Sunday, 19th May 2024

ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ರಾಹುಲ್ ಗಾಂಧಿ

ಪ್ರಕಾಶಪಥ

ಪ್ರಕಾಶ್ ಶೇಷರಾಘವಾಚಾರ್‌

ಇತ್ತೀಚಿನ ದಿನಗಳಲ್ಲಿ ಹಿರಿಯ ನಾಯಕರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿದೆ. ತಮ್ಮ ಸ್ಪರ್ಧೆಯಿಂದಾಗಿ ಅಕ್ಕಪಕ್ಕದ ಕ್ಷೇತ್ರದ ಮೇಲೆ ಪರಿಣಾಮವಾಗಿ ಪಕ್ಷಕ್ಕೆ ಲಾಭವಾಗುತ್ತದೆ ಮತ್ತು ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿ ಚುನಾವಣಾ ಕಣಕ್ಕೆ ಸಕ್ರಿಯವಾಗಿ ಧುಮುಕುತ್ತಾರೆ ಎಂಬ ಉದ್ದೇಶ ಇಂಥ ನಡೆಯ ಹಿಂದಿರುತ್ತದೆ. ಆದರೆ ರಾಹುಲ್ ಗಾಂಽಯವರು ಕೇವಲ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಹೀಗೆ ಎರಡು ಕಡೆ ಕಣಕ್ಕೆ ಇಳಿದಿರುವುದು ಸ್ಪಷ್ಟ.

ವಯನಾಡಿನಲ್ಲಿ ಮತದಾನ ಮುಗಿದ ನಂತರ, ರಾಹುಲ್ ಗಾಂಽಯವರ ಎರಡನೇ ಕ್ಷೇತ್ರದ ಬಗ್ಗೆ ಅನೇಕ ದಿನಗಳಿಂದ ಹೊಮ್ಮುತ್ತಿದ್ದ ಊಹಾಪೋಹ ಗಳಿಗೆ ತೆರೆ ಬಿದ್ದಂತಾಗಿದೆ. ಕಾರಣ, ಗಾಂಧಿ ಕುಟುಂಬದ ಅತ್ಯಂತ ಸುರಕ್ಷಿತ ಕ್ಷೇತ್ರ ಎನಿಸಿರುವ ಉತ್ತರಪ್ರದೇಶದ ರಾಯ್ ಬರೇಲಿಯಿಂದ ರಾಹುಲರು ತಮ್ಮ ಎರಡನೇ ನಾಮಪತ್ರ ಸಲ್ಲಿಸಿದ್ದಾರೆ.

ರಾಹುಲ್ ಸ್ಪರ್ಧೆಗೂ ಮುನ್ನ ಮುದ್ರಣ ಮಾಧ್ಯಮಗಳಲ್ಲಿ ಅವರು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ರೀಮುಗಟ್ಟಲೆ ಸುದ್ದಿವಿಶ್ಲೇಷಣೆಗಳು ಪ್ರಕಟವಾದವು
ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚರ್ಚೆಗಳು ನಡೆದವು. ಅವರ ಸ್ಪರ್ಧೆ ಅಮೇಠಿಯಲ್ಲಾ ಅಥವಾ ರಾಯ್‌ಬರೇಲಿಯಲ್ಲಾ ಎಂಬ ಕುರಿತಾದ ಬಿಸಿಬಿಸಿ ಚರ್ಚೆಗಳು ಕೊನೆಮೊದಲಿಲ್ಲದೆ ನಡೆದವು. ಇದರೊಂದಿಗೆ, ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ೨೦೧೯ರಲ್ಲಿ ಅಮೇಠಿಯಲ್ಲಿ ತಮಗಾದ ಸೋಲಿನ ಪ್ರತೀಕಾರವನ್ನು ರಾಹುಲ್ ಗಾಂಧಿಯವರು ಸ್ಮೃತಿ ಇರಾನಿಯವರ ವಿರುದ್ಧ ತೀರಿಸಿಕೊಳ್ಳುತ್ತಾರಾ? ಹೀಗೆಲ್ಲಾ ಚರ್ಚೆಯನ್ನು ಹರಿಯಬಿಡಲಾಗಿತ್ತು.

ಗಾಂಧಿ ಕುಟುಂಬದ ಶಕ್ತಿ ಮತ್ತು ಪ್ರಭಾವದ ವಿಸ್ತಾರವನ್ನು ಇಂದಿಗೂ ಯಾರೂ ಉಪೇಕ್ಷಿಸಲಾಗದು ಎಂಬುದಕ್ಕೆ ಇವರಿಬ್ಬರ ಸ್ಪರ್ಧೆಯ ಕುರಿತು ಆದ ಸದ್ದೇ ಸಾಕ್ಷಿ. ಕಳೆದ ಬಾರಿ, ಅಮೇಠಿಯಲ್ಲಿ ಗೆಲ್ಲುವುದು ಕಷ್ಟ ಎಂದು ಖಚಿತವಾದ ತರುವಾಯ ರಾಹುಲ್ ಗಾಂಧಿಯವರು ಸದ್ದಿಲ್ಲದೆ ಕೇರಳದ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದರು. ಅಲ್ಪಸಂಖ್ಯಾತರ ಬಾಹುಳ್ಯವಿರುವ ಈ ಕ್ಷೇತ್ರ ರಾಹುಲ್‌ರವರ ಕೈಹಿಡಿಯಿತು. ನಿರೀಕ್ಷೆಯಂತೆಯೇ ಅವರು ವಯನಾಡಿನಲ್ಲಿ ಗೆದ್ದು, ಅಮೇಠಿಯಲ್ಲಿ ಸ್ಮೃತಿ ಇರಾನಿಯವರಿಂದ ಪರಾಭವಗೊಂಡರು.

ರಾಯ್‌ಬರೇಲಿಯ ಇತಿಹಾಸವನ್ನು ಕೆದಕಿದರೆ ಗಾಂಧಿ ಕುಟುಂಬದ ಪಾಲಿಗೆ ಅದೆಂಥಾ ಭದ್ರಕೋಟೆ ಎಂಬುದು ಗೊತ್ತಾಗುತ್ತದೆ. ಇಲ್ಲಿ ೧೯೫೨ರಲ್ಲಿ ಗೆಲುವಿನ ಶ್ರೀಕಾರ ಹಾಕಿದ್ದು ರಾಹುಲ್ ಗಾಂಽಯವರ ತಾತ ಫಿರೋಜ್ ಗಾಂಧಿ. ೧೯೬೦ರಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಾಗ ಆ ಸ್ಥಾನ ವನ್ನು ತುಂಬಿದ್ದು ಆರ್.ಪಿ.ಸಿಂಗ್; ೧೯೬೨ರಲ್ಲಿ ಬೈಜನಾಥ್ ಕುರೀಲ್ ಆಯ್ಕೆಯಾದರು. ೧೯೬೭ರಲ್ಲಿ ಇಂದಿರಾ ಗಾಂಧಿಯವರು ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು ರಾಯ್‌ಬರೇಲಿ ಕ್ಷೇತ್ರದಿಂದ.

ಅಲ್ಲಿ ಸುಲಭವಾಗಿ ಗೆದ್ದು ಪ್ರಧಾನಿ ಪಟ್ಟವನ್ನೇರಿದ ಅವರು ೧೯೭೧ರಲ್ಲಿ ಇದೇ ಕ್ಷೇತ್ರದಲ್ಲಿ ಪುನರಾಯ್ಕೆಯಾದರು. ಆದರೆ, ತುರ್ತುಪರಿಸ್ಥಿತಿಯ ನಂತರ ನಡೆದ ೧೯೭೭ರ ಚುನಾವಣೆಯಲ್ಲಿ ಜನತಾಪಾರ್ಟಿಯ ರಾಜ್‌ನಾರಾ ಯಣ್ ಅವರಿಂದ ಇಂದಿರಾ ಪರಾಭವಗೊಂಡರು. ೧೯೮೦ರಲ್ಲಿ ರಾಯ್‌ಬರೇಲಿ ಕ್ಷೇತ್ರ ಮತ್ತೆ ಇಂದಿರಾರವರ ವಶವಾಯಿತು. ೧೯೮೪ರಲ್ಲಿ ಅವರ ಹತ್ಯೆಯಾದ ನಂತರ, ನೆಹರು ಅವರ ಸಂಬಂಧಿ ಅರುಣ್ ನೆಹರು ಈ ಕ್ಷೇತ್ರವನ್ನು ಪ್ರತಿನಿಧಿಸಿದರು. ೧೯೮೯ರಲ್ಲಿ ಕಮಲಾ ನೆಹರು ತಮ್ಮನ ಹೆಂಡತಿ ಶೀಲಾ ಕೌಲ್ ರಾಯ್ ಅವರು ರಾಯ್‌ಬರೇಲಿಯ ಸಂಸದೆಯಾದರು. ೧೯೯೧ರ ತರುವಾಯ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುಂಠಿತವಾಗತೊಡಗಿತು.

ಬಿಜೆಪಿಯ ಅಶೋಕ್ ಸಿಂಘ್‌ರವರು ೧೯೯೬ರಲ್ಲಿ ಮೊಟ್ಟಮೊದಲ ಬಾರಿಗೆ ‘ಕಮಲ’ದ ಧ್ವಜವನ್ನು ರಾಯ್‌ಬರೇಲಿಯಲ್ಲಿ ಹಾರಿಸಿದರು. ಆದರೆ ರಾಜೀವ್ ಗಾಂಧಿಯವರ ಸ್ನೇಹಿತ ಸತೀಶ್ ಶರ್ಮಾ ಅವರು ೧೯೯೯ರಲ್ಲಿ ಮತ್ತೆ ಈ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ತರುವಾಯ ೨೦೦೪ರಿಂದ ೨೦೨೪ರವರೆಗೆ ಈ ಕ್ಷೇತ್ರದ ಮೇಲೆ ಸೋನಿಯಾ ಗಾಂಽಯವರು ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು.

ಅಮೇಠಿ ಲೋಕಸಭಾ ಕ್ಷೇತ್ರವನ್ನು ೧೯೮೦ರಲ್ಲಿ ಮೊದಲ ಬಾರಿಗೆ ಸಂಜಯ್ ಗಾಂಧಿಯವರು ಗೆದ್ದ ನಂತರ, ಈ ಕ್ಷೇತ್ರವು ಕಾಂಗ್ರೆಸ್ಸಿನ ಭದ್ರಕೋಟೆ ಯಾಗಿಯೇ ಉಳಿದಿತ್ತು. ೧೯೯೯ರಲ್ಲಿ ಸೋನಿಯಾ ಗಾಂಧಿಯವರು ಅಮೇಠಿಯಿಂದ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದರು. ೨೦೦೪ರಲ್ಲಿ ಅವರು
ತಮ್ಮ ಪುತ್ರ ರಾಹುಲ್ ಗಾಂಧಿಯವರಿಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟು ರಾಯ್‌ಬರೇಲಿ ಕ್ಷೇತ್ರಕ್ಕೆ ಹೋದರು. ರಾಹುಲ್ ಗಾಂಧಿಯವರು ೧೦ ವರ್ಷಗಳ ಕಾಲ ಅಮೇಠಿಯಲ್ಲಿ ಗೆಲ್ಲುತ್ತಾ ಬಂದರು.

ಆದರೆ ೨೦೧೯ರಲ್ಲಿ ಬಿಜೆಪಿಯ ಸ್ಮೃತಿ ಇರಾನಿಯವರು ರಾಹುಲ್‌ರನ್ನು ಪರಾಭವಗೊಳಿಸಿ ಕಾಂಗ್ರೆಸ್‌ನ ಭದ್ರಕೋಟೆಯನ್ನು ಛಿದ್ರಮಾಡಿದರು.
೨೦೨೪ ರಲ್ಲಿಯೂ ವಯನಾಡಿನಲ್ಲಿ ಸ್ಪರ್ಧಿಸಲು ರಾಹುಲ್ ತೀರ್ಮಾನಿಸಿದರು. ಇದಕ್ಕಾಗಿ ಕಾಂಗ್ರೆಸ್ ಬಹುದೊಡ್ಡ ರಾಜಿಯನ್ನು ಮಾಡಿಕೊಳ್ಳಬೇಕಾಗಿ
ಬಂತು. ಮುಸ್ಲಿಂ ಲೀಗ್ ಪ್ರಬಲವಾಗಿರುವ ಕಾರಣ ರಾಹುಲ್ ತಮ್ಮ ನಾಮಪತ್ರ ಸಲ್ಲಿಕೆಯ ದಿನದ ಮೆರವಣಿಗೆಯಲ್ಲಿ ಕಾಂಗ್ರೆಸ್‌ನ ಬಾವುಟಗಳನ್ನೇ ಮರೆಮಾಡಿಸಿದರು. ಅಂದರೆ, ಆ ಮೆರವಣಿಗೆಯಲ್ಲಿ ಕೇವಲ ಮುಸ್ಲಿಂ ಲೀಗ್‌ನ ಬಾವುಟಗಳೇ ರಾರಾಜಿಸಿದವು. ತಮ್ಮದೇ ಸ್ವಂತ ಕ್ಷೇತ್ರದಲ್ಲಿ ಗೆಲ್ಲಲು
ಸಾಧ್ಯವಿಲ್ಲದವರು ಈ ಎಲ್ಲಾ ಅಡ್ಜಸ್ಟ್‌ಮೆಂಟ್‌ಗಳನ್ನು ಮಾಡಿಕೊಳ್ಳುವುದು ರಾಜಕೀಯದಲ್ಲಿ ಅನಿವಾರ್ಯವಾಗುತ್ತದೆ!

ಪ್ರಧಾನಿಯಾಗಬೇಕು ಎಂಬ ಕನಸನ್ನು ಹೊತ್ತಿರುವ ಈ ವ್ಯಕ್ತಿ ಈ ಸಲ ವಯನಾಡ್‌ನಲ್ಲಿ ಸ್ಪರ್ಧಿಸುವಾಗ, ತಾವು ಎರಡನೆಯ ಕ್ಷೇತ್ರದಲ್ಲೂ ಸ್ಪರ್ಧಿಸು ತ್ತಿರುವ ಮಾಹಿತಿಯನ್ನು ಮತದಾರರಿಗೆ ತಿಳಿಸಬೇಕಿತ್ತು. ಆದರೆ ವಯನಾಡಿನಲ್ಲಿ ಮತದಾನ ಮುಗಿಯುವ ತನಕ ಅವರು ಈ ವಿಷಯವನ್ನು ಮುಚ್ಚಿಟ್ಟು ಅಪ್ರಾಮಾಣಿಕ ವರ್ತನೆ ತೋರಿದರು. ಪ್ರಾಯಶಃ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ವಿಚಾರ ಮತದಾರರಿಗೆ ತಿಳಿದರೆ ಇಲ್ಲಿಯೂ ಗೆಲುವು ಕಠಿಣವಾಗ ಬಹುದು ಎಂಬ ಲೆಕ್ಕಾಚಾರ ಇದರ ಹಿಂದಿರಬಹುದು.

ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಸ್ಪರ್ಧಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆಮಾಡಲು ಅವಕಾಶವಿದೆ. ೨೦೧೪ರಲ್ಲಿ ಮೋದಿಯವರು
ವಡೋದರ ಮತ್ತು ವಾರಾಣಸಿಯಿಂದ ಸ್ಪರ್ಧೆ ಮಾಡಿದ್ದರು. ವಾಜಪೇಯಿಯವರು ೧೯೯೧ರಲ್ಲಿ ವಿದಿಶಾ ಮತ್ತು ಲಖನೌ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು.
ಸೋನಿಯಾ ಗಾಂಧಿಯವರು ೨೦೦೪ರಲ್ಲಿ ಬಳ್ಳಾರಿ ಮತ್ತು ರಾಯ್‌ಬರೇಲಿಯಲ್ಲಿ ಸ್ಪರ್ಧಿಸಿದ್ದರು. ಆದರೆ ಇವರಾರೂ ತಾವು ಎರಡನೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದನ್ನು ಮತದಾರರಿಂದ ಮರೆಮಾಚಿರಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತ ಎಂದು ಹೇಳಿಕೊಳ್ಳುತ್ತಿದ್ದ ಸಮಯ ದಲ್ಲಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳು ಕೆಲವೊಮ್ಮೆ ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದರು.

ಕಾರಣ, ಒಂದೊಮ್ಮೆ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದಾಗ ಆ ಕ್ಷೇತ್ರದ ಅಭ್ಯರ್ಥಿಯೊಬ್ಬನನ್ನು ಹತ್ಯೆಮಾಡಿ ಚುನಾವಣೆ ಮುಂದೂಡಿಸುವ ತಂತ್ರ ಗಾರಿಕೆ ನಡೆಯುತ್ತಿತ್ತು. ಇದನ್ನು ತಪ್ಪಿಸಲು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧೆಮಾಡುತ್ತಿದ್ದರು. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದ ಈ ಬೆಳವಣಿಗೆಗೆ ಕೊನೆಹಾಡಲು ಕೇವಲ ಮಾನ್ಯತೆ ಪಡೆದಿರುವ ರಾಜಕೀಯ ಪಕ್ಷದ ಅಭ್ಯರ್ಥಿಯು ಕಾಲವಶವಾದರೆ ಚುನಾವಣೆ ಮುಂದೂಡುವ ಹಾಗೆ ಕಾನೂನಿಗೆ ತಿದ್ದುಪಡಿ ತರಲಾಯಿತು.

ಇತ್ತೀಚಿನ ದಿನಗಳಲ್ಲಿ ಹಿರಿಯ ನಾಯಕರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿದೆ. ತಮ್ಮ ಸ್ಪರ್ಧೆಯಿಂದಾಗಿ ಅಕ್ಕಪಕ್ಕದ ಕ್ಷೇತ್ರದ ಮೇಲೆ
ಪರಿಣಾಮವಾಗಿ ಪಕ್ಷಕ್ಕೆ ಲಾಭವಾಗುತ್ತದೆ ಮತ್ತು ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿ ಚುನಾವಣಾ ಕಣಕ್ಕೆ ಸಕ್ರಿಯವಾಗಿ ಧುಮುಕುತ್ತಾರೆ ಎಂಬ ಉದ್ದೇಶ
ಇಂಥ ನಡೆಯ ಹಿಂದಿರುತ್ತದೆ. ಆದರೆ ರಾಹುಲ್ ಗಾಂಧಿಯವರು ಕೇವಲ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಹೀಗೆ ಎರಡು ಕಡೆ ಕಣಕ್ಕೆ ಇಳಿದಿರುವುದು ಸ್ಪಷ್ಟ. ಪಕ್ಷದ ಹಿತಾಸಕ್ತಿಯಿಂದ ಸ್ಪರ್ಧೆ ಮಾಡಿದ್ದರೆ, ತಮ್ಮ ಸ್ಪರ್ಧೆಯನ್ನು ಮುಂಚಿತವಾಗಿ ಘೋಷಿಸಿ ಕಣಕ್ಕೆ ಇಳಿದಿರುತ್ತಿದ್ದರು.

‘ಕೇರಳ ಮತ್ತು ಉತ್ತರಪ್ರದೇಶದ ಇತರ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ನನ್ನ ಸ್ಪರ್ಧೆ’ ಎಂದು ಅವರು ಹೇಳಬೇಕಿತ್ತು. ಆದರೆ ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿ ತಮ್ಮ ದೌರ್ಬಲ್ಯವನ್ನು ಬಯಲು ಮಾಡಿಕೊಂಡಿದ್ದಾರೆ.

ರಾಯ್‌ಬರೇಲಿಯಲ್ಲಿ ಸ್ಪರ್ಧೆ ಮಾಡುವ ಮಾಹಿತಿ ಒಂದು ವೇಳೆ ಮುಂಚಿತವಾಗಿ ಬಹಿರಂಗವಾದರೆ ಎಲ್ಲಿ ಪ್ರಬಲ ಅಭ್ಯರ್ಥಿಯನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗುವುದೋ ಎಂಬುದು ಪ್ರಾಯಶಃ ಅವರ ಇನ್ನೊಂದು ಆತಂಕವಿದ್ದಿರಬೇಕು. ಇದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿ ಗೆಲುವಿನ ಖಾತರಿಯ ಕೊರತೆಯಿಂದಾಗಿ ರಾಹುಲ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಆರೋಪವನ್ನು ‘ಉತ್ಪ್ರೇಕ್ಷಿತ ವ್ಯಾಖ್ಯಾನ’ ಎಂದು ಹೇಳಲಾಗುವುದಿಲ್ಲ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಬಳಿ ಸದ್ಯ ಉಳಿದಿರುವುದು ಎರಡು ವಿಧಾನಸಭೆ ಮತ್ತು ಒಂದು ಲೋಕಸಭಾ ಸ್ಥಾನ ಮಾತ್ರ. ೧೯೯೧ರ ನಂತರ
ನಡೆದಿರುವ ಪ್ರತಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ತನ್ನ ಶಕ್ತಿಯನ್ನು ಕುಂದಿಸಿಕೊಳ್ಳುತ್ತಾ ಬಂದಿದೆ. ಮೈತ್ರಿ ರಾಜಕೀಯವು ಪಕ್ಷದ ಬೆಳವಣಿಗೆಗೆ ಪೂರಕವಾಗದೆ ತೊಡಕಾಗಿರುವುದು ಕಟುಸತ್ಯ. ‘ರಾಹುಲ್ ಗಾಂಧಿಯವರು ಅಮೇಠಿಯಲ್ಲಿ ಸ್ಪರ್ಧೆ ಮಾಡದ ಕಾರಣ ಸ್ಮೃತಿ ಇರಾನಿಯವರಿಗೆ ಬಹುದೊಡ್ಡ ನಿರಾಶೆಯಾಗಿದೆ’ ಎನ್ನುತ್ತಿರುವ ಕಾಂಗ್ರೆಸ್ಸಿಗರು ಗಾಂಧಿ ಕುಟುಂಬದ ವಿನೀತ ಸದಸ್ಯ ಕೆ.ಎಲ್.ಶರ್ಮಾರವರಿಗೆ ಟಿಕೆಟ್ ನೀಡಿ, ‘ಸ್ಮೃತಿ ಇರಾನಿಯವರನ್ನು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರೊಬ್ಬರು ಸೋಲಿಸಲಿದ್ದಾರೆ.

ಸ್ಮೃತಿ ಇರಾನಿ ಎದುರು ರಾಹುಲ್ ಸ್ಪರ್ಧಿಸಿ ಆಕೆಗೆ ಇನ್ನಿಲ್ಲದ ಪ್ರಾಮುಖ್ಯ ಕೊಡುವ ಇರಾದೆಯಿಲ್ಲ’ ಎಂದು ಹೇಳುತ್ತಿದ್ದಾರೆ. ಜತೆಗೆ, ‘ರಾಯ್ ಬರೇಲಿ ಯಲ್ಲಿ ರಾಹುಲ್ ಸ್ಪರ್ಧಿಸುತ್ತಿರುವುದು ಮಾಸ್ಟರ್ ಸ್ಟ್ರೋಕ್. ಪ್ರಿಯಾಂಕಾ ವಾದ್ರಾ ಈ ಎರಡೂ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿ ಕೆ.ಎಲ್.ಶರ್ಮಾ ರವರನ್ನು ಗೆಲ್ಲಿಸುತ್ತಾರೆ’ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ, ‘ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎನ್ನುವ ಹಾಗೆ ಕಾಂಗ್ರೆಸ್ ನಾಯಕರುಗಳು ರಾಹುಲ್‌ರವರ ಪಲಾಯನವಾದವನ್ನು ಸಮರ್ಥಿಸಿಕೊಳ್ಳಲು ಹೀಗೆ ವಿತಂಡವಾದವನ್ನು ಮುಂದಿಡುತ್ತಿದ್ದಾರೆ.

‘ರಾಹುಲ್‌ರವರು ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ನಿಶ್ಚಯಿಸಿದ್ದು ಜಾಣ್ಮೆಯ ನಡೆ ಮತ್ತು ತಮ್ಮದೇ ಷರತ್ತಿನ ಮೇಲೆ ಚುನಾವಣೆಯನ್ನು ಎದುರಿಸು ತ್ತೇವೆ ಎಂಬ ಸಂದೇಶವನ್ನು ಇದು ನೀಡಿದೆ’ ಎಂದು ಬರೆಯುತ್ತಾರೆ ‘ದ ವೈರ್’ ವೆಬ್ ಪೋರ್ಟಲ್ ನ ಅಂಕಣಕಾರ್ತಿ ಸೀಮಾ ಚಿಷ್ಠಿ. ಅಮೇಠಿಯಲ್ಲಿ ನಿಂತು ಸ್ಮೃತಿಯವರನ್ನು ಮಣಿಸುವ ಛಲವಿಲ್ಲದೆ ಅತ್ಯಂತ ಸುರಕ್ಷಿತ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿರುವ ಸಂಗತಿಯು ಇವರ ಕಣ್ಣಿಗೆ ಕಾಣುವುದೇ ಇಲ್ಲ.

ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿ ‘ಇಂಡಿಯ’ ಒಕ್ಕೂಟದ ನಾಯಕನಾಗುವುದು ಸುಲಭವೆಂಬುದು ಗಾಂಧಿ ಕುಟುಂಬದ ಮತ್ತೊಂದು ಲೆಕ್ಕಾಚಾರ ಎನ್ನುತ್ತಾರೆ ರಾಜಕೀಯ ಪಂಡಿತರು. ಉತ್ತರ ಭಾರತದಲ್ಲಿನ ಗೆಲುವು ಉನ್ನತ ಸ್ಥಾನಕ್ಕೇರಲು ಅವರಿಗೆ ರಹದಾರಿಯಾಗುವುದು ಎಂಬ ತರ್ಕವು ಇದಕ್ಕೆ ಕಾರಣವಾಗಿದೆ. ಕಠಿಣವಾದರೂ ಸಾಧಿಸಿ ತೋರಿಸುವೆ ಎಂಬ ಛಲದ ಮೇಲೆ ಅಮೇಠಿಯಿಂದ ಸ್ಪರ್ಧೆ ಮಾಡುವ ವಿಶ್ವಾಸವನ್ನು ರಾಹುಲ್‌ರವರು
ಪ್ರದರ್ಶಿಸಬೇಕಿತ್ತು. ಆದರೆ ಸತ್ಯವೇನೆಂದರೆ, ಅಮೇಠಿಯಲ್ಲಿ ಮತ್ತೆ ಪರಾಭವಗೊಂಡರೆ ತಮ್ಮ ನಾಯಕತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕಾಗಿ
ಹಾಗೂ ಮತ್ತೊಂದು ಸೋಲು ತಮ್ಮ ನಾಯಕತ್ವವನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವುದು ಖಚಿತ ಎಂಬ ಗ್ರಹಿಕೆಯೊಂದಿಗೆ ರಾಹುಲ್ ಗಾಂಧಿ ಯವರು ಸ್ಮೃತಿ ಇರಾನಿಯವರಿಗೆ ಪೈಪೋಟಿ ನೀಡುವ ಸಾಹಸವೇ ಬೇಡವೆಂದು ರಾಯ್‌ಬರೇಲಿಯತ್ತ ಮುಖಮಾಡಿದ್ದಾರೆ.

(ಲೇಖಕರು ಬಿಜೆಪಿಯ ವಕ್ತಾರರು)

Leave a Reply

Your email address will not be published. Required fields are marked *

error: Content is protected !!