ನು ಉಚಿತವಾಗಿ ಸ್ಟೇಡಿಯಮ್ಮುಗಳಿಗೆ ಕರೆ ತರಲು ಟ್ಯೂಬ್ ರೈಲು, ಬಸ್ ವ್ಯವಸ್ಥೆಯನ್ನು ಸಹಮಾಡಲಾಗಿದೆ. ವಿಶ್ವಕಪ್ ಪಂದ್ಯ ವೀಕ್ಷಿಸಲು ಎಲ್ಲರೂ ತನ್ನಲ್ಲಿಗೇ ಆಗಮಿಸಬಹುದು ಎಂಬ ಕತಾರಿನ ಲೆಕ್ಕಾಚಾರ ಏರುಪೇರಾದಾಗ ಅದು ಎಚ್ಚೆತ್ತುಕೊಂಡು, ಪ್ರತಿ ತಂತ್ರವನ್ನು ಹೂಡಿದೆ.

ಹತ್ತು ಶತಕೋಟಿ ಡಾಲರ್ ಲಾಭ
ಒಬ್ಬ ಫ್ರೆಂಚ್ ಫುಟ್ಬಾಲ್ ಪ್ರೇಮಿ ವಾಸ್ತವ್ಯ, ಸಂಚಾರ ಮತ್ತು ಟಿಕೆಟಿಗೆ ಸರಾಸರಿ ಕನಿಷ್ಠ 6000 ಯುರೋ ಖರ್ಚು
ಮಾಡಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶಾಪಿಂಗ್ ಮತ್ತು ಊಟ-ತಿಂಡಿ ವೆಚ್ಚ ಸೇರಿಲ್ಲ. ಸಾಮಾನ್ಯವಾಗಿ
ಕತಾರಿಗೆ ಬಂದವರು ಯಾರೂ ಬರಿಗೈಲಿ ಹೋಗುವುದಿಲ್ಲ. ಅದೇ ಬೇರೆ ಮಾತು.

ಯೂರೋಪಿನ ಫುಟ್ಬಾಲ್ ಅಸೋಸಿಯೇಷನ್ ಪ್ರಕಾರ, ಕಳೆದ ಬಾರಿ ರಷ್ಯಾದಲ್ಲಿ ನಡೆದ ವಿಶ್ವಕಪ್‌ಗಿಂತ ಮೂರುಪಟ್ಟು
ಹೆಚ್ಚು ಹಣವನ್ನು ಫುಟ್ಬಾಲ್ ಪ್ರೇಮಿಗಳು ತೆರುತ್ತಿದ್ದಾರೆ. ಆದರೂ ಅವರ ಉತ್ಸಾಹ ಕುಂದಿಲ್ಲ. ಕಳೆದ ಬಾರಿಯ ವಿಶ್ವಕಪ್ ಸಂಘಟಿಸಿದ್ದ ರಷ್ಯಾ 12 ಶತಕೋಟಿ ಯುರೋ ಲಾಭ ಗಳಿಸಿತ್ತು. ಈ ಸಲದ ವಿಶ್ವಕಪ್ ನಿಂದ ಕತಾರ್ ಕನಿಷ್ಠ ಹತ್ತು ಶತಕೋಟಿ ಡಾಲರ್ ಲಾಭ ಮಾಡಲಿದೆಯಂತೆ.

ಕತಾರ್ ಈ ಲಾಭದ ಮೇಲೆ ಕಣ್ಣಿಟ್ಟಿದ್ದರೆ, ಈ ಸಲದ ವಿಶ್ವಕಪ್ ನಿಂದ ೩.೬ ದಶಲಕ್ಷ ಟನ್ ಇಂಗಾಲದ ಡೈಆಕ್ಸೈಡ್
ಹವಾಮಾನವನ್ನು ಸೇರಲಿದೆ ಎಂದು ಪರಿಸರ ಪ್ರೇಮಿಗಳು ಬೊಬ್ಬೆ ಹಾಕುತ್ತಿದ್ದಾರೆ. ಹಿಂದಿನ ವರ್ಷವೇ ಫಿಫಾ ಈ
ಸಂಗತಿಯನ್ನು ಒಪ್ಪಿಕೊಂಡಿತ್ತು. ಇಂಗಾಲದ ಡೈಆಕ್ಸೈಡ್ ಪ್ರಮಾಣ ಹಿಂದಿನ ಸಲಕ್ಕಿಂತ ಜಾಸ್ತಿಯಾಗಿರುವುದು ಕಳವಳ ಕಾರಿ. ಆದರೆ ಯಾರೂ ಈ ಬಗ್ಗೆ ಗಮನಹರಿಸದಿರುವುದು ವಿಷಾದವೇ.