Thursday, 21st November 2024

R T VittalMurthy Column: ಜೆಡಿಎಸ್‌ ಸಾರಥಿಯಾಗಲು ನಿಖಿಲ್‌ ರೆಡಿ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಕಳೆದ ಶುಕ್ರವಾರ ರಾಜ್ಯ ಬಿಜೆಪಿಯ ಕೆಲ ನಾಯಕರು ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿzರೆ. ಹೀಗೆ ಹೋದವರು ಪಕ್ಷದ ಭಿನ್ನಮತೀಯರು ಇಡುತ್ತಿರುವ ಹೆಜ್ಜೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಏನ್ ಸರ್, ಈ ಯತ್ನಾಳ್, ಲಿಂಬಾವಳಿ ಅವರೆಲ್ಲ ಸೇರಿ ವಕ್ಫ್ ಗೋಜಲಿನ ವಿರುದ್ಧ ಯಾತ್ರೆ ಮಾಡಲು ನಿರ್ಧರಿಸಿದ್ದಾರೆ. ಇವತ್ತು ಅಧ್ಯಕ್ಷರು ಘೋಷಿಸಿರುವ ಹೋರಾಟಕ್ಕೆ ಪ್ರತಿಯಾಗಿ ಇವರ ಹೋರಾಟ ಶುರುವಾದರೆ ಪಕ್ಷದ ಗತಿಯೇನು? ಇವರಿಗ್ಯಾರೂ ಹೇಳುವವರು ಕೇಳುವವರೇ ಇಲ್ಲವೇ?” ಅಂತ ಈ ನಾಯಕರು ಕೇಳಿದಾಗ ಯಡಿಯೂರಪ್ಪ ಮೌನವಾಗಿದ್ದರಂತೆ. ಆಗ ಮಾತು ಮುಂದುವರಿಸಿದ ಈ ನಾಯಕರು, “ಒಂದು ಪಕ್ಷದಲ್ಲಿ ಈ ರೀತಿ ಎರಡು ಬಣಗಳು ಕಂಡರೆ ನಮ್ಮ ಹೋರಾ ಟಕ್ಕೆ ಅರ್ಥವೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಯತ್ನಾಳ್, ಜಾರಕಿಹೊಳಿ, ಲಿಂಬಾವಳಿಯಂಥವರ ಪಕ್ಷ ವಿರೋಧಿ ಚಟುವಟಿಕೆಯನ್ನು ಹತ್ತಿಕ್ಕುವ ಕೆಲಸವಾಗದಿದ್ದರೆ ನಾವು ಮುಂದುವರಿಯುವುದು ಹೇಗೆ?” ಎಂದು
ಪ್ರಶ್ನಿಸಿದ್ದಾರೆ.

ಈ ವೇಳೆ ಮೌನಮುರಿದ ಯಡಿಯೂರಪ್ಪ, “ನಿಜ, ಇವರದೆಲ್ಲ ಅತಿಯಾಗಿದೆ. ಹಾಗಂತ ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಹಲವು ಬಾರಿ ಹೇಳಿದ್ದೇನೆ. ಹೀಗೆ ಅಪಸ್ವರ ಎತ್ತುತ್ತಿರುವವರಿಗೆ ವಾರ್ನ್ ಮಾಡಿ, ಇಲ್ಲವೇ ಪಕ್ಷದಿಂದ ಉಚ್ಚಾಟಿಸಿ ಅಂತ ಹೇಳಿದ್ದೇನೆ. ನಾನು ಹೇಳಿದಾ
ಗಲೆಲ್ಲ ಅವರು ‘ಡೋಂಟ್ ವರಿ, ಯತ್ನಾಳ್, ಜಾರಕಿಹೊಳಿ ಅವರಿಗೆಲ್ಲ ನಾನು ವಾರ್ನ್ ಮಾಡುತ್ತೇನೆ’ ಅನ್ನುತ್ತಾರೆ. ಅವರು ಹಾಗೆ ವಾರ್ನ್ ಮಾಡಿದ ಮೇಲೆ ಇವರೂ ನಾಲ್ಕು ದಿನ ಸುಮ್ಮನಿರುತ್ತಾರೆ. ಆಮೇಲೆ ಯಥಾಪ್ರಕಾರ ಅಪಸ್ವರ ಎತ್ತುತ್ತಾರೆ. ಹೀಗಾಗಿ ಹೇಳಿ ಹೇಳಿ ನನಗೂ
ಬೇಸತ್ತುಹೋಗಿದೆ” ಎಂದಿದ್ದಾರೆ.

ಯಡಿಯೂರಪ್ಪ ಅವರ ಮಾತಿನಲ್ಲಿದ್ದ ನೋವನ್ನು ಗಮನಿಸಿದ ಈ ನಾಯಕರು, “ಸರ್, ಇದೆಲ್ಲ ಆ ಸಂಘ ಪರಿವಾರದ ಲೀಡರ್ ಕೊಟ್ಟಿರುವ ಕುಮ್ಮಕ್ಕು. ಇದು ಹೀಗೇ ಮುಂದುವರಿಯಲು ಬಿಟ್ಟರೆ ನಾಳೆ ಯತ್ನಾಳ್, ಜಾರಕಿಹೊಳಿ, ಲಿಂಬಾವಳಿ ಇವರೆಲ್ಲ ವಿಜಯೇಂದ್ರರ ಕೈ‌ ಕಟ್ಟಿ ಹಾಕುತ್ತಾರೆ. ಹಾಗಂತ ಈ ಆಟವನ್ನು ಎಷ್ಟು ದಿನ ಅಂತ ಸಹಿಸಿಕೊಳ್ಳೋದು? ಹೀಗಾಗಿ ನೀವು ನಮಗೆ ಪರ್ಮಿಷನ್ ಕೊಡಿ. ನಾವು 20-30 ಮಂದಿ ದಿಲ್ಲಿಗೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ದೂರು ಕೊಡುತ್ತೇವೆ. ಒಂದೋ ಈ ಭಿನ್ನಮತೀಯರ ಬಾಯನ್ನು ಅವರು ಮುಚ್ಚಿಸಲಿ. ಇಲ್ಲವೇ ಪಕ್ಷದಿಂದ ಉಚ್ಚಾಟಿಸಲಿ” ಎಂದಿದ್ದಾರೆ.

ಆದರೆ ಈ ನಾಯಕರ ಮಾತಿಗೆ ಯಡಿಯೂರಪ್ಪ ಅವರು, “ನೋ ನೋ, ಹಾಗೆಲ್ಲ ನಿಯೋಗದಲ್ಲಿ ಹೋಗಿ ದೂರು ಕೊಡೋದು ಸರಿಯಲ್ಲ. ಹಾಗೇನಾದ್ರೂ ಹೋದ್ರೆ ಪಕ್ಷದ ಒಳಜಗಳದ ಬಗ್ಗೆ ನಾವೇ ವಿಪಕ್ಷದವರಿಗೆ ಮೆಸೇಜು ಕೊಟ್ಟಂತಾಗುತ್ತದೆ” ಅಂದಿದ್ದಾರೆ.

ಯಾವಾಗ ಯಡಿಯೂರಪ್ಪ ಈ ಮಾತು ಹೇಳಿದರೋ, ಅಲ್ಲಿದ್ದ ನಾಯಕರಿಗೆ ಮತ್ತಷ್ಟು ಬೇಸರವಾಗಿದೆ. ಹಾಗಂತಲೇ ಅವರು, “ಸರ್, ಈ ಭಿನ್ನಮತೀಯರನ್ನು ಈಗಲೇ ಕಂಟ್ರೋಲಿಗೆ ತರದಿದ್ದರೆ, ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಂತ ನಾಳೆ ಬಹಿರಂಗವಾಗಿಯೇ
ಹೋರಾಟ ಶುರುಮಾಡ್ತಾರೆ. ಹೀಗಾಗಿ ಅವರ ಆಟಕ್ಕೆ ಪ್ರತಿಹೋರಾಟ ಶುರುಮಾಡದಿದ್ದರೆ ಕಷ್ಟ. ಅಂದ ಹಾಗೆ, ಈ ಯತ್ನಾಳ್ ಅವರೆಲ್ಲ ತಮ್ಮಿಚ್ಛೆಯಂತೆ ಯಾತ್ರೆ ಶುರುಮಾಡಿದರು ಅಂತಿಟ್ಟುಕೊಳ್ಳಿ. ಆಮೇಲೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಒಂದೊಮ್ಮೆ ಈ ಯಾತ್ರೆ ನಡೆದೇ ಹೋದರೆ, ಆಗ ವಿಜಯೇಂದ್ರರ ನಾಯಕತ್ವಕ್ಕೆ ಪವರ್ರು ಇರುವುದಿಲ್ಲ” ಅಂದಿzರೆ. ಆಗ ಯಡಿಯೂರಪ್ಪ, “ಇಲ್ಲ ಇಲ್ಲ, ಅವರ ಯಾತ್ರೆ ನಡೆಯುವು ದಿಲ್ಲ. ನಾನು ಕೂಡಾ ನಡ್ಡಾ ಅವರಿಗೆ ಈ ಕುರಿತು ಸ್ಪಷ್ಟವಾಗಿ ಹೇಳಿದ್ದೇನೆ. ಅವರು ಕೂಡಾ, ಈ ಯಾತ್ರೆ ನಡೆಯುವುದಿಲ್ಲ. ಕ್ಯಾನ್ಸಲ್
ಮಾಡಿಸುತ್ತೇನೆ ಅಂತ ಪ್ರಾಮಿಸ್ಸು ಮಾಡಿದ್ದಾರೆ” ಅಂತ ವಿವರಿಸಿದ್ದಾರೆ.

ದಿಲ್ಲಿಗೆ ಧಾವಿಸಲಿದ್ದಾರೆ ನಿಷ್ಠರು

ಹೀಗೆ ಭಿನ್ನಮತೀಯರ ವಿರುದ್ಧ ಆರ್ಭಟಿಸದಂತೆ ಯಡಿಯೂರಪ್ಪ ತಮ್ಮ ನಿಷ್ಠರಿಗೆ ಸೂಚಿಸಿದ್ದಾರಾದರೂ, ಮಾಜಿ ಸಚಿವ ಎಂ.ಪಿ.ರೇಣುಕಾ ಚಾರ್ಯ ಸೇರಿದಂತೆ ಹಲ ನಾಯಕರು ದಿಲ್ಲಿ ಯಾತ್ರೆಗೆ ಅಣಿಯಾಗತೊಡಗಿದ್ದಾರೆ. ಒಂದು ವೇಳೆ ನಿಗದಿತ ಸಮಯಕ್ಕೆ ಯತ್ನಾಳ್ ಆಂಡ್ ಗ್ಯಾಂಗ್‌ನ ಯಾತ್ರೆ ಶುರುವಾದರೆ ದಿಲ್ಲಿಗೆ ಹೋಗಿ ವರಿಷ್ಠರಿಗೆ ದೂರು ನೀಡುವುದು ಈ ನಾಯಕರ ಲೆಕ್ಕಾಚಾರ. ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿದವರು, ಇಡೀ ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಇವತ್ತು ಯಡಿಯೂರಪ್ಪ ಬೇಡ, ವಿಜಯೇಂದ್ರ ಬೇಡ ಅನ್ನುತ್ತಿರುವ ಭಿನ್ನಮತೀಯರ ಪೈಕಿ ಯಾರಿಗೆ ಈ ಶಕ್ತಿ ಇದೆ? ಅದರಲ್ಲೂ ಬಹುತೇಕರಿಗೆ ತಮ್ಮ ಕ್ಷೇತ್ರದ ಶಕ್ತಿಯಿಲ್ಲ. ಉಳಿದವರಿಗೆ ತಮ್ಮ ಕ್ಷೇತ್ರ ಬಿಟ್ಟು ಮತ್ತೊಂದು ಕಡೆ ಪವರ್ ಇಲ್ಲ. ಇಂಥವರನ್ನು ತಕ್ಷಣ ತಡೆಗಟ್ಟಿ. ಇಲ್ಲವೇ ಪಕ್ಷದಿಂದ ಕಿತ್ತೆಸೆಯಿರಿ ಅಂತ ವರಿಷ್ಠರಿಗೆ ಹೇಳಲು ಈ ಪಡೆ ನಿರ್ಧರಿಸಿದೆ. ಡಿಸೆಂಬರ್ ೨ನೇ ವಾರ ಪ್ರಾರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದ ನಂತರ ದಿಲ್ಲಿ ಯಾತ್ರೆ ನಡೆಸುವುದು ಯಡಿಯೂರಪ್ಪ ಆಪ್ತರ ಲೆಕ್ಕಾಚಾರ. ಹಾಗೊಂದು ವೇಳೆ ಪಕ್ಷದ ವರಿಷ್ಠರು ಯತ್ನಾಳ್ ಆಂಡ್ ಗ್ಯಾಂಗಿನ ಯಾತ್ರೆಗೆ ಬ್ರೇಕ್ ಹಾಕಿದರೆ ಯಡಿಯೂರಪ್ಪ ನಿಷ್ಠರ ದಿಲ್ಲಿ ಯಾತ್ರೆಗೂ ಬ್ರೇಕ್ ಬೀಳಲಿದೆ ಎಂಬುದು ಸದ್ಯದ ಮಾಹಿತಿ.

ಆಪ್ತರ ಅನುಮಾನ ಏನು?

ಅಂದ ಹಾಗೆ, ಯತ್ನಾಳ್ ಸೇರಿದಂತೆ ಭಿನ್ನಮತೀಯರ ವಿರುದ್ಧ ಯಡಿಯೂರಪ್ಪ ಮತ್ತು ವಿಜಯೇಂದ್ರ ಹಲವು ಬಾರಿ ದೂರು ನೀಡಿರುವುದೇನೋ ಸರಿ. ಇಷ್ಟೆಲ್ಲ ಮಾಡಿದರೂ ವರಿಷ್ಠರೇಕೆ ಸುಮ್ಮನಿದ್ದಾರೆ? ಎಂಬುದು ಅವರ ಆಪ್ತರ ಅನುಮಾನ. ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟು ಬಾರಿ ದೂರು ನೀಡಿದ ಮೇಲೂ ಭಿನ್ನಮತೀಯರ ಧ್ವನಿ ಏನೂ ಅಡಗಿಲ್ಲ. ಬದಲಿಗೆ ವಿಜಯೇಂದ್ರರನ್ನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಸುವುದೇ ತಮ್ಮ ಗುರಿ ಎಂಬ ಮೆಸೇಜನ್ನು ಭಿನ್ನರು ರವಾನಿಸುತ್ತಲೇ ಇದ್ದಾರೆ. ಹೀಗೆ ಭಿನ್ನರು ಹೇಳಿದ ಮಾತ್ರಕ್ಕೆ ವರಿಷ್ಠರು ವಿಜಯೇಂದ್ರ ರನ್ನು ತಕ್ಷಣ ಇಳಿಸುತ್ತಾರೆ ಅಂತೇನೂ ಅಲ್ಲ. ಆದರೆ ಈಗಿನ ಸ್ಥಿತಿ ನೋಡಿದರೆ ವಿಜಯೇಂದ್ರರನ್ನು ಮುಂಬರುವ ವಿಧಾನಸಭಾ ಚುನಾವಣೆಯ ತನಕ ಮುಂದುವ ರಿಸುವುದು ಡೌಟು ಎಂಬುದು ಈ ಆಪ್ತರ ಯೋಚನೆ.

ಅಂದ ಹಾಗೆ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಅವಧಿ 2 ವರ್ಷವಾದರೂ ತಮ್ಮನ್ನು ಎರಡನೇ ಅವಧಿಗೂ ಮುಂದುವರಿಸುತ್ತಾರೆ ಅಂತ ವಿಜಯೇಂದ್ರರೇನೋ ನಂಬಿದ್ದಾರೆ. ಹಾಗಂತಲೇ ರಾಜ್ಯಾದ್ಯಂತ ಯುವಕರ ಪಡೆಯನ್ನು ಬಲಿಷ್ಠ ಗೊಳಿಸುತ್ತಾ ಮುಂಬರು ವ ವಿಧಾನಸಭಾ
ಚುನಾವಣೆಯ ನೇತೃತ್ವ ತಮ್ಮದೇ ಅಂತ ನಂಬಿದ್ದಾರೆ. ಆದರೆ ದಿಲ್ಲಿ ಲೆವೆಲ್ಲಿನಲ್ಲಿ ವಿಜಯೇಂದ್ರರನ್ನು ದುರ್ಬಲಗೊಳಿಸಲು ವಿರೋಧಿಗಳು ಒಂದುಗೂಡುತ್ತಿದ್ದಾರೆ. ಹೀಗೆ ಒಂದುಗೂಡುತ್ತಿರುವವರು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ವಿಶ್ವಾಸ ಗಿಟ್ಟಿಸುತ್ತಿರುವುದನ್ನು
ನೋಡಿದರೆ ಮುಂದಿನ ಕೆಲವೇ ಕಾಲದಲ್ಲಿ ವಿಜಯೇಂದ್ರರ ಕೈ ಬಿಗಿ ಮಾಡುವ ಕೆಲಸ ವಿಧ್ಯುಕ್ತವಾಗಿಯೇ ನಡೆಯಲಿದೆ. ಇಂಥ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಗಟ್ಟಲು ಈಗಲೇ ವಿಜಯೇಂದ್ರ ಮತ್ತು ಯಡಿಯೂರಪ್ಪ ಸಜ್ಜಾಗದಿದ್ದರೆ ಅಧ್ಯಕ್ಷ ಪಟ್ಟ ಬೇರೆಯವರ ಪಾಲಾದರೂ ಅಚ್ಚರಿ ಇಲ್ಲ ಎಂಬುದು ಈ ಆಪ್ತರ ಅನುಮಾನ.

ಜೆಡಿಎಸ್‌ಗೆ ನಿಖಿಲ್ ಸಾರಥಿ
ಇನ್ನು, ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಕಾಲ ಹತ್ತಿರ ಬಂದಿದೆ. ಮೂಲಗಳ ಪ್ರಕಾರ, ಉಪಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್‌ರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ. ವಾಸ್ತವವಾಗಿ
ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾದ ಸಂದರ್ಭದ ನಿಖಿಲ್‌ರಿಗೆ ಪಟ್ಟ ಕಟ್ಟುವ ತೀರ್ಮಾನವಾಗಿತ್ತು. ಆದರೆ ಶಾಸಕರಾಗುವ ಮುನ್ನವೇ ಈ ಜಾಗಕ್ಕೆ ಅವರನ್ನು ತಂದು ಕೂರಿಸುವುದು ಸರಿಯಲ್ಲ. ಹಾಗೇನಾದರೂ ಮಾಡಿದರೆ ಪಕ್ಷದಲ್ಲಿರುವ ಕೆಲ ಹಿರಿಯ ನಾಯಕರು ಮುನಿಸಿಕೊಳ್ಳ ಬಹುದು ಎಂಬ ಕಾರಣಕ್ಕಾಗಿ ಕುಮಾರಸ್ವಾಮಿ ಮತ್ತು ದೇವೇಗೌಡರು ಸುಮ್ಮನಾಗಿದ್ದರು. ಆದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದ ನಂತರ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಸಂಪೂರ್ಣ ನಂಬಿಕೆ ಬಂದಿದೆಯಂತೆ.

ಅರ್ಥಾತ್, ಉಪಚುನಾವಣೆಯಲ್ಲಿ ನಿಖಿಲ್ ಗೆಲ್ಲುವುದು ಪಕ್ಕಾ ಎಂಬುದು ಅವರ ನಂಬಿಕೆ. ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಅವರನ್ನು ತಂದು ಕೂರಿಸಬಹುದು ಅಂತ ಈ ಜೋಡಿ ಭಾವಿಸಿದೆ. ಅಂದ ಹಾಗೆ, ಈ ಮುಂಚೆ ನಿಖಿಲ್‌ರಿಗೆ ಪಟ್ಟ ಕಟ್ಟಿದರೆ ಅಪಸ್ವರ ಎತ್ತುವವರು ಯಾರು
ಅಂತ ಊಹಿಸಿದ್ದ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಆ ವಿಷಯದಲ್ಲಿ ಮತ್ತಷ್ಟು ಸ್ಪಷ್ಟತೆ ಬಂದಿದೆ. ಕುತೂಹಲದ ಸಂಗತಿಯೆಂದರೆ ಇಂಥ ನಾಯಕರೆಲ್ಲ ಜೆಡಿಎಸ್‌ಗಿಂತ ಕಾಂಗ್ರೆಸ್‌ಗೆ ಹತ್ತಿರದವರು ಮತ್ತು ಸದಾಕಾಲ ಕೈ ನಾಯಕರ ಸಂಪರ್ಕದಲ್ಲಿರುವವರು. ಇವರಿಗೆ ದೇವೇಗೌಡ,
ಕುಮಾರಸ್ವಾಮಿ ಅವರಿಗಿಂತ ಕಾಂಗ್ರೆಸ್‌ನ ನಾಯಕರೇ ಆಪ್ತರು. ಹೀಗಾಗಿ ಇಂಥವರನ್ನು ಗುರುತಿಸಿರುವ ಅವರು ಉಪಚುನಾವಣೆಯ ಫಲಿತಾಂಶ ಬಂದ ನಂತರ ಪಕ್ಷದಿಂದಲೇ ಉಚ್ಚಾಟಿಸಲು ಅಣಿಯಾಗಿದ್ದಾರೆ. ಅಲ್ಲಿಗೆ ನಿಖಿಲ್ ಪಟ್ಟಾಭಿಷೇಕಕ್ಕೂ ಮುನ್ನ ಪಕ್ಷದ ನಾಲ್ಕೈದು ಮಂದಿ ನಾಯಕರ ತಲೆದಂಡ ಆಗುವುದು ಪಕ್ಕಾ ಆದಂತಿದೆ.

ಲಾಸ್ಟ್ ಸಿಪ್: ಈ ಮಧ್ಯೆ ಚನ್ನಪಟ್ಟಣದ ಉಪಚುನಾವಣೆಯ ವೇಳೆ ಸಚಿವ ಜಮೀರ್ ಅಹ್ಮದ್ ಆಡಿದ ಮಾತು ಕೈ ಪಾಳಯವನ್ನು ತಲ್ಲಣ ಗೊಳಿಸಿದೆಯಾದರೂ ಡಿ.ಕೆ. ಬ್ರದರ್ಸ್ ಮಾತ್ರ ಯೋಗೇಶ್ವರ್ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರಂತೆ.

ಅಂದ ಹಾಗೆ, ಚನ್ನಪಟ್ಟಣದ ಕಣಕ್ಕೆ ಮಾಜಿ ಪ್ರಧಾನಿ ದೇವೇಗೌಡರು ನುಗ್ಗಿದ ರೀತಿ ಮತ್ತು ಕುಮಾರಸ್ವಾಮಿ ಅವರನ್ನು ‘ಕರಿಯ’ ಅಂತ ಸಚಿವ ಜಮೀರ್ ಅಹ್ಮದ್ ಲೇವಡಿ ಮಾಡಿದ ವಿಷಯ ಒಕ್ಕಲಿಗ ಮತಬ್ಯಾಂಕಿನ ಮೇಲೆ ಪರಿಣಾಮ ಬೀರಿದ್ದು ಹೌದಾದರೂ, ಅದು‌ ಯೋಗೇಶ್ವರ್ ಗೆಲುವಿಗೆ ಅಡ್ಡಿಯಾಗುವುದಿಲ್ಲ ಎಂಬುದು ಡಿ.ಕೆ.ಬ್ರದರ್ಸ್ ನಂಬಿಕೆ.

ಅವರ ಈ ನಂಬಿಕೆಗೆ ಕಾರಣವಿದೆ. ಅದೆಂದರೆ ಮುಸ್ಲಿಂ, ಕುರುಬ ಮತ್ತು ದಲಿತ ಮತಬ್ಯಾಂಕು ದೊಡ್ಡ ಮಟ್ಟದಲ್ಲಿ ಯೋಗೇಶ್ವರ್ ಪರವಾಗಿ ಕನ್‌ಸಾಲಿಡೇಟ್ ಆಗಿದೆ ಎಂಬುದು. ಅದೇ ರೀತಿ ಒಕ್ಕಲಿಗ ಮತಬ್ಯಾಂಕಿನ ಮಿನಿಮಮ್ 40 ಪರ್ಸೆಂಟ್ ಷೇರು ಕಾಂಗ್ರೆಸ್‌ಗೆ ಲಭ್ಯವಾಗಿದೆ ಎಂಬುದು ಡಿ.ಕೆ. ಬ್ರದರ್ಸ್ ಲೆಕ್ಕಾಚಾರ. ಇದು ನಿಜವೇ ಆದರೆ ಯೋಗೇಶ್ವರ್ 5 ರಿಂದ 10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ಗ್ಯಾರಂಟಿ. ಆದರೆ ಒಂದು ವೇಳೆ ಈ ಲೆಕ್ಕಾಚಾರವನ್ನು ಮೀರಿ ನಿಖಿಲ್ ಗೆದ್ದರೆ ನೋ ಡೌಟ್, ಜಮೀರ್ ಕೈ ಪಾಳಯದ ವಿಲನ್ ಆಗುವುದು ಗ್ಯಾರಂಟಿ. ವಸ್ತುಸ್ತಿತಿ ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಸ್ಲಿಂ ಕೋಟಾದಡಿ ಜಮೀರ್ ಮತ್ತು ಎನ್.ಎ.ಹ್ಯಾರಿಸ್ ಪೈಕಿ ಒಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ದು-ಡಿಕೆಶಿ ಮಧ್ಯೆ ಜಟಾಪಟಿ ನಡೆದಿತ್ತು.

ಅವತ್ತು ಹ್ಯಾರಿಸ್ ಪರ ನಿಂತ ಡಿಕೆಶಿ, “ಚುನಾವಣೆಯಲ್ಲಿ ಪಕ್ಷಕ್ಕಾಗಿ ಹ್ಯಾರಿಸ್ ತುಂಬ ಇನ್‌ವೆ ಮಾಡಿದ್ದಾರೆ. ಹೀಗಾಗಿ ಅವರಿಗೇ ಮಂತ್ರಿಗಿರಿ ಸಿಗಬೇಕು” ಎಂದಿದ್ದರಂತೆ. ಆದರೆ, “ಮುಸ್ಲಿಂ ಮತಗಳು ಕನ್‌ಸಾಲಿಡೇಟ್ ಆಗಲು ಜಮೀರ್ ದುಡಿದಿದ್ದಾರೆ. ಹೀಗಾಗಿ ಅವರಿಗೇ ಚಾನ್ಸು ಸಿಗಬೇಕು” ಅಂತ ಸಿದ್ದು ಪಟ್ಟು ಹಿಡಿದು ಸಕ್ಸಸ್ ಆದರು. ಆದರೆ ಚನ್ನಪಟ್ಟಣದ ಕಣದಲ್ಲೀಗ ಯೋಗೇಶ್ವರ್ ಸೋತರೆ ಜಮೀರ್ ಅವರಿಗೆ ಕಷ್ಟದ ದಿನಗಳು ಕಾದಿವೆ ಅಂತಲೇ ಅರ್ಥ.

ಇದನ್ನೂ ಓದಿ: arkrishnamurthy