Tuesday, 22nd October 2024

R T VittalMurthy Column: ಕುಮಾರಣ್ಣ ಒಪ್ಪಿದ್ರೂ, ಯೋಗಿ ಒಪ್ತಿಲ್ಲ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಮೊನ್ನೆ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಗ್ಗೆ ನಡ್ಡಾ ಪ್ರಸ್ತಾಪಿಸಿದ್ದಾರೆ.

“ಕುಮಾರಸ್ವಾಮೀಜಿ, ಚನ್ನಪಟ್ಟಣ ಕ್ಷೇತ್ರದ ಬೈ ಎಲೆಕ್ಷನ್ನಿಗೆ ಸಂಬಂಧಿಸಿದಂತೆ ನಾವು ವರದಿ ತರಿಸಿಕೊಂಡಿ
ದ್ದೇವೆ. ಎಷ್ಟೇ ಆದರೂ ಅದು ನಿಮ್ಮ ಕ್ಷೇತ್ರ. ಹೀಗಾಗಿ ನೀವು ನಿಮ್ಮ ಪುತ್ರನನ್ನು ಅಲ್ಲಿಂದ ಕಣಕ್ಕಿಳಿಸುತ್ತೀರೋ? ನಿಮ್ಮ ಕುಟುಂಬದ ಬೇರೊಬ್ಬರನ್ನು ಕಣಕ್ಕಿಳಿಸುತ್ತೀರೋ? ಅಥವಾ ನಿಮ್ಮ ಪಕ್ಷದ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸುತ್ತೀರೋ? ಅದು ನಿಮ್ಮಿಚ್ಛೆಗೆ ಸಂಬಂಧಿಸಿದ್ದು. ಅರ್ಥಾತ್, ನೀವು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿ ನಮಗೆ ಹೇಳಿದರೆ, ನಾವು ಬಿಜೆಪಿ ನಾಯಕರು ಅಲ್ಲಿಗೆ ಬಂದು ಪ್ರಚಾರ ಮಾಡಿ ಹೋಗುತ್ತೇವೆ.

ಹಾಗೊಂದು ವೇಳೆ ನೀವು ನಮಗೂ ಒಂದು ಆಪ್ಷನ್ ಕೊಡಲು ರೆಡಿ ಇರುವುದಾದರೆ ನಮ್ಮ ಪಕ್ಷದ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ಬಿಟ್ಟು ಕೊಡಲು ಸಾಧ್ಯವಾ? ಅಂತ ಯೋಚಿಸಿ. ಹಾಗಂತ ಯೋಗೇಶ್ವರ್ ಬಿಜೆಪಿಯ ಅಭ್ಯರ್ಥಿಯಾಗಬೇಕು ಅಂತಲ್ಲ. ಯಾಕೆಂದರೆ ಅದು ಜೆಡಿಎಸ್ ಕ್ಷೇತ್ರವಾದ್ದರಿಂದ ಬಿಟ್ಟುಕೊಡುವುದು
ನಿಮಗೆ ಕಷ್ಟವಾಗಬಹುದು. ಹೀಗಾಗಿ ಯೋಗೇಶ್ವರ್ ಅವರು ನಿಮ್ಮ ಪಕ್ಷದ ವತಿಯಿಂದಲೇ ಅಭ್ಯರ್ಥಿಯಾಗಲಿ.
ಫೈನಲಿ ಕಣಕ್ಕಿಳಿಯುವುದು ಎನ್‌ಡಿಎ ಅಭ್ಯರ್ಥಿಯಾದ್ದರಿಂದ ಯೋಗೇಶ್ವರ್ ನಿಮ್ಮ ಪಕ್ಷದ ಚಿಹ್ನೆಯಡಿ
ಸ್ಪರ್ಧಿಸಲು ಸಮಸ್ಯೆ ಇಲ್ಲ” ಅಂತ ನಡ್ಡಾ ಹೇಳಿದ್ದಾರೆ.

ಯಾವಾಗ ನಡ್ಡಾ ಈ ವಿಷಯ ಪ್ರಸ್ತಾಪಿಸಿದರೋ, ಕ್ಷಣಕಾಲ ಮೌನಿಯಾದ ಕುಮಾರಸ್ವಾಮಿ ತದನಂತರ, “ಸರ್, ಈ ಬಗ್ಗೆ ಯೋಚಿಸಲು ನನಗೆ ಎರಡು ದಿನ ಟೈಮು ಕೊಡಿ. ಯಾಕೆಂದರೆ ಯೋಗೇಶ್ವರ್ ಅವರಿಗೆ ಪಕ್ಷದ ಟಿಕೆಟ್
ಕೊಡುವ ಬಗ್ಗೆ ಮೊದಲು ನಮ್ಮ ಪಕ್ಷದ ಸ್ಥಳೀಯ ನಾಯಕರ ಜತೆ ಚರ್ಚಿಸಬೇಕು” ಎಂದಿದ್ದಾರೆ.

ಕುಮಾರಸ್ವಾಮಿಯವರ ಮಾತು ಕೇಳಿದ ನಡ್ಡಾ, “ಅದೂ ಸರಿ ಕುಮಾರಸ್ವಾಮೀಜಿ. ನೀವು ನಿಮ್ಮ ಪಕ್ಷದ ನಾಯಕರ ಜತೆ ಚರ್ಚಿಸಿ ಒಂದು ಪಾಸಿಟಿವ್ ಡಿಸಿಷನ್ನಿಗೆ ಬನ್ನಿ” ಎಂದಿದ್ದಾರೆ. ಇದಾದ ನಂತರ ಕುಮಾರಸ್ವಾಮಿ ಅವರು ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ ಮತ್ತು ವಿಷಯ ತಿಳಿದ ಅಮಿತ್ ಶಾ ಕೂಡಾ ಕುಮಾರಸ್ವಾಮಿ ಅವರ ಫ್ಲೆಕ್ಸಿಬಿಲಿಟಿಯ ಬಗ್ಗೆ ತಾರೀಫು ಮಾಡಿದರಂತೆ.

ಯೋಗೇಶ್ವರ್‌ಗೆ ಟಿಕೆಟ್ ಬೇಡಣ್ಣೋ ಅಂದ್ರು

ಹೀಗೆ ದಿಲ್ಲಿಯಲ್ಲಿ ನಡ್ಡಾ ಅವರ ಜತೆ ನಡೆದ ಮಾತುಕತೆಯ ನಂತರ ಸೀದಾ ಕರ್ನಾಟಕಕ್ಕೆ ಬಂದ ಕುಮಾರ ಸ್ವಾಮಿ ಅವರು ತಮ್ಮ ಪಕ್ಷದ ನಾಯಕರು ಮತ್ತು ಚನ್ನಪಟ್ಟಣದ ಸ್ಥಳೀಯ ನಾಯಕರ ಜತೆ ಸಮಾಲೋಚನೆ ನಡೆಸಿದ್ದಾರೆ.

ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಮತ್ತು ಅಶ್ವತ್ಥನಾರಾಯಣ ಅವರೆಲ್ಲ, ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಲು ಒತ್ತಾಯಿಸುತ್ತಿರುವುದು ಸೇರಿದಂತೆ ಬಿಜೆಪಿಯ ವರಿಷ್ಠರು ಹೇಳಿದ್ದನ್ನೆಲ್ಲ ಈ ಸಭೆಯ ಗಮನಕ್ಕೆ ತಂದಿದ್ದಾರೆ. ಕುಮಾರಸ್ವಾಮಿ ಅವರು ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಉರಿದುಬಿದ್ದ ಹಲ ನಾಯಕರು, “ಸರ್, ಯಾವ ಕಾರಣಕ್ಕಾಗಿ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡುತ್ತೀರಿ? ಅವರನ್ನು ನಂಬಿ ನಾವು ಟಿಕೆಟ್ ಕೊಡಲು ಸಾಧ್ಯವೇ? ಸಾಲದೆಂಬಂತೆ, ‘ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನು ಮುಗಿಸುತ್ತಿದ್ದಾರೆ’ ಅನ್ನುವಂಥ ಹೇಳಿಕೆಗಳನ್ನು ಅವರು ಕೊಡುತ್ತಿದ್ದಾರೆ.

ಹೀಗೆ ಇಷ್ಟ ಬಂದಂತೆ ಮಾತನಾಡುತ್ತಿರುವ ಯೋಗೇಶ್ವರ್ ಅವರಿಗೆ ಜೆಡಿಎಸ್ ಟಿಕೆಟ್ ಕೊಡುವುದು ಸರಿಯಲ್ಲ” ಅಂತ ಕಿರಿಕಿರಿ ಮಾಡಿದ್ದಾರೆ. ಆದರೆ ಹೀಗೆ ಕಿರಿಕಿರಿ ಮಾಡಿದವರನ್ನು ಸಮಾಧಾನಿಸಿದ ಕುಮಾರಸ್ವಾಮಿ ಅವರು, “ನೋಡಿ, ಯೋಗೇಶ್ವರ್ ಅವರ ವಿಷಯದಲ್ಲಿ ನಿಮಗೆ ಅಸಮಾಧಾನವಾಗಿರುವುದು ಸಹಜ. ಆದರೆ ಇವತ್ತು ನಾವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ನಮ್ಮನ್ನು ಎಷ್ಟು ವಿಶ್ವಾಸದಿಂದ ಕಾಣುತ್ತಿದ್ದಾರೆ ಎಂದರೆ, ಅದನ್ನು ನಾವು ಮರೆಯಲು ಸಾಧ್ಯವಿಲ್ಲ. ಇದೇ ರೀತಿ ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆ, ತೋರಿಸುತ್ತಿರುವ ಪ್ರೀತಿಯ ಮುಂದೆ ಚನ್ನಪಟ್ಟಣದ ಟಿಕೆಟ್ ನಮಗೇ ಇರಲಿ ಅಂತ ನಾವು ರಚ್ಚೆ ಹಿಡಿಯುವುದೂ ತರವಲ್ಲ. ಹೀಗಾಗಿ ನಿಮ್ಮ ಮನಸ್ಸಿನ ಭಾವನೆ ಏನಿದೆಯೋ ಅದನ್ನೂ ಯೋಗೇಶ್ವರ್ ಅವರ ಗಮನಕ್ಕೆ ತರೋಣ.

ಆಗಿದ್ದನ್ನು ಸರಿಪಡಿಸಿಕೊಂಡು ಹೋಗೋಣ ಅಂತ ಮನವರಿಕೆ ಮಾಡಿಕೊಟ್ಟು ಜೆಡಿಎಸ್ ಟಿಕೆಟ್ ಕೊಡೋಣ”
ಎಂದಿದ್ದಾರೆ. ಹೀಗೆ ಕುಮಾರಸ್ವಾಮಿ ಅವರಾಡಿದ ಮಾತಿನಿಂದ ಸಭೆಯಲ್ಲಿದ್ದವರಿಗೆ ಪೂರ್ತಿ ಸಮಾಧಾನ ವಾಗದಿದ್ದರೂ ದಿಲ್ಲಿ ರಾಜಕಾರಣದ ಒಳಸುಳಿಗಳೇನಿವೆಯೋ? ಅಂತ ಮೌನವಾಗಿದ್ದಾರೆ.

ಯೋಗೇಶ್ವರ್ ಉಲ್ಟಾ ಹೊಡೆದಿದ್ದೇಕೆ?

ಸಭೆಯ ನಂತರ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು, ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಹಲವು ನಾಯಕರ ಟೀಮನ್ನು ಯೋಗೇಶ್ವರ್ ಬಳಿ ಕಳಿಸಿದ್ದಾರೆ.

ಹೀಗೆ ಹೋದವರು, “ಯೋಗೇಶ್ವರ್ ಅವರೇ ನಿಮಗೆ ಟಿಕೆಟ್ ಕೊಡುವ ವಿಷಯದಲ್ಲಿ ನಮಗೆ ವಿರೋಧವೇನಿಲ್ಲ. ಆದರೆ ಕುಮಾರಸ್ವಾಮಿಯವರ ಬಗ್ಗೆ ನೀವು ಕೊಡುತ್ತಿರುವ ಸ್ಟೇಟ್ ಮೆಂಟುಗಳಿಂದ ನಮಗೆ ಬೇಸರವಾಗಿದೆ. ಇಷ್ಟಾದರೂ ಎಲ್ಲವನ್ನೂ ಮರೆತು ಟಿಕೆಟ್ ಕೊಡಲು ಕುಮಾರಸ್ವಾಮಿಯವರು ಒಪ್ಪಿದ್ದಾರೆ. ನೀವೂ ನಿಮ್ಮ ನಿಲುವುಗಳನ್ನು ಬದಲಿಸಿ ಹೊಂದಿಕೊಂಡು ಹೋಗಿ. ನಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ” ಎಂದಿzರೆ.
ಅವರು ಹೀಗೆ ಹೇಳುತ್ತಿದ್ದಂತೆಯೇ ಉಲ್ಟಾ ಹೊಡೆದ ಯೋಗೇಶ್ವರ್ ಅವರು, “ನಾನು ಜೆಡಿಎಸ್ ಟಿಕೆಟ್ ಪಡೆದು
ಸ್ಪರ್ಧಿಸುವುದಾ? ನೋ ಚಾ. ನಮ್ಮದು ರಾಷ್ಟ್ರೀಯ ಪಕ್ಷಾರೀ. ನಾನೇಕೆ ರಾಷ್ಟ್ರೀಯ ಪಕ್ಷ ತೊರೆದು ಜೆಡಿಎಸ್
ಸೇರಲಿ? ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಲು ಶ್ರಮಿಸಿದವನು ನಾನು. ಇವತ್ತು ಮೋದಿಯವರು ಪ್ರಧಾನಿ ಯಾಗಲು ಕರ್ನಾಟಕ ಕೊಡುಗೆ ಕೊಟ್ಟಿದೆ ಎಂದರೆ ಇಲ್ಲಿ ಬಿಜೆಪಿ ಬಲಿಷ್ಠವಾಗಿದೆ ಅಂತಲೇ ಅರ್ಥ. ಹೀಗಾಗಿ ಯಾವ ಕಾರಣಕ್ಕೂ ನಾನು ಬಿಜೆಪಿ ತೊರೆಯುವುದಿಲ್ಲ. ಜೆಡಿಎಸ್ ಸೇರುವುದಿಲ್ಲ.

ಕೊಡುವುದಿದ್ದರೆ ನೀವು ಬಿಜೆಪಿಗೇ ಸೀಟು ಬಿಟ್ಟು ಕೊಡಬೇಕೇ ವಿನಾ ಬೇರೆ ದಾರಿಯೇ ಇಲ್ಲ” ಎಂದಿದ್ದಾರೆ. ಹೀಗೆ ಯೋಗೇಶ್ವರ್ ಔಟ್‌ರೈಟಾಗಿ ಉಲ್ಟಾ ಹೊಡೆದ ವಿಷಯ ಕುಮಾರಸ್ವಾಮಿ ಅವರಿಗೆ ತಲುಪಿದೆ. ಅಷ್ಟೇ ಅಲ್ಲ,
ಬೇಸತ್ತ ಅವರು ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಆರ್.ಅಶೋಕ್ ಅವರಿಗೆ ವಿವರಿಸಿದ್ದಾರೆ. ಯಾವಾಗ ಕುಮಾರಸ್ವಾಮಿ ಅವರು ಈ ವಿಷಯ ತಿಳಿಸಿದರೋ, ಆಗ ಬೆಂಗಳೂರಿನ ಜಾಲಹಳ್ಳಿಯಲ್ಲಿ ಸಭೆ
ನಡೆಸಿದ ಬಿಜೆಪಿಯ ಹಲ ನಾಯಕರು, ಈ ವಿಷಯದಲ್ಲಿ ಇನ್ನು ಮಧ್ಯೆ ಪ್ರವೇಶಿಸುವುದು ಬೇಡ ಎಂಬ ನಿರ್ಧಾರಕ್ಕೆ
ಬಂದಿದ್ದಾರೆ.

ಮೂಲಗಳ ಪ್ರಕಾರ, ಭಾನುವಾರ ಬೆಳಗ್ಗೆ ಕುಮಾರಸ್ವಾಮಿ ಅವರಿಗೆ ಫೋನು ಮಾಡಿದ ಮಾಜಿ ಮುಖ್ಯಮಂತ್ರಿ
ಯಡಿಯೂರಪ್ಪ ಅವರು, “ಕುಮಾರಸ್ವಾಮಿ ಅವರೇ, ನೀವು ಯಾರಿಗೆ ಬೇಕೋ ಅವರಿಗೆ ಟಿಕೆಟ್ ಕೊಡಿ. ಈ
ವಿಷಯದಲ್ಲಿ ಇನ್ನು ತುಂಬ ಯೋಚಿಸಬೇಡಿ” ಎಂದಿzರಂತೆ. ಹೀಗಾಗಿ ಚನ್ನಪಟ್ಟಣದಲ್ಲಿ ಜಯಮುತ್ತು ಕಣಕ್ಕಿಳಿ
ಯಬೇಕೋ? ಇನ್ನೊಬ್ಬ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ? ಅಂತ ಕುಮಾರಸ್ವಾಮಿ ಯೋಚಿಸು ತ್ತಿದ್ದಾರೆ.

ಫೀಲ್ಡಿಗೆ ಇಳೀತಾರಾ ಸುರೇಶ್?
ಇನ್ನು ಚನ್ನಪಟ್ಟಣದ ಕಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಇಳಿಯುವ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದರೆ ಡಿ.ಕೆ.ಸುರೇಶ್ ಫೀಲ್ಡಿಗಿಳಿಯುವುದು ಅನುಮಾನ. ಕಾರಣ? ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಬಲ ಕ್ರೋಡೀಕರಣಗೊಂಡರೆ ಕಾಂಗ್ರೆಸ್ ಗೆಲ್ಲುವುದು ಕಷ್ಟ. ಕ್ಷೇತ್ರದಲ್ಲಿ ಜೆಡಿಎಸ್‌ಗಿರುವ ಸಾಲಿಡ್ಡು ಬೆಂಬಲ, ಯೋಗೇಶ್ವರ್ ಅವರ ಹಿಂದಿರುವ ೪೫ ಸಾವಿರ ಪ್ಲಸ್ ಮತಗಳು ಮೈತ್ರಿಕೂಟದ ಗೆಲುವನ್ನು ಸುಲಭಗೊಳಿ
ಸಲಿವೆ.

ಆದರೆ ಈಗಿರುವ ಮಾಹಿತಿಗಳ ಪ್ರಕಾರ, ಯೋಗೇಶ್ವರ್ ಮೈತ್ರಿಕೂಟದ ಅಭ್ಯರ್ಥಿಯಾಗುವುದಿಲ್ಲ. ಹೀಗಾಗಿ
ಜೆಡಿಎಸ್ ವತಿಯಿಂದ ಮೈತ್ರಿಕೂಟದ ಅಭ್ಯರ್ಥಿ ಕಣಕ್ಕಿಳಿದರೂ ಯೋಗೇಶ್ವರ್ ಬಂಡಾಯ ಏಳುವ ಸಾಧ್ಯತೆ ಜಾಸ್ತಿ.
ಒಂದು ವೇಳೆ ಹೀಗೇನಾದರೂ ಆಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಡಿ.ಕೆ.ಸುರೇಶ್ ಫೀಲ್ಡಿಗಿಳಿಯಲಿದ್ದಾರೆ. ‘ಡಿಕೆ’
ಕ್ಯಾಂಪಿಗೆ ತಲುಪಿರುವ ಮಾಹಿತಿಗಳ ಪ್ರಕಾರ, ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಕ್ಷೇತ್ರದ ಬಹುಸಂಖ್ಯಾತ ಒಕ್ಕಲಿಗರು
‘ಡಿಕೆಸು’ ಬೆಂಬಲಕ್ಕೆ ನಿಲ್ಲಲಿದ್ದಾರೆ.

ಕಾರಣ? ನಮ್ಮವರಾದ ಕುಮಾರಸ್ವಾಮಿ ಈಗಾಗಲೇ ದಿಲ್ಲಿ ತಲುಪಿ ಕೇಂದ್ರ ಮಂತ್ರಿ ಆಗಿದ್ದಾರೆ. ಹೀಗಾಗಿ ಇಲ್ಲಿ ನಮ್ಮವರೇ ಆದ ಡಿಕೆಸು ಗೆಲ್ಲಲಿ. ಎಷ್ಟೇ ಆದರೂ ಡಿಕೆಸು ಕೆಲಸಗಾರ ಎಂಬುದು ಬಹುಸಂಖ್ಯಾತರ ಭಾವನೆ.
ಈ ಮಧ್ಯೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ ವಿರುದ್ದ ಗೆಲ್ಲುವ ಅಭ್ಯರ್ಥಿ ಅಂತ
ಮುಸ್ಲಿಮರು ಕುಮಾರಸ್ವಾಮಿ ಜತೆ ನಿಂತಿದ್ದರು. ಆದರೆ ಈ ಸಲ ಹಾಗಲ್ಲ. ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯ ವಿರುದ್ದ ಕಾಂಗ್ರೆಸ್ ಗೆಲ್ಲಲಿ ಅಂತ ಅವರು ಬಯಸುತ್ತಾರೆ. ಹೀಗಾಗಿ ಒಕ್ಕಲಿಗ, ಮುಸ್ಲಿಂ, ಪರಿಶಿಷ್ಟರ ಮತಗಳನ್ನು ಕ್ರೋಡೀಕರಿಸಿ ಗೆಲ್ಲಬಹುದು ಎಂಬುದು ಡಿಕೆ ಕ್ಯಾಂಪಿಗಿರುವ ಮಾಹಿತಿ.

ಆದರೆ ಇದು ಎಷ್ಟರ ಮಟ್ಟಿಗೆ ವರ್ಕ್‌ಔಟ್ ಆಗುತ್ತದೆ ಅಂತ ಡಿಕೆ ಕ್ಯಾಂಪು ಈ ಕ್ಷಣಕ್ಕೂ ಲೆಕ್ಕ ಹಾಕುತ್ತಿದೆ. ಮೈತ್ರಿಕೂಟದ ಅಭ್ಯರ್ಥಿ ಯಾರು ಎಂಬುದರ ಆಧಾರದ ಮೇಲೆ ಅದು ಮುಂದಿನ ಹೆಜ್ಜೆ ಇಡಲಿದೆ.

ಬೊಮ್ಮಾಯಿ ಪ್ಲೇಕಾರ್ಡ್ ಹೀಗಿದೆ
ಈ ಮಧ್ಯೆ ಉಪಚುನಾವಣೆ ನಡೆಯುವ ಶಿಗ್ಗಾಂವಿ ಕ್ಷೇತ್ರದ ರಾಜಕಾರಣ ಕುತೂಹಲ ಮೂಡಿಸುವಂತಿದೆ. ಕಾರಣ? ಈ
ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿಯಲಿzರೆ. ಯಾವಾಗ ಭರತ್ ಬೊಮ್ಮಾಯಿ ಸ್ಪರ್ಧಿಸುವುದು ನಿಕ್ಕಿ ಆಯಿತೋ, ಅದಾದ ನಂತರ ಕಾಂಗ್ರೆಸ್ ಪಾಳಯದಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಈ ಚರ್ಚೆಯ ಪ್ರಕಾರ, ಶಿಗ್ಗಾಂವಿಯಲ್ಲಿ ಭರತ್
ಬೊಮ್ಮಾಯಿ ವಿರುದ್ಧ ಗೆಲ್ಲಬೇಕೆಂದಿದ್ದರೆ ಪಕ್ಷವು ಪಂಚಮಸಾಲಿ ಲಿಂಗಾಯತರೊಬ್ಬರಿಗೆ ಟಿಕೆಟ್ ಕೊಡಬೇಕು. ಇಲ್ಲ, ಭರತ್ ಬೊಮ್ಮಾಯಿ ಗೆಲ್ಲಬೇಕು ಅಂತಿದ್ದರೆ ಮುಸ್ಲಿಮರೊಬ್ಬರಿಗೆ ಟಿಕೆಟ್ ಕೊಡಬೇಕು.

ಕಾರಣ? ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಲಿಂಗಾಯತರಿದ್ದಾರೆ. ಹೀಗಾಗಿ ಈ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ 40 ಸಾವಿರಷ್ಟಿರುವ ಮುಸ್ಲಿಮರು, 35 ಸಾವಿರದಷ್ಟಿರುವ ಕುರುಬರು ಮತ್ತು ಗಣನೀಯ ಸಂಖ್ಯೆಯಲ್ಲಿರುವ ಪರಿಶಿಷ್ಟರ ಮತಗಳನ್ನು ಕನ್‌ಸಾಲಿಡೇಟ್ ಮಾಡಿ ಕಾಂಗ್ರೆಸ್ ಗೆಲ್ಲಬಹುದು. ಹಾಗೆ ಮಾಡದೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಪಂಚಮಸಾಲಿ ಲಿಂಗಾಯತರ ಮತಗಳು ಸಾಲಿಡ್ಡಾಗಿ ಭರತ್ ಬೊಮ್ಮಾಯಿ ಪಾಲಾಗುತ್ತವೆ. ಹೀಗೆ ಪಂಚಮಸಾಲಿ ಲಿಂಗಾಯತರ ಸಾಲಿಡ್ಡು ಬೆಂಬಲ ಸಿಕ್ಕರೆ, ಸಾದ ಲಿಂಗಾಯತರು, ಪರಿಶಿಷ್ಟರ ಪೈಕಿ ಎಡಗೈ ಮತಗಳು ಸೇರಿದರೆ ಭರತ್ ಬೊಮ್ಮಾಯಿ ಗೆಲುವು ಸುಲಭವಾಗುತ್ತದೆ.

ಈ ಹಿಂದೆ ಬಸವರಾಜ ಬೊಮ್ಮಾಯಿ ಸತತವಾಗಿ ಗೆಲ್ಲಲು ಈ ‘ಅವಲಕ್ಕಿ ಪವಲಕ್ಕಿ ಕಾಂಚನ ಮಿಣಮಿಣ’ ಪಾಲಿಟಿಕ್ಸೇ
ಕಾರಣ. ಹೀಗಾಗಿ ಈ ಸಲ ಪಂಚಮಸಾಲಿ ಲಿಂಗಾಯತರಿಗೆ ಪಕ್ಷದ ಟಿಕೆಟ್ ಸಿಕ್ಕದೆ ಹೋದರೆ ಯಥಾಪ್ರಕಾರ ಬಸವರಾಜ ಬೊಮ್ಮಾಯಿ ಅವರ ಅವಲಕ್ಕಿ ಪವಲಕ್ಕಿ ಕಾಂಚನ ಮಿಣಮಿಣ ಪಾಲಿಟಿಕ್ಸ್ ಯಶಸ್ವಿಯಾಗುತ್ತದೆ. ಭರತ್‌ ಬೊಮ್ಮಾಯಿ ಗೆಲುವು ಸುಲಭವಾಗುತ್ತದೆ ಎಂಬುದು ಕೈ ಪಾಳಯದ ಗುಸುಗುಸು. ಮುಂದೇನಾಗುತ್ತದೋ?

ಇದನ್ನೂ ಓದಿ: R T Vittalmurthy Column: ವಿಜಯೇಂದ್ರರನ್ನು ಆವರಿಸುತ್ತಿದೆ ಪದ್ಮವ್ಯೂಹ