Monday, 16th September 2024

ವಿಶ್ವಕಪ್‌: ಕೊನೆಯಲ್ಲಿ ಗೆದ್ದಿದ್ದು ಕತಾರ್‌

ವಿದೇಶ ವಾಸಿ

dhyapaa@gmail.com

ಫುಟ್ಬಾಲ್ ವಿಷಯದಲ್ಲಿ ಮಾನವ ಹಕ್ಕು ಉಲ್ಲಂಘನೆಯ ತುತ್ತೂರಿ ಊದುವ, ಕತಾರ್‌ನಲ್ಲಿ ನಡೆಯುವ ಫುಟ್ಬಾಲ್ ಪಂದ್ಯಾಟ ವನ್ನು ಬಹಿಷ್ಕರಿಸಬೇಕು ಎಂದು ಬೊಂಬಡಾ ಬಜಾಯಿಸುತ್ತಿರುವ ಪಾಶ್ಚಿಮಾತ್ಯ ದೇಶಗಳು, ಕತಾರ್‌ನಿಂದ ತೈಲ ಮತ್ತು ಅನಿಲ ಖರೀದಿಸುವ ವಿಷಯದಲ್ಲಿ ಉಸಿರೆತ್ತದೆ ಗಪ್ಚುಪ್ ಆಗಿ ಕುಳಿತಿವೆ.

2022 ರ ಫಿಫಾ ವಿಶ್ವಕಪ್ – ಫುಟ್ ಬಾಲ್ ವಿಜೇತರು ಯಾರು? ಒಂದೇ ಅರ್ಜೆಂಟೀನಾ ಅಥವಾ -. ಈ ಅಂಕಣ ನೀವು ಓದುವ ಹೊತ್ತಿಗೆ ಅದೂ ನಿರ್ಣಯವಾಗಿರುತ್ತದೆ. ಕಪ್ ಯಾರೇ ಗೆಲ್ಲಬಹುದು, ತಾನು ಆಡಿದ ಎಲ್ಲ ಪಂದ್ಯಗಳಲ್ಲೂ ಕತಾರ್ ಫುಟ್ಬಾಲ್ ತಂಡ ಸೋತಿರಬಹುದು, ಆದರೆ ಕತಾರ್ ಒಂದು ಆಯೋಜಕ ದೇಶವಾಗಿ ಗೆದ್ದಿದೆ. ಜತೆಗೆ ಕೆಲವರ ಕುಹಕ ಬುದ್ಧಿಯನ್ನು ಬೆತ್ತಲು ಮಾಡಿದೆ.

ಒಂದು ಪಂದ್ಯಾಟ ಆಯೋಜಿಸಿದ ಮಾತ್ರಕ್ಕೆ ಒಂದು ದೇಶವನ್ನು ಇಷ್ಟೊಂದು ಹೊಗಳಬೇಕೆ ಎಂದರೆ, ಹೌದೌದು, ಕತಾರ್‌ಗೆ ಭೇಷ್ ಭೇಷ್ ಅನ್ನಲೇಬೆಕು. ವಿಶ್ವಕಪ್ ಜವಾಬ್ದಾರಿ, ಆತಿಥ್ಯ ವಹಿಸಿಕೊಂಡಾಗಿಂದಲೂ ಒಂದಲ್ಲ ಒಂದು ಅಪವಾದವನ್ನು ಕೇಳಿಕೊಂಡು, ಸಹಿಸಿಕೊಂಡು ಬಂದ ಕತಾರ್ ಅಪಸ್ವರದ ಪ್ರಶ್ನೆಗೆ ತನ್ನ ಕೃತಿಯಿಂದ ಉತ್ತರಿಸಿದೆ. ಘಟಾನುಘಟಿ ದೇಶಗಳಿರುವಾಗ ಕತಾರ್‌ನಂತಹ ಪುಟ್ಟ ದೇಶ ಇಷ್ಟು ದೊಡ್ಡ ಪಂದ್ಯಾಟ ಆಯೋಜಿಸುವುದು ಎಂದರೆ ಹೇಗೆ? ಹೇಳಿ ಕೇಳಿ ಮರುಭೂಮಿಯ ದೇಶ.

ವಿಶ್ವಕಪ್ ಆರಂಭವಾದಾಗಿಂದ ಯಾವುದಾದರೂ ಪಂದ್ಯ ಗೆಲ್ಲುವುದು ಬಿಡಿ, ಕತಾರ್ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದೇ ಇದು ಮೊದಲ ಬಾರಿ. ಆ ಅವಕಾಶ ಕೂಡ ಆತಿಥೇಯ ದೇಶವಾದದ್ದರಿಂದ ದೊರಕಿದ್ದು. ಎಪ್ಪತ್ತರ ದಶಕದ ಆರಂಭದವರೆಗೂ ಕತಾರ್ ‘ಫಿಫಾ’ದ ಸದಸ್ಯ ದೇಶವೇ ಆಗಿರಲಿಲ್ಲ. ನಂತರ ಸದಸ್ಯ ದೇಶವಾದರೂ ವಿಶ್ವಕಪ್ ಆಡಲು ಅರ್ಹತೆ ಪಡೆಯಲಿಲ್ಲ.
ಅಷ್ಟೇ ಅಲ್ಲ, ಕತಾರ್ ದೇಶದ ಒಟ್ಟೂ ಜನಸಂಖ್ಯೆ ಸುಮಾರು ಇಪ್ಪತ್ತೆಂಟು ಲಕ್ಷ. ಅದರಲ್ಲಿ ಸುಮಾರು ಇಪ್ಪತ್ತು ಲಕ್ಷ ಅನ್ಯ ದೇಶೀಯರು, ಉದ್ಯೋಗಕ್ಕಾಗಿ ಬಂದವರು.

ಅದರಲ್ಲೂ ಎಂಬತ್ತು ಪ್ರತಿಶತ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳದಂತಹ ದಕ್ಷಿಣ ಏಷ್ಯಾದಿಂದ ಬಂದವರು.
ಅವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ರಸ್ತೆ, ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದ ಕಾರ್ಮಿಕ ವರ್ಗದವರು. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಆ ದೇಶದ ಮಿತಿ ಮೀರಿದ ತಾಪಮಾನ. ಸಾಮಾನ್ಯವಾಗಿ ವಿಶ್ವಕಪ್ ಫುಟ್ಬಾಲ್ ಪಂದ್ಯ ನಡೆಯುವುದು ಜೂನ್-ಜುಲೈ ತಿಂಗಳಿನಲ್ಲಿ. ಆ ಕಾಲದಲ್ಲಿ ಕತಾರ್‌ನಲ್ಲಿ ತಾಪಮಾನ ಏನಿಲ್ಲವೆಂದರೂ ನಲವತ್ತರಿಂದ ನಲವತ್ತೈದು ಡಿಗ್ರಿ.

ವಿಶ್ವಕಪ್ ಆಡಲು ಬರುವ ಮೂವತ್ತೆರಡು ತಂಡಗಳ (ಮುಂದಿನ ವಿಶ್ವಕಪ್‌ನಲ್ಲಿ ಈ ಸಂಖ್ಯೆ ನಲವತ್ತೆಂಟಕ್ಕೆ ಏರಲಿದೆ) ಪೈಕಿ ಶೇಕಡಾ ಎಪ್ಪತ್ತಕ್ಕೂ ಹೆಚ್ಚು ಯುರೋಪ್, ಅಮೆರಿಕ, ಆಸ್ಟ್ರೇಲಿಯಾದಂತಹ ಚಳಿ ಪ್ರದೇಶದಿಂದ ಬರುವಂಥವು. ಮತ್ತೊಂದು ಕಡೆ ಅಂತಾರಾಷ್ಟ್ರೀಯ ಗುಣಮಟ್ಟದ, ಅದರಲ್ಲೂ ವಿಶ್ವಕಪ್ ಪಂದ್ಯ ಆಡಬಹುದಾದ ಒಂದೇ ಒಂದು ಕ್ರೀಡಾಂಗಣ ಇಲ್ಲ. ಬಂದ ಜನರು ಉಳಿದುಕೊಳ್ಳಲು ಬೇಕಾದಷ್ಟು ಹೊಟೇಲುಗಳು ಇಲ್ಲ, ಮೆಟ್ರೋ, ರೈಲು ವ್ಯವಸ್ಥೆಯಂತೂ ಮೊದಲೇ ಇಲ್ಲ, ಜನ ಓಡಾಡಲು ಸಾಕಷ್ಟು ಬಸ್ಸುಗಳೂ ಇಲ್ಲ. ಒಟ್ಟಿನಲ್ಲಿ, ಯಾವ ಕ್ಷೇತ್ರದಲ್ಲೂ, ಯಾವ ಲೆಕ್ಕದಲ್ಲೂ ಶಕ್ತಿಶಾಲಿಯಲ್ಲದ ಕತಾರ್
ಎಂದರೆ ಫುಟ್ಬಾಲ್ ವಲಯದಲ್ಲಿ ಪುಟಗೋಸಿ ದೇಶವಾಗಿತ್ತು.

ವಿಶ್ವದಾದ್ಯಂತ ಇನ್ನೂರಕ್ಕೂ ಹೆಚ್ಚು ದೇಶಗಳಲ್ಲಿ ಇಪ್ಪತ್ತೈದು ಕೋಟಿ ಜನ ಫುಟ್ಬಾಲ್ ಆಟಗಾರರಿದ್ದಾರೆ. ಅದರಲ್ಲಿ ಯುರೋಪ್,
ಅಮೆರಿಕಾ ಮತ್ತು ಆಫ್ರಿಕಾದಲ್ಲಿ ಇವರ ಸಂಖ್ಯೆ ಹೆಚ್ಚು. ಬ್ರಾಝಿಲ್‌ನಂತಹ ಫುಟ್ಬಾಲ್ ಪ್ರಿಯ ದೇಶದ ಸರಣಿ ಮುಗಿದ ಮೇಲೆ ಕ್ರೀಡಾಂಗಣ ಬಸ್ ತಂಗುದಾಣವಾಗಿದೆ ಎಂದರೆ ಕತಾರ್‌ನಲ್ಲಿ ಏನಾಗಬಹುದು ಎಂದು ಜರೆದರು. ೧೯೩೦ ರಲ್ಲಿ ಆರಂಭವಾದಾಗಿಂದ ಇದುವರೆಗೆ ವಿಶ್ವಕಪ್ ಆಯೋಜಿಸುವ ಅವಕಾಶ ಏಷ್ಯಾ ಖಂಡಕ್ಕೆ ಸಿಕ್ಕಿದ್ದು ಎರಡು ಬಾರಿ ಮಾತ್ರ. ಯಾವ ಅರಬ್ ರಾಷ್ಟ್ರಕ್ಕೂ ಈ ಅವಕಾಶ ಸಿಕ್ಕಲಿಲ್ಲ. ಒಂದು ವೇಳೆ ಸಿಕ್ಕರೂ, ದುಬೈ, ಅಬುಧಾಬಿ, ಶಾರ್ಜಾದಂತಹ
ನಗರಗಳುಳ್ಳ ಯುಎಇಗೆ ಸಿಗಬೇಕಿತ್ತು. ಜೊರ್ಡನ್ ಸಿರಿಯಾದಂತಹ ದೇಶಕ್ಕೋ, ಕೊನೆ ಪಕ್ಷ ವಿಶ್ವಕಪ್ ನಲ್ಲಿ ಮೊದಲು ಭಾಗವಹಿಸಿದ ಆಧಾರದ ಮೇಲೆ ಸೌದಿ ಅರೇಬಿಯಾದಂತಹ ದೇಶಕ್ಕಾದರೂ ಆ ಭಾಗ್ಯ ದೊರಕಬೇಕಿತ್ತು. ಎಲ್ಲವನ್ನೂ ಬಿಟ್ಟು ಈ ಅವಕಾಶ ಕತಾರ್‌ಗೆ ಸಿಕ್ಕಿದ್ದು ಅರಬ್ ವಲಯದ ಸಂಚಲನ ಮೂಡಿಸಿತ್ತು. ಜತೆಗೆ ಕೆಲವರ ಹೊಟ್ಟೆ ಉರಿಗೂ ಕಾರಣ ವಾಗಿತ್ತು.

2022 ರ ವಿಶ್ವಕಪ್ ಹರಾಜು ಪ್ರಕ್ರಿಯೆಯಿಂದಲೇ ಅಪಸ್ವರ ಆರಂಭವಾಗಿತ್ತು. ಫಿಫಾ ಈ ಪ್ರಕ್ರಿಯೆಯೆಲ್ಲಿ ಗೋಲ್ಮಾಲ್ ಮಾಡಿದೆ, ಅಧಿಕಾರಿಗಳು ಭಾರೀ ರಕಂ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಫಿಫಾದ ಇಪ್ಪತ್ತೆರಡು ಜನ ಸದಸ್ಯರಲ್ಲಿ ಹದಿನಾಲ್ಕು ಜನ ಕತಾರ್ ಪರವಾಗಿ ಮತ ಹಾಕಿದ್ದರು. ಅವರ ಮೇಲೆ ಭ್ರಷ್ಟಾಚಾರದ ಆರೋಪ ದಾಖಲಾಯಿತು.
ಜೂನ್-ಜುಲೈನಲ್ಲಿ ನಡೆಯಬೇಕಿದ್ದ ಪಂದ್ಯಾಟ ಹವಾಮಾನದಿಂದಾಗಿ ನವೆಂಬರ್-ಡಿಸೆಂಬರ್‌ಗೆ ಬದಲಾಯಿತು. ಕೆಲವು ಫುಟ್ಬಾಲ್ ಪ್ರಿಯ ದೇಶಗಳು ಅದನ್ನೂ ಹಳಿದವು. ಅದು ಯುರೋಪ್‌ನ ಕೆಲವು ದೇಶಗಳಲ್ಲಿ ಪ್ರತಿವರ್ಷ ಪ್ರತಿಷ್ಠಿತ ಕ್ಲಬ್ ಟೂರ್ನಮೆಂಟ್ ನಡೆಯುವ ಕಾಲ.

ಆ ಸಮಯದಲ್ಲಿ ವಿಶ್ವಕಪ್ ನಿಗದಿಯಾದದ್ದರಿಂದ ಇತರ ಪಂದ್ಯಾಟಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಬೇಕಾಯಿತು.
ಈ ನಡುವೆ ಎಲ್‌ಜಿಬಟಿ ವರ್ಗದ ಜನರಿಗೆ ನಿರ್ಬಂಧ ಮತ್ತು ಮದ್ಯಪಾನ ಪ್ರಿಯರಿಗೆ ಮಿತಿ ಇದ್ದ ಕಾರಣ ಆ ವರ್ಗದವರೂ
ಮುನಿಸಿಕೊಂಡಿದ್ದರು. ಕತಾರ್‌ನ ಅಮೀರ್, ಶೇಖ್ ತಮಿಮ್ ಬಿನ್ ಹಮಿದ್ ಬಿನ್ ಅಲ್ ಥಾನ್, ‘ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ. ಆದರೆ, ನಮ್ಮ ದೇಶಕ್ಕೆ ಬಂದ ಅತಿಥಿಗಳು ನಮ್ಮ ಸಂಸ್ಕೃತಿ, ನಮ್ಮ ನೆಲದ ನಿಯಮವನ್ನು ಗೌರವಿಸ ಬೇಕೆಂದು ನಿರೀಕ್ಷಿಸುತ್ತೇವೆ’ ಎಂದಲ್ಲಿಗೆ ಆ ಒಂದು ವರ್ಗವೂ ಮುನಿಸಿಕೊಂಡಿತ್ತು.

ಹುಮ್ಮಸ್ಸಿನಲ್ಲಿದ್ದ ಕತಾರ್ ವಿಶ್ವಕಪ್‌ಗೆ ತಯಾರಿ ನಡೆಸಿತ್ತು. ಆ ಸಂದರ್ಭದಲ್ಲಿ ಕೆಲವು ವಿದೇಶೀ ಕಾರ್ಮಿಕರು ಅಪಘಾತ ಮತ್ತು ಇನ್ನಿತರ ಕಾರಣದಿಂದ ಮೃತಪಟ್ಟರು. ಈ ಹಂತದಲ್ಲಿ ಮೂವತ್ತೇಳು ಜನ ಸತ್ತಿzರೆ ಎಂದು ಕತಾರ್ ಹೇಳಿದರೆ, ವಿದೇಶಿ ಮಾಧ್ಯಮಗಳು ಆರುವರೆ ಸಾವಿರ ಜನ ಸತ್ತಿzರೆ ಎಂದು ವರದಿ ಮಾಡಿದವು. ಮಾಧ್ಯಮದಿಂದ ಹಿಡಿದು ಮಾನವ ಹಕ್ಕುಗಳ
ಸಂಸ್ಥೆಯವರೆಗೆ ಎಲ್ಲರೂ ಕತಾರ್ ಮೇಲೆ ಮುಗಿಬಿದ್ದವು. ಮೂರು ವಿಶ್ವಕಪ್‌ಗೆ ಧ್ಯೇಯ ಗೀತೆ ಹಾಡಿದ ಶಕೀರಾ ಸೇರಿದಂತೆ ಕೆಲವರು ಈ ಪಂದ್ಯಾಟವನ್ನು ಬಹಿಷ್ಕರಿಸುವುದಾಗಿಯೂ ಹೇಳಿದರು. ಎಲ್ಲಿಯವರೆಗೆ ಎಂದರೆ, ಕೆಲವು ಆಟಗಾರರು ಮಾನವ ಹಕ್ಕಿಗೆ ಸಂಬಂಧಿಸಿದಂತೆ ಟಿ-ಶರ್ಟ್ ತೊಡುವುದಾಗಿ ಹೇಳಿದರೆ ಕೆಲವು ಕ್ರೀಡಾಳುಗಳು ಎಲ್‌ಜಿಬಟಿ ವರ್ಗದವರನ್ನು
ಸಮರ್ಥಿಸಿ ತಮ್ಮ ತೋಳಿನಲ್ಲಿ ಬ್ಯಾಂಡ್ ತೊಡುವುದಾಗಿ ಹೇಳಿದರು.

ಹಾಗೆ ಮಾಡಿದರೆ ಅಂಥವರಿಗೆ ಆಟದ ಆರಂಭದ ಯೆ (ಹಳದಿ) ಕಾರ್ಡ್ ತೋರಿಸುವುದಾಗಿ ಫಿಫಾ ಹೇಳಿತು. ಹಾಗೇನಾದರೂ ಆಗಿದ್ದರೆ ಪ್ರತಿ ಎರಡು ಪಂದ್ಯದ ನಂತರ ಆಟಗಾರ ಮೈದಾನದಿಂದ ಹೊರಗೆ ಉಳಿಯಬೇಕಾಗುತ್ತಿತ್ತು. ಆದ್ದರಿಂದ ಆಟಗಾ ರರು ತೋಳ್ಪಟ್ಟಿ ಧರಿಸುವ ನಿರ್ಣಯವನ್ನು ಕೈ ಬಿಟ್ಟು, ಬೇರೆಯದೇ ರೀತಿಯಲ್ಲಿ ಪ್ರತಿಭಟಿಸುವ ನಿರ್ಣಯ ಕೈಗೊಂಡರು. (ಇಂಗ್ಲೆಂಡ್ ತಂಡ ಕ್ರೀಡಾಂಗಣದಲ್ಲಿ ಮಂಡಿಯೂರಿ ಕುಳಿತು ಪ್ರತಿಭಟಿಸಿದ್ದು ಒಂದು ಉದಾಹರಣೆ). ಒಂದು ಕಡೆ ಫುಟ್ಬಾಲ್ ಪ್ರಿಯರು ಈ ಬಾರಿಯ ವಿಶ್ವಕಪ್‌ನ ಮೊದಲ ಪಂದ್ಯದ ಮೊದಲ ಶೀಟಿಯ ಸದ್ದನ್ನು ಕೇಳುವುದಕ್ಕೆ ಕಾತರದಿಂದ ಕಾಯುತ್ತ ಸಂಭ್ರಮಾಚರಣೆಯಲ್ಲಿದ್ದರು.

ಇನ್ನೊಂದು ಕಡೆ ಬಿಬಿಸಿಯಂತಹ ದೃಶ್ಯ ಮಾಧ್ಯಮಗಳು ಕಾರ್ಮಿಕರ ಸಾವು, ಮಾನವ ಹಕ್ಕು ಇತ್ಯಾದಿಗಳನ್ನು ಚರ್ಚಿಸು ತ್ತಿದ್ದವು. ಇವೆಲ್ಲದರ ಜತೆಗೆ, ಅಲ್ ಖೈದಾದಂತಹ ಸಂಘಟನೆಗಳಿಂದ ಬೆದರಿಕೆಯನ್ನೂ ಕತಾರ್ ಎದುರಿಸಬೇಕಾಯಿತು.
ಕತಾರ್ ಮಾತ್ರ ಇದ್ಯಾವುದಕ್ಕೂ ಕಿವಿಗೊಡದೆ, ತಾನು ಮಾಡಬೇಕಾದ ಕೆಲಸವನ್ನಷ್ಟೇ ಲಕ್ಷದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿತ್ತು. ಒಂದು ಕ್ರೀಡಾಂಗಣಕ್ಕೆ ಒಂದು ಬಿಲಿಯನ್ ಡಾಲರ್‌ನಂತೆ ಏಳು ಹೊಸ ಕ್ರೀಡಾಂಗಣ ನಿರ್ಮಾಣ ಮಾಡಿತು.
ಅದರಲ್ಲಿ ಒಂದು ಕ್ರೀಡಾಂಗಣವನ್ನು ಹಡಗಿನಲ್ಲಿ ಸಾಮಾನು ಸಾಗಿಸಲು ಬಳಸುವ ಕಂಟೇನರ್ ಬಳಸಿ ಕಟ್ಟಿದ್ದರು.

974 ಕಂಟೇನರ್ ಬಳಸಿ ಕಟ್ಟಿದ್ದರಿಂದ ಆ ಕ್ರೀಡಾಂಗಣಕ್ಕೆ ಅದೇ ಹೆಸರಾಯಿತು. ವಿಶೇಷವೆಂದರೆ ಈ ಎಲ್ಲ ಕ್ರೀಡಾಂಗಣ ಗಳೂ ರಾಜಧಾನಿ ದೋಹಾದಿಂದ ಐವತ್ತು ಕಿಲೋಮೀಟರ್ ಸುತ್ತಮುತ್ತಲಿನಲ್ಲಿ ಕಟ್ಟಿದ್ದು ಮತ್ತು ಇದೇ ಮೊದಲ ಬಾರಿ ಕಾರ್ಬನ್ ಮುಕ್ತ ವಿಶ್ವಕಪ್ ಆಯೋಜಿಸಲು ಕತಾರ್ ಪಣತೊಟ್ಟಿತು. ಮೂವತ್ತಾರು ಬಿಲಿಯನ್ ಡಾಲರ್ ಖರ್ಚುಮಾಡಿ ಮೆಟ್ರೊ ನಿರ್ಮಿಸಿತು. ಹದಿನೈದು ಬಿಲಿಯನ್ ವೆಚ್ಚದಲ್ಲಿ ಜನರ ವಸತಿಗೆ ಬೇಕಾಗಿ ಹೊಟೇಲುಗಳು ತಲೆ ಎತ್ತಿ ನಿಂತವು.

ಅಂತಿಮ ಪಂದ್ಯ ನಡೆದ ಲುಸೈಲ್ ಎಂಬ ಮರುಭೂಮಿ ಪ್ರದೇಶದ ಸಣ್ಣ ಹಳ್ಳಿಯನ್ನು ನಲವತ್ತೈದು ಬಿಲಿಯನ್ ಮೊತ್ತದ
ಪಟ್ಟಣವನ್ನಾಗಿ ಪರಿವರ್ತಿಸಿತು ಕತಾರ್. ಶಕೀರಾ ಬಹಿಷ್ಕರಿಸಿದರೇನಂತೆ, ಇಂಗ್ಲೆಂಡಿನ ಖ್ಯಾತ ಫುಟ್ಬಾಲ್ ಆಟಗಾರ ಡೇವಿಡ್ ಬೆಖಾಮ್‌ನನ್ನು ಇದಕ್ಕೆ ರಾಯಭಾರಿಯನ್ನಾಗಿ ನೇಮಿಸಿಕೊಂಡಿತು. ಕತಾರ್ ಈ ವಿಶ್ವಕಪ್ ಪಂದ್ಯಾಟಕ್ಕೆಂದು ಖರ್ಚು
ಮಾಡಿದ ಮೊತ್ತ ಬರೊಬ್ಬರಿ ಇನ್ನೂರ ಇಪ್ಪತ್ತು ಬಿಲಿಯನ್ ಡಾಲರ್ ಅಥವಾ ಸುಮಾರು ಹದಿನೆಂಟು ಲಕ್ಷ ಕೋಟಿ ರುಪಾಯಿ. ಅಂದರೆ ಕರ್ನಾಟಕ ರಾಜ್ಯದ ಒಂಬತ್ತು ವರ್ಷದ ಬಜೆಟ್‌ಗೆ ಸಮ! ಕಳೆದ ಬಾರಿ ವಿಶಕಪ್‌ಗೆ ರಷ್ಯಾ ಖರ್ಚು ಮಾಡಿದ್ದು ಸುಮಾರು ಹನ್ನೆರಡು ಬಿಲಿಯನ್.

ಅದಕ್ಕೂ ಮೊದಲು ವಿಶ್ವಕಪ್ ಆಯೋಜಿಸಿದ ಬ್ರೆಝಿಲ್ ಮತ್ತು ದಕ್ಷಿಣ ಆಫ್ರಿಕಾ ಖರ್ಚು ಮಾಡಿದ್ದು ಕ್ರಮವಾಗಿ ಹದಿನೈದು ಮತ್ತು ನಾಲ್ಕು ಬಿಲಿಯನ್. ಒಟ್ಟೂ ಕಳೆದ ಎಂಟರಿಂದ ಹತ್ತು ವಿಶ್ವಕಪ್ ಆಯೋಜಿಸಿದ ದೇಶಗಳು ಒಟ್ಟೂ ಖರ್ಚು ಮಾಡಿದ್ದಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕತಾರ್. ಇಷ್ಟಕ್ಕೂ ಕತಾರ್ ಇದನ್ನು ಏಕೆ ಮಾಡಬೇಕಿತ್ತು? ಒಂದು ದೇಶಕ್ಕೆ ತನ್ನ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಸಿಗಲಿಕ್ಕಿಲ್ಲ.

ವಿಶ್ವಕಪ್ ಪಂದ್ಯಾಟವನ್ನು ಸುಮಾರು ಐದು ಬಿಲಿಯನ್ ಜನ ವೀಕ್ಷಿಸುತ್ತಾರೆ ಎಂದರೆ, ಒಂದೇ ಬಾರಿ ಅಷ್ಟೊಂದು ಜನರನ್ನು ತಲುಪಬಹುದಲ್ಲ. ಅದರೊಂದಿಗೆ, ಪ್ರವಾಸೋದ್ಯಮದಿಂದ ಬರುವ ಆದಾಯ, ಜಿಡಿಪಿಯಲ್ಲಿ ವೃದ್ಧಿ, ಪ್ರಸಿದ್ಧಿ ಎಲ್ಲವೂ ಒಂದೇ ಏಟಿಗೆ! ಹಣಕೊಟ್ಟು ಈ ಪಂದ್ಯಾಟದ ಆಯೋಜನೆಯನ್ನು ಕೊಂಡುಕೊಂಡರು ಎನ್ನುವುದಾದರೆ, ಅದಕ್ಕೂ ಒಂದು ತಾಕತ್ತು
ಬೇಕು ತಾನೆ? ರೇಸ್‌ನಲ್ಲಿದ್ದ ಅಮೆರಿಕ, ಆಸ್ಟ್ರೇಲಿಯಾದ ಬಳಿ ಏನು ಹಣದ ಕೊರತೆ ಇತ್ತೆ? ಇಷ್ಟಾಗಿಯೂ ಟ್ಬಾಲ್ ವಿಷಯದಲ್ಲಿ ಮಾನವ ಹಕ್ಕು ಉಲ್ಲಂಘನೆಯ ತುತ್ತೂರಿ ಊದುವ, ಕತಾರ್‌ನಲ್ಲಿ ನಡೆಯುವ ಫುಟ್ಬಾಲ್ ಪಂದ್ಯಾಟವನ್ನು ಬಹಿಷ್ಕರಿಸಬೇಕು ಎಂದು ಬೊಂಬಡಾ ಬಜಾಯಿಸುತ್ತಿರುವ ಪಾಶ್ಚಿಮಾತ್ಯ ದೇಶಗಳು, ಕತಾರ್‌ನಿಂದ ತೈಲ ಮತ್ತು ಅನಿಲ ಖರೀದಿಸುವ
ವಿಷಯದಲ್ಲಿ ಉಸಿರೆತ್ತದೆ ಗಪ್ಚುಪ್ ಆಗಿ ಕುಳಿತಿವೆ.

ರಷ್ಯಾ ಯುಕ್ರೇನ್ ಯುದ್ಧದಿಂದ ಕಂಗಾಲಾಗಿ ಕೈಕಾಲು ಬಡಿಯುತ್ತಿರುವ ಯುರೋಪ್ ಕತಾರ್ ಮೊರೆ ಹೋಗಿದೆ. ಕತಾರ್ ಪ್ರತಿ ವರ್ಷ ಎಪ್ಪತ್ತೇಳು ಮಿಲಿಯನ್ ಟನ್ ಅನಿಲ ಉತ್ಪಾದಿಸುತ್ತಿದ್ದು, ಮುಂದಿನ ಐದು ವರ್ಷದಲ್ಲಿ ಅದು ದುಪ್ಪಟ್ಟಾಗುವ
ಸಂಭವವಿದೆ. ಅದಕ್ಕೆ ಕಾರಣ ಪಶ್ಚಿಮದ ದೇಶಗಳಿಂದ ಬರುತ್ತಿರುವ ಬೇಡಿಕೆ. ಇದು ಪಶ್ಚಿಮದ ದ್ವಂದ್ವ ನೀತಿಯಲ್ಲದೆ ಇನ್ನೇನು? ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಕಾಣುವುದಿಲ್ಲ, ಅಲ್ಲವೇ? ನನ್ನ ಅಭಿಪ್ರಾಯದಲ್ಲಿ, ವಿಶ್ವಕಪ್ ಯಾರ
ಪಾಲಾದರೂ ಗೆದ್ದಿದ್ದು ಕತಾರ್!

Read E-Paper click here