ಸಕಾಲಿಕ
ಡಾ.ನಾ.ಸೋಮೇಶ್ವರ
ಜುಲೈ 6, 1885. ಪ್ಯಾರಿಸ್ ನಗರ. ಮಧ್ಯಾಹ್ನದ ಹೊತ್ತು. ಶ್ರೀಮತಿ ಮೀಸ್ಟರ್ ತನ್ನ ಮಗ ಜೋಸೆಫ್ ಮೀಸ್ಟರ್ ಎನ್ನುವ 7 ವರ್ಷದ ಜ್ವರಪೀಡಿತ ಹುಡುಗನನ್ನು ರಸ್ತೆಯಲ್ಲಿ ಎಳೆದುಕೊಂಡು ಬರುತ್ತಿದ್ದಳು. ಒಂದು ಹುಚ್ಚು ನಾಯಿಯು ಜೋಸೆಫ್‌ನನ್ನು 14 ಕಡೆ ಕಚ್ಚಿತ್ತು.
ಅಂದಿನ ದಿನಗಳಲ್ಲಿ ಹುಚ್ಚುನಾಯಿ ಕಚ್ಚಿದರೆ ಸಾವು ಕಟ್ಟಿಟ್ಟ ಬುತ್ತಿ. ಆದರೆ ಶ್ರೀಮತಿ ಮೀಸ್ಟರ್ ಅವರಿಗೆ ಹೇಗಾದರೂ ಮಾಡಿ
ತನ್ನ ಮಗನನ್ನು ಉಳಿಸಿಕೊಳ್ಳಬೇಕೆಂಬ ಹಂಬಲ. ಸುಮಾರು 500 ಕಿ.ಮೀ ದೂರದಲ್ಲಿದ್ದ ಆಲ್ಸೇಸ್ ನಗರದಿಂದ ಪ್ಯಾರಿಸ್
ನಗರಕ್ಕೆ ಬಂದಿದ್ದಳು. ಪ್ಯಾರಿಸ್ಸಿನಲ್ಲಿ ಯಾರೋ ಲೂಯಿ ಪ್ಯಾಶ್ಚರ್ ಎನ್ನುವ ವಿಜ್ಞಾನಿಯಿದ್ದಾನಂತೆ. ಅವನು ಮಾತ್ರ ನಿನ್ನ ಮಗನನ್ನು ಉಳಿಸಬಲ್ಲ ಎಂದು ಜನರು ಹೇಳುವ ಮಾತನ್ನು ಕೇಳಿ, ಮಗನನ್ನು ಪ್ಯಾರಿಸ್ಸಿಗೆ ಕರೆದುಕೊಂಡು ಬಂದಿದ್ದಳು ಶ್ರೀಮತಿ ಮೀಸ್ಟರ್. ಆಕೆಯು ಪ್ಯಾಶ್ಚರ್‌ನ ಹೆಸರನ್ನು ಮಾತ್ರ ಕೇಳಿದ್ದಳು. ಆತನನ್ನು ನೋಡಿರಲಿಲ್ಲ.
ಶ್ರೀಮತಿ ಮೀಸ್ಟರ್ ಜೋಸೆಫನನ್ನು ಲೂಯಿಪ್ಯಾಶ್ಚರನ ಕಾಲ ಮೇಲೆ ಬಿದ್ದು ತನ್ನ ಮಗನ ಪ್ರಾಣವನ್ನು ಉಳಿಸುವಂತೆ
ಕಣ್ಣೀರ್ಗರೆದಳು. ಪ್ಯಾಶ್ಚರ್, ‘ಇದುವರೆಗೂ ನಾನು ಕಂಡು ಹಿಡಿದ ಹೊಸ ‘ಔಷಧ’ವನ್ನು (ಲಸಿಕೆಯನ್ನು) ಮನುಷ್ಯರ
ಮೇಲೆ ಪ್ರಯೋಗಿಸಿಲ್ಲ, ಕೇವಲ ಪ್ರಾಣಿಗಳ ಮಾತ್ರ ಪ್ರಯೋಗಿಸಿ ಯಶಸ್ಸನ್ನು ಪಡೆದಿದ್ದೇನೆ. ನಿನ್ನ ಮಗನಿಗೆ ಈ ಔಷಧವನ್ನು ಕೊಟ್ಟರೆ, ಅವನ ಜೀವವು ಹೋದರೂ ಹೋಗಬಹುದು’ ಎಂದ. ನೀವು ಔಷಧವನ್ನುಕೊಡಲಿಲ್ಲವೆಂದರೆ, ಅವನು ಹುಚ್ಚುನಾಯಿ ಕಾಯಿಲೆಗೆ ತುತ್ತಾಗಿ ಸಾಯುವುದಂತೂ ಖಚಿತ. ನೀವು ಔಷಧವನ್ನು ನೀಡಿ. ಬದುಕು – ಸಾವು ದೈವೇಚ್ಛೆೆ’ ಎಂದಳು ಆ ತಾಯಿ.
ಪ್ರಥಮ ಪ್ರಯೋಗ: ಲೂಯಿ ಪ್ಯಾಶ್ಚರ್ ತನ್ನ ಪುಟ್ಟ ಪ್ರಯೋಗಾಲಯದ ಬೋನುಗಳಲ್ಲಿ ಹುಚ್ಚು ಹಿಡಿದ ನಾಯಿಗಳನ್ನು ಸಾಕಿದ್ದ. ಊರಿನ ಜನರೆಲ್ಲ ಪ್ಯಾಶ್ಚರನನ್ನು ಕಂಡು ಮೂಗು ಮುರಿಯುವವರೆ. ಒಂದು ಹುಚ್ಚು ಹಿಡಿದ ನಾಯಿಯು ಮೊಲವನ್ನು ಕಚ್ಚಿತ್ತು. ಆ ಮೊಲದ ಮಿದುಳುಬಳ್ಳಿಯನ್ನು ತೆಗೆದುಕೊಂಡು ಅದರ ಸಾರವನ್ನು ಸಂಗ್ರಹಿಸಿದ್ದ. ಈ ಸಾರವನ್ನು ನಾಯಿಗಳಿಗೆ ಚುಚ್ಚಿದಾಗ, ಆ ನಾಯಿಗೆ ಹುಚ್ಚು ಹಿಡಿಯುತ್ತಿರಲಿಲ್ಲ ಎನ್ನುವುದನ್ನು ಗಮನಿಸಿದ್ದ. ಆದರೆ ಅವನು ಎಂದೂ ಹುಚ್ಚು ಹಿಡಿದು ಸತ್ತ ಮೊಲದ ಮಿದುಳುಬಳ್ಳಿಯ ಸಾರವನ್ನು ಮನುಷ್ಯರಿಗೆ ಚುಚ್ಚಿರಲಿಲ್ಲ. ಆದರೆ ಈಗ ಶ್ರೀಮತಿ ಮೀಸ್ಟರ್ ತನ್ನ ಮಗನು ಸತ್ತರೂ ಪರವಾಗಿಲ್ಲ. ಔಷಧವನ್ನು ಕೊಡಿ ಎಂದು ಮುಕ್ತ ಪರವಾನಗಿಯನ್ನು ಕೊಟ್ಟಿದ್ದ ಕಾರಣ, ಲೂಯಿ ಪ್ಯಾಶ್ಚರ್ ಜೋಸೆಫ ನನ್ನು ಹೋಟೆಲ್ ಡಿಯು ಎನ್ನುವ ಸ್ಥಳಕ್ಕೆ ಕರೆದುಕೊಂಡು ಹೋದ. ಇಬ್ಬರು ವೈದ್ಯರ ನೆರವಿನಿಂದ, ತಾನು ರೂಪಿಸಿದ್ದ ಮೊಲದ ಬೆನ್ನುಹುರಿಯ ಸಾರವನ್ನು ಇಂಜಕ್ಷನ್ ಮೂಲಕ ಜೋಸೆಫ್ ಮೀಸ್ಟರನಿಗೆ ಚುಚ್ಚಿದ.
ಚುಚ್ಚುಮದ್ದನ್ನು ಕೊಟ್ಟದ್ದೇನೋ ಕೊಟ್ಟುಬಿಟ್ಟ. ಆದರೆ ಪರಿಣಾಮವು ಏನಾಗಬಹುದು ಎನ್ನುವ ಚಿಂತೆ ಮತ್ತು ಆತಂಕ ಪ್ಯಾಶ್ಚರನಿಗೆ. ಮೂರು ವಾರಗಳ ಕಾಲ ಜೋಸೆಫ್ ಮೀಸ್ಟರನ ಹಾಸಿಗೆಯ ಬಳಿಯೇ ಕುಳಿತಿದ್ದ ಪ್ಯಾಶ್ಚರ್. ಪ್ಯಾಶ್ಚರನ ತಾಳ್ಮೆಗೆ ಪ್ರತಿ ಫಲವು ದೊರೆತಿತ್ತು. ಜೋಸೆಫ್ ಮೀಸ್ಟರ್ ಪೂರ್ಣ ಗುಣಮುಖನಾದ. ಮಾನವನ ಇತಿಹಾಸ ದಲ್ಲಿ ಮೊತ್ತ ಮೊದಲ ಬಾರಿಗೆ ಓರ್ವ ಹುಡುಗನು ಹುಚ್ಚು ನಾಯಿ ಕಡಿತದಿಂದ ಪೂರ್ಣ ಗುಣಮುಖನಾಗಿದ್ದ.
ಲೂಯಿ ಪ್ಯಾಶ್ಚರ್ ಅದೇ ಅಕ್ಟೋಬರ್ ತಿಂಗಳಿನಲ್ಲಿ ಹುಚ್ಚು ನಾಯಿ ಕಚ್ಚಿದ್ದ ಇನ್ನೊಬ್ಬ ಹುಡುಗನಿಗೂ ಈ ಹೊಸ
‘ಔಷಧ’ವನ್ನು ನೀಡಿದ. ಆ ಹುಡುಗನೂ ಸಂಪೂರ್ಣ ಗುಣಮುಖನಾದ. ಆಗ ಪ್ಯಾಶ್ಚರ್ ಈ ಬಗ್ಗೆ ಒಂದು ಪ್ರಬಂಧವನ್ನು ಬರೆದು ಫ್ರಾನ್ಸ್ ದೇಶದ ‘ಫ್ರೆಂಚ್ ನ್ಯಾಶನಲ್ ಅಕಾಡೆಮಿ ಆಫ್ ಮೆಡಿಸಿನ್’ ಸಂಸ್ಥೆಗೆ ಸಲ್ಲಿಸಿದ. ಈ ಪ್ರಬಂಧವು ಅಲ್ಪಕಾಲದಲ್ಲಿಯೇ ವಿಶ್ವ ವಿಖ್ಯಾತವಾಗಿ ಹುಚ್ಚುನಾಯಿ ಕಡಿದವರು ದೂರದ ಅಮೆರಿಕದಿಂದ ಪ್ಯಾಶ್ಚರ್ ಪ್ರಯೋಗಾಲಯಕ್ಕೆ ಬರಲಾರಂಭಿಸಿದರು.
ದಿನಾಚರಣೆ: ಪ್ರತಿವರ್ಷ ಸೆಪ್ಟೆಂಬರ್ 28ರ ದಿನವನ್ನು ‘ವಿಶ್ವ ರೇಬಿಸ್ ದಿನಾಚರಣೆ’ಯನ್ನಾಗಿ ಆಚರಿಸುತ್ತಿದ್ದೇವೆ. ಈ
ದಿನದಂದೇ ಲೂಯಿ ಪ್ಯಾಶ್ಚರ್ ಮರಣಿಸಿದ್ದ. ಈ ವರ್ಷವು 14ನೆಯ ದಿನಾಚರಣೆಯನ್ನು ಆಚರಿಸುತ್ತಿದ್ದು ‘ರೇಬಿಸ್ ಕೊನೆಗೊಳಿಸಿ – ಜೊತೆಗೂಡಿ, ಲಸಿಕೆ ನೀಡಿ’ (ಎಂಡ್ ರೇಬಿಸ್: ಕೊಲಾಬೊರೇಟ್, ವ್ಯಾಕ್ಸಿನೇಟ್) ಎನ್ನುವುದು ಈ ವರ್ಷದ ಘೋಷವಾಕ್ಯವಾಗಿದೆ. ಈ ದಿನದಂದು ನಮ್ಮ ಜಗತ್ತನ್ನು ರೇಬಿಸ್ ಮುಕ್ತವನ್ನಾಗಿ ಮಾಡುವ ದಿಶೆಯಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನ – ಮಂಥನಗಳು ನಡೆಯುತ್ತವೆ.
ಜಿೀರೊ 2030: 2030ರ ಹೊತ್ತಿಗೆ ನಾಯಿ ಕಚ್ಚುವುದರಿಂದ ಬರುವ ರೇಬಿಸ್ ಕಾಯಿಲೆಯ ಪ್ರಕರಣಗಳು ಶೂನ್ಯವಾಗ
ಬೇಕಿರುವುದು ವಿಶ್ವ ರೇಬಿಸ್ ದಿನಾಚರಣೆಯ ಹೆಗ್ಗುರಿಯಾಗಿದೆ.
ಲಸಿಕೆಗಳು: ನಮ್ಮ ಭೂಮಿಯನ್ನು ರೇಬಿಸ್ ಮುಕ್ತವಾಗಿಸಬೇಕಾದರೆ, ಎಲ್ಲ ನಾಯಿಗಳಿಗೆ/ ಬೆಕ್ಕುಗಳಿಗೆ ರೇಬಿಸ್ ಲಸಿಕೆಯನ್ನು ಕೊಡಿಸುವುದು ಹಾಗೂ ನಾಯಿ ಅಥವ ಯಾವುದೇ ಪ್ರಾಣಿಯಿಂದ ಕಚ್ಚಿಸಿಕೊಂಡವರೂ ಸಹ ರೇಬಿಸ್ ಲಸಿಕೆಯನ್ನು ತೆಗೆದುಕೊಳ್ಳಲೇಬೇಕು ಎನ್ನುವ ಜಾಗೃತಿಯನ್ನು ಉಂಟು ಮಾಡುವುದು ಎರಡನೆಯ ಉದ್ದೇಶವಾಗಿದೆ.
ಸಾಮೂಹಿಕ ಪ್ರಯತ್ನ: ನಮ್ಮ ಸಮಾಜವನ್ನು ರೇಬಿಸ್ ಮುಕ್ತ ಸಮಾಜವನ್ನಾಗಿ ಪರಿವರ್ತಿಸಬೇಕಾದರೆ ಅದು ಒಬ್ಬರಿಂದ ಸಾಧ್ಯವಿಲ್ಲ. ಎಲ್ಲ ದೇಶಗಳ, ಎಲ್ಲ ಜನರ ಸಾಂಕ ಪ್ರಯತ್ನದಿಂದ ಮಾತ್ರ ಅದು ಸಾಧ್ಯ. ಹಾಗಾಗಿ ಎಲ್ಲರ ಸಹಕಾರವನ್ನು ಕೋರುವುದು ಈ ದಿನದ ಮೂರನೆಯ ಉದ್ದೇಶವಾಗಿದೆ.
ಸಾವು ಖಚಿತ: ರೇಬಿಸ್ ಮನುಷ್ಯರನ್ನು ಹಾಗೂ ಪ್ರಾಣಿಗಳನ್ನು ಕೊಲ್ಲುವ ಮಾರಕ ರೋಗ. ರೇಬಿಸ್ ಲಕ್ಷಣಗಳು ಒಂದು ಸಲ ಆರಂಭವಾಯಿತೆಂದರೆ ಆ ಮನುಷ್ಯನು ಸಾಯುವುದು ಖಂಡಿತ. ಭಾರತದಲ್ಲಿ ಪತಿವರ್ಷ ಸುಮಾರು 20,000 ಜನರು ರೇಬಿಸ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅಂದರೆ, ಜಗತ್ತಿನಲ್ಲಿ ಸಂಭವಿಸುವ ಒಟ್ಟು ರೇಬಿಸ್ ಸಾವುಗಳಲ್ಲಿ 1/3 ಭಾರತದಲ್ಲಿಯೇ ಸಂಭವಿಸುತ್ತಿದೆ.
ಭಾರತದಲ್ಲಿ ಶೇ.99 ರೇಬಿಸ್ ಪ್ರಕರಣಗಳು ಹುಚ್ಚು ನಾಯಿ ಕಡಿತದಿಂದಲೇ ಸಂಭವಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ
ಭಾರತದಲ್ಲಿರುವ ಅಪಾರ ಬೀದಿ ನಾಯಿಗಳು. ಬೀದಿ ನಾಯಿಗಳನ್ನು ಹಿಡಿಯಲು ಪ್ರಾಣಿ ದಯಾ ಸಂಘದವರ ನೂರು ಅಡ್ಡಿಗಳಿವೆ. ಆದರೆ ಅವರು ಬೀದಿ ನಾಯಿಗಳ ಬದುಕಿಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನವನ್ನು ನಡೆಸುತ್ತಿಲ್ಲ. ಇದು ಶೋಚನೀಯ. ಬೀದಿನಾಯಿಗಳನ್ನು ಹಿಡಿದು ಅವುಗಳ ಸಂತಾನ ಹರಣವನ್ನು ಮಾಡಿ ಮತ್ತೆ ಬೀದಿಗೆ ಬಿಡುವ ಕೆಲಸ ನಡೆಯುತ್ತಿದೆ.
ಇದು ಬೀದಿ ನಾಯಿಗಳ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದಾದರೂ, ಪರಿಣಾಮಕಾರಿಯಾದ ಪರಿಹಾರ ವಲ್ಲ. ನಮ್ಮ ಭಾರತೀಯರು ಪ್ರತಿಯೊಂದು ನಾಯಿಯನ್ನು ದತ್ತು ತೆಗೆದುಕೊಳ್ಳಬೇಕು. ಅದಕ್ಕೆ ಆಶ್ರಯ, ಆಹಾರ, ರಕ್ಷಣೆ ಯನ್ನು ನೀಡಬೇಕು. ಆಗ ಮಾತ್ರ ಬೀದಿ ನಾಯಿಗಳ ಸಂಖ್ಯೆ ಪೂರ್ಣ ನಿಯಂತ್ರಣಕ್ಕೆ ಬರುತ್ತದೆ. ಬೀದಿ ನಾಯಿಗಳನ್ನು ದತ್ತು ತೆಗೆದು ಕೊಂಡವರು ಮಾಡಬೇಕಾದ ಅತಿ ಮುಖ್ಯ ಕೆಲಸವೆಂದರೆ, ಆ ನಾಯಿಗಳಿಗೆ ಪ್ರೀತಿಯನ್ನು ಮುಕ್ತವಾಗಿ ನೀಡಬೇಕು. ಮನುಷ್ಯರ ಪ್ರೀತಿ ವಿಶ್ವಾಸಗಳಿಗೆ ನಾಯಿಗಳು ಒಲಿಯುತ್ತವೆ. ಎಷ್ಟಾದರೂ ನಾಯಿಯು ನಂಬಿಕೆಗೆ ಪ್ರತಿರೂಪವಲ್ಲವೆ!
ನಾಯಿಗೆ ಪ್ರತಿವರ್ಷ ರೇಬಿಸ್ ಲಸಿಕೆಯನ್ನು ಕೊಡಿಸಬೇಕು. ರೇಬಿಸ್ ಜೊತೆಗೆ ಡಿಎಚ್‌ಪಿಪಿ ಲಸಿಕೆಯನ್ನು (ಡಿಸ್ಟೆೆಂಪರ್,
ಹೆಪಟೈಟಿಸ್, ಪ್ಯಾರಾ ಇನ್ ಫ್ಲುಯೆಂಜ, ಪಾರ್ವೋವೈರಸ್) ಕೊಡಿಸುವುದರಿಂದ ನಾಯಿಗೆ ಬರುವ ಪ್ರಮುಖ ಸೋಂಕು
ರೋಗಗಳನ್ನು ತಡೆಗಟ್ಟಬಹುದು.
ಪುರಾತನ: ರೇಬಿಸ್ ಕಾಯಿಲೆಯು ಬಹುಶಃ ಮನುಷ್ಯನಷ್ಟೇ ಪುರಾತನವಾದ ಕಾಯಿಲೆ. ಇದರ ಬಗ್ಗೆ ಕ್ರಿ.ಪೂ.2000ದಿಂದ
ದಾಖಲೆಗಳು ದೊರೆಯು ತ್ತವೆ. ಕ್ರಿ.ಪೂ.1930ಕ್ಕೆ ಸೇರಿದ ‘ಕೋಡೆಕ್ಸ್ ಆಫ್ ಎಶುನುನ್ನ’ ಎನ್ನುವ ಜೇಡಿಮಣ್ಣಿನ ದಾಖಲೆಯು ರೇಬಿಸ್ ಕಾಯಿಲೆಯ ಬಗ್ಗೆ ಪ್ರಸ್ತಾಪಿಸುತ್ತದೆ. ‘ಹುಚ್ಚುನಾಯಿ ಕಚ್ಚಿ ಯಾರಾದರೂ ಮರಣಿಸಿ ದರೆ, ಅದಕ್ಕೆ ದಂಡವನ್ನು ನಾಯಿಯ ಯಜಮಾನನು ತೆರಬೇಕು’ ಎನ್ನುತ್ತದೆ.
ಪ್ರಾಚೀನ ಗ್ರೀಸ್ ಸಂಸ್ಕೃತಿಯು ರೇಬಿಸ್ ರೋಗಕ್ಕೆ ಕಾರಣ ‘ಲಿಸ್ಸಾ’ ಎನ್ನುವ ದೇವತೆಯ ಕೋಪ ಎಂದು ಭಾವಿಸಿದ್ದರು. ರೇಬಿಸ್ ಪೀಡಿತನನ್ನು ಗುಣಪಡಿಸಲು ಅಸಂಖ್ಯ ಅವೈಜ್ಞಾನಿಕ ಚಿಕಿತ್ಸೆಗಳು ಅಸ್ತಿತ್ವಕ್ಕೆ ಬಂದವು. ನಾಲಿಗೆಯ ಕೆಳಗಿನ ಅಂಕಪೊರೆಯನ್ನು (ಟಂಗ್ ಫ್ರೆನ್ಯುಲಮ್) ಕತ್ತರಿಸುವ ಕ್ರೂರ ಚಿಕಿತ್ಸೆಯೂ ಒಂದಾಗಿತ್ತು.
ರೇಬಿಸ್: ಹುಚ್ಚು ನಾಯಿ ಕಡಿತದ ರೋಗವನ್ನು ‘ರೇಬಿಸ್’ ಎಂದು ಕರೆಯುತ್ತೇವೆ. ಲ್ಯಾಟಿನ್ ಭಾಷೆಯಲ್ಲಿ ರೇಬಿಸ್ ಎನ್ನುವ ಶಬ್ದದ ಅರ್ಥ ‘ಹುಚ್ಚು’. ಈ ರೇಬಿಸ್ ಎನ್ನುವ ಶಬ್ದವು ಸಂಸ್ಕೃತದ ‘ರಭಸ’ ಎನ್ನುವ ಶಬ್ದದಿಂದ ರೂಪುಗೊಂಡಿದೆ. ಹುಚ್ಚು ಹಿಡಿದ ನಾಯಿಯು ಮೈಮೇಲೆ ಪ್ರಜ್ಞೆಯಿಲ್ಲದ ರಭಸವಾಗಿ ಎಲ್ಲೆಂದರಲ್ಲಿ ಮುನ್ನುಗ್ಗುತ್ತದೆ. ಸಿಕ್ಕ ಸಿಕ್ಕ ಜನ/ಪ್ರಾಣಿ/ವಸ್ತುಗಳನ್ನು ಕಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಈ ಕಾಯಿಲೆಯನ್ನು ಕನ್ನಡದಲ್ಲಿ ರೇಬಿಸ್ ಎಂದೇ ಕರೆಯಬಹುದು.
ರೇಬಿಸ್ ಬರಲು ಕಾರಣ ಒಂದು ವೈರಸ್. ರೇಬಿಸ್ ರೋಗವನ್ನು ತರಬಲ್ಲ ವೈರಸ್ಸುಗಳ ಗುಂಪಿಗೆ ‘ಲಿಸ್ಸಾ ವೈರಸ್ಸುಗಳು’ ಎನ್ನುವರು. ಲಿಸ್ಸಾ ಎನ್ನುವುದು ಗ್ರೀಕ್ ಶಬ್ದ. ‘ಘೋರ’ ಅಥವ ‘ಭಯಂಕರ’ ಎಂದು ಅರ್ಥ. ಈ ಗುಂಪಿನಲ್ಲಿ ರೇಬಿಸ್ ಲಿಸ್ಸಾ ವೈರಸ್, ಆಸ್ಟ್ರೇಲಿಯನ್ ಬಾವಲಿ ಲಿಸ್ಸಾವೈರಸ್, ದುವೆನ್‌ಹೇಗ್ ಲಿಸ್ಸಾವೈರಸ್‌ಗಳಿವೆ. ರೇಬಿಸ್ ಲಿಸ್ಸಾವೈರಸ್ ಮನುಷ್ಯರಲ್ಲಿ ರೇಬಿಸ್ ಕಾಯಿಲೆಯನ್ನು ಉಂಟು ಮಾಡುತ್ತವೆ.
ಉಳಿದ ಎರಡು ವೈರಸ್ಸುಗಳು ರೇಬಿಸ್ ರೋಗ ಲಕ್ಷಣಗಳನ್ನು ಹೋಲುವಂಥ ಕಾಯಿಲೆಗಳನ್ನು ಉಂಟುಮಾಡುತ್ತವೆ.
ರೇಬಿಸ್ ಮೂಲತಃ ಪ್ರಾಣಿಗಳ ಕಾಯಿಲೆ. ಅಕಸ್ಮಾತ್ತಾಗಿ ಮನುಷ್ಯನಿಗೆ ಅಂಟಿಕೊಳ್ಳುವುದರಿಂದ, ಇದನ್ನು ಪ್ರಾಣಿಜನ್ಯ
ರೋಗ (ಜೂನೋಸಿಸ್) ಎಂದು ಕರೆಯುವುದುಂಟು. ಹೆಚ್ಚಿನ ಜನರು ರೇಬಿಸ್ ಹುಚ್ಚು ಹಿಡಿದ ನಾಯಿಯಿಂದ ಮಾತ್ರ ಹರಡುತ್ತದೆ ಎಂದು ಭಾಸುವುದುಂಟು. ಹಾಗೇನಿಲ್ಲ.
ರೇಬಿಸ್ ಸೋಂಕು ಗ್ರಸ್ತ ಬೆಕ್ಕು, ಮಂಗ, ಮೇಕೆ, ಕುರಿ, ದನಗಳಿಂದಲೂ ಹರಡುತ್ತದೆ. ಹಾಗೆಯೇ ಬಾವಲಿ, ನರಿ, ತೋಳ, ರಕೂನ್, ಕೊಯೋಟೊ, ಮುಂಗಸಿ, ಮುಳ್ಳು ಹಂದಿ, ಕರಡಿ, ಇಲಿ, ಅಳಿಲು ಮುಂತಾದ ವೈವಿಧ್ಯಮಯ ಪ್ರಾಣಿಗಳ ಕಚ್ಚುವಿಕೆಯ ಮೂಲಕವೂ ಇದು ಹರಡಬಲ್ಲುದು.
ರೇಬಿಸ್ ವೈರಸ್, ಸೋಂಕುಗ್ರಸ್ತ ಪ್ರಾಣಿಯ ನರ ಮಂಡಲದಲ್ಲಿ ಹಾಗೂ ಜೊಲ್ಲಿನಲ್ಲಿರುತ್ತದೆ. ಹಾಗಾಗಿ, ರೇಬಿಸ್ ಪೀಡಿತ ನಾಯಿಯು ಕಚ್ಚಲೇ ಬೇಕೆಂಬ ನಿಯಮವಿಲ್ಲ. ಅದು ನೆಕ್ಕಿದರೂ ಸಾಕು. ಅದರ ಜೊಲ್ಲಿನ ಸಂಪರ್ಕಕ್ಕೆ ಬಂದರೂ ಸಾಕು. ರೇಬಿಸ್ ವೈರಸ್ ನಮ್ಮ ಶರೀರದೊಳಗೆ ಪ್ರವೇಶವನ್ನು ಪಡೆಯಬಲ್ಲುದು.
ಲಕ್ಷಣಗಳು: ರೇಬಿಸ್ ಸೋಂಕು ಅಂಟಿದ ನಾಯಿಯಲ್ಲಿ ಎರಡು ರೀತಿಯ ರೇಬಿಸ್ ಕಂಡುಬರಬಹುದು. ಮೊದಲನೆಯದು ಉಗ್ರ ಸ್ವರೂಪದ್ದು ಹಾಗೂ ಎರಡನೆಯದು ಶಾಂತ ಸ್ವರೂಪದ್ದು. ಯಾವುದಾದರೂ ಹುಚ್ಚು ಹಿಡಿದ ನಾಯಿಯು ಕಡಿತದಿಂದ ಹೊಸ ನಾಯಿಯ ಶರೀರದೊಳಗೆ ರೇಬಿಸ್ ಪ್ರವೇಶಿಸುತ್ತದೆ. ಗಾಯ ಪ್ರದೇಶದಲ್ಲಿರುವ ನರಗಳ ಮೂಲಕ ಮಿದುಳನ್ನು ತಲುಪುತ್ತದೆ. ಉಗ್ರಸ್ವರೂಪದ ನಮೂನೆಯಲ್ಲಿ ನಾಯಿಯು ಸ್ವನಿಯಂತ್ರಣವನ್ನು ಕಳೆದುಕೊಂಡು ಓಡುತ್ತದೆ. ಎದುರಿಗೆ ಏನು ಸಿಕ್ಕರೂ ಕಚ್ಚುತ್ತದೆ.
ಎದುರು ಸಿಕ್ಕ ಪ್ರಾಣಿಗಳು, ಮನುಷ್ಯರು, ಕಲ್ಲು, ಮಣ್ಣು, ಕಸ ಕಡ್ಡಿ ಎಲ್ಲವನ್ನೂ ಕಚ್ಚುತ್ತದೆ. ಸಾಕಿದ ಯಜಮಾನನನ್ನು
ಗುರುತಿಸುವುದಿಲ್ಲ. ವಿಪರೀತ ರೋಷವನ್ನು ಪ್ರದರ್ಶಿಸುತ್ತದೆ. ಆಹಾರವನ್ನು ಸೇವಿಸು ವುದಿಲ್ಲ. ಧ್ವನಿಯು ಬದಲಾಗುತ್ತದೆ. ಚಿತ್ರ ಧ್ವನಿಯಲ್ಲಿ ಕೂಗುತ್ತದೆ. ಕೆಳದವಡೆಯು ಸೆಳೆತಕ್ಕೆ ಒಳಗಾಗುವ ಕಾರಣ, ಬಾಯಿಯಿಂದ ಜೊಲ್ಲು ನಿರಂತರವಾಗಿ ಸೋರುತ್ತದೆ. ಈ ಜೊಲ್ಲಿನಲ್ಲಿ ರೇಬಿಸ್ ವೈರಸ್ ಇರುತ್ತದೆ. ಜೊಲ್ಲು ಮನುಷ್ಯ ಇಲ್ಲವೇ ಪ್ರಾಣಿಗಳಿಗೆ ಮೆತ್ತಿಕೊಂಡರೆ, ರೇಬಿಸ್ ಭೀತಿಯನ್ನು ತಳ್ಳಿಹಾಕಲು ಸಾಧ್ಯವಾಗುವುದಿಲ್ಲ. ಶಾಂತ ಸ್ವರೂಪದ ರೇಬಿಸ್ ಲಕ್ಷಣಗಳನ್ನು ತೋರುವ ನಾಯಿಯು ಒಂದು ಕತ್ತಲೆಯ ಮೂಲೆಯನ್ನು ಹುಡುಕಿ ಮಲಗುತ್ತದೆ. ಕರೆದರೆ ಪ್ರತಿಕ್ರಿಯೆಯನ್ನು ತೊರುವುದಿಲ್ಲ.
ಆಹಾರವನ್ನು ಸ್ವೀಕರಿಸುವುದಿಲ್ಲ. ಕೆಳದವಡೆಯು ಸೆಳೆತಕ್ಕೆ ಒಳಗಾಗಿ ಜೋಲುಬೀಳುತ್ತದೆ. ಹಾಗಾಗಿ ಜೊಲ್ಲು ಸೋರಿಸುತ್ತಾ ಪಾರ್ಶ್ವವಾಯುಗೆ ತುತ್ತಾಗಿ ಜೀವವನ್ನು ಬಿಡಬಹುದು. ಇದನ್ನು ‘ಡಂಬ್ ರೇಬಿಸ್’ ಎಂದೂ ಕರೆಯುವರು. ಇಂತಹ ನಾಯಿಯ ಬಗ್ಗೆ ತೀವ್ರ ಎಚ್ಚರಿಕೆಯಿಂದಿರಬೇಕು. ಆಹಾರವನ್ನು ನೀಡಲು ಮಕ್ಕಳು ಹೋಗದಂತೆ ಎಚ್ಚರವಹಿಸಬೇಕು. ನಾಯಿಯ ವಿಪರೀತ
ವರ್ತನೆಯನ್ನು ಕಂಡು ಪಶುವೈದ್ಯರನ್ನು ಬರಹೇಳುವುದು ಒಳ್ಳೆಯದು. ಅಲ್ಲಿಯವರೆಗೆ ನಾಯಿಯಿಂದ ಎಲ್ಲರನ್ನೂ
ದೂರವಿಡಬೇಕು. ರೇಬಿಸ್ ನಾಯಿಯು ಮನುಷ್ಯನಿಗೆ ಕಚ್ಚಿ, ಅವನು ಯಾವುದೇ ರೀತಿಯ ಪ್ರಥಮ ಚಿಕಿತ್ಸೆ ಅಥವ ಲಸಿಕೆಯನ್ನು
ತೆಗೆದುಕೊಳ್ಳದೇ ಹೋದರೆ, ಅವನಲ್ಲಿ ರೋಗಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತವೆ.
ಜ್ವರ, ತಲೆನೋವು, ವಾಕರಿಕೆ, ವಾಂತಿ, ಕಿರಿಕಿರಿ, ಆತಂಕ, ಗೊಂದಲ, ಅತಿಚಟುವಟಿಕೆ, ತಿನ್ನಲು, ಕುಡಿಯಲು ಕಷ್ಟ, ವಿಪರೀತ ಜೊಲ್ಲು ಸೋರುವಿಕೆ, ಭ್ರಮೆಗಳು, ನಿದ್ರಾಹೀನತೆ, ಬೆಳಕನ್ನು ನೋಡಲಾಗದ, ಶಬ್ದವನ್ನು ಕೇಳಲಾಗದ ಸ್ಥಿತಿಯು ತಲೆದೋರು ತ್ತದೆ. ನೀರನ್ನು ಕಂಡರೆ ವಿಪರೀತ ಭಯವಾಗುತ್ತದೆ. ಹಾಗಾಗಿ ರೇಬಿಸ್ ರೋಗವನ್ನು ಜಲಭಯ ಅಥವ ಹೈಡ್ರೋಫೋಬಿಯ ಎಂದೂ ಕರೆಯುವರು. ಕೊನೆಗೆ ಉಸಿರಾಟದ ಸ್ನಾಯುಗಳು ಸೆಡೆತುಕೊಂಡು ಸಾವು ಸಂಭವಿಸುತ್ತದೆ.
ಪ್ರಥಮ ಚಿಕಿತ್ಸೆೆ: ನಾಯಿಯಾಗಲಿ ಯಾವುದೇ ಪ್ರಾಣಿಯಾಗಲಿ, ಯಾವುದೇ ರೀತಿಯ ಪ್ರಚೋದನೆಯಿಲ್ಲದೆ ಕಚ್ಚಿದಾಗ, ಆ ಗಾಯವನ್ನು ಗಂಭೀರವಾಗಿ ಪರಿಗಣಿಸಬೇಕು. ವೈದ್ಯರನ್ನು ನೋಡುವ ಮೊದಲು ನೀಡಲೇಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಇರಬೇಕು. ಪ್ರಥಮ ಚಿಕಿತ್ಸೆಯನ್ನು ನೀಡಿದ ನಂತರ ವೈದ್ಯರ ಬಳಿಗೆ ಕರೆದೊಯ್ಯುವುದು ಒಳ್ಳೆಯದು. ಮೊದಲು ನಲ್ಲಿಯ ನೀರನ್ನು ಪೂರ್ಣ ಪ್ರಮಾಣದಲ್ಲಿ ತಿರುಗಿಸಬೇಕು.
ವೇಗವಾಗಿ ಸುರಿಯುತ್ತಿರುವ ನೀರಿನ ಧಾರೆಯ ಕೆಳಗೆ ಗಾಯವನ್ನು ಇಡಬೇಕು. ನೀರಿನ ಧಾರೆಯು ನೇರವಾಗಿ ಗಾಯದ ಮೇಲೆ ಬೀಳುವಂತಿರಬೇಕು. ರಕ್ತಸ್ರಾವದ ಬಗ್ಗೆ ಚಿಂತಿಸಬೇಕಾಗಿಲ್ಲ. ಗಾಯದಲ್ಲಿರ ಬಹುದಾದ ವೈರಸ್ಸೆಲ್ಲ ಪೂರ್ಣ ನಿವಾರಣೆ ಯಾಗಬೇಕು. ಅದು ಪ್ರಥಮ ಚಿಕಿತ್ಸೆಯ ಮೂಲ ಗುರಿ. ನೀರು ಬೀಳುತ್ತಿರುವಾಗ ಸೋಪಿನಿಂದ ಗಾಯವನ್ನು ಚೆನ್ನಾಗಿ ತೊಳೆಯಬೇಕು. ಯಾವ ಸೋಪು ಸಿಕ್ಕರೂ ಪರವಾಗಿಲ್ಲ. ಸೋಪು ರೇಬಿಸ್ ವೈರಸ್ಸನ್ನು ನಾಶಪಡಿಸಬಲ್ಲುದು. ನಿರಂತರವಾಗಿ ಕನಿಷ್ಠ 15 ನಿಮಿಷಗಳ ಕಾಲವಾದರೂ ಗಾಯವನ್ನು ತೊಳೆಯ ಬೇಕು. ನಂತರ ಅದರ ಮೇಲೆ ಯಾವುದಾದರೂ ಪೂತಿನಾಶಕ ದ್ರಾವಣ (ಆಂಟಿಸೆಪ್ಟಿಕ್ ಲೊಶನ್) ಹಚ್ಚಬೇಕು. ಟಿಂಕ್ಚರ್ ಅಯೋಡಿನ್ ಅತ್ಯುತ್ತಮ. ಅದು ಸಿಗಲಿಲ್ಲವೆಂದರೆ ಪೋಡೋನ್
ಅಯೋಡಿನ್ ಶೇ.10ರಷ್ಟು ದ್ರಾವಣವನ್ನು ಹಚ್ಚಬಹುದು. ಅವು ಸಿಗಲಿಲ್ಲವೆಂದರೆ ಆಲ್ಕೋಹಾಲ್, ಸ್ಯಾವಲಾನ್,
ಡೆಟ್ಟಾಲ್ ಮುಂತಾದವುಗಳನೂ ಹಚ್ಚಬಹುದು. ಒಂದು ಶುದ್ಧವಾದ ಬಟ್ಟೆಯಿಂದ, ಧೂಳು ಬೀಳದಂತೆ ಗಾಯವನ್ನು ಮುಚ್ಚಿ ವೈದ್ಯರ ಬಳಿಗೆ ಕರೆದೊಯ್ಯಬೇಕು. ವೈದ್ಯರು ಚಿಕಿತ್ಸೆಯನ್ನು ತಕ್ಷಣ ಆರಂಭಿಸುತ್ತಾರೆ.
ಲಸಿಕೆ: ನಾಯಿಯ ಸಂಪರ್ಕಕ್ಕೆ ಪದೇ ಪದೆ ಬರಬಹುದಾದ ಜನರು ರೇಬಿಸ್ ಲಸಿಕೆಯನ್ನು ಮುಂಚಿತವಾಗಿ ತೆಗೆದುಕೊಳ್ಳುವುದು ಒಳ್ಳೆಯದು. ಪಶುವೈದ್ಯರು, ಕಾಡಿನಲ್ಲಿ ಓಡಾಡುವವರು, ಅಂಚೆ ಅಥವ ಕೊರಿಯರ್ ವಿತರಕರು, ಪೊಲೀಸರು, ಘೂರ್ಕಗಳು, ರಾತ್ರಿ ಪಾಳಿಯ ಕಾರ್ಮಿಕರು ಮುಂತಾದವರು ಮೊದಲೇ ತೆಗೆದುಕೊಳ್ಳುವುದು ಒಳ್ಳೆಯದು. ಯಾವ ಲಸಿಕೆಯನ್ನು ಎಷ್ಟು ದಿನಗಳ ಕಾಲ ತೆಗೆದುಕೊಳ್ಳಬೇಕು ಎನ್ನುವುದನ್ನು ಕುಟುಂಬ ವೈದ್ಯರು ತಿಳಿಸುವರು.
ನಾಯಿ ಕಚ್ಚಿದ ಮೇಲೆ, ಅದಕ್ಕೆ ನಿಜಕ್ಕೂ ಹುಚ್ಚು ಹಿಡಿದಿದ್ದರೆ 10 ದಿನಗಳ ಒಳಗೆ ಸಾಯುತ್ತದೆ. ಆದರೆ ಅಲ್ಲಿಯವರೆಗೆ ಕಾಯುವು ದರಲ್ಲಿ ಅರ್ಥವಿಲ್ಲ. ಗಾಯಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿದ ಕೂಡಲೇ ವೈದ್ಯರನ್ನು ಭೇಟಿಯಾಗಿ ಅವರು ಹೇಳಿದಂಥ ಲಸಿಕೆಯನ್ನು, ಹೇಳಿದಷ್ಟು ಡೋಸುಗಳನ್ನು ಮರೆಯದೆ ತೆಗೆದುಕೊಳ್ಳಬೇಕು. ಲಸಿಕೆಯು ಮಾತ್ರ ಜೀವವನ್ನು ಉಳಿಸಬಲ್ಲುದು. ಮಾಯಾ – ಮಾಟ – ಮಂತ್ರ, ಮನೆವೈದ್ಯ, ನಾಟಿವೈದ್ಯ ಯಾವುದೂ ಜೀವವನ್ನು ಉಳಿಸಲಾರದು.
ತಡೆಗಟ್ಟುವಿಕೆ: ರೇಬಿಸ್ ರೋಗವನ್ನು ತಡೆಗಟ್ಟುವುದರಲ್ಲಿ ಪ್ರತಿಯೊಬ್ಬರ ಪಾತ್ರವಿದೆಯೆಂದೆವು. ಕೆಲವು ಮುಖ್ಯಾಂಶಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.
ಸಾಕುಪ್ರಾಣಿಗಳಿಗೆ ಲಸಿಕೆ: ಕಡ್ಡಾಯವಾಗಿ ಮನೆಯಲ್ಲಿರುವ ನಾಯಿ ಬೆಕ್ಕುಗಳಿಗೆ ಪಶುವೈದ್ಯರಿಂದ ಪೂರ್ಣ ಪ್ರಮಾಣದ
ಲಸಿಕೆಯನ್ನು ಕೊಡಿಸಬೇಕು.
ಇತಿಮಿತಿ: ಸಾಕು ಪ್ರಾಣಿಗಳನ್ನು ಸಾಧ್ಯವಾದಷ್ಟು ಬೀದಿ ಪ್ರಾಣಿಗಳೊಂದಿಗೆ ಬೆರೆಯಲು ಬಿಡಬೇಡಿ. ನಾಯಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವಾಗ, ಅದನ್ನು ಮುಕ್ತವಾಗಿ ಓಡಾಡಲು ಬಿಡಬೇಡಿ.
ರಕ್ಷಣೆ: ಮನೆಯಲ್ಲಿ ಕೆಲವು ಸಲ ಮೊಲ, ಗಿನಿ ಪಿಗ್ ಮುಂತಾದ ಸಣ್ಣ ಪುಟ್ಟ ಪ್ರಾಣಿಗಳನ್ನು ಸಾಕಿಕೊಳ್ಳುವವರು ಇರಬಹುದು. ಈ ಪ್ರಾಣಿಗಳು ನಾಯಿಗಳ ಅಥವ ಇತರ ಪ್ರಾಣಿಗಳ ಸಂಪರ್ಕಕ್ಕೆ ಬರದ ಹಾಗೆ ಎಚ್ಚರಿಕೆಯಿಂದ ಗೂಡಿನಲ್ಲಿಟ್ಟುಕೊಂಡು ನೋಡಿಕೊಳ್ಳಬೇಕು.
ಎಚ್ಚರಿಕೆ: ಅಪರಿಚಿತ ನಾಯಿಯ ಸಂಪರ್ಕಕ್ಕೆ ಬರದ ಹಾಗೆ ಎಚ್ಚರವಹಿಸಿ. ನಾಯಿಯನ್ನು ದುರುಗುಟ್ಟಿಕೊಂಡು ನೋಡಬೇಡಿ. ಪೆಟ್ಟುಬಿದ್ದ ಇಲ್ಲವೇ ಅಸ್ವಸ್ಥ ನಾಯಿಯ ಆರೈಕೆಗೆ ನೀವು ಹೋಗುವ ಬದಲು, ತಜ್ಞರಿಗೆ ಮಾಹಿತಿಯನ್ನು ನೀಡುವುದು ಒಳ್ಳೆಯದು. ಮಕ್ಕಳ ಕೈಯಲ್ಲಿ ತಿನಿಸನ್ನು ಕೊಟ್ಟು ಬೀದಿಗೆ ಕಳುಹಿಸಬೇಡಿ. ತಿಂಡಿಗಾಗಿ ನಾಯಿಯು ಮಕ್ಕಳ ಮೇಲೆರಗಬಹುದು. ಬೀದಿ ನಾಯಿ ಗಳನ್ನು ಅಟ್ಟಿಸಿಕೊಂಡು ಹೋಗುವುದು, ಕಲ್ಲು ಇಲ್ಲವೇ ಕೋಲನ್ನು ತೆಗೆದುಕೊಂಡು ಹೊಡೆಯುವುದನ್ನು ಮಾಡಬೇಡಿ. ರಾತ್ರಿಯ ಹೊತ್ತು ಓಡಾಡುವಾಗ ದುಪ್ಪಟ್ಟು ಎಚ್ಚರವಾಗಿರಿ. ಸಾಮಾನ್ಯವಾಗಿ ನಾಯಿಗಳು ಗುಂಪುಗಳಲ್ಲಿ ಓಡಾಡುತ್ತಿರುತ್ತವೆ. ಹಾಗಾಗಿ ಅವು ಒಮ್ಮೆೆಲೆ ಆಕ್ರಮಣವನ್ನು ಮಾಡಬಹುದು. ಒಂದು ನಾಯಿಯು ಗುರುಗುಟ್ಟುತ್ತಾ ಬಂದಾಗ ಕಿರುಚಬಾರದು
ಹಾಗೂ ಓಡಬಾರದು. ಬದಲಿಗೆ ನಿಧಾನವಾಗಿ ಹಿಂದೆ ಹಿಂದಕ್ಕೆ ಹೆಜ್ಜೆಯಿಡುವುದು ಒಳ್ಳೆಯದು.
ಸ್ವಲ್ಪ ದೂರ ಹೋದಮೇಲೆ ನಾಯಿಯು ಆಸಕ್ತಿಯನ್ನು ಕಳೆದುಕೊಳ್ಳಬಹುದು. ನಾಯಿಯು ಕಚ್ಚಬಹುದು ಎಂದನಿಸಿದರೆ, ನಿಮ್ಮ ಕೈಯಲ್ಲಿರುವ ಚೀಲ, ಛತ್ರಿ, ಬ್ರೀಫ್ ಕೇಸ್ ಮುಂತಾದ ಪದಾರ್ಥಗಳನ್ನು ನಿಮ್ಮ ಮುಂದೆ ಹಿಡಿದುಕೊಳ್ಳಿ. ನಾಯಿಯು ಅವನ್ನು ಕಚ್ಚುವ ಸಾಧ್ಯತೆಯು ಹೆಚ್ಚಿರುತ್ತದೆ.
ನಾಯಿಯು ಮನುಷ್ಯನ ನಂಬಿಕೆಯ ಪ್ರಾಣಿ. ಸನ್ಮಿತ್ರ. ಮನೆಯ ಸದಸ್ಯರಿಗಿಂತ ಹೆಚ್ಚಾಗಿ ನಮ್ಮ ಯೋಗಕ್ಷೇಮವನ್ನು ನೋಡಿ ಕೊಳ್ಳುತ್ತದೆ. ನಿಜ. ಆದರೆ, ಅದಕ್ಕೆ ರೇಬಿಸ್ ಅಥವ ಇತರ ರೀತಿಯ ಸೋಂಕು ಕಾಯಿಲೆಗಳು ಅಂಟದ ಹಾಗೆ ಎಚ್ಚರಿಕೆಯಿಂದ ಆರೈಕೆ ಮಾಡಬೇಕಾದದ್ದು ನಮ್ಮ ಕರ್ತವ್ಯ ಎನ್ನುವುದನ್ನು ಮರೆಯದಿರೋಣ.