Saturday, 14th December 2024

ಲಿಂಗಾಯತ ನಾಯಕ ಪಟ್ಟಕ್ಕೆ ಹಲವರ ರೇಸ್

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಯಡಿಯೂರಪ್ಪ ಸಕ್ರಿಯರಾಗಿರುವ ತನಕ ಇಡೀ ಸಮುದಾಯದಲ್ಲಿ ನಾಯಕತ್ವದ ಪ್ರಶ್ನೆ ಇರಲಿಲ್ಲ. ಆದರೀಗ ಅವರು ಹಿನ್ನೆಲೆಗೆ ಸರಿಯುತ್ತಿದ್ದಾರೆ ಎನ್ನುವ ಮೊದಲೇ, ಮುಂದಿನ ನಾಯಕತ್ವಕ್ಕಾಗಿ ಹಲವರು ಸಜ್ಜಾಗಿದ್ದಾರೆ. ಅದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಾಯಕರೂ ಸೇರಿದ್ದಾರೆ.

ಭಾರತದಲ್ಲಿ ರಾಜಕಾರಣ ಮತ್ತು ಜಾತೀಯತೆ ಜತೆ ಜತೆಯಲ್ಲಿಯೇ ಹೋಗುವ ಎರಡು ಜೋಡೆತ್ತುಗಳ ರೀತಿ. ಜಾತಿ, ಧರ್ಮ ಮೀರಿದ ಪ್ರಜಾಪ್ರಭುತ್ವ ನೀಡ ಬೇಕು ಎಂದು ಹೇಳುವವರೂ, ಕೊನೆಯಲ್ಲಿ ಜಾತಿಯತೆಯ ಸಂಕೋಲೆಯಲ್ಲಿ ಕಟ್ಟು ಬೀಳುವುದು ಸರ್ವೇ ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಜಾತಿ ಮೀರಿ ರಾಜಕಾರಣ ಮಾಡಿದ ನಾಯಕರು ಇಲ್ಲವೇ ಇಲ್ಲ ಎಂದಲ್ಲ. ಅವರೆಲ್ಲ ಬೆರಳೆಣಿಕೆಯಷ್ಟು.

ಕರ್ನಾಟಕದ ವಿಷಯದಲ್ಲಿ ನೋಡುವುದಾದರೆ, ಲಿಂಗಾಯತ, ಒಕ್ಕಲಿಗ, ದಲಿತ ಹಾಗೂ ಕುರುಬ ಮತಗಳ ಮೇಲೆಯೇ ಚುನಾವಣಾ ರಾಜಕೀಯ ನಿಂತಿವೆ. ಈ ನಾಲ್ಕು ಸಮುದಾಯದ ನಾಯಕನೆಂದು ಒಮ್ಮೆ ಎನಿಸಿ ಕೊಂಡರೆ, ಆತನಿಗೆ ಜನಪ್ರತಿನಿಧಿ ಸ್ಥಾನಮಾನ ಸಾಯುವ ತನಕ ಗಟ್ಟಿ. ಒಕ್ಕಲಿಗ ಸಮುದಾಯಕ್ಕೆ ದೇವೇ ಗೌಡರು, ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತದೆ. ಇನ್ನು ದಲಿತ ನಾಯಕರಾಗಿ ಅನೇಕರು ಕಾಣಿಸಿಕೊಂಡರೂ, ಅಧಿಕಾರದ ವಿಷಯಕ್ಕೆ ಬಂದಾಗ ಬಹುತೇಕರು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ.

ಅದೇ ಕಾರಣಕ್ಕೆ ಈಗಲೂ ‘ದಲಿತ ಮುಖ್ಯಮಂತ್ರಿ’ ಕೂಗು ಆಗ್ಗಾಗೆ ಕೇಳುತ್ತಲೇ ಇರುತ್ತದೆ. ಇನ್ನು ಉತ್ತರ ಕರ್ನಾಟಕದ ೮೦ಕ್ಕೂ ಹೆಚ್ಚು ಕ್ಷೇತ್ರ ಸೇರಿದಂತೆ ಕರ್ನಾಟಕದ ೧೧೦ಕ್ಕೂ ಹೆಚ್ಚು ಕ್ಷೇತ್ರದಲ್ಲಿ ‘ಟ್ರಂಪ್ ಕಾರ್ಡ್’ ಆಗಿರುವ ಹಾಗೂ ನಿರ್ಣಾಯಕ ಮತದಾರ ಎನಿಸಿಕೊಂಡಿರುವ ಲಿಂಗಾಯತ ಸಮುದಾಯದ ನಾಯಕನಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿದ್ದಾರೆ. ಅಽಕಾರದಲ್ಲಿ ಇಲ್ಲದಿದ್ದರೂ, ಈಗಲೂ ಇಡೀ ಸಮುದಾ ಯವನ್ನು ಹಿಡಿದಿಟ್ಟುಕೊಳ್ಳಲು ಅವರು ಯಶಸ್ವಿಯಾಗಿದ್ದಾರೆ. ಆದರೆ ಅವರ ನಂತರ ಯಾರು ಎನ್ನುವ ಪ್ರಶ್ನೆ ಬಂದಾಗಲೆಲ್ಲ, ನೂರಾರು ಹೆಸರು ಮುನ್ನಲೆಗೆ ಬಂದು ಹೋಗುತ್ತವೆ. ಯಾವ ಹೆಸರುಗಳೂ ಗಟ್ಟಿಯಾಗಿ ನಿಲ್ಲುತ್ತಿಲ್ಲ.

ಈಗಾಗಲೇ ವಯಸ್ಸಿನ ಕಾರಣಕ್ಕೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಹುತೇಕ ‘ರಾಜಕೀಯ ನಿವೃತ್ತಿ ಜೀವನ’ವನ್ನು ಯಡಿಯೂರಪ್ಪ ಆರಂಭಿಸಿ ದ್ದಾರೆ. ಆದರೆ ಸಮುದಾಯಕ್ಕೆ ಮಾತ್ರ ಅವರ ನಂತರದ ನಾಯಕ ಎಂದು ಯಾರನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗೇ ನೋಡಿದರೆ ಲಿಂಗಾಯತ ಸಮುದಾಯದ ಶೇ.೫೦ಕ್ಕಿಂತ ಹೆಚ್ಚು ಜನಸಂಖ್ಯೆ ಇರುವುದು ಪಂಚಮಸಾಲಿ ಲಿಂಗಾಯತ ಸಮುದಾಯದಲ್ಲಿ. ಯಡಿಯೂರಪ್ಪ ಅವರು ಲಿಂಗಾಯತ ಸಮು ದಾಯದಲ್ಲಿರುವ ಬಣಜಿಗ ಉಪ ಪಂಗಡಕ್ಕೆ ಸೇರಿದವರು. ಆದರೂ ಅವರನ್ನು ಪಂಚಮಸಾಲಿ ಲಿಂಗಾಯತರೂ ಸೇರಿದಂತೆ ಲಿಂಗಾಯತ ಸಮುದಾಯ ದಲ್ಲಿರುವ ೧೦೦ಕ್ಕೂ ಹೆಚ್ಚು ಉಪ ಪಂಗಡದವರೆಲ್ಲರೂ ಒಪ್ಪಿಕೊಂಡಿದ್ದಾರೆ. ಲಿಂಗಾಯತರು ಮಾತ್ರವಲ್ಲದೇ, ಯಡಿಯೂರಪ್ಪ ಅವರನ್ನು ‘ಮಾಸ್ ಲೀಡರ್’ ಆಗಿ ರಾಜ್ಯದ ಜನರೂ ಒಪ್ಪಿದ್ದಾರೆ.

ಯಡಿಯೂರಪ್ಪ ಸಕ್ರಿಯರಾಗಿರುವ ತನಕ ಇಡೀ ಸಮುದಾಯದಲ್ಲಿ ನಾಯಕತ್ವದ ಪ್ರಶ್ನೆ ಇರಲಿಲ್ಲ. ಆದರೀಗ ಅವರು ಹಿನ್ನೆಲೆಗೆ ಸರಿಯುತ್ತಿದ್ದಾರೆ ಎನ್ನುವ ಮೊದಲೇ, ಮುಂದಿನ ನಾಯಕತ್ವಕ್ಕಾಗಿ ಹಲವರು ಕೋಟು ಹೊಲಿಸಿಕೊಂಡು ಸಜ್ಜಾಗಿದ್ದಾರೆ. ಅದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಾಯಕರೂ ಸೇರಿದ್ದಾರೆ. ನಾಲ್ಕೈದು ವರ್ಷದಿಂದಲೂ ಮುಂದಿನ ನಾಯಕರ‍್ಯಾರು ಎನ್ನುವ ವಿಷಯಕ್ಕೆ ಹಲವು ನಾಯಕರು ‘ಪೂರ್ವ ತಯಾರಿ’ ನಡೆಸುತ್ತಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಈ ತಯಾರಿಗೆ ಇನ್ನಷ್ಟು ವೇಗ ಸಿಕ್ಕಿದೆ ಎಂದರೆ ತಪ್ಪಾಗುವುದಿಲ್ಲ. ‘ಲಿಂಗಾಯತ ನಾಯಕ’ ಎಂದು ಎನಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವು ದೇನು ಇಂದು ಮೊನ್ನೆಯಲ್ಲ.

ಆರೇಳು ವರ್ಷದ ಹಿಂದೆಯೇ, ಯಡಿಯೂರಪ್ಪ ನಂತರ ಲಿಂಗಾಯತ ನಾಯಕ ಎನಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ, ಕಾಂಗ್ರೆಸಿನ ಮಾಜಿ ಸಚಿವರಾದ ಎಂ.ಪಿ. ಪಾಟೀಲ್, ವಿನಯ್ ಕುಲಕರ್ಣಿ ಸೇರಿದಂತೆ ಹಲವು ನಾಯಕರು ‘ಪ್ರತ್ಯೇಕ ಲಿಂಗಾಯತ ಧರ್ಮ’ಕ್ಕಾಗಿ ಭಾರಿ ಹೋರಾಟ ನಡೆಸಿದರು. ಈ ಮೂಲಕ ಪಂಚಮ ಸಾಲಿಗೆ ಪ್ರತ್ಯೇಕ ಧರ್ಮ ಕೊಡಿಸಿದ್ದಾಗಿ ಬ್ರ್ಯಾಂಡ್ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದರು. ಆದರೆ ಈ ಪ್ರಯತ್ನ ಆರಂಭದಲ್ಲಿ ಪಾಟೀಲರಿಗೆ ಯಶಸ್ಸು
ಕೊಟ್ಟರೂ, ಬಳಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ’back fire” ಆಗಿದ್ದು ಸುಳ್ಳಲ್ಲ. ಈ ಸೋಲನ್ನು ಒಪ್ಪದ ಎಂಬಿಪಿ ಅವರು ಈಗಲೂ, ಲಿಂಗಾಯತ ಧರ್ಮಕ್ಕೆ ‘ನಾಯಕ’ನಾಗಿ ಹೊರಹೊಮ್ಮಲು ಇನ್ನಿಲ್ಲದ ಪ್ರಯತ್ನ ಮುಂದುವರಿಸಿದ್ದಾರೆ.

ಪಾಟೀಲರ ಬಳಿಕ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ್ ಅವರು, ಲಿಂಗಾಯತ ಸಮುದಾಯಕ್ಕೆ ‘ಒಬಿಸಿ ಮೀಸಲಾತಿ ಕೊಡಿಸಬೇಕು’ ಎನ್ನುವ ಆಶಯ ಹೊತ್ತು ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ಬಂದರು. ಈ ಪಾದಯಾತ್ರೆಯಲ್ಲಿ ಜಯಮೃತ್ಯಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಅವರನ್ನೂ ಸೇರಿಸಿಕೊಂಡು ಪಂಚಮಸಾಲಿ ಸಮುದಾಯದ ‘ಇಬ್ಬರು ಜಗದ್ಗುರುಗಳು ನಮ್ಮೊಂದಿಗೆ ಇದ್ದಾರೆ’ ಎನ್ನುವ ಸಂದೇಶ ರವಾನಿಸಲು ಪ್ರಯತ್ನಿಸಿದರು. ರ‍್ಯಾಲಿಯ ಅಂತಿಮ ಬೃಹತ್ ವೇದಿಕೆಯಲ್ಲಿ ಒಬಿಸಿ ಸ್ಥಾನಮಾನ ಸಿಗುವ ತನಕ ಎದ್ದು ಹೋಗುವುದಿಲ್ಲ ಎಂದು ಕೂತರು. ಆದರೆ ಈ ನಡೆಯನ್ನು ಖಂಡಿಸಿ, ವಚನಾ ನಂದ ಸ್ವಾಮೀಜಿಗಳು ಹೊರನಡೆಯುತ್ತಿದ್ದಂತೆ, ಅರಮನೆ ಮೈದಾನ ಖಾಲಿಯಾಗುವ ಮೂಲಕ, ಕಾಶಪ್ಪನವರ್ ಅವರಿಗೆ ಹಿನ್ನಡೆಯಾಯಿತು.

ಕಾಂಗ್ರೆಸ್ ನಾಯಕರು ಮಾತ್ರವಲ್ಲದೇ ಬಿಜೆಪಿ ನಾಯಕರು ಸಹ, ಯಡಿಯೂರಪ್ಪ ಬಳಿಕ ನಾಯಕತ್ವ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ. ಪ್ರಮುಖವಾಗಿ ಹೈಕಮಾಂಡ್ ಜತೆ ಉತ್ತಮ ಬಾಂಧವ್ಯ ಹೊಂದಿರುವ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು ಈ ಪ್ರಯತ್ನ ದಲ್ಲಿದ್ದಾರೆ. ಇನ್ನು ಲಿಂಗಾಯತ ಸಮುದಾಯದ ಮುಂದಿನ ನಾಯಕನನ್ನಾಗಿ ಬಸವರಾಜ ಬೊಮ್ಮಾಯಿ ಅವರನ್ನೇ ಬಿಂಬಿಸಬೇಕು ಎನ್ನುವ ಕಾರಣಕ್ಕೆ, ಯಡಿಯೂರಪ್ಪ ಬಳಿಕ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ವರಿಷ್ಠರು ಕೂರಿಸಿದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ವರಿಷ್ಠರ ಈ ನಡೆ ಯಶಸ್ವಿಯಾಗಿಲ್ಲ.

ಈ ಎಲ್ಲದರ ನಡುವೆ ಬಾಗಲಕೋಟೆಯ ಜಮಖಂಡಿಯ ಆಲಗೂರದಲ್ಲಿ ಮೂರನೇ ಪಂಚಮಸಾಲಿ ಜಗದ್ಗುರು ಪೀಠ ಅಸ್ವಿತ್ಥಕ್ಕೆ ಬರಲು ತಯಾರಾಗಿದೆ. ಈಗಾಗಲೇ ಕೂಡಲಸಂಗಮದಲ್ಲಿ ಜಯಮೃತ್ಯಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿಗಳು ಜಗದ್ಗುರು ಗಳಾಗಿದ್ದಾರೆ. ಆದರೀಗ ಈ ಎರಡು ಪೀಠಗಳಿಗೆ ಸಡ್ಡು ಹೊಡೆದು ಮತ್ತೊಂದು ಪೀಠಕ್ಕೆ ಸಿದ್ಧತೆ ಆರಂಭವಾಗಿದ್ದು, ಈ ಪೀಠಕ್ಕೆ ಸುಮಾರು 60 ಸ್ವಾಮೀಜಿಗಳು ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಈ ಪೀಠ ಅಸ್ವಿತ್ಥಕ್ಕೆ ಬರುವ ಹಿಂದೆ ಸಮುದಾಯದ ಏಳಿಗೆ, ಅಭಿವೃದ್ಧಿಗಿಂತ ಹೆಚ್ಚಾಗಿ ರಾಜಕೀಯ ಕಾರಣಗಳಿವೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಈ ವಿಷಯದಲ್ಲಿ ಜಯಮೃತ್ಯಂಜಯ ಸ್ವಾಮೀಜಿಗಳು ನೇರವಾಗಿಯೇ, ಸಚಿವ ಮುರುಗೇಶ್ ನಿರಾಣಿ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದಾರೆ. ಏನೇ ಆದರೂ, ಒಂದು ಮಠ ಅಸ್ವಿತ್ಥಕ್ಕೆ ಬರುವ ಹಿಂದೆ ಅದರಲ್ಲಿಯೂ, ಲಿಂಗಾಯತ ಸಮುದಾಯದ ನಾಯಕತ್ವದ ಪ್ರಶ್ನೆ ಎದ್ದಿರುವ ಈ ಸಮಯದಲ್ಲಿ ಮತ್ತೊಂದು ಜಗದ್ಗುರು ಪೀಠ ಅಸ್ವಿತ್ಥಕ್ಕೆ ಬಂತು ಎಂದರೆ, ಧರ್ಮ, ಸಮುದಾಯಕ್ಕಿಂತ ರಾಜಕೀಯ ವಾಸನೆ ಬರುವುದು ಸಹಜವೇ ಸರಿ.

ಹಾಗೇ ನೋಡಿದರೆ ರಾಮಕೃಷ್ಣ ಹೆಗಡೆ (ಜಾತಿಯಲ್ಲಿ ಬ್ರಾಹ್ಮರಾಗಿದ್ದರೂ) ಅವರ ನಂತರ ಲಿಂಗಾಯತ ಸಮುದಾಯವನ್ನು ಒಟ್ಟಿಗೆ ತಗೆದುಕೊಂಡು ಹೋಗುವಲ್ಲಿ
ಮಹತ್ವದ ಪಾತ್ರವಹಿಸಿದ ಯಡಿಯೂರಪ್ಪ ಅವರು, ಎಂದಿಗೂ ತಮ್ಮ ನಂತರ ಸಮುದಾಯವನ್ನು ಮುನ್ನಡೆಸಿಕೊಂಡು ಹೋಗುವ ನಾಯಕನ್ಯಾರು ಎನ್ನುವ
ಬಗ್ಗೆ ಯೋಚಿಸಲಿಲ್ಲ. ಎರಡನೇ ಹಂತದ ನಾಯಕರನ್ನು ಬೆಳೆಸುವ ಗೋಜಿಗೆ ಹೋಗಲಿಲ್ಲ ಎನ್ನುವುದು ಇಡೀ ಸಮುದಾಯದಲ್ಲಿರುವ ಮಾತು. ಇದು ಕೇವಲ ಲಿಂಗಾಯತ ಸಮುದಾಯ ಮಾತ್ರವಲ್ಲದೇ, ಪಕ್ಷದ ದೃಷ್ಟಿಯಿಂದಲೂ ಇದೇ ರೀತಿ ನಡೆದುಕೊಂಡಿದ್ದರಿಂದ, ಬಿಜೆಪಿಯಲ್ಲಿ ‘ಮುಂದಿನ ನಾಯಕನ್ಯಾರು?’ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಇದೇ ಪರಿಸ್ಥಿತಿ ಈಗ ಲಿಂಗಾಯತ ಸಮುದಾಯದಲ್ಲಿಯೂ ಇದೆ. ಈ ಪ್ರಶ್ನೆಗೆ ಉತ್ತರ ಸಿಗುವುದೇ ಅಥವಾ ಈಗಿರುವಂತೆ ಸಮುದಾಯವೊಂದು ನೂರಾರು ಬಾಗಿಲು ಎನ್ನುವಂತೆ ಮುಂದುವರಿಯುವುದೇ ನೋಡಬೇಕಿದೆ.