Saturday, 21st September 2024

R T Vittalmurthy Column: ಬಿಜೆಪಿಯಲ್ಲಿ ಬಾಲಭವನ V/S ವೃದ್ದಾಶ್ರಮ

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ಕಳೆದ ವಾರ ದಿಲ್ಲಿಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿದ ಅವರು ಪ್ರಸಕ್ತ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದಾರೆ. ‘ಇವತ್ತು ರಾಜ್ಯ ಬಿಜೆಪಿಯಲ್ಲಿ ಯಾವುದೂ ಸರಿ ಇಲ್ಲ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರದೇ ಒಂದು ಬಣವಾದರೆ, ಯತ್ನಾಳ್, ಸಿ.ಟಿ.ರವಿ ಸೇರಿದಂತೆ ಹಲವು ಹಿರಿಯ ನಾಯಕರದೇ ಮತ್ತೊಂದು ಬಣವಾಗಿದೆ. ಈ ಬಣಗಳು ಮುನಿಸು ಮರೆತು ಒಂದಾಗದಿದ್ದರೆ ಪರಿಸ್ಥಿತಿ ಕಷ್ಟವಾಗಬಹುದು’ ಎಂದು ಈ ನಾಯಕರು ವಿವರಿಸಿದಾಗ ನಡ್ಡಾ ಅವರು ‘ನಿಮ್ಮ ಮಾತು ನಿಜ’ ಎಂದಿದ್ದಾರೆ.

ಆಗ ಮಾತು ಮುಂದುವರಿಸಿದ ಈ ನಾಯಕರು, ‘ದಿನ ಕಳೆದಂತೆ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ವಿಜಯೇಂದ್ರ
ಅವರ ಬಣವನ್ನು ಇವತ್ತು ಹಿರಿಯ ನಾಯಕರು ‘ಬಾಲಭವನ’ ಅಂತ ಕರೆದರೆ, ಹಿರಿಯರ ಬಣವನ್ನು ವಿಜಯೇಂದ್ರ ಅವರ ಬೆಂಬಲಿಗರು ‘ವೃದ್ಧಾಶ್ರಮ’ ಅಂತ ಕರೆಯುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ಕಷ್ಟ’ ಎಂದಾಗ ನಡ್ಡಾ ಬೇಸರ ಮಾಡಿಕೊಂಡರಂತೆ. ಹೀಗಾಗಿ ಪ್ರತಿಕ್ರಿಯಿಸಿದ ಅವರು, ‘ನಾವು ವಿಜಯೇಂದ್ರ ಅವರಿಗೂ ಹೇಳಿದ್ದೇವೆ. ಯತ್ನಾಳ್ ಸೇರಿದಂತೆ ಹಿರಿಯ ನಾಯಕರಿಗೂ ಹೇಳಿದ್ದೇವೆ. ನೋಡೋಣ. ಇನ್ನೂ ಕೆಲವು ಸುತ್ತಿನ ಮಾತುಕತೆ ನಡೆಸೋಣ’ ಎಂದಿದ್ದಾರೆ.

ಇದನ್ನೂ ಓದಿ: R T Vittalmurthy Column: ಮೌನವಾಗಿರಲು ನಿರ್ಧರಿಸಿದ ಯತ್ನಾಳ್‌

ಹಾಗೆಯೇ ಮುಂದುವರಿದು ಮಾತನಾಡಿದ ನಡ್ಡಾ, ‘ಇವತ್ತು ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ನಾವು
ಎನ್‌ಕ್ಯಾಶ್ ಮಾಡಿಕೊಳ್ಳಬೇಕು ಎಂದರೆ ಮೊದಲು ಒಗ್ಗಟ್ಟಿನಿಂದಿರಬೇಕು. ಅಂದ ಹಾಗೆ, ನಮಗಿರುವ ಮಾಹಿತಿಯ
ಪ್ರಕಾರ, ಸಿದ್ದರಾಮಯ್ಯ ಸಿಎಂ ಆಗಿರುವವರೆಗೆ ಸರಕಾರ ಉಳಿದಿರುತ್ತದೆ. ಯಾವಾಗ ಅವರು ಕೆಳಗಿಳಿದು ಬೇರೆಯ ವರು ಬರುತ್ತಾರೋ, ಆಗ ಅದು ಅಸ್ಥಿರವಾಗುತ್ತದೆ. ಹೀಗೆ ಅಸ್ಥಿರಗೊಳ್ಳುವ ಸರಕಾರ ತುಂಬ ಕಾಲ ಉಳಿಯುವುದಿಲ್ಲ. ನನಗನ್ನಿಸುವ ಪ್ರಕಾರ, ಇನ್ನೊಂದು ವರ್ಷದಲ್ಲಿ ಕರ್ನಾಟಕವು ಮಧ್ಯಂತರ ಚುನಾವಣೆಗೆ ಸಜ್ಜಾಗಬೇಕಾಗುತ್ತದೆ. ಹೀಗಾಗಿಯೇ ಬಿಜೆಪಿಯ ರಾಜ್ಯ ಘಟಕವು ಒಮ್ಮತದ ಹಳಿಯ ಮೇಲೆ ನಿಲ್ಲಲಿ ಅಂತ ನಾವು ಬಯಸುತ್ತಿರುವುದು’ ಎಂದರಂತೆ.

ಫೇಲಾಯಿತಾ ಆರೆಸ್ಸೆಸ್ ಸಂಧಾನ?
ಅಂದ ಹಾಗೆ, ದಿಲ್ಲಿಯಲ್ಲಿ ನಡೆದ ಈ ಘಟನೆಯ ನಂತರ ಕರ್ನಾಟಕದ ಆರೆಸ್ಸೆಸ್ ನಾಯಕರು ಬೆಂಗಳೂರಿನ ಸದಾಶಿವನಗರದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಬಿಜೆಪಿಯ ನಾಯಕರೊಂದಿಗೆ ನಡೆಸಿದ ಈ ಸಭೆಯಲ್ಲಿ ಆರೆಸ್ಸೆಸ್
ನಾಯಕರು ಹಂಸಕ್ಷೀರ ನ್ಯಾಯ ಮಾಡಿದ್ದಾರಾದರೂ ಅದು ನಿರೀಕ್ಷಿತ ಫಲ ನೀಡಿಲ್ಲ. ಅಂದ ಹಾಗೆ, ಈ ಸಭೆಯಲ್ಲಿ
ಭಾಗವಹಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ ಸೇರಿದಂತೆ ಹಲವು ನಾಯಕರು ವಿಜಯೇಂದ್ರ
ವಿರುದ್ಧ ಮುಗಿಬಿದ್ದಿದ್ದಾರೆ.

ಈ ಪೈಕಿ ಯತ್ನಾಳ್ ಅವರು, ‘ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಅವರ ಮಗನಿಗೆ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಪುನಃ ಜೋತು ಬಿದ್ದಂತಾಗಿದೆ. ಪರ್ಯಾಯ ನಾಯಕತ್ವವನ್ನು ಬೆಳೆಸದೆ ಯಡಿಯೂರಪ್ಪ ಅವರ ಫ್ಯಾಮಿಲಿಯನ್ನು ನೆಚ್ಚಿಕೊಂಡು ಎಷ್ಟು ಕಾಲ ಮುಂದುವರಿಯಲು ಸಾಧ್ಯ? ಈಗ ನೋಡಿದರೆ ವಿಜಯೇಂದ್ರ ತಮ್ಮದೇ ಗುಂಪು ಕಟ್ಟಿಕೊಂಡಿದ್ದಾರೆ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಅಬ್ಬರಿಸಿದ್ದಾರೆ.

ಈ ಮಧ್ಯೆ ಮಾತನಾಡಿದ ಸಿ.ಟಿ.ರವಿ ಅವರು, ‘ಅಲ್ರೀ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ‘ನಿಮ್ಮಪ್ಪ ನಾವು
ಹಾಕಿದ ಭಿಕ್ಷೆಯಿಂದ ಸೇಫಾಗಿದ್ದಾರೆ’ ಎಂಬರ್ಥದಲ್ಲಿ ಮಾತನಾಡುತ್ತಾರೆ. ಅಧ್ಯಕ್ಷರು ಅದಕ್ಕೆ ರಿಯಾಕ್ಷನ್ ಕೊಡು ವುದಿಲ್ಲ. ಇದು ಹೊಂದಾಣಿಕೆ ಅಲ್ಲವೇ? ನೀವು ಹೊಂದಾಣಿಕೆ ರಾಜಕೀಯ ಮಾಡಬೇಕು, ನಾವು ಹೋರಾಡಬೇಕು ಅಂದರೆ ಹೇಗೆ?’ ಅಂತ ಗುಡುಗಿದ್ದಾರೆ. ಇನ್ನು ಬಿಜೆಪಿಯ ‘ಯಂಗ್ ಟರ್ಕ್’ ನಾಯಕರೊಬ್ಬರು, ‘ನಾನು, ಸಿ.ಟಿ.ರವಿ, ಯತ್ನಾಳ್ ಬೆಳೆಯಲು ಸಂಘ ಕಾರಣವೇ ಹೊರತು ಕುಟುಂಬವಲ್ಲ’ ಎಂದು ಚುಚ್ಚಿದ್ದಾರೆ.

ಹೀಗೆ ಯಡಿಯೂರಪ್ಪ ವಿರೋಧಿ ಕ್ಯಾಂಪಿನ ನಾಯಕರು ಗುಡುಗುತ್ತಿರುವುದನ್ನು ನೋಡಿದ ಆರೆಸ್ಸೆಸ್ ನಾಯಕರ
ಪೈಕಿ ಒಬ್ಬರು, ವಿಜಯೇಂದ್ರ ಅವರಿಗೆ ಚಾರ್ಜ್ ಮಾಡಿದ್ದಾರೆ. ‘ಅಧ್ಯಕ್ಷರು ಅಂದಾಕ್ಷಣ ಹಿರಿಯರನ್ನು ವಿಶ್ವಾಸಕ್ಕೆ
ತೆಗೆದುಕೊಳ್ಳಬಾರದು ಅಂತಲ್ಲ. ಇನ್ ಫ್ಯಾಕ್ಟ್‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ನಾಯಕರ ಗುಣ’
ಎಂದಿದ್ದಾರೆ. ಇದರ ಬೆನ್ನ ಯಡಿಯೂರಪ್ಪ ವಿರೋಧಿ ಕ್ಯಾಂಪಿಗೂ ಟಕ್ಕರ್ ಕೊಟ್ಟು, ‘ಯಡಿಯೂರಪ್ಪ ಅವರನ್ನು
ನೆಚ್ಚಿಕೊಂಡು ರಾಜಕಾರಣ ಮಾಡುತ್ತೀರಿ ಎಂಬುದಕ್ಕಿಂತ ಯಡಿಯೂರಪ್ಪ ಅವರಿಲ್ಲದಾಗ ಪಕ್ಷಕ್ಕೆ ಏನಾಯಿತು
ಎಂಬುದು ಮುಖ್ಯ. 2013ರಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದರು.

ಆಗ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಸಾಧ್ಯವಾಯಿತೇ? ಮುಂದೆ ಮತ್ತೆ ಯಡಿಯೂರಪ್ಪ ಅವರು ಪಕ್ಷಕ್ಕೆ ಮರಳಿದ ನಂತರ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಹೀಗಾಗಿ ಈ ವಿಷಯದಲ್ಲಿ ಹೆಚ್ಚು ಚರ್ಚಿಸುವ ಬದಲು ಪಕ್ಷವು ಮರಳಿ ಅಧಿಕಾರಕ್ಕೆ ಬರುವುದು ಹೇಗೆ ಅಂತ ಯೋಚಿಸಬೇಕು. ಆದ್ದರಿಂದ ಎಲ್ಲರೂ ನಿಮ್ಮ ನಿಮ್ಮ ಭಿನ್ನಾಭಿ ಪ್ರಾಯ ಮರೆತು ಒಮ್ಮತದಿಂದ ಹೋಗಿ’ ಎಂದಿದ್ದಾರೆ.

ವಿಜಯೇಂದ್ರ ಅವರಿಗೆಷ್ಟು ಮಾರ್ಕ್ಸು ಗೊತ್ತಾ? ಹೀಗೇ ಮುಂದುವರಿದ ಈ ನಾಯಕರ ಮಾತು ಮತ್ತೊಂದು
ಆಂಗಲ್ಲಿಗೆ ತಿರುಗಿದೆ. ‘ನೋಡ್ರೀ, ಇವತ್ತು ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಮಗ ಅಂತ ವರಿಷ್ಠರು
ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿಲ್ಲ. ಬದಲಿಗೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಅಂತ ಹಲವು ನಾಯಕರ
ಇಂಟರ್‌ವ್ಯೂ ಮಾಡಿzರೆ. ಅದರಲ್ಲಿ ವಿಜಯೇಂದ್ರ ಅವರಿಗೆ ನೈಂಟಿ ಪ್ಲಸ್ ಮಾರ್ಕ್ಸು ಬಂದಿದೆ. ಬೇರೆಯವರಿಗೆ
ಹೆಚ್ಚು ಮಾರ್ಕ್ಸು ಬಂದಿದ್ದರೆ ಅವರೇ ಅಧ್ಯಕ್ಷರಾಗುತ್ತಿದ್ದರು. ಅದರರ್ಥ ಬೇರೇನೂ ಅಲ್ಲ, ಯುವಕರಾದರೂ ರಾಜಕಾರಣದಲ್ಲಿ ವಿಜಯೇಂದ್ರ ಅವರಿಗೆ ಹೆಚ್ಚು ಅನುಭವವಿದೆ ಅಂತಲ್ಲವೇ? ಇವತ್ತು ಪಕ್ಷವನ್ನು ನಡೆಸಲು ಹಲವು
ಕ್ವಾಲಿಟಿಗಳಿರಬೇಕು. ಶಕ್ತಿ ಇರಬೇಕು.

ಅದು ತಮಗಿದೆ ಅಂತ ವರಿಷ್ಠರಿಗೆ ವಿಜಯೇಂದ್ರ ಕನ್ವಿನ್ಸು ಮಾಡಿದ್ದಾರೆ. ಅದಕ್ಕಾಗಿ ಅಧ್ಯಕ್ಷರಾಗಿದ್ದಾರೆ. ಅಂದ ಹಾಗೆ, ಕಳೆದ ವರ್ಷ ವಿಧಾನಸಭೆ ಚುನಾವಣೆ ನಡೆದಾಗ ಪ್ರಮುಖ ನಾಯಕರೆಲ್ಲರಿಗೆ ಐದಾರು ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ಕೊಡಲಾಗಿತ್ತು. ಎಷ್ಟು ಜನ ಈ ಜವಾಬ್ದಾರಿ ನಿಭಾಯಿಸಿದ್ದಾರೆ? ಹೋಗಲಿ, ಮೊನ್ನೆ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಮಗೆ ಹೀನಾಯ ಸೋಲಾಯಿತು. ಆ ಭಾಗದ ನಮ್ಮ ನಾಯಕರು ಏಕೆ ಸಕ್ಸಸ್ ಆಗಲಿಲ್ಲ? ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕ್ಯಾಂಡಿಡೇಟ್ ಗೆದ್ದರೂ ವಿಜಯಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಪರ್ಫಾರ್ಮೆನ್ಸ್ ಯಾಕೆ ಡಯಿತು? ಹೀಗೇ‌ ನೋಡುತ್ತಾ ಹೋದರೆ ಎಲ್ಲ ಕಡೆಗಳಿಂದಲೂ ತಪ್ಪುಗಳಾಗಿವೆ.

ಹಾಗಂತ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೂತರೆ ಪಕ್ಷ ಗಟ್ಟಿಯಾಗುವುದು ಹೇಗೆ? ನಿಜ,ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ತಪ್ಪು. ಅವರ ನಡೆಯನ್ನು ನಾವು ಒಪ್ಪುವು ದಿಲ್ಲ. ಇನ್ನು ಮುಂದೆ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು. ಅದೇ ರೀತಿ, ಉಳಿದ ವರು ವೈಮನಸ್ಯ ಮರೆತು ಅವರಿಗೆ ಸಹಕಾರ ನೀಡಬೇಕು. ಒಂದು ವೇಳೆ, ಯಾರೇ ಆಗಲಿ ಇದನ್ನು ಉಲ್ಲಂಘಿಸಿ ದರೆ ಶಿಸ್ತುಕ್ರಮ ಅನಿವಾರ್ಯ’ ಎಂದಿದ್ದಾರೆ.

ಯಾವಾಗ ಬಿ.ಎಲ್.ಸಂತೋಷ್ ಅವರ ಸಮ್ಮುಖದಲ್ಲಿಯೇ ಕೆಲ ನಾಯಕರು ಇಂಥ ಮಾತನಾಡಿದರೋ, ಆಗ ಯಡಿಯೂರಪ್ಪ ವಿರೋಧಿ ಕ್ಯಾಂಪಿನ ನಾಯಕರಿಗೆ ಅನುಮಾನ ಶುರುವಾಗಿದೆ. ಇದು ವಿಜಯೇಂದ್ರ ಅವರಿಗೆ
ಮಾಡಿದ ಪಾಠವೋ ಅಥವಾ ನಮ್ಮ ಗಾಯಕ್ಕೆ ಮೆತ್ತಿದ ಟಿಂಕ್ಚರೋ? ಅಂತ ಕಲಮಲವಾಗಿದೆ. ಆದರೆ ಹಾಗಂತ
ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲವಲ್ಲ? ಹೀಗಾಗಿ ವಿಜಯೇಂದ್ರ ಕ್ಯಾಂಪಿನಿಂದ ಅಂತರ ಕಾಯ್ದುಕೊಂಡು
ತಮ್ಮ ಹೋರಾಟ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.

ಅರ್ಥಾತ್, ಪಕ್ಷದ ಉಭಯ ಬಣಗಳನ್ನು ಒಂದುಗೂಡಿಸುವ ಆರೆಸ್ಸೆಸ್ ಯತ್ನ ಸಫಲವಾಗಿಲ್ಲ. ಹಿಂದುಳಿದವರಿಗೆ ಕೋಪ ಬಂದಿದೆ ಈ ಮಧ್ಯೆ ರಾಜ್ಯ ಬಿಜೆಪಿ ಪಾಲಿಗೆ ತಲೆನೋವಾಗಿರುವ ಮತ್ತೊಂದು ಸಂಗತಿ ಎಂದರೆ ಕೋರ್ ಕಮಿಟಿ. ಈ ಕಮಿಟಿಯಲ್ಲಿ ತಮಗೆ ಪ್ರಾಮಿನೆನ್ಸು ಸಿಕ್ಕಿಲ್ಲ ಎಂಬುದು ಹಿಂದುಳಿದ ವರ್ಗಗಳ ನಾಯಕರ ಅರೋಪ. ಹೀಗಾಗಿಯೇ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಭೆ ಸೇರಿದ್ದ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕರು ಈ ಕುರಿತು ಕಿಡಿ ಕಾರಿದ್ದಾರೆ.

ಪಕ್ಷಕ್ಕೆ ಒಕ್ಕಲಿಗ ಸಮುದಾಯದ ಮೇಜರ್ ಷೇರು ಸಿಗುವುದಿಲ್ಲ. ಆದರೆ ಹದಿಮೂರು ಮಂದಿ ಇರುವ ಕೋರ್ ಕಮಿಟಿ ಯಲ್ಲಿ ಆ ವರ್ಗದ 4 ಮಂದಿ ಇದ್ದಾರೆ. ಬಿಜೆಪಿಗೆ 35 ಪರ್ಸೆಂಟ್ ಮತ ಕೊಡುವ ಲಿಂಗಾಯತ ಸಮುದಾಯದ 3 ಮಂದಿ ಮಾತ್ರ ಇದ್ದಾರೆ. ಉಳಿದಂತೆ ಹೈಕಮಾಂಡ್‌ನ ಇಬ್ಬರನ್ನು ಹೊರತುಪಡಿಸಿದರೆ ಜೈನ, ಬ್ರಾಹ್ಮಣ ಸಮುದಾ ಯಗಳಿಗೂ ಕೋರ್ ಕಮಿಟಿಯಲ್ಲಿ ಆದ್ಯತೆ ಕೊಡಲಾಗಿದೆ. ಆದರೆ ಬಿಜೆಪಿಗೆ ದೊಡ್ಡ ಮಟ್ಟದ ಪವರ್ ನೀಡುತ್ತಿರುವ ಹಿಂದುಳಿದ ವರ್ಗಗಳಿಗೆ ಆದ್ಯತೆಯೇ ಇಲ್ಲ.

ವಸ್ತುಸ್ಥಿತಿ ಎಂದರೆ, ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ಬಿಜೆಪಿಗೆ ಸಾಲಿಡ್ಡು ಬೆಂಬಲ ಕೊಟ್ಟಿವೆ. ಅಂದ ಹಾಗೆ, ಇವತ್ತು ಕಾಂಗ್ರೆಸ್ಸಿನಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂಬ
ಅಸಮಾಧಾನ ಹಿಂದುಳಿದ ವರ್ಗಗಳ ಬಹುತೇಕ ಜಾತಿಗಳಲ್ಲಿದೆ. ಇದರ ಪರಿಣಾಮವಾಗಿ ಅವು ಬಿಜೆಪಿಗೆ ಸಾಲಿಡ್ಡು
ಬೆಂಬಲ ಕೊಟ್ಟಿವೆ ಎಂಬುದು ನಿಜ. ಇದು ಹೈಕಮಾಂಡ್‌ಗೂ ಗೊತ್ತಿದೆ. ಇಷ್ಟಾದರೂ ಕೋರ್ ಕಮಿಟಿಯಲ್ಲಿ ಈ ವರ್ಗಗಳ ಒಬ್ಬರಿಗೂ ಆದ್ಯತೆ ಸಿಕ್ಕಿಲ್ಲ ಅಂತ ಈ ಸಭೆಯಲ್ಲಿ ಚರ್ಚೆಯಾಗಿದೆ. ಅಷ್ಟೇ ಅಲ್ಲ, ಈ ಕುರಿತು ಮೊದಲು
ರಾಜ್ಯದ ವರಿಷ್ಠರಿಗೆ ವಿವರಿಸೋಣ. ನ್ಯಾಯ ಸಿಗದಿದ್ದರೆ ದಿಲ್ಲಿಗೆ ಹೋಗೋಣ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಲಾಸ್ಟ್ ಸಿಪ್: ಇನ್ನು ಮಂಡ್ಯದ ನಾಗಮಂಗಲದಲ್ಲಿ ಮೊನ್ನೆ ನಡೆದ ಹಿಂದು-ಮುಸ್ಲಿಂ ಗಲಭೆ ಕಾಂಗ್ರೆಸ್ ವರಿಷ್ಠರ
ಚಿಂತೆಗೆ ಕಾರಣವಾಗಿದೆ. ಏಕೆಂದರೆ, ಇದುವರೆಗೆ ಪ್ರಬಲ ಒಕ್ಕಲಿಗ ಸಮುದಾಯದ ಒಂದಷ್ಟು ಮತಗಳ ಜತೆ ಅಹಿಂದ
ವರ್ಗಗಳ ಸಾಲಿಡ್ಡು ಬೆಂಬಲ ಪಡೆದು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ದಡ ಸೇರುತ್ತಿತ್ತು. ಗಮನಿಸಬೇಕಾದ
ಸಂಗತಿ ಎಂದರೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ವರ್ಗ ಪ್ರಬಲವಾಗಿದ್ದರೂ ಕುರುಬ, ದಲಿತ, ಮುಸ್ಲಿಂ ಸಮುದಾಯಗಳು ಸಾಲಿಡ್ಡು ಶಕ್ತಿ ಹೊಂದಿವೆ. ಹೀಗಾಗಿ ಅಲ್ಲಿ ಲಿಂಗಾಯತರ ಬೆಂಬಲ ಕಡಿಮೆ ಇದ್ದರೂ ಉಳಿದ
ಸಮುದಾಯಗಳ ಸಾಲಿಡ್ಡು ಬೆಂಬಲ ಕ್ರೋಡೀಕರಿಸಿ ಗೆಲ್ಲಬಹುದು. ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶವೇ ಇದಕ್ಕೆ ಸಾಕ್ಷಿ.

ಆದರೆ, ಹಳೇ ಮೈಸೂರು ಭಾಗದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಕಡೆ ಒಕ್ಕಲಿಗರ
ಪ್ರಾಬಲ್ಯ ಜಾಸ್ತಿ. ಹೀಗಾಗಿ ಒಕ್ಕಲಿಗರ ಒಂದಷ್ಟು ಮತ ಪಡೆಯದೆ ಬೇರೆ ವರ್ಗಗಳ ಮತಗಳನ್ನು ಕ್ರೋಡೀಕರಿಸಿ
ಗೆಲ್ಲುವುದು ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಹಿಂದು-ಮುಸ್ಲಿಂ ರಾಜಕಾರಣ ಶುರುವಾದರೆ ಕಾಂಗ್ರೆಸ್ಸಿಗೆ ಬರುತ್ತಿದ್ದ
ಹಿಂದುಳಿದ-ದಲಿತ ವರ್ಗಗಳ ಗಣನೀಯ ಮತಗಳು ಬಿಜೆಪಿ-ಜೆಡಿಎಸ್ ಮಿತ್ರಕೂಟದತ್ತ ವಾಲುತ್ತವೆ. ಹಾಗೇನಾದರೂ ಅದರೆ ಕೈ ಬಲ ಉಡುಗುವುದು ಖಂಡಿತ ಎಂಬುದು ಕಾಂಗ್ರೆಸ್ ವರಿಷ್ಠರ ಚಿಂತೆ.