ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ನಾನು ಬೆಂಗಳೂರಿನಿಂದ ಫ್ರಾಂಕ್ ಫರ್ಟ್‌ಗೆ ಹೋಗುತ್ತಿದ್ದಾಗ ವಿಮಾನದಲ್ಲಿ ಪಕ್ಕದಲ್ಲಿ ಕುಳಿತ, ಹೆಚ್ಚು – ಕಮ್ಮಿ ನನ್ನ ವಯಸ್ಸಿ ನವರೊಬ್ಬರ ಪರಿಚಯವಾಯಿತು. ನನ್ನ ಹೆಸರನ್ನು ಕೇಳಿದವರೇ ‘ನೀವು ಮಂಗಳೂರಿನವರಾ?’ ಎಂದು ಕೇಳಿದರು. ಈ ಪ್ರಶ್ನೆ ಯನ್ನು ಅವರೊಬ್ಬರೇ ಅಲ್ಲ, ಅನೇಕರು ನನ್ನನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ನಾನು ಹೌದು ಎಂದೇ ಉತ್ತರಿಸುತ್ತೇನೆ. ಕಾರಣ ನಾನೂ ಕರಾವಳಿಯವನೇ.
ಕರಾವಳಿಯವರನ್ನು ಮಂಗಳೂರಿನವರು ಎಂದು ಹಳೆ ಮೈಸೂರಿಗರು ಹೇಳುತ್ತಾರೆ. ಅವರ ಪ್ರಶ್ನೆಗೆ ‘ಹೌದು’ಎನ್ನುತ್ತಲೇ ಹಿಂದೆ – ಮುಂದೆ ನೋಡದೇ ತುಳುವಿನಲ್ಲಿ ಮಾತುಕತೆ ಆರಂಭಿಸಿದರು. By default ನನಗೆ ತುಳು ಬಂದೇ ಬರುತ್ತದೆಂದು ಭಾವಿಸಿದ ನನ್ನ ಸಹ ಪ್ರಯಾಣಿಕರು, ಮಾತಿನಲ್ಲಿ ನನಗಿಂತ ಮುಂದೆ ಸಾಗಿ ಬಡಬಡನೆ ತಮ್ಮ ಆನಂದ ವ್ಯಕ್ತಪಡಿಸಿದರು. ಅವರು ತುಳುನಲ್ಲಿ ಹೇಳಿದ್ದನ್ನು ಅರ್ಥೈಸಿಕೊಳ್ಳುವುದಾದರೆ,-‘ತುಳು ಮಾತಾಡುವವರು ಸಿಕ್ಕಿದರಲ್ಲಾ ನನ್ನ ಅದೃಷ್ಟ, ಖುಷಿಯಿಂದ ಮಾತಾಡುತ್ತಾ ಹೋಗಬಹುದು.
ಇಲ್ಲದಿದ್ದರೆ ವಿಮಾನ ಪ್ರಯಾಣ ಬೋರಾಗುತ್ತಿತ್ತು.’ ನನಗೆ ತುಳು ಬರುವುದಿಲ್ಲ ಎಂದು ಹೇಗೆ ಹೇಳುವುದು ಎಂಬ ಕಸಿವಿಸಿ ಕಾಡಲಾರಂಭಿಸಿತು. ನನ್ನಿಂದ ಪ್ರತಿಕ್ರಿಯೆಯನ್ನೇ ನಿರೀಕ್ಷಿಸದೇ ಅವರು ತುಳುನಲ್ಲಿ ಖುಷಿಖುಷಿಯಿಂದ ಮಾತಾಡುತ್ತಿದ್ದರು. ನಾನು ಅವರು ಹೇಳಿದ್ದಕ್ಕೆ ನಗುತ್ತಲೇ ತಲೆಹಾಕುತ್ತಿದ್ದೆ. ಅಷ್ಟೊತ್ತಿಗೆ ನಾಲ್ಕೈದು ನಿಮಿಷ ಆಗಿರಬಹುದು, ನನ್ನಿಂದ ತುಳುನಲ್ಲಿ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಅವರನ್ನು ಬೇಸ್ತು ಕೆಡವಬಾರದೆಂದು ನಾನು ‘ಸಾರ್, ನಾನು ಕರಾವಳಿಯವ ಎಂಬ ಕಾರಣಕ್ಕೆ ಮಂಗಳೂರಿನವ ಎಂದೆ. ನನ್ನ ಊರು ಕುಮಟಾ. ಕಳೆದ ಮೂವತ್ತು ವರ್ಷದಿಂದ ಬೆಂಗಳೂರಿನಲ್ಲಿ ವಾಸ. ಕ್ಷಮಿಸಿ, ನನಗೆ ತುಳು ಬರೊಲ್ಲ’ ಎಂದೆ.
ಅವರ ಮುಖ ನೋಡಬೇಕಿತ್ತು. ನನ್ನನ್ನು ಒಂಥರಾ ಕ್ಯಾಕರಿಸಿ ನೋಡಿದರು. ಅವರಿಗೆ ಅತೀವ ನಿರಾಸೆಯಾದುದು ಅವರ
ನೋಟದಲ್ಲೇ ಸ್ಪಷ್ಟವಾಯಿತು. ತುಳು ಬಾರದ ಈ ಮನುಷ್ಯನ ಜತೆ ಒಂಬತ್ತು ತಾಸು ಅಕ್ಕ ಪಕ್ಕದಲ್ಲೇ ಕುಳಿತು ಪ್ರಯಾಣ
ಮಾಡುವುದು ಹೇಗೆ, ನನ್ನ ಕರ್ಮ ಎಂದು ಅವರಿಗೆ ಅನಿಸಿರಲಿಕ್ಕೆ ಸಾಕು.
ಮುಂದೇನಾಯ್ತು ಕೇಳಿ. ಮುಂದಿನ ಒಂಬತ್ತು ತಾಸು ನಮ್ಮ ಮಧ್ಯೆ ಒಂದೆರಡು ಮಾತುಗಳನ್ನು ಬಿಟ್ಟರೆ ಪೂರಾ ಮೌನ.
ಹಾಗಂತ ಅವರಿಗೆ ಕನ್ನಡ ಬರುತ್ತಿತ್ತು ಆದರೂ ನನ್ನ ಜತೆಗೆ ಮಾತಾಡಬೇಕೆಂದು ಅವರಿಗೆ ಅನಿಸಲೇ ಇಲ್ಲ. ನಾನು ಅವರಿಗೆ ಪ್ರಯೋಜನಕ್ಕೆ ಬಾರದ, ಒಬ್ಬ ಶುಷ್ಕ ವ್ಯಕ್ತಿ ಎಂದು ಅನಿಸಿರಬಹುದು. ತಮ್ಮ ಪಾಡಿಗೆ ನಿದ್ದೆ ಹೋಗಿಬಿಟ್ಟರು.
ಕೆಲವು ದಿನಗಳ ಹಿಂದೆ, ನಾನು ಅಬುಧಾಬಿಗೆ ಹೋಗಿದ್ದೆ. ಖ್ಯಾತ ಉದ್ಯಮಿ ಹಾಗೂ ಹೆಮ್ಮೆಯ ಕನ್ನಡಿಗರಾದ ಡಾ.ಬಿ.ಆರ್.ಶೆಟ್ಟಿ ಅವರ ಆಫೀಸಿಗೆ ಹೋಗಿದ್ದೆ. ಶೆಟ್ಟಿಯವರು ಆತ್ಮೀಯವಾಗಿ ಆಲಂಗಿಸಿ ಬರಮಾಡಿಕೊಂಡು, ತುಳುನಲ್ಲಿಯೇ ಮಾತುಕತೆ
ಆರಂಭಿಸಿದರು. ನನ್ನ ಮುಖಭಾವ ನೋಡಿ ಅವರಿಗೇ ಅನ್ನಿಸಿರಬೇಕು, ‘ಭಟ್ರೇ ನಿಮಗೆ ತುಳು ಬರುವುದಾ?’ ಎಂದು ಕೇಳಿದರು. ನನ್ನ ಅಡ್ಡ ಹೆಸರು ಕೇಳಿ ಬಹಳ ಜನ ಈ ಪ್ರಶ್ನೆ ಕೇಳಿದ್ದಾರೆ. ನಾನು ತಡವರಿಸುತ್ತಾ ಅಥವಾ ಒಲ್ಲದ ಮನಸ್ಸಿನಿಂದ ‘ಇಲ್ಲ’ ಎಂದೆ. ಡಾ.ಶೆಟ್ಟಿಯವರಿಗೆ ಒಂದು ಸಲ ಯಾರೋ ಕೈ ಜಗ್ಗಿ ಎಳೆದಂತಾಗಿರಬಹುದು.
ಅದು ಅವರ ಪ್ರತಿಕ್ರಿಯೆಯಿಂದ, ಮುಖಭಾವದಿಂದ ಗೊತ್ತಾಯಿತು. ಒಂದು ವೇಳೆ ನನಗೆ ತುಳು ಬಂದಿದ್ದರೆ, ಕತೆಯೇ ಬೇರೆಯಿತ್ತು. ಅಲ್ಲಿಂದ ಎದ್ದು ಬರುವಾಗ ಡಾ.ಶೆಟ್ಟಿಯವರು ನನ್ನನ್ನು ಆಲಂಗಿಸದೇ ಕಳಿಸಿಕೊಡುತ್ತಿರಲಿಲ್ಲ. ಅದೇ ದಿನ ಸಾಯಂಕಾಲ ಒಂದು ಔತಣಕೂಟ. ಅಬುಧಾಬಿಯಲ್ಲಿರುವ ಆಮಂತ್ರಿತ ಕನ್ನಡ ಉದ್ಯಮಿಗಳ ಸಭೆ. ಅಲ್ಲಿಗೆ ಆಗಮಿಸಿದವರಲ್ಲಿ ಬಹುತೇಕ ಮಂದಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು. ಸುಮಾರು ೭೫ ಮಂದಿ ಆಗಮಿಸಿದ್ದರು.
ಪ್ರತಿಯೊಬ್ಬರೂ ನನ್ನನ್ನು ಮಾತಾಡಿಸಿದ್ದು ತುಳುನಲ್ಲಿ. ಅವರೆಲ್ಲರೂ ಅಪ್ಪಟ ಕನ್ನಡಿಗರೇ. ಆದರೆ ಮಾತಾಡುತ್ತಿದ್ದುದು ಮಾತ್ರ ತುಳುನಲ್ಲಿ. ಅವರಲ್ಲಿ ಹಿಂದುಗಳು, ಕ್ರಿಶ್ಚಿಯನ್‌ರು, ಮುಸ್ಲಿಮರಿದ್ದರು. ಆದರೆ ಮಾತಾಡುತ್ತಿದ್ದುದು ಮಾತ್ರ ತುಳುನಲ್ಲಿ. ಜಗತ್ತಿ ನಲ್ಲಿ ಎಷ್ಟೆಲ್ಲಾ ಭಾಷೆಗಳಿವೆ. ಅವುಗಳನ್ನು ಕಲಿಯದಿದ್ದುದು ನನಗೆ ಬೇಸರವಾಗಲಿ, ವಿಷಾದವಾಗಲಿ ಆಗಿಲ್ಲ. ಆದರೆ ತುಳು ಕಲಿಯದೇ ಇದ್ದುದು ದೊಡ್ಡ ಕೊರತೆ ಎಂದು ತುಳು ಭಾಷಿಕರ ಮಧ್ಯೆ ಒಡನಾಡುವಾಗ ಅನ್ನಿಸಿದ್ದಿದೆ.
ಈ ತುಳುನಲ್ಲಿ ಅದೆಂಥ ಮೋಹ, ಮೋಡಿ, ಚುಂಬಕ ಶಕ್ತಿಯಿದೆಯೋ ಕಾಣೆ. ತುಳು ಮಾತಾಡಿದರೆ ಸಾಕು ಪರಿಚಯ, ಗೆಳೆತನ, ಸಂಬಂಧಕ್ಕೆ ಪಾಸ್‌ಪೋರ್ಟ್ ಮೇಲೆ ವೀಸಾ ಅಂಟಿಸಿದಂತೆ. ಎಲ್ಲರಿಗೂ ಭಾಷೆ ಕಿವಿಯಲ್ಲಿ ಕೇಳಿಸಿದರೆ, ತುಳು ಮಾತಾಡುವವರಿಗೆ ಹೃದಯದಲ್ಲಿ ಕೇಳಿಸುತ್ತದೆ. ನನಗೆ ಎಷ್ಟೋ ಸಲ ಅನಿಸಿದೆ, ತುಳು ಸಂವಹನದ ಭಾಷೆ ಅಲ್ಲವೇ ಅಲ್ಲ, ಅದು ಹೃದಯದ ಭಾಷೆ, ರಕ್ತದ ಭಾಷೆ, ಆತ್ಮ-ಆತ್ಮಗಳ ಭಾಷೆ. ವೈಫೈಗೆ ತುಳು ಭಾಷೆ ಬಂದರೆ, ಪಾಸ್‌ವರ್ಡ್‌ನ್ನು ಸಹ ಕೇಳದೇ ಡೈರೆಕ್ಟ್ ಕನೆಕ್ಟ್ ಮಾಡಿ ಬಿಡುತ್ತದೆ. ಯಾವುದೋ ಪಾರ್ಟಿಯಲ್ಲಿ ಪ್ರಧಾನಿ ಜತೆ ಒಬ್ಬ ಮಾತಾಡುತ್ತಿದ್ದಾನೆ ಎಂದು ಭಾವಿಸಿ, ಪ್ರಧಾನಿ ಪರಿಚಯವಿರುವ ಒಬ್ಬ ವ್ಯಕ್ತಿ ಅವರಿಬ್ಬರ ಹತ್ತಿರ ಹೋದಾಗ, ಪ್ರಧಾನಿ ಯವರು ತಮ್ಮ ಜತೆಗಿರುವ ಸ್ನೇಹಿತನನ್ನು ‘ಶೆಟ್ರೇ, ಇವರು ಗೊತ್ತಾ? ಇವರು ಕೂಡ ಶೆಟ್ರು, ದಕ್ಷಿಣ ಕನ್ನಡದವರು’ ಎಂದು ಪರಿಚಯ ಮಾಡಿಕೊಟ್ಟರೆನ್ನಿ.
ಅನುಮಾನವೇ ಬೇಡ, ಅವರಿಬ್ಬರೂ ಮಾತಿಗೆ ಶುರುವಿಟ್ಟುಕೊಳ್ಳುವುದೇ ತುಳುವಿನಲ್ಲಿ. ಅಷ್ಟೇ ಆಗಿದ್ದಿದ್ದರೆ ಪರವಾಗಿರಲಿಲ್ಲ, ಅವರಿಬ್ಬರಿಗೂ ಪ್ರಧಾನಿಯವರೊಬ್ಬರನ್ನೇ ಅವರ ಪಾಡಿಗೆ ಬಿಟ್ಟು, ತುಳು ಸಂಭಾಷಣೆಯಲ್ಲಿ ಕಳೆದುಹೋಗದಿದ್ದರೆ ಕೇಳಿ. ಯಾಕಾದರೂ ಪರಿಚಯಿಸಿದೆನೋ ಎಂದು ಪ್ರಧಾನಿಗೆ ಅನಿಸದಿದ್ದರೆ ಕೇಳಿ.
ಅದು ತುಳು! ಅದು ಆ ಭಾಷೆಯ ಮಹಿಮೆ, ಮಹಾತ್ಮೆ! ತುಳು ಭಾಷೆಯಲ್ಲಿ, ಅದೊಂದು ಧರ್ಮ ಎಂದು ಅನೇಕ ಸಲ
ಅನಿಸಿದ್ದಿದೆ. ಆದರೆ ಎಲ್ಲ ಧರ್ಮಗಳಲ್ಲೂ ಧರ್ಮಕಂಟಕರಿದ್ದಾರೆ, ಅಧರ್ಮಿಯರಿದ್ದಾರೆ. ಇದನ್ನು ನೋಡಿದರೆ ತುಳು ಒಂದು
ಧರ್ಮ ಇದ್ದಿರಲಿಕ್ಕಿಲ್ಲ ಎನಿಸುತ್ತದೆ. ಕಾರಣ ತುಳುನಲ್ಲಿ ಅದಕ್ಕೆ ಕಂಟಕರಿಲ್ಲ, ಮನೆಹಾಳರಿಲ್ಲ, ಕಲಬೆರಕೆಗಳಿಲ್ಲ. ತುಳು ಅಂದ್ರೆ
ಸಾಕು, ಅದು ಧರ್ಮ, ದೇಶ, ಕಾಲ, ಅವಕಾಶಗಳನ್ನೆಲ್ಲ ಮೀರಿದ ಅಸ್ಮಿತೆ ಹಾಗೂ ಅಸ್ತಿತ್ವದ ದ್ಯೋತಕ.
ಬಸವಣ್ಣನವರಿಗೇನಾದರೂ ತುಳು ಬರುತ್ತಿದ್ದರೆ, ‘ಇವನಾರವ, ಇವನಾರವ, ಇವನಾರವ ಎಂದೆಣಿಸದಿರಯ್ಯ, ತುಳು ಭಾಷೆ ಬರ್ಪೊಡೆ ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯಾ’ ಎಂದು ಬರೆಯುತ್ತಿದ್ದರು!
ಪತ್ರಕರ್ತರಿಗೆ ಹೇಗೆ ಗೊತ್ತಾಗುತ್ತದೆ?
ಎಲ್ಲಾ ಘಟನೆಗಳೂ ಪತ್ರಕರ್ತನ ಮುಂದೆಯೇ ನಡೆಯುವುದಿಲ್ಲ ಅಥವಾ ಅವು ನಡೆಯುವಾಗ ಆತ ಖುದ್ದು ಹಾಜರಿರುವು ದಿಲ್ಲ. ನಾಳೆ ದೇವೇಗೌಡ ಮತ್ತು ಅಮಿತ್ ಶಾ ನಡುವೆ ದೂರವಾಣಿ ಸಂಭಾಷಣೆ ನಡೆದರೆ, ಅವರಿಬ್ಬರಲ್ಲದೇ ಬೇರೆಯವರಿಗೆ ಗೊತ್ತಾಗಲು ಹೇಗೆ ಸಾಧ್ಯ? ಆದರೆ ಅದು ಪತ್ರಕರ್ತರಿಗೆ ಗೊತ್ತಾಗುತ್ತದೆ. ಪತ್ರಿಕೆಗಳಲ್ಲಿ ವರದಿಯಾಗುತ್ತದೆ.
ಅವರಿಬ್ಬರೂ ಮಾತಾಡುವಾಗ ನೀವು ಅಲ್ಲಿದ್ರಾ, ಅವರ ಸಂಭಾಷಣೆಗಳನ್ನು ನೀವು ಕೇಳಿದಿರಾ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ ಉತ್ತರ ಇಲ್ಲ. ಆದರೂ ನೀವು ಖುದ್ದು ಕೇಳಿದವರಂತೆ ಬರೆದಿದ್ದು ಹೇಗೆ? ಅದೇ ಪತ್ರಕರ್ತನ ಜಾಣ್ಮೆ. ಬೇರೆಯವರಿಗೆ,
ಜನಸಾಮಾನ್ಯನಿಗೆ ಗೊತ್ತಾಗದ್ದು ಪತ್ರಕರ್ತನಿಗೆ ಗೊತ್ತಾಗುತ್ತದೆ.
ದೇವೇಗೌಡರು ಮತ್ತು ಅಮಿತ್ ಶಾ ಪೈಕಿ ಯಾರಾದರೂ ಒಬ್ಬರು ಪತ್ರಕರ್ತನಿಗೆ ಹೇಳಬಹುದು. ಪತ್ರಕರ್ತರಿಗೆ ತಿಳಿಯಲಿ ಎಂಬ
ಇಂಗಿತ ಅವರಿಬ್ಬರಲ್ಲಿ ಯಾರಿಗಾದರೂ ಇರಬಹುದು. ತಾವಿಬ್ಬರೂ ಮಾತಾಡಿಕೊಂಡಿದ್ದೇವೆ ಎಂಬ ಸುಳಿವನ್ನು ಇಬ್ಬರೂ
ಅಥವಾ ಇಬ್ಬರ ಪೈಕಿ ಒಬ್ಬರು ನೀಡಬಹುದು. ಮೊಬೈಲ್ ಕರೆ ಮಾಡಿಕೊಟ್ಟ ಇಬ್ಬರು ನಾಯಕರ ಸಹಾಯಕರು ತಿಳಿಸಬಹುದು.
ತಾವಿಬ್ಬರೂ ಮಾತಾಡಿಕೊಂಡೆವು ಎಂದು ಆ ನಾಯಕರು ತಮ್ಮ ಆಪ್ತರ ಮುಂದೆ ಹೇಳಿದ್ದನ್ನು ಅವರು (ಆಪ್ತರು) ಪತ್ರಕರ್ತರಿಗೆ
ಹೇಳಬಹುದು. ಪತ್ರಕರ್ತರಿಗೆ ಹೇಗಾದರೂ ಗೊತ್ತಾಗಲಿ ಎಂಬುದು ಆ ಇಬ್ಬರು ನಾಯಕರ ಉದ್ದೇಶವೂ ಆಗಿರಬಹುದು.
ಆದರೆ ಅವರಿಬ್ಬರೂ ಹತ್ತು ನಿಮಿಷ ಮಾತಾಡಿಕೊಂಡರೆ, ಏನು ಮಾತಾಡಿರಬಹುದು ಎಂಬುದನ್ನು ಊಹಿಸದಷ್ಟು ಪತ್ರಕರ್ತರು
ದಡ್ಡರಲ್ಲ, ಇದೇ ಸುದ್ದಿ. ಈ ವರದಿಗಾರಿಕೆಗೆ interpretative reporting ಅಂತಾರೆ. ಅಂದರೆ ಒಂದು ಘಟನೆಯ ಸುಳಿವು ಸಿಕ್ಕರೆ ಅದರ ಜಾಡನ್ನು ಹಿಡಿದುಕೊಂಡು ಹೋಗಿ ತಾರ್ಕಿಕ ಅಂತ್ಯ ಕಾಣಿಸಿ, ನಿಖರ ಅಥವಾ ಸತ್ಯಕ್ಕೆ ಹತ್ತಿರವಾದ ವರದಿ ಬರೆಯುವುದು. ಇದಕ್ಕೆ ಬಹಳ ಅನುಭವ, ಕಾಮನ್ ಸೆ, ಚಾಕಚಕ್ಯತೆ ಮತ್ತು ಜಾಣ್ಮೆ ಬೇಕು. ಇದು ಎಲ್ಲರಿಗೂ ಒಲಿಯುವಂಥದ್ದಲ್ಲ.
ಒಮ್ಮೆ ಇರಾನಿನ ರಾಜ ಮೊಹಮ್ಮದ್ ರೆಜ ಪಹ್ಲಾವಿ ಆಸ್ಥಾನದಲ್ಲಿ ಒಬ್ಬ ಮಂತ್ರಿ ಇದ್ದ. ಪಹ್ಲಾವಿಯನ್ನು ಭೇಟಿ ಮಾಡಲು ಪತ್ರಕರ್ತ ಅರಮನೆಗೆ ಹೋದ. ರಾಜನಿಗಾಗಿ ಕಾಯುತ್ತಿದ್ದ. ಈ ಮಧ್ಯೆ, ರಾಜ ತುರ್ತಾಗಿ ಮಂತ್ರಿಯೊಂದಿಗೆ ಮಾತಾಡಲು ಕರೆ ಯಿಸಿದ. ಆ ಸಂದರ್ಭದಲ್ಲಿ ಅವರಿಬ್ಬರ ಸಂಬಂಧ ಕಿತ್ತು ಹೋಗಿತ್ತು. ಮಂತ್ರಿ ರಾಜನ ಕೋಣೆಯೊಳಗೆ ಹೋದ ಇಪ್ಪತ್ತು ನಿಮಿಷಗಳಲ್ಲಿ ಹೊರ ಬಂದ. ಇವನ್ನೆಲ್ಲ ಪತ್ರಕರ್ತ ಗಮನಿಸುತ್ತಿದ್ದ. ಆತ ಅಲ್ಲಿಂದ ಹಠಾತ್ತನೆ ಪತ್ರಿಕಾ ಕಚೇರಿಗೆ ಹೋಗಿ, ರಾಜ ಪಹ್ಲಾವಿ ಮಂತ್ರಿಯನ್ನು ಅವನ ಸ್ಥಾನದಿಂದ ಕಿತ್ತು ಹಾಕಿರುವುದಾಗಿ ವರದಿ ಬರೆದ.
ಅದು ಮರುದಿನದ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಧಾನ ಸುದ್ದಿಯಾಗಿ ಪ್ರಕಟವಾಯಿತು. ಅದು ನಿಜವಾಗಿತ್ತು. ಪಹ್ಲಾವಿ ತನ್ನ ಮಂತ್ರಿಯನ್ನು ಕಿತ್ತು ಹಾಕಿದ್ದ! ಈ ಮಹತ್ವದ ಸಂಗತಿಯನ್ನು ಪತ್ರಕರ್ತನಿಗೆ ಹೇಳಿದ್ದು ಯಾರು? ಅವನೇನು ರಾಜ ಮತ್ತು ಮಂತ್ರಿಯ ಸಂಭಾಷಣೆ ಕೇಳಿಸಿಕೊಂಡನಾ ಅಥವಾ ದೂರದಿಂದ ನೋಡಿದನಾ? ಉಹುಂ, ಇಲ್ಲವೇ ಇಲ್ಲ. ಅಸಲಿಗೆ ಅವನಿಗೆ ಯಾರೂ ಹೇಳಿರಲಿಲ್ಲ. ಆತ ತನ್ನ interpretative ಟೆಕ್ನಿಕ್ ಬಳಸಿದ್ದ. ಅದು ಬರೋಬ್ಬರಿ ಕೆಲಸ ಮಾಡಿತ್ತು.
ಇಷ್ಟೇ, ರಾಜನ ಬುಲಾವ್ ಮೇರೆಗೆ ಮಂತ್ರಿ ಅರಮನೆಗೆ ಬರುತ್ತಿದ್ದಂತೆ, ಪಹ್ಲಾವಿಯ ಅತ್ಯಂತ ಪ್ರೀತಿಪಾತ್ರ ನಾಯಿ ಮಂತ್ರಿಯ ಹಿಂದೆ-ಮುಂದೆ ಓಡಾಡುತ್ತಿತ್ತು. ಆ ನಾಯಿಗೆ ತನ್ನ ಒಡೆಯ ಅರ್ಥಾತ್ ರಾಜ, ಮಂತ್ರಿಯನ್ನು ಎಷು ಇಷ್ಟಪಡುತ್ತಿದ್ದ ಎಂಬುದು ಗೊತ್ತಿತ್ತು. ಹೀಗಾಗಿ ಆತ ಬರುತ್ತಿದ್ದಂತೆ ಬಾಲ ಅಡಿಸುತ್ತ ಅವನ ಸುತ್ತ ಮುತ್ತ ಸುಳಿದಾಡುತ್ತಿತ್ತು. ಮಂತ್ರಿ ಅರಮನೆಯಿಂದ ಹೋಗುವ ತನಕವೂ ಅವನನ್ನು ಬೀಳ್ಕೊಟ್ಟು ಬರುತ್ತಿತ್ತು. ಅಂದು ಮಂತ್ರಿ ರಾಜನ ಕೋಣೆಯೊಳಗೆ ಹೋದಾಗ ನಾಯಿಯೂ ಹೋಯಿತು. ಇದನ್ನು ಪತ್ರಕರ್ತ ಕುಳಿತಲ್ಲಿಂದಲೇ ಗಮನಿಸುತ್ತಿದ್ದ.
ರಾಜನ ಕೋಣೆಯಿಂದ ಮಂತ್ರಿ ಅವಸರವಸರವಾಗಿ ಹೊರಬಂದ. ಆದರೆ ನಾಯಿ ಹತ್ತು ಸೆಕೆಂಡ್ ನಂತರ ಹೊರಬಂತು. ಯಾವತ್ತೂ ಮಂತ್ರಿಯನ್ನು ಅರಮನೆಯ ಮೆಟ್ಟಿಲ ತನಕ ಹೋಗಿ ಬೀಳ್ಕೊಟ್ಟು ಬರುತ್ತಿತ್ತ, ಅಂದು ಅವನ ಹಿಂದೆ ಹೋಗಲೇ ಇಲ್ಲ. ಮಂತ್ರಿಯ ಕಾಲಿಗೆ ಸುತ್ತಿಕೊಳ್ಳುತ್ತಿದ್ದ ನಾಯಿ ಅವನನ್ನು ಮೂಸಲೇ ಇಲ್ಲ. ಪತ್ರಕರ್ತನಿಗೆ ಗೊತ್ತಾಗಿ ಹೋಯಿತು. ಅವರಿಬ್ಬರ ಸಂಬಂಧ ಹಳಸಿರುವುದು ಗೊತ್ತಿದ್ದ ಪತ್ರಕರ್ತನಿಗೆ ಮುಂದೇನಾಯಿತು ಎಂಬುದನ್ನು ಊಹಿಸುವುದು ಕಷ್ಟವೇನೂ ಆಗಿರಲಿಲ್ಲ . ಆತ ಕತೆ ಹೆಣೆದೇ ಬಿಟ್ಟ. ಅದು ಖುದ್ದು ತಾನೇ ನೋಡಿದಂತಿತ್ತು.
ಡುಮಾಸ್ ಎಂಬ ದೈತ್ಯ ಬರಹಗಾರ ನೀವು ಅಲೆಕ್ಸಾಂಡರ್ ಡುಮಾಸ್ ಹೆಸರನ್ನು ಕೇಳಿರಬಹುದು. ಹದಿನೆಂಟನೆಯ ಶತಮಾನದ ಫ್ರಾನ್ಸಿನ ಮಹತ್ವದ ಕಾದಂಬರಿಕಾರ, ಚಿಂತಕ ಮತ್ತು ನಾಟಕಕಾರ. ಈತ ಸುಮಾರು ಇಪ್ಪತ್ತು ಕಾದಂಬರಿಗಳನ್ನು ಸೇರಿದಂತೆ ಐವತ್ತಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿzನೆ. ಎಲ್ಲ ಕೃತಿಗಳೂ ಒಂದಿಂದು ಕಾರಣದಿಂದ ಮಹತ್ವದ್ದು ಎಂದು ಕರೆಯಿಸಿ ಕೊಂಡಿವೆ. ಈತನ ಎ ಕಾದಂಬರಿಗಳೇ ವಿಶ್ವದ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಕೆಲವು ಕೃತಿಗಳು ಸಿನಿಮಾ ಆಗಿವೆ. ಈತನ ಹೆಚ್ಚಿನ ಕಾದಂಬರಿಗಳು ಧಾರಾವಾಹಿಯಾಗಿ ಬರೆಯಲ್ಪಟ್ಟಂಥವು. ಹೀಗಾಗಿ ಎ ಕಾದಂಬರಿಗಳು ಗಾತ್ರದಲ್ಲಿ ಐನೂರು ಪುಟಗಳಿಗಿಂತ ಹೆಚ್ಚಿವೆ. ಆಗಿನ ಕಾಲದಲ್ಲಿ ಬರಹಗಾರರಿಗೂ ಸಮಯವಿತ್ತು, ಓದುಗರಿಗೂ. ಡುಮಾಸ್ ಕೃತಿಗಳ ವೈಶಿಷ್ಟ್ಯವೇನೆಂದರೆ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುವುದು.
ಸಣ್ಣ ಸಣ್ಣ ಸಂಗತಿಗಳನ್ನೂ ವಿವರಿಸುವುದು. ‘ಅಲೆಕ್ಸಾಂಡರ್ ಡುಮಾಸ್ ಕಾದಂಬರಿಯಲ್ಲಿನ ಎಲೆಗಳ ಹಾಗೆ.. ಮರಗಳ ಹಾಗೆ..’ ಎಂಬ ಪ್ರತಿಮೆ ಸಾಹಿತ್ಯಲೋಕದಲ್ಲಿದೆ. ಕಾರಣ ಆತ ಪರ್ವತವನ್ನು ವರ್ಣಿಸುವಾಗ, ಅದೊಂದನ್ನೇ ವರ್ಣಿಸುವುದಿಲ್ಲ. ಮರಗಳ ಹಿಂದಿನ ಪರ್ವತದ ಬಗ್ಗೆ ಬರೆಯುವಾಗ ಮರಗಳ ವಿವರಗಳನ್ನೂ ಕೊಡುತ್ತಿದ್ದ. ಅವನ ಕಾದಂಬರಿಗಳನ್ನು ಓದುವುದೆಂದರೆ, ಸೊಗಸಾದ ದೃಶ್ಯಾವಳಿ ನೋಡಿದ ಅನುಭವವಾಗುತ್ತಿತ್ತು. ಒಂದು ಕಾದಂಬರಿ ಬರೆಯಲಾರಂಭಿಸಿದರೆ ಡುಮಾಸ್ ಧ್ಯಾನಸ್ಥನಾಗಿ ಬಿಡುತ್ತಿದ್ದ. ದಿನಕ್ಕೆ ಹದಿನಾರು ಗಂಟೆ ಬರೆಯುತ್ತಿದ್ದ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ತರಗುಪೇಟೆಯ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ನನಗೆ ಡುಮಾಸ್ ಬರೆದ The Count of Monte Cristo ಎಂಬ ಕಾದಂಬರಿ ಸಿಕ್ಕಿತು. ಇದನ್ನು ಡುಮಾಸ್ ಫ್ರೆಂಚ್ ಭಾಷೆಯಲ್ಲಿ ಸುಮಾರು ೧೭೫ ವರ್ಷಗಳ ಹಿಂದೆ (೧೮೪೪ರಲ್ಲಿ) ಬರೆದಿದ್ದ. ಇದು ಡುಮಾಸ್ ಬರೆದ ಎ ಕಾದಂಬರಿಗಳಲ್ಲಿ ಎದ್ದು ನಿಲ್ಲುವ ಕೃತಿ. ಈ ಕಾದಂಬರಿಯನ್ನು ಎತ್ತಲು ತುಸು ಕಸುವು ಬೇಕು. ಯಾಕೆಂದರೆ ಇದು ಸುಮಾರು ಒಂದೂವರೆ ಸಾವಿರ ಪುಟಗಳುಳ್ಳ ಕಾದಂಬರಿ. ಸೋಜಿಗದ ಸಂಗತಿಯೆಂದರೆ, ಆ ಕಾದಂಬರಿ ಬರೆದ ವರ್ಷವೇ ಡುಮಾಸ್ ಮತ್ತೊಂದು ಕಾದಂಬರಿ ಬರೆದ. ಅದರ ಹೆಸರು The Three Musketeers. ಅದೂ ಸಹ ಗಮನ ಸೆಳೆದ ಕೃತಿಯೇ.
ಒಂದೇ ವರ್ಷ ಎರಡೂವರೆ ಸಾವಿರ ಪುಟಗಳ ಕಾದಂಬರಿಗಳನ್ನು ಬರೆದ ಅಗ್ಗಳಿಕೆ ಡುಮಾಸ್‌ದು. ಆತ ಬರೆದ ಎಲ್ಲ ಕಾದಂಬರಿ ಮತ್ತು ಇನ್ನಿತರ ಪ್ರಕಾರಗಳ ಪುಸ್ತಕಗಳನ್ನು ಸೇರಿಸಿದರೆ ಅವು ಒಂದು ಲಕ್ಷಕ್ಕಿಂತ ಅಧಿಕ ಪುಟಗಳಾಗಬಹುದು. ಪ್ರತಿ ದಿನ ಆತ ಕನಿಷ್ಠ ೩೦-೪೦ ಪುಟಗಳನ್ನಾದರೂ ಬರೆಯುತ್ತಿದ್ದ. ಅರವತ್ತೆಂಟನೇ ವಯಸ್ಸಿನಲ್ಲಿ ನಿಧನನಾಗುವ ಹೊತ್ತಿಗೆ ಡುಮಾಸ್, ಒಂದು ಕಾದಂಬರಿ (The Knight of Sainte & Hermine) ಬರೆಯುತ್ತಿದ್ದ. ಆತನ ನಿಧನದಿಂದಾಗಿ ಅದು ಅರ್ಧಕ್ಕೆ ನಿಂತುಹೋಯಿತು. ಆತನ ನಿಧನದ ೧೩೫ ವರ್ಷಗಳ ನಂತರ ಫ್ರೆಂಚ್ ಸಾಹಿತಿ ಕ್ಲಾಡ್ ಸ್ಕೊಪ್ ಈ ಅಪೂರ್ಣ ಕಾದಂಬರಿಯನ್ನು ಪೂರ್ಣಗೊಳಿಸಿದ.
ಡುಮಾಸ್‌ಗೆ ಬರಹವೇ ಬದುಕಾಗಿತ್ತು. ರಸಿಕತನವೇ ತನ್ನ ಬರಹದ ಜೀವಾಳ ಎಂದು ಹೇಳಿಕೊಂಡಿದ್ದ ಡುಮಾಸ್, ಸುಮಾರು ನಲವತ್ತು ಹೆಂಗಸರೊಂದಿಗೆ ಸಂಬಂಧ ಹೊಂದಿದ್ದ. ಆ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಡುಮಾಸ್ ಬರೆದ ಪುಸ್ತಕ
ಸಿಕ್ಕಾಗ ಇವನ್ನೆಲ್ಲ ನಿಮಗೆ ಹೇಳಬೇಕೆನಿಸಿತು.