Sunday, 15th December 2024

ಭಾರತಕ್ಕೆ ಬ್ರಿಟಿಷರ ಆಹ್ವಾನಿಸಿದ ರಾಹುಲ್

ವೀಕೆಂಡ್ ವಿತ್ ಮೋಹನ್

camohanbn@gmail.com

ಕೈಲಾಗದವನು ಮೈ ಪರಚಿಕೊಂಡವನಂತಾಗಿದೆ ರಾಹುಲ್ ಗಾಂಧಿಯ ಪರಿಸ್ಥಿತಿ. ಭಾರತದಲ್ಲಿ ಚುನಾವಣೆ ಎದುರಿಸಲಾಗದೆ ಸತತ ಸೋಲು ಗಳಿಂದ ಕೆಂಗೆಟ್ಟಿರುವ ಕಾಂಗ್ರೆಸ್‌ನ ಈ ಪರೋಕ್ಷ ಸಾರಥಿ, ವಿದೇಶದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ತಮ್ಮ ಸೋಲಿನ ಹತಾಶೆಯನ್ನು ಕಕ್ಕಿಕೊಂಡಿದ್ದಾರೆ. ಭಾರತದ ಪ್ರಜಾಪ್ರಭುತ್ವ ಕಾಪಾಡಲು ಅಮೆರಿಕ ಮತ್ತು ಯೂರೋಪ್ ಸಹಾಯ ಮಾಡಬೇಕೆಂದು ಜಗತ್ತಿನ ಮುಂದೆ ಹೇಳಿದ್ದಾರೆ.

1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾ ಪ್ರಭುತ್ವದ ವ್ಯಾಖ್ಯಾನವನ್ನೇ ಬುಡಮೇಲು ಮಾಡಿದ ಇಂದಿರಾ ಗಾಂಧಿಯ ಮೊಮ್ಮೊಗನಿಂದ ಪ್ರಜಾಪ್ರಭುತ್ವದ ಬಗೆಗಿ ಕಾಳಜಿಯ ಮಾತು ಗಳನ್ನು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ. ಆಂತರಿಕ ಪ್ರಜಾಪ್ರಭು ತ್ವದ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್‌ಗೆ ಸಡ್ಡು ಹೊಡೆದು ಜಿ-23 ನಾಯಕರು ಹೊರ ನಡೆದಿದ್ದರು. ತನ್ನ ಪಕ್ಷದಲ್ಲಿನ ಹಿರಿಯರಿಗೆ ಮರ್ಯಾದೆ ನೀಡದೆ ‘ಗನ್‌ಮೆನ್’ಗಳ ಮೂಲಕ ಸಂದೇಶ ಕಳುಹಿಸುತ್ತಿದ್ದಂತಹ ರಾಹುಲ್ ಗಾಂಧಿಯನ್ನು ಕಪಿಲ್ ಸಿಬಲ್ ಕಟುವಾಗಿ ವಿರೋಧಿಸಿ ದ್ದರು. ಹಿಮಂತ್ ಬಿಸ್ವ ಶರ್ಮ ಕಾಂಗ್ರೆಸಿನಲ್ಲಿದ್ದ ಸಮಯದಲ್ಲಿ ರಾಹುಲ್ ಭೇಟಿ ಮಾಡಲು ಹೋದಾಗ, ಆತ ತಾನು ಸಾಕಿದ್ದ ನಾಲಿಗೆ ಬಿಸ್ಕತ್ ಹಾಕುತ್ತ ಕುಳಿತಿದ್ದದ್ದು ಇಡೀ ದೇಶಕ್ಕೆ ತಿಳಿದಿರುವ ವಿಷಯ.

ಕಾಂಗ್ರೆಸ್ ಹಿರಿಯ ನಾಯಕರೆಲ್ಲರೂ ಈತನ ದಡ್ಡತನವನ್ನು ವಿರೋಧಿಸಿ ಪಕ್ಷದಿಂದ ಹೊರ ನಡೆದಿರುವ ವಿಷಯ ತಿಳಿದಿದ್ದರೂ ಈತ ಲಂಡನ್ನಿನ ನಡೆದ ಸಂದರ್ಶನದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪುಂಗಿ ಬಿಡುತ್ತಾನೆ. ಬಾಯಿ ಬಿಟ್ಟರೆ ಬಣ್ಣ ಗೇಡಿಯೆಂಬಂತೆ ಬಂತೆ ಅರ್ಥವಿಲ್ಲದ ಈತನ ಮಾತುಗಳನ್ನು ಕೇಳಲು ಈತನ ಪಕ್ಷದವರೇ ತಯಾರಿಲ್ಲವೆಂದ ಮೇಲೆ ವಿದೇಶಿ ನೆಲದಲ್ಲಿ ಈತನ ಮಾತು ಕೇಳಲು ಬಂದಂತಹ ಜನರು ಅದ್ಯಾವ ಕರ್ಮ ಮಾಡಿದ್ದರೋ ಭಗವಂತನೇ ಬಲ್ಲ. ‘ಪ್ರಜಾಪ್ರಭುತ್ವ’ವೆಂದರೆ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ. ಆದರೆ ಕಾಂಗ್ರೆಸ್ ಆಂತರಿಕ ನಿಯಮದ ಪ್ರಕಾರ ಪ್ರಜಾಪ್ರಭುತ್ವವೆಂದರೆ ನೆಹರು ಕುಟುಂಬಕ್ಕೆ ಮಾತ್ರ ಸೀಮಿತ.

1950 -1960ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವವೆಂದರೆ ನೆಹರುವಿನಿಂದ, ನೆಹರುಗಾಗಿ ಮತ್ತು ನೆಹರುಗೋಸ್ಕರ. 1970 – 1980ರ ದಶಕದಲ್ಲಿ ಇಂದಿರಾ ಗಾಂಧಿಯಿಂದ, ಇಂದಿರಾ ಗಾಂಧಿಗಾಗಿ ಮತ್ತು ಇಂದಿರಾ ಗಾಂಧಿಗೋಸ್ಕರ, 1980 – 1990ರ ದಶಕದಲ್ಲಿ ಇದೇ ರೀತಿ ರಾಜೀವ್ ಗಾಂಧಿ, ನಂತರ ಸೋನಿಯಾ ಗಾಂಧಿ, ಇದೀಗ ರಾಹುಲ್ ಗಾಂಧಿಯಿಂದ, ರಾಹುಲ್ ಗಾಂಧಿಗಾಗಿ, ರಾಹುಲ್ ಗಾಂಧಿಗೋಸ್ಕರ.
ಭಾರತದ ಪ್ರಜಾಪ್ರಭುತ್ವವನ್ನು ತನ್ನ ಪಕ್ಷದ ಪ್ರಜಾಪ್ರಭುತ್ವದ ಮಾದರಿಯಲ್ಲಿ ಒಂದು ಕುಟುಂಬಕ್ಕೆ ಸೀಮಿತಗೊಳಿಸಿ ಮಾತನಾಡುವ ರಾಹುಲ್ ನೇತೃತ್ವದ ಕಾಂಗ್ರೆಸ್ ಕೇವಲ ಆಡಳಿತ ಪಕ್ಷವಾಗಿ ಮಾತ್ರ ವಿಫಲವಾಗಿಲ್ಲ, ಪ್ರತಿಪಕ್ಷವಾಗಿಯೂ ವಿಫಲವಾಗಿದೆ.

ತನ್ನ ಮುತ್ತಾತ ನೆಹರು ಕಾಲ ದಲ್ಲಿ ಚೀನಾ ಆಕ್ರಮಣ ಮಾಡಿಕೊಂಡಿರುವ ಪ್ರದೇಶಗಳ ಚಿತ್ರಗಳನ್ನಿಟ್ಟುಕೊಂಡು ಮೋದಿಯವರ ಆಡಳಿತದಲ್ಲಿ
ಚೀನಾ ಗಡಿಯೊಳಗೆ ಬಂದಿದೆಯೆಂದು ಹೇಳುತ್ತಾರೆ. ಅತ್ತ ಚೀನಾ ದೇಶದ ವಿದೇಶಾಂಗ ಸಿಬ್ಬಂದಿಯ ಜತೆ ಪಾರ್ಟಿ ಮಾಡುತ್ತಾರೆ. ಸೋನಿಯಾ ಕುಟುಂಬದ ಆಪ್ತ ಸ್ಯಾಮ್ ಪಿಟ್ರೋಡಾ, ರಾಹುಲ್ ಗಾಂಧಿಯೆಂಬ ಉತ್ಸವ ಮೂರ್ತಿಯನ್ನು ಹೊತ್ತೊಯ್ಯುತ್ತಿರುವ ಪೂಜಾರಿಯಾಗಿದ್ದಾರೆ.

ಭಾರತದೊಳಗೆ ರಾಹುಲ್ ಮಾತನ್ನು ಕೇಳುವವರಿಲ್ಲದ ಕಾರಣ, ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತದ ವಿರುದ್ಧ ಮಾತನಾಡಿಸಿ ದೇಶದ ಘನತೆಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅದೇನೋ ಗೊತ್ತಿಲ್ಲ ಕಾಂಗ್ರೆಸಿಗರಿಗೆ ಬ್ರಿಟಿಷರೆಂದರೆ ಎಲ್ಲಿಲ್ಲದ ಪ್ರೀತಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಸಹ ಬ್ರಿಟಿಷರ ಜತೆ ಸೇರಿಕೊಂಡ ನೆಹರು ಸುಭಾಷ್‌ಚಂದ್ರ ಬೋಸರಿಗೆ ಅವಮಾನ ಮಾಡಿದ್ದರು. ಪಾಕಿಸ್ತಾನದ ಹುಟ್ಟಿಗೆ ಕಾರಣರಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ್ದೇವೆಂದು ಪುಂಗಿ ಬಿಡುವ ಕಾಂಗ್ರೆಸಿನ ರಾಹುಲ್, ಇಂದು ಅದೇ ಬ್ರಿಟಿಷರ ನೆಲದಲ್ಲಿ ನಿಂತು ಭಾರತದ ರಕ್ಷಣೆಗಾಗಿ ನೀವು ಬರಬೇಕೆಂದು ಮತ್ತೊಮ್ಮೆ ಬ್ರಿಟಿಷರನ್ನು ಆಹ್ವಾನಿಸುವ ಮೂಲಕ ಭಾರತ ಮಾತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ.

ಮೋದಿಯವರ ವಿರುದ್ಧ ಏನೇ ಆರೋಪಗಳಿರಲಿ ಅದನ್ನು ದೇಶದೊಳಗೆ ಮಾತನಾಡಬೇಕು, ವಿದೇಶಿ ನೆಲದಲ್ಲಿ ಭಾರತವನ್ನು ಬಿಟ್ಟುಕೊಡಬಾರದು. ಅಸಾವುದ್ದೀನ್ ಓವೈಸಿ ಪಾಕಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿ ನಿಂತು ಭಾರತದ ವಿರುದ್ಧ ಮಾತನಾಡಲಿಲ್ಲ, ಮೋದಿಯವರನ್ನು ಕಟುವಾಗಿ ಠೀಕೆ ಮಾಡುವ ನಟ ಜಾವೇದ್ ಅಖ್ತರ್, ಪಾಕಿಸ್ತಾನಕ್ಕೆ ಹೋಗಿದ್ದಾಗ ಭಾರತದ ವಿರುದ್ಧ ಮಾತನಾಡಲಿಲ್ಲ. ಇವರಿಬ್ಬರನ್ನೂ ಮೀರಿಸುವಂತೆ ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ಭಾರತದ ಆಂತರಿಕ ವಿಷಯಗಳ ಬಗ್ಗೆ ಚರ್ಚೆ ಮಾಡುವ ಮೂಲಕ ಕೀಳು ಮಟ್ಟದ ಅಭಿರುಚಿಯನ್ನು ಪ್ರದರ್ಶಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದರೆ ಮೊಟ್ಟಮೊದಲ ಬಾರಿಗೆ ಭಾರತದ ಇತಿಹಾಸದಲ್ಲಿ ಜಿ-೨೦ ಸಮ್ಮೇಳನ ನಡೆಯುತ್ತಿರಲಿಲ್ಲ. ಜಗತ್ತಿನ ಆರ್ಥಿಕತೆಯ ಶೇ.೬೦ ಅನ್ನು ಪ್ರತಿನಿಽಸುವ ರಾಷ್ಟ್ರಗಳ ಒಕ್ಕೂಟ ಜಿ-೨೦, ಈ ರಾಷ್ಟ್ರಗಳು ಭಾರತದಲ್ಲಿ ಜಗತ್ತಿನ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿವೆ.
ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ತನ್ನ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಕರೆಸಿ ದೊಡ್ಡ ಸಮಾವೇಶವನ್ನು ನಡೆಸುತ್ತಾರೆ. ಅಹ್ಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಅಮೆರಿಕ ಅಧ್ಯಕ್ಷ ಭಾರತ ವನ್ನು ಕೊಂಡಾಡುತ್ತಾರೆ. ಅಷ್ಟೇ ಯಾಕೆ ಕಳೆದ ವಾರ ಅಹ್ಮದಾಬಾದಿನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಪಂದ್ಯ ನೋಡಲು ಸ್ವತಃ ಆಸ್ಟ್ರೇಲಿಯಾ ಅಧ್ಯಕ್ಷ, ಮೋದಿಯವರ ಜತೆ ಬರುತ್ತಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದಶಕಗಳ ಕ್ರಿಕೆಟ್ ಸಂಬಂಧವನ್ನು ಕೊಂಡಾಡುತ್ತಾರೆ. ಕರೋನ ಸಂದರ್ಭದಲ್ಲಿ ಅಮೆರಿಕದಂತಹ ಜಗತ್ತಿನ ನಂಬರ್ ಒನ್ ದೇಶ ಭಾರತದ ಸಹಾಯ ಬಯಸಿ ಮಾತ್ರೆಗಳನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿತ್ತು. ಪಾಕಿಸ್ತಾನ ವಶಪಡಿಸಿಕೊಂಡಿರುವ ಕಾಶ್ಮೀರ ಭಾರತದ ಅವಿಭಾಗ್ಯ ಅಂಗವೆಂದು ಅಮೆರಿಕದ ಇಬ್ಬರು ಸಂಸದರು ತಮ್ಮ ಸಂಸತ್ತಿನಲ್ಲಿ ಹೇಳುತ್ತಾರೆ. ಕಾಶ್ಮೀರದ ಜನರಿಗೆ ದಶಕಗಳ ಕಾಲ ಹೊರಜಗತ್ತಿನ ಸಂಪರ್ಕ ಬಂದ್ ಮಾಡಿ ವಿಶೇಷ ಸ್ಥಾನಮಾನದ ಹೆಸರಿನಲ್ಲಿ ಅಲ್ಲಿನ ಜನರಿಗೆ ಅಭಿವೃದ್ಧಿಯ ಪರ್ವವನ್ನು ತೋರಿಸದೇ, ಪಂಜರದಲ್ಲಿ ಕೂಡಿಹಾಕಿದ ಕಾಂಗ್ರೆಸ್, ಅಲ್ಲಿನ ಪ್ರಜಾಪ್ರಭುತ್ವವನ್ನು ೭೦ ವರ್ಷಗಳ ಕಾಲ ಹೊಸಕಿಹಾಕಿತ್ತು. ತಾನು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ನರಮೇಧವನ್ನು ಪ್ರಚೋದಿಸಿ, ಉಗ್ರ ಯಾಸಿನ್ ಮಲಿಕ್‌ನಿಗೆ ಬೆನ್ನು ತಟ್ಟಿದ ಕಾಂಗ್ರೆಸ್‌ನ ರಾಹುಲ್ ಗಾಂಽ ಇಂದು ಲಂಡನ್ನಿನಲ್ಲಿ ನಿಂತು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ.

ಈತನ ಅಜ್ಜಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತನ್ನ ಸ್ವಾರ್ಥಕ್ಕಾಗಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸಂವಿಧಾನವನ್ನೇ ತಿದ್ದುಪಡಿ ಮಾಡಿ ಸರ್ವಾಧಿಕಾರಿಯಾಗಿ ಮೆರೆದಿದ್ದರು. ತನ್ನ ಎದುರು ನಿಂತವರನ್ನು ರಾತ್ರೋ ರಾತ್ರಿ ಜೈಲಿಗೆ ಕಳುಹಿಸಿ ವಿಕೃತಿ ಮೆರೆದಿದ್ದರು. ದಿನಪತ್ರಿಕೆಗಳಿಗೆ ಸೆನ್ಸಾರ್ ಅಳವಡಿಸಿ ಪತ್ರಿಕೆಯ ಮುಖ್ಯಾಂಶಗಳು ಆಕೆಯ ಅನುಮತಿಯಿಲ್ಲದೆ ಪ್ರಕಟಗೊಳ್ಳುತ್ತಿರಲಿಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕಿ ಜಗತ್ತಿನ ಮುಂದೆ ಭಾರತದ ಮಾನ ಮರ್ಯಾದೆಯನ್ನು ಹರಾಜು ಹಾಕಿದ್ದ ಇಂದಿರಾ ಗಾಂಧಿಯ ಮೊಮ್ಮೊಗನಿಂದ ಪ್ರಜಾಪ್ರಭುತ್ವದ ಜಪ. ಕಮ್ಯುನಿಸ್ಟರು ‘ಮೌಖಿಕ ಭಯೋತ್ಪಾದನೆ’ಯಲ್ಲಿ ಎತ್ತಿದ ಕೈ. ತಾವು ಹೇಳುವ ಸುಳ್ಳುಗಳನ್ನು ಜನರಿಗೆ ಮುಟ್ಟಿಸಲು ಒಂದಷ್ಟು ಒಳ್ಳೆಯ ಪದಗಳನ್ನು ತಾವು
ಹೇಳುವ ಸುಳ್ಳುಗಳ ನಡುವೆ ಬಳಸಿಕೊಳ್ಳುತ್ತಾರೆ.

ಉದಾಹರಣೆಗೆ ‘ಕೋಮುವಾದ’, ‘ಜಾತ್ಯತೀತತೆ’, ‘ವಿಶ್ವಮಾನವ’, ‘ಸಂವಿಧಾನ’, ’ಪ್ರಜಾಪ್ರಭುತ್ವ’…. ಕಳೆದ ವರ್ಷ ನಡೆದಂತಹ ಹಿಜಾಬ್ ವಿವಾದದ ಸಮಯದಲ್ಲಿ ಸ್ವತಃ ಅಂಬೇಡ್ಕರರೇ ಹಿಜಾಬಿನ ವಿರುದ್ದವಿದ್ದರೂ ಅವರ ಹೆಸರು ಮತ್ತು ಸಂವಿಧಾನದ ಹೆಸರನ್ನು ಕಮ್ಯುನಿಸ್ಟರು ಬಳಸುತ್ತಿದ್ದರು. ಈ ಪದಗಳ ಮೂಲಕ ಜನರ ಭಾವನೆಯೊಂದಿಗೆ ಆಟವಾಡಿತಮ್ಮ ಸುಳ್ಳುಗ ಳನ್ನು ಬೇಗ ತಲುಪಿಸಬಹುದೆಂಬ ಹುನ್ನಾರ
ಇವರದ್ದು. ಅವರದ್ದೇ ದಾರಿಯಲ್ಲಿ ಸಾಗುತ್ತಿರುವ ರಾಹುಲ್ ಗಾಂಧಿ ‘ಪ್ರಜಾಪ್ರಭುತ್ವ’ವೆಂಬ ಪದಬಳಕೆಯ ಮೂಲಕ ವಿದೇಶಿ ನೆಲದಲ್ಲಿ ತನ್ನ ಸುಳ್ಳುಗಳನ್ನು ಹೇಳಲು ಮುಂದಾಗಿದ್ದಾರೆ.

ಇವರ ಮುತ್ತಾತ ನೆಹರು ಇದೆ ರೀತಿ ಕಮ್ಯುನಿಸ್ಟರ ಮಾತು ಕೇಳಿ ‘ಇಂಡಿಯಾ ಚೀನಾ ಭಾಯ್ ಭಾಯ್’ ಎನ್ನುವ ಮೂಲಕ ೨೪ ಸಾವಿರ ಚದರ ಕಿಲೋಮೀಟರು ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟರು. ರಾಹುಲ್, ಮಗದೊಮ್ಮೆ ಕಮ್ಯುನಿಸ್ಟರ ಸಲಹೆಯ ಮೇರೆಗೆ ಇಲ್ಲಸಲ್ಲದ ಸುಳ್ಳುಗಳನ್ನು ವಿದೇಶದಲ್ಲಿ ಪಸರಿಸುವಲ್ಲಿ ನಿರತರಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಕಾಶ್ಮೀರದ ಜನರಿಗೆ ಹೆದರಿಸಿ ಮನೆಯಿಂದ ಹೊರಬಂದು ಮತ ಹಾಕದಂತೆ ಮಾಡುತ್ತಿದ್ದ ಸಮಯದಲ್ಲಿ ರಾಹುಲ್ ಗಾಂಽಗೆ ಪ್ರಜಾಪ್ರಭುತ್ವದ ಅಪಾಯ ನೆನಪಾಗಲಿಲ್ಲ. ಬೂತ್‌ಗೆ ನುಗ್ಗಿ ಮತಪೆಟ್ಟಿಗೆಗಳನ್ನು ಸುಟ್ಟಿ ಹಾಕಿ, ಬಾಂಬುಗಳನ್ನು ಬ್ಲಾಸ್ಟ್ ಮಾಡಿ ಜನರಲ್ಲಿ ಭಯ ಮೂಡಿಸುತ್ತಿರುವಾಗ ಪ್ರಜಾಪ್ರಭುತ್ವದ ಅಪಾಯದ ಬಗ್ಗೆ ಧ್ವನಿ ಎತ್ತಲಿಲ್ಲ.

ಪಶ್ಚಿಮ ಬಂಗಾಳದ ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಸತ್ತಾಗ ಪ್ರಜಾಪ್ರಭುತ್ವದ ಅಪಾಯ ರಾಹುಲ್‌ಗೆ ಕಾಣಿಸಿರಲಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾರ್ಖಂಡ್, ಛತ್ತೀಸ್ ಗಡ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ನಕ್ಸಲರು ಮತಪೆಟ್ಟಿಗೆಗಳನ್ನು ಬ್ಲಾಸ್ಟ್ ಮಾಡಿ ಜನರಿಗೆ ಭಯ ಹುಟ್ಟಿಸಿ ಮನೆಯಿಂದ ಹೊರಬರದಂತೆ ಮಾಡಲಾಗುತ್ತಿತ್ತು.

2004 ರಿಂದ 2014ರ ನಡುವೆ ತಿಂಗಳಿಗೊಮ್ಮೆಯಾದರೂ ದೇಶದ ಯಾವುದಾದರೊಂದು ಮೂಲೆಯಲ್ಲಿ ಭಯೋತ್ಪಾದ ಚಟುವಟಿಕೆಗಳು ನಡೆಯು ತ್ತಿದ್ದವು. ಭಯೋತ್ಪಾದಕರಿಗೆ ಭಾರತದಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸಲು ಭಯವೇ ಇಲ್ಲದಂತಾಗಿತ್ತು. ಅಂದು ಭಾರತದ ಪ್ರತಿಯೊಬ್ಬ ಪ್ರಜೆಯೂ ಅಪಾಯದಲ್ಲಿದ್ದರು. ಅಂದು ರಾಹುಲ್ ಗಾಂಧಿಗೆ ಪ್ರಜಾಪ್ರಭುತ್ವದ ನೆನಪಾಗಲಿಲ್ಲ. ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿದೇಶದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ತನ್ನ ಅಜ್ಜಿ ಇಂದಿರಾ ಗಾಂಧಿ, ‘ಆಪರೇಷನ್ ಬ್ಲೂ ಸ್ಟಾರ್’ಮೂಲಕ
ಖಾಲಿಸ್ತಾನಿಗಳ ಮೇಲೆ ದಾಳಿ ನಡೆಸಿದ್ದರು. ಆದರೆ ರಾಹುಲ್ ಗಾಂಧಿ ಇಂದು ಖಾಲಿಸ್ತಾನಿಗಳ ಬೆಂಬಲಕ್ಕೆ ನಿಂತಿದ್ದಾರೆ.

ಕರೋನ ಆರ್ಥಿಕ ಸಂಕಷ್ಟದಲ್ಲಿ ಶ್ರೀಲಂಕಾ ಮುಳುಗಿ ಹೋಯಿತು. ಪಾಕಿಸ್ತಾನ ಬರ್ಬಾದಾಯಿತು. ಇಂಗ್ಲೆಂಡಿನ ಪ್ರಧಾನಮಂತ್ರಿ ದೇಶ ನಡೆಸಲಾಗದೆ ೪೫ ದಿನಗಳಲ್ಲಿ ರಾಜೀನಾಮೆ ನೀಡಿದರು. ನ್ಯೂಜಿಲೆಂಡಿನ ಪ್ರಧಾನಮಂತ್ರಿ ಅಧಿಕಾರ ನಡೆಸಲು ಸಾಧ್ಯವಾಗದೆ ರಾಜೀನಾಮೆ ಕೊಟ್ಟು ಹೊರ
ನಡೆದರು. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಕರೋನ ಸಂಕಷ್ಟದ ನಡುವೆಯೂ ಹೊರಬಂದು ಮುಂದುವರೆದ ದೇಶಗಳನ್ನೇ ಹಿಂದಿಕ್ಕಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ರಷ್ಯಾ ಸೇಫ್ ಪ್ಯಾಸೇಜು ವ್ಯವಸ್ಥೆ ಮಾಡಿತ್ತು.ಇತರ ದೇಶದ ನಾಗರೀಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಭಾರತದ ಧ್ವಜಗಳನ್ನು ತಮ್ಮ ಗಾಡಿಗಳಿಗೆ ಕಟ್ಟಿಕೊಂಡು ಬರುತ್ತಿದ್ದಂತಹ ದೃಶ್ಯ ಸಾಮಾನ್ಯವಾಗಿತ್ತು. ಇಂದಿಗೂ ಸಹ ಅವರಿಬ್ಬರ ಯುದ್ಧದ ವಿಚಾರದಲ್ಲಿ ತಟಸ್ಥ ನಿಲುವನ್ನೇ ಹೊಂದಿರುವ ಭಾರತ, ಅಮೇರಿಕಾ ಮತ್ತು
ಯೂರೋಪ್ ಒಕ್ಕೂಟದ ಬೇಡಿಕೆಗಳನ್ನೂ ನಿರ್ವಹಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಯಶಸ್ಸು ಈ ಮಟ್ಟಿಗೆ ತಲುಪಿರುವಾಗ ದೇಶಕ್ಕೆ ಕಪ್ಪು ಚ್ಯುತಿ ತರುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಲೇ ಬಂದಿದ್ದಾರೆ.

ಸತತ ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್, ರಾಹುಲ್ ಗಾಂಧಿ ತಲೆಕೆಟ್ಟವರಂತೆ ವಿದೇಶಿ ನೆಲದಲ್ಲಿ ಮಾತನಾಡಿ ಮತ್ತೊಮ್ಮೆ ಬ್ರಿಟಿಷರನ್ನು ಭಾರತಕ್ಕೆ ಆಹ್ವಾನಿಸಿರುವುದು ಭಾರತ ಮಾತೆಯ ಬೆನ್ನಿಗೆ ಚೂರಿ ಹಾಕಿದಂತಾಗಿದೆ.