Thursday, 12th December 2024

ಮೂಗಿನ ಮೇಲೆ ಬೆರಳಿಡುವಂಥ ಸಂಗತಿಗಳು ಮಹಾರಾಣಿಯವು

ತಿಳಿರು ತೋರಣ

srivathajoshi@yahoo.com

ಮೊನ್ನೆ ನಿಧನದ ವಾರ್ತೆ ಬಂದಾಕ್ಷಣ ಗೊಳೋ ಎಂದು ಅತ್ತೇಬಿಟ್ಟರೋ ಏನೋ. ಅಷ್ಟಿತ್ತು ಪ್ರೀತಿಗೌರವಗಳ ಆತ್ಮೀಯ ಭಾವ. ಎಲಿಜಬೆತ್-2 ಬಗೆಗೆ, ಪ್ರಪಂಚದಾದ್ಯಂತ ಪ್ರಕಟವಾಗಿದ್ದಕ್ಕೆ ಲೆಕ್ಕವಿಲ್ಲ. ಆದರೂ ಅಂತಹ ಜಗ ದ್ವಿಖ್ಯಾತರನ್ನು ಕುರಿತ ಸ್ವಾರಸ್ಯಕರ ಸಂಗತಿಗಳದು ಅಕ್ಷಯಪಾತ್ರೆ. ಅದರಲ್ಲಿ ‘ಓಹೋ ನಮಗಿದು ಗೊತ್ತೇ ಇರಲಿಲ್ಲ!’ ರೀತಿಯವೊಂದಿಷ್ಟನ್ನು ಕಲೆಹಾಕಿ ಕಟ್ಟಿದ ಈ ತೋರಣ, ಸಮಯೋಚಿತವಾಗಿ ಆ ಸಾಮ್ರಾಜ್ಞಿಯ ಸ್ಮರಣೆಗೆಂದೇ ಸಮರ್ಪಣ.

ಅತಿ ಹೆಚ್ಚು ಅವಧಿ ಆಳಿದ ಬ್ರಿಟಿಷ್ ಸಾಮ್ರಾಜ್ಞಿ ಎಂಬ ಖ್ಯಾತಿಗೆ ಪಾತ್ರರಾದ ಎಲಿಜ ಬೆತ್-2 ಮೊನ್ನೆ ಸೆಪ್ಟೆಂಬರ್ 8ರಂದು ನಮ್ಮನ್ನಗಲಿದರು. ವಯಸ್ಸು 96 ಆಗಿದ್ದರೂ ಮುಖದಲ್ಲಿನ ಆ ಮೋಹಕ ಸೌಂದರ್ಯ, ಆ ಶ್ರೀಮದ್ಗಾಂಭೀರ್ಯ, ಆ ‘ರಾಣಿ ಕಳೆ’ ಸ್ವಲ್ಪವೂ ಮಾಸಿರಲಿಲ್ಲ!

ನಿಜ, ನಾವೆಲ್ಲ ಬರೀ ಟಿವಿಯಲ್ಲಿ ನೋಡಿ ಪತ್ರಿಕೆಗಳಲ್ಲಿ ಓದಿ ಆಕೆಯ ಬಗೆಗೆ ಸದಾ ಒಂದು ನಮೂನೆಯ ಕೌತುಕ ಇಟ್ಟು ಕೊಂಡಿ ದ್ದವರು. ಆದರೆ ಬ್ರಿಟನ್‌ನ ಪ್ರಜೆಗಳನೇಕರು ಆಕೆಯನ್ನು ಮಾತೃಸ್ವರೂಪಿಯಾಗಿ ಕಂಡವರು; ಮೊನ್ನೆ ನಿಧನದ ವಾರ್ತೆ ಬಂದಾಕ್ಷಣ ಗೊಳೋ ಎಂದು ಅತ್ತೇಬಿಟ್ಟರೋ ಏನೋ. ಅಷ್ಟಿತ್ತು ಪ್ರೀತಿಗೌರವಗಳ ಆತ್ಮೀಯ ಭಾವ. ಮಹಾರಾಣಿ ಅದಕ್ಕೆ ಸಂಪೂರ್ಣ ಅರ್ಹರೂ ಆಗಿದ್ದರೆನ್ನಿ. ಎಲಿಜಬೆತ್-೨ ಬಗೆಗೆ, ಆಕೆಯ ಜೀವಿತಾವಧಿಯಲ್ಲೂ, ಮೊನ್ನೆ ನಿಧನಾನಂತರವೂ, ಪ್ರಪಂಚದಾದ್ಯಂತ ಪ್ರಕಟವಾಗಿದ್ದಕ್ಕೆ ಲೆಕ್ಕವಿಲ್ಲ.

ಆದರೂ ಅಂತಹ ಜಗದ್ವಿಖ್ಯಾತರನ್ನು ಕುರಿತ ಸ್ವಾರಸ್ಯಕರ ಸಂಗತಿಗಳದು ಅಕ್ಷಯಪಾತ್ರೆ. ಅದರಲ್ಲಿ ‘ಓಹೋ ನಮಗಿದು ಗೊತ್ತೇ ಇರಲಿಲ್ಲ!’ ರೀತಿಯವೊಂದಿಷ್ಟನ್ನು ಕಲೆ ಹಾಕಿ ಕಟ್ಟಿದ ಈ ತೋರಣ, ಸಮಯೋಚಿತವಾಗಿ ಆ ಸಾಮ್ರಾಜ್ಞಿಯ ಸ್ಮರಣೆಗೆಂದೇ ಸಮರ್ಪಣ. ಹುಟ್ಟಿದಾಗಲೇ ಬ್ರಿಟಿಷ್ ಆಧಿಪತ್ಯದ ಉತ್ತರಾಧಿಕಾರಿಯಾಗಿರಲಿಲ್ಲ ಎಲಿಜಬೆತ್. ಹತ್ತರ ವಯಸ್ಸಿನಲ್ಲಿ, 1936ರಲ್ಲಿ ತಾತ ಐದನೆಯ ಕಿಂಗ್ ಜಾರ್ಜ್ ನಿಧನರಾದಾಗ ನಸೀಬು ಬದಲಾಯಿತು.

ಎಲಿಜಬೆತ್‌ಳ ದೊಡ್ಡಪ್ಪ ಎಂಟನೆಯ ಎಡ್ವರ್ಡ್ ಕೈಗೆ ಅಧಿಕಾರ ಬಂತು. ಆತನಿಗೆ ಅಮೆರಿಕದ ವ್ಯಾಲಿಸ್ ಸಿಂಪ್ಸನ್ ಎಂಬಾಕೆಯ ಜೊತೆ ಪ್ರೇಮವಿತ್ತು. ಅದಾಗಲೇ ಎರಡು ಬಾರಿ ವಿಚ್ಛೇದಿತಳಾಗಿದ್ದ ವ್ಯಾಲಿಸ್‌ಳನ್ನೇ ಮದುವೆಯಾಗುವ ಪಣ ತೊಟ್ಟು, ಒಂದು ವರ್ಷದೊಳಗೇ ಸಿಂಹಾಸನತ್ಯಾಗ ಮಾಡಿ ಎಡ್ವರ್ಡ್ ಹೊರಟೇಬಿಟ್ಟನು. ಆಗ ಆತನಿಗಿನ್ನೂ ಸಂತಾನಪ್ರಾಪ್ತಿ ಆಗಿರಲಿಲ್ಲವಾದ್ದ ರಿಂದ ಸೋದರ ಆಲ್ಬರ್ಟ್ (ಎಲಿಜಬೆತ್‌ಳ ತಂದೆ) ಸಿಂಹಾಸನವೇರುವಂತಾಯಿತು. ಆರನೆಯ ಜಾರ್ಜ್ ಎಂದು ಮರು ನಾಮಕರಣವಾಯಿತು.

ಆತನ ರಾಣಿಯ ಹೆಸರು ಎಲಿಜಬೆತ್ ಎಂದೇ ಇದ್ದದ್ದು. ಅವರಿಗೆ ಇಬ್ಬರು ಹೆಣ್ಮಕ್ಕಳು: ಎಲಿಜಬೆತ್-2 (ಈ ಲೇಖನದಲ್ಲಿನ್ನು ಹೆಸರಿನ ಮುಂದೆ ಇಮ್ಮಡಿ ಎಂಬರ್ಥದ 2 ಸಫಿಕ್ಸನ್ನು ಓದಿನ ಅನುಕೂಲಕ್ಕಾಗಿ ಬಿಟ್ಟು ಬಿಟ್ಟಿದ್ದೇನೆ), ಮತ್ತು ಮಾರ್ಗರೆಟ್. ಉತ್ತರಾಧಿಕಾರಿಯಾಗುವ ಯೋಗ ಹಿರಿಮಗಳು ಎಲಿಜಬೆತ್‌ಳ ಹಣೆಯಲ್ಲಿ ಬರೆಯಲ್ಪಟ್ಟಿತು. ತಂಗಿ ಮಾರ್ಗರೆಟ್ ತೊದಲುನುಡಿ ಗಳಲ್ಲಿ ತನ್ನ ಹೆಸರನ್ನು ಮಾರ್ಗೊಟ್ ಅಂತಲೂ ಅಕ್ಕಳ ಹೆಸರನ್ನು ಲಿಲಿಬೆಟ್ ಅಂತಲೂ ಉಚ್ಚರಿಸುತ್ತಿದ್ದಳಂತೆ.

ಎಲಿಜಬೆತ್‌ಗೆ ಅದೇ ನಿಕ್‌ನೇಮ್ ಆಯಿತು. ‘ಲಿಲಿಬೆಟ್ ನನ್ನ ಹೆಮ್ಮೆಯಾದರೆ ಮಾರ್ಗೊಟ್ ನನ್ನ ಖುಷಿ’ ಎಂದು ಕಿಂಗ್ ಜಾರ್ಜ್ ಹೇಳುತ್ತಿದ್ದರೆನ್ನಲಾಗಿದೆ. ಹಾಗೆ ನೋಡಿದರೆ ಎಲಿಜಬೆತ್‌ಳ ಪೂರ್ಣ ಹೆಸರು ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ ಎಂದು. ಅನುಕ್ರಮ ವಾಗಿ ತಾಯಿ, ಮುತ್ತಜ್ಜಿ, ಮತ್ತು ಅಜ್ಜಿಯ ಹೆಸರುಗಳನ್ನು ಪಡೆದು ಇಟ್ಟ ಹೆಸರು. ರಾಜಮನೆತನದ ಹುಡುಗಿಯರೆಂದ ಮೇಲೆ ಅವರು ಸಾಮಾನ್ಯ ಮಕ್ಕಳಂತೆ ಪ್ರೈಮರಿ ಸ್ಕೂಲ್‌ಗೆಲ್ಲ ಎಲ್ಲಿ ಹೋಗುತ್ತಾರೆ? ಅವರಿಗೆ ವಿಶೇಷವಾಗಿ ಮನೆಪಾಠದ ವ್ಯವಸ್ಥೆ ಮಾಡಲಾಗಿತ್ತು.

ಪಾಠ ಹೇಳಿಕೊಡಲು ಬರುತ್ತಿದ್ದವರೂ ಅಂಥಿಂಥವರಲ್ಲ ಘನವಿದ್ವಾಂಸರು. ಈಟನ್ ಕಾಲೇಜಿನ ಉಪಪ್ರಾಂಶುಪಾಲ ಹೆನ್ರಿ ಮಾರ್ಟೆನ್ ಅಂಥ ಶಿಕ್ಷಕರಲ್ಲೊಬ್ಬರು. ಸ್ವಾರಸ್ಯವೆಂದರೆ ಈ ಈಟನ್ ಕಾಲೇಜು ಆಗಲೂ ಈಗಲೂ ಗಂಡುಮಕ್ಕಳ ಶಿಕ್ಷಣಸಂಸ್ಥೆ,
ಅಂಥದ್ರಲ್ಲಿ ಉಪಪ್ರಾಂಶುಪಾಲರು ಆ ರಾಜಕುಮಾರಿಯರಿಗೆ ಟ್ಯೂಷನ್ ಹೇಳಿಕೊಡಲಿಕ್ಕೆ ನೇಮಕಗೊಂಡಿದ್ದರು. ಸಾಂವಿಧಾನಿಕ
ಚರಿತ್ರೆ, ಕಾನೂನು ಮುಂತಾದ ವಿಷಯಗಳನ್ನು ಅವರು ಕಲಿಸುತ್ತಿದ್ದರು. ಧಾರ್ಮಿಕ ವಿಚಾರಗಳನ್ನು ಕಲಿಸಲಿಕ್ಕೆ ಕ್ಯಾಂಟರ್
ಬರಿಯ ಆರ್ಚ್‌ಬಿಷಪ್ ಬರುತ್ತಿದ್ದರು. ಅರಮನೆಯ ಸೇವಕಿಯರು ಫ್ರೆಂಚ್ ಭಾಷೆಯನ್ನು ಕಲಿಸುತ್ತಿದ್ದರು.

ಹೀಗೆ, ಶಾಲೆಗೆ ಹೋಗದೆಯೇ ಉನ್ನತ ಶಿಕ್ಷಣ ಪಡೆದವರು ಎಲಿಜಬೆತ್ ಮತ್ತು ಮಾರ್ಗರೆಟ್. ಅವರಿಬ್ಬರಿಗೆ ಕಲಿಸಿದ ಇನ್ನೊಬ್ಬ ಶಿಕ್ಷಕಿ ಸಾಕುತಾಯಿ ಮೇರಿಯನ್ ಕ್ರಾಫರ್ಡ್ ಎಂಬಾಕೆ. ರಾಜಮನೆತನ ದವರು ಆಕೆಯನ್ನು ‘ಕ್ರಾಫಿ’ ಎಂದು ಕರೆಯುತ್ತಿದ್ದರಂತೆ. ಆಕೆ ಮುಂದೆ 1953ರಲ್ಲಿ ‘ದ ಲಿಟ್ಲ್ ಪ್ರಿನ್ಸೆಸಸ್’ ಎಂಬೊಂದು ಪುಸ್ತಕವನ್ನು ಬರೆದು ಪ್ರಕಟಿಸಿದಳು. ಎಲಿಜಬೆತ್ ಮತ್ತು ಮಾರ್ಗರೆಟ್ ಗೆ ಮನೆಪಾಠ ಹೇಳಿಕೊಟ್ಟ ಅನುಭವಗಳ ಕಥನ. ಆದರೆ ಅದಕ್ಕೆ ಆಕೆ ರಾಜಮನೆತನದ ಅನುಮತಿ ಪಡೆದಿರಲಿಲ್ಲ ವೆಂಬ ಕಾರಣಕ್ಕೆ ಆಮೇಲೆ ಬಹಿಷ್ಕೃತಳಾದಳು.

ಪಾಪ, ಆ ನೋವಿನಿಂದ ಒಂದೆರಡು ಸಲ ಆತ್ಮಹತ್ಯೆಗೂ ಯತ್ನಿಸಿದ್ದಳಂತೆ. ಎಲಿಜಬೆತ್ ಮತ್ತು ಮಾರ್ಗರೆಟ್‌ರ ಅಮ್ಮ ಆಕೆಗೆ ಬರೆದಿದ್ದ ‘ಖಾರದ ಪತ್ರ’ಗಳು ಆಮೇಲೆ ಸುದ್ದಿಯಾಗಿದ್ದವು. 1939ರಲ್ಲಿ ಎರಡನೆಯ ಪ್ರಪಂಚಯುದ್ಧ ಆರಂಭವಾದಾಗ ಎಲಿಜಬೆತ್‌ಗಿನ್ನೂ ಹದಿಹರೆಯ. ತಾನೂ ಯುದ್ಧದಲ್ಲಿ ಹೋರಾಡುವವಳು ಎಂದು ತಂದೆಗೆ ದುಂಬಾಲುಬಿದ್ದಿದ್ದಳಂತೆ. ತಂಗಿ ಮಾರ್ಗರೆಟ್ ಜೊತೆಗೂಡಿ ಎಲಿಜಬೆತ್ ರೇಡಿಯೊ ಭಾಷಣ ಗಳನ್ನು ಮಾಡುತ್ತಿದ್ದಳು. ಬ್ರಿಟಿಷ್ ಮಕ್ಕಳ ನೈತಿಕ ಸ್ಥೈರ್ಯ ಹೆಚ್ಚಿಸುವುದು ಅವಳ ಉದ್ದೇಶವಾಗಿತ್ತು.

ಒಂದು ಭಾಷಣದಲ್ಲಿ ‘ನಾವು ಇನ್ನೂ ಚಿಕ್ಕ ಪ್ರಾಯದವರಾದರೂ ಅತ್ಯುತ್ಸಾಹಿಗಳು ಮತ್ತು ಧೈರ್ಯಶಾಲಿಗಳಾಗಿ ಇದ್ದೇವೆ. ನಮ್ಮ ವೀರಯೋಧರನ್ನು, ನಾವಿಕರನ್ನು, ವಾಯುಸೇನಾನಿಗಳನ್ನು ಹುರಿದುಂಬಿಸಲಿಕ್ಕಾಗಿ, ಅವರಿಗೆ ನೆರವಾಗುವುದಕ್ಕಾಗಿ ಏನು ಮಾಡಬಹುದೆಂದು ಯೋಚಿಸುತ್ತಲೇ ಇರುತ್ತೇವೆ. ಯುದ್ಧವು ತಂದೊಡ್ಡುವ ಅಪಾಯಗಳನ್ನು, ಸಾವು-ನೋವುಗಳನ್ನು ಹಂಚಿ ಕೊಳ್ಳಲು ನಾವೂ ಸಿದ್ಧರಿದ್ದೇವೆ’ ಎಂದು ವೀರಾವೇಶದಿಂದ ಎಲಿಜಬೆತ್ ಹೇಳಿದ್ದರ ಧ್ವನಿಮುದ್ರಣ ಈಗಲೂ ಬ್ರಿಟಿಷ್
ಲೈಬ್ರರಿಯ ಅಂತರಜಾಲ ತಾಣದಲ್ಲಿ ಲಭ್ಯವಿದೆ.

ಭಾಷಣ ದಲ್ಲಷ್ಟೇ ಕೆಚ್ಚು ತೋರಿದ್ದಲ್ಲ, ಎಲಿಜಬೆತ್ 18 ವರ್ಷದವಳಿರುವಾಗ ವಿಮೆನ್ಸ್ ಆಕ್ಸಿಲರಿ ಟೆರಿಟೋರಿಯಲ್ ಸರ್ವಿಸ್‌ಗೆ ಸೇರಿ ಅಲ್ಲಿ ದೊಡ್ಡದೊಡ್ಡ ಟ್ಯಾಂಕರ್‌ಗಳ ಚಾಲನೆಯ ತರಬೇತಿ ಪಡೆದು ಟ್ರಕ್ ಡ್ರೈವರ್ ಮತ್ತು ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸಿ ದಳು. ರಾಜಮನೆತನದಿಂದ ಬ್ರಿಟಿಷ್ ಸೈನ್ಯಕ್ಕೆ ಸೇರಿದ ಏಕೈಕ ಹೆಣ್ಣು ಎಂಬ ಖ್ಯಾತಿಗೂ ಪಾತ್ರಳಾದಳು. ಎರಡನೆಯ ಪ್ರಪಂಚ ಯುದ್ಧದಲ್ಲಿ ಸೇವೆ ಸಲ್ಲಿಸಿರುವ, ಬದುಕಿರುವ, ಏಕೈಕ ಮುಖ್ಯಸ್ಥೆ ಎಂಬ ಕೀರ್ತಿ ಮೊನ್ನೆ ನಿಧನರಾಗುವವರೆಗೆ ಎಲಿಜಬೆತ್ ಹೆಸರಿಗಿತ್ತು. 1945ರಲ್ಲಿ ಯುದ್ಧ ಕೊನೆಗೊಂಡಾಗ, ಆಗಿನ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಮೇ ೮ರಂದು ಯುದ್ಧಸಮಾಪ್ತಿಯ ಘೋಷಣೆ ಮಾಡಿದಾಗ, ಸಂಭ್ರಮಾಚರಣೆಗೆ ಜನಸಾಮಾನ್ಯರೆಲ್ಲ ಲಂಡನ್‌ನ ಬೀದಿಗಳಲ್ಲಿ ಮೆರವಣಿಗೆ ಹೊರಟಾಗ ಅದರಲ್ಲಿ ಎಲಿಜಬೆತ್ ಮತ್ತು ಮಾರ್ಗರೆಟ್ ಸಹ ಸಾಮಾನ್ಯ ಪ್ರಜೆಗಳಂತೆ ಭಾಗವಹಿಸಿದ್ದರು.

ಬಕ್ಕಿಂಗ್‌ಹ್ಯಾಮ್ ಅರಮನೆಯಿಂದ ಹಾಗೆ ಸೀದಾ ಬೀದಿಗಿಳಿಯಲಿಕ್ಕೆ ಅವರಿಗೆ ತಂದೆ ಕಿಂಗ್ ಜಾರ್ಜ್‌ನ ಸಮ್ಮತಿಯೂ ಸಿಕ್ಕಿತ್ತು.
ಎಲಿಜಬೆತ್ ಮದುವೆಯಾದದ್ದು ಪ್ರಿನ್ಸ್ ಫಿಲಿಪ್‌ನನ್ನು. ಆತ ಎಡಿನ್‌ಬರ್ಗ್‌ನ ಡ್ಯೂಕ್ ಆಗಿದ್ದವನು. ಅವರಿಬ್ಬರೂ ಮೂಲತಃ
ಒಂದೇ ಕುಟುಂಬದವರು! ಇಬ್ಬರಿಗೂ ವಿಕ್ಟೋರಿಯಾ ರಾಣಿ ಮತ್ತು ಪ್ರಿನ್ಸ್ ಆಲ್ಬರ್ಟ್ ದಂಪತಿ ‘ಗ್ರೇಟ್ ಗ್ರೇಟ್ ಗ್ರ್ಯಾಂಡ್ ಪೇರೆಂಟ್ಸ್’. ಮೈಸೂರುಸೀಮೆ ಕನ್ನಡದಲ್ಲಾದರೆ ಕೋಲ್‌ತಾತ ಮತ್ತು ಕೋಲ್‌ಅಜ್ಜಿ. ಎಲಿಜಬೆತ್ ಮತ್ತು ಫಿಲಿಪ್‌ಗೆ ಆರು ವರ್ಷಗಳ ಅಂತರ; ಚಿಕ್ಕಂದಿನಿಂದಲೂ ಪರಿಚಯ, ಒಡನಾಟ ಇತ್ತು. ಅನುಕ್ರಮವಾಗಿ 8 ಮತ್ತು 14ರ ಪ್ರಾಯದಲ್ಲಿದ್ದಾಗ ರಾಜಪರಿವಾರದ ಒಂದು ಮದುವೆ ಸಮಾರಂಭದಲ್ಲಿ ಇಬ್ಬರೂ ಪಾಲ್ಗೊಂಡಿದ್ದರು.

ಐದಾರು ವರ್ಷಗಳ ಬಳಿಕ ಎಲಿಜಬೆತ್ ತಂದೆಯೊಡನೆ ಡಾರ್ಟ್‌ಮೌತ್‌ನಲ್ಲಿ ರಾಯಲ್ ನೇವಲ್ ಅಕ್ಯಾಡೆಮಿಗೆ ಭೇಟಿಯಿತ್ತಾಗ ಅಲ್ಲಿ ಫಿಲಿಪ್ ಒಬ್ಬ ಕ್ಯಾಡೆಟ್ ಆಗಿದ್ದನು. ‘ನಾನು ೧೩ ವರ್ಷದವಳಿದ್ದಾಗ ಫಿಲಿಪ್‌ನಿಗೆ ಮನಸೋತೆ. ಆತ ಕ್ಯಾಡೆಟ್ ಆದದ್ದು, ಯುದ್ಧ ಆರಂಭವಾದಾಗ ನೌಕಾಪಡೆಗೆ ಸೇರಿದ್ದು ಆತನ ಬಗ್ಗೆ ಅಭಿಮಾನ ಹೆಚ್ಚಿಸಿತು. ಸೈನ್ಯದಲ್ಲಿದ್ದ ಆತ ರಜೆಯಲ್ಲಿ ಬಂದಾ ಗಷ್ಟೇ ನಾನು ಭೇಟಿಯಾಗುತ್ತಿದ್ದೆ. ಆಮೇಲೆ ಆತನ ಪೋಷಕರಾಗಿದ್ದ ಲಾರ್ಡ್ ಮತ್ತು ಲೇಡಿ ಮೌಂಟ್‌ಬ್ಯಾಟನ್ ಪ್ರವಾಸ ಹೋದಾಗೆಲ್ಲ ಆತ ವಿಂಡ್ಸರ್‌ಗೆ ಬಂದು ನಮ್ಮ ಜೊತೆ ವಾರಾಂತ್ಯಗಳನ್ನು ಕಳೆಯುತ್ತಿದ್ದನು’ ಎಂದು ಎಲಿಜಬೆತ್ ಹೇಳಿರುವ ದಾಖಲೆಗಳಿವೆ.

1946ರಲ್ಲಿ ಸ್ಕಾಟ್‌ಲ್ಯಾಂಡ್‌ನ ಬಾಲ್ಮೊರಲ್ ಎಸ್ಟೇಟ್‌ನಲ್ಲಿ ಎಲಿಜಬೆತ್ ತಂಗಿದ್ದ ಸಮಯದಲ್ಲಿ ಅಲ್ಲಿಗೆ ಒಂದು ತಿಂಗಳ ರಜೆಯಲ್ಲಿ ಬಂದ ಫಿಲಿಪ್ ಮಂಡಿಯೂರಿ ಗುಲಾಬಿಹೂ ಕೊಟ್ಟನು. ಹೆತ್ತವರನ್ನು ಒಂದುಮಾತು ಕೇಳದೆಯೇ ಎಲಿಜಬೆತ್ ಒಪ್ಪಿಬಿಟ್ಟಳು. ಕೊನೆಗೂ ಕಿಂಗ್ ಜಾರ್ಜ್‌ಗೆ ಈ ಪ್ರೇಮಪರ್ವದ ಸುಳಿವು ಸಿಕ್ಕಿತು. 1947ರ ಜುಲೈ 9ರಂದು ಅವರಿಬ್ಬರ ವಿವಾಹದ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿತು. ಆಗಿನ್ನೂ ಮಹಾಯುದ್ಧ ಮುಗಿದದ್ದಷ್ಟೇ ಆದ್ದರಿಂದ ಮದುವೆಯಲ್ಲಿ ತೊಟ್ಟು ಕೊಳ್ಳುವ ವಿಶೇಷ ಉಡುಗೆಯ ಖರ್ಚಿಗೆ ಎಲಿಜಬೆತ್ ತಾನು ಮಿಲಿಟರಿಯಲ್ಲಿದ್ದಾಗ ಸಂಗ್ರಹಿಸಿದ್ದ ರೇಷನ್ ಕೂಪನ್‌ಗಳನ್ನೂ ಸರಕಾರದಿಂದ ಮತ್ತೂ 200 ಕೂಪನ್‌ಗಳನ್ನೂ ಸೇರಿಸಿ ಉಪಯೋಗಿಸಿದಳು. ಅದೇನೂ ಅಗ್ಗದ ಉಡುಗೆಯಾಗಿರಲಿಲ್ಲ!

ಐವರಿ ಡಚೆಸ್ ಸಿಲ್ಕ್‌ನಿಂದ ಮಾಡಿದ, 10000ದಷ್ಟು ಆಮದು ಮಾಡಿದ ಮುತ್ತುಗಳನ್ನು ಪೋಣಿಸಿದ, ಪಾದಗಳ ಬಳಿ 13 ಅಡಿ ಸುತ್ತಳತೆ ಬರುವ ಆ ಡ್ರೆಸ್ಸನ್ನು ತಯಾರಿಸಲಿಕ್ಕೇ ೬ ತಿಂಗಳು ಹಿಡಿದಿತ್ತು! ಅಷ್ಟಾಗಿ ಮದುವೆಯ ಫೋಟೊಗಳನ್ನು ಕ್ಲಿಕ್ಕಿಸಬಾರ ದೆಂದು ಎಲಿಜಬೆತ್ ತಾಕೀತುಮಾಡಿದ್ದಳಂತೆ! ನೆಟ್ ಫ್ಲಿಕ್ಸ್‌ನಲ್ಲಿ ಬಂದ ‘ದ ಕ್ರೌನ್’ ಸರಣಿಯಲ್ಲಿ ಎಲಿಜಬೆತ್ ಮದುವೆ
ಡ್ರೆಸ್‌ನ ಪ್ರತಿಕೃತಿಗೆ ೪೦ ಸಾವಿರ ಡಾಲರ್ ಖರ್ಚಾಗಿತ್ತೆಂದು ಓದಿದ ನೆನಪು. ಎಲಿಜಬೆತ್‌ಗೆ ಪ್ರಭುತ್ವ ಹಸ್ತಾಂತರವಾದದ್ದು 6
ಫೆಬ್ರವರಿ 1952ರಂದು, ಕಿಂಗ್ ಜಾರ್ಜ್‌ನ ಮರಣವಾದಾಗ.

25ರ ವಯಸ್ಸಿನ ಎಲಿಜಬೆತ್ ಆ ದಿನ ಕೆನ್ಯಾದಲ್ಲಿ ಪ್ರವಾಸ ದಲ್ಲಿದ್ದಳು. ತಂದೆಯ ಮರಣದ ಸುದ್ದಿ ಕೇಳಿದಾಕ್ಷಣ ಲಂಡನ್‌ಗೆ
ಹಿಂದಿರುಗಿದಳು. ಜೂನ್‌ನಲ್ಲಿ ಕಿರೀಟಧಾರಣೆ ಸಮಾರಂಭ ನಡೆಯಿತು. ಅದನ್ನು ರಾಜಮನೆತನದವರು ಮತ್ತು ನಿಕಟವರ್ತಿ ಶ್ರೀಮಂತರು ಮಾತ್ರ ನೋಡಿದರೆ ಸಾಕು, ಜನಸಾಮಾನ್ಯರ ವೀಕ್ಷಣೆಗೆ ಟೆಲಿಕಾಸ್ಟ್ ಮಾಡಬೇಕಿಲ್ಲ ಎಂದು ಎಲಿಜಬೆತ್‌ಳ ಅಭಿ
ಪ್ರಾಯ. ಸಮಾರಂಭದ ಉಸ್ತುವಾರಿ ವಹಿಸಿದ್ದು ಸ್ವತಃ ಫಿಲಿಪ್ ನೇ. ಆರಂಭದಲ್ಲಿ ವೆಸ್ಟ್‌ಮಿನ್ಸ್ಟರ್ ಎಬೆಯ ಒಂದು ವ್ಯೂಪಾ ಯಿಂಟ್‌ನಿಂದ ಮಾತ್ರ ಪ್ರಸಾರಕ್ಕೆ ಅನುಮತಿ ಕೊಡಲಾಯಿತು.

ಆಮೇಲೆ ಮಾಧ್ಯಮಗಳ ಒತ್ತಡಕ್ಕೆ ಮಣಿಯಬೇಕಾಯಿತು. ಆದರೂ, ಎಲಿಜಬೆತ್‌ಳನ್ನು ಕ್ಲೋಸ್‌ಅಪ್‌ನಲ್ಲಿ ತೋರಿಸಕೂಡದು
ಎಂಬ ಷರತ್ತು ಇದ್ದೇಇತ್ತು. ಎಲಿಜಬೆತ್ ಅಸಲಿ ಜನ್ಮದಿನ 21 ಏಪ್ರಿಲ್ (1926). ಆದರೆ ಪ್ರತಿವರ್ಷ ಜನ್ಮದಿನಾಚರಣೆ ಇರುವುದು ಮೇ ತಿಂಗಳ ಕೊನೆಯ ಅಥವಾ ಜೂನ್ ತಿಂಗಳ ಆರಂಭದ ಒಂದು ಶನಿವಾರದಂದು. ಹಾಗಾಗಿ ನಿಖರವಾದ ತಾರೀಕು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ.

ಇದಕ್ಕೆ ಕಾರಣ ಏಪ್ರಿಲ್‌ನಲ್ಲಿನ್ನೂ ಇಂಗ್ಲೆಂಡ್‌ನಲ್ಲಿ ಚಳಿಯೇ ಇರುವುದು. ಹೊರಾಂಗಣ ಸಂಭ್ರಮಕ್ಕೆ ಮೇ-ಜೂನ್ ನ ಬೆಚ್ಚಗಿನ ಹವಾಮಾನ ಚೆನ್ನ. ಅಲ್ಲದೇ, ‘ಟ್ರೂಪಿಂಗ್ ದ ಕಲರ್’ ಎಂಬ ಹೆಸರಿನ ಮಿಲಿಟರಿ ಪರೇಡ್ ಸಹ ಆವತ್ತಿನ ದಿನವೇ ಇರುವುದು ಇನ್ನೊಂದು ಕಾರಣ. ಏಪ್ರಿಲ್ 21ರಂದು ಆಫೀಷಿಯಲ್ ಸೆಲೆಬ್ರೇಷನ್ ಅಂತ ವಿಂಡ್ಸರ್ ಗ್ರೇಟ್ ಪಾರ್ಕ್ ನಲ್ಲಿ 21 ಗನ್ ಸೆಲ್ಯೂಟ್, ಹೈಡ್ ಪಾರ್ಕ್‌ನಲ್ಲಿ 41 ಗನ್ ಸೆಲ್ಯೂಟ್, ಟವರ್ ಆಫ್ ಲಂಡನ್ ಬಳಿ 62 ಗನ್ ಸೆಲ್ಯೂಟ್ ಗಳಿರುತ್ತವೆ. ಜೂನ್‌ನಲ್ಲಿ ನಡೆಯುವ ಆಚರಣೆಯಂದು ಲಂಡನ್ ನಗರದೆಲ್ಲೆಡೆ ಮೆರವಣಿಗೆ, ಅದೂ ಮಿಲಿಟರಿ ಬ್ಯಾಂಡ್ ಗಳೊಂದಿಗೆ. 1981ರಲ್ಲಿ ಅಂಥ ಸಂಭ್ರಮಾ ಚರಣೆಯ ದಿನ ರಾಣಿ ಎಲಿಜಬೆತ್ ಕುದುರೆಯನ್ನೇರಿ ಲಂಡನ್ ನಗರದ ಬೀದಿಗಳಲ್ಲಿ ಮೆರವಣಿಗೆ ಹೊರಟಿದ್ದಾಗ ಬಕ್ಕಿಂಗ್‌ಹ್ಯಾಮ್ ಅರಮನೆಗೆ ಹತ್ತಿರ ದಲ್ಲೇ ಆಕೆಯತ್ತ ಹುಸಿ ಗುಂಡುಗಳು ಹಾರಿಕೊಂಡು ಬಂದವು!

17 ವರ್ಷ ಪ್ರಾಯದ ಮಾರ್ಕಸ್ ಸಾರ್ಜೆಂಟ್ ಎಂಬಾತ ತನ್ನ ವಿಕೃತ ವಾಂಛೆಯನ್ನು ಪೂರೈಸಲಿಕ್ಕಾಗಿ ಹಾಗೆ ಮಾಡಿದ್ದನು.
ಅದೃಷ್ಟವಷಾತ್ ಅವನಿಗೆ ಅಲ್ಲಿ ಅಸಲಿ ಗುಂಡುಗಳ ಪಿಸ್ತೂಲ್ ಖರೀದಿಗೆ ಅವಕಾಶವಿರಲಿಲ್ಲ. ಐದು ವರ್ಷ ಕಾರಾಗೃಹ ವಾಸದ
ಶಿಕ್ಷೆ ಅವನಿಗಾಯಿತು. ಮರುವರ್ಷ 1982ರಲ್ಲಿ ಜುಲೈ 9ರಂದು ಇನ್ನೊಂದು ವಿಚಿತ್ರ ಘಟನೆ ನಡೆಯಿತು. ಅಪರಿಚಿತನೊಬ್ಬ
ಬಕ್ಕಿಂಗ್‌ಹ್ಯಾಮ್ ಅರಮನೆಯ ಆವರಣದ ಬೇಲಿ ಹಾರಿ, ಡ್ರೈನೇಜ್ ಪೈಪ್‌ಗಳನ್ನೇರಿ, ರಾಣಿ ಎಲಿಜಬೆತ್ ಮಲಗುವ ಕೋಣೆಗೆ ಅದುಹೇಗೋ ನುಸುಳಿಕೊಂಡು ಬಂದಿದ್ದನು!

ಕೊನೆಗೂ ಸೆಕ್ಯುರಿಟಿ ಗಾರ್ಡ್‌ಗಳು ಆತನನ್ನು ಸೆರೆ ಹಿಡಿದರು. ಮೈಕೇಲ್ ಫ್ಯಾಗನ್ ಎಂಬ ಹೆಸರಿನ ಆತ ರಾಣಿಯನ್ನು ಹೆದರಿಸ ಲಿಕ್ಕೆಂದೇ ಆ ಕೃತ್ಯ ಮಾಡಿದೆನೆಂದು ಬಾಯ್ಬಿಟ್ಟನಂತೆ. ಎಲಿಜಬೆತ್ ಬಳಿ ಸಾಕುನಾಯಿಗಳ ದೊಡ್ಡ ದಂಡೇ ಇತ್ತಾದರೂ
ಅವುಗಳಿಗೆ ಗೊತ್ತಾಗದಂತೆ ಆತ ಹೇಗೆ ಬಂದನೋ! ಅಂದಹಾಗೆ ನಾಯಿಗಳನ್ನು ಸಾಕುವ ಉಮೇದು ಎಲಿಜಬೆತ್‌ಗೆ ತುಂಬ ಇತ್ತು.
ಜೀವನದುದ್ದಕ್ಕೂ 30ಕ್ಕಿಂತಲೂ ಹೆಚ್ಚು ನಾಯಿಗಳು ‘ರಾಯಲ್ ಪೆಟ್’ ಆಗಿ ಆಕೆಯ ಜೊತೆಗಿದ್ದವು. ಕೆಲವಂತೂ ಮಿಶ್ರತಳಿ
ಆಕೆಯೇ ತಯಾರಿಸಿದ್ದಳು. ಮೊನ್ನೆ ಎಲಿಜಬೆತ್ ಕೊನೆಯುಸಿರೆಳೆದಾಗಲೂ ‘ಕ್ಯಾಂಡಿ’ ಹೆಸರಿನ ನಾಯಿ ಆಕೆಯ ಸಂಗಡವಿತ್ತು.

ಇನ್ನೊಂದು ವಿಚಿತ್ರ ಕಾನೂನಿನ ಪ್ರಕಾರ, ಬ್ರಿಟನ್ ಸರಹದ್ದಿನಲ್ಲಿ ಬರುವ ಸಮುದ್ರ ಸರೋವರ ನದಿ ಕೆರೆ ತೊರೆಗಳಲ್ಲಿರುವ ಜಲಚರಗಳೆಲ್ಲ ರಾಣಿಯ ಸೊತ್ತು, ರಾಣಿಯ ಸಾಕುಪ್ರಾಣಿಗಳೆಂದೇ ಪರಿಗಣನೆ. ರಾಣಿ ಎಲಿಜಬೆತ್‌ಳ ಒಂದು ವಿಶೇಷವೆಂದರೆ ತನ್ನ
ಅಧಿಕಾರಾವಧಿಯಲ್ಲಿ 115ಕ್ಕಿಂತಲೂ ಹೆಚ್ಚು ದೇಶಗಳಿಗೆ ಭೇಟಿಯಿತ್ತಿದ್ದರೂ ಆಕೆಯ ಬಳಿ ಪಾಸ್‌ಪೋರ್ಟ್ ಇರಲಿಲ್ಲ!

ಇದಕ್ಕೆ ಕಾರಣ ಬ್ರಿಟಿಷ್ ಪಾಸ್‌ಪೋರ್ಟ್‌ಗಳನ್ನು ರಾಣಿಯ ಹೆಸರಲ್ಲೇ ಅಧಿಕೃತವಾಗಿ ವಿತರಿಸುವುದರಿಂದ ಸ್ವತಃ ರಾಣಿಗೆ
ಪಾಸ್‌ಪೋರ್ಟ್ ಅವಶ್ಯವಿಲ್ಲ. ಪಾಸ್‌ಪೋರ್ಟ್ ಮಾತ್ರವಲ್ಲ, ಡ್ರೈವಿಂಗ್ ಲೈಸನ್ಸೂ ಇಲ್ಲ. ಕಾರಣ ಅದೇ. ಒಮ್ಮೆ ಸೌದಿ ಅರೇಬಿಯಾದ ರಾಜಕುಮಾರ ಅಬ್ದುಲ್ಲಾ ಬ್ರಿಟಿಷ್ ಮಹಾರಾಣಿಯನ್ನು ಭೇಟಿಮಾಡಲಿಕ್ಕೆ ಬಾಲ್ಮೊರಲ್ ಎಸ್ಟೇಟ್‌ಗೆ ಬಂದಿದ್ದಾಗ ಆತನನ್ನು ಕಾರಿನಲ್ಲಿ ಕೂರಿಸಿಕೊಂಡು ಎಲಿಜಬೆತ್‌ಳೇ ಡ್ರೈವ್ ಮಾಡಿದ್ದಳು, ಹೆದರಿಕೆಯಾಗುವಷ್ಟು ವೇಗವಾಗಿ, ಮತ್ತು
ತನ್ನ ಬಳಿ ಡ್ರೈವಿಂಗ್ ಲೈಸೆನ್ಸ್ ಸಹ ಇಲ್ಲ ಎಂದು ಕೀಟಲೆ ಮಾಡುತ್ತ!

ಸೌದಿ ಅರೇಬಿಯಾದಲ್ಲಿ ಹೆಂಗಸರು ಡ್ರೈವ್ ಮಾಡುವಂತಿಲ್ಲ ಎಂಬ ಕಾನೂನಿರುವಾಗ, ವಿದೇಶದಲ್ಲಿ ಹೆಂಗಸೊಬ್ಬಳು
ಅದೂ ಮಹಾರಾಣಿ, ಡ್ರೈವ್ ಮಾಡುವಾಗ ಪ್ಯಾಸೆಂಜರ್ ಆಗಿ ಕುಳಿತುಕೊಳ್ಳಬೇಕಾದ್ದು ಸೌದಿ ರಾಜಕುಮಾರನಿಗೆ ಎಂಥ ದಿಗಿಲು
ತಂದಿರಲಿಕ್ಕಿಲ್ಲ! ಪ್ರತಿದಿನ ಮಧ್ಯಾಹ್ನ ಊಟಕ್ಕೆ ಮೊದಲು ಒಂದಿಷ್ಟು ವೈನ್ ಮಿಶ್ರಿತ ಜಿನ್ ಮತ್ತು ಸಂಜೆಹೊತ್ತಿನಲ್ಲಿ
ಶಾಂಪೇನ್ ಸೇವನೆಯ ಅಭ್ಯಾಸವೂ ರಾಣಿಗಿತ್ತೆಂದು ಗೊತ್ತಾಗಿದ್ದರೆ ಆತನಿಗೆ ಹೃದಯಾಘಾತವಾಗುವುದೊಂದೇ ಬಾಕಿ.

ಬ್ರಿಟಿಷ್ ರಾಜಮನೆತನದ ಒಂದು ಹಳೆಯ ಸಂಪ್ರದಾಯದಂತೆ ಎಲಿಜಬೆತ್ ಬಳಿಯೂ ಸ್ವಂತದ ಖಾಸಗಿ ಬೆಳ್ಳಿನಾಣ್ಯಗಳಿದ್ದವು. ಅದಕ್ಕೆ ‘ಮೌಂಡಿ ಮನಿ’ ಎಂದು ಹೆಸರು. ವರ್ಷ ದಲ್ಲೊಂದು ದಿನ ವಯೋವೃದ್ಧ ನಾಗರಿಕರನ್ನು ಅರಮನೆಗೆ ಕರೆಸಿ ಅವರಿಗೆ ಬೆಳ್ಳಿನಾಣ್ಯಗಳನ್ನು ಉಡುಗೊರೆಯಾಗಿ ನೀಡುವ ಕ್ರಮ. ಇದು 13ನೆಯ ಶತಮಾನದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಬೈಬಲ್‌ನಲ್ಲಿ ಯೇಸುಕ್ರಿಸ್ತನು ಬಡಬಗ್ಗರ ಕಾಲ್ತೊಳೆದು ಗೌರವಿಸುತ್ತಿದ್ದಂತೆ ಬ್ರಿಟಿಷ್ ರಾಜಮನೆತನದವರು
ವರ್ಷದಲ್ಲೊಂದು ದಿನ ಸಾಂಕೇತಿಕವಾಗಿ ಬಡಬಗ್ಗರ ಸೇವೆ ಮಾಡುವುದು.

18ನೆಯ ಶತಮಾನದವರೆಗೆ ಅಕ್ಷರಶಃ ಕಾಲುತೊಳೆದು ಗೌರವಿಸುವ ಕ್ರಮವೇ ಇತ್ತಂತೆ. ಅಲ್ಲಿಂದೀಚೆಗೆ, ‘ಬಡವರ ಗಲೀಜು ಕಾಲುಗಳನ್ನು ತೊಳೆಯುವುದು ರಾಯಲ್ ಫ್ಯಾಮಿಲಿಗೆ ಶೋಭೆಯಲ್ಲ’ ಎಂಬ ಕಾರಣವನ್ನಿಟ್ಟುಕೊಂಡು ಆ ಸಂಪ್ರದಾಯವು ನಾಣ್ಯ ವಿತರಣೆಗೆ ಬದಲಾಗಿರುವುದಂತೆ.

ಇಂತಹ ಮಹಾರಾಣಿ ಎಲಿಜಬೆತ್‌ಗೆ ಸೋಶಿಯಲ್ ಮೀಡಿಯಾ ಸಂಪರ್ಕವೂ ತಕ್ಕಮಟ್ಟಿಗೆ ಇತ್ತು. 1976 ಮಾರ್ಚ್ 26ರಂದು, ಈಗಿನ ಇಂಟರ್‌ನೆಟ್‌ನ ಪೂರ್ವಜ ಎನ್ನಲಾಗುವ ಆರ್ಪಾನೆಟ್ ಮೂಲಕ ಮೊತ್ತಮೊದಲ ಇಮೇಲ್ ಕಳುಹಿಸಿದ್ದು ರಾಣಿ ಎಲಿಜಬೆತ್! ಅದು ನೆಟ್‌ವರ್ಕ್ ಟೆಕ್ನಾಲಜಿ ಪ್ರದರ್ಶನವೊಂದರಲ್ಲಿ ರಾಣಿಯು ಭಾಗವಹಿಸಿದ್ದಾಗಿನ ಸಂದರ್ಭ. ಆಮೇಲೆ 2008ರಲ್ಲಿ ಗೂಗಲ್‌ನ ಯುಕೆ ಆಫೀಸಿಗೆ ಭೇಟಿಯಿತ್ತಿದ್ದರು. ಟ್ವಿಟ್ಟರ್, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ಗಳಲ್ಲೂ ಖಾತೆ ತೆರೆದಿದ್ದರು.

ಮೌಸ್ ಹಿಡಿದುಕೊಂಡು ಕಂಪ್ಯೂಟರ್ ಆಪರೇಟ್ ಮಾಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ, ಏಕೆಂದರೆ ಮಾಡರ್ನ್ ಪುಸ್ಸಿಕ್ಯಾಟ್ ಅಲ್ಲಿಗೆ ಹೋಗಿ ‘ಐ ಫ್ರೈಟನ್ಡ್ ಎ ಲಿಟ್ಲ್ ಮೌಸ್ ಆನ್ ಹರ್ ಟೇಬಲ್…’ ಮಾಡಿದ್ದರೆ ಕಷ್ಟವಾಗುತ್ತಿತ್ತು!