ಆರ್.ಟಿ.ವಿಠ್ಠಲಮೂರ್ತಿ
ಅವತ್ತು ದಿಲ್ಲಿಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಸಭೆಯೊಂದು ಏರ್ಪಾಡಾಗಿತ್ತು. ಸಭೆಯೇನೋ
ಆರಂಭವಾಯಿತು. ಆದರೆ ಸಭೆಯ ಕಾರ್ಯಸೂಚಿಯನ್ನು ಓದಬೇಕಿದ್ದ ಇಂದಿರಾ ಗಾಂಧಿ ಒಮ್ಮೆ ಗಂಟಲು ಸವರಿಕೊಂಡರು. ಅದೇಕೋ ಗಂಟಲು ಕೈ ಕೊಟ್ಟಿತ್ತು.
ಹೀಗಾಗಿ ತಮ್ಮೆದುರಿಗಿದ್ದ ಕಾರ್ಯಸೂಚಿಯನ್ನು ಓದಲಾಗದ ಇಂದಿರಾ ಗಾಂಧಿ ಮೌನವಾಗಿ ಸಭೆಯ ಸುತ್ತ ಕಣ್ಣಾಡಿ ಸಿದರು. ಸಭೆಯಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳು ತಮ್ಮತ್ತಲೇ ನೋಡುತ್ತಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕು ಅಂತ ಇಂದಿರಾ ಯೋಚಿಸುತ್ತಿದ್ದಂತೆಯೇ ಸಭೆಯ ಕೊನೆಯಲ್ಲಿ ನಿಂತಿದ್ದ ಯುವ ಸಂಸದರೊಬ್ಬರು ಅವರ ಕಣ್ಣಿಗೆ ಕಾಣಿಸಿದ್ದಾರೆ. ಆ ಯುವ ಸಂಸದರ ಕತೆಯಾದರೂ ಅಷ್ಟೇ. ಅವರಿಗೆ ಸಭೆಯಲ್ಲಿ ಕೂರಲು ಕುರ್ಚಿ ಸಿಕ್ಕಿಲ್ಲ.
ಹೀಗಾಗಿ ಕುರ್ಚಿ ಹುಡುಕುತ್ತಿದ್ದ ಅವರಿಗೆ ಒಂದು ಕುರ್ಚಿ ಕಾಣಿಸಿದೆ. ಆದರೆ ಖಾಲಿ ಇದ್ದ ಕುರ್ಚಿ ಸ್ವತಃ ಪ್ರಧಾನಿ ಇಂದಿರಾ ಗಾಂಧಿ ಅವರ ಪಕ್ಕದ್ದು. ಹಾಗಂತಲೇ ಮುಂದೇನು ಮಾಡಬೇಕು ಎನ್ನುವಂತೆ ಅವರು ಇಂದಿರಾ ಕಡೆ ನೋಡಿದ್ದಾರೆ. ಆ ಕ್ಷಣದಲ್ಲಿ ಪ್ರಧಾನಿ ಇಂದಿರಾ ಮತ್ತು ಅ ಯುವ ಸಂಸದರ ಕಣ್ಣು ಪರಸ್ಪರ ಸಂಧಿಸಿವೆ. ಹೀಗೆ ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಿದ್ದಂತೆಯೇ ಒಂದು ವಿಸ್ಮಯ ಸಂಭವಿಸಿದೆ.
ಅದೆಂದರೆ ಇಂದಿರಾ ತಕ್ಷಣವೇ ಅ ಯುವ ಸಂಸದರನ್ನು ತಮ್ಮ ಬಳಿ ಬರುವಂತೆ ಸೂಚಿಸಿದ್ದಾರೆ. ಸ್ವತಃ ಪ್ರಧಾನಿಯೇ ತಮ್ಮ ಬಳಿ ಬರುವಂತೆ ಸೂಚಿಸಿದಾಗ ಆ ಯುವ ಸಂಸದರು ಬೆರಗಾಗಿದ್ದಾರಾದರೂ ಅದೇ ಕಾಲಕ್ಕೆ ಪುಳಕಿತ ರಾಗಿದ್ದಾರೆ. ಹೀಗಾಗಿ ಅದೇ ಭಾವದಲ್ಲಿ ಇಂದಿರಾ ಹತ್ತಿರ ಹೋದಾಗ ಅವರು ತಮ್ಮ ಪಕ್ಕದ ಕುರ್ಚಿಯಲ್ಲಿ ಕೂರು ವಂತೆ ಸೂಚಿಸಿದ್ದಾರೆ. ಹೀಗೆ ತಮ್ಮ ಪಕ್ಕ ಕುಳಿತ ಸಂಸದರ ಮುಂದೆ, ತಮ್ಮ ಮುಂದಿದ್ದ ಕಾರ್ಯಸೂಚಿಯನ್ನು ತಳ್ಳಿದ ಇಂದಿರಾ, ಸಭೆಯಲ್ಲಿ ಅದನ್ನು ಓದುವಂತೆ, ಸಭೆಯ ನಡಾವಳಿಗಳನ್ನು ನೋಡಿಕೊಳ್ಳಲು ಸೂಚಿಸಿದ್ದಾರೆ.
ದೇಶದ ಪ್ರಧಾನಿ ತಮಗೆ ನೀಡಿದ ಈ ಜವಾಬ್ದಾರಿಯನ್ನು ಆ ಸಂಸದರು ಎಷ್ಟು ಚೆನ್ನಾಗಿ ನಿರ್ವಹಿಸಿದರೆಂದರೆ ಅವರ ಅಸ್ಖಲಿತ ಭಾಷೆ ಇಂದಿರಾ ಸೇರಿದಂತೆ ಇಡೀ ಸಭೆಯನ್ನು ಮಂತ್ರಮುಗ್ಧಗೊಳಿಸಿದೆ. ಹಾಗಂತಲೇ ಸಭೆ ಮುಗಿದ ನಂತರ ಆ ಯುವ ಸಂಸದರನ್ನು ಮೆಚ್ಚುಗೆಯ ಕಣ್ಣುಗಳಿಂದ ನೋಡಿದ ಇಂದಿರಾ ತಮ್ಮ ಕೈಲಿದ್ದ ಒಂದು ಚೀಟಿ ಯನ್ನು ಕೊಟ್ಟಿದ್ದಾರೆ.
ನೋಡಿದರೆ ಅದರಲ್ಲಿ ‘ಕಮ್ ಆಂಡ್ ಮೀಟ್ ಮೀ’ ಅಂತ ಆಹ್ವಾನ. ಹೀಗೆ ತಮ್ಮನ್ನು ಭೇಟಿ ಮಾಡಲು ಖುದ್ದು
ಪ್ರಧಾನಿಯೇ ಆಹ್ವಾನ ನೀಡಿದ್ದಾರೆಂದರೆ ಸುಮ್ಮನಿರಲು ಸಾಧ್ಯವೇ? ಹೀಗಾಗಿ ಆ ಯುವ ಸಂಸದರು ನಿಗದಿತ ಸಮಯಕ್ಕೆ ಇಂದಿರಾ ಅವರ ಚೇಂಬರಿಗೆ ಹೋಗಿ ಭೇಟಿ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಗಂಟಲು ಬೇನೆಯಿಂದ ಸ್ವಲ್ಪ ರಿಲೀಫ್ ಆಗಿದ್ದ ಇಂದಿರಾ ಆ ಯುವ ಸಂಸದರ ಪೂರ್ವಾಪರವನ್ನು ವಿಚಾರಿಸಿದ್ದಾರೆ.
ಅಗ ಆ ಯುವ ಸಂಸದರು, “ಮೇಡಂ, ನನ್ನ ಹೆಸರು ಎಸ್.ಎಂ.ಕೃಷ್ಣ. ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರ ದಿಂದ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಪ್ರತಿನಿಧಿಯಾಗಿ ಸಂಸತ್ತಿಗೆ ಅಯ್ಕೆಯಾಗಿದ್ದೇನೆ ಅಂತ ವಿವರಿಸಿದ್ದಾರೆ. ಆಗೆಲ್ಲ ತುಂಬ ವಿಶ್ವಾಸದಿಂದ ಮಾತನಾಡಿದ ಇಂದಿರಾ ಅವರು, “ನೀವು ಪ್ರಜಾ ಸೋಷಲಿಸ್ಟ್ ಪಾರ್ಟಿಯವರು ಏಕೆ
ಹೋರಾಡುತ್ತಿದ್ದೀರೋ, ಅದನ್ನು ಜಾರಿಗೊಳಿಸಲೆಂದೇ ನಮ್ಮ ಪಕ್ಷ, ಸರಕಾರ ಹೋರಾಡುತ್ತಿವೆ. ಹೀಗಾಗಿ ನೀವೆಲ್ಲ ಪ್ರತ್ಯೇಕವಾಗಿರುವ ಬದಲು ಕಾಂಗ್ರೆಸ್ ಪಕ್ಷಕ್ಕೇ ಬನ್ನಿ” ಅಂತ ಅಹ್ವಾನ ನೀಡಿದ್ದಾರೆ.
ಹೀಗೆ ಪ್ರಧಾನಿ ನೀಡಿದ ಆಹ್ವಾನದ ಬಗ್ಗೆ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಸಭೆಯಲ್ಲಿ ವಿವರಿಸಿದ್ದಾರಾದರೂ ಸಭೆ ಅದನ್ನು ಒಪ್ಪಿಲ್ಲ. ಹೀಗಾಗಿ ತಮ್ಮ ಪಕ್ಷದ ನಿಲುವನ್ನು ಕೃಷ್ಣ ಅವರು ಇಂದಿರಾಗೆ ಹೇಳಿದರೆ, “ಯಾರೂ ಬರದಿದ್ದರೆ ನೀವಾದರೂ ಬನ್ನಿ. ನೀವು ಬೆಳೆಯುವ ದಾರಿ ದೊಡ್ಡದಿದೆ” ಎಂದರಂತೆ. ಇಂದಿರಾ ಗಾಂಧಿ ಅವರ ಈ ವಿಶ್ವಾಸ ಪೂರ್ವಕ ಆಹ್ವಾನವನ್ನು ತಿರಸ್ಕರಿಸಲು ಕೃಷ್ಣ ಅವರಿಗೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಒಂದು ದಿನ ಅವರು
ಕಾಂಗ್ರೆಸ್ ಹಡಗು ಹತ್ತಿದರು. ಇಂದಿರಾ ಹೇಳಿದಂತೆ ತಮ್ಮ ಬದುಕಿನಲ್ಲಿ ಬಹುದೊಡ್ಡ ಹಾದಿಯನ್ನು ಕ್ರಮಿಸಿದರು.
ಇದನ್ನೂ ಓದಿ: R T VittalMurthy Column: ಜೆಡಿಎಸ್ ಸಾರಥಿಯಾಗಲು ನಿಖಿಲ್ ರೆಡಿ