Sunday, 15th December 2024

ಅಸ್ತಿತ್ವ ಉಳಿಸಿಕೊಳ್ಳುವ ಹೆಣಗಾಟ

ಅಶ್ವತ್ಥಕಟ್ಟೆ

ranjith.hoskere@gmail.com

ಗಣನೀಯ ಪಕ್ಷಗಳಿರುವ ಭಾರತದಲ್ಲಿ ರಾಜಕೀಯವೆಂದಾಕ್ಷಣ ನೆನಪಾಗುವುದು ಕೈಬೆರಳೆಣಿಕೆಯ ಪಕ್ಷಗಳು ಮಾತ್ರ. ಚುನಾವಣಾ ಆಯೋಗದ ಮಾಹಿತಿಯಲ್ಲಿ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ಪಡೆದಿರುವ ಬಿಎಸ್‌ಪಿ, ಎನ್‌ಪಿಪಿ ಕಳೆದೊಂದು ದಶಕದಲ್ಲಿ ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿಲ್ಲ.

ವಿಶ್ವದ ಮಿಕ್ಕೆಲ್ಲ ದೇಶಗಳಿಗಿಂತ ಭಾರತದ ರಾಜಕೀಯ ವಿಭಿನ್ನ. ಇಲ್ಲಿ ಶಾಶ್ವತ ಶತ್ರುತ್ವ ಅಥವಾ ಮಿತ್ರತ್ವ ಎಂಬುದಿಲ್ಲ. ಇಂದು ಶತ್ರುವಾಗಿದ್ದವರು ನಾಳೆ ಮಿತ್ರರಾಗುವ ಅಥವಾ ಮಿತ್ರರಾಗಿದ್ದವರು ಶತ್ರುಗಳಾಗಿ ಸೆಣಸಾಟಕ್ಕೆ ‘ರಾಜಕೀಯ ಅಖಾಡ’ಕ್ಕೆ ಧುಮುಕುವ ಪರಿಪಾಠ ಇಲ್ಲಿ ಹೊಸದೇನಲ್ಲ. ಅದರಲ್ಲಿಯೂ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಷ್ಟ್ರೀಯ ಪಕ್ಷಗಳು, ತಮ್ಮ ಅನುಕೂಲಕ್ಕೆ ಅನುಗುಣವಾಗಿ ‘ಬಲ’ವಿರುವ ಪಕ್ಷಗಳಿಗೆ ಬಲೆ ಹಾಕುವುದನ್ನು ಬಹುತೇಕರು ಗಮನಿಸುತ್ತಿರುತ್ತಾರೆ. ಆದರೆ ಕಳೆದೊಂದು ದಶಕದಿಂದ ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಹಾಕುತ್ತಿರುವ ‘ಬಲೆ’ ಮೇಲ್ನೋಟಕ್ಕೆ
ಮೈತ್ರಿ ಎನಿಸಿದರೂ, ದೀರ್ಘಕಾಲದಲ್ಲಿ ಪ್ರಾದೇಶಿಕ ಪಕ್ಷ ಗಳಿಗೆ ‘ಯಮಪಾಶ’ವಾಗಿ ಪರಿಣಮಿಸಬಹುದೇ ಎನ್ನುವ ಆತಂಕ ಅನೇಕರಲ್ಲಿದೆ.

ದೇಶದಲ್ಲಿ ಜನಸಂಘವು ಬಿಜೆಪಿಯಾಗಿ ಬದಲಾಗಿ, ರಥಯಾತ್ರೆ ಯಶಸ್ವಿಯಾದಾಗಿನಿಂದ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ
ಬೆಳೆದು ನಿಂತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಿದ್ಧಾಂತ, ನಿಲುವು, ಆಚಾರ, ಸಂಘಟನಾ ವೈಖರಿ ಸೇರಿದಂತೆ ಎಲ್ಲ ವಿಷಯದಲ್ಲಿ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿದರೂ, ಪ್ರಾದೇಶಿಕ ಪಕ್ಷಗಳ ವಿಷಯದಲ್ಲಿ ಮಾತ್ರ ಎರಡೂ ಪಕ್ಷಗಳ ನಿಲುವು ಒಂದೇ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಈ ಎರಡೂ ಪಕ್ಷಗಳು ಅಧಿಕಾರದ ಗದ್ದುಗೆಯನ್ನು ಏರುವುದಕ್ಕೆ ಪ್ರಾದೇಶಿಕ ಪಕ್ಷಗಳನ್ನು ಮೆಟ್ಟಿಲಾಗಿ ಬಳಸಿಕೊಂಡು ಬಳಿಕ ಆ ಪಕ್ಷಗಳ ಅಸ್ತಿತ್ವವನ್ನೇ ಮರೆಮಾಚುವ ‘ಮನಸ್ಥಿತಿ’ಯಲ್ಲಿರುವುದು ಪ್ರತಿ ಚುನಾವಣೆಯಲ್ಲಿ ಗೋಚರವಾಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಹಾಗೂ ಹಲವು ರಾಜ್ಯದಲ್ಲಿ ಬಲಿಷ್ಠವಾಗಿರುವ ಬಿಜೆಪಿ, ಪ್ರಾದೇಶಿಕ ಪಕ್ಷಗಳ ಅಸ್ತಿತ್ವವೇ ಇಲ್ಲದಂತೆ ಮಾಡುವ ತಂತ್ರದಲ್ಲಿ ಮುಂಚೂಣಿಯಲ್ಲಿದ್ದರೂ, ಕಾಂಗ್ರೆಸ್ ನಾಯಕರು ಈ ಧೋರಣೆಗೆ ‘ಮೌನ’ ಸಮ್ಮತಿ ಯನ್ನು ನೀಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತದಲ್ಲಿ ಗಣನೀಯ ಸಂಸ್ಕೃತಿ, ಭಾಷೆ, ಆಚರಣೆ, ಜಾತಿಯಷ್ಟೇ ಅಲ್ಲದೇ, ರಾಜಕೀಯ ವಿಷಯವಾಗಿ ನೋಡಿದಾಗಲೂ, ಇತರೆ ದೇಶಗಳಿಗಿಂತ ಭಿನ್ನವಾಗಿ ನಿಲ್ಲುತ್ತೇವೆ. ಲೋಕಸಭಾ ಚುನಾವಣೆ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಭಾರತೀಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ, ಭಾರತದಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ೫೭ ಪ್ರಾದೇಶಿಕ ಪಕ್ಷಗಳು ಚುನಾವಣಾ ಆಯೋಗದ ಅಽಕೃತ ಪಟ್ಟಿಯಲ್ಲಿದೆ. ಈ ಎರಡು ವರ್ಗೀಕರಣವನ್ನು ಬಿಟ್ಟು, ದೇಶದಲ್ಲಿ ಬರೋಬ್ಬರಿ ೨,೭೬೪ ಪಕ್ಷಗಳು ಗುರುತಿಸದಿರುವ ಪಕ್ಷಗಳ ಪಟ್ಟಿಯಲ್ಲಿವೆ!

ಈ ರೀತಿ ಸಾವಿರಾರು ಪಕ್ಷಗಳನ್ನು ಹೊಂದಿರುವ ಭಾರತ ದಲ್ಲಿ ರಾಜಕೀಯವೆಂದ ಕೂಡಲೇ ನೆನಪಿಗೆ ಬರುವುದು ಕೈಬೆರಳೆಣಿಕೆಯ ಪಕ್ಷಗಳು ಮಾತ್ರ. ಚುನಾವಣಾ ಆಯೋಗದ ಮಾಹಿತಿಯಲ್ಲಿ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ಪಡೆದಿರುವ ಬಿಎಸ್‌ಪಿ, ಎನ್‌ಪಿಪಿ ಕಳೆದೊಂದು ದಶಕದಲ್ಲಿ ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿಲ್ಲ. ಇನ್ನು ಸಿಪಿಎಂ ಕೇರಳಕ್ಕೆ, ಆಮ್ ಆದ್ಮಿ ದೆಹಲಿ ಹಾಗೂ ಪಂಜಾಬ್‌ಗೆ ಸೀಮಿತವಾಗಿವೆ. ಬಿಎಸ್‌ಪಿ ಹಾಗೂ ಎನ್‌ಪಿಪಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ವ್ಯವಸ್ಥಿತವಾಗಿ ತೆರೆಯ ಹಿಂದಕ್ಕೆ ಸರಿಸಿವೆ. ಅರವಿಂದ ಕೇಜ್ರಿವಾಲ್ ಬಂಧನದ ಮೂಲಕ ಆಮ್ ಆದ್ಮಿ ಪರಿಸ್ಥಿತಿಯೂ ಭವಿಷ್ಯದಲ್ಲಿ ಹೀಗೇ ಆದರೂ
ಅಚ್ಚರಿಯಿಲ್ಲ. ಈ ಮೂಲಕ ಇಡೀ ದೇಶದಲ್ಲಿ ಸಂಘಟನೆ ಹೊಂದಿರುವುದು ಹಾಗೂ ದೇಶಾದ್ಯಂತ ಸ್ಪರ್ಧಿಸುವ ‘ಶಕ್ತಿ’ ಹೊಂದಿರುವುದು ಇದೀಗ ಬಿಜೆಪಿಯನ್ನು ಬಿಟ್ಟರೆ ಕಾಂಗ್ರೆಸ್ ಮಾತ್ರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಈ ಮೂಲಕ ಪ್ರಾದೇಶಿಕ ಪಕ್ಷಗಳನ್ನು ತುಳಿದು ತಮ್ಮ ಪಕ್ಷದ ಧ್ವಜವನ್ನು ಸ್ಥಾಪಿಸುವ ಉದ್ದೇಶವನ್ನು ಅವು ಹೊಂದಿವೆ ಎನ್ನುವುದು ಸ್ಪಷ್ಟವಾಗಿದೆ. ಹಾಗೆ ನೋಡಿದರೆ, ದೇಶದಲ್ಲಿ ಬಿಜೆಪಿ ಪೂರ್ಣ ಪ್ರಮಾಣ ದಲ್ಲಿ ಬೆಳೆಯುವ ಮೊದಲು ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಬೆಳೆದು ನಿಂತ ಪಕ್ಷಗಳೆಂದರೆ ಪ್ರಾದೇಶಿಕ ಪಕ್ಷಗಳು. ಆಯಾ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿ ಯಶಸ್ವಿಯಾಗುವ ಮೂಲಕ ಅನೇಕ ಪ್ರಾದೇಶಿಕ ಪಕ್ಷಗಳು ಗಮನ ಸೆಳೆದಿದ್ದವು. ಆದರೆ ಕಳೆದೊಂದು ದಶಕದಲ್ಲಿ ರಾಷ್ಟ್ರ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ದಶಕಗಳ ಕಾಲ ಅಧಿಕಾರ ನಡೆಸಿದ್ದ ಅಥವಾ ಪ್ರತಿಪಕ್ಷವಾಗಿ ‘ಸದ್ದು’ ಮಾಡಿಕೊಂಡಿದ್ದ ಹಲವು ಪ್ರಾದೇಶಿಕ ಪಕ್ಷಗಳು ಸದ್ದಿಲ್ಲದೆ ತೆರೆಮರೆಗೆ ಸರಿದಿವೆ.

ಬಿಜೆಪಿ-ಕಾಂಗ್ರೆಸ್ ನಡುವಿನ ನೇರ ಹಣಾಹಣಿಗೆ ಬಹುತೇಕ ಸಮಯದಲ್ಲಿ ಅಡ್ಡಗಾಲಾಗುವುದೇ ಈ ಪ್ರಾದೇಶಿಕ ಪಕ್ಷಗಳು. ಹಲವು ಸಮಯದಲ್ಲಿ ಇಬ್ಬರ ಜಗಳ
ದಲ್ಲಿ ಮೂರನೆಯವರಿಗೆ ಲಾಭವಾಗಿರುವ ನಿದರ್ಶನಗಳೂ ಇವೆ. ಆದ್ದರಿಂದ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಕಾಮನ್ ವೈರಿಯಾಗಿರುವ ಪ್ರಾದೇಶಿಕ ಪಕ್ಷಗಳನ್ನು ಮುಗಿಸಬೇಕು ಎನ್ನುವ ಮನಸ್ಥಿತಿಯಲ್ಲಿವೆ. ಬಿಜೆಪಿಯ ಚುಕ್ಕಾಣಿಯನ್ನು ಮೋದಿ-ಶಾ ಜೋಡಿ ಹಿಡಿದ ಬಳಿಕ ಉತ್ತರ ಭಾರತದಲ್ಲಿ ಒಂದು ಹಂತದಲ್ಲಿ ಇದರಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಲಿಷ್ಠವಾಗಿದ್ದ ಸಮಾಜ ವಾದಿ, ಬಿಎಸ್‌ಪಿ ಪಕ್ಷಗಳನ್ನು ದುರ್ಬಲಗೊಳಿಸಿದ್ದಾರೆ. ಇನ್ನುಳಿದಂತೆ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದಲ್ಲಿ
ಪ್ರಾದೇಶಿಕ ಪಕ್ಷಗಳ ಅಸ್ತಿತ್ವವೇ ಇಲ್ಲದಂತೆ ಮಾಡಿದ್ದಾರೆ. ಈ ಮೂಲಕ ಯಾವುದೇ ಹೋರಾಟವಿದ್ದರೂ ಬಿಜೆಪಿ-ಕಾಂಗ್ರೆಸ್ ನಡುವೆಯೇ ಇರಬೇಕು ಎನ್ನುವ ರೀತಿಯಲ್ಲಿ ಆ ರಾಜ್ಯಗಳಲ್ಲಿ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್‌ಗೆ ನೇರವಾಗಿ ನೆರವಾಗದಿದ್ದರೂ, ಪರೋಕ್ಷವಾಗಿ ಸಹಾಯವಾಗುವುದು ನಿಶ್ಚಿತ.

ಬಿಜೆಪಿಯ ಈ ತಂತ್ರಕ್ಕೆ ದಕ್ಷಿಣ ಭಾರತದ ಮತದಾರರು ಈವರೆಗೆ ಮಣೆಹಾಕಿಲ್ಲ. ಈ ಹಂತದಲ್ಲಿಯೂ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿಯಲು ಬಿಟ್ಟಿಲ್ಲ. ಕರ್ನಾಟಕ, ತೆಲಂಗಾಣ ಹೊರತುಪಡಿಸಿದರೆ ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲಿಯೂ ಬಿಜೆಪಿ-ಕಾಂಗ್ರೆಸ್‌ಗೆ ಹೇಳಿಕೊಳ್ಳುವಂಥ ಸಂಘಟನೆಯಿಲ್ಲ. ಇದಕ್ಕೆ ಸಾಕ್ಷಿಯಾಗಿ ೨೦೧೯ರ ಲೋಕಸಭಾ ಚುನಾವಣೆ
ಕಾಣಿಸುತ್ತದೆ. ದಕ್ಷಿಣ ಭಾರತದ ೧೩೧ ಸೀಟುಗಳಲ್ಲಿ ಬಿಜೆಪಿ ಕೇವಲ ೩೦ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಕಾಂಗ್ರೆಸ್ ೨೮ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಇನ್ನುಳಿದ ೭೩ ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಪಾರುಪತ್ಯ ಸಾಧಿಸಿವೆ. ಬಿಜೆಪಿ ಪಡೆದಿರುವ ೩೦ ಸೀಟುಗಳ ಪೈಕಿ ಕರ್ನಾಟಕದಲ್ಲಿಯೇ ೨೫ ಸೀಟುಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಗೆದ್ದಿರುವ ೩೦ ಸ್ಥಾನಗಳ ಪೈಕಿ ೧೫ ಸ್ಥಾನವನ್ನು ಕೇರಳದಲ್ಲಿ ಪಡೆದುಕೊಂಡಿದೆ. ಇದನ್ನು ಬಿಟ್ಟರೆ ಇನ್ನುಳಿದ ರಾಜ್ಯಗಳಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳ ಸಾಧನೆ ಒಂದಂಕಿ ದಾಟಿಲ್ಲ ಎನ್ನುವುದು ಗಮನಾರ್ಹ.

ಈ ಕಾರಣಕ್ಕಾಗಿಯೇ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ದಕ್ಷಿಣ ಭಾರತದ ಪ್ರಮುಖ ರಾಜಕೀಯ ಪಕ್ಷಗಳು ಎನಿಸಿರುವ ಡಿಎಂಕೆ, ಜೆಡಿಎಸ್, ಅಣ್ಣಾ ಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಗಳನ್ನು ಸೆಳೆಯಲು ಪ್ರಯತ್ನಿಸಿದ್ದವು. ತಮಿಳುನಾಡಿನಲ್ಲಿ ಗಟ್ಟಿಯಾಗಿ ಬೇರೂರಿರುವ ಡಿಎಂಕೆಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ, ಕರ್ನಾಟಕದಲ್ಲಿ ಶೇ.೨೦ ರಷ್ಟು ವೋಟ್‌ಶೇರ್ ಹೊಂದಿರುವ ಜೆಡಿಎಸ್‌ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ತಮಿಳುನಾಡಿನ ಡಿಎಂಕೆ ಸಂಘಟನೆ ಯನ್ನು ವಿಘಟಿಸುವುದು ಸುಲಭದ ಮಾತಲ್ಲ.

ಆದರೆ ಬಿಜೆಪಿಯೊಂದಿಗೆ ಹೋಗಿರುವ ಜೆಡಿಎಸ್‌ನ ಅಸ್ತಿತ್ವ ಫಲಿತಾಂಶದ ಬಳಿಕ ಏನಾಗಲಿದೆ ಎನ್ನುವುದೇ ಅನೇಕರಲ್ಲಿರುವ ಕುತೂಹಲ. ೨೮ ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಈ ಮೂರು ಕ್ಷೇತ್ರದಲ್ಲಿ ಹಾಸನ, ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎನಿಸಿತ್ತು. ಬಿಜೆಪಿಯೊಂದಿಗೆ ಜೆಡಿಎಸ್ ಹೋಗಿದೆ ಎನ್ನುವ ಕಾರಣಕ್ಕೆ ಬಿಜೆಪಿ ಮತದಾರರೆಲ್ಲ ಜೆಡಿಎಸ್ ಪರ ನಿಂತಿಲ್ಲ. ಆದರೆ ಜೆಡಿಎಸ್‌ನ ಸಾಂಪ್ರದಾಯಿಕ ಮತದಾರರೆಲ್ಲ ಕಾಂಗ್ರೆಸ್‌ನತ್ತ ಒಲವು ತೋರಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರೊಂದಿಗೆ ಮತದಾನಕ್ಕೆ ಒಂದೆರಡು ದಿನಗಳ ಮೊದಲು ಹಾಸನದಲ್ಲಿ ಓಡಾಡಿದ ಪೆನ್‌ಡ್ರೈವ್‌ನಿಂದ ಈ ಬಾರಿ ಹಾಸನ ದಲ್ಲಿ ಜೆಡಿಎಸ್ ಗೆಲ್ಲುವುದು ಕಷ್ಟ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಮಂಡ್ಯದಿಂದ ಕುಮಾರಸ್ವಾಮಿ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಸ್ಪರ್ಧೆಗೆ ಇಳಿಸಿರುವ ಬಿಜೆಪಿ ನಾಯಕರಿಗೆ, ‘ಗೆಲುವು ಸುಲಭ’ವಲ್ಲ; ‘ಗೆದ್ದರೂ ನೆಕ್-ಟು-ನೆಕ್ ವಿನ್’ ಪರಿಸ್ಥಿತಿಯಿದೆ ಎನ್ನುವುದು ಅರಿ
ವಾಗಿದೆ. ಒಂದು ವೇಳೆ ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಸೋತು, ಕಾಂಗ್ರೆಸ್ ಗೆಲುವು ಸಾಧಿಸಿದರೆ ಅಲ್ಲಿಗೆ ಜೆಡಿಎಸ್ ಅಸ್ತಿತ್ವಕ್ಕೆ ‘ಧಕ್ಕೆ’ಯಾಗಲಿದೆ ಎನ್ನುವುದು ಸ್ಪಷ್ಟ.

ರಾಷ್ಟ್ರೀಯ ಪಕ್ಷಗಳ ಈ ದೂರಾಲೋಚನೆ ಬಗ್ಗೆ ಪ್ರಾದೇಶಿಕ ನಾಯಕರಿಗೆ ಗೊತ್ತಿಲ್ಲವೆಂದೇನಿಲ್ಲ. ಆದರೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆಯನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ಈವರೆಗೆ ಎರಡೂ ರಾಷ್ಟ್ರೀಯ ಪಕ್ಷಗಳು ಯಶಸ್ವಿಯಾಗಿವೆ. ಏಕೆಂದರೆ ಪ್ರಾದೇಶಿಕ ಪಕ್ಷಗಳಿಗೆ ಹೋಲಿಸಿದರೆ, ರಾಷ್ಟ್ರೀಯ ಪಕ್ಷಗಳು ‘ಹಣ’ ಬಲ, ನಾಯಕರ ಬಲ ಹಾಗೂ ಸಂಘಟನೆಯ ಬಲದಲ್ಲಿ ಒಂದು ಹೆಜ್ಜೆ ಮುಂದಿರುತ್ತವೆ. ಇವುಗಳನ್ನು ಬಳಸಿಕೊಂಡೇ ಪ್ರಾದೇಶಿಕ ಪಕ್ಷಗಳನ್ನು ಒಂದೊಂದಾಗಿಯೇ ‘ಕಬ್ಜ’ ಮಾಡುವ ಪ್ರಯತ್ನದಲ್ಲಿ ನೇರವಾಗಿ ಬಿಜೆಪಿ ನಾಯಕರು ಕಾಣಿಸುತ್ತಿದ್ದಾರೆ. ಆದರೆ ಇದನ್ನು ವಿರೋಧಿಸುವ ನೆಪದಲ್ಲಿಯೇ ಕಾಂಗ್ರೆಸ್ ಸಹ ಪ್ರಾದೇಶಿಕ ಪಕ್ಷಗಳ ‘ಶಕ್ತಿ’ಯನ್ನು ತನ್ನ ಬೂಸ್ಟರ್ ರೀತಿ ಬಳಸಿಕೊಳ್ಳುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ರಾಷ್ಟ್ರೀಯ ಪಕ್ಷಗಳ ಈ ನಡೆಯಿಂದ ಕಾಂಗ್ರೆಸ್-ಬಿಜೆಪಿಗೆ ನೇರವಾಗಿ ಲಾಭವಾಗುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇದರಿಂದ ನಷ್ಟವಾಗುವುದು ರಾಜ್ಯದ ಪ್ರಜೆಗಳಿಗೆ. ಭಾರತ ದಂಥ ಪ್ರಜಾಪ್ರಭುತ್ವದ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳೆಷ್ಟು ಮುಖ್ಯವೋ, ರಾಜ್ಯಗಳ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷಗಳೂ ಅಷ್ಟೇ ಪ್ರಮುಖ ಎನಿಸುತ್ತವೆ. ರಾಜ್ಯದ ಹಿತದೃಷ್ಟಿಯ ವಿಷಯದಲ್ಲಿ ರಾಷ್ಟ್ರೀಯ ಪಕ್ಷಗಳು ‘ತಟಸ್ಥ’ ನಿಲುವು ತಾಳಿದಾಗ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ‘ಉಳಿವು’ ಅನಿವಾರ್ಯ ಹಾಗೂ ಅತ್ಯವಶ್ಯಕ. ಆದರೆ ಪ್ರಾದೇಶಿಕ ಪಕ್ಷಗಳು ಸುಭದ್ರವಾಗಿದ್ದಷ್ಟೂ ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ‘ಹ್ಯಾಂಡಲ್’ ಮಾಡುವುದು ಸವಾಲು.

ಸ್ಪಷ್ಟ ಬಹುಮತವಿಲ್ಲದೆ, ಮೈತ್ರಿಕೂಟದ ‘ಬಲ’ದೊಂದಿಗೆ ಅಧಿಕಾರಕ್ಕೆ ಬಂದರೆ ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಹಲವು ಬಾರಿ ಅನುಭವಿಸಿವೆ. ಈ ಕಾರಣಕ್ಕಾಗಿಯೇ ಹಂತ-ಹಂತವಾಗಿ ರಾಜ್ಯಗಳ ಧ್ವನಿಯಾಗುವ ಪ್ರಾದೇಶಿಕ ಪಕ್ಷಗಳನ್ನು ‘ಬೆನ್ನುಮೂಳೆಯಿಲ್ಲ ದಂತೆ’ ಮಾಡುವ ಪ್ರಯತ್ನವನ್ನು ರಾಷ್ಟ್ರೀಯ ಪಕ್ಷಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಅಸ್ತಿತ್ವದ ಹುಡುಕಾಟದಲ್ಲಿರುವ ಪ್ರಾದೇಶಿಕ ಪಕ್ಷಗಳು ಈ ‘ಒತ್ತಡ’ದ ಮೈತ್ರಿಗಳಿಂದ ಹೊರಬಂದು ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅನಿವಾರ್ಯತೆಯಿದೆ.