ಸಂಗತ
ವಿಜಯ್ ದರಡಾ
ಕಾಂಗ್ರೆಸ್ಸಿನ ‘ಭಾರತ್ ಜೋಡೋ’ ಯಾತ್ರೆ ಎಷ್ಟರ ಮಟ್ಟಿಗೆ ಫಲಪ್ರದವಾದೀತು ಎಂಬುದೇ ಮುಖ್ಯಪ್ರಶ್ನೆ. ದೇಶವನ್ನು ಸಂಘಟಿಸು ವುದಕ್ಕಿಂತ ಮೊದಲು ಕಾಂಗ್ರೆಸ್‌ಅನ್ನು ಒಂದುಮಾಡುವ ಕೆಲಸ ಆಗಬೇಕಿದೆ. ತಮ್ಮನ್ನು ಕೇಳುವವರೇ ಇಲ್ಲ ಎಂಬ ಭಾವ ಕಾರ್ಯಕರ್ತರಲ್ಲಿ ಮನೆ ಮಾಡಿದೆ.
ಕಾಂಗ್ರೆಸ್ಸಿನ ಮಹತ್ವಾಕಾಂಕ್ಷೆಯ ‘ಭಾರತ್ ಜೋಡೋ’ ಯಾತ್ರೆ 12 ರಾಜ್ಯಗಳು, 2 ಕೇಂದ್ರಾ ಡಳಿತ ಪ್ರದೇಶಗಳಲ್ಲಿ ಸಾಗಲಿದ್ದು ಯಾನ ಇತ್ತೀಚೆಗಷ್ಟೇ ಆರಂಭವಾಗಿದೆ. ರಾಹುಲ್ ಗಾಂಧಿಯವರು ಕೂಡ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ಪ್ರತಿನಿತ್ಯ ನಿಗದಿತ ದೂರ ವನ್ನು ಕಾಲ್ನಡಿಗೆಯಲ್ಲಿ ಐದು ತಿಂಗಳ ಕಾಲ ಕ್ರಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯಾನದ ಒಟ್ಟು ದೂರ 3570 ಕಿ.ಮೀ.ಗಳು. ಇಷ್ಟೊಂದು ಸುದೀರ್ಘ ಪಾದಯಾತ್ರೆ ಯನ್ನು ನಿಭಾಯಿಸುವುದು ಸಣ್ಣ ವಿಷಯವಲ್ಲ; ತಮ್ಮ ಪಕ್ಷವನ್ನು ಪುನರು ಜ್ಜೀವನ ಗೊಳಿಸುವುದಕ್ಕೆ ಶತಾಯಗತಾಯ ಇದನ್ನು ಮಾಡಲೇಬೇಕೆಂದು ನಿರ್ಧರಿಸಿ ರಾಹುಲ್ ಗಾಂಧಿ ಮುಂದಡಿ ಇಟ್ಟಿದ್ದಾರೆ.
ಆದರೆ, ಈ ಪಾದಯಾತ್ರೆ ಮಾಡುವ ಮೂಲಕ ಅತಿಹಳೆಯ ರಾಜಕೀಯ ಪಕ್ಷಕ್ಕೆ ಸಂಜೀವಿನಿ ಯನ್ನು ತುಂಬುವ ಕೆಲಸ ರಾಹುಲ್ ಗಾಂಧಿಯವರಿಂದ ಸಾಧ್ಯವಾದೀತೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಭಾರತ್ ಜೋಡೋ ಯಾತ್ರೆಗೆ ಕನ್ಯಾಕುಮಾರಿಯಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು. ಅದಕ್ಕೂ ಮುನ್ನ ರಾಹುಲರು ಶ್ರೀಪೆರಂಬದೂರಿಗೆ ತೆರಳಿ ತಮ್ಮ ತಂದೆ ರಾಜೀವ್ ಗಾಂಧಿಯವರ ಸ್ಮಾರಕಕ್ಕೆ ಗೌರವ ಸಮರ್ಪಣೆ ಮಾಡಿದರು.
ಹಾಗಾಗಿ ಯಾತ್ರೆ ಆರಂಭವಾಗಿದ್ದು ಶ್ರೀಪೆರಂಬದೂರಿನಿಂದ ಎಂದು ಜನರು ನಂಬಿದ್ದಾರೆ. ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ದೇಶದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ತರುವಾಯದ ಲೋಕಸಭಾ ಚುನಾವಣೆಯಲ್ಲಿ 404 ಸ್ಥಾನ ಗೆಲ್ಲುವ ಮೂಲಕ ಗಮನ ಸೆಳೆದಿದ್ದರು. ಈ ಗೆಲುವಿನ ಹಿಂದೆ ಇಂದಿರಾ ಅಗಲಿಕೆಯ ಅನುಕಂಪದ ಅಲೆಯೂ ಕೆಲಸ ಮಾಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಜತೆಜತೆಗೆ ರಾಜೀವರ ಬಗ್ಗೆಯೂ ಜನರಿಗೆ ತುಂಬಾ ಭರವಸೆ ಇತ್ತು. ಆದರೆ ಇಂದು ಅದೇ ಪಕ್ಷದಲ್ಲಿ ಭರವಸೆ ಕ್ಷೀಣವಾಗಿದೆ.
ಮೂಲಬೇರುಗಳು ಬುಡಮೇಲಾಗಿವೆ. ಹಾಗಾಗಿ ರಾಹುಲರ ಯಾತ್ರೆಯ ಮೇಲೆ ಹೆಚ್ಚಿನ ನಿರೀಕ್ಷೆಗಳಿರುವುದು ಸುಳ್ಳಲ್ಲ. ಈ ಯಾತ್ರೆ ತಿರುವನಂತಪುರವನ್ನು ಹೊರತುಪಡಿಸಿ ಕೊಚ್ಚಿ, ಮೈಸೂರು, ಬಳ್ಳಾರಿ, ರಾಯಚೂರು, ನಾಂದೇಡ್, ಜಲಗಾಂವ್,ಇಂದೋರ್, ಕೋಟ, ದಾಸಾ, ಆಲ್ವಾರ್, ಬುಲಂದ್ ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್ ಮತ್ತು ಜಮ್ಮು ನಗರಗಳ ಮೂಲಕ ಹಾದು ಹೋಗಲಿದೆ, ಶ್ರೀನಗರದಲ್ಲಿ ಸಂಪನ್ನವಾಗಲಿದೆ.
ನಡುವೆ ಬರುವ ಅನೇಕ ಸಣ್ಣಪುಟ್ಟ ಪಟ್ಟಣಗಳ ಮೂಲಕ ಹಾದುಹೋಗಲಿದೆ. ಯಾತ್ರೆ ಸಾಗಲಿರುವ ಪ್ರದೇಶದ ಜನರಲ್ಲಿ, ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಹುಮ್ಮಸ್ಸು ತುಂಬುವ ಕೆಲಸವಾಗಲಿದೆ. ಅದು ಹೊಸ ಭರವಸೆಗೆ ನಾಂದಿಯಾದೀತು. ಭಾರತದ ಎಲ್ಲ ಹಳ್ಳಿಗಳಲ್ಲಿ ತನ್ನ ಬೇರು-ಬಿಳಲು ಹೊಂದಿರುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಎಂದು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ. ಆ ಮೂಲಬೇರುಗಳಿಗೆ ನೀರು ಹರಿಸಬೇಕಿದೆ. ಕೆಲವೆಡೆ ಭೂಮಿ ಬಂಜರು ಬಿದ್ದಿದೆ, ಅಲ್ಲೆಲ್ಲ ನೀರು – ಗೊಬ್ಬರಗಳ
ಒದಗಣೆ ಆಗಬೇಕಿದೆ.
ಗಿಡ ಎಷ್ಟೇ ಒಣಗಿಹೋಗಿದ್ದರೂ ಅದಕ್ಕೆ ಪುನಶ್ಚೇತನ ಕೊಡುವ ದಿಸೆಯಲ್ಲಿ ಯಾರೂ ಭರವಸೆ ಕಳೆದುಕೊಳ್ಳಬಾರದು. ಆದರೆ ಅದು ಸುಲಭದ ಕೆಲಸವಲ್ಲ. ಪಕ್ಷದ ಕಾರ್ಯಕರ್ತರಲ್ಲಿ ಯಾತ್ರೆಯುದ್ದಕ್ಕೂ ಸೃಜಿಸಲಾಗುವ ಹುಮ್ಮಸ್ಸನ್ನು ಶಕ್ತಿಯಾಗಿ ಪರಿ ವರ್ತಿಸಬೇಕಿದೆ. ಪಕ್ಷ ಬದಲಾಗುತ್ತಿದೆ, ಸರಿದಾರಿಯಲ್ಲಿ ಸಾಗುತ್ತಿದೆ ಎಂಬ ನಂಬುಗೆಯನ್ನು ಕಾರ್ಯಕರ್ತರಲ್ಲಿ ಮೂಡಿಸ ಬೇಕಾಗಿದೆ. ಕಾರ್ಯಕರ್ತರ ದುಮ್ಮಾನಗಳಿಗೆ ಕಿವಿಯಾಗುವ ಕೆಲಸ ಈಗಿನ ತುರ್ತು ಅಗತ್ಯ.
ಪಕ್ಷದೊಳಗೆ ಸಾಂಸ್ಥಿಕ ಚುನಾವಣೆ ನಡೆಸುವ ಕುರಿತು ಆಗುತ್ತಿರುವ ಚರ್ಚೆಯೂ ಉತ್ತಮ ಬೆಳವಣಿಗೆ. ಆದಷ್ಟು ಬೇಗ ಈ ಪಕ್ಷಕ್ಕೆ ಅಧ್ಯಕ್ಷರ ನೇಮಕವಾಗಲಿ. ಸೇನಾ ದಳವೊಂದರ ಕಮಾಂಡರ್ ಬಗ್ಗೆ ಅನುಮಾನಗಳೆದ್ದಲ್ಲಿ ಅದು ಇಡೀ ಸೇನೆಯ ಜಂಘಾಬಲ ವನ್ನೇ ಉಡುಗಿಸಿಬಿಡಬಲ್ಲದು. ರಾಹುಲ್ ಗಾಂಧಿಯವರ ಯಾತ್ರೆಯ ಹಿಂದೆ ರಾಜಕೀಯ ಉದ್ದೇಶವಿರಬಹುದು, ಆದರೆ ಎಲ್ಲರಿಗೂ ಭಾರತವನ್ನು ಸಂಘಟಿಸುವ ಇರಾದೆಯಂತೂ ಇದೆ. ಎಲ್ಲೆಡೆಯ ವಾತಾವರಣದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಜಾತಿ- ಧರ್ಮಗಳ ನಡುವಣ ವೈಷಮ್ಯ ಕಂದಕವನ್ನು ಸೃಷ್ಟಿಸಿದೆ, ಇದು ದೇಶದ ಹಿತಕ್ಕೆ ಒಳ್ಳೆಯದಲ್ಲ. ಒಬ್ಬ ಅಲ್ಪಸಂಖ್ಯಾತ
ಸಮುದಾಯದ ವ್ಯಕ್ತಿಯ ಮನದಲ್ಲಿ ತನ್ನ ಹಕ್ಕುಗಳ ಬಗ್ಗೆ ಯಾವುದೇ ಆತಂಕಗಳಿದ್ದರೂ ಅದನ್ನು ಪರಿಹರಿಸುವ ಕೆಲಸ
ಮೊದಲು ಆಗಬೇಕು. ಭಾರತದ ಸಂವಿಧಾನದ ರೀತ್ಯಾ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಇದೆ. ಬಡವನಿರಲಿ ಬಲ್ಲಿದನಿರಲಿ, ಸಂವಿಧಾನ ಎಲ್ಲರಿಗೂ ಒಂದೇ ತೆರನಾದ ಹಕ್ಕುಗಳನ್ನು ಕೊಟ್ಟಿದೆ. ತನ್ನ ನಂಬಿಕೆಗೆ ಅನುಸಾರ ಬದುಕುವ ಹಕ್ಕೂ ಆತನಿಗಿದೆ. ತನ್ನ ಜಾತಿಯ ಅಥವಾ ಧರ್ಮದ ಕಾರಣಕ್ಕಾಗಿ ತಾರತಮ್ಯ ಮಾಡಲಾಗುತ್ತಿದೆ ಎಂದು ಯಾವೊಬ್ಬ ಬಡವ್ಯಕ್ತಿಯೂ ಭಾವಿಸು ವಂತಾಗಬಾರದು. ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ನಾನು ಅವರ ಜತೆ ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ನಡೆದ ಒಂದು ಸಮ್ಮೇಳನಕ್ಕೆ ಹೋಗಿದ್ದೆ.
ಅಲ್ಲಿರುವ ಭಾರತೀಯರ ಸಂಖ್ಯೆ 3000ಕ್ಕಿಂತ ಕಡಿಮೆ. ಆದರೆ ಅಲ್ಲಿನ ಸರಕಾರ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿ ಸುತ್ತದೆ ಮತ್ತು ಯಾರಿಗೂ ಕೀಳರಿಮೆ ಬಾರದಂತೆ ನೋಡಿಕೊಳ್ಳುತ್ತದೆ ಎಂಬುದನ್ನು ನಾನು ತಿಳಿದೆ. ಅಲ್ಲಿ ಕೃಷ್ಣ ಮಂದಿರವೂ ಇರುವುದನ್ನು ಕಂಡು ನಾನು ದಂಗಾಗಿದ್ದೆ. ಯಾವುದೇ ವ್ಯಕ್ತಿಯನ್ನು ಧರ್ಮದ ಕನ್ನಡಕದಿಂದ ನೋಡಬಾರದು. ನೀವು ಫೀಲ್ಡ್ ಮಾರ್ಷಲ್ ಮಾಣೆಕ್ ಶಾ, ಜನರಲ್ ಕಾರಿಯಪ್ಪ, ಡಾ.ಅಬ್ದುಲ್ ಕಲಾಂ ಅವರನ್ನು ಜಾತಿ-ಧರ್ಮದ ದೃಷ್ಟಿಕೋನದಲ್ಲಿ ನೋಡುತ್ತೀರಾ? ಇಲ್ಲವಲ್ಲ.
ಎಲ್ಲರೂ ಭಾರತೀಯರು. ಹಿಂದೂ, ಜೈನ, ಬೌದ್ಧ, ಸಿಖ್, ಪಾರ್ಸಿ ಅಥವಾ ಮುಸಲ್ಮಾನ ಹೀಗೆ ಎಲ್ಲ ಜನಾಂಗದವರೂ ತ್ರಿವರ್ಣ ಧ್ವಜದ ಭಾಗವೇ ಆಗಿದ್ದಾರೆ. ತ್ರಿವರ್ಣ ಧ್ವಜಕ್ಕಿಂತ ಮಿಗಿಲಾದುದು ಬೇರಿಲ್ಲ. ಈಗ ನಾವು ಮತ್ತೆ ರಾಹುಲ್ ಗಾಂಧಿಯವರ ‘ಭಾರತ್
ಜೋಡೋ’ ಯಾತ್ರೆಯತ್ತ ಬರೋಣ. ಈ ಯಾತ್ರೆ ಎಷ್ಟರ ಮಟ್ಟಿಗೆ ಫಲಪ್ರದವಾದೀತು ಎಂಬುದು ಇಲ್ಲಿರುವ ಮುಖ್ಯ ಪ್ರಶ್ನೆ. ದೇಶ ವನ್ನು ಸಂಘಟಿಸುವುದಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷವನ್ನು ಒಂದುಮಾಡುವ ಕೆಲಸ ಆಗಬೇಕಿದೆ.
ತಮ್ಮನ್ನು ಕೇಳುವವರೇ ಇಲ್ಲ ಎಂಬ ಭಾವ ಕಾರ್ಯಕರ್ತರಲ್ಲಿ ಮನೆಮಾಡಿದೆ. ಇದನ್ನು ತೊಡೆದುಹಾಕುವುದು ಸಾಧ್ಯವಾದೀತೇ?
ರಾಹುಲ್ ಗಾಂಧಿ ನಿಗದಿಪಡಿಸಿರುವ ಗುರಿಯನ್ನು ಸಾಧಿಸುವುದಕ್ಕೆ ಅವರ ಜತೆಗಿರುವವರು ಪೂರ್ಣಪ್ರಮಾಣದಲ್ಲಿ ಸಹಕಾರ ನೀಡುವರೇ? ಇದೆಲ್ಲಕ್ಕಿಂತ ಮಿಗಿಲಾಗಿ ರಾಹುಲ್ ಗಾಂಧಿ ಬದಲಾಗುತ್ತಾರೆಯೇ? ಎಂಬುದು ಎಲ್ಲರ ಮನದಲ್ಲಿರುವ ಪ್ರಶ್ನೆ. ಅವರು ಎಲ್ಲ ರಾಜ್ಯಗಳ, ಜಿಲ್ಲೆಗಳ ನಾಯಕರಿಗೆ ಲಭ್ಯವಾಗಬಲ್ಲರೇ? ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಎರಡು ಲೋಕಸಭಾ ಚುನಾವಣೆ ಗಳನ್ನು ಹೀನಾಯವಾಗಿ ಸೋತಿದೆ.
ಈಗ ಪಕ್ಷದ ಕೆಲಸದಲ್ಲಿ ರಾಹುಲ್ ಗಾಂಧಿಯವರು ಕಾಯಾ-ವಾಚಾ- ಮನಸಾ ತೊಡಗಿಸಿಕೊಳ್ಳುವರೇ? ಟೀಕೆಗಳಿಗೆ ಸರಿಯಾದ ಉತ್ತರ ಕೊಡಲು ಅವರು ಸಶಕ್ತರಾಗುವರೇ? ರಾಹುಲ್ ಗಾಂಧಿ ಯಾವ ಟಿ-ಶರ್ಟ್ ತೊಟ್ಟಿದ್ದಾರೆ ಅಥವಾ ಯಾವ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆಂಬುದು ನನ್ನ ಮಟ್ಟಿಗೆ ದೊಡ್ಡ ಸಂಗತಿಯಲ್ಲ. ಪ್ರತಿಯೊಬ್ಬರಲ್ಲೂ ಅದು ಇದೆ. ಪ್ರಮುಖವಾಗಿ ನೀವಿಲ್ಲಿ ಯಾವ ಸಂದೇಶವನ್ನು ಕೊಡಲು ಹೊರಟಿದ್ದೀರಿ? ರಾಹುಲ್ ಗಾಂಧಿಯವರು ಭಾರತವನ್ನು ಜೋಡಿಸುವ ಉದ್ದೇಶ
ಹೊಂದಿದ್ದಾರೆ.
ಆದರೆ ಇಲ್ಲಿ ಪ್ರಶ್ನೆಗಳಿವೆ. ಕಾರ್ಯಕರ್ತರು ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹಾಗಾಗಿಯೇ ಅವರು ‘ಈ ಯಾತ್ರೆ ಯಿಂದಾಗಿ ಮುಂದಡಿ ಇಡುತ್ತಿದ್ದಂತೆ ಅದರ ಹಿಂದಿನ ಗುರಿ ವಿಫಲವಾಗದಿರಲಿ’ ಎಂದು ಆಶಿಸುತ್ತಿದ್ದಾರೆ.